ಮಕ್ಕಳ ದಿನದಂದು ಇಂತಹ ಕತೆಗಳನ್ನೂ ಕೇಳೋಣ

Posted In : ಅಂಕಣಗಳು, ಚಕ್ರವ್ಯೂಹ

ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ ಕೀರ್ತನ್ ಮನೆಗೆ ಬಂದಿದ್ದ. ಗಡ್ಡ ಬಿಟ್ಟ ದಿನ ಅಂಕಲ್ ಎನ್ನುವ, ಗಡ್ಡ ಬೋಳಿಸಿದ ದಿನ ಅಣ್ಣ ಎನ್ನುವ ಈ ಹುಡುಗ, ಅವತ್ತು ಭಾನುವಾರ ಗಡ್ಡ ಹೆರೆಯದೆ ಹಾಗೇ ಸೋಮಾರಿ ಕೂತಿದ್ದ ನನ್ನ ಬಳಿ ಬಂದು ಅಂಕಲ್, ನಾಡಿದ್ದು ಮಕ್ಕಳ ದಿನ ಎಂದು ನೆನಪಿಸಿದ. ಚಿಕ್ಕವರಿದ್ದಾಗ ಮಕ್ಕಳ ದಿನಕ್ಕೆ ವಾರಕ್ಕೆ ಮೊದಲೇ ಭಾಷಣ, ಪ್ರಬಂಧಗಳಿಗಾಗಿ ತಯಾರಿ ನಡೆಸುತ್ತಿದ್ದ ದಿನಗಳು ರಪ್ಪನೆ ಮನಸ್ಸಿನ ಪರದೆಯಲ್ಲಿ ಹಾದುಹೋದವು. ದೊಡ್ಡವರಾದ ಮೇಲೆ ಮಕ್ಕಳ ದಿನದ ನೆನಪು ಕೂಡ ಮಸುಕಾಗುತ್ತಿದೆಯಲ್ಲ ಅನ್ನಿಸಿತು. ಈ ವರ್ಷದ ಮಕ್ಕಳ ದಿನಕ್ಕೆ ನಮಗೆ ಒಂದು ಅಸೈನ್‌ಮೆಂಟ್ ಕೊಟ್ಟಿದ್ದಾರೆ ಅಂಕಲ್; ಮಕ್ಕಳ ಮೇಲೆ ಅಪಾರ ಪ್ರೀತಿ ತೋರಿಸಿದ ಗಣ್ಯವ್ಯಕ್ತಿಗಳ ಕತೆ ಹೇಳಬೇಕು ಅಂದಿದ್ದಾರೆ, ಅದಕ್ಕೆ ನೀವು ಸಹಾಯ ಮಾಡಬೇಕಲ್ಲ ಎಂದು ಓಲೈಸಿದ.

ಸದ್ಯ, ಮಕ್ಕಳ ಬಗ್ಗೆ ಪ್ರೀತಿ ತೋರಿಸಿದ ಯಾರದಾದರೂ ಕತೆ ಹೇಳಿ ಎಂಬ ಸ್ವಾತಂತ್ರ್ಯ ಕೊಟ್ಟರಲ್ಲ! ಅದೇ ದೊಡ್ಡದು! ಮತ್ತೆ ಮತ್ತೆ ನೆಹರೂ ಕತೆ ಹೇಳುವ ಶಿಕ್ಷೆಯಿಂದ ಈ ವರ್ಷವಾದರೂ ಮಕ್ಕಳು ಬಚಾವಾದರಲ್ಲ ಎಂದು ಖುಷಿಯಾಯಿತು ನನಗೆ. ಒಂದೇ ಯಾಕೋ ಕೀರ್ತನ್! ಎರಡು ಕತೆ ಹೇಳತೇನೆ ನಿನಗೆ. ಒಂದು ನೀನು ಕೇಳಿದೆ ಎಂಬ ಕಾರಣಕ್ಕೆ; ಇನ್ನೊಂದು – ಇಂಥ ಒಳ್ಳೆಯ ಅಸೈನ್‌ಮೆಂಟ್ ಕೊಟ್ಟರಲ್ಲ ಎಂಬ ಖುಷಿಗೆ ಬೋನಸ್ ಕತೆ, ಆದೀತಾ? ಎಂದೆ ಕೆನ್ನೆ ಚಿವುಟುತ್ತ. ಅಂದು ಅವನಿಗೆ ಹೇಳಿದ ಕತೆಯನ್ನೇ, ವಯಸ್ಕ ಓದುಗರಿಗೆಂದು ಅಷ್ಟಿಷ್ಟು ಬದಲಾಯಿಸಿ, ಇವತ್ತು ನಿಮಗೂ ಹೇಳುತ್ತಿದ್ದೇನೆ; ಎರಡೂ ಕತೆಗಳನ್ನು ಅವನಷ್ಟೇ ಆಸ್ಥೆಯಿಂದ ನೀವೂ ಕೇಳಬೇಕೆಂಬ ಬೇಡಿಕೆ ಮತ್ತು ಕೇಳುತ್ತೀರಿ ಎಂಬ ನಂಬಿಕೆಯೊಂದಿಗೆ.

1
ಈ ಕತೆ ಪ್ರಾರಂಭವಾಗುವುದು ನಮ್ಮೂರಿಂದ ದೂರದ ಅಮೆರಿಕೆಯಲ್ಲಿ. ಅವು ಇಪ್ಪತ್ತನೇ ಶತಮಾನದ ಮೊದಮೊದಲ ವರ್ಷಗಳು. ಅಮೆರಿಕೆಯ ಅಲ್ಲಲ್ಲಿ ಸರಕಾರವನ್ನು ಥರಥರ ನಡುಗಿಸುತ್ತಿದ್ದ ಮಾಫಿಯಾ ಗ್ಯಾಂಗುಗಳು ಗರಿಗೆದರುತ್ತಿದ್ದ ಸಮಯ. ಇಟೆಲಿಯಿಂದ ಆಮದಾಗಿ ಅಮೆರಿಕೆಯೆಂಬ ವಿಶಾಲ ಭೂಖಂಡದಲ್ಲಿ ಗರಿಬಿಚ್ಚಿದ್ದ ಮಾಫಿಯಾ ಹತ್ತೊಂಬತ್ತನೆ ಶತಮಾನ ಕೊನೆಯಾಗುವಷ್ಟರಲ್ಲಿ ಆ ದೇಶದ ತುಂಬ ವೈರಸ್ಸಿನಂತೆ ಹರಡಿಬಿಟ್ಟಿತ್ತು. ಮಾರಿಯೋ ಪೂಜೋನ ಗಾಡ್‌ಫಾದರ್ ಕಾದಂಬರಿ ಕೂಡ ಈ ಕಾಲಘಟ್ಟದ ಚಿತ್ರಣವನ್ನೇ ಹಸಿಬಿಸಿಯಾಗಿ ಓದುಗನಿಗೆ ಉಣಬಡಿಸುತ್ತದೆ.

ಅಂಥ ಮತ್ತೊಂದು ಸಾಮ್ರಾಜ್ಯವನ್ನು ಶಿಕಾಗೋ ರಾಜ್ಯದಲ್ಲಿ ಕಟ್ಟಿದವನು ಅಲ್ ಕಪೋನ್. ಇಟೆಲಿಯಿಂದ ವಲಸೆ ಬಂದು ಬದುಕು ಕಟ್ಟಿಕೊಂಡ ಮಧ್ಯಮ ವರ್ಗದ ಕುಟುಂಬದ ಒಂಬತ್ತು ಮಕ್ಕಳ ಸಾಲಲ್ಲಿ ಜೇಷ್ಠಪುತ್ರನಾಗಿ ಹುಟ್ಟಿದ ಅಲ್ಫೋನ್ಸ್‌ ಕಪೋನ್, ವಿದ್ಯಾಭ್ಯಾಸದ ಕೊರತೆ, ಕುಟುಂಬದ ಬಡತನ, ಪೋಲಿಹುಡುಗರ ಸಹವಾಸ, ದಿಢೀರ್ ಶ್ರೀಮಂತಿಕೆಯ ಆಕರ್ಷಣೆಗಳಿಗೆ ಬಿದ್ದು ಬಾಲ್ಯದಲ್ಲೇ ದಾರಿ ತಪ್ಪಿದ. ಅಲ್ಲಿಲ್ಲಿ ಉಂಡಾಡಿಗುಂಡನಾಗಿ ಒಂದಷ್ಟು ವರ್ಷಗಳನ್ನು ಗೋಲಿಯಾಡುತ್ತ ಕಳೆದ ಹುಡುಗನಿಗೆ ಮೈಕಟ್ಟು ಕಟ್ಟುಮಸ್ತಾಗಿದ್ದುದರಿಂದ ಬಾರ್‌ಗಳಲ್ಲಿ, ವೇಶ್ಯಾಗೃಹಗಳಲ್ಲಿ ಬೌನ್ಸರ್ ಕೆಲಸ ಸಿಕ್ಕಿತು. ಆ ಉದ್ಯೋಗಕ್ಕೆ ತಕ್ಕಂತೆ ಅಡ್ಡವ್ಯವಹಾರಿಗಳ ದೋಸ್ತಿಯೂ ಆಯಿತು. ಹುಡುಗ ಅಷ್ಟಿಿಷ್ಟು ತಪ್ಪಿದ್ದ ದಾರಿಯನ್ನು ಆ ಹಿತೈಷಿಗಳು ಉದ್ದಕ್ಕೂ ತಪ್ಪುವಂತೆ ನೋಡಿಕೊಂಡರು.

ಕಪೋನ್‌ಗೆ ಚಿಕ್ಕ ವಯಸ್ಸಿನಲ್ಲೇ ಸಮಾಜದ ಎಲ್ಲ ಕಾಳದಂಧೆಗಳ ವಿಸ್ತಾರವಾದ ಆಳವಾದ ಪರಿಚಯವಾಯಿತು. ಆತ ಕಳ್ಳಭಟ್ಟಿಯ ವ್ಯವಹಾರದಲ್ಲಿ ಕೈಯಾಡಿಸಿದ. ವೇಶ್ಯಾಗೃಹಗಳಿಗೆ ಗಿರಾಕಿಗಳನ್ನೊದಗಿಸುವ ಪಿಂಪ್ ಆದ. ಕಳ್ಳತನ ಮಾಡಿದ. ನಾಡಬಂದೂಕುಗಳನ್ನು ಒಬ್ಬರ ಕೈಯಿಂದೊಬ್ಬರಿಗೆ ಸಾಗಿಸುವ ವ್ಯವಹಾರಕ್ಕೂ ಇಳಿದು ಒಂದಷ್ಟು ಕಮೀಷನ್ ಕಮಾಯಿಸಿದ. ಇಷ್ಟೆಲ್ಲ ಅರ್ಹತೆ ಗಳಿಸಿದ ಮೇಲೆ ಆತನನ್ನು ದೊಡ್ಡ ಕುಳಗಳು ಬಿಟ್ಟಾರೇ? ಪರಮ ಪ್ರತಿಭಾವಂತ ಎಂದು ತಮ್ಮ ತೆಕ್ಕೆಗೆ ಒತ್ತಿಕೊಂಡರು. ಅಲ್ ಕಪೋನ್, ಶಿಕಾಗೋ ನಗರದಲ್ಲಿ ಅದಾಗಲೇ ಖತರ್‌ನಾಕ್ ಗ್ಯಾಂಗ್‌ಸ್ಟರ್ ಎಂದು ಕುಖ್ಯಾತಿ ಗಳಿಸಿದ್ದ ಜಾನಿ ಟೊರಿಯೋ ಎಂಬಾತನ ಬಲಗೈಬಂಟನಾದ.

ಅಚ್ಚುಮೆಚ್ಚಿನ ಶಿಷ್ಯನಾದ. ನಂಬಿಕಸ್ತ ಸಹಚರನಾದ. ಬದುಕಿನಲ್ಲಿ ಅನುಭವಿಸುವ ಸುಖವೆಲ್ಲ ಅನುಭವಿಸಿದೆನೆಂಬ ತೃಪ್ತಿಯಿಂದ ಟೊರಿಯೋ ನಿವೃತ್ತನಾಗಿ ತನ್ನ ಸಾಮ್ರಾಜ್ಯದ ಉಸ್ತುವಾರಿಯನ್ನು ಕಪೋನ್ ತಲೆಗೆ ಕಟ್ಟಿದ ಮೇಲೆ ಶಿಕಾಗೋದಲ್ಲಿ ಕಪೋನ್‌ನದೇ ರಾಜ್ಯಭಾರವಾಯಿತು. ಅವನು ಹೇಳಿದ್ದೇ ಕಾನೂನು, ಅವನು ಬೆರಳು ತೋರಿದಲ್ಲೆಲ್ಲ ಬಂದೂಕಿನ ಹೊಗೆ. ಕಪೋನ್ ಮಾಡಬಾರದ ಕೃತ್ಯಗಳನ್ನೆಲ್ಲ ಎಗ್ಗಿಲ್ಲದೆ ಮಾಡಿದ. ನಗರದ ಮೇಯರ್ ಅವನ ಬುಟ್ಟಿಯೊಳಗೆ ಬಿದ್ದಿದ್ದರು. ಪೊಲೀಸರಂತೂ ಕಪೋನ್‌ನ ಗ್ಯಾಂಗು ಠಳಾಯಿಸುವ ಮಾರ್ಗ ಬಿಟ್ಟು ತಲೆಮರೆಸಿಕೊಂಡು ಓಡಾಡುತ್ತಿದ್ದರು.

ಮೊದಮೊದಲು ಸಾರಾಯಿಯ ಅಕ್ರಮ ಮಾರಾಟ, ಡ್ರಗ್ಸ್‌ ವ್ಯಾಪಾರ, ಹುಡುಗಿಯರ ಸರಬರಾಜು, ಹಫ್ತಾ ವಸೂಲಿ, ಗುಂಡು-ಬಂದೂಕುಗಳ ವ್ಯವಹಾರ ಎನ್ನುತ್ತ ರಕ್ತತರ್ಪಣವಿಲ್ಲದ ಮಾಫಿಯಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದ ಕಪೋನ್ ಕೆಲ ವರ್ಷಗಳಲ್ಲೇ ಕೊಲೆ, ದರೋಡೆಗಳಿಗೆ ಇಳಿದ. ಆತನ ಜನರಿಗೂ ಎದುರಾಳಿ ಗ್ಯಾಂಗುಗಳಿಗೂ ಶಿಕಾಗೋದ ಬೀದಿಗಳಲ್ಲೇ ಮಾರಾಮಾರಿ ಶುರುವಾಯಿತು. ಸಾರ್ವಜನಿಕರು ಸರಕಾರೀ ಅಧಿಕಾರಿಗಳ ಕೊರಳಪಟ್ಟಿ ಹಿಡಿದು ಕಪೋನ್‌ನ ಬಂಧನಕ್ಕೆ ಒತ್ತಾಾಯಿಸತೊಡಗಿದರು. ಆತನ ಮೇಲೆ ಕೊಲೆ, ಸುಲಿಗೆ, ಕಳ್ಳವ್ಯವಹಾರಗಳ ಹೆಸರಲ್ಲಿ ನೂರೊಂದು ಕೇಸುಗಳು ದಾಖಲಾದವು. ಒಂದೊಂದು ಪ್ರಕರಣದ ಗಂಭೀರತೆಯೂ ಹೇಗಿತ್ತೆಂದರೆ ಸಿಕ್ಕಿಬಿದ್ದದ್ದೇ ಆದರೆ ಆತ ನೂರೊಂದು ವರ್ಷಗಳನ್ನು ಜೈಲಲ್ಲಿ ಕೂತು ಕಳೆಯಬೇಕಾಗಿತ್ತು; ಜೀವನಪರ್ಯಂತ ರೊಟ್ಟಿ ಮುರಿಯುತ್ತ ಪಶ್ಚಾತ್ತಾಪ ಪಡಬೇಕಾಗಿತ್ತು. ಆದರೆ…

ಆದರೆ, ಕಪೋನ್ ಒಂಟಿಯಾಗಿರಲಿಲ್ಲ. ಪೊಲೀಸ್ ಕೇಸುಗಳು ಮೇಲಿಂದ ಮೇಲೆ ಬೀಳತೊಡಗಿದ ಮೇಲೆ ಆತ ಶಿಕಾಗೋದಲ್ಲಿ ಪ್ರಳಯಾಂತಕ ಪ್ರತಿಭೆಯಿದ್ದ ವಕೀಲನೊಬ್ಬನನ್ನು ಹಿಡಿದ. ಸಾರ್ವಜನಿಕರ ನಡುವಲ್ಲಿ ಹಾಡುಹಗಲೇ ಹತ್ತಾರು ತಲೆಗಳನ್ನು ಉರುಳಿಸಿದ ನರಹಂತಕನನ್ನು ಕೂಡ ನ್ಯಾಯದೇವತೆಯ ಕೈಯಿಂದ ಜಾರಿಸಿಕೊಂಡುಬರುವ ಕಲೆ ಆ ಕರಿಕೋಟಿನ ವಕೀಲನಿಗೆ ಕರಗತವಾಗಿತ್ತು. ಅದಕ್ಕೆಂದೇ ಆತನನ್ನು ಇಡೀ ಶಿಕಾಗೋ ನಗರ ಈಸೀ ಎಡ್ಡಿ ಎಂದು ಕರೆಯುತ್ತಿತ್ತು. ಆತನನ್ನು ಕಟ್ಟಿಕೊಂಡ ಮೇಲೆ ಸಾವಿಲ್ಲದ ವರ ಪಡೆದ ರಾಕ್ಷಸನಂತೆ ಕುಣಿಯತೊಡಗಿದ ಕಪೋನ್. ಯಾಕೆಂದರೆ ಅವನ ಮೇಲೆ ಪೊಲೀಸರು ಎಂತೆಂಥ ಗಂಭೀರ ಪ್ರಕರಣಗಳನ್ನು ದಾಖಲಿಸಿದರೂ ಎಡ್ಡಿ, ಅವೆಲ್ಲ ಸಾಕ್ಷಿ-ಪುರಾವೆಗಳಿಲ್ಲದ ಸುಳ್ಳು ಕೇಸುಗಳು ಎಂದು ಹೇಗ್‌ಹೇಗೋ ಸಾಧಿಸಿ, ವಾದಿಸಿ ಕಪೋನ್‌ನನ್ನು ಬಿಡಿಸಿಕೊಂಡು ಬರುತ್ತಿದ್ದ!

ಇಡೀ ಊರಿಗೆ ಕಳ್ಳ ಯಾರೆಂದು ಗೊತ್ತಿದೆ; ಆದರೆ ಅದನ್ನು ಸಾಧಿಸಿತೋರಿಸಲು ಸಾಕಾಗುವಷ್ಟು ಪುರಾವೆಗಳು ಮಾತ್ರ ಸಿಗುತ್ತಿಲ್ಲವಲ್ಲ ಎಂಬ ಸಂಕಟದಿಂದ ಪೊಲೀಸರು ಕೈಕೈ ಹಿಸುಕಿಕೊಂಡರು. ಎಡ್ಡಿಯ ಬೆಂಬಲವಿರುವಷ್ಟು ಕಾಲ ಕಳ್ಳನನ್ನು ಯಾವ ಪೊಲೀಸ್ ವ್ಯವಸ್ಥೆಯೂ ಏನೂ ಮಾಡಲಾರದು; ಯಾವ ನ್ಯಾಯಾಲಯವೂ ತನ್ನ ಸುತ್ತಿಗೆಯಿಂದ ಕುಟ್ಟಲಾರದು ಎಂಬುದು ಬಹುತೇಕ ದೃಢವಾಯಿತು. ಕಪೋನ್, ತನ್ನನ್ನು ಈ ಬಗೆಯಲ್ಲಿ ರಕ್ಷಿಸುತ್ತಿದ್ದ ಎಡ್ಡಿಯನ್ನು ಚೆನ್ನಾಗಿಯೇ ನೋಡಿಕೊಂಡ. ಸಾಕುಸಾಕೆನಿಸುವಷ್ಟು ದುಡ್ಡನ್ನು ಶುಲ್ಕವಾಗಿ ಸುರಿದ. ದೊಡ್ಡ ಬಂಗಲೆಯೊಂದನ್ನು ಕಟ್ಟಿಸಿಕೊಟ್ಟ. ಹಲವು ನೂರು ಎಕರೆಗಳ ತೋಟವನ್ನು ಎಡ್ಡಿಯ ಹೆಸರಿಗೆ ಬರೆದುಬಿಸಾಕಿದ. ಶಿಕಾಗೋ ನಗರದ ಹೃದಯಭಾಗದಲ್ಲಿ ಎಡ್ಡಿ, ರಾಜನಿಗೂ ಮಿಗಿಲಾದ ವೈಭೋಗದಿಂದ ಬದುಕು ಸಾಗಿಸುವಂತಾಯಿತು. ಹೀಗೆ ಐಶ್ವರ್ಯಲಕ್ಷ್ಮಿ ಲಕ್ವಾ ಹೊಡೆದಂತೆ ಎಡ್ಡಿಯ ಕಾಲ ಬುಡದಲ್ಲೇ ಬಿದ್ದು ಕಾಲ ಕಳೆಯುತ್ತಿದ್ದರೂ ಎಡ್ಡಿಗೆ ಮನಸ್ಸಿನ ಆಳದಲ್ಲೊಂದು ದುಃಖ ಇದ್ದೇ ಇತ್ತು. ಅದೇನೆಂದರೆ ಆತನಿಗೆ ಇದ್ದವನು ಒಬ್ಬನೇ ಮಗ.

ಮನೆಯಲ್ಲಿ ಬಯಸಿದರೆ ದಿನಕ್ಕೊಂದು ಚಿನ್ನದ ಬಟ್ಟಲಿನಲ್ಲಿ ಉಣ್ಣುವ ಐಭೋಗ ಇದ್ದರೂ; ಮಗನಿಗೆ ಕಾರು, ದುಡ್ಡು ಎಲ್ಲವನ್ನೂ ಸಾಕೆನಿಸುವಷ್ಟು ಸುರಿವ ಸಾಮರ್ಥ್ಯ ಅಪ್ಪ ಎಡ್ಡಿಗಿದ್ದರೂ ಎರಡು ವಿಷಯಗಳನ್ನು ಮಾತ್ರ ಆತ ಮಗನಿಗೆ ಕೊಡಲು ಅಸಮರ್ಥನಾಗಿದ್ದ. ಒಳ್ಳೆಯ ಹೆಸರು ಮತ್ತು ಒಳ್ಳೆಯ ಉದಾಹರಣೆ – ಅವೆರಡು ವಿಷಯಗಳು. ಶಿಕಾಗೋ ನಗರವನ್ನು ಕಣ್ಣೀರಿಂದ ಕೈ ತೊಳೆಯುವಂತೆ ಮಾಡಿದ್ದ ರೌಡಿಗೆ ವಕೀಲನಾಗಿ ಕೆಲಸ ಮಾಡಿದ್ದರಿಂದ ಕ್ರಿಮಿನಲ್ ಲಾಯರ್ ಎಂಬ ಅಭಿಧಾನ ಅವನಿಗೆ ದ್ವಿರುಕ್ತಿಯೂ ಅನ್ವರ್ಥವೂ ಆಗಿಬಿಟ್ಟಿತ್ತು. ಇಡೀ ಸಮಾಜ ಅವನನ್ನು ಕಡೆಗಣ್ಣಿನಿಂದ ನೋಡುತ್ತಿತ್ತು. ಸಭ್ಯರ ಕೂಟದಲ್ಲಿ ಎಡ್ಡಿಗೆ ತೋರಿಕೆಯ ಮರ್ಯಾದೆ ಸಿಗುತ್ತಿತ್ತೇ ಹೊರತು ಯಾರೂ ಆತನನ್ನು ಅಂತರಂಗಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಆತ ಒಂದು ಬಗೆಯಲ್ಲಿ ಇಡೀ ನಗರದಿಂದ ಬಹಿಷ್ಕೃತನಾಗಿದ್ದ. ಜನ ಅವನನ್ನು ನಖಶಿಖಾಂತ ದ್ವೇಷಿಸುತ್ತಿದ್ದರು. ಇಂಥವನ ಬಗ್ಗೆ ಸ್ವತಃ ಮಗನಿಗೆ ಅದೆಂಥ ಭಾವನೆ ಇದ್ದಿರಬಹುದು?

ಎಡ್ಡಿ ತನ್ನ ಮಗನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ, ಅಂಥ ಮಗನ ಕಣ್ಣಲ್ಲೂ ತಾನು ಸಣ್ಣವನಾಗಿಬಿಟ್ಟೆನಲ್ಲ ಎಂಬ ನೋವು ಅವನನ್ನು ಹಗಲಿರುಳು ಚುಚ್ಚುತ್ತಿತ್ತು. ಮಗನ ದೃಷ್ಟಿಯಲ್ಲಿ ಕೇವಲನಾಗುವುದು ಅಪ್ಪನಿಗೆ ಸಿಗಬಹುದಾದ ಬಹುದೊಡ್ಡ ಶಿಕ್ಷೆ. ಇಲ್ಲ; ಇದನ್ನು ಸರಿಪಡಿಸಿಕೊಳ್ಳಲೇಬೇಕು ಎಂದು ಒಂದು ರಾತ್ರಿ ಗಟ್ಟಿನಿರ್ಧಾರ ಮಾಡಿದ ಎಡ್ಡಿ ಮರುದಿನ ಹೊಸಿಲು ದಾಟಿ ಹೊರಗೆ ಅಡಿಯಿಟ್ಟವನು ನೇರ ಹೋಗಿದ್ದು ಮ್ಯಾಜಿಸ್ಟ್ರೇಟ್ ಕೋರ್ಟಿಗೆ. ಅಲ್ಲಿ ಹೋಗಿ ಆತ ತಾನು ಅದುವರೆಗೆ ಕಪೋನ್ ಪರವಾಗಿ ಮಾಡಿದ್ದ ಎಲ್ಲ ಸಮರ್ಥನೆಗಳನ್ನೂ ಹಿಂಪಡೆದ. ತನ್ನ ಕಕ್ಷಿದಾರನಾಗಿದ್ದ ಕಪೋನ್‌ನ ಅಪರಾಧಗಳ ಪುಟಪುಟಗಳ ಮಾಹಿತಿಯನ್ನು ಬಿಚ್ಚಿಟ್ಟ.

ತನ್ನ ತಪ್ಪನ್ನು ಬೇಷರತ್ ಒಪ್ಪಿಕೊಂಡ. ದುಡ್ಡಿಗಾಗಿ ನ್ಯಾಯವನ್ನು ಕೊಂದೆ ಎಂದು ಗೋಳಾಡಿದ. ನ್ಯಾಯವಾದಿಯೇ ಸ್ವತಃ ನ್ಯಾಯಾಲಯಕ್ಕೆ ಸತ್ಯವನ್ನು ವಿವರಿಸಿದ್ದರಿಂದ ಆರೋಪಿ ಕಪೋನ್‌ನನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿತು. ಅವನಿಗೆ ಉಗ್ರ ಶಿಕ್ಷೆ ವಿಧಿಸಿತು. ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕಾದರೆ ಕಪೋನ್ ಜೀವಮಾನವೆಲ್ಲ ತಲೆಮರೆಸಿಕೊಂಡು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಯಿತು. ತಾನು ಮಾಡಿದ ಈ ಘನಕಾರ್ಯದ ಫಲಿತಾಂಶ ಏನಾಗುತ್ತದೆ ಎಂಬುದು ಎಡ್ಡಿಗೆ ಗೊತ್ತಿಲ್ಲದ್ದೇನಲ್ಲ. ಕಪೋನ್‌ನ ಒಳಹೊರಗನ್ನು ಬಹುಶಃ ಅವನಷ್ಟು ಆಳವಾಗಿ ತಿಳಿದಿದ್ದವರು ಯಾರೂ ಇರಲಿಕ್ಕಿಲ್ಲ.

ಹಾಗಿರುವಾಗ ಅವನಿಗೆ ತಾನೀಗ ಇಟ್ಟ ಹೆಜ್ಜೆಯ ಪರಿಣಾಮ ಏನಾಗುತ್ತದೆಂಬ ಅಂದಾಜು ಇಲ್ಲದೇ ಇದ್ದೀತೇ? ತಾನು ಮಾಡಿರುವ ವಿಶ್ವಾಸದ್ರೋಹಕ್ಕೆ ಕಪೋನ್ ಕೊಡಬಹುದಾದ ಕನಿಷ್ಠ ಶಿಕ್ಷೆ ಮರಣ ಎಂಬುದು ಎಡ್ಡಿಗೆ ಬೆಳಕಿನ ಶಲಾಕೆಯಷ್ಟು ಸ್ಪಷ್ಟವಾಗಿತ್ತು. ಆದರೆ, ಮಗನಿಗೊಂದು ಒಳ್ಳೆಯ ಉದಾಹರಣೆಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವುದು ಆತನಿಗೆ ಎಲ್ಲಕ್ಕಿಂತ ದೊಡ್ಡ ಅಗತ್ಯವಾಗಿತ್ತು. ನ್ಯಾಯಾಲಯದಲ್ಲಿ ಆತ ಕಪೋನ್‌ನ ತಪ್ಪುಗಳನ್ನು ವಿವರಿಸಿ ತಿಂಗಳೂ ಕಳೆದಿರಲಿಲ್ಲ; ಕಾರು ಚಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಆತನನ್ನು ಕಾರೊಂದು ಸಿನಿಮೀಯವಾಗಿ ಚೇಸ್ ಮಾಡಿಕೊಂಡು ಬಂದಿತು. ಆತನ ಕಾರನ್ನು ಅದು ಅಡ್ಡಗಟ್ಟಿನಿಲ್ಲಿಸಿತು. ಅದರಿಂದ ಹೊರಬಂದ ಗ್ಯಾಂಗ್‌ಸ್ಟರ್‌ಗಳು ಬಂದೂಕು ಹಿಡಿದು ಮನಬಂದಂತೆ ಗುಂಡಿನ ಮಳೆಗರೆದರು. ಕ್ಷಣಮಾತ್ರದಲ್ಲಿ ಎಡ್ಡಿ ಹೆಣವಾಗಿಹೋದ. ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಬಂದು ಪಂಚನಾಮೆ ಮಾಡಿದಾಗ, ಎಡ್ಡಿಯ ಕರಿಕೋಟಿನ ಜೇಬಿನಲ್ಲಿ ಒಂದೇ ಒಂದು ಚೀಟಿ ಸಿಕ್ಕಿತು.

ಅದರಲ್ಲಿ ಒಂದೇ ಒಂದು ಪುಟ್ಟ ಪದ್ಯ, ಹೀಗಿತ್ತು:
The clock of life is wound but once,
And no man has the power to tell just
when the hands will stop,
at late or early hour.
Now is the only me you own.
Live, love, toil with a will,
Place no faith in me,
For the clock may soon be s ll.
ಎಡ್ಡಿ ಸತ್ತ. ಆದರೆ ತನಗಂಟಿದ್ದ ಕಳಂಕವನ್ನೆಲ್ಲ ತೊಡೆದುಕೊಂಡು, ತನ್ನ ಮಗನಿಗೊಂದು ಉತ್ತಮ ಉದಾಹರಣೆಯಾಗಿ, ತಾನು ಪ್ರೀತಿಸಿದ ಮಗನಿಗಾಗಿ ಅತ್ಯುತ್ತಮ ತ್ಯಾಾಗ ಮಾಡಿದ ಹೆಮ್ಮೆಯಲ್ಲಿ ಸತ್ತ.
2
ಅದು ಮೊದಲ ಕತೆ. ಈಗ ಎರಡನೆ ಕತೆ ಕೇಳುವಂಥವರಾಗಿ. ಎರಡನೇ ಮಹಾಯುದ್ಧದ ಸಮಯ. ಅಮೆರಿಕಾ ಮತ್ತು ಜಪಾನ್ ದೇಶಗಳು ಹಾವು-ಮುಂಗುಸಿಗಳಂತೆ ಒಬ್ಬರ ಮೇಲೊಬ್ಬರು ಮುಗಿಬಿದ್ದು ಕಚ್ಚಾಡುತ್ತಿದ್ದ ಕಾಲ. ಅಂಥದೊಂದು ವಿಷಮ ಪರಿಸ್ಥಿತಿ ಅಮೆರಿಕೆಯ ಆಗಸದಲ್ಲಿ ಮಡುಗಟ್ಟಿದ್ದ ದಿನ ಅದು. 1942ರ ಫೆಬ್ರವರಿ 20. ಅಮೆರಿಕೆಯ ಒಂದು ಯುದ್ಧನೌಕೆಯಿಂದ ಒಂದಷ್ಟು ಯುದ್ಧವಿಮಾನಗಳು ಹಾರಿಹೋಗಿದ್ದವು. ಅಲ್ಲೆಲ್ಲೋ ದೂರದ ಸ್ಥಳಕ್ಕೆ ಹೋಗಿ ಏನೋ ಗುರುತರವಾದ ಕೆಲಸ ಮಾಡುವುದಿತ್ತು ಅವಕ್ಕೆ. ಹಾಗೆ ಗಗನಕ್ಕೇರಿದ್ದ ವಿಮಾನಗಳಲ್ಲಿ ಒಂದನ್ನು ನಡೆಸುತ್ತಿದ್ದವನು ಲೆಫ್ಟಿನೆಂಟ್ ಕಮಾಂಡರ್ ಬುಚ್ ಓ’ಹೇರ್ ಎಂಬಾತ. ಹಾರಿಕೊಂಡು ಅರ್ಧದಾರಿ ಕ್ರಮಿಸಿಯಾಗಿದೆ. ಇಂಧನ ತುಂಬುವ ಟ್ಯಾಂಕ್ ತೆರೆದು ನೋಡಿದರೆ, ಅಲ್ಲೇನಿದೆ! ಮಣ್ಣು! ತಳದಲ್ಲಿ ಒಂದಿಷ್ಟೇ ಇಷ್ಟು ತೈಲ ಗುಳುಕ್ ಗುಳುಕ್ ಎನ್ನುತ್ತಿದೆ! ಆತನ ವಿಮಾನಕ್ಕೆ ಇಂಧನ ತುಂಬಲು ಸಹಾಯಕರು ಮರೆತುಬಿಟ್ಟಿದ್ದರು! ಬುಚ್ ಕೂಡಲೇ ತನ್ನ ಕಮಾಂಡರ್‌ಗೆ ವಿಷಯ ತಿಳಿಸಿದ. ಉಳಿದ ಅಲ್ಪಸ್ವಲ್ಪ ಇಂಧನದಲ್ಲಿ ಗಮ್ಯದವರೆಗೆ ಹೋಗಿ ವಾಪಸ್ ಬರುವುದು ಸಾಧ್ಯವೇ ಇರಲಿಲ್ಲ.

ಕಮಾಂಡರ್ ಆತನಿಗೆ ವಾಪಸ್ ಹಡಗಿನತ್ತ ಮರಳುವಂತೆ ಸೂಚಿಸಿದ. ಮನಸ್ಸಿಲ್ಲದ ಮನಸ್ಸಿಂದ ಬುಚ್, ಅವರೆಲ್ಲ ಹೋಗುತ್ತಿದ್ದ ದಾರಿಯಿಂದ ತನ್ನ ಪಥ ಬದಲಿಸಿ ಹಡಗಿನತ್ತ ಮರಳಲೇಬೇಕಾಯಿತು. ಹಾಗೆ ವಾಪಸಾಗುತ್ತಿದ್ದವನಿಗೆ ಇನ್ನೇನು ಹಡಗಿನಲ್ಲಿ ಇಳಿಯಬೇಕೆಂಬಷ್ಟರಲ್ಲಿ ಒಂದು ದಿಗ್ಭ್ರಮೆಗೊಳಿಸುವ ದೃಶ್ಯ ಕಾಣಿಸಿತು. ಅದೇನು ಗೊತ್ತಾ? ಹತ್ತಾಾರು ಬಾಂಬರ್ ವಿಮಾನಗಳು, ಜಪಾನಿನವು, ಗೃಧ್ರಪಕ್ಷಿಗಳಂತೆ ರಾಮಬಾಣದಂತೆ ಇತ್ತಲೇ ಗುರಿಯಿಟ್ಟು ಹಾರಿಬರುತ್ತಿದ್ದವು! ಬುಚ್‌ನ ಎದೆಯಲ್ಲಿ ಭಯದ ವಿದ್ಯುತ್ಸಂಚಾರವಾಯಿತು. ಆಶ್ಚರ್ಯಾಘಾತಗಳಿಂದ ಕೈಕಾಲಿನ ರೋಮಗಳೆಲ್ಲ ತಟ್ಟನೆ ಎದ್ದುನಿಂತವು! ಮುಂದೇನು ಮಾಡಬೇಕೆಂಬ ನಿರ್ಣಯವನ್ನು ಕೆಲವೇ ಕೆಲವು ಸೆಕೆಂಡುಗಳಲ್ಲಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಧುತ್ತನೆ ಸೃಷ್ಟಿಯಾಗಿಬಿಟ್ಟಿತು. ವಾಪಸು ಹೋಗಿ ಉಳಿದ ಯುದ್ಧವಿಮಾನಗಳನ್ನು ಕರೆತರುವಂತೆಯೂ ಇಲ್ಲ; ಇತ್ತ ಹಡಗಿಗೆ ಮುಖ ಮಾಡಿ ಸಂದೇಶ ಕಳುಹುವಂತೆಯೂ ಇಲ್ಲ.

ಸಂದೇಶ ಕೊಟ್ಟರೂ ಆ ಹಡಗಿನವರೇನು ಮಾಡಬೇಕು? ಡೆಕ್‌ನಲ್ಲಿ ಒಂದಾದರೂ ವಿಮಾನ ಬಾಕಿ ಉಳಿದಿದ್ದರೆ ತಾನೆ? ಹಾರಿಹೋದ ಅಷ್ಟೂ ವಿಮಾನಗಳನ್ನು ಕಳಿಸಿಕೊಟ್ಟು ಹಡಗು ನಿಶ್ಶಸ್ತ್ರವಾಗಿ ಕೈ ಕಟ್ಟಿ ಕೂತಿತ್ತು. ಇನ್ನು ಬುಚ್‌ನ ವಿಮಾನವೋ, ತಳ ಕಂಡ ಬಾವಿಯ ನೀರಿನಂತೆ ಟ್ಯಾಂಕಿನ ಅಡಿಯಲ್ಲಿ ಇಷ್ಟೇ ಇಷ್ಟು ಇಂಧನ ಕುಲುಕಾಡುತ್ತಿದೆಯಲ್ಲ! ಅರೆಕ್ಷಣವೂ ತಡ ಮಾಡದೆ ಬುಚ್ ನೇರವಾಗಿ ಆ ಜಪಾನೀ ವಿಮಾನಗಳಿಗೆ ಎದುರಾಗಿ ಹೋಗಿಬಿಟ್ಟ! ಜೀವದ ಹಂಗು ತೊರೆದು ಸಿಕ್ಕ ಸಿಕ್ಕ ವಿಮಾನಗಳ ಮೇಲೆಲ್ಲ ಬಾಂಬಿನ ಮಳೆಗರೆಯಲು ಪ್ರಾರಂಭಿಸಿದ. ಹೀಗೆ ಒಂದೇ ಒಂದು ಶತ್ರುವಿಮಾನ ತಮ್ಮತ್ತಲೇ ಹಾರಿಬಂದು ದಾಳಿ ಮಾಡುವುದನ್ನು ಜಪಾನೀಯರು ನಿರೀಕ್ಷಿಸಿರಲಿಲ್ಲ. ಈಗ ಕಂಗಾಲಾಗುವ ಸರದಿ ಅವರದಾಯಿತು!

ಎಷ್ಟು ಸಾಧ್ಯವೋ ಅಷ್ಟು ವಿಮಾನಗಳಿಗೆ ಗರಿಷ್ಠ ಡ್ಯಾಮೇಜ್ ಆಗುವಂತೆ ಬುಚ್ ತನ್ನ ಫೈಟರ್ ಜೆಟ್ ಚಲಾಯಿಸಿದ. ಹಲವು ವಿಮಾನಗಳ ರೆಕ್ಕೆಗಳು ತುಂಡಾದವು, ಬಾಲ ಮುರಿದವು. ಆಕಾಶದಲ್ಲಿ ಇಷ್ಟು ಹೊತ್ತು ಎದೆ ಸೆಟೆಸಿ ಹಾರಾಡುತ್ತಿದ್ದ ವಿಮಾನಗಳೆಲ್ಲ ಈಗ ಧರಾಶಾಯಿಯಾದವು. ಮೇಲೆ ಹಾರಿದ ದೀಪಾವಳಿಯ ಪಟಾಕಿ ಡಬ್ ಎಂದು ಒಡೆದು ಕೆಳಕ್ಕೆ ಬೀಳುವಂತೆ, ಈ ವಿಮಾನಗಳಲ್ಲಿ ಹೆಚ್ಚಿನವೆಲ್ಲ ಸಮುದ್ರಕ್ಕೆ ಬಿದ್ದವು. ಅಳಿದುಳಿದವರು ಈ ಬಲರಾಮನ ಸಹವಾಸವೇ ಬೇಡವಪ್ಪ ಎನ್ನುತ್ತ ಭಯಬಿದ್ದು ದಿಕ್ಕು ಬದಲಿಸಿ ದೂರ ಹಾರಿಬಿಟ್ಟರು. ಬುಚ್ ಅಂದು ಏಕಾಂಗಿಯಾಗಿ ಐದು ಬಾಂಬರ್ ವಿಮಾನಗಳನ್ನು ಸಂಪೂರ್ಣವಾಗಿ ನಾಶಮಾಡಿದ್ದ. ಏಕಾಂಗಿಯಾಗಿ ಹೋರಾಡಿ ಹಡಗನ್ನು ರಕ್ಷಿಸಿದ್ದ. ಎಲ್ಲ ಶತ್ರುಗಳೂ ಕಣ್ಮರೆಯಾದ ಬಳಿಕ ಆತ ತನ್ನ ವಿಮಾನವನ್ನು ಹಡಗಿನಲ್ಲಿ ಸುರಕ್ಷಿತವಾಗಿ ಇಳಿಸಿದ. ಆತನ ವಿಮಾನದ ತಲೆಗೆ ಕಟ್ಟಿದ್ದ ಕ್ಯಾಮರಾದಲ್ಲಿ ಈ ರುದ್ರಭೀಕರ ಯುದ್ಧದ ದೃಶ್ಯಾವಳಿ ಸಂಪೂರ್ಣವಾಗಿ ಸೆರೆಯಾಗಿತ್ತು. ಯುದ್ಧ ಹೇಗೆ ನಡೆಯಿತೆಂಬುದನ್ನು ಆತ ವಿವರಿಸಿ ಹೇಳುವ ಅಗತ್ಯವೇ ಇರಲಿಲ್ಲ.

ಬುಚ್ ಮೆರೆದ ಪ್ರಸಂಗಾವಧಾನ, ಪ್ರತ್ಯುತ್ಪನ್ನಮತಿತ್ವ ಅಮೆರಿಕನ್ ಸೇನೆಯಲ್ಲಿ ಮನೆಮಾತಾಯಿತು. ಇಡೀ ಅಮೆರಿಕೆ ಅವನನ್ನು ಹಾಡಿಹೊಗಳಿತು. ಪತ್ರಿಕೆಗಳು ಬುಚ್‌ನ ಸಾಧನೆ-ಸಾಹಸಗಳನ್ನು ಮುಖಪುಟದಲ್ಲಿ ಪ್ರಕಟಿಸಿ ಗುಣಗಾನ ಮಾಡಿದವು. ನೌಕಾಸೇನೆ ಅವನಿಗೆ ಸೂಕ್ತ ಗೌರವಗಳನ್ನು ಪ್ರದಾನಿಸಿ ಸನ್ಮಾನಿಸಿತು. ಅಮೆರಿಕನ್ ಅಧ್ಯಕ್ಷರು ಕಾಂಗ್ರೆಷನಲ್ ಮೆಡಲ್ ಆಫ್ ಆನರ್ ಅನ್ನು ಬುಚ್‌ನ ಎದೆಗೆ ಹೆಮ್ಮೆಯಿಂದ ತೊಡಿಸಿದರು. ಅದು ನಮ್ಮ ದೇಶದ ಪರಮವೀರಚಕ್ರಕ್ಕೆ ಸಮನಾದ ಅಥವಾ ಅದಕ್ಕೂ ಮಿಗಿಲಾದ ತೂಕದ ಪದಕ. ಅಷ್ಟೆಲ್ಲ ಉನ್ನತ ಪ್ರಶಸ್ತಿಗಳನ್ನು ಬಾಚಿಕೊಂಡರೂ ಬುಚ್‌ನಿಗೆ ಅಹಂಕಾರ ತಲೆಗಡರಲಿಲ್ಲ. ಆತ ಮತ್ತೂ ನೌಕಾದಳದಲ್ಲಿ ನಿಷ್ಠಾವಂತ, ದೇಶಭಕ್ತ ಸೈನಿಕನಾಗಿಯೇ ವೃತ್ತಿಯನ್ನು ಮುಂದುವರಿಸಿದ. ಅದರ ಮರುವರ್ಷ, ಯುದ್ಧದ ಕಾವು ಜೋರಾಗಿದ್ದ ಸಮಯದಲ್ಲಿ, ಮತ್ತೊಂದು ಅಂಥಾದ್ದೇ ಭೀಕರ ಕಾಳಗದಲ್ಲಿ ಹೋರಾಡುತ್ತಿದ್ದಾಗ ಬುಚ್ ರಣರಂಗದಲ್ಲೇ ವೀರಮರಣವನ್ನಪ್ಪಬೇಕಾಯಿತು. ದೇಶಕ್ಕಾಗಿ ಬದುಕಿ, ದೇಶಕ್ಕಾಗಿ ಸತ್ತು ಮಲಗಿದಾಗ ಅವನಿಗಿನ್ನೂ 29ರ ಎಳೆಚಿಗುರು ಹರೆಯ.

ಬುಚ್ ಸತ್ತ. ಆದರೆ, ಎಂಥ ವೀರೋಚಿತ ಸಾವು ಅವನದ್ದು! ದೇಶವೇ ಕೊಂಡಾಡುವಂಥ, ಕಣ್ಣೀರುಗರೆವಂಥ, ಘನತೆವೆತ್ತ ಉದಾಹರಣೆಯಾಗಿ ನಿಲ್ಲುವಂಥ ಅಕಳಂಕ ಸಾವು ಅದು. ಬುಚ್ ಭೌತಿಕವಾಗಿ ದೂರವಾದನೇನೋ ಹೌದು, ಆದರೆ ಆತನ ನೆನಪನ್ನು ಆತನ ಊರು ಎಂದೆಂದೂ ಶಾಶ್ವತವಾಗಿರಿಸಬೇಕೆಂದು ಬಯಸಿತು. ಶಿಕಾಗೋ ವಿಮಾನ ನಿಲ್ದಾಣಕ್ಕೆ ಅದೇ ಕಾರಣಕ್ಕೆ ಬುಚ್ ಓ’ಹೇರ್‌ನ ಹೆಸರಿಡಲಾಯಿತು. ಅಲ್ಲಿನ ಟರ್ಮಿನಲ್ ಗೇಟ್ 1 ಮತ್ತು 2ರ ನಡುವೆ ಇಂದಿಗೂ ಅವನ ಪ್ರತಿಮೆ, ಸ್ಮಾರಕ ಇವೆ. ಅವನ ಕತೆ ಗೊತ್ತಿದ್ದರೆ, ಆ ದಾರಿ ದಾಟಿ ಹೋಗುವಾಗ ನಿಮ್ಮ ಕಣ್ಣು ಮಂಜಾಗುತ್ತದೆ; ಹೃದಯ ಮೆದುವಾಗುತ್ತದೆ. ದೇಶಕ್ಕಾಗಿ ಮಡಿದ ವೀರನಿಗೆ ಮನಸ್ಸು ಒಳಗಿಂದಲೇ ಒಂದು ಸೆಲ್ಯೂಟ್ ಹೊಡೆಯುತ್ತದೆ. ಅಂದ ಹಾಗೆ, ಬುಚ್ ಓ’ಹೇರ್, ಈಸೀ ಎಡ್ಡಿ ಎಂದೇ ಊರಿಡೀ ಹೆಸರಾಗಿದ್ದ ಎಡ್ವರ್ಡ್ ಜೋಸೆಫ್ ಓ’ಹೇರ್‌ನ ಏಕೈಕ ಪುತ್ರ.

Leave a Reply

Your email address will not be published. Required fields are marked *

fourteen + fourteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top