ವಿಶ್ವವಾಣಿ

ಪಾಪ್‌ಕಾರ್ನ್ ಕೊಳ್ಳಲೂ ಸಾಲ ಮಾಡಬೇಕಾದ ದಿನ ದೂರವಿಲ್ಲ!

ಹೆಚ್ಚಲ್ಲ, 14 ವರ್ಷಗಳ ಹಿಂದೆ ಪಾಪ್‌ಕಾರ್ನ್‌ಗೆ ಪಾಟಿ ಗೌರವ ಬಂದಿರಲಿಲ್ಲ. ಐದು ರುಪಾಯಿಗೆ, ಹೆಚ್ಚೆಂದರೆ ಹತ್ತು ರುಪಾಯಿಗೆ ಬೀದಿ ಬದಿಯಲ್ಲೇ ಸಿಗುತ್ತಿತ್ತು. ತೇರುಗಳಲ್ಲಿ ಪಾಪ್‌ಕಾರ್ನ್ ತಿನ್ನುವುದೇ ಒಂದು ಸಂಭ್ರಮ. ಬಾಂಬೆ ಮಿಠಾಯಿ, ಪಾಪ್‌ಕಾರ್ನ್, ಸ್ವೀಟ್‌ಕಾರ್ನ್‌ಗಳ ಮೆಷಿನ್‌ಗಳು ಅಕ್ಕಪಕ್ಕವೇ ನಿಂತಿರುತ್ತಿತ್ತು. ಉಪ್ಪುಪ್ಪು ಖಾರ ಖಾರವಾಗಿ ಬಾಯಿಗಿಟ್ಟರೆ ಕರಗುತ್ತಿದ್ದ ಪಾಪ್‌ಕಾರ್ನ್ ಮಕ್ಕಳಿಂದ ಹಿಡಿದು ಮುದುಕರವರೆಗೂ ಇಷ್ಟವಾಗುತ್ತಿತ್ತು. ದಾರಿಯಲ್ಲಿ ಒಬ್ಬನೇ ಹೋಗಲು ಬೋರ್ ಎನಿಸಿದವರೂ ಪಾಪ್‌ಕಾರ್ನ್ ಕೊಂಡು ಬಾಯಿಗೆ ಹಾಕುತ್ತಾ ನಡೆದು ಹೋಗುತ್ತಿದ್ದರು. ಪಾರ್ಕಲ್ಲಿ ಕೂತ ಪ್ರೇಮಿಗಳಿಗೆ, ಮೊಮ್ಮಕ್ಕಳ ನೋಡಲು ಹೊರಟ ತಾತನಿಗೆ, ಸಂಜೆ ಹೊತ್ತಿಗೆ ಮಕ್ಕಳ ಬಾಯಿ ಚಪಲ ತಣಿಸಲು ಹೀಗೆ ಮಲ್ಟಿ ಪರ್ಪಸ್‌ಗೆ ಪಾಪ್‌ಕಾರ್ನ್ ಇದ್ದಕ್ಕಿದ್ದಂತೆ ಬೀದಿಯಿಂದ ಮಾಯವಾಗಿ ಬಿಟ್ಟಿತು. ಅಲ್ಲಿಂದ ಹೋಗಿ ಅದು ಕಾಣಿಸಿಕೊಂಡಿದ್ದು ಮಲ್ಟಿಪ್ಲೆಕ್‌ಸ್ಗಳಲ್ಲಿ, ಪಿವಿಆರ್ ಸಿನಿಮಾಸ್‌ಗಳಲ್ಲಿ!

ಆಗಿನಿಂದ ಪಾಪ್‌ಕಾರ್ನ್‌ಗೆ ಭಯಂಕರವಾದ ಡೌಲು ಬಂತು. ಹಿಡಿದು ಎಳೆದರೆ ಹರಿದುಹೋಗುವಂತಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಸಿಗುತ್ತಿದ್ದ ಪಾಪ್‌ಕಾರ್ನ್ ಟಬ್‌ನಲ್ಲಿ ಹೋಗಿ ಕುಳಿತುಕೊಂಡಿತ್ತು! ಒಂದು ಟಬ್‌ಕೊಂಡುಕೊಳ್ಳಲು ರು. 340 ಕೊಡಬೇಕು. ಮೀಡಿಯಮ್, ಸ್ಮಾಲ್, ಬಿಗ್ ಎಂಬ ಬೇರೆಬೇರೆ ಆಕೃತಿಯ ಟಬ್‌ಗಳಲ್ಲಿ ಚೀಸ್, ಕ್ಯಾರಮೆಲ್, ಸಾಲ್ಟೆಡ್ ಹಾಗೂ ಟೊಮ್ಯಾಟೋ ಎಂಬ ರುಚಿಗಳಲ್ಲಿ ಹೊಸರೂಪತಾಳಿ ಬೀದಿ ಬದಿ ನಾಲಿಗೆಯನ್ನೇ ಹೌಹಾರಿಸತೊಡಗಿತು. ಸಿನಿಮಾ ನೋಡಲು ಹೋದವರು ಖಡ್ಡಾಯವಾಗಿ ತಿನ್ನಲೇಬೇಕು ಎಂಬಂತೆ ಇದನ್ನು ತಿನ್ನತೊಡಗಿದರು. ನೋಡ ನೋಡುತ್ತಿದ್ದಂತೆ ಮಲ್ಟಿಪ್ಲೆಕ್‌ಸ್ಗಳಲ್ಲಿ ಸಿನಿಮಾ ನೋಡುವುದು ಹಾಗೂ ಟಬ್‌ನಲ್ಲಿ ಪಾಪ್‌ಕಾರ್ನ್ ತಿನ್ನುವುದು ಸ್ಟೇಟಸ್‌ನ ಲಕ್ಷಣವಾಗಿ ಹೋಯಿತು. ಇಂಥ ಮಾನಸಮ್ಮಾನ ಕಂಡ ಪಾಪ್‌ಕಾರ್ನ್‌ಗೆ ಮಹಾರಾಷ್ಟ್ರ ಸರಕಾರ ಈಗ ಸಣ್ಣಗೆ ಚಾಟಿ ಬೀಸಿದೆ. ಅಷ್ಟೇ ಅಲ್ಲ, ಮಾಲ್‌ಗಳ ಸಿನಿಮಾ ಹಾಲ್‌ನ ಹೊರಗೆ ಸಿಗುತ್ತಿದ್ದ ಸಮೋಸಾ, ಬರ್ಗರ್, ಫ್ರೆಂಚ್‌ಪ್ರೆûಸ್‌ಗಳ ನಾಗಾಲೋಟದ ಬೆಲೆಗೂ ಬರೆ ಎಳೆದಿದೆ. ಹೇಗೆಂದರೆ ಇನ್ನು ಮುಂದೆ ಮಲ್ಟಿಪ್ಲೆಕ್‌ಸ್ಗಳಲ್ಲಿ ಹೊರಗಿನ ತಿಂಡಿಯನ್ನು ಒಯ್ಯಬಹುದು ಎಂದು ಮುಂಬೈ ಹೈಕೋರ್ಟ್ ಆದೇಶ ಹೊರಡಿಸಿದೆ. ಜನರು ಇನ್ನು ಮುಂದೆ ಸಿನಿಮಾ ಮಂದಿರಗಳ ಒಳಗೆ ಹೊರಗಿನ ಆಹಾರ ಸಾಮಗ್ರಿಗಳನ್ನು ಒಯ್ಯಬಹುದು ಹಾಗೂ ಸಿನಿಮಾ ಹಾಲ್ ಒಳಗೆ ದೊರಕುವ ತಿಂಡಿಗಳನ್ನು ಎಮ್‌ಆರ್‌ಪಿಯಲ್ಲಿ ನಿಗದಿಪಡಿಸಿದ ದರಕ್ಕೇ ಮಾರಾಟ ಮಾಡಬೇಕು ಎಂದು ಅದು ಆದೇಶ ಹೊರಡಿಸಿದೆ.

ಮಲ್ಟಿಪ್ಲೆಕ್‌ಸ್ಗಳು ತಿಂಡಿಗಳ ಮೇಲೆ ವಿಪರೀತ ದರ ವಿಧಿಸಿ ಮಾಡುತ್ತಿರುವ ಸುಲಿಗೆ ಎಲ್ಲರಿಗೂ ಗೊತ್ತೇ ಇದೆ. ಬೆಂಗಳೂರೂ ಅದರಿಂದ ಹೊರತಲ್ಲ. ಹೊರಗಡೆ 30 ರುಪಾಯಿಗೆ ಸಿಗುತ್ತಿದ್ದ ತಿಂಡಿಗಳನ್ನು ಎರಡು ಮೂರು ಪಟ್ಟು ಹೆಚ್ಚಿನ ದರಕ್ಕೆ ಮಾರುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಐದಾರು ರುಪಾಯಿಗಳ ವ್ಯತ್ಯಾಸವಿದ್ದಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲ್ಲಿಲ್ಲ. ಆದರೆ ಆಹಾರ ಪದಾರ್ಥವಾಗಿದ್ದರಿಂದ ಜನರು ಹೇಗಿದ್ದರೂ ಕೊಡುತ್ತಾರೆ ಎಂದು ಪರಿಯ ಸುಲಿಗೆ ಮಾಡುವುದೆ? ಅದಕ್ಕೇ ಪಾಪ್‌ಕಾರ್ನ್‌ಗೆ ಅಷ್ಟೊಂದು ಬೆಲೆ ಬಂದಿದ್ದು, ಫ್ರೆಂಚ್ ಪ್ರೈಸ್ ಕೈಗೆಟುಕದಷ್ಟು ದುಬಾರಿಯಾಗಿದ್ದು. ಒಮ್ಮೆ ಟಿಕೆಟ್ ಪಡೆದು ಒಳ ನಡೆದರೆ ಮುಗಿಯಿತು, ಅಲ್ಲಿನ ತಿಂಡಿಗಳನ್ನೇ ಖರೀದಿಸಬೇಕು. ನೀರಿನ ಬಾಟಲಿ ಒಳ ಒಯ್ಯುವಂತಿಲ್ಲ. ಅಷ್ಟು ಜೀವ ಹೋಗುತ್ತಿದೆ ಅನಿಸಿದರೆ 50 ರುಪಾಯಿ ಕೊಟ್ಟು ಅಲ್ಲೇ ನೀರು ಕೊಳ್ಳಬೇಕು. ಇಂಥ ಸುಲಿಗೆಯನ್ನು ನೋಡಿಯೂ ಕರ್ನಾಟಕ ಸರಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಕುಮಾರಸ್ವಾಮಿಯವರಂತೂ ಬಾಯಾರಿದವರಿಗೆ ತಮ್ಮ ಕಣ್ಣೀರನ್ನೇ ಹರಿಸಿ ಕೊಡುತ್ತಿದ್ದಾರೆ. ನಡುವೆ ಮಹಾರಾಷ್ಟ್ರ ಸರಕಾರವೇ ಮೆಲ್ಲಗೆ ದಿಟ್ಟ ಹೆಜ್ಜೆ ಇರಿಸಿದೆ.

ಇಷ್ಟಕ್ಕೂ ಸಿನಿಮಾ ಮಂದಿರದೊಳಗೆ ಆಹಾರ ಸಾಮಗ್ರಿಗಳನ್ನು ಒಯ್ಯಬಾರದು ಎಂದು ಕಾನೂನಿನಲ್ಲಿ ಎಲ್ಲೂ ಬರೆದಿಲ್ಲ. ಯಾವ ಸಿನಿಮಾ ಮಂದಿರಗಳೂ ಅದನ್ನು ಮಾಡುವಂತಿಲ್ಲ. ಮಲ್ಟಿಪ್ಲೆಕ್‌ಸ್ಗಳು ತಾವೇ ಅಂಥ ನಿಯಮವನ್ನು ಜಾರಿಗೆ ತಂದಿವೆ. ಐನಾಕ್‌ಸ್, ಪಿವಿಆರ್ ಸಿನಿಮಾಸ್ ಎಲ್ಲೇ ಹೋದರೂ ಇದೇ ಗೋಳು. ಊರಿಗೊಂದು ದಾರಿಯಾದರೆ, ಪೋರನಿಗೇ ಒಂದು ದಾರಿ ಎಂಬಂತೆ ವರ್ತಿಸುತ್ತಿವೆ. ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಇದರಿಂದ ತೊಂದರೆಯಾಗಿದೆ. ಇನ್ನು ಲೆಕ್ಕ ಹಾಕಿ ಬಜೆಟ್ ಮಿತಿಯಲ್ಲೇ ಸಿನಿಮಾ ನೋಡಬೇಕು ಎನ್ನುವವರಿಗೂ ಹಸಿದುಕೊಂಡೇ ಸಿನಿಮಾ ನೋಡಿ ಬರಬೇಕಾದ ಪರಿಸ್ಥಿತಿ. ಮೊದಲೇ ಮಲ್ಟಿಪ್ಲೆಕ್‌ಸ್ನ ಟಿಕೆಟ್ ದರ ಗಗನದಲ್ಲಿರುತ್ತದೆ. ಜತೆಗೆ ಅಲ್ಲಿ ಸಿಗುವ ಸ್ನ್ಯಾಕ್‌ಗಳು ಕೈಗೆಟುಕದ ಬಿಟ್ಟರೆ ಬಡ ಮಧ್ಯಮ ವರ್ಗದವರಿಗೆ ಸಾದಾ ಥಿಯೇಟರ್‌ಗಳೇ ಗತಿ. ಹಾಗಾದರೆ ಅವರು ಯಾವತ್ತೂ ಮಲ್ಟಿಪ್ಲೆಕ್‌ಸ್ನ ಕಂಫರ್ಟ್ ಅನುಭವಿಸಲೇಬಾರದೆ?

ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಮಹಾರಾಷ್ಟ್ರ ಸರಕಾರ ದಿಟ್ಟ ತೀರ್ಮಾನವನ್ನೇ ತೆಗೆದುಕೊಂಡಿದೆ. ಮಹಾರಾಷ್ಟ್ರದ ಮಟ್ಟಿಗೆ ಇದು ದಿಟ್ಟ ನಿರ್ಧಾರವೇ. ಏಕೆಂದರೆ ಮುಂಬೈ ಮನರಂಜನೆಯ ರಾಜಧಾನಿ. ಮುಂಬೈ ಎಂದರೆ ಮಲ್ಟಿಪ್ಲೆಕ್‌ಸ್ಗಳಿಗೆ ತವರು ಮನೆಯಿದ್ದಂತೇ. ತವರಲ್ಲೇ ಬರೆ ಎಳೆಸಿಕೊಂಡಂತಾಗಿದೆ ಈಗ. ಇಷ್ಟಕ್ಕೂ ಅಲ್ಲಿನ ಆಹಾರಗಳು ಯಾಕಷ್ಟು ದುಬಾರಿ? ಮಲ್ಟಿಪ್ಲೆಕ್‌ಸ್ಗಳ ಆದಾಯವೆಂದರೆ ಬಾಕ್‌ಸ್ ಆಫೀಸ್, ಜಾಹೀರಾತು ಹಾಗೂ ಮಾರಾಟ. ಪಿವಿಆರ್‌ನ 2016-17ನೇ ವಾರ್ಷಿಕ ವರದಿಯ ಪ್ರಕಾರ ಇದರ ಶೇ. 27ರಷ್ಟು ಆದಾಯ ಬಂದಿದ್ದು ಸ್ನ್ಯಾಕ್‌ಸ್ ಹಾಗೂ ಪಾನೀಯಗಳ ಮಾರಾಟದಿಂದ. ಇಷ್ಟೇ ತಿಂಡಿ, ಪಾನೀಯಗಳನ್ನು ಒಬ್ಬ ರಸ್ತೆ ಬದಿಯ ವ್ಯಾಪಾರಿ ಐದು ವರ್ಷ ಮಾರಿದರೂ ಲಾಭ ಗಳಿಸಲು ಸಾಧ್ಯವಿಲ್ಲ. ಏಕೆಂದರೆ ಮಲ್ಟಿಪ್ಲೆಕ್‌ಸ್ಗಳ ವ್ಯಾಪಾರ ಕುದುರುವುದೇ ವಾರಾಂತ್ಯದಲ್ಲಿ. ಅವೇನೂ ವಾರವಿಡೀ ಒಂದೇ ಥರದ ಲಾಭ ಮಾಡುವುದಿಲ್ಲ. ಹಾಗೆ ನೋಡಿದಲ್ಲಿ ರಸ್ತೆಪಕ್ಕ ಸಮೋಸಾ ಮಾರುವವನಿಗೇ ವಾರವಿಡೀ ಗ್ರಾಹಕರಿರುತ್ತಾರೆ. ಆದರೆ ಆತ ಯಾವತ್ತೂ ಬಡವನೇ! ಅಂದರೆ ನೀವೇ ಯೋಚಿಸಿ, ನಾವೆಷ್ಟು ಹೆಚ್ಚಿನ ದರ ತೆರುತ್ತಿದ್ದೇವೆ ಹಾಗೂ ಅವರೆಷ್ಟು ನಮ್ಮಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು.

ನಮ್ಮ ಜನರ ಸಮಸ್ಯೆ ಏನೆಂದರೆ, ಯಾವುದನ್ನೂ ವಿರೋಧಿಸುವುದಿಲ್ಲ. ರಸ್ತೆಗಳಲ್ಲಿ ಮಾರುತ್ತಿದ್ದ ಸಮೋಸಾವನ್ನು ಮಾಲ್‌ಗಳಲ್ಲಿ ಹೊಳೆಯುವ ಕಾಗದದಲ್ಲಿ ಇಟ್ಟು, ಅಲಂಕಾರ ಮಾಡಿ ಕೊಟ್ಟುಬಿಟ್ಟರೆ ನಾವದಕ್ಕೆ ಎಷ್ಟು ಬೆಲೆಯನ್ನು ಬೇಕಾದರೂ ತೆರಲು ಸಿದ್ಧವಾಗುತ್ತೇವೆ. ಕೋಂಬೋ ಪ್ಯಾಕ್, ಲಂಚ್ ಪ್ಯಾಕ್ ಎಂದೆಲ್ಲ ಹೆಸರಿಟ್ಟು, ಬೊಜ್ಜು ಬರುವ ಚೀಜ್ ಹಾಕಿ ಬರ್ಗರ್ ಕೊಡುತ್ತಾರೆ, ಜತೆಗೊಂದು ಪೆಪ್ಸಿಯನ್ನೂ ಇಡುತ್ತಾರೆ. ಅದನ್ನು ಲಂಚ್‌ಪ್ಯಾಕ್ಎಂದು ತಿಂದು ಬರುತ್ತೇವೆ. ಇನ್ನು ದರವಂತು ಬಿಡಿ, ಅದಕ್ಕೊಂದು ಇತಿಮಿತಿಯೇ ಇಲ್ಲ. ಹಾಗೆ ನೋಡಿದರೆ ಮಾಲ್‌ಗಳ ಒಳಗೆ ತಿಂಡಿಗಳ ಬೆಲೆ ಅಷ್ಟೊಂದು ಹೆಚ್ಚಲು ನಾವೇ ಕಾರಣ. ವಾರ ವಾರ ಸಿನಿಮಾ ನೋಡುತ್ತೇವೆ, ಜತೆಗೆ ಅಲ್ಲಿನ ತಿಂಡಿಯನ್ನೂ ಅವರು ಹೇಳಿದ ಬೆಲೆ ತೆತ್ತು ಖರೀದಿುತ್ತೇವೆ. ಹೊರಗಡೆ ರು. 20ಗೆ ಸಿಗುವ ರುಚಿಕರವಾದ ಫಿಲ್ಟರ್ ಕಾಫಿಯ ಬದಲು ಮಾಲ್ ಒಳಗಿರುವ ಕಾಫೀ ಡೇಯಲ್ಲಿ 150 ಕೊಟ್ಟು, ಅದಕ್ಕಿಂತ ಸಪ್ಪೆಯಾದ ಕಾಫಿ ಕುಡಿದು ಬರುತ್ತೇವೆ. ಜನರ ನಡೆವಳಿಕೆಯನ್ನು ಪಿವಿಆರ್ ನಂಥ ಕಂಪನಿಗಳು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿವೆ.

ಹೀಗಾಗಿ ಮಹಾರಾಷ್ಟ್ರ ಸರಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದೆ. ಇನ್ನಾದರೂ ಜನರು ಬಿಸ್ಕೆಟ್‌ಪ್ಯಾಕ್‌ಗಳನ್ನೋ, ಹಣ್ಣುಗಳನ್ನೋ, ಇಲ್ಲ ಕೇಕ್‌ಪೀಸ್‌ಗಳನ್ನೋ ತಾವೇ ಕೊಂಡೊಯ್ದು ಸಿನಿಮಾ ನೋಡುತ್ತಲೇ ತಿನ್ನಬಹುದು. ಆದರೆ ಈಗಿರುವ ಸವಾಲು ಹೊರಗಿನ ತಿಂಡಿಯನ್ನು ಸಿನಿಮಾ ಮಂದಿರದೊಳಗೆ ಬಿಟ್ಟರೆ ಸ್ವಚ್ಛತೆ ಹೇಗೆ ಎಂಬುದು. ನಮ್ಮ ಜನರ ಬುದ್ಧಿ ಗೊತ್ತೇ ಇದೆಯಲ್ಲ. ಬೆರಳು ಕೊಟ್ಟರೆ ನುಂಗುವವರು ನಾವು. ಅಷ್ಟು ದುಡ್ಡು ಕೊಟ್ಟು ಖರೀದಿಸಿದ ಪಾಪ್‌ಕಾರ್ನ್‌ನನ್ನೇ ಚೆಲ್ಲಾಪಿಲ್ಲಿ ಬಿಸಾಡಿ ಬರುವವರು ನಾವು. ಇನ್ನು ಆಚೆಯಿಂದ ಕಡಿಮೆ ದುಡ್ಡಿಗೆ ತಂದ ತಿಂಡಿ ಹಾಗೂ ಅದರ ಕವರ್ ಇನ್ನಿತರ ಹೆಚ್ಚಾದ ತಿಂಡಿಗಳನ್ನು ಅಲ್ಲೇ ಚೆಲ್ಲದೇ ಬರುತ್ತೇವೆಯೇ? ಖಂಡಿತಾ ಅಲ್ಲೇ ಚೇರ್ ಕೆಳಗೆ ಎಸೆದು ಬರದಿದ್ದರೆ ನಾವು ಭಾರತೀಯರೇ ಅಲ್ಲ. ಹೀಗಾಗಿ ಒಂದು ಶೋ ಮುಗಿದು, ಎರಡನೇ ಶೋ ಆರಂಭವಾಗುವ ಮುನ್ನ ಸ್ವಚ್ಛತೆಯೇ ಅಲ್ಲಿನ ಸಿಬ್ಬಂದಿಗಳಿಗೆ ಸವಾಲಾಗಲಿದೆ. ಇದರ ಖರ್ಚನ್ನು ಟಿಕೆಟ್‌ಗಳ ಮೇಲೆ, ಟ್ಯಾಕ್‌ಸ್ಗಳ ಮೇಲೆ ಹಾಕಲ್ಲ ಎಂದು ಯಾವ ಗ್ಯಾರಂಟಿ?

ಇಷ್ಟಕ್ಕೂ ಸಿನಿಮಾ ಮಂದಿರಗಳಲ್ಲಿ ತಿನ್ನಲೇಬೇಕೆಂದೇನೂ ಇಲ್ಲ. ಆದರೆ ಮಲ್ಟಿಪ್ಲೆಕ್‌ಸ್ಗಳು ವಿಪರೀತ ಸುಲಿಗೆ ಮಾಡುತ್ತವೆ ಎಂಬ ಕಾರಣಕ್ಕೆ ಹಸಿವೆಯನ್ನು ತಾಳಿಕೊಂಡು ಇರಬೇಕೆಂದೇನಿಲ್ಲವಲ್ಲ? ಇನ್ನು ಕೆಲವರು ಹೊರಗಿನ ತಿಂಡಿಗಳನ್ನು ತಿನ್ನುವುದಿಲ್ಲ. ಅಲ್ಲದೇ ಇಂಥ ಸ್ಥಳಗಳಲ್ಲಿ ಸಿಗುವ ಫುಡ್‌ಗಳು ಆರೋಗ್ಯಕ್ಕೆ ಹಿತಕರವೂ ಆಗಿರುವುದಿಲ್ಲ. ಇದೆಲ್ಲ ಕಾರಣಕ್ಕೆ ಮಲ್ಟಿಪ್ಲೆಕ್‌ಸ್ನಲ್ಲಿ ಕೊಳ್ಳಲು ಜನರು ಹಿಂದೇಟು ಹಾಕಬಹುದು. ಆದರೆ ಅಂಥವರಿಗೆ ದುಬಾರಿ ಬೆಲೆ ತೆರುವುದು ಬಿಟ್ಟು ಆಯ್ಕೆಯೇ ಇಲ್ಲ ಎಂಬುದು ಹೊಟ್ಟೆ ಉರಿಸುತ್ತದೆ. ಜನರ ಆಕ್ರೋಶಕ್ಕೂ ಇದೇ ಕಾರಣ. ಎಷ್ಟೋ ಜನ ಗೊತ್ತಿಲ್ಲದೇ ಬ್ಯಾಗಿನಲ್ಲಿ ಪರೋಟಾವನ್ನೋ, ಚಪಾತಿಯನ್ನೋ ತಂದುಕೊಂಡಿದ್ದರೆ ಅದನ್ನು ಅಲ್ಲಿಯ ಸಿಬ್ಬಂದಿಗಳು ಬಲವಂತವಾಗಿ ಕಸದ ಬುಟ್ಟಿಗೆ ಹಾಕಿಸುತ್ತಾರೆ. ಇಂಥವೆಲ್ಲ ಹಲವು ಸಲ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಕೂಡ ಇದರಿಂದ ಹೊರತಲ್ಲ. ಇದನ್ನು ಅನ್ಯಾಯ ಎಂದು ಸ್ಪಷ್ಟ ಪದಗಳಲ್ಲಿ ಖಂಡಿಸಲೇಬೇಕಿದೆ. ಮಲ್ಟಿಪ್ಲೆಕ್‌ಸ್ಗಳಿಂದಾಗಿ ಕೆಲಮಟ್ಟಿಗಾದರೂ ಜನರು ಥಿಯೆಟರ್‌ಗೆ ಬರುತ್ತಿದ್ದಾರೆ. ಹೀಗಾಗಿ ಸಿನಿಮಾ ಮಂಡಳಿಯವರೂ ಮಲ್ಟಿಪ್ಲೆಕ್‌ಸ್ ವಿರುದ್ಧ ಬಯಸುವುದಿಲ್ಲ. ಇನ್ನು ಸರಕಾರವಂತೂ ಟೇಕ್‌ಆಫ್ ಆಗುವ ಲಕ್ಷಣವೇ ಇಲ್ಲ. ಅಲ್ಲಿಗೆ ಸುಲಿಗೆ ಮಾಡುವವರು ಸೇಫ್.

ಕರ್ನಾಟಕ ಸರಕಾರವೂ ಮಲ್ಟಿಪ್ಲೆಕ್‌ಸ್ಗಳ ಫುಡ್ ಮಾರಾಟ ದರದ ಮೇಲೆ ನಿಯಂತ್ರಣ ತರಲೇಬೇಕು. ಕರ್ನಾಟಕವೆಂದಲ್ಲ, ದೇಶಾದ್ಯಂತ ಇದರ ಅಗತ್ಯವಿದೆ. ಕಾರಣ ಜನರು ಸಿನಿಮಾ ನೋಡುವ ಶೈಲಿಯಲ್ಲಿ ಬದಲಾವಣೆಯಾಗಿದೆ. ಮಾಲ್‌ಗಳಲ್ಲೇ ಸಿನಿಮಾ ನೋಡುವ ಸಂಸ್ಕೃತಿ ಬೆಳೆಯುತ್ತಿದೆ. ಇಂಥ ಸಮಯದಲ್ಲೇ ನಿಯಂತ್ರಣ ಹೇರದಿದ್ದರೆ ಮುಂದೆ ಪಾಪ್‌ಕಾರ್ನ್ ಕೊಳ್ಳಲೂ ಸಾಲ ಮಾಡಬೇಕಾಗಬಹುದು !