About Us Advertise with us Be a Reporter E-Paper

ಅಂಕಣಗಳು

ಅಂಧಾನುಕರಣೆಯ ಹಿಂದಿರುವ ಸಾಮಾಜಿಕ ಕಾರಣಗಳು

- ರಂಗರಾಜ್ ಚಕ್ರವರ್ತಿ

ಒಬ್ಬ ಯಶ್ ಅಭಿಮಾನಿ ತನ್ನ ಅಮೂಲ್ಯವಾದ ಜೀವ ಕಳೆದುಕೊಂಡ. ನಮ್ಮಲ್ಲಿ ಈ ರೀತಿ ನಟರನ್ನು ದೇವರಂತೆ ಕಂಡು ಅವರನ್ನೇ ಅರಾಧಿಸುವ ಮನೋಭಾವ ಇದಕ್ಕೆ ಕಾರಣ. ಅದು ಒಳ್ಳೆಯದೋ, ಕೆಟ್ಟದ್ದೋ ಎಂಬುದು ನಾವು ಯಾರನ್ನು ಎಷ್ಟು ಮತ್ತು ಯಾವ ರೀತಿಯಲ್ಲಿ ಆರಾಧಿಸುತ್ತಿದೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸೆಲೆಬ್ರಿಟಿಗಳು ಬಹಳ ಶ್ರೀಮಂತರು, ಎಲ್ಲ ರೀತಿಯಲ್ಲೂ ಶಕ್ತರು, ಜನಪ್ರಿಯರು ಮತ್ತು ಏನು ಬೇಕಾದರೂ ಮಾಡಬಲ್ಲ ಸಮರ್ಥರು ಎಂಬ ತಪ್ಪು ಕಲ್ಪನೆ ಸಾಮಾನ್ಯರಲ್ಲಿ ಬೇರೂರಿರುತ್ತದೆ. ಸಂದರ್ಭಗಳಲ್ಲಿ ಅವರು ಕಾನೂನನ್ನೂ ಮೀರಿದ ವ್ಯಕ್ತಿಗಳಂತೆ ಗೋಚರಿಸುತ್ತಾರೆ. ಅಂತೆಯೇ ಈ ಖ್ಯಾತನಾಮರನ್ನು ಬಲಹೀನರಂತೆ ತೋರಿಸುವ ಪೀತಪತ್ರಿಕೆಗಳಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ಅವರುಗಳು ಸಮಯ ಸಿಕ್ಕಾಗಲೆಲ್ಲ ಈ ಖ್ಯಾತನಾಮರನ್ನು ಅಣಕವಾಡುತ್ತಲೇ ಬಂದಿದ್ದಾರೆ.

ಈಚಿನ ದಿನಗಳಲ್ಲಿ ನಮ್ಮ ಭಾರತೀಯ ಸಮಾಜದ ಮೇಲೆ ಕೊಳ್ಳುಬಾಕ ಸಂಸ್ಕೃತಿಯ ಪರಿಣಾಮಗಳು ಟಿವಿ, ಸಿನಿಮಾ, ರೇಡಿಯೋ, ಪತ್ರಿಕೆಗಳು ಮತ್ತು ಇತ್ತೀಚೆಗೆ ಸೇರ್ಪಡೆಯಾದ ಅಂತರ್ಜಾಲ ಹೀಗೆ ಹಲವಾರು ಮಾಧ್ಯಮಗಳ ಮತ್ತು ಖ್ಯಾತನಾಮರ ಮೂಲಕ ಸಾಕಷ್ಟು ಪರಿಣಾಮಕಾರಿಯಾಗಿ ಆಗುತ್ತಾ ಬಂದಿದೆ. ಖ್ಯಾತನಾಮರು ಮಾಡುವ ಅನೇಕ ಜಾಹೀರಾತುಗಳನ್ನು ನೋಡಿ ಪ್ರಭಾವಿತರಾಗಿ ಜನರು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಬಹುತೇಕ ಭಾರತೀಯರು ಮೇಲೆ ತೋರ್ಪಡಿಸಿಕೊಳ್ಳದಿದ್ದರೂ ಮನದೊಳಗೇ ತಮ್ಮ ಕೆಲವು ನೆಚ್ಚಿನ ನಟ ನಟಿಯರನ್ನು ಆರಾಧಿಸುತ್ತಿರುತ್ತಾರೆ.

ಒಬ್ಬ ಸರಾಸರಿ ಹದಿಹರೆಯದ ಹುಡುಗ, ತನ್ನ ಏರಿಯಾದ ಸಮಾಜಸೇವಕನ ಬಗೆ ತಿಳಿದುಕೊಂಡದ್ದಕ್ಕಿಂತ ಹೆಚ್ಚು ಕತ್ರೀನಾ ಕೈಫ್ ಬಗ್ಗೆ ತಿಳಿದುಕೊಂಡಿರುತ್ತಾನೆ! ಆದರೆ ಏಕೆ ಹೀಗೆ? ನಾವು ನಮ್ಮ ಜೀವಮಾನದಲ್ಲಿ ಒಮ್ಮೆಯೂ ಭೇಟಿಯಾಗುವ ಸಾಧ್ಯತೆಯೇ ಇರದ ವ್ಯಕ್ತಿಗಳ ಬಗ್ಗೆ ಏಕಿಷ್ಟು ತಲೆ ಕೆಡಿಸಿಕೊಳ್ಳುತ್ತೇವೆ? ಖ್ಯಾತನಾಮರ ಗಾಳಿಮಾತುಗಳಿಗೆ ಏಕೆ ನಾವು ಇಷ್ಟು ತಹತಹಿಸುತ್ತೇವೆ? ಅಂಧಾನುಕರಣೆ ಈ ತಲೆಮಾರಿನಲ್ಲಿ ಏಕಿಷ್ಟು ಹೆಚ್ಚುತ್ತಿದೆ?

ಎಲ್ಲೋ ಮನದಾಳದಲ್ಲಿ ಖ್ಯಾತನಾಮರ ಸೌಂದರ್ಯ, ಕೀರ್ತಿ, ಖ್ಯಾತಿ , ಶ್ರೀಮಂತಿಕೆ ಮತ್ತು ಅವರ ಜೀವನಶೈಲಿ ನಮ್ಮನ್ನು ಅವರುಗಳೆಡೆಗೆ ಸೆಳೆಯುತ್ತದೆ. ಕೀರ್ತಿ ಮತ್ತು ಜನಪ್ರಿಯತೆಯ ಹಂಬಲ ಮನುಷ್ಯನಿಂದ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಇದೇ ನಿದರ್ಶನ. ಸಮಾಜಶಾಸ್ತ್ರಜ್ಞರು ಇವರನ್ನು ‘ಸಂಸ್ಕೃತಿಯ ಸ್ಪಂಜುಗಳು’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇಂಥಹ ವ್ಯಕ್ತಿಪೂಜೆಯ ಮನಸ್ಥಿತಿ ಹದಿಹರೆಯದಲ್ಲಿ ರೂಪಗೊಳ್ಳುತ್ತದೆ. ಸಮಾಜಶಾಸ್ತ್ರಜ್ಞರು ಮತ್ತು ತಜ್ಞರ ಪ್ರಕಾರ ಈ ಬೆಳವಣಿಗೆಗೆ ಜೈವಿಕ ಕಾರಣಗಳಿಗಿಂತ ಸಾಮಾಜಿಕ ಕಾರಣ ಮತ್ತು ಪ್ರಭಾವಗಳೇ ಹೆಚ್ಚು. ಮನುಷ್ಯರ ಸ್ವಭಾವ ಮತ್ತು ನಡೆವಳಿಕೆಗಳನ್ನು ನಿಯಂತ್ರಿಸುವ ಈ ಸಾಮಾಜಿಕ ಕಾರಣಗಳು ಒಂದಲ್ಲಾ ಒಂದು ಸಾಮಾಜಿಕ ಒಡನಾಟದಲ್ಲಿ ಅವರಿಗೆ ಎದುರಾಗುತ್ತವೆ. ಕುಟುಂಬ, ಶಾಲೆ, ಬಂಧುಬಾಂಧವರು, ಸ್ನೇಹಿತರು, ಮಾಧ್ಯಮಗಳು, ಮತ್ತು ವೃತ್ತಿ ಅವುಗಳಲ್ಲಿ ಪ್ರಮುಖ.

ಚಿಕ್ಕಂದಿನಲ್ಲಿ ಯಾವ ಭಾವನೆ ಮನೆಮಾಡಿರುತ್ತದೋ ಅದೇ ಭಾವನೆ ದೊಡ್ಡವರಾದ ಮೇಲೂ ನಮ್ಮನ್ನು ಕಾಡುವುದರಿಂದ ನಾವು ಖ್ಯಾತನಾಮರನ್ನು ಒಬ್ಬ ಸಾಮಾನ್ಯ ವ್ಯಕ್ತಿಗಿಂತ ನೋಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಈ ಮನಸ್ಥಿತಿಗೆ ಖ್ಯಾತನಾಮರು ಏನು ಮಾಡಿದರೂ, ಮಾಡದಿದ್ದರೂ ಅದನ್ನು ದೊಡ್ಡದಾಗಿ ಬಿಂಬಿಸುವ ಮಾಧ್ಯಮಗಳ ಪಾತ್ರವೂ ಸಹ ಬಹಳ. ಒಂದೊಮ್ಮೆ ನಾನು ನ್ಯೂಸ್ ಚ್ಯಾನೆಲ್ ಒಂದರಲ್ಲಿ ನೋಡುತ್ತಿದ್ದೆ. ಒಬ್ಬ ಖ್ಯಾತ ನಟ ಹೇಗೆ ತನ್ನ ಹೆಂಡತಿಯನ್ನು ವಿಚ್ಛೇದಿಸುತ್ತಾನೆ ಎನ್ನುವುದರ ಬಗ್ಗೆ ಪರಿಪರಿಯಾಗಿ ಬಿತ್ತರಿಸುತ್ತಿದ್ದರು! ಹೋಗಲಿ, ಎಂದು ಚಾನೆಲ್ ಬದಲಾಯಿಸಿದರೆ ಅಲ್ಲೂ ಇದೇ! ಅದಕ್ಕೆ ಒಂದು ಸಮಿತಿಯನ್ನು ರಚಿಸಿ ಚರ್ಚಾಗೋಷ್ಠಿಯನ್ನು ಸಹ ಏರ್ಪಡಿಸುತ್ತಾರೆ. ಇಷ್ಟಕ್ಕೂ ಖ್ಯಾತನಾಮರ ವೈಯಕ್ತಿಕ ಬಗ್ಗೆ ಮಾಧ್ಯಮಗಳಿಗೆ ಈ ಪರಿಯ ಕುತೂಹಲವಾದರೂ ಏಕೆ? ಅವರೊ ಸಹ ನಮ್ಮ ನಿಮ್ಮಂತೆಯೇ ತಿಂದುಂಡು ಮಲಗುವ ಸಾಮಾನ್ಯ ಮನುಷ್ಯರು ಅಲ್ಲವೇ!

ಡಾ ವೈನ್.ವ.ಡಯರ್ ಅವರು ತಮ್ಮ ್ಗಟ್ಠ್ಟ ಛ್ಟ್ಟಿಟ್ಞಛಿಟ್ಠ ್ಢಟ್ಞಛಿ ಪುಸ್ತಕದಲ್ಲಿ ಹೇಳುವ ಪ್ರಕಾರ ‘ನಿಮ್ಮೆಲ್ಲಾ ನಾಯಕರು ನಿಮ್ಮಂತೆಯೇ ಮನುಜರೇ. ನಿಮಗೆ ತುರಿಸುವ ಹಾಗೆಯೇ ಅವರಿಗೂ ತುರಿಸುತ್ತದೆ, ಮುಂಜಾನೆ ನಿಮ್ಮ ಬಾಯಿ ನಾರುವ ಹಾಗೆ ಅವರ ಬಾಯಿಯೂ ನಾರುತ್ತದೆ’. ಹೀಗೆ ನಮ್ಮ ನಾಯಕರು ನಮಗಿಂತ ಯಾವುದೇ ರೀತಿ ಭಿನ್ನವಾಗಿಲ್ಲ ಹೇಳುತ್ತಲೇ ಹೋಗುತ್ತದೆ ಆ ಪುಸ್ತಕ. ನಮ್ಮೆಲ್ಲಾ ರಾಜಕಾರಣಿಗಳು, ಆಟಗಾರರು, ಸಿನೆಮಾ ತಾರೆಯರು ಅವರವರ ವೃತ್ತಿಯಲ್ಲಿ ಪರಿಣತರೇ ಹೊರತು ಅದಕ್ಕಿಂತ ಹೆಚ್ಚೇನೂ ಇಲ್ಲ. ಬೇರೆ ಯಾವ ಥರದಲ್ಲೂ ಈ ಖ್ಯಾತನಾಮರು ಹೊರತಾಗಿಲ್ಲ. ಅವರಿಗೆ ಅವರ ವೃತ್ತಿಯಲ್ಲಿ ವಿಶೇಷವಾದ ಪರಿಣತಿ ಇರಬಹುದು ಆದರೆ ಅವರಂತೆಯೇ ಬೇರೆಯವರಿಗೂ ಅವರವರದ್ದೇ ಆದ ಪರಿಣತಿ ಇರುತ್ತದೆಯಷ್ಟೇ !

ಈ ಖ್ಯಾತನಾಮರ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಮಹತ್ತರವಾದ ವಿಚಾರಗಳು ಈ ಪ್ರಪಂಚದಲ್ಲಿ ಸಾಕಷ್ಟು ಇವೆ. ನನಗೆ ಒಬ್ಬನ ಸ್ವಭಾವ ಸರಿ ಹೋಗುತ್ತಿಲ್ಲವೇ? ಆದರೆ ಅದರಿಂದ ನನಗೆ ಆಗಬೇಕಾಗಿರುವುದಾದರೂ ಏನು ಅಲ್ಲವೇ?! ಕ್ರೀಡಾಪಟುಗಳಿಗೆ ಮತ್ತು ನಟರಿಗೆ ನಮ್ಮ ಸಮಾಜದಲ್ಲಿ ಅಗತ್ಯಕ್ಕಿಂತ ಹೆಚ್ಚಾದ ಮಹತ್ವವನ್ನು ಕಲ್ಪಿಸಿ ಕೊಡಲಾಗುತ್ತಿದೆ. ಅವರ ಸಾಧನೆಗಳನ್ನು ಗೌರವಿಸಿ ಆನಂದಿಸಬೇಕೇ? ಸರಿ, ಒಪ್ಪೋಣ…ಆದರೆ ಅದು ಸಕಾರಾತ್ಮಕವಾಗಿರಲಿ. ಆದರೆ ಅವರು ನಡೆದ ಮಾರ್ಗದಲ್ಲೇ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂಬುದು ಮೂರ್ಖತನವೇ ಸರಿ. ಯಾರಿಗೆ ಎಷ್ಟು ಮಹತ್ವ ಕೊಡಬೇಕು ಅಷ್ಟು ಮಾತ್ರ ಕೊಡೋಣ…ಅದನ್ನೂ ಮೀರಿದ್ದು ನಮ್ಮ ಜೀವನ ಎಂಬುದನ್ನು ಮರೆಯಬಾರದು. ನಮ್ಮ ಸ್ವಂತಿಕೆಯನ್ನು ಮೀರಿದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ.

ಅಂತರಂಗದಲ್ಲಿ ಎಲ್ಲ ಮನುಜರೂ ಒಂದೇ ಎಂದಿದ್ದಾನೆ, ಖ್ಯಾತ ಸಾಹಿತಿ ಮಾರ್ಕ್ ಟ್ವೈನ್. ನಾವು ನಮ್ಮ ಜೀವನ ಅಮೂಲ್ಯ ಎನ್ನುವುದನ್ನು ಯಾವಾಗ ಅರಿಯುತ್ತೇವೆಯೋ ಆಗ ಈ ಅತಿರೇಕದ ಹೀರೋ ವರ್ಶಿಪ್ ಮಾಡುವುದನ್ನು ಬಿಡುತೇವೆ. ‘ಮೆಚ್ಚಿಕೊಳ್ಳಿ ಆದರೆ ಅನುಕರಿಸಬೇಡಿ’ ಎಂಬ ಕಿವಿಮಾತು ಹೇಳುವ ಕತೆಯೊಂದು ಹೀಗಿದೆ: ಟಾಸೂಯಿ ತನ್ನ ಕಾಲದ ಪ್ರಸಿದ್ದ ಝೆನ್ ಗುರುವಾಗಿದ್ದರು. ಅವರು ಅನೇಕ ದೇವಾಲಯಗಳಲ್ಲಿ ವಾಸಿಸುತ್ತಿದ್ದರು ಮತ್ತು ವಿವಿಧ ತನ್ನ ಶಿಷ್ಯರನ್ನು ಹೊಂದಿದ್ದರು. ಕೊನೆಯ ಬಾರಿ ದೇವಾಲಯವೊಂದಕ್ಕೆ ಭೇಟಿ ನೀಡಿದರು. ತನ್ನ ಶಿಷ್ಯವೃಂದವನ್ನು ಉದ್ದೇಶಿಸಿ ‘ನಾನು ಪಾಠ ಮಾಡುವ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿದ್ದೇನೆ’ ಎಂದರು. ನಂತರ ‘ನೀವೆಲ್ಲ ಇಲ್ಲಿಂದ ಚದುರಿ ಹೋಗಿ ಮತ್ತು ನೀವು ಇಷ್ಟಪಟ್ಟ ಸ್ಥಳಕ್ಕೆ ಹೋಗಿ ನಿಮ್ಮ ನಿಮ್ಮ ಸ್ವಂತ ಹಾದಿಯನ್ನು ಕಂಡುಕೊಳ್ಳಿರಿ’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು. ನಂತರ ಯಾರಿಗೂ ಆ ಗುರುವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಮೂರು ವರ್ಷ ಕಳೆಯಿತು. ಈ ಝೆನ್ ಗುರುವನ್ನು ಆರಾಧಿಸುವ ಮತ್ತು ಯಾವಾಗಲೂ ಅನುಕರಿಸುವ ಶಿಷ್ಯನೊಬ್ಬನಿಗೆ ಕ್ಯೂಟೊದ ಸೇತುವೆಯ ಕೆಳಗೆ ಭಿಕ್ಷುಕರ ನಡುವೆ ಈ ಗುರು ಇರುವುದು ಕಾಣಿಸುತ್ತದೆ. ಈ ಶಿಷ್ಯನು, ಟಾಸೂಯಿ ಅವರಲ್ಲಿ ತನಗೆ ಇನ್ನಷ್ಟು ಕಲಿಸುವಂತೆ ಮತ್ತು ಅವರೊಂದಿಗೆ ಇರಲು ಅನುಮತಿ ನೀಡುವಂತೆ ಬೇಡಿಕೊಳ್ಳುತ್ತಾನೆ. ‘ನಾನು ಏನು ಮಾಡುವೆನೋ ಅದನ್ನು ಕೆಲವು ದಿನಗಳ ಕಾಲ ನಿನ್ನಿಂದ ಮಾಡಲು ಸಾಧ್ಯವಾದರೆ ನಾನು ನಿನಗೆ ಕಲಿಸುತ್ತೇನೆ’ ಎಂದು ಟಾಸೂಯಿ ಮಾರುತ್ತರ ನೀಡಿದರು.

‘ನನ್ನನ್ನು ಇಷ್ಟಪಡಬಹುದು, ಆದರೆ, ಕಣ್ಣುಮುಚ್ಚಿ ಅನುಸರಿಸಬೇಡ ಅನುಕರಿಸಬೇಡ’ ಎಂಬ ಎಚ್ಚರಿಕೆಯನ್ನೂ ನೀಡಿದರು. ಇದಕ್ಕೆ ಆತ ಒಪ್ಪಿದನು. ಬಳಿಕ ಮಾಜಿ ಶಿಷ್ಯನು ಭಿಕ್ಷುಕನಂತೆ ವೇಷ ಧರಿಸಿ ಟಾಸೂಯಿ ಜೊತೆ ಒಂದು ದಿನ ಕಳೆದನು. ಮರುದಿನ ಆ ಗುಂಪಿನಲ್ಲಿದ್ದ ಒಬ್ಬ ಭಿಕ್ಷುಕ ಮೃತನಾದನು. ಟಾಸೂಯಿ ಮತ್ತು ಅವನ ಸಹಚರರು ಮಧ್ಯರಾತ್ರಿ ಆ ಭಿಕ್ಷುಕನ ಹೆಣವನ್ನು ಹೊತ್ತೊಯ್ದು ಪರ್ವತದ ಬದಿಯಲ್ಲಿ ಸಮಾಧಿ ಮಾಡಿದರು. ನಂತರ ಸೇತುವೆಯ ಕೆಳಗಿರುವ ತಮ್ಮ ವಾಸಸ್ಥಾನಕ್ಕೆ ಹಿಂತಿರುಗಿದರು.

ಅಲ್ಲಿಂದ ಬಂದು ಟಾಸೂಯಿ ಗಾಢವಾಗಿ ನಿದ್ದೆ ಮಾಡಿದರು. ಶಿಷ್ಯನಿಗೆ ನಿದ್ದೆಯೇ ಬರಲಿಲ್ಲ. ಮರುದಿನ ಬೆಳಗ್ಗೆ ಟಾಸೂಯಿ ಹೀಗಂದರು: ‘ನಾವಿಂದು ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ. ನಮ್ಮ ಮೃತ ಸ್ನೇಹಿತ ನಮಗೆ ಇವತ್ತಿಗೆ ಸಾಕಾಗುವಷ್ಟು ಉಳಿಸಿ ಹೋಗಿದ್ದಾನೆ ಮತ್ತು ನಿನಗೆ ಗೊತ್ತೇ ಆತ ನಿನ್ನೆ ಆಹಾರ ಸೇವಿಸುತ್ತ ಇರುವಾಗಲೇ ಸತ್ತಿದ್ದಾನೆ’ಎಂದರು. ಇದನ್ನು ಕೇಳಿದಾಗ ಶಿಷ್ಯನಿಗೆ ಆಘಾತವಾಯಿತು ಮತ್ತು ಆ ಆಹಾರದಿಂದ ಒಂದು ತುಣುಕು ತಿನ್ನಲು ಸಹ ಆತನಿಗೆ ಸಾಧ್ಯವಾಗಲಿಲ್ಲ.
‘ನನ್ನೆಲ್ಲ ನಡೆಗಳನ್ನು ಕುರುಡಾಗಿ ಪಾಲಿಸಬೇಡ ಎಂದು ನಾನು ನಿನಗೆ ಎಚ್ಚರಿಸಿದ್ದೆ’ ಎಂದ ಟಾಸೂಯಿ ಅವರು ಹೀಗೆ ಮಾತು ಮುಗಿಸಿದರು: ‘ಇಲ್ಲಿಂದ ಹೊರಕ್ಕೆ ಹೋಗು ಮತ್ತು ನಿನ್ನ ಸ್ವಂತ ಮಾರ್ಗ ಕಂಡುಕೋ, ನನ್ನ ಬಗ್ಗೆ ಮತ್ತೆ ಚಿಂತೆ ಮಾಡಬೇಡ, ನನಗೆ ಯಾವ ರೀತಿ ಬೇಕೋ ಹಾಗೆ ಬದುಕಲು ಬಿಡು ಮತ್ತು ನನ್ನ ಒಂದೇ ಸಲಹೆಯೆಂದರೆ, ಯಾರನ್ನೂ ಕುರುಡಾಗಿ ಅನುಸರಿಸಬೇಡ, ಯಾಕೆಂದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ವಿನೂತನವಾದವರು ಮತ್ತು ನೀನು ಮತ್ತೊಬ್ಬರ ನಕಲು ಆಗಬಾರದು’.

ಇದೇ ರೀತಿ ಘಟನೆಯು ಪೂಜ್ಯ ಶಂಕರಚಾರ್ಯರ ನಡೆದಿತ್ತು. ತನ್ನ ಹಲವು ಶಿಷ್ಯರು ತನ್ನನ್ನು ಅಂಧಶ್ರದ್ಧೆಯಿಂದ ಅನುಸರಿಸುತ್ತಿರುವುದು ಅವರಿಗೆ ತಿಳಿಯಿತು ಮತ್ತು ಪೂಜ್ಯ ಆಚಾರ್ಯರು ಇವರಿಗೆ ಒಂದು ಪಾಠ ಕಲಿಸಲು ಬಯಸಿದರು. ಒಂದು ದಿನ ಅವರು ತನ್ನ ಶಿಷ್ಯರೊಂದಿಗೆ ಪ್ರಯಾಣ ನಡೆಸುತ್ತಿದ್ದರು. ಅಲ್ಲಿ ಯಾರೋ ಅವರಿಗೆ ಸೇವಿಸಲು ಮದ್ಯ ನೀಡಿದರು. ಆಚಾರ್ಯರು ಅದನ್ನು ಕುಡಿದರು. ಎಲ್ಲಾ ಶಿಷ್ಯರು ಅವರನ್ನೇ ಅನುಸರಿಸಿ ಅದೇ ರೀತಿ ಕುಡಿದರು.
ಅಲ್ಲಿಂದ ಮುಂದೆ ಸಾಗಿದ ಸ್ವಲ್ಪ ಹೊತ್ತಿನ ಬಳಿಕ, ಲೋಹವನ್ನು ಕರಗಿಸುವ ಕಮ್ಮಾರನ ಬಂದರು. ತನ್ನ ಶಿಷ್ಯರಿಗೆ ಬೋಧಿಸುವ ಉದ್ದೇಶದಿಂದ ಚಮತ್ಕಾರ ಪ್ರದರ್ಶಿಸಿದರು. ಕುದಿಯುವ ಕುಲುಮೆಯಿಂದ ಕರಗಿದ ಬಿಸಿಬಿಸಿ ಲೋಹರಸವನ್ನು ಕೊಂಚ ತೆಗೆದುಕೊಂಡು ಕುಡಿದರು.

ಆದರೆ, ಶಿಷ್ಯರಿಂದ ಇದು ಸಾಧ್ಯವಿರಲಿಲ್ಲ. ತನ್ನ ಶಿಷ್ಯರಿಗೆ ನೀಡಿದ ಅವರ ಸಂದೇಶ ಹೀಗಿತ್ತು: ‘ಯಾರನ್ನೂ ಕುರುಡಾಗಿ ಅನುಸರಿಸಬೇಡಿ. ನನ್ನ ಬೋಧನೆಯಿಂದ ಕಲಿಯಿರಿ. ಆದರೆ, ಅದನ್ನು ನಿಮ್ಮ ಸ್ವಂತ ರೀತಿಯಲ್ಲಿ ಅರ್ಥಮಾಡಿಕೊಳ್ಳಿ ಮತ್ತು ನಿಮಗೆ ಸರಿಯೆನಿಸಿದರೆ ಮಾತ್ರ ಅನುಸರಿಸಿರಿ. ನಾನು ಮದ್ಯ ಕುಡಿಯಬಲ್ಲೆ, ಕರಗಿದ ಲೋಹವನ್ನೂ ಕುಡಿಯಬಲ್ಲೆ. ಇದರಿಂದ ಏನೂ ಆಗದು. ನನ್ನ ಹಂತಕ್ಕೆ ನೀವು ತಲುಪುವವರೆಗೆ ನಿಮಗೆ ಕಲಿಯಲು ಬೇಕಾದಷ್ಟು ವಿಷಯಗಳಿವೆ ಮತ್ತು ನನ್ನನ್ನು ಕುರುಡಾಗಿ ಹಿಂಬಾಲಿಸಬೇಡಿ’ ಎಂದರು.

‘ನಾವು ಆಗಲು ಸಾಧ್ಯವಿಲ್ಲದ ವ್ಯಕ್ತಿಗಳನ್ನು ಅನುಕರಣೆ ಮಾಡುವುದರಿಂದ ಬಹುತೇಕ ಎಲ್ಲಾ ಅಸಂಬದ್ದತೆಯು ಉದ್ಭವಿಸುತ್ತದೆ’ ಎಂದಿರುವುದು ಮತ್ತೊಬ್ಬ ಉದ್ದಾಮ ಪಂಡಿತ ಸ್ಯಾಮ್ಯುಯಲ್ ಜಾನ್ಸನ್. ಯಾರಾದರೂ ಒಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದಾಗ ಗೌರವಿಸುವುದು ಸಹಜ. ಅದರಲ್ಲಿ ಯಾವುದೇ ತಪ್ಪುಗಳು ಇಲ್ಲ. ಅಷ್ಟೇಅಲ್ಲ, ಅನುಕರಣೆ ಮಾಡದೆ ಮೆಚ್ಚಿಕೊಂಡರೆ, ನಾವು ಇತರರಿಂದ ಸಾಕಷ್ಟು ಮತ್ತು ಪ್ರಜ್ಞಾಪೂರ್ವಕವಾಗಿ ಅವರಂತೆಯೇ ಇರಲು ಪ್ರಯತ್ನಿಸದೆ ಅವರಿಂದ ಸಕಾರಾತ್ಮಕ ಅಂಶಗಳನ್ನು ಮಾತ್ರ ನಮ್ಮದಾಗಿಸಿಕೊಳ್ಳಬಹುದು. ಯಾವಾಗ ಕಣ್ಣುಮುಚ್ಚಿ ಇತರರನ್ನು ಅನುಸರಿಸಲು ಆರಂಭಿಸುತ್ತೇವೆಯೋ ಆಗ ತೊಂದರೆಗಳು ಆರಂಭವಾಗುತ್ತವೆ ಅಥವಾ ನಮ್ಮ ದೃಷ್ಟಿಕೋನವನ್ನು ಅದು ಮಂಕಾಗಿಸುತ್ತದೆ. ನಮ್ಮ ವಿಶೇಷ ವಿನೂತನತೆಯನ್ನು ಮರೆಯುವಂತೆ ಮಾಡುತ್ತದೆ. ಬಳಿಕ ನಾವು ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಬೇರೊಬ್ಬರು ಈಗಾಗಲೇ ಆಗಿರುವುದರ ಎರಡನೇ ಆವೃತ್ತಿ’ ಆಗುತ್ತೇವೆ. ನಮ್ಮತನದಿಂದ ಮೊದಲ ಆವೃತ್ತಿ ಆಗುವುದನ್ನು ಮರೆಯುತ್ತೇವೆ. ‘ನಿಮಗೆ ಅರ್ಥವಾಗದ ನನ್ನ ಮಾತುಗಳನ್ನು ಪುನರಾವರ್ತಿಸಬೇಡಿ. ನನ್ನ ಆಲೋಚನೆಗಳ ಮುಖವಾಡವನ್ನು ಧರಿಸಬೇಡಿ. ಯಾಕೆಂದರೆ, ಇದು ಭ್ರಮೆಯಾಗುತ್ತದೆ ಮತ್ತು ನೀವು ಈ ಮೂಲಕ ನಿಮ್ಮನ್ನು ನೀವು ಮೋಸಗೊಳಿಸುವಿರಿ’ ಎಂದು ಶಿಷ್ಯರನ್ನು ಎಚ್ಚರಿಸಿದ್ದರು, ತತ್ವಜ್ಞಾನಿ, ಚಿಂತಕ, ಜಿಡ್ಡು ಕೃಷ್ಣಮೂರ್ತಿ.

ಪ್ರತಿಭೆಯು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ ಮತ್ತು ಮಾಡುವ ಸಾಮರ್ಥ್ಯವೂ ಭಿನ್ನವಾಗಿರುತ್ತದೆ ಎಂದು ತಿಳಿದಿರಬೇಕಾದದ್ದು ಅವಶ್ಯಕ. ನಾವೆಲ್ಲರೂ ವಿಶೇಷವಾಗಿ ಪ್ರತಿಭಾನ್ವಿತರಾಗಿದ್ದೇವೆ. ಯಶಸ್ಸಿನ ಗುರಿ ಸಾಧಿಸಿದ ಮಹಾನ್ ವ್ಯಕ್ತಿಗಳು ಆ ಸ್ಥಿತಿ ತಲುಪಿದ್ದು ಇದೇ ಕಾರಣದಿಂದ. ಸಂತೋಷ ಮತ್ತು ಪರಿಪೂರ್ಣತೆಗೆ ಜೀವನವನ್ನು ಅವರಂತೆ ಮಾಡಬೇಕಿಲ್ಲ. ಬದಲಾಗಿ ನಾವು ಬಯಸಿದಂತೆ ಜೀವಿಸಲು ಸಾಧ್ಯವಾಗಬೇಕು. ಇದನ್ನು ಮಾಡಲು ‘ನಾವು ನಿಜಕ್ಕೂ ಯಾರು?’ ಎನ್ನುವುದನ್ನು ಪತ್ತೆಹಚ್ಚಬೇಕು. ‘ನಾವು ಹೇಗಿರಬೇಕೆಂದು ಇತರರು ಬಯಸುತ್ತಾರೋ ಹಾಗೆ ಇರಲು ಬಯಸುವುದಲ್ಲ. ಒಬ್ಬರು ತತ್ವಜ್ಞಾನಿ ಹೇಳಿದಂತೆ, ‘ಎಲ್ಲಾದರೂ ದೇವರು ನನ್ನನ್ನು ಅವರಂತೆ ಇರಲು ಬಯಸಿದ್ದರೆ, ಅವರಂತೆಯೇ ನನ್ನನ್ನು ಸೃಷ್ಟಿಸುತ್ತಿದ್ದ’.

ನೀವು ನೀವಾಗಿಯೇ ಇರಿ. ನೀವ್ಯಾಕೆ ಇನ್ನೊಬ್ಬರಂತೆ ಆಗಬೇಕು. ನಿಮ್ಮತನವಿರಲಿ ಮತ್ತು ನಿಮ್ಮ ಬದುಕಲ್ಲಿ ಜೀವಿಸಿ, ಬೇರೆಯವರಂತೆ ಬದುಕಬೇಡಿ. ನೀವು ನಿಮ್ಮತನದಿಂದ ಇದ್ದರೆ ನಿಮ್ಮ ಉನ್ನತ ಉದ್ದೇಶವನ್ನು ಪೂರೈಸಲು ಸಾಧ್ಯವಾಗುತ್ತದೆ. ಈ ಮಾರ್ಗದಲ್ಲಿ ಸಾಗುವಾಗ, ನೀವೇನಾದರೂ ತಪ್ಪು ಮಾಡಿದರೆ, ಅವು ನಿಮ್ಮ ತಪ್ಪುಗಳು ಆಗಿರುತ್ತವೆ. ಅದರಿಂದ ನೀವು ಕಲಿಯಬಹುದು ಮತ್ತು ಪ್ರಗತಿ ಕಾಣಬಹುದು. ಇದರೊಂದಿಗೆ ಈ ದಾರಿಯಲ್ಲಿ ಸ್ವಯಂ ವಾಸ್ತವಾಂಶವನ್ನು ಮತ್ತು ಸಂತೃಪ್ತಿಯನ್ನೂ ಪಡೆಯಬಹುದು.

ಮುಂದಿನ ಬಾರಿ ನಿಮ್ಮನ್ನು ನೀವು ಹೀರೋ ಅಥವಾ ಸೆಲೆಬ್ರಿಟಿ ಎಂದು ಭಾವಿಸಿ ಮತ್ತು ನಿಮ್ಮೊಂದಿಗೆಯೇ ಹೋಲಿಕೆ ಮಾಡಿ ನೋಡಿ. ಜಾನ್ ಮಾಸುನ್ ಅವರ ಪುಸ್ತಕದ ಹೆಸರನ್ನು ್ಗ You Were Born an Original. Don’t Die a Copy! LwÃqbo. Bsq| Bh b Ast¦! (ನೀವು ಹುಟ್ಟಿದ್ದು ಮೂಲಪ್ರತಿಯಾಗಿ, ಸಾಯಬೇಡಿ- ನಕಲು ಪ್ರತಿಯಾಗಿ!).

Tags

Related Articles

Leave a Reply

Your email address will not be published. Required fields are marked *

Language
Close