About Us Advertise with us Be a Reporter E-Paper

ಅಂಕಣಗಳು

ಸಮಾಜ ಸುಧಾರಕರಾಗಿ ಬೆಳಗಿದ ಬ್ರಹ್ಮಶೀ ನಾರಾಯಣಗುರು

ಸ್ಮರಣೆ: ಡಾ. ಜಯಮಾಲಾ ಸಚಿವೆ

ತಿರುವನಂತಪುರದ ಹೊರವಲಯದ ಚೆಂಬಳಾಂದಿಯಲ್ಲಿ 1854ರಲ್ಲಿ ಅವರ್ಣೀಯ ಈಳವ ಸಮುದಾಯದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಕರಾಗಿ ಬೆಳಗಿದ್ದು ಈ ಭುವನದ ಭಾಗ್ಯ.

ಈ ದಿನಗಳಲ್ಲಿ ಸವರ್ಣೀಯರ ಮೇಲೆ ಶೂದ್ರ ನೆರಳು ಕೂಡ ಸೋಂಕುವಂತಿರಲಿಲ್ಲ. ಶೂದ್ರರು ಚಪ್ಪಲಿ ತೊಡುವಂತಿರಲಿಲ್ಲ. ಆಭರಣ ಧರಿಸುವಂತಿರಲಿಲ್ಲ. ಕೊಡೆ ಹಿಡಿಯುವಂತಿರಲಿಲ್ಲ. ದೇವಸ್ಥಾನಗಳ ಪಕ್ಕದಲ್ಲೂ ಸುಳಿಯುವಂತಿರಲಿಲ್ಲ. ಮೇಲ್ಜಾತಿಯವರಿಗೆ ಗೌರವ ತೋರಿಸಲು ಶೂದ್ರ ಸೀಯರು ಎದೆಸೆರಗು ತೆಗೆಯಬೇಕಾಗಿತ್ತು. ಇಂಥ ಕ್ರೌರ್ಯವನ್ನು ಪ್ರತಿಭಟಿಸಲೇಬೇಕೆಂಬ ಕಠಿಣ ನಿರ್ಧಾರಕ್ಕೆ ಶ್ರೀಗಳು ಬಂದು ಸಾಮಾಜಿಕ ಆಂದೋಲನ ಕೈಗೊಂಡರು.

ಎಳವೆಯಲ್ಲೇ ಕಾಡು ಮೇಡು ಹತ್ತಿ ಧ್ಯಾನ ನಿರತರಾಗುತ್ತಿದ್ದ ಶ್ರೀಗಳು, ಸಂಸ್ಕೃತದ ಶಿಕ್ಷಣ ಪಡೆದಿದ್ದರು. ವೇದಪುರಾಣ, ಉಪನಿಷತ್ತು, ಯೋಗಾದಿಗಳನ್ನು ಸತತ ಪ್ರಯತ್ನದ ಮೂಲಕ ಕರಗತ ಮಾಡಿಕೊಂಡರು. ದಲಿತ ಮಕ್ಕಳಿಗೆ ದೇವಾಲಯಗಳಲ್ಲಿನ ಪೂಜೆಗೆ ಬೇಕಾದ ಮಂತ್ರಗಳನ್ನು ಕಲಿಸಿಕೊಟ್ಟರು. ಶಿವಗಿರಿಯಿಂದ ಮಂಗಳೂರಿನವರೆಗೆ ನಲವತ್ತೊಂದು ಪುಟ್ಟಪುಟ್ಟ ದೇವಾಲಯಗಳನ್ನು ಕಟ್ಟಿಸಿ, ದಲಿತರನ್ನು ಪೂಜಾರಿಗಳಾಗಿ ನಿಯಮಿಸಿದರು. ದಲಿತೋದ್ಧಾರಕ್ಕೆ ನಾಂದಿ ಹಾಡಿದರು. ನಾಡಿನ ಉದ್ದಗಲಕ್ಕೂ ಮೈಲುಗಟ್ಟಲೆ ನಡೆಯುವುದು, ಕೆಳಸ್ತರದ ಜನರ ಕಷ್ಟಕಾರ್ಪಣ್ಯಗಳನ್ನು ಮನನ ಮಾಡಿಕೊಳ್ಳುವುದು. ಕಾಡು ಸೊಪ್ಪು-ಹಣ್ಣುಗಳನ್ನು ತಿನ್ನುತ್ತಲೇ ಧ್ಯಾನಸ್ಥರಾಗುವುದು ಶ್ರೀಗಳ ದಿನಚರಿಯಾಗಿತ್ತು.

ಸತತವಾಗಿ ಎಂಟು ವರ್ಷಗಳ ಕಾಲ ಧ್ಯಾನ, ತಪಸ್ಸು ಮತ್ತು ಯೋಗಾದಿಗಳನ್ನು ಆಚರಿಸುತ್ತಾ ಕನ್ಯಾಕುಮಾರಿಯ ಸಮೀಪದಲ್ಲಿರುವ ಮರುತಮಲೈ ಎಂಬಲ್ಲಿನ ಗುಹೆಯೊಂದರಲ್ಲಿ ಜ್ಞಾನೋದಯ ಸಂಪನ್ನರಾದರು ಎಂದು ಇತಿಹಾಸ ತಿಳಿಸುತ್ತದೆ.

‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಮನುಷ್ಯನಿಗೆ’ ಎಂಬ ಅಸಾಮಾನ್ಯ ತತ್ವವನ್ನು ಗುರುಗಳು ಜಗತ್ತಿಗೆ ಸಾರಿದರು. ‘ಚಿಕ್ಕ ದೇವಾಲಯ, ದೊಡ್ಡ ಗ್ರಂಥಾಲಯ, ವಿಶಾಲ ಬಯಲು, ಸ್ವಚ್ಛಗಾಳಿ’ ಇದು ಗುರುಗಳ ದೇವಾಲಯದ ಸಮಗ್ರ ಕಲ್ಪನೆ. ದೇವರನ್ನು ವಿಗ್ರಹ, ದೀಪ, ದರ್ಪಣ, ಅಕ್ಷರಗಳ ಮೂಲಕ ಅವರು ಸಾಕ್ಷಾತ್ಕರಿಸಿಕೊಂಡರು. ಎಲ್ಲಾ ಮತಗಳನ್ನು ಹಾಗೂ ಎಲ್ಲಾ ದೇವರುಗಳನ್ನು ಸಮಾನ ಗೌರವದಿಂದ ಕಂಡ ಶ್ರೀಗಳು ಕುರಾನ್ ಮತ್ತು ಬೈಬಲ್‌ಗಳ ಬಗ್ಗೆಯೂ ಅಪಾರ ಪಾಂಡಿತ್ಯ ಹೊಂದಿದವರಾಗಿದ್ದರು.

ಜಾತಿಯನ್ನು ಯಾರೂ ಕೇಳಬಾರದು, ಜಾತಿ ವಾದವನ್ನು ಬಿತ್ತಬಾರದು ದೇವರನ್ನು ನಂಬಬೇಕೇ ಹೊರತು ಜಾತಿಯನ್ನಲ್ಲ. ದೇವರು ಒಬ್ಬನೇ. ಜಾತಿ, ಮತ, ಧರ್ಮಗಳು ಸಮಾಜದ ವಿಭಜಕ ಶಕ್ತಿಗಳಾಗಬಾರದು. ಶಿಕ್ಷಣದ ಮೂಲಕ ಪ್ರಗತಿಯಾಗುತ್ತದೆ. ಯಾವುದೇ ಪಂಥದವರಿರಲಿ ಒಟ್ಟಿಗೆ ಕುಳಿತು ಊಟ ಮಾಡುವ ಮತ್ತು ಸಂಬಂಧಗಳನ್ನು ಬೆಸೆಯುವ ಕೆಲಸದಲ್ಲಿ ಒಗಟ್ಟಾಗಿರಬೇಕು. ಪರಸ್ಪರರಲ್ಲಿ ಭೇಧ-ಭಾವ ಎಣಿಸಬಾರದು ಎಂಬುದು ಶ್ರೀ ನಾರಾಯಣ ಗುರುಗಳ ಸಿದ್ಧಾಂತದ ಪ್ರಮುಖ ಅಂಶಗಳಾಗಿವೆ.

ದೀನ ದಲಿತರ ಸಮಾನತೆ ಹಾಗೂ ಸ್ವಾತಂತ್ರ್ಯ, ಹಕ್ಕುಗಳಿಗೆ ಹೊಸ ಆಯಾಮ ನೀಡಿದ ನಾರಾಯಣ ಗುರುಗಳ ತತ್ವ, ಆದರ್ಶಗಳು ಅತ್ಯಂತ ಸರಳವಾಗಿರುವುದರಿಂದ ಜನಸಾಮಾನ್ಯರಿಗೆ ಮತ್ತು ಅವಿದ್ಯಾವಂತರಿಗೂ ಸುಲಭವಾಗಿ ಮನಸ್ಸಿಗೆ ನಾಟುವಂತಿವೆ. ವಿಶೇಷವಾಗಿ ಹಿಂದುಳಿದವರಲ್ಲಿ ತಮ್ಮ ಹಕ್ಕುಗಳಿಗಾಗಿ ಹೊರಾಡುವ ಆತ್ಮಸ್ಥೈರ್ಯ ತುಂಬಿ ಸಂಘರ್ಷ ರಹಿತ ಸಮಾಜ ನಿರ್ಮಾಣಕ್ಕೆ ಅನೇಕ ಸುಧಾರಣಾ ಕ್ರಮಗಳನ್ನು ಅವರು ಜಾರಿಗೆ ತಂದರು. ನೂರಾರು ವರ್ಷಗಳ ಹಿಂದೆಯೇ ಸಮಾಜದ ಕಣ್ಣು ತೆರೆಸಿದ್ದ ಅವರ ಸರಳ ತತ್ವಗಳು ಇಂದಿಗೂ ಸಮಕಾಲೀನವಾಗಿ ಪ್ರಸ್ತುತವಾಗಿವೆ.

ಮತ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾದರೆ ಸಾಕು, ಜಾತಿ-ಮತವೆಂಬುದು ಮನುಷ್ಯರ ಕಲ್ಪನೆಯ ಕೂಸು. ಮಿಶ್ರ ವಿವಾಹ,  ಮಿಶ್ರ ಭೋಜನ, ಜಾತೀಯತೆಗೆ ವಿಮುಕ್ತಿ ಸೂತ್ರ. ಮುಂತಾದ ಅವರ ಸಿದ್ಧಾಂತಗಳು ಮಹಾತ್ಮಾಗಾಂಽ, ರವೀಂದ್ರನಾಥ ಠಾಗೋರರಂತಹ ದಿಗ್ಗಜರನ್ನು ಅವರ ಬಳಿಗೆ ಬರುವಂತೆ ಮಾಡಿದವು. ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವಕುಲದ ಮಾರ್ಗದರ್ಶಕರಾಗಿದ್ದಾರೆ.

ಸಮಾಜದಲ್ಲಿ ಆಗ ಶತಮಾನಗಳ ಹಿಂದೆ ಭದ್ರವಾಗಿ ನೆಲೆಯೂರಿದ್ದ ವರ್ಣ, ಜಾತಿ ತಾರತಮ್ಯಗಳನ್ನು ನಿವಾರಿಸಲು ತಮ್ಮ ವಿಶಿಷ್ಟ ಚಿಂತನೆಗಳ ಮೂಲಕ ಶ್ರಮಿಸಿದ ಮಹಾನ್ ಸಂತರಾಗಿದ್ದರು ಶ್ರೀ ನಾರಾಯಣ ಗುರುಗಳು. ಇಂದಿನ ವರ್ತಮಾನದಲ್ಲಿ ಕೂಡ ಶ್ರೀ ಗುರುಗಳ ಬೋಧನೆಗಳು ಪ್ರಸ್ತುತವಾಗಿವೆ ಮತ್ತು ಸಮಾಜಕ್ಕೆ ದಾರಿದೀಪವಾಗಿವೆ.

ಶ್ರೀ ನಾರಾಯಣ ಗುರುಗಳ ಸ್ವಂತ ಬದುಕೇ ಒಂದು ಜೀವನ ಸಿದ್ಧಾಂತದಂತೆ ಎಲ್ಲರಿಗೂ ಪ್ರೇರಣೆ ನೀಡುವಂತಿದೆ. ಅಧ್ಯಾತ್ಮದಲ್ಲಿ ಮತ್ತು ಸನ್ಯಾಸತ್ವದಲ್ಲಿ ವಿಶೇಷ ಸಾಧನೆಗೈದು ಅಂಧಃಕಾರದಲ್ಲಿದ್ದ ಸಮಾಜದ ಕಣ್ತೆರೆಸಿದ ಯೋಗಿಗಳಾಗಿದ್ದ ಶ್ರೀ ನಾರಾಯಣ ಗುರುಗಳು ಮಂಗಳೂರಿನ ಬಿಲ್ಲವ ಸಮುದಾಯದ ಕೋರಿಕೆಯ ಮೇರೆಗೆ ಕುದ್ರೋಳಿ ದೇವಾಲಯವನ್ನು 1909ರಲ್ಲಿ ಸ್ಥಾಪಿಸಿದರು.  ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕೂಡ ದೇವಸ್ಥಾನಗಳಲ್ಲಿ ಪ್ರವೇಶವಿರಬೇಕು ತನ್ಮೂಲಕ ಸಾಮಾಜಿಕ ಸಮಾನತೆಗೆ ಸರ್ವರೂ ಗೌರವ ಕೊಡಬೇಕು ಎಂಬುದು ಶ್ರೀಗಳ ಆಶಯವಾಗಿತ್ತು.

೧೮೫೫ ರಲ್ಲಿ ಜನಿಸಿದ ಶ್ರೀ ಗುರುಗಳು 1928 ರಲ್ಲಿ ಮಹಾಸಮಾಽ ಹೊಂದಿದರು. ಆದರೆ ಅವರ ಚಿಂತನೆಗಳು ಇಂದಿಗೂ  ಜೀವಂತವಾಗಿ ಪ್ರಸ್ತುತವಾಗಿವೆ.  ಈ ಅವಽಯಲ್ಲಿ ಅವರು ಲಕ್ಷಾಂತರ ಮಂದಿ ಬಡವರ, ದೀನದಲಿತರ ಮತ್ತು ಶೋಷಿತರಿಗೆ ಗಟ್ಟಿ ಧ್ವನಿಯಾಗಿ ಸೇವೆಗೈದರು. ಹೀಗಾಗಿ ಅವರಿಗೆ ರಾಷ್ಟ್ರೀಯ ಸಂತರೆಂಬ ಮಾನ್ಯತೆ ದೊರೆತಿದೆ. ಈ ಎಲ್ಲಾ ಸಾಧನೆಗಳನ್ನು ಶ್ರೀ ನಾರಾಯಣ ಗುರುಗಳು ತಮ್ಮ ಜೀವಿತಾವಽಯಲ್ಲಿ ಕೈಗೊಂಡಿದ್ದರಿಂದ ಅವರ ಸ್ಮರಣೆಯನ್ನು ನಾವೆಲ್ಲರೂ ಇಂದು ಕೈಗೊಂಡು ಹೊಸ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ.

ಸೀ ಸಮಾನತೆಗೂ ಶ್ರೀ ನಾರಾಯಣ ಗುರುಗಳು ಆಗಲೇ ಅವಿರತವಾಗಿ ಶ್ರಮಿಸಿದರು. ಅಂತರ್ ಜಾತಿಯ ವಿವಾಹ ಮತ್ತು ಸರಳ ವಿವಾಹಗಳನ್ನು ಪ್ರತಿಪಾದಿಸಿದ ಶ್ರೀ ನಾರಾಯಣ ಗುರುಗಳು, ದುಡಿಯುವ ಸಮುದಾಯವು ಮದುವೆ ಕಾರ್ಯಗಳಿಗೆ ಆಡಂಬರದ ಖರ್ಚು-ವೆಚ್ಚಗಳನ್ನು ಮಾಡದಂತೆ ಸೂಕ್ತ ಮಾರ್ಗದರ್ಶನ ಮಾಡಿ ನಿಜ ಅರ್ಥದಲ್ಲಿ ಗುರುಗಳಾದರು.

ಆಗ ಕೆಲವು ಕಡೆಗಳಲ್ಲಿ ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿಷಿದ್ಧವಾಗಿತ್ತು. ಇದನ್ನು ಪ್ರತಿಭಟಿಸಿದ ಗುರುಗಳು ದಲಿತ ಮಕ್ಕಳಿಗಾಗಿಯೇ ಶಿವಗಿರಿಯ ಆಶ್ರಮದಲ್ಲಿ  ಸಂಸ್ಕೃತದಲ್ಲಿ ಶಾಲೆ ಪ್ರಾರಂಭಿಸಿ, ಪಾಠ-ಪ್ರವಚನ,  ವೇದ, ಉಪನಿಷತ್ತು ಮತ್ತು ಪೂಜಾ ಮಂತ್ರಗಳನ್ನು ಕಲಿಸಿಕೊಟ್ಟು ದೊಡ್ಡ ಕ್ರಾಂತಿಯನ್ನೇ ಕೈಗೊಂಡರು. ದಲಿತರು ಸ್ವಚ್ಛತೆಯಿಂದಿರುವಂತೆ ಮಾರ್ಗದರ್ಶನ ಮಾಡಿದ್ದಲ್ಲದೇ ದಲಿತರೇ ದೇವಾಲಯಗಳ ಪೂಜಾರಿಗಳಾಗಿ ದೇವಾಲಯಗಳನ್ನು ಮುನ್ನಡೆಸಲಿ ಎಂಬ ದಿಟ್ಟ ನಿಲುವನ್ನು ಕೈಗೊಂಡು ಕ್ರಾಂತಿಕಾರಿ ಪರಿವ್ರಾಜಕರೆನಿಸಿಕೊಂಡರು.

ಕುಡಿತದ ವಿರುದ್ಧ ವೈಚಾರಿಕ ಆಂದೋಲನವನ್ನೇ ಕೈಗೊಂಡ ಅವರು, ಮದ್ಯವನ್ನು ತಯಾರಿಸಬಾರದು, ಮದ್ಯವನ್ನು ಮಾರಾಟ ಮಾಡಬಾರದು ಮತ್ತು ಮದ್ಯವನ್ನು ಸೇವಿಸಬಾರದು. ಮದ್ಯವೆಂಬುದು ಬಡವರ ಪಾಲಿನ ವಿಷ ಎಂದು ಘಂಟಾಘೋಷವಾಗಿ ಸಾರಿದ್ದರು.

ಒಟ್ಟಾರೆಯಾಗಿ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಶ್ರೀ ನಾರಾಯಣ ಗುರುಗಳು ದಕ್ಷಿಣ ಭಾರತದ ಮಹಾನ್ ಸಂತರೆನಿಸಿಕೊಂಡಿದ್ದಾರೆ.

ಮೂಢನಂಬಿಕೆಯ ವಿರುದ್ಧವೂ ಶ್ರೀ ನಾರಾಯಣ ಗುರುಗಳು ಸಿಡಿದೆದ್ದು ಹೊಸ ಸಾಮಾಜಿಕ ಮತ್ತು ವೈಚಾರಿಕ ಕ್ರಾಂತಿಗೆ ಹರಿಕಾರರಾದರು. ಆದ್ದರಿಂದ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಯಲ್ಲಿ ಶ್ರೀ ನಾರಾಯಣ ಗುರುಗಳ ಬಗ್ಗೆ ಇಂದಿಗೂ ಅಪಾರ ಗೌರವವಿದೆ. ಆದರೆ ಕರ್ನಾಟಕದ ಇತರ ಕಡೆಗಳಲ್ಲಿ ಶ್ರೀ ನಾರಾಯಣ ಗುರುಗಳ ವ್ಯಕ್ತಿತ್ವ, ಸಾಧನೆ ಮತ್ತು ಸಿದ್ಧಾಂತಗಳ ಪ್ರಚಾರ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ.

ಈ ರೀತಿ ತಮ್ಮ ನಡೆ ನುಡಿ ಮತ್ತು ಚಿಂತನೆಗಳಿಂದ ಮಹಾನ್ ಮಾನವತಾವಾದಿಯಾಗಿದ್ದ ಶ್ರೀ ನಾರಾಯಣ ಗುರುಗಳ ಜನ್ಮ ಜಯಂತಿಯನ್ನು ನಮ್ಮ ಸರಕಾರದ ವತಿಯಿಂದ ಆಚರಿಸಲು ನಮಗೆಲ್ಲ ಹೆಮ್ಮೆ ಎನಿಸುತ್ತದೆ. ರಾಜ್ಯ ಸರಕಾರವು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಸ್ಥಾಪಿಸಿ ಗುರುಗಳ ಆದರ್ಶಗಳನ್ನು  ನಮ್ಮ ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close