About Us Advertise with us Be a Reporter E-Paper

ಗುರು

ವೈದಿಕ ಲೋಕದ ಬ್ರಹ್ಮಶ್ರಿ ಯಾಜ್ಞವಲ್ಕ್ಯ

- ಡಾ. ಗುರುರಾಜ ಪೋಶೆಟ್ಟೆಹಳ್ಳಿ

ಲೌಕಿಕ-ಅಲೌಕಿಕ, ಪ್ರವೃತ್ತಿ-ನಿವೃತ್ತಿ, ಐಹಿಕ-ಪಾರಮಾರ್ಥಿಕ, ತ್ಯಾಗ-ಭೋಗಗಳ ಸಮನ್ವಯದೊಂದಿಗೆ ಅರ್ಥಪೂರ್ಣ ಬದುಕನ್ನು ಮಾಡಿದವರು ಋಷಿವರೇಣ್ಯರ ಸಾಲಿನಲ್ಲಿ ದೇದೀಪ್ಯಮಾನವಾಗಿ ಪ್ರಕಾಶಿಸುವ ಅದ್ವಿತೀಯ ತೇಜಸ್ವಿಗಳೇ ಶ್ರೀ ಯಾಜ್ಞವಲ್ಕ್ಯರು. ಕಠಿಣ ಸಾಧನೆಗೆ ಹೆಸರಾದ ಇವರು ದಾರ್ಶನಿಕ, ಸ್ಮತಿಕಾರ, ಪ್ರತಿಮ ಮೇಧಾವಿಗಳು. ಯಾಜ್ಞವಲ್ಕ ಜಯಂತಿ ಪ್ರಯುಕ್ತ ಈ ಲೇಖನ.

‘ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ’ನನ್ನನ್ನು ಅವ್ಯವಸ್ಥೆಯಿಂದ ವ್ಯವಸ್ಥೆಯತ್ತ ಅಜ್ಞಾನಾಂಧಾಕಾರದಿಂದ ಜ್ಞಾನದ ಬೆಳಕಿನತ್ತ ನಡೆಸು. ಸಾವಿನಿಂದ ಅಮೃತದತ್ತ ನಡೆಸು ಎಂದು ಜನಸಾಮಾನ್ಯರ ಬಾಯಲ್ಲೂ ನಿತ್ಯ ನಲಿದಾಡುವ ವಿಶ್ವಪ್ರಸಿದ್ಧ ಸೂಕ್ತಿಗಳನ್ನು ಹೇಳಿದವರೂ ಯಾಜ್ಞವಲ್ಕ್ಯರೇ. ಇಂತಹ ಅಮೋಘ ತತ್ತ್ವವನ್ನು ಜಗತ್ತಿಗೆ ಸಾರಿದ ಯಾಜ್ಞವಲ್ಕ ್ಯರ ವ್ಯಕ್ತಿತ್ವ ಮೇರು ಸದೃಶವಾದುದು. ಯಾಜ್ಞವಲ್ಕ್ಯರಿಗೆ ಬ್ರಹ್ಮರಾತ, ದೈವರಾತ, ವಾಜಸನೇಯ ಎಂಬಿತ್ಯಾದಿ ಹೆಸರುಗಳೂ ಇವೆ. ಯಜ್ಞಯಾಗಗಳಲ್ಲಿ ಅವರು ಸದಾ ಭಾಗವಹಿಸುತ್ತ, ಸದಾ ದೀಕ್ಷಾವಸ್ತ್ರ ಧಾರಣ ಮಾಡುತ್ತಿದ್ದುದರಿಂದ ಅವರಿಗೆ ಯಾಜ್ಞವಲ್ಕ್ಯರೆಂದೂ, ಸದಾ ಅಧ್ಯಾತ್ಮಚಿಂತಕರಾದುದರಿಂದ ಬ್ರಹ್ಮರಾತಿಯೆಂದು, ನಿತ್ಯ ಅನ್ನದಾನ ಸೂರ್ಯನ ಉಪಾಸನೆಯಿಂದ ವೇದವಾಙ್ಮಯವನ್ನು ಕಂಡುಹಿಡಿದಿದ್ದರಿಂದ ವಾಜಸನೇಯ ಎಂಬ ಹೆಸರೂ, ಸತತವಾದ ಯಜ್ಞಯಾಗಾದಿಗಳಿಂದ ದೇವತೆಗಳನ್ನು ಒಲಿಸಿಕೊಂಡಿದ್ದರಿಂದ ದೈವರಾತರೆಂಬ ಹೆಸರೂ ಅನ್ವರ್ಥವಾಗಿ ಬಂದವು.

ಆದಿತ್ಯದರ್ಶನಕ್ಕಾಗಿ ಅವರು ಹಗಲಿರುಳೂ ಗಾಯತ್ರೀಧ್ಯಾನದಲ್ಲಿ ತೊಡಗಿದರು. ವರ್ಷವಿಡೀ ತಪಶ್ಚರ್ಯೆಯಲ್ಲಿ ಮುಳುಗಿದರು. ಅದೊಂದು ದಿನ ಭಗವಾನ್ ಭಾಸ್ಕರನು ಇವರ ತಪಸ್ಸಿಗೆ ಮೆಚ್ಚಿ ಅಶ್ವರೂಪದಲ್ಲಿ ಪ್ರತ್ಯಕ್ಷನಾಗಿ ವೇದವನ್ನು ಉಪದೇಶಿದನು. ಸೂರ್ಯನಿಂದ ಉಪದೇಶಿಸಲ್ಪಟ್ಟ ಆ ಮಂತ್ರಭಾಗವು ಯಾಜ್ಞವಲ್ಕ್ಯರ ಮುಖದಿಂದ ಪ್ರವಹಿಸತೊಡಗಿತು. ಅದನ್ನು ಅವರ ಶಿಷ್ಯರಾದ ಕಣ್ವ ಮತ್ತು ಮಾಧ್ಯಂದಿನ ಎಂಬ ಇಬ್ಬರು ಅಕ್ಷರಗಳಲ್ಲಿ ಸೆರೆಹಿಡಿದರು. ಈ ವೇದವೇ ಮುಂದೆ ಶುಕ್ಲ ಯರ್ಜುವೇದವೆಂದು ಖ್ಯಾತಿಹೊಂದಿತು. ವೇದಗಳಲ್ಲಿ ಮುಖ್ಯವಾಗಿ ಸಂಹಿತೆ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತೆಂದು ನಾಲ್ಕು ಭಾಗಗಳನ್ನು ಕಾಣುತ್ತೇವೆ. ಒಟ್ಟಿಗೆ ಇದ್ದ ವೇದರಾಶಿಯನ್ನು ಹೀಗೆ ಈ ನಾಲ್ಕು ಭಾಗಗಳಾಗಿ ವಿಂಗಡಿಸಿದವರೇ ಯಾಜ್ಞವಲ್ಕ್ಯರು ಎಂಬ ಪ್ರತೀತಿಯಿದೆ.

ಜೀವನ ಪದ್ಧತಿ ಕಲಿಸುವ ಯಾಜ್ಞವಲ್ಕ್ಯ ಸ್ಮತಿ
ಯಾಜ್ಞವಲ್ಕ್ಯರು ಬ್ರಹ್ಮಜ್ಞಾನದ ಸಂಬಂಧ ಜನಕನ ಆಸ್ಥಾನದಲ್ಲಿ ನಡೆಸಿದ ಪ್ರಶ್ನೋತ್ತರಗಳು ಅವೆಲ್ಲ ಬೃಹದಾರಣ್ಯಕ ಉಪನಿಷತ್ತಿನ ಮುನಿ ಕಾಂಡವೆಂಬ 3ನೇ ಅಧ್ಯಾಯದಲ್ಲಿ ಸಂಗ್ರಹಿತವಾಗಿದೆ. ಪತ್ನಿ ಮೈತ್ರೇಯಿಗೆ ಬೋಧಿಸಿದ ಅಮೃತತ್ವ ಮೋಕ್ಷದ ಬಗೆಗಿನ ಉಪದೇಶಗಳು ಮಹತ್ವದ ಸ್ಥಾನಪಡೆದಿವೆ. ಅವರು ಯಾಜ್ಞವಲ್ಕ್ಯ ಸ್ಮತಿ ಮತ್ತು ಯೋಗಶಾಸ್ತ್ರ ಎಂಬ ಗ್ರಂಥ ರಚಿಸಿದ್ದು, ಯಾಜ್ಞವಲ್ಕ್ಯ ಸ್ಮತಿ ಧರ್ಮಸಮ್ಮತವಾಗಿ ನಿತ್ಯ ಜೀವನ ನಡೆಸುವ ಪರಿಯನ್ನು ಸೂಚಿಸುತ್ತದೆ.

ಜನಕನಿಂದ ಸನ್ಮಾನ
ವೇದದ ಕರ್ಮಾಂಗ ಮತ್ತು ಜ್ಞಾನಾಂಗಗಳೆರಡರಲ್ಲೂ ಅಸೀಮ ಪಾಂಡಿತ್ಯವನ್ನು ಗಳಿಸಿ ಜನಕಮಹಾರಾಜನ ಆಸ್ಥಾನದ ವಿದ್ವಾಂಸರಾಗಿದ್ದ ಯಾಜ್ಞವಲ್ಕ್ಯರು ತ್ರೇತಾಯುಗದಲ್ಲಿ ಮಾನ್ಯವಾಗಿದ್ದ ಯಾಜ್ಞವಲ್ಕ್ಯಸ್ಮತಿಯ ಕರ್ತೃವೂ ಹೌದು. ಯಾಜ್ಞವಲ್ಕ್ಯರ ಸುದೀರ್ಘವಾದ ಚರ್ಚೆ-ಸಂವಾದಗಳು ಬೃಹದಾರಣ್ಯಕೋಪನಿಷತ್ತಿನ ಮುನಿಕಾಂಡದಲ್ಲಿ ನಿರೂಪಿತವಾಗಿವೆ. ರಾಜರ್ಷಿ ಜನಕಮಹಾರಾಜನ ಕುಲಗುರುವಾಗಿದ್ದರು. ಒಮ್ಮೆ ಜನಕನಿಗೆ ಬ್ರಹ್ಮಜ್ಞರಾರೆಂದು ತಿಳಿದುಕೊಳ್ಳುವ ಆಸೆಯಾಯಿತು. ಬಹುದಕ್ಷಿಣಾ ಎಂಬ ಯಜ್ಞಕ್ಕೆ ಕುರುಪಾಂಚಾಲಾದಿಗಳಿಂದ ವಿದ್ವಾಂಸರನ್ನು ಬರ ಮಾಡಿಕೊಂಡ ಪ್ರತಿ ಕೊಂಬಿಗೆ ಚಿನ್ನದ ಹತ್ತು ಪದಕಗಳನ್ನು ಕಟ್ಟಿದ ಸಾವಿರ ಗೋವುಗಳನ್ನು ತೋರಿಸಿ, ಬ್ರಹ್ಮನನ್ನು ಅರಿತವರು ಅವುಗಳನ್ನು ಹೊಡೆದುಕೊಂಡು ಹೋಗಲಿ ಎಂದ. ಯಾಜ್ಞವಲ್ಕ್ಯರು ತಮ್ಮ ಶಿಷ್ಯನನ್ನು ಕರೆದು ಆಶ್ರಮಕ್ಕೆ ಗೋವುಗಳನ್ನು ಹೊಡೆದುಕೊಂಡು ಹೋಗಲು ಅಪ್ಪಣೆ ಮಾಡಿದರು. ಜನಕ ಸಭೆಯಲ್ಲಿ ಯಾಜ್ಞವಲ್ಕ್ಯರು ತಾವು ಬ್ರಹ್ಮಿಷ್ಠರೆಂದು ನೇರವಾಗಿ ಹೇಳಿಕೊಳ್ಳದೆ ವಿದ್ವಾಂಸರು ಒಬ್ಬರ ಪ್ರಶ್ನೆಗಳನ್ನೆಸೆದಾಗ ಅದಕ್ಕೆ ಸಮರ್ಥವಾಗಿ ಉತ್ತರಿಸುತ್ತ ಪರೀಕ್ಷವಾಗಿ ತಾವು ಬ್ರಹ್ಮಿಷ್ಠಪಣಕ್ಕೆ ಯೋಗ್ಯರೆಂದು ತೋರಿಸಿಕೊಟ್ಟರು.

ಸ್ತ್ರೀಗೂ ಬ್ರಹ್ಮಜ್ಞಾನ
ಉಪನಿಷತ್ತುಗಳು ಅನೇಕ. ಅವುಗಳಲ್ಲಿ ಬೃಹದಾರಣ್ಯಕೋಪನಿಷತ್ತು ಒಂದು. ಯಾಜ್ಞವಲ್ಕ್ಯರ ಆತ್ಮತತ್ತ್ವ ಬೋಧೆ ಹೃದಯಂಗಮವಾಗಿ ಪ್ರಕಟಗೊಂಡಿದ್ದು ಇದರಲ್ಲೇ. ಅವರ ಮಡದಿ ಮೈತ್ರೇಯಿ ಆ ಕಾಲದ ಪ್ರಖ್ಯಾತ ಬ್ರಹ್ಮವಾದಿನಿಯಾಗಿದ್ದು ಯಾಜ್ಞವಲ್ಕ್ಯರೊಡನೆ ಆತ್ಮತತ್ತ್ವ ಜಿಜ್ಞಾಸೆಗೆ ಉಪಕ್ರಮಿಸಿದ್ದು ಈ ಉಪನಿಷತ್ತಲೇ. ಅಧ್ಯಾತ್ಮವಿದ್ಯೆಯಂತಹ ಶ್ರೇಷ್ಠ ಅಸಾಧಾರಣ ಬ್ರಹ್ಮವಿದ್ಯೆಯನ್ನು ತಮ್ಮ ಪತ್ನಿ ಮೈತ್ರೇಯಿಗೆ ಬೋಧಿಸಿ, ಸ್ತ್ರೀಯರೂ ಬ್ರಹ್ಮಜ್ಞಾನ ಪಡೆಯಲು ಅರ್ಹರು ಎಂಬ ಕ್ರಾಂತಿಕಾರಕ ಬಿತ್ತಿದ ಮಹಾಪುರುಷ ಯಾಜ್ಞವಲ್ಕ್ಯರು. ಅವರಿಗೆ ಕಾತ್ಯಾಯಿನಿ ಮತ್ತು ಮೈತ್ರೇಯಿ ಎಂಬ ಇಬ್ಬರು ಪತ್ನಿಯರಿದ್ದರು. ತಮ್ಮ ಜೀವಿತಕಾಲದಲ್ಲಿ ರಾಜಮಾನ್ಯರಾಗಿ ಅನೇಕವಿಧವಾದ ಸಂಪತ್ತು – ಸಮೃದ್ಧಿಯನ್ನು ಗಳಿಸಿದವರಾದರೂ ತಮ್ಮ ಬದುಕಿನ ಉತ್ತರಾರ್ಧಕಾಲದಲ್ಲಿ ತಮ್ಮ ಮಡದಿಯಾದ ಮೈತ್ರೇಯಿ ಮತ್ತು ಕಾತ್ಯಾಯನಿಯರಿಗೆ ಸಂಪತ್ತನ್ನು ಹಂಚಿ ವಾನಪ್ರಸ್ಥರಾಗುವುದಕ್ಕೆ ಯಾಜ್ಞವಲ್ಕ್ಯರು ನಿರ್ಣಯಿಸುತ್ತಾರೆ.

ಜೇಷ್ಠಪತ್ನಿಯಾದ ಮೈತ್ರೇಯಿಯು ಪತಿಯಲ್ಲಿ ಅಮೃತ ತತ್ತ್ವವನ್ನು ಹೊಂದುವ ಬಗೆಯನ್ನು ಅಪೇಕ್ಷಿಸಿದಾಗ ಮಹರ್ಷಿಗಳಿಗೆ ಸಂತೋಷವಾಗಿ ಪತ್ನಿಗೆ ತತ್ತ್ವಬೋಧೆ ಮಾಡುತ್ತಾರೆ.
ಯಾಜ್ಞವಲ್ಕ್ಯರ ಕೊಡುಗೆ ಕೇವಲ ಧರ್ಮಶಾಸ್ತ್ರ ಮತ್ತು ಮಾತ್ರವಲ್ಲದೇ ಖಗೋಳಶಾಸ್ತ್ರಕ್ಕೂ ಸಂದಿದೆಯೆಂದು ಶತಪಥಬ್ರಾಹ್ಮಣವು ಹೇಳುತ್ತದೆ. ಅಧ್ಯಾತ್ಮಿಕ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಯಾಜ್ಞವಲ್ಕ್ಯರ ಶ್ರೇಷ್ಠ ತತ್ತ್ವಗಳನ್ನು, ಅವರನ್ನು ಅರ್ಥಪೂರ್ಣ ರೀತಿಯಲ್ಲಿ ಸ್ಮರಿಸಿಕೊಳ್ಳುವುದೇ ನಿಜವಾದ ಜಯಂತಿ ಆಚರಣೆ ಎನಿಸುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close