About Us Advertise with us Be a Reporter E-Paper

ವಿರಾಮ

ಅಕ್ಕಿ ಕೊಟ್ಟು ಹಕ್ಕಿ ಖರೀದಿಸಿ! ಜಾನ್‌ಭೀಲ್ ಜಾತ್ರೆ

* ಶಿಶಿರ್ ಮುದೂರಿ

ಮನುಷ್ಯನು ವ್ಯಾಪಾರ ಮಾಡಲು ಕಲಿತದ್ದು ಕೊಡುಕೊಳ್ಳುವ ವ್ಯವಹಾರದಿಂದ. ಹಣ ಮತ್ತು ಇನ್ನೂ ಚಲಾವಣೆಗೆ ಬಾರದಿದ್ದ ಕಾಲದಲ್ಲಿ ತಮ್ಮಲ್ಲಿರುವ ವಸ್ತುಗಳನ್ನು ವಿನಿಮಯ ವ್ಯಾಪಾರಕ್ಕೆ ಬಳಸಿಕೊಳ್ಳುವ ಪರಿಪಾಠ 20ನೇ ಶತಮಾನದ ತನಕ ನಮ್ಮ ನಾಡಿನ ಹಳ್ಳಿಗಳಲ್ಲಿ ಇತ್ತು. ಅನ್ನ ಮಾಡುವ ಮಡಕೆ ಕೊಳ್ಳಲು ನಮ್ಮ ಅಜ್ಜಿ ಎರಡು ಸೇರು ಅಕ್ಕಿಯನ್ನು ಕೊಡುತ್ತಿದ್ದರು. ನಮ್ಮೂರಿನ ಬಡಗಿಯು ಒಂದು ಮರದ ಕುರ್ಚಿ ಮಾಡಿಕೊಟ್ಟು , ಒಂದು ಕಳಸಿಗೆ ಅಕ್ಕಿಯನ್ನು ಪಡೆಯುತ್ತಿದ್ದ. ಜನರಿಗೆ ಹಣದ ವ್ಯಾಮೋಹ ಜಾಸ್ತಿಆದಂತೆಲ್ಲಾ ಈ ರೀತಿಯ ವಿನಿಮಯ ಮರೆಯಾಯಿತು.

ಅಸ್ಸಾಂನ ಹಳ್ಳಿಯೊಂದರ ಜಾತ್ರೆಯಲ್ಲಿ ವಸ್ತುಗಳ ವಿನಿಮಯದ ಮೂಲಕ ವ್ಯಾಪಾರ ನಡೆಯುತ್ತಿದೆ! ಗುವಹಾಟಿಯಿಂದ ಸುಮಾರು ನಲವತ್ತು ಕಿಲೋಮೀಟರು ದೂರದಲ್ಲಿರುವ ಜಾನ್‌ಭೀಲ್ ಎಂಬ ಜಾಗದಲ್ಲಿ ನಡೆಯುವ ಒಂದು ವಾರದ ಜಾತ್ರೆ ಅಲ್ಲಿನ ಮೂಲನಿವಾಸಿಗಳ ಜೀವನಾಡಿ. ಅಸ್ಸಾಂ ಮತ್ತು ಮೇಘಾಲಯದ ಹತೈವತ್ತು ಬುಡಕಟ್ಟು ಜನಾಂಗದ ಸಾವಿರಾರು ಕುಟುಂಬಗಳು ನಾಲ್ಕಾರು ದಿನ ಆ ಜಾತ್ರೆಯಲ್ಲಿ ತಂಗಲು ವ್ಯವಸ್ಥೆ ಮಾಡಿಕೊಂಡು ತಮ್ಮ ಹಳ್ಳಿಗಳಿಂದ ಬರುತ್ತಾರೆ. ಜಾನ್‌ಭೀಲ್ ಎಂದರೆ ಅರ್ಧಚಂದ್ರಾಕೃತಿಯ ಸರೋವರ ಎಂಬ ಅರ್ಥ. ಜಾತ್ರೆಯ ಮೊದಲ ದಿನ ಗ್ರಾಮೀಣ ಪ್ರದೇಶದಿದ ಜನರು, ಗುಡಾರ ಹಾಕುವುದರಲ್ಲಿ ಕಳೆದು ಹೋಗುತ್ತದೆ. ಎರಡನೆ ದಿನ ಜಾನ್‌ಭೀಲ್ ಕೆರೆಯಲ್ಲಿ ಎಲ್ಲರೂ ಒಟ್ಟಾಗಿ ಮೀನು ಹಿಡಿಯುತ್ತಾರೆ.

ಎರಡನೇ ದಿನ ನಡೆಯುವ ವ್ಯಾಪಾರದ ಭರಾಟೆ ವಿಶಿಷ್ಟ. ಇಂದಿಗೂ ವಸ್ತು ವಿನಿಮಯದ ಮೂಲಕ ವ್ಯಾಪಾರ ನಡೆಸುವ ಏಕೈಕ ಜಾತ್ರೆ ಇದೆ ಎಂದು ಹೆಸರುವಾಸಿ. ಈ ಜಾತ್ರೆಯಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳ ವಿನಿಮಯ-ವ್ಯಾಪಾರ ನಡೆಯುತ್ತದೆ. ಮೇಘಾಲಯದಿಂದ ಬಂದ ಬುಡಕಟ್ಟು ಕುಟುಂಬವೊಂದು ಕಾಡು ಶುಂಠಿ ಮತ್ತು ಅರಿಶಿನವನ್ನು ತರುತ್ತದೆ. ಅಸ್ಸಾಮ್‌ನ ಇನ್ನೊಂದು ಬೆತ್ತದ ಬುಟ್ಟಿಗಳನ್ನು ತರಬಹುದು; ಮಗದೊಂದು ಕುಟುಂಬ ಒಣ ಮೀನಿನ ರಾಶಿಯನ್ನು ತರಬಹುದು. ಅಪರೂಪದ ಏಡಿ, ಸಿಗಡಿಗಳನ್ನು ಸಹ ಕೆಲವು ಬುಡಕಟ್ಟು ಜನರು ವ್ಯಾಪಾರಕ್ಕೆ ಇಡುತ್ತಾರೆ. ಇದಕ್ಕೆ ಪ್ರತಿಯಾಗಿ ಬಯಲು ಪ್ರದೇಶದ ಜನರು ಅಕ್ಕಿ, ಅಕ್ಕಿ ಹಿಟ್ಟು, ಸರಳ ಕಲಾಕೃತಿಗಳು, ಬಟ್ಟೆ, ಅಲಂಕಾರಿಕ ವಸ್ತು, ದಿನಬಳಕೆಯ ವಸ್ತು, ವಿವಿಧ ರೀತಿಯ ತಿನಿಸುಗಳನ್ನು ತರುತ್ತಾರೆ. ಬೆಟ್ಟದ ಕುಗ್ರಾಮದಿಂದ ಬಂದ ಕುಟುಂಬಗಳು ತಮ್ಮ ಕಾಡುತ್ಪನ್ನಗಳನ್ನು ನೀಡಿ ಅಕ್ಕಿ, ಬಟ್ಟೆ, ಉಪಕರಣ ಮೊದಲಾದ ವಸ್ತುಗಳನ್ನು ಹಣದ ಬಳಕೆಯೇ ಇಲ್ಲದೆ ನಡೆಯುವ ಈ ವ್ಯಾಪಾರ ವಿಶಿಷ್ಟ, ವಿಶೇಷ. ಸಾವಿರಾರು ಕುಟುಂಬಗಳು ಈ ರೀತಿ ವ್ಯಾಪಾರ ನಡೆಸಿ ಮೂರು ನಾಲ್ಕು ದಿನಗಳಲ್ಲಿ ತಮ್ಮ ತಮ್ಮ ಹಳ್ಳಿಗಳಿಗೆ ವಾಪಸಾಗುತ್ತಾರೆ.

ಈಚಿನ ನಾಲ್ಕಾರು ವರ್ಷಗಳಲ್ಲಿ ದೃಶ್ಯ ಮಾಧ್ಯಮಗಳ ಭರಾಟೆ ಜಾಸ್ತಿಯಾಗಿದ್ದು, ಈ ಅಪರೂಪದ ಜಾತ್ರೆಗೆ ಎಲ್ಲಿಲ್ಲದ ಪ್ರಚಾರ ದೊರೆತಿದೆ. ಅಸ್ಸಾಂನ ಗುವಾಹಟಿ ಮತ್ತು ಇತರ ಪಟ್ಟಣಗಳಿಂದ ಈ ಜಾತ್ರೆ ನೋಡಲು ಸಾವಿರಾರು ಜನ ಭೇಟಿ ನೀಡಲು ಆರಂಭಿಸಿದ್ದು , ವಸ್ತು ವ್ಯಾಪಾರದ ಜತೆಯಲ್ಲೇ, ಹಣದ ಮೂಲಕ ವ್ಯಾಪಾರ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಹಿಂದಿ ಸಿನಿಮಾ ಹಾಡು, ಜಯಂಟ್ ವೀಲ್, ನಗರದ ತಿಂಡಿ ತಿನಿಸುಗಳ ಸ್ಟಾಲ್ ಎಲ್ಲವೂ ಮೇಳೈಸಿ, ಈ ಬುಡಕಟ್ಟು ಜನರ ಜಾತ್ರೆಯ ಸ್ವರೂಪವನ್ನೇ ಬದಲಿಸಿಬಿಟ್ಟಿವೆ. ಇನ್ನು ನಾಲ್ಕೈದು ವರ್ಷಗಳಲ್ಲಿ ಇಲ್ಲಿನ ವಸ್ತು ವಿನಿಮಯ ವ್ಯಾಪಾರವೇ ನಿಂತು ಹೋಗಬಹುದು ಎಂಬ ಕಳವಳ ಹಿರಿಯರದ್ದು. ಜನವರಿ ತಿಂಗಳ ಮೂರನೇ ವಾರ ನಡೆಯಲಿರುವ ಈ ಜಾತ್ರೆಗೆ ನೀವೂ ಹೋಗಿಬನ್ನಿ, ವಿಶ್ವದ ಏಕೈಕ ‘ವಸ್ತು ಜಾತ್ರೆ’ ಕಣ್ಮರೆಯಾಗಿ ಹೋಗುವ ಮುನ್ನ ನಿಮ್ಮ ವಸ್ತುವನ್ನು ನೀಡಿ, ಬುಡಕಟ್ಟು ಜನಾಂಗದ ಅಪರೂಪದ ಉತ್ಪನ್ನವೊಂದನ್ನು ಖರೀದಿಸಿ ತನ್ನಿ!!

Tags

Related Articles

Leave a Reply

Your email address will not be published. Required fields are marked *

Language
Close