ವಿಶ್ವವಾಣಿ

ಬಿಗ್ ಬ್ರೇಕಿಂಗ್ ನ್ಯೂಸನ್ನು ಬ್ರೇಕ್ ಮಾಡುವುದು ಬೇಡವೆ?

ನ್ಯೂಸ್ ಚಾನೆಲ್‌ನವರನ್ನು ಬೈಯುವುದೂ ಒಂದೇ, ಮೈ ಪರಚಿಕೊಳ್ಳುವುದೂ ಒಂದೇ. ಮಾಧ್ಯಮಲೋಕದವರೇ ಇದ್ದು, ಇನ್ನೊಂದು ಪ್ರಕಾರದ ಮಾಧ್ಯಮವನ್ನು ಖಂಡಿಸುವುದು ಮೇಲ್ನೋಟಕ್ಕೆ ಸರಿ ಎನಿಸುವುದಿಲ್ಲ.  ಎಲೆಕ್ಟ್ರಾನಿಕ್ ಮಾಧ್ಯಮದ ಪತ್ರಿಕೋದ್ಯಮವು ದಿನ ಕಳೆದಂತೆ ನೆಗೆಟಿವ್ ಆಗುತ್ತಿರುವುದನ್ನು ನೋಡಿದರೆ ಸುಮ್ಮನಿರಲಾಗದು. ಟೀಕೆ ಟಿಪ್ಪಣಿಗಳು ಏನನ್ನೂ ಸರಿ ಪಡಿಸುವುದಿಲ್ಲ, ನಿಜ. ಆದರೆ ಸಾಮಾಜಿಕ ಹೊಣೆ ಅರಿಯದೇ ಟಿಆರ್‌ಪಿಯನ್ನೇ ದೃಷ್ಟಿಯಲ್ಲಿರಿಸಿಕೊಂಡು ಮಾಡುವ ಕಾರ್ಯಕ್ರಮಗಳು ಬೇಜವಾಬ್ದಾರಿಯ ಪರಮಾವಧಿ ಎನ್ನಲೇಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚಿನ ಶೀರೂರು ಶ್ರೀಗಳ ಸಾವಿನ ಪ್ರಕರಣದ ವರದಿ ಹಾಗೂ ನಾಳೆ ಗ್ರಹಣ ಕುರಿತು ಮಾಡುತ್ತಿರುವ ಅಪಪ್ರಚಾರ. ‘ಜುಲೈ 27ರಂದು ನಡೆಯಲಿದೆ ಕೇತುಗ್ರಸ್ಥ ರಕ್ತ ಚಂದ್ರಗ್ರಹಣ. ಕಾದಿದೆಯಾ ಭಾರೀ  ಬೆಂಗಳೂರು ಅಪಾಯದಲ್ಲಿದೆ ಅಂತಿದಾರೆ ಜ್ಯೋತಿಷಿಗಳು. ಜಗತ್ತಿನೆಲ್ಲೆಡೆ ಬರಲಿದೆಯೆ ಸುನಾಮಿ? ಎದೆ ನಡುಗಿಸುವ ಪ್ರವಾಹ ಬರಲಿದೆಯೆ? ಜನ ಭಯ ಭೀತರಾಗಿದ್ದಾರೆ’ ಎಂದೆಲ್ಲ ಹೆದರಿಸುವ ಧ್ವನಿಯಲ್ಲಿ ಹೇಳಿ, ಏನೋ ಆಗಿಬಿಡುತ್ತದೆ ಎಂಬಂತೆ ಬಿಂಬಿಸಲಾಯಿತು. ಇನ್ನು ಶೀರೂರು ಶ್ರೀಗಳ ಪ್ರಕರಣವನ್ನಂತೂ ‘ನಾವ್ ಹೇಳ್ತೀವಿ ಕೇಳಿ, ಇದು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನಡೆದ ಗುಪ್‌ತ್ ಗುಪ್‌ತ್ ಕಹಾನಿ’ ಎಂದೆಲ್ಲ ಅತಿ ರಂಜನೀಯವಾಗಿ ಹೇಳಿ, ಅನಗತ್ಯ ಕುತೂಹಲ ಹುಟ್ಟಿಸಲಾಗುತ್ತಿದೆ. ಇನ್ನು ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರದ ಪ್ರಕರಣವನ್ನಂತೂ ಕನ್ನಡದ  ಜಾಲಾಡಿ ಹೊಸ ಹೊಸ ಪದ ಹುಡುಕಿ ತಂದು ಜನರ ಮುಂದಿಡಲಾಗುತ್ತಿದೆ. ಪರಮಪಾಪಿ, ಕೀಚಕ, ಪೀಡೆ ಎಂದೆಲ್ಲ ದಿನ ಬಳಕೆಯಲ್ಲಿರದ ಶಬ್ದಗಳನ್ನು ಪುನಃ ನೆನಪಿಸಿ ಕೊಡಲಾಗುತ್ತಿದೆ.

ಇಲ್ಲಿ ಒಂದಾದರೂ ಸಕಾರಾತ್ಮಕ ವಿಷಯ ಇದೆಯೆ? ಒಳ್ಳೆಯದು ಹೇಗೆ ಸುದ್ದಿಯಾಗುತ್ತದೆ? ರೈತ ಅವನ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದನ್ನು ಲೈವ್ ಆಗಿ ತೋರಿಸಲಾಗುತ್ತದೆ, ಬರದಿಂದ ಬರಡಾಗಿರುವ ಹೊಲವನ್ನು ತೋರಿಸಲಾಗುತ್ತದೆ, ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ನಿರಂತರವಾಗಿ ಬೇರೆ ಬೇರೆ ಆ್ಯಂಗಲ್‌ನಿಂದ ವಿಮರ್ಶಿಸಲಾಗುತ್ತದೆ. ಇಲ್ಲಿ  ಪಾಸಿಟಿವ್ ವಿಚಾರ ಇದೆಯಾ? ನ್ಯೂಸ್ ಚಾನೆಲ್‌ಗಳ ಆಟಾಟೋಪ ಯಾಪ ಪರಿ ಹೆಚ್ಚಿದೆಯೆಂದರೆ, ಯಾವುದೇ ಘಟನೆ ಸಂಭವಿಸಿದರೂ ನ್ಯೂಸ್ ಚಾನಲ್‌ಗಳು ಅದರ ನೆಗೆಟಿವ್ ಮುಖವನ್ನೇ ತೋರಿಸುತ್ತವೆ ಎಂಬುದು ನಮ್ಮ ಗಮನಕ್ಕೆ ಬರುವುದೇ ನಿಂತು ಹೋಗಿದೆ. ಅದಿರುವುದೇ ಹಾಗೆ, ಅದರಲ್ಲಿ ಬರುವ ವಿಷಯಗಳೇ ಸತ್ಯ, ಜಗತ್ತಿರುವುದೇ ಹೀಗೆ, ಜನರಿರುವುದೇ ಹೀಗೆ ಎಂದು ನಾವೂ ನಂಬಿಯಾಗಿದೆ. ಮಠದ  ಸ್ವಾಮೀಜಿಗಳೆಂದರೆ ಕಚ್ಚೆ ಹರುಕರು, ಹೆಣ್ಣು ಮಕ್ಕಳೆಂದರೆ ಅತ್ಯಾಚಾರ ಮಾಡಿಸಿಕೊಳ್ಳಲೆಂದೇ ಹುಟ್ಟಿದವರು, ಪ್ರಾಕೃತಿಕ ಘಟನೆಗಳೆಂದರೆ ಅಪಾಯಗಳು,  ಜ್ಯೋತಿಷ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂಬ ಮನಸ್ಥಿತಿಗೆ ಬಂದು ತಲುಪಿಯಾಗಿದೆ.

ಕೇವಲ ಎರಡು ಮೂರು ದಶಕಗಳ ಹಿಂದೆ ನ್ಯೂಸ್ ಚಾನೆಲ್ ಗಳ ಅಬ್ಬರ ಇಷ್ಟೊಂದು ಇರದ ಕಾಲದಲ್ಲೂ ಇವೆಲ್ಲ ಘಟಿಸಿವೆ. ಗ್ರಹಣಗಳಾಗಿವೆ, ಆಗಲೂ ಶೀರೂರು ಮಠದ ಸ್ವಾಮಿಗಳಂಥವರು ಇದ್ದರು, ಆಗಲೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಾಗಿವೆ. ಆಗಲೂ ಈಗಿನಂತೆಯೇ ಮಳೆ ಸುರಿದಿದೆ, ನೆರೆ ಬಂದಿದೆ. ಆದರೆ ಯಾವುದೂ ಈ ಮಟ್ಟದ ಅಪಾಯದ ಘಂಟೆ ಬಾರಿಸಿರಲಿಲ್ಲ. ಅವೂ ಸಮಾಜದ, ಬದುಕಿನ ಭಾಗವಾಗಿತ್ತು.  ಸಂಭವಿಸಿದಾಗ ಛೇ ಆಗಬಾರದಿತ್ತು ಅನಿಸುತ್ತಿತ್ತು. ಆದರೆ ಈ ಮಟ್ಟಿಗಿನ ರೋಚಕತೆ, ಅನಗತ್ಯ ವೈಭವೀಕರಣ ಖಂಡಿತಾ ಇರಲಿಲ್ಲ.  ಇವತ್ತು ಮಳೆ ಜೋರಾಗಿ ಸುರಿದರೂ ನ್ಯೂಸ್ ಚಾನಲ್‌ನವರು ಅದನ್ನು ಪ್ರಳಯವೆಂದೇ ಗ್ರಹಿಸುತ್ತಾರೆ. ಪ್ರಕೃತಿ ಸಹಜ ಗ್ರಹಣವಾದರೂ ಅಪಾಯಕಾರಿ ಎಂದೇ ಬಣ್ಣಿಸುತ್ತಾರೆ. ಅದರಲ್ಲೂ ಗ್ರಹಣ ಬಂತೆಂದರೆ ಮೌಢ್ಯಗಳು ಮೊದಲಿಗಿಂತ ಹೆಚ್ಚುತ್ತಿವೆ. ಸ್ವತಃ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೇ ಹೋಮ ಹವನದ ಮೊರೆ ಹೋಗುತ್ತಾರೆ, ಜ್ಯೋತಿಷಿಗಳು ಟಿವಿಯಲ್ಲಿ ಕೂತು ಈ ಗ್ರಹಣದಿಂದ ಅವಘಡಗಳು ಕಟ್ಟಿಟ್ಟಿದ್ದೇ ಎನ್ನುತ್ತಾರೆ, ದೇವಸ್ಥಾನಗಳಲ್ಲಿ  ಇದ್ದಬದ್ದ ಕೆಲಸವನ್ನೆಲ್ಲ ಬಿಟ್ಟು ಪೂಜೆ ಮಾಡಿಸಲು ತೊಡಗುತ್ತಾರೆ. ಆಧುನಿಕ ವಿಜ್ಞಾನ ಯುಗ ಎಂದು ಏನು ಸಾಧಿಸಿದಂತಾಯ್ತು ನಾವು? ಓದು, ಶಿಕ್ಷಣ, ಇಂಟರ್‌ನೆಟ್, ಮೊಬೈಲ್, ಸೋಷಿಯಲ್ ಮೀಡಿಯಾ ಇವ್ಯಾವುದೂ ನಮ್ಮೊಳಗಿನ ಯಾವ ಭಯವನ್ನೂ ಹೋಗಲಾಡಿಸಿಲ್ಲ. ಮೊದಲು ಪುರೋಹಿತಶಾಹಿ ವರ್ಗ ದೇವರ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಆಪಾದಿಸಲಾಯಿತು.  ಇಂದು ನ್ಯೂಸ್ ಚಾನೆಲ್‌ಗಳು ಟಿಆರ್‌ಪಿ ಹೆಸರಿನಲ್ಲಿ  ಆ ಕೆಲಸ ಮಾಡುತ್ತಿವೆ.  ಅಂದ ಮೇಲೆ ಒಟ್ಟಿನಲ್ಲಿ ಎಲ್ಲಿಯವರೆಗೆ ಭಯ ಪಡುವವರು ಇರುತ್ತಾರೋ ಅಲ್ಲಿಯವರೆಗೆ  ಭಯ ಹುಟ್ಟಿಸಿ ಲಾಭ ಮಾಡಿಕೊಳ್ಳುವವರೂ ಇರುತ್ತಾರೆ ಎಂದಾಯಿತಲ್ಲವೆ?

1980ರಲ್ಲಿ ಖಗ್ರಾಸ ಸೂರ್ಯ ಗ್ರಹಣವಾಯಿತು. ಮಟಮಟ ಮಧ್ಯಾಹ್ನವೇ ಕತ್ತಲಾಗಿ ಹೋಯಿತು. ಹಕ್ಕಿಗಳು ಗೂಡು ಸೇರತೊಡಗಿದರೆ, ಮೇಯಲು ಹೋದ ದನಕರುಗಳು ಮನೆಗೆ ವಾಪಸಾದವು. ಜನರು ಮಡಿಮೈಲಿಗೆ ಶಾಸ್ತ್ರ ಮಾಡಿ, ಜಪತಪ ಮಾಡಿ ತಮ್ಮ ತಮ್ಮ ನಂಬಿಕೆಗೆ ತಕ್ಕಂತೆ ಗ್ರಹಣ ದೋಷ ಕಳೆದುಕೊಂಡರು. ಆಗ ಈ ನ್ಯೂಸ್ ಚಾನಲ್‌ಗಳೇನಾದರೂ ಇದ್ದಿದ್ದರೆ ಆ ಸಂದರ್ಭವನ್ನು ತೀರಾ ಹದಗೆಡಿಸಿಬಿಡುತ್ತಿದ್ದವೇನೊ. ಅತಿರಂಜನೀಯವಾಗಿ ಹೇಳುವ ನ್ಯೂಸ್ ಚಾನೆಲ್‌ಗಳು ಇರಲಿಲ್ಲ,  ಹತ್ತು ಉಂಗುರ ಹಾಕಿ, ನಾಮ ಬಡಿದು, ಕೈಲಿ ತ್ರಿಶೂಲ ಹಿಡಿದು ಕೂರುವ ಡೋಂಗಿ ಸ್ವಾಮೀಜಿಗಳೂ ಇರಲಿಲ್ಲ. ಎಲ್ಲವೂ ಅತ್ಯಂತ ಸಹಜವಾಗಿ ಸಾಗಿತು. ಹಾಗೆ ನೋಡಿದಲ್ಲಿ 80ರ ದಶಕದಿಂದ 90ರ ದಶಕದ ಅಂತ್ಯದವರೆಗೂ ಅದನ್ನು ‘ಚಾರ್ವಾಕ’ ಯುಗವೆಂದೇ ಕರೆಯಬಹುದು. ಜನರು ಜ್ಯೋತಿಷ್ಯ, ಸ್ವಾಮೀಜಿ, ವಾಸ್ತು ಎಂದೆಲ್ಲ ಈಗಿನಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.  ಸೂರ್ಯ ಹುಟ್ಟುವ ಕಡೆ ಮನೆ ಬಾಗಿಲಿರಿಸಿ, ಗಾಳಿ ಬೀಸುವ ದಿಕ್ಕನ್ನು ನೋಡಿ ಮನೆ ಕಟ್ಟಿಕೊಳ್ಳುತ್ತಿದ್ದರು. ಹಾವು ಕಂಡರೆ ಸುಬ್ರಮಣ್ಯಕ್ಕೆ  ಜ್ಯೋತಿಷಿಗಳು ಹೇಳಿದರೆಂದು ಮನೆ ದ್ವಾರದ ದಿಕ್ಕು ಬದಲಾಯಿಸುವುದು, ಕಾರಲ್ಲಿ, ಮನೆಯೊಳಗೆ ಲಿಂಬೆ ಹಣ್ಣು ಕಟ್ಟುವುದು ಮಾಡುತ್ತಿರಲಿಲ್ಲ. ಇವೆಲ್ಲ ಇದ್ದರೂ ಅತಿರೇಕಕ್ಕೆ ಹೋಗಿದ್ದು  ನ್ಯೂಸ್ ಚಾನೆಲ್‌ಗಳ ಅಬ್ಬರದಿಂದ. ಇರುವುದನ್ನು ಇದ್ದಂತೆ ತೋರಿಸಿದರೆ ನೋಡುವವರು ಯಾರು? ಅದಕ್ಕೇ ರೋಚಕತೆ ತುಂಬಿ, ಹಾಲಿವುಡ್ ಸಿನಿಮಾ ಫೂಟೇಜ್‌ಗಳನ್ನು ಬಳಸಿ, ಗ್ರಾಫಿಕ್‌ಗಳನ್ನು ಹಾಕಿ ಕುಲಗೆಡಿಸಿ ಬಿಡುತ್ತಾರೆ. ಅಲ್ಲಾ ಸ್ವಾಮಿ, ಗ್ರಹಣವೋ, ಉಲ್ಕಾಪಾತವೋ ಅಥವಾ ಉಲ್ಕೆ ಹಾದು ಹೋಗುವುದೋ ನಿಸರ್ಗದ ಸಹಜ ಆಗುಹೋಗುಗಳು. ಭೌಗೋಳಿಕ ಚಲನೆಗಳು. ಅದರಿಂದ   ಸಂಕುಲವೇ ನಾಶವಾಗಿ ಹೋಗುತ್ತದೆ ಎಂದು ಎಷ್ಟು ದಿನ ಪುಂಗಿ ಊದುವಿರಿ?  ನಿಮ್ಮನ್ನು ನಂಬುವವರು ಇಲ್ಲ ಎನ್ನುತ್ತಿಲ್ಲ. ಮಂಗಲಸೂತ್ರದಲ್ಲಿ  ಹವಳವಿದ್ದರೆ ಗಂಡನ ಆಯಸ್ಸು ಕಡಿಮೆಯಾಗುವುದಂತೆ ಎಂಬ ಸುದ್ದಿ ನೋಡಿ, ತಮ್ಮ ಮಂಗಲ ಸೂತ್ರದಲ್ಲಿದ್ದ ಹವಳವನ್ನು ಕಲ್ಲಿನಿಂದ ಜಜ್ಜಿ ಒಡೆದ ಮಹಾನ್ ಪತಿವ್ರತೆಯರು ಇನ್ನೂ ನಮ್ಮ ನಡುವೆಯಿದ್ದಾರೆ. ಅದು ಹೋಗಲಿ, ಧಾರಾವಾಹಿಯಲ್ಲಿ ಹಾವು ನೋಡಿಬಿಟ್ಟೆವು ಎಂದು ಸುಬ್ರಮಣ್ಯಕ್ಕೆ ಹೋಗಿ ಬಂದ ಅದ್ಭುತ ಭಕ್ತ ವೃಂದವೂ ನಮ್ಮ ನಡುವೆಯಿದೆ. ಹೀಗಿರುವಾಗ ನಿಮ್ಮ ಬೈದೇನು   ಕೂಲಿನಾಲಿ ಮಾಡುತ್ತಲೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸುತ್ತಾರೆ. ಅವರು ಸೋಲಾರ್ ಎಕ್ಲಿಪ್‌ಸ್ ಎಂದು ಓದಿ ಅದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ವಿವರಿಸ ಹೋದರೆ ಅವರನ್ನೇ ಬೈಯ್ದು ಬಾಯಿ ಮುಚ್ಚಿಸುತ್ತಾರೆ. ಇಂಥವರು ಇರುವವರೆಗೂ ನ್ಯೂಸ್ ಚಾನೆಲ್‌ಗಳು ಆರಾಮಾಗಿ ಮೌಢ್ಯವನ್ನು ಬಿತ್ತಿಕೊಂಡು ಇರಹುದು.

ನೆಗೆಟಿವ್ ಆಗಿರುವುದೆಲ್ಲ ಸುದ್ದಿಗಳು ಎಂಬುದು ಇಂದಿನ ಪತ್ರಿಕೋದ್ಯಮದ ಲಕ್ಷಣವಾಗಿದೆ. ಮೋದಿ ರವಾಂಡಾಕ್ಕೆ ಹೋಗಿ 200 ಹಸುಗಳನ್ನು ದಾನ ಕೊಟ್ಟರಲ್ಲ, ಅದು 15 ನಿಮಿಷದ ಪ್ಯಾಕೇಜ್  ಆಗುತ್ತದೆ. ಆದರೆ ಶೀರೂರು ಸ್ವಾಮಿಗಳ ಕೋಣೆಯಲ್ಲಿ ಕಾಂಡೋಮ್ ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ಸಿಕ್ಕವು ಎಂಬುದು ಅರ್ಧಗಂಟೆಯ ಪ್ಯಾಕೇಜ್ ಆಗುತ್ತದೆ ಹಾಗೂ ಅದನ್ನು ಬೆಳಗಿನಿಂದ ಸಂಜೆಯವರೆಗೆ ಓಡಿಸಲಾಗುತ್ತದೆ. ಪ್ರಗತಿಪರ ರೈತನ ಬಗೆಗೋ, ವಿದ್ಯಾವಂತ ರೈತನ ಬಗೆಗೋ ಸುದ್ದಿ ಹಾಕಿದರೆ ಟಿಆರ್‌ಪಿ ಬರುವುದಿಲ್ಲ. ಅದರ ಬದಲು ವಿಷದ ಬಾಟಲಿ  ಕೈಲಿ ಹಿಡಿದು ಜಮೀನಿನಲ್ಲೇ ಆತ್ಮಹತ್ಯೆಗೆ ಮುಂದಾದ ರೈತನ ಸುದ್ದಿಗೆ ಹೆಚ್ಚು ಟಿಆರ್‌ಪಿ ಬರುತ್ತದೆ.  ಇಷ್ಟಕ್ಕೂ ಜನರು ಏನನ್ನು ನೋಡುತ್ತಾರೋ ಅದನ್ನೇ ತೋರಿಸಬೇಕಲ್ಲವೆ?  ಆಸಕ್ತಿಯಿರದಿದ್ದರೆ ನೋಡಬೇಡಿ, ಬೇರೆ ಇನ್ನೆಷ್ಟೋ ಆಯ್ಕೆಗಳಿವೆಯಲ್ಲ ನಿಮಗೆ ಎಂಬುದು ನ್ಯೂಸ್ ಚಾನಲ್‌ನವರ ವಾದ. ಇದನ್ನು ಅಲ್ಲೆಗಳೆಯುವುದಿಲ್ಲ. ಆದರೆ ಅದನ್ನು ಹೇಳುತ್ತಲೇ ಅವು ಜನರ ಭಾವನೆಗಳ ಜತೆ, ನಂಬಿಕೆಗಳ ಜತೆ, ಅಭದ್ರತೆ, ಭಯಗಳ ಜತೆ ಆಟವಾಡುತ್ತಿವೆ. ದಿನದ ಆಗುಹೋಗುಗಳನ್ನು ತೋರಿಸುತ್ತಲೇ ಗ್ರಹಣ, ದೈವ ಮಹಿಮೆ, ವಾಸ್ತು, ದಿನಭವಿಷ್ಯ, ಕಾಲಜ್ಞಾನ ಎಂದು ಕತೆ ಹೊಡೆಯುತ್ತಾ, ಬೆಕ್ಕು ಅಡ್ಡ ಹೋದರೆ ಏನಾಗುತ್ತದೆ ಎಂದು ಶಕುನ ನುಡಿಯುತ್ತಾ, ಕಿವಿಯೊಳಗೆ ಕೂದಲು ಬೆಳೆದರೆ ಎಷ್ಟು ಅಶುಭ  ಹೇಳುತ್ತಾ ಜನರನ್ನು ಸಂಪೂರ್ಣ ಮರುಳು ಮಾಡಿವೆ. ಅವರದ್ದೇ ಭಾಷೆಯಲ್ಲಿ ಹೇಳಬೇಕೆಂದರೆ ‘ಕಾಗೆ ಹಾರಿಸುತ್ತಿದೆ’.

ನೂರಾರು ಆಯ್ಕೆಗಳಿರುವ ಇಂದಿನ ದಿನದಲ್ಲಿ ನಮಗ್ಯಾವುದು ಬೇಕು ಎಂದು ಆರಿಸಿಕೊಳ್ಳಬೇಕಾದ ಬುದ್ಧಿವಂತಿಕೆ ನಮಗಿರಬೇಕು. ಇಲ್ಲದಿದ್ದರೆ ಗಾಳಿ ಬಂದ ಕಡೆ ತೂರಿಕೊ ಎಂಬಂತಾಗುತ್ತದೆ. ಇಡೀ ಜಗತ್ತೇ ಧರ್ಮದ ಅಫೀಮು ತಿನ್ನಿಸಿ, ಭಾವನೆಗಳೊಂದಿಗೆ ಆಡುತ್ತಿರುವಾಗ ನ್ಯೂಸ್ ಚಾನಲ್ ಒಂದು ಅದರಿಂದ ಹೊರತಾಗಲು ಸಾಧ್ಯವೇ? ಯಾವ ಚಾನೆಲ್‌ಗಳೂ ಜನರಿಗೆ ಆದರ್ಶ ಬೋಧಿಸಲು ಕುಳಿತಿಲ್ಲ. ಶೇಂಗಾ ಮಾರಲೂ ಕುಳಿತಿಲ್ಲ. ಅವೆಲ್ಲ  ವ್ಯಾಪಾರಕ್ಕಾಗಿ. ನಮ್ಮ ಭಾವನೆಗಳೇ ಅವರ ಸರಕು. ಹೀಗಾಗಿ  ನಮಗೆ ಇಂಥದ್ದು ಕೊಟ್ಟು ಹಾಳು ಮಾಡಬೇಡಿ ಎನ್ನುವುದಕ್ಕಿಂತ ನಮಗೆ ಬೇಕಾಗಿದ್ದನ್ನು ನಾವೇ ಪಡೆದುಕೊಳ್ಳುತ್ತೇವೆ ಎಂಬ ಛಾತಿ ಬೆಳೆಯಬೇಕಿದೆ. ತಾವು ಮಾಡುತ್ತಿರುವ ಕಾರ್ಯಕ್ರಮಗಳು ಸಂತೆಯಲ್ಲಿ ಬಿಟ್ಟ ಹೂಸಿನಂತಾಗುತ್ತಿವೆ ಎಂಬುದು ಗೊತ್ತಾಗುವ ಹಾಗೆ ವೀಕ್ಷಕ ನಡೆದುಕೊಂಡಾಗ ಮಾತ್ರ ಬಹುಶಃ ಇವರ  ಬ್ರೇಕಿಂಗ್ ನ್ಯೂಸ್‌ಗಳಿಗೆ ಬ್ರೇಕ್ ಬೀಳಲಿದೆ.