ಕೈಯಲ್ಲಿರುವುದು ಸುತ್ತಿಗೆಯಾದರೆ ಕಾಣುವುದೆಲ್ಲ ಮೊಳೆಯೇ!

Posted In : ಅಂಕಣಗಳು, ಚಕ್ರವ್ಯೂಹ

ನಕ್ಸಲ್ ವಿಶ್ವರೂಪ-2

ಬಂಗಾಳದ ನಕ್ಸಲ್‌ಬಾರಿ ಎಂಬ ಊರಲ್ಲಿ 1967ರಲ್ಲಿ ನಡೆದ ಒಂದು ಘರ್ಷಣೆಯಲ್ಲಿ ಒಟ್ಟು 11 ಮಂದಿ (7 ಮಹಿಳೆಯರು, 2 ಗಂಡಸರು, 2 ಮಕ್ಕಳು) ತೀರಿಕೊಂಡರು. ಜನರ ಸಾತ್ವಿಕ ಹೋರಾಟಕ್ಕೆ ಎಲ್ಲಿ ಬೆಲೆ ಇಲ್ಲವೋ ಅಲ್ಲಿ ಶಸ್ತ್ರಸಮೇತ ಹೋರಾಟಕ್ಕಿಳಿಯಬೇಕೆಂಬ ಸಂದೇಶದೊಂದಿಗೆ ಅಲ್ಲಿ ಪ್ರಾರಂಭವಾದ ಚಳವಳಿಗೆ ಮುಂದೆ ನಕ್ಸಲ್ ಎಂದೇ ಹೆಸರಾಯಿತು. ಆಂಧ್ರದಲ್ಲಿ ಭೂಮಾಲಿಕರ ವಿರುದ್ಧ ಹಿಂಸಾತ್ಮಕ ಹೋರಾಟಕ್ಕಿಳಿದ ಚಳವಳಿಗಾರರಿಂದ ಪ್ರಭಾವಿತರಾಗಿ ಕರ್ನಾಟಕದಲ್ಲೂ – ಮುಖ್ಯವಾಗಿ ರಾಯಚೂರಿನ ಸುತ್ತಮುತ್ತ ಪ್ರಾರಂಭವಾದ ಹೋರಾಟ ನಿಧಾನಕ್ಕೆ ಮಲೆನಾಡಿಗೆ ಬಂತು. ಕಮ್ಯುನಿಸ್ಟ್‌ ಚಿಂತನೆಯನ್ನು ತಲೆಗೇರಿಸಿಕೊಂಡಿದ್ದವರೇ ಒಂದಷ್ಟು ಮಂದಿ ತಾವೆಲ್ಲರೂ ಚಿಂತಕರೆಂದು ಸ್ವಯಂಘೋಷಿಸಿಕೊಂಡು 1989ರಲ್ಲಿ ಕರ್ನಾಟಕ ವಿಮೋಚನಾ ರಂಗವನ್ನು ಸ್ಥಾಪಿಸಿದರು. ಅದರ ಮಹಿಳಾ ಘಟಕವಾಗಿ ಮಹಿಳಾ ಜಾಗೃತಿ ಎಂಬ ಸಂಸ್ಥೆಯೂ ಚಾಲೂ ಆಯಿತು.

ಇವೆರಡೂ ಸಂಸ್ಥೆಗಳು ಕಾಲೇಜು ವಿದ್ಯಾರ್ಥಿಗಳನ್ನು ಗುರಿ ಮಾಡಿಕೊಂಡು ಅವರಿಗೆ ತಾವು ತಯಾರಿಸಿದ ಪಟ್ಟಿಯಲ್ಲಿರುವ ಪುಸ್ತಕಗಳನ್ನು ಓದಿಸುವುದು, ಆ ಪುಸ್ತಕಗಳಲ್ಲಿರುವ ಚಿಂತನೆಗಳಷ್ಟೇ ಸತ್ವಯುತ ಎನ್ನುವುದು, ಸಮಾಜವನ್ನು ಉನ್ನತವರ್ಗದವರು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆಂಬ ಭ್ರಮೆ ಹಿಡಿಸುವುದು ಇತ್ಯಾದಿ ಮಾಡತೊಡಗಿದವು. ಅವರ ಈ ನಿರಂತರ ಪ್ರಯತ್ನದಿಂದಾಗಿ ಕೆಲವರಂತೂ ಉಗ್ರ ಕಮ್ಯುನಿಸ್ಟ್‌‌ಗಳಾಗಿ ರೂಪಗೊಂಡರು. ಯಾವ ಸಾಹಿತ್ಯವನ್ನೇ ಓದಲಿ, ಸಮಾಜದ ಯಾವ ಚಿತ್ರವನ್ನೇ ನೋಡಲಿ ಅವರಿಗೆ ಅಲ್ಲಿ ಶ್ರೇಣೀಕೃತ ವ್ಯವಸ್ಥೆ, ತಳವರ್ಗದ ಶೋಷಣೆ, ಪುರೋಹಿತಶಾಹಿಯ ಹಿಂಸಾಚಾರ, ಸಂಸ್ಕೃತಿಗಳ ಬ್ರಾಹ್ಮಣೀಕರಣ ಇವೇ ಕಾಣಿಸಲು ಪ್ರಾರಂಭವಾದವು. ಕಮ್ಯುನಿಸ್ಟರ ಅಖಾಡಾವಾದ ಕೇರಳದಿಂದ ಕಮ್ಯುನಿಸಮ್ಮನ್ನು ತಂದು ಕರ್ನಾಟಕದಲ್ಲಿ ನೆಡುವ ಪ್ರಯತ್ನಗಳು 1975ರಷ್ಟು ಹಿಂದೆಯೇ ಪ್ರಾರಂಭವಾಗಿದ್ದವು. ಆದರೆ ಅದು ವಿಫಲವಾಗಿತ್ತು. ನಂತರ ಆಂಧ್ರದ ಪೀಪಲ್ಸ್‌ ವಾರ್ ಗ್ರೂಪ್, ಕರ್ನಾಟಕದೊಳಗೂ ನುಸುಳಿ ಇಲ್ಲಿಯೂ ತನ್ನ ಸಂಘಟನೆ ಬಲಪಡಿಸುವ ಕೆಲಸ ಮಾಡಿತು.

ಇದರ ಉಸ್ತುವಾರಿಯನ್ನು ಮೊದಲಿಗೆ ವಹಿಸಿಕೊಂಡವನು ಚುರಕುರಿ ರಾಜ್ ಅಲಿಯಾಸ್ ಆಜಾದ್ ಎಂಬಾತ. ಹಿಂಸಾಚಾರದ ಕ್ರಾಂತಿಯಲ್ಲಿ ನಂಬಿಕೆಯಿಟ್ಟಿದ್ದ ಆಜಾದ್ ಕೊನೆಗೆ, ಆಂಧ್ರ-ಕರ್ನಾಟಕದ ಗಡಿಪ್ರದೇಶವೊಂದರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ (2000ದಲ್ಲಿ) ಪೊಲೀಸರ ಕೈಲಿ ಹೆಣವಾಗಿ ಮಲಗಿದ. ಅವನು ಹೆಣವಾದರೂ ಕ್ರಾಂತಿ ಸಾಯಲಿಲ್ಲ. ಯಾಕೆಂದರೆ ಆಜಾದ್‌ನ ಸಾವಿಗೆ ಎರಡು ದಶಕಗಳಷ್ಟು ಹಿಂದೆಯೇ, ಸೇನಾಧಿಕಾರಿಗಳೊಬ್ಬರ ಪುತ್ರನಾಗಿದ್ದ ಸಾಕೇತ್ ರಾಜನ್ ಎಂಬಾತ ಜೆಎನ್‌ಯುನಲ್ಲಿ ಪತ್ರಿಕೋದ್ಯಮ ಓದಿ (ಅಥವಾ ಪತ್ರಿಕೋದ್ಯಮವೊಂದನ್ನು ಬಿಟ್ಟು ಮಿಕ್ಕೆಲ್ಲ ಕ್ರಾಂತಿಕಾರಿ ಸಾಹಿತ್ಯವನ್ನೂ ಓದಿ ಎನ್ನಬಹುದೇನೋ!), ಪೂರ್ಣಪ್ರಮಾಣದ ಕಮ್ಯುನಿಸ್ಟ್‌ ಆಗಿ ಮೈಸೂರಿಗೆ ಬಂದಿಳಿದಿದ್ದ. ವಾಯ್ಸ್‌ ಆಫ್ ಮೈಸೂರು ಪತ್ರಿಕೆಯಲ್ಲಿ ವರದಿ/ಲೇಖನ ಪ್ರಕಟಿಸುತ್ತ ಒಂದಷ್ಟು ಜನ ಕ್ರಾಂತಿಕಾರಿಗಳ ಸ್ನೇಹವನ್ನೂ ಸಂಪಾದಿಸಿದ್ದ. ಜೆಎನ್‌ಯುನಲ್ಲಿ ಕಲಿಯುತ್ತಿರುವಾಗಲೇ ಹೊರದೇಶಗಳ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸುವುದನ್ನು ಕಲಿತಿದ್ದ ಸಾಕೇತ್ ಮೈಸೂರಿಗೆ ಬಂದಿಳಿದ ಮೇಲೆ ತನ್ನ ಜೆಎನ್‌ಯು/ಕಮ್ಯುನಿಸ್ಟ್‌ ಪ್ರಭಾವ ಬಳಸಿಕೊಂಡು ಹೊರದೇಶಗಳಿಂದ ದೇಣಿಗೆ ಸಂಗ್ರಹಿಸುವುದಕ್ಕೆ ಶುರು ಮಾಡಿದ.

ಈತ ಕರ್ನಾಟಕದ ಬುದ್ಧಿಜೀವಿಗಳು, ಚಿಂತಕರು, ಪ್ರಗತಿಪರರು, ಸಾಕ್ಷಿಪ್ರಜ್ಞೆಗಳು ಎಂದೆಲ್ಲ ಸ್ವಯಂಘೋಷಣೆ ಮಾಡಿಕೊಂಡು ಪ್ರಸಿದ್ಧರಾಗಿರುವ ಬಂಜಗರೆ ಜಯಪ್ರಕಾಶ್, ಕೆ. ಶಿವಸುಂದರ್, ಮೊಗಳ್ಳಿ ಗಣೇಶ, ರಾಜೇಂದ್ರ ಚೆನ್ನಿ, ಅಬ್ದುಲ್ ರಶೀದ್ ಮೊದಲಾದವರ ಆಪ್ತಸ್ನೇಹಿತನಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಆತ ಕನ್ನಡದ ಪ್ರಖರ ಚಿಂತಕಿ, ಸಾಕ್ಷಿಪ್ರಜ್ಞೆ ಗೌರಿ ಲಂಕೇಶ್ ಸಹಪಾಠಿ (ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ)! ಸಾಕೇತ್ ರಾಜನ್ ಕರ್ನಾಟಕದಲ್ಲಿ ನಕ್ಸಲ್ ಚಳವಳಿಯ ಧ್ವಜಸ್ತಂಭವನ್ನು ಆಳವಾಗಿ ಗುಂಡಿತೋಡಿ ನೆಟ್ಟ ಮಹಾನುಭಾವ. ಈತನ ಅವಧಿಯಲ್ಲಿ ಕರ್ನಾಟಕದೊಳಗೆ ನಕ್ಸಲರಲ್ಲಿ ದುಡ್ಡಿನ ಹೊಳೆಯೇ ಹರಿಯಲು ಪ್ರಾರಂಭವಾಯಿತು. ರಾಜ್ಯಾದ್ಯಂತ ಸಂಚಾರ ಮಾಡುತ್ತ ಆತ ನಕ್ಸಲ್ ಚಳವಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಜಾರಿಯಲ್ಲಿಟ್ಟಿದ್ದ. ಬ್ರಾಹ್ಮಣರಲ್ಲದ, ತಳವರ್ಗದವರೆಂದು ಗುರುತಿಸಿಕೊಂಡ ಹಲವಾರು ಹೆಂಗಸರು ನಕ್ಸಲ್ ಚಳವಳಿಗೆ ಸೇರಿ ಬಂದೂಕು ಹಿಡಿಯತೊಡಗಿದರು. ಮಾತುಮಾತಿಗೆ ಜೆಎನ್‌ಯು ಪರಿಭಾಷೆಯಲ್ಲಿ ಬ್ರಾಹ್ಮನಿಕಲ್ ಎನ್ನುತ್ತಿದ್ದ ಸಾಕೇತ್ ಬಹುತೇಕ ಎಲ್ಲ ಕಮ್ಯುನಿಸ್ಟರಂತೆ ಸ್ವತಃ ಬ್ರಾಹ್ಮಣ ಸಮುದಾಯದಿಂದ ಬಂದು, ಬ್ರಾಹ್ಮಣರ ವಿರುದ್ಧ ಮಾತಾಡುತ್ತಿದ್ದವನು.

ಈತ ಸಿರಿಮನೆ ನಾಗರಾಜ್ ಎಂಬ ಕಾಮ್ರೇಡ್ ಜೊತೆ ಸೇರಿಕೊಂಡು ಹಿಂಸಾತ್ಮಕ ಹೋರಾಟಕ್ಕಿಳಿದ. ಕಮ್ಯುನಿಸ್ಟ್‌ ಬರಹಗಾರರನ್ನೆಲ್ಲ ಸಂಘಟಿಸಿ ತನ್ನ ಹಿಂಸೆಗಳಿಗೆ ಅವರಿಂದ ಸಮರ್ಥನೆ ಬರೆಸಿಕೊಳ್ಳುತ್ತ ತಾನೇನೋ ಮಹಾಸಾಧನೆ ಮಾಡಲು ಹೊರಟಿದ್ದೇನೆ ಎಂದು ಬಿಂಬಿಸಿಕೊಂಡ. ಪತ್ನಿ ರಾಜೇಶ್ವರಿ ಆಂಧ್ರದಲ್ಲಿ ನಕ್ಸಲ್ ಎನ್‌ಕೌಂಟರ್‌ಗೆ ಬಲಿಯಾದ ಮೇಲೆ ನಕ್ಸಲ್ ಚಳವಳಿಯ ಭೂತವನ್ನು ಮೈಯಲ್ಲಿ ಆವಾಹಿಸಿಕೊಂಡ ಸಾಕೇತ್ ತಾನೂ ಆಂಧ್ರಕ್ಕೆ ಹೋಗಿ ಹಲವು ವರ್ಷ ಇದ್ದು ಶಸಸ್ತ್ರ ತರಬೇತಿ ಪಡೆದ. ಅಲ್ಲಿಂದ ಆತ ವಾಪಸಾಗುವ ಮೂಲಕ ಅದುವರೆಗೆ ಉತ್ತರ ಕರ್ನಾಟಕದ ಬಿರುಬಿಸಿಲಿನ ಸುಡುನೆಲದಲ್ಲಿದ್ದ ನಕ್ಸಲಿಸಂ ಹಚ್ಚಹಸುರಾದ ಮಲೆನಾಡಿಗೆ ಶಿಫ್ಟ್‌ ಆಯಿತು. ಒಂದಾನೊಂದು ಕಾಲದಲ್ಲಿ ಸಸ್ಯಕಾಶಿಯಾಗಿದ್ದ ಮಲೆನಾಡು ನೆತ್ತರಿನೋಕುಳಿಗೆ ಸಾಕ್ಷಿಯಾಯಿತು. ಕಾಡಿನೊಳಗಿನ ಹಲವು ಒಂಟಿಮನೆಗಳು ನಕ್ಸಲರ ಅಡಗುದಾಣಗಳಾದವು.

ವಿದೇಶಗಳಿಂದ ಬರುತ್ತಿದ್ದ ದೇಣಿಗೆಯ ದುಡ್ಡಲ್ಲಿ ಅಷ್ಟಿಷ್ಟನ್ನು ಸಾಕೇತ್ ತನ್ನ ಗುಂಪಿಗೆ ಸಹಾಯ ಮಾಡುತ್ತಿದ್ದ ಸ್ಥಳೀಯರಿಗೂ ಹಂಚಲು ಶುರುಮಾಡಿದ ಮೇಲೆ ಆತನನ್ನು ಬೆಂಬಲಿಸುವವರ ಸಂಖ್ಯೆ ಕೂಡ ತುಸು ಹೆಚ್ಚಿತು. ಸಾಕೇತ್ ರಾಜನ್ ಕರ್ನಾಟಕದ ರಾಬಿನ್‌ಹುಡ್; ಬಲಾಢ್ಯರ ಜೇಬಿನಿಂದ ಎಗರಿಸಿದ ದುಡ್ಡನ್ನು ಬಡಬಗ್ಗರಿಗೆ ಹಂಚುತ್ತಿದ್ದಾನೆ; ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ ಎಂಬ ಹೊಸ ವಿಶ್ಲೇಷಣೆ ಶುರುವಾಯಿತು. ಆತನೊಬ್ಬ ಸಮಾಜಸೇವಕ; ಕ್ರಾಂತಿಕಾರಿ; ಸಮಾಜದ ಅಪದ್ಧಗಳನ್ನೆಲ್ಲ ತೊಳೆದು ಜಗತ್ತನ್ನು ಸರಿದಾರಿಯಲ್ಲಿ ಮುನ್ನಡೆಸಲು ಬಂದಿರುವ ಪ್ರವಾದಿ ಎಂಬಂತೆಯೇ ಕನ್ನಡದ ಕಮ್ಯುನಿಸ್ಟ್‌ ಪತ್ರಿಕೆಗಳು ಬರೆಯತೊಡಗಿದವು. 2005ರ ಫೆಬ್ರವರಿ 6ರಂದು ಆತನನ್ನು ಕರ್ನಾಟಕ ಪೊಲೀಸರು ಎನ್‌ಕೌಂಟರ್ ಮಾಡಿ ಬೀದಿನಾಯಿಯನ್ನು ಎಸೆಯುವಂತೆ ಎಸೆದು ನಕ್ಸಲ್ ಹಾರಾಟಕ್ಕೊಂದು ತಾತ್ಕಾಲಿಕ ತಡೆ ಒಡ್ಡಿದರು.

ಸಾಕೇತ್ ರಾಜನ್ ಎನ್‌ಕೌಂಟರ್‌ಗೆ ಬಲಿಯಾಗುವುದರ ಮೂಲಕ ಕರ್ನಾಟಕದ ನಕ್ಸಲ್ ಚಳವಳಿಗೆ ಒಂದು ದೊಡ್ಡ ಹಿನ್ನೆಲೆಯಾಯಿತು. ಸಾಕೇತ್ ರಾಜನ್ ಓರ್ವ ಜೀವಪರನಾಗಿದ್ದ, ತಳಸ್ಪರ್ಶಿ ಚಿಂತನೆಗಳಿದ್ದ ಪ್ರಗತಿಪರ ಹೋರಾಟಗಾರನಾಗಿದ್ದ, ಅವನು ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದ ಎಂದು ಕರ್ನಾಟಕದ ಸ್ಲೀಪಿಂಗ್ ಸೆಲ್ ಕಮ್ಯುನಿಸ್ಟರು ಬಾಯಿ ಬಡಿದುಕೊಳ್ಳತೊಡಗಿದರು. ಇಷ್ಟಕ್ಕೂ ಆತನ ಚಿಂತನೆಯ ಸಾರ ಏನು ಎಂದರೆ ಯಾರಿಗೂ ಗೊತ್ತಿರಲಿಲ್ಲ! ರಾಜ್ಯದಲ್ಲಿ ತಳವರ್ಗದ ಕುಟುಂಬಗಳಿಗೆ ಶೋಷಣೆಯಾಗುತ್ತಿದೆ, ವರ್ಗ ಅಸಮಾನತೆ ಇದೆ, ಆರ್ಥಿಕತೆಯ ಸಮಾನ ಹಂಚಿಕೆಯಾಗಿಲ್ಲ ಎಂಬಿವೇ ಮುಂತಾದ ಗತಕಾಲದ ಸವಕಲು ಸಮಸ್ಯಗಳನ್ನೇ ಅವರು ಮತ್ತೆ ಮತ್ತೆ ತಿರುವಿಹಾಕಿ ಚರ್ಚಿಸುತ್ತಿದ್ದರು. ಇಂಥ ಸಮಸ್ಯೆಗಳಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಿದ್ದು ಪರಿಹಾರ ಕಂಡುಹಿಡಿಯುವುದು ಹೇಗೆಂದು ಜೆಎನ್‌ಯುನಲ್ಲಿ ಓದಿಬಂದ ಸಾಕೇತನಿಗೂ ಗೊತ್ತಿರಲಿಲ್ಲ. ಕೈಯಲ್ಲಿ ಸುತ್ತಿಗೆಯೊಂದೇ ಇದ್ದಾಗ ಜಗತ್ತಿನಲ್ಲಿ ಕಣ್ಣೆದುರು ಬಂದದ್ದೆಲ್ಲವೂ ಮೊಳೆಯಂತೆಯೇ ಕಾಣುತ್ತದೆ ಎಂಬ ಮಾತಿದೆ. ಹಾಗೆ, ಕಲಿತದ್ದು ಕಮ್ಯುನಿಸಂ ಒಂದೇ ಆಗಿದ್ದಾಗ ಜಗತ್ತೇ ಒಂದು ಸಮಸ್ಯೆಯಂತೆ ಕಾಣುತ್ತದೆ – ಎಂದೂ ಹೇಳಬಹುದು!

ಸಾಕೇತ್ ರಾಜನ್ ಸತ್ತು ವಿದೇಶಗಳ ದುಡ್ಡಿನ ಹರಿವು ನಿಂತುಹೋಗುತ್ತಲೇ ಕರ್ನಾಟಕದ ಕಮ್ಯುನಿಸ್ಟರಿಗೆ ನಿಜಕ್ಕೂ ಹಸಿವಿನ ಸಮಸ್ಯೆ ಉದ್ಭವಿಸಿತು! ಅದೇ ಹೊತ್ತಿನಲ್ಲಿ ರಾಜ್ಯ ಸರಕಾರ ಕರ್ನಾಟಕದ ಉದ್ದಗಲದಲ್ಲಿ ನಕ್ಸಲ್ ಚಳವಳಿಯನ್ನು ನಿಯಂತ್ರಿಸಲು ನಕ್ಸಲ್ ನಿಗ್ರಹ ದಳವನ್ನೂ ರಚಿಸಿತು. ಅದರಲ್ಲಿದ್ದ ದಕ್ಷ ಪೊಲೀಸ್ ಅಧಿಕಾರಿಗಳು ರಾಜ್ಯದಲ್ಲಿ ಸಕ್ರಿಯರಾಗಿದ್ದ ನಕ್ಸಲರ ಪಟ್ಟಿ ತಯಾರಿಸಿದರು. ಆ ಪಟ್ಟಿಯಲ್ಲಿದ್ದ ನಕ್ಸಲರೆಲ್ಲ ಒಂದಿಲ್ಲೊಂದು ಸಮಯದಲ್ಲಿ ಕರ್ನಾಟಕ ವಿಮೋಚನ ರಂಗದಲ್ಲಿ ಗುರುತಿಸಿಕೊಂಡವರೇ ಆಗಿದ್ದರು. ಅಂದರೆ ಕವಿರಂ, ಕರ್ನಾಟಕದ ಬಿಸಿರಕ್ತದ ಯುವಕರ ತಲೆಕೆಡಿಸಿ ಅವರಲ್ಲಿ ಕ್ರಾಂತಿ ಹುಸಿಭ್ರಾಂತಿ ತುಂಬಿಸಿ ಕೈಗೆ ಬಂದೂಕು ಕೊಟ್ಟು ಕಾಡೆಂಬ ರಣರಂಗಕ್ಕೆ ನೂಕುತ್ತಿರುವ ಭಯೋತ್ಪಾದಕ ಸಂಘಟನೆ ಎಂಬುದು ಸ್ಪಷ್ಟವಾಯಿತು. ತತ್ಪರಿಣಾಮ ಪೊಲೀಸರು ಕವಿರಂ ಮೇಲೆ ಗಮನ ಕೇಂದ್ರೀಕರಿಸಿದರು. ಅದರ ಸದಸ್ಯರ ಚಟುವಟಿಕೆಗಳ ಮೇಲೆ ನಿಗಾವಹಿಸತೊಡಗಿದರು. ತಮ್ಮ ಮೇಲೆ ರೇಡಾರ್ ಬಿದ್ದಿದೆಯೆಂಬುದು ಖಾತರಿಯಾದ ದಿನ ಕವಿರಂ ತನ್ನಷ್ಟಕ್ಕೇ ಕರಗುತ್ತಾ ಬಂತು.

ಅದರ ಬ್ಯಾನರಿನಲ್ಲಿ ಕಾರ್ಯಕ್ರಮಗಳು ಆಯೋಜನೆಯಾಗುವುದು ಕಡಿಮೆಯಾದವು. ಕವಿರಂ ಮತ್ತು ಅದರ ಮಹಿಳಾ ವಿಭಾಗವಾದ ಮಹಿಳಾ ಜಾಗೃತಿ – ಎರಡೂ ನೋಡನೋಡುತ್ತಿದ್ದಂತೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿಬಿಟ್ಟವು! ಅವೆರಡರ ಜಾಗದಲ್ಲಿ ಕೋಮು ಸೌಹಾರ್ದ ವೇದಿಕೆಯೆಂಬ ಹೊಚ್ಚಹೊಸ ಸಂಘಟನೆಯೊಂದು ಹುಟ್ಟಿಕೊಂಡಿತು. ಹಳೆಯ ಸಂಘಟನೆಗಳಲ್ಲಿ ಉಗ್ರವಾದಿಗಳಾಗಿ ಕೆಲಸ ಮಾಡಿದ್ದವರೆಲ್ಲ ಈಗ ಸೌಹಾರ್ದವೆಂಬ ಮೃದುಶಬ್ದ ಹೊತ್ತ ಸಂಘಟನೆಯಲ್ಲಿ ಸೌಮ್ಯವಾದಿಗಳಂತೆ ಕಾಣಿಸಿಕೊಂಡರು! ಮದ್ಯ ಅದೇ, ಬಾಟಲಿ ಬದಲಾಗಿತ್ತು ಅಷ್ಟೆ! ಈ ಕೋಸೌವೇ-ಯಲ್ಲಿ ಸಾಕೇತ್ ರಾಜನಿಗೆ ಅತ್ಯಂತ ಪ್ರೀತಿಪಾತ್ರಳಾಗಿದ್ದ ಗೌರಿ ಲಂಕೇಶ್ ಮುಖ್ಯಸ್ಥಾನ ಅಲಂಕರಿಸಿದರು. ಇಂಗ್ಲೀಷ್‌ನಲ್ಲಿ ವ್ಯವಹರಿಸಬಲ್ಲಾಕೆ, ಸಾಕೇತನ ಸಹಪಾಠಿ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ ಪಾರ್ಟಿಯ ಮುಖಂಡರಿಗೆ ಹತ್ತಿರವಿದ್ದಾಕೆ, ಹೆಸರಾಂತ ಅಪ್ಪನ ಹೆಸರು ಮತ್ತೆಲ್ಲ ಬಿರುದಾವಳಿಗಳನ್ನು ತಾನೂ ಹೊರುವ ಆಸೆಯಿರುವಾಕೆ ಮತ್ತು ಹಿಂದೂ/ಸಂಘದ ದ್ವೇಷಿ – ಇದಿಷ್ಟು ಗೌರಿಗೆ ಇದ್ದ ಅರ್ಹತೆ.

ಸಾಕೇತ್‌ನ ನಿಧನಾನಂತರ ಹರಿದುಹಂಚಿಹೋಗಿದ್ದ ನಕ್ಸಲ್ ಬಳಗ ಗೌರಿಯ ಪ್ರವೇಶವಾದ ಕೆಲವೇ ದಿನಗಳಲ್ಲಿ ಮತ್ತೆ ಒಂದಾಯಿತು. ಸಾಕೇತ್ ನಿಧನಾ ಬಳಿಕ ಅಲ್ಲಲ್ಲಿ ಸಾರ್ವಜನಿಕರಿಂದ ವಂತಿಗೆಯೆತ್ತಿ ಹೊಟ್ಟೆಹೊರೆಯಲು ಪ್ರಾರಂಭಿಸಿದ್ದ ನಕ್ಸಲರು ಗೌರಿ, ಕೋಮು ಸೌಹಾರ್ದ ವೇದಿಕೆಯಲ್ಲಿ ಕಾಣಿಸಿಕೊಂಡಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸಾಕೇತ್ ನಿರ್ವಹಿಸುತ್ತಿದ್ದ ದುಡ್ಡಿನ ಸಂಚಿ ಇದೀಗ ಈಕೆಯ ಕೈಗೆ ಬಂದಿತ್ತೆಂಬುದಲ್ಲದೆ ಮತ್ತೇನು ಅರ್ಥ ಮಾಡಿಕೊಳ್ಳಬೇಕು ಅದರಿಂದ? ಆದರೂ ಕಾಡಿನ ಬದುಕು ನಕ್ಸಲರಿಗೆ ಕಷ್ಟವೇ ಆಗಿತ್ತು. ಕಾಡಿನಲ್ಲಿ ತಮ್ಮಲ್ಲೊಬ್ಬನಾಗಿ ತಮ್ಮ ಕಷ್ಟಸುಖಗಳಿಗೆ ಜೊತೆಗಾರನಾಗುತ್ತಿದ್ದ ಸಾಕೇತ್‌ನಿಗೂ ಅರ್ಬನ್ ನಕ್ಸಲ್ ಆಗಿ ಬೆಂಗಳೂರಲ್ಲಿ ಕಾರ್ಯನಿರ್ವಹಿಸುತ್ತ ಆಗೀಗೊಮ್ಮೆ ಕಾಡಿನತ್ತ ಮುಖಮಾಡುವ ಹೊಸ ನಾಯಕಿಗೂ ಬಹಳ ವ್ಯತ್ಯಾಸಗಳಿದ್ದವು. ಪೊಲೀಸರ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದುದರಿಂದ ನಕ್ಸಲರಿಗೆ ಕಾಡಿನಲ್ಲಿ ನಿರಂತರವಾಗಿ ತಮ್ಮ ಕಾವು ಕಾಪಿಟ್ಟುಕೊಳ್ಳುವುದಕ್ಕೂ ಆಗಿರಲಿಲ್ಲ. ನಕ್ಸಲ್ ನೇಮಕಾತಿ ಇಳಿಮುಖವಾಗಿತ್ತು.

2007ರಲ್ಲಿ ಗೃಹ ಇಲಾಖೆ ಪೊಲೀಸ್ ವರದಿ ಆಧರಿಸಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ವ್ಯಕ್ತಿ ಮತ್ತು ಸಂಘಟನೆಗಳ ವರದಿ ಹೊರತಂದಮೇಲಂತೂ ಈ ಎಲ್ಲ ಕಮ್ಯುನಿಸ್ಟರನ್ನೂ ಜನ ಸಂಶಯದಿಂದ ನೋಡುವಂತಾಗಿತ್ತು. ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳದ, ಪೊಲೀಸರ ಕಣ್ಣಿಗೆ ಇನ್ನೂ ಬೀಳದ ಹೊಸ ನಕ್ಸಲರೆಲ್ಲ ತಮಗೆ ಕಾಡಿನ ಸಹವಾಸ ಸಾಕೆಂಬಂತೆ ಮೆತ್ತಗೆ ಬಂದೂಕು ಕೆಳಗಿಟ್ಟು ನಾಡು ಸೇರಿಕೊಂಡರು. ವಯಸ್ಸಿನ ಕಾರಣ ದೈಹಿಕ ಚಟುವಟಿಕೆ ಮಾಡಲಾಗದ, ಆಗಾಗ ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತ ಆಸ್ಪತ್ರೆ ನೋಡಬೇಕಾದ ಮುದಿ ನಕ್ಸಲರು ತಮ್ಮ ಹಿತೈಷಿಗಳಲ್ಲಿ ನೋವು ತೋಡಿಕೊಳ್ಳತೊಡಗಿದರು. ಅದೇ ಸಮಯಕ್ಕೆ ಸರಿಯಾಗಿ ಎಡಪಂಥೀಯ ಆತಂಕವಾದಿಗಳ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯನ್ನು ಸರಕಾರ ಪ್ರಾರಂಭಿಸಿತು.
(ಮುಂದುವರಿಯುವುದು)

Leave a Reply

Your email address will not be published. Required fields are marked *

two × two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top