ಬಿಜೆಪಿ, ಕಾಂಗ್ರೆಸ್ ಸೋಲು-ಗೆಲುವಿಗೆ ನಾಯಕರೇ ಹೊಣೆ !

Posted In : ಅಂಕಣಗಳು, ಚಕ್ರವ್ಯೂಹ

ಮತದಾನದ ಪ್ರಕ್ರಿಯೆ ಅತ್ತ ಪೂರ್ತಿ ಮುಗಿದೇ ಇರಲಿಲ್ಲ, ಇತ್ತ ಟಿವಿ ಚಾನೆಲ್ಲುಗಳು ಎಂಟ್ಹತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ಹರವಿಕೊಂಡು ಕೂತಿದ್ದವು. ಅರ್ಧ ಸಮೀಕ್ಷೆಗಳು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊಮ್ಮುತ್ತದೆ ಎಂದರೆ ಇನ್ನರ್ಧ ಸಮೀಕ್ಷೆಗಳು ಕಮಲದ ಕೈ ಹಿಡಿದಿದ್ದವು. ಬೆಕ್ಕಿನ ತಲೆ ಮೇಲೆ ಹೊತ್ತಿಸಿಟ್ಟ ಹಣತೆಯಂತೆ ಅತ್ತಿತ್ತ ಹೊಯ್ದಾಡುತ್ತಿದ್ದ ಈ ಸಮೀಕ್ಷಾ ಫಲಿತಾಂಶಗಳನ್ನು ಮುಂದಿಟ್ಟುಕೊಂಡು ಚಾನೆಲ್ಲಿನವರು ಮಾಡುತ್ತಿದ್ದ ಚರ್ಚೆಯಲ್ಲಿ ಎದ್ದೆದ್ದುಬರುತ್ತಿದ್ದ ಪ್ರಶ್ನೆಗಳೆಂದರೆ ಯಾವ ಪಕ್ಷ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ? ಜೆಡಿಎಸ್ ಕಾಂಗ್ರೆಸ್ ಜತೆ ಇಲ್ಲ ಬಿಜೆಪಿಯತ್ತ ವಾಲುತ್ತದೋ? ಬಹುಮತಕ್ಕೆ ಬೇಕಾದಷ್ಟು ಮತಗಳು ಸಿಕ್ಕದೆ ಹೋದರೆ ಬಿಜೆಪಿ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಆಫರ್ ಮಾಡಬಹುದೇ? ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವ ಸಲುವಾಗಿಯೇ ಸಿದ್ದರಾಮಯ್ಯ ಈಗ, ತಾನೇ ಮುಖ್ಯಮಂತ್ರಿಯೆಂಬ ಘೋಷಣೆಯನ್ನು ಬದಿಗಿಟ್ಟು ಮೆತ್ತಗಾಗಿದ್ದಾರೆಯೇ? ಹೀಗೆ ಹಲವು ಪ್ರಶ್ನೆಗಳು ಮತದಾನ ನಡೆದ ಆ ದಿನದ ಸಂಜೆ ಟಿವಿಮಾಧ್ಯಮದಲ್ಲಿ ಚರ್ಚೆಗೊಳಪಟ್ಟವು.

ಎಲ್ಲವೂ ಸರಿಯೇ. ಆದರೆ ಎಲ್ಲರೂ ಬಹಳ ಮೂಲಭೂತವಾದ ಒಂದು ಪ್ರಶ್ನೆಯನ್ನೇ ಮರೆತುಬಿಟ್ಟಿದ್ದರು! ಅದೇನೆಂದರೆ ಈ ಪಕ್ಷಗಳಿಗೆ ತತ್ತ್ವ-ಸಿದ್ಧಾಂತ ಇವೆಯೇ? ಮೂರು ಕೊಟ್ಟರೆ ಸೊಸೆ ಕಡೆ, ಆರು ಕೊಟ್ಟರೆ ಅತ್ತೆ ಕಡೆ ಎಂಬಂಥ ಚೌಕಾಸಿ ಮಾಡುವುದೇ ಆಗಿದ್ದರೆ ಇವರೆಲ್ಲ ಮತದಾನಕ್ಕೆ ಮೊದಲು ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತೇಕೆ? ತಮ್ಮದು ಉಳಿದ ಪಕ್ಷಗಳಿಗಿಂತ ಭಿನ್ನ ಎಂದೇಕೆ ಇವರು ಬೊಂಬಡಾ ಹೊಡೆಯಬೇಕಿತ್ತು? ಯಾರು ಯಾರ ಜೊತೆಗಾದರೂ ಮಲಗುತ್ತಾರೆ, ಯಾರಿಗೆ ಯಾರೂ ಸೆರಗು ಹಾಸುತ್ತಾರೆ ಎಂದಾದರೆ ಯಾವ ಕರ್ಮಕ್ಕೆ ನಾವು ಚುನಾವಣೆಯೆಂಬ ಸಾವಿರಾರು ಕೋಟಿ ರುಪಾಯಿಗಳ ದುಂದುವೆಚ್ಚದ ನಾಟಕ ನಡೆಸಬೇಕು? ಎಲ್ಲಾ ಕಳ್ಳರು, ಲಫಂಗರು, ಫಟಿಂಗರುಗಳನ್ನು ಒಟ್ಟಾಗಿ ಬಂಡಲ್ ಮಾಡಿ ವಿಧಾನಸೌಧದತ್ತ ಒಗೆದು ನಾವು ಕೈ ತೊಳೆದುಕೊಳ್ಳಬಹುದಲ್ಲ? ಚುನಾವಣೆಯ ನಂತರ ಯಾವುದೇ ಎರಡು ಪಕ್ಷಗಳು ಹಸ್ತಲಾಘವ ಮಾಡಿಕೊಳ್ಳುತ್ತವೆ; ಹಾಸಿಗೆ ಹಂಚಿಕೊಳ್ಳುತ್ತವೆ ಎಂದಾದರೆ ಯಾವ ಕರ್ಮಕ್ಕೆ ರಾಜ್ಯದ ಐದು ಕೋಟಿ ಜನರನ್ನು ಮತದಾನದ ಹೆಸರಲ್ಲಿ ರೊಟ್ಟಿ ಬೇಯಿಸಬೇಕಿತ್ತು?

ಈ ಪ್ರಶ್ನೆ ಮುಖ್ಯ ಎಂದು ಯಾರಿಗೂ ಅನ್ನಿಸಿಲ್ಲವೆಂಬುದೇ ನಮ್ಮ ಪ್ರಜಾಪ್ರಭುತ್ವದ ದುರಂತ. ಪಕ್ಷಗಳಿಗೆ ಹೋಗಲಿ, ಚುನಾವಣೋತ್ತರ ಚರ್ಚೆ ನಡೆಸಿಕೊಡುತ್ತಿರುವ ಪತ್ರಕರ್ತರಿಗೆ ಕೂಡ ರಾಜಕಾರಣಿಗಳನ್ನು ಅಡ್ಡಗಟ್ಟಿ ಅವರ ಪ್ರಶ್ನಿಸಬೇಕು ಅನ್ನಿಸಿಲ್ಲ! ಯಾವ ಆಧಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತವೆ? ಯಾವ ವಾದ ಮುಂದಿಟ್ಟು ಜೆಡಿಎಸ್-ಬಿಜೆಪಿ ನಾಯಕರು ಪರಸ್ಪರ ಬೆನ್ನು ಸವರಿಕೊಳ್ಳುತ್ತಾರೆ? ಇವರಿಗ್ಯಾರಿಗೂ ನಾಚಿಕೆ ಮಾನ ಮರ್ಯಾದೆ ಇಲ್ಲವಾ? ಮತದಾನಕ್ಕೆ ಮುಂಚೆ ಚೇಳು ಘಟಸರ್ಪ ಎಂಬಂತೆ ಕಿತ್ತಾಡಿಕೊಂಡ, ಒಬ್ಬರ ಮೇಲೊಬ್ಬರು ಕೆಸರೆರಚಿಕೊಂಡ ಈ ಅತಿರಥರು ಅದ್ಯಾವ ಮುಖ ಇಟ್ಟುಕೊಂಡು ಈಗ ಒಂದಾಗುತ್ತಾರೆ? ಹಾಗಾದರೆ ಇವರು ಇಷ್ಟು ದಿನ ಜನರಿಗೆ ಮಂಕುಬೂದಿ ಎರಚಿದರೇ? ಅಥವಾ ಜನರನ್ನು ಕಳೆದ ಎಪ್ಪತ್ತು ವರ್ಷಗಳಿಂದಲೂ ಎರಚಿ ಮೋಸ ಮಾಡುತ್ತ ಬಂದಿರುವುದರಲ್ಲಿ ಇವರು ಮತ್ತೊಮ್ಮೆ ಯಶಸ್ವಿಯಾದರೆಂದು ಹೇಳಬೇಕೋ? ಇವನ್ನೆಲ್ಲ ಪತ್ರಕರ್ತರು ಕೇಳಬೇಕಿತ್ತು. ಚುನಾವಣೋತ್ತರ ಸಮೀಕ್ಷೆಗಳನ್ನು ಮುಂದಿಟ್ಟುಕೊಂಡೇ ಹೀಗೆಲ್ಲ ರಾಜಕೀಯ ಪಕ್ಷಗಳನ್ನು ಜಾಡಿಸುವ ಅವಕಾಶ ಪತ್ರಕರ್ತರಿಗೆ ಢಾಳಾಗಿತ್ತು. ಆದರೆ, ಅವರಿಗೆ ಕೂಡ ಮಂಪರು ಆವರಿಸಿದಂತಿದೆ.

ಮತ್ತೂ ತಮಾಷೆಯ ಸಂಗತಿ ಏನೆಂದರೆ ಮೂರೂ ಪಕ್ಷಗಳ ನಾಯಕರು ತಮ್ಮ ಪಕ್ಷಕ್ಕೆ ಬಿದ್ದ ವೋಟುಗಳೆಲ್ಲವೂ ತಮ್ಮ ಪರಿಶ್ರಮಕ್ಕೆ ಸಂದ ಫಲಶ್ರುತಿಯೆಂದೇ ಭಾವಿಸಿರುವುದು! ಬಿಜೆಪಿಯ ನೇತಾರರಾದ ಯಡಿಯೂರಪ್ಪ ಬಹುಮತ ಪಡೆಯುವ ಬಗ್ಗೆ ವಿಶ್ವಾಸವಿಟ್ಟಿರುವುದು ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕರೆಯುವ ದಿನವನ್ನು ಕೂಡ ಫಿಕ್‌ಸ್ ಮಾಡಿಬಿಟ್ಟಿದ್ದಾರೆ! ಕೂಸು ಹುಟ್ಟುವ ಮುಂಚೆಯೇ ಅದಕ್ಕೊಂದು ಇಂಜಿನಿಯರಿಂಗ್ ಸೀಟು ಕಾಯ್ದಿರಿಸುವಂಥ ತ್ವರೆ ಇದು!

ಬಿಜೆಪಿ 130ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೆ; ಉತ್ತರ ಪ್ರದೇಶದಲ್ಲಿ ಮಾಡಿದ ಮ್ಯಾಜಿಕ್ಕನ್ನು ಅದು ಕರ್ನಾಟಕದಲ್ಲಿ ಪುನರಾವರ್ತಿಸಲಿದೆ ಎಂದು ಕೆಲವು ಆಂತರಿಕ ಸಮೀಕ್ಷೆಗಳು ಹೇಳಿರುವುದರಿಂದ ಕೇಸರಿ ಪಾಳೆಯದ ನಾಯಕರಿಗೆ ಕಾಮನಬಿಲ್ಲು ಕಾಣಿಸತೊಡಗಿದೆ. ಆದರೆ, ಇವರು ನಿಜಕ್ಕೂ ಬಹುಮತಕ್ಕೆ ಬೇಕಾದ ಮ್ಯಾಜಿಕ್ ತಲುಪುತ್ತಾರೋ ಇಲ್ಲವೋ ಎಂಬುದು ಮೇ 15ರ ಮಧ್ಯಾಹ್ನದವರೆಗೂ ಗೊತ್ತಾಗುವುದು ಅನುಮಾನವೇ. ಯಾಕೆಂದರೆ ಬಿಜೆಪಿ ಈ ಬಾರಿ ಚುನಾವಣೆಯನ್ನೇನೋ ಭರ್ಜರಿಯಾಗಿ ಎದುರಿಸಿರಬಹುದು. ಆದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದ ಯಾವ ನಾಯಕರನ್ನೂ ನಂಬಿಕೂತಿರಲಿಲ್ಲ. ಅಸಲಿಗೆ ರಾಜ್ಯ ನಾಯಕರಿಗೆ ಯಾವೊಂದು ವಿಷಯದಲ್ಲೂ ಸ್ವಾತಂತ್ರ್ಯ ಕೊಡದೆ ಎಲ್ಲವನ್ನೂ ಶಾ-ಮೋದಿ ಜೋಡಿ ತಮ್ಮ ಕೈಯಲ್ಲಿಟ್ಟುಕೊಂಡಿತ್ತು. ಅವರಿಬ್ಬರು ನಿಗದಿಪಡಿಸಿದ ಜಾಗದಲ್ಲಿ, ನಿಗದಿಪಡಿಸಿದ ವಿಷಯದ ಮೇಲೆ ಭಾಷಣ ಮಾಡಿಕೊಂಡು ಬರುವುದಷ್ಟೇ ರಾಜ್ಯ ನಾಯಕರಿಗಿದ್ದ ಜವಾಬ್ದಾರಿ.

ರಾಜ್ಯದ ಅದೆಷ್ಟು ನಿಶ್ಚೇಷ್ಟಿತರಾಗಿದ್ದರೆಂದರೆ ಚುನಾವಣೆಗೆ ಇನ್ನೇನು ಕೇವಲ ಹತ್ತು ದಿನಗಳಿವೆ ಎನ್ನುವಾಗ ಪ್ರಧಾನಿ ಮೋದಿ ಬಿರುಗಾಳಿಯಂಥ ಪ್ರಚಾರ ಕೈಗೊಂಡರಲ್ಲ, ಅಲ್ಲಿಂದ ನಂತರವಷ್ಟೇ ಬಿಜೆಪಿ ರಾಜ್ಯನಾಯಕರ ಮುಖದಲ್ಲಿ ಸ್ವಲ್ಪ ನಗು, ಗೆಲುವು ಕಾಣಿಸಿಕೊಂಡದ್ದು! ಮೋದಿ ಮಾಡಿರುವ 21 ಪ್ರಚಾರ ಸಭೆಗಳೇ ಬಿಜೆಪಿಗೆ ಕಡಿಮೆಯೆಂದರೂ 25 ಸೀಟುಗಳನ್ನು ಹೆಚ್ಚುವರಿಯಾಗಿ ಗೆಲ್ಲಿಸಿಕೊಡಲಿವೆ ಎಂಬುದು ಸುಸ್ಪಷ್ಟ. ಕಳೆದ ಐದು ವರ್ಷಗಳಲ್ಲಿ ರಾಜ್ಯದ ಬಿಜೆಪಿಗೆ ಒಂದು ಸಮರ್ಥ ವಿರೋಧಪಕ್ಷವಾಗಿ ರೂಪುಗೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಅಧಿಕಾರದಲ್ಲಿದ್ದ ಸರಕಾರದ ಭ್ರಷ್ಟಾಚಾರವನ್ನು, ಕೆಟ್ಟ ಕಾಮಗಾರಿಯ ದೃಷ್ಟಾಂತಗಳನ್ನು, ಅಧಿಕಾರಿಗಳ ಉಡಾಫೆಗಳನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿಯ ನಿಷ್ಕ್ರಿಯತೆಯನ್ನು ಹೆಜ್ಜೆಹೆಜ್ಜೆಗೆ ಪ್ರಶ್ನಿಸಿ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಬಿಜೆಪಿ ಮಾಡಬಹುದಿತ್ತು.

ಆದರೆ, ಐದೂ ವರ್ಷಗಳುದ್ದಕ್ಕೂ ಆಡಳಿತಯಂತ್ರದ ಜೊತೆಗೆ ವಿರೋಧಪಕ್ಷದ ಗೊರಕೆಯೂ ಜೋರಾಗೇ ಕೇಳಿಸಿತು! ಇವರು ಇದ್ದಾರೋ ಇಲ್ಲವೋ ಎಂಬುದೇ ಜನರಿಗೆ ಗೊತ್ತಿರಲಿಲ್ಲ. ರಾಜ್ಯದಲ್ಲಿ ಆಗಾಗ ನಡೆಯುತ್ತಿದ್ದ ಹಿಂದೂ ಕಾರ್ಯಕರ್ತರ ಹತ್ಯೆಗಳ ಸಂದರ್ಭದಲ್ಲಿ ಒಂದೆರಡು ವಾರಗಳ ಮಟ್ಟಿಗೆ ಗದ್ದಲವೆಬ್ಬಿಸಿ ಕಿರುಚಾಡುವುದು ಬಿಟ್ಟರೆ ಬಿಜೆಪಿಗೆ ಬೇರೆ ಯಾವುದೇ ಇರಲಿಲ್ಲ. ಬಿಡಿ, ಆ ಹಿಂದೂ ಕಾರ್ಯಕರ್ತರ ಕೊಲೆಗಳ ತನಿಖೆಯನ್ನಾದರೂ ತೀವ್ರಗೊಳಿಸಲು ಸರಕಾರವನ್ನು ಒತ್ತಾಯಿಸುವ ಕೆಲಸವನ್ನು ಈ ವಿರೋಧಪಕ್ಷ ಮಾಡಲಿಲ್ಲ. ಪಕ್ಷದ ಒಂದಿಬ್ಬರು ರಾಜಕಾರಣಿಗಳು ಮಾಧ್ಯಮದ ಮೈಕು-ಕ್ಯಾಮೆರಾಗಳಿಗೆ ಮುಖ ತೋರಿಸುತ್ತಿದ್ದುದು ಬಿಟ್ಟರೆ ಬೇರೆ ಯಾರನ್ನೂ ಜನ ಐದು ವರ್ಷಗಳಲ್ಲಿ ನೋಡಲಿಲ್ಲ!

ಕಟ್ಟಾ, ಹಾಲಪ್ಪ, ರೇಣುಕಾಚಾರ್ಯ, ರಾಮದಾಸ್ ಮೊದಲಾದವರು ಕಳೆದೈದು ವರ್ಷದಲ್ಲಿ ಕೊಟ್ಟ ಒಂದೇ ಒಂದು ಹೇಳಿಕೆ, ಭಾಗವಹಿಸಿದ ಒಂದೇ ಒಂದು ಹೋರಾಟದ ಹೆಸರು ಹೇಳಿ ಎಂದರೆ ಜನ ಕಕ್ಕಾಬಿಕ್ಕಿಯಾದಾರು. ಕರಡಿಗಳು ಆರು ತಿಂಗಳು ದೀರ್ಘನಿದ್ರೆಗೆ ಜಾರುವಂತೆ ಬಿಜೆಪಿಯ ಮುಕ್ಕಾಲುವಾಸಿ ನಾಯಕರುಗಳೆಲ್ಲರೂ ಐದು ವರ್ಷಗಳ ಕಾಲ ಹೈಬರ್‌ನೇಷನ್‌ನಲ್ಲಿದ್ದರು. ಇಡೀ ಪಕ್ಷವೇ ಐದು ವರ್ಷಗಳ ಪರ್ಯಂತ ಕೋಮಾ ಸ್ಥಿತಿಯಲ್ಲಿತ್ತು. ವಿರೋಧಪಕ್ಷ ಬದುಕಿದೆಯೇ? ಉಸಿರಾಡುತ್ತಿದೆಯೇ? ಎಂದು ಜಾಲತಾಣಗಳಲ್ಲಿ ಮೇಲಿಂದ ಮೇಲೆ ಚರ್ಚೆಗಳಾಗುತ್ತಿದ್ದವು.

ಹೀಗೆ ನಿದ್ರಾವಸ್ಥೆಯಲ್ಲಿ ಉರುಳಾಡುತ್ತಿದ್ದ ರಾಜ್ಯಬಿಜೆಪಿಯನ್ನು ಅಮಿತ್ ಶಾ ಒಂದೆರಡು ಸಲ ಬಂದು ಎಬ್ಬಿಸಲು ಯತ್ನಿಸಿದರು. ತಿವಿದರು, ತುಳಿದರು, ಚಾಟಿ ಬೀಸಿದರು. ಊಹ್ಞೂ! ಈ ನಾಯಕರು ಯಾರೂ ಎದ್ದೇಳಲೇ ಇಲ್ಲ! ಎತ್ತು ಏರಿಗೆ, ನೀರಿಗೆ ಎನ್ನುವ ಹಾಗೆ ಪಕ್ಷದೊಳಗೇ ಇವರು ಇಪ್ಪತ್ತೊಂದು ಬ್ರಿಗೇಡುಗಳನ್ನು ಮಾಡಿಕೊಂಡು ಪಕ್ಷವನ್ನು ಅತ್ತಿತ್ತ ಎಳೆದಾಡುತ್ತಿದ್ದರು. ರೇಸಿನ ಗೂಳಿಯ ಬಾಲ ಕಚ್ಚಿ ಉಪ್ಪು ಸವರುವ ಹಾಗೆ ಅಮಿತ್ ಶಾ ಮತ್ತು ಮೋದಿ ಇಬ್ಬರಿಗೂ ಕರ್ನಾಟಕ ಬಿಜೆಪಿ ಎಂಬ ಮದವೇರಿದ ಗೂಳಿಯ ಬಾಲ ತಿರುಪಿ ತಿರುಪಿ ಕೈನೋವು ಬಂತೇ ವಿನಾ ಗೂಳಿ ಮಾತ್ರ ಹದಕ್ಕೆ ಸಿಗಲಿಲ್ಲ. ಚುನಾವಣೆಗೆ ಎರಡು ತಿಂಗಳಿದೆ ಎನ್ನುವಷ್ಟರಲ್ಲಿ ಶಾ ಕರ್ನಾಟಕದಲ್ಲಿ ಠಿಕಾಣಿ ಹೂಡಬೇಕಾಯಿತು. ಮದಗಜಗಳಂತಿದ್ದ ಒಬ್ಬೊಬ್ಬ ನಾಯಕರನ್ನೂ ತಿವಿದು ನೊಗ ಹೂಡಬೇಕಾಯಿತು. ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಹಂಬಲ ಮೋದಿ-ಶಾ ಇಬ್ಬರಿಗೆ ಬಿಟ್ಟರೆ ರಾಜ್ಯದ ಕಮಲ ನಾಯಕರಿಗೇನೂ ಇರಲಿಲ್ಲ ಎಂಬುದೇ ವಿಚಿತ್ರ!

ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಬಿಜೆಪಿ, ಚುನಾವಣೆ ಘೋಷಣೆಯಾದ ಮೇಲೆ ಗೆಲ್ಲುವ ಕುದುರೆಗಳ ತಲಾಶ್ ಮಾಡಿತು. ಎದ್ದುಬಂದವರು ಮತ್ತೆ ಅದೇ ಅದೇ ಹಳೆಮುಖಗಳೇ. ಕೈಯಲ್ಲಿ ನೂರಿನ್ನೂರು ಕೋಟಿ ರುಪಾಯಿ ಝಣಝಣ ಹಿಡಿದಿರುವ ಈ ಹಳೆಹುಲಿಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತೆ ಚುನಾವಣೆ ಎದುರಿಸಿತು. ಹರೀಶ್ ಪೂಂಜರಂಥ ಹೊಸನೀರು ಎಲ್ಲೋ ಇಲ್ಲಿ ಒಸರಿನಂತೆ ಜಿನುಗಿದ್ದುಬಿಟ್ಟರೆ ಮಿಕ್ಕಿದ್ದೆಲ್ಲವೂ ಹಳೆಹೆಗ್ಗಣಗಳದ್ದೇ ಸಾಮ್ರಾಜ್ಯ. ತಿಂದುಕೊಬ್ಬಿರುವ ಹಳೆನಾಯಕರನ್ನು ಬದಿಗಿಟ್ಟು ಹೊಚ್ಚಹೊಸ ಮುಖಗಳನ್ನು ಐದು ವರ್ಷಗಳಲ್ಲಿ ಬೆಳೆಸಿ, ಚುನಾವಣೆಯಲ್ಲಿ ಕಣಕ್ಕಿಳಿಸಿದ್ದರೆ ಬಿಜೆಪಿಯ ಅಡಿಪಾಯ ಮುಂದಿನ ಹತ್ತಿಪ್ಪತ್ತು ವರ್ಷಗಳ ಮಟ್ಟಿಗೆ ಕರ್ನಾಟಕದಲ್ಲಿ ಭದ್ರವಾಗುತ್ತಿತ್ತು. ಆದರೆ ಅಂಥ ಯಾವ ಪ್ರಯತ್ನವನ್ನೂ ಮಾಡದೆ ಅದು ತಾನೂ ಉಳಿದ ಪಕ್ಷಗಳಂತೆಯೇ ಎಂಬುದನ್ನು ತೋರಿಸಿಬಿಟ್ಟಿತು.

ಚುನಾವಣೆಯಲ್ಲಿ ಸೆಣಸಿದ ಎಲ್ಲ ಮುಖಗಳನ್ನೂ ಒಮ್ಮೆ ನೋಡುತ್ತಾ ಬನ್ನಿ. ಇವರಲ್ಲಿ ಹೊಸ ಮುಖಗಳು ಎಷ್ಟು? ಭರವಸೆಯ ಮುಖಗಳು ಎಷ್ಟು? ರಾಜ್ಯಕ್ಕೆ ಹೊಸದೇನನ್ನಾದರೂ ಮಾಡಬೇಕು ಎಂಬ ಉತ್ಸಾಹವಿರುವ ಮುಖಗಳು ಎಷ್ಟು? ಮತ್ತು ಸೀದ ಸಿಗಡಿಯಂತಿರುವ ಮುಖಗಳು ಎಷ್ಟು? ಮೂರೂ ಪಕ್ಷಗಳಲ್ಲೂ ಅದಾಗಲೇ ಐದಾರು ಸಲ ಚುನಾವಣೆ ಗೆದ್ದುಬಂದಿರುವ ಹಳೆ ಮುಖಗಳೇ ಗೋಚರಿಸುತ್ತಿವೆ. ಇವರೆಲ್ಲ ಮತ್ತೆ ಮತ್ತೆ ಗೆದ್ದುಬರುತ್ತಿರುವುದು ತಮ್ಮ ಕ್ಷೇತ್ರಗಳಲ್ಲಿ ಏನೋ ಸಾಧನೆ ಮಾಡಿ ಕಡಿದು ಕಟ್ಟೆಹಾಕಿದ್ದಾರೆ ಎಂಬ ಕಾರಣಕ್ಕಲ್ಲ. ಹೆಚ್ಚಿನ ಕ್ಷೇತ್ರಗಳಲ್ಲಿ ಜಾತಿಯೇ ಇನ್ನೂ ಚಲಾವಣೆಯಲ್ಲಿರುವ ನಾಣ್ಯ. ಸಾಧನೆ, ಅಭಿವೃದ್ಧಿ ಇವೆಲ್ಲ ಸೆಕೆಂಡರಿ.

ಇನ್ನು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆದ್ದುಬರುತ್ತಾರೆಂಬುದನ್ನು ಮುನಿರತ್ನ ನಾಯ್ಡು ಪ್ರಕರಣ ನೋಡಿ ಅರ್ಥ ಮಾಡಿಕೊಳ್ಳಬಹುದು. ಆರ್.ಆರ್. ನಗರದ ಮುನಿರತ್ನ ಚುನಾವಣಾ ಆಯೋಗದ ಕೈಯಲ್ಲಿ ಸಿಕ್ಕಿಬಿದ್ದು ಆರೋಪಿಯಾದರೆ, ಸಿಕ್ಕಿಬೀಳದೆ ಚಾಣಾಕ್ಷತೆ ಮೆರೆದ ಮುನಿರತ್ನರು ರಾಜ್ಯದಲ್ಲಿ ಹಲವರಿದ್ದಾರೆ. ಇವರೆಲ್ಲ ಯಥಾನುಶಕ್ತಿ ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರು, ನಿಕ್ಕರುಗಳನ್ನು ಹಂಚಿ; ಸಾರಾಯಿ ಕುಡಿಸಿ ಅಮಲೇರಿಸಿ; ಜೇಬಿಗೊಂದಿಷ್ಟು ದಕ್ಷಿಣೆ ಹಾಕಿ ಹೇಗೋ ಮತಗಳನ್ನು ಬಾಚಿಕೊಂಡು ಗೆದ್ದುಬರುವ ಕಲೆಯನ್ನು ಕರಗತ ಮಾಡಿಕೊಂಡವರು. ಈ ಭ್ರಷ್ಟತನಕ್ಕೆ ಪಕ್ಷ-ಸಿದ್ಧಾಂತಗಳ ಗಡಿ ಇಲ್ಲ. ಮೂರೂ ಪಕ್ಷಗಳಲ್ಲೂ ಕೂಳರು ಸಮಾನ ಸಂಖ್ಯೆಯಲ್ಲೇ ಇದ್ದಾರೆ.

ಕರ್ನಾಟಕದ ಚುನಾವಣೆ ಅಭಿವೃದ್ಧಿಯ ಚರ್ಚೆಯ ಆಧಾರದಲ್ಲಿ ನಡೆಯಬೇಕಿತ್ತು. ಅಧಿಕಾರಕ್ಕೆ ಬಂದ ಪಕ್ಷ ತನ್ನ ಪ್ರಣಾಳಿಕೆಯ ಎಷ್ಟು ಭರವಸೆ ಈಡೇರಿಸಿತು, ಎಷ್ಟನ್ನು ಕಸದ ಬುಟ್ಟಿಗೆ ಹಾಕಿತು ಎಂಬುದರ ಆಧಾರದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಅಂಥ ಯಾವ ಬೌದ್ಧಿಕ ಚರ್ಚೆಯೂ ನಡೆಯಲಿಲ್ಲ. ಅಭ್ಯರ್ಥಿಗಳನ್ನು ಆರಿಸುವಾಗ ಯಾವ ಪಕ್ಷವೂ ಸಿದ್ಧಾಂತ-ತತ್ತ್ವ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ ಏನು ಎಂದು ಪತ್ರಕರ್ತರು ಕೇಳಿದಾಗ ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಶಾ, ಬಹಳ ಸ್ಪಷ್ಟವಾಗಿ, ಗೆಲ್ಲುತ್ತಾರೋ ಇಲ್ಲವೋ ಎಂಬುದೇ ಮಾನದಂಡ ಎಂದು ಹೇಳಿಬಿಟ್ಟಿದ್ದರು. ಅಂದರೆ ಶತಾಯಗತಾಯ ಗೆಲ್ಲಬೇಕು; ಅದೊಂದೇ ಮುಖ್ಯ.

ಮಿಕ್ಕಿದ್ದೆಲ್ಲ ತೃಣಸಮಾನ ಎಂದು ಪಕ್ಷಗಳು ಪರದೆ ಮರೆಯಲ್ಲಲ್ಲ; ಖುಲ್ಲಂಖುಲ್ಲಾ ಒಪ್ಪಿಕೊಂಡುಬಿಟ್ಟಿದ್ದವು. ಕೈಯಲ್ಲಿ ಕನಿಷ್ಠ 10 ಕೋಟಿ ಇಲ್ಲದಾತ ಚುನಾವಣೆಯ ಕಣದಲ್ಲಿ ನಿಲ್ಲುವುದಕ್ಕೇ ಅನರ್ಹ ಎಂಬ ವಾತಾವರಣವನ್ನು ಮೂರೂ ಪಕ್ಷಗಳು ಸೃಷ್ಟಿಸಿಬಿಟ್ಟಿದ್ದವು. ಹಾಗಾಗಿ, ಆಯ್ಕೆಯಾಗಿ ಬರುವ ಹೊಸ ಶಾಸಕರುಗಳು ನಮ್ಮ ರಾಜ್ಯವನ್ನು ಸಿಂಗಾಪುರ ಮಾಡುತ್ತಾರೆಂದು ನಂಬುವುದು ಮೂರ್ಖತನವಾಗುತ್ತದೆ. ಬಿಜೆಪಿ ಗೆದ್ದರೆ ಈ ರಾಜ್ಯದ ಕಮಲ ನಾಯಕರ ವಿಜಯ ಖಂಡಿತ ಅಲ್ಲ. ಅದು ಮೋದಿಯ ಭಾಷಣ, ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ ಮತ್ತು ಕಾರ್ಯಕರ್ತರುಗಳ ನಿಸ್ವಾರ್ಥ ಕ್ಷೇತ್ರಕಾರ್ಯದ ಗೆಲುವು ಅಷ್ಟೆ. ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸೋತರೆ ಅದು ಮೋದಿಯ ಸೋಲು ಆಗುವುದಿಲ್ಲ; ರಾಜ್ಯದಲ್ಲಿ ಐದು ವರ್ಷಗಳುದ್ದಕ್ಕೂ ನಿದ್ದೆ ಮಾಡಿದ ರಾಜ್ಯ ನಾಯಕರ ವೈಫಲ್ಯ ಆಗುತ್ತದೆ.

ಒಬ್ಬ ಪ್ರಧಾನಿಯಾಗಿ, ಪಕ್ಷದ ರಾಷ್ಟ್ರನಾಯಕನಾಗಿ ಚುನಾವಣೆಯಲ್ಲಿ ತನ್ನ ಪಕ್ಷದ ಬಲೂನಿಗೆ ಎಷ್ಟೊಂದು ಪಂಪು ಹೊಡೆಯಬಹುದೋ ಮೋದಿ ಊದಿದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮೋದಿಯವರ ಚುನಾವಣಾ ಪ್ರಚಾರಗಳಿಲ್ಲದೇ ಹೋಗಿದ್ದರೆ ಬಿಜೆಪಿಯ ಸ್ಥಿತಿ ಜೆಡಿಎಸ್‌ಗಿಂತ ಉತ್ತಮವಾಗಿ ಏನೂ ಇರುತ್ತಿರಲಿಲ್ಲ. ಹಾಗೆಯೇ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಅದು ಸಿದ್ದರಾಮಯ್ಯನವರ ಭಂಡತನ, ಮೊಂಡುತನಗಳಿಗೆ ಜನ ಕೊಟ್ಟ ಉತ್ತರ ಎಂದು ಭಾವಿಸಬೇಕೇ ಹೊರತು ಅದರಲ್ಲಿ ರಾಹುಲ್ ಘಂಡಿಯ ಪಾತ್ರ ಬಹಳ ಕಡಿಮೆ. ಸಿದ್ದರಾಮಯ್ಯನವರು ಒಂದೇ ಒಂದು ವರ್ಗವನ್ನು ಮಾತ್ರ ಓಲೈಸಿದರು. ತನ್ನ ಇಡೀ ಸಚಿವಸಂಪುಟವೇ ರಾಜ್ಯವನ್ನು ಮೇಯ್ದು ಮೇಯ್ದು ಲದ್ದಿ ಸಿದ್ದರಾಮಯ್ಯ ಗೊಲ್ಲನಂತೆ ಎಲ್ಲೋ ಕೂತು ಕೊಳಲೂದುತ್ತ ಕಾಲ ಕಳೆದರು.

ತಪ್ಪಿತಸ್ಥರೆಂದು ಸಿಕ್ಕಿಬಿದ್ದ ಪ್ರತಿಯೊಬ್ಬ ಸಚಿವನನ್ನೂ ಎಸಿಬಿ ಮೂಲಕ ಬಚಾವ್ ಮಾಡಿದರು. ಭ್ರಷ್ಟರ ಹೆಗಲು ತಟ್ಟಿ ಪುರಸ್ಕರಿಸಿದರು; ಪ್ರಾಮಾಣಿಕರ ಕೊಲೆಗಳಾದಾಗ ಬಿಮ್ಮನೆ ಕೂತರು. ಆದ್ದರಿಂದ ಈ ಸಲ ಕಾಂಗ್ರೆಸ್ ಸೋತರೆ ಅದಕ್ಕೆ ಆಡಳಿತ ವಿರೋಧಿ ಅಲೆ ಎಂಬುದಕ್ಕಿಂತಲೂ ಸಿದ್ದರಾಮಯ್ಯ ವಿರೋಧಿ ಅಲೆಯೇ ಮುಖ್ಯ ಕಾರಣವಾಗುತ್ತದೆ. ಇನ್ನು, ಇವರಿಬ್ಬರನ್ನೂ ಬದಿಗಿಟ್ಟು ಕರ್ನಾಟಕದ ಜನ ಅಪ್ಪ-ಮಕ್ಕಳ ಪಕ್ಷ ಎಂದೇ ಬಿಂಬಿತವಾಗಿರುವ ಜೆಡಿಎಸ್ ಅನ್ನು 35-40 ಸೀಟುಗಳ ಆಸುಪಾಸಿಗೆ ತಂದು ನಿಲ್ಲಿಸಿದರೆ ಅದು ಈ ರಾಜ್ಯದ ಮತದಾರ ಇನ್ನೂ ಪ್ರಬುದ್ಧನಾಗದ್ದಕ್ಕೆ ಒಂದು ಸಂಕೇತ ಎಂದು ಭಾವಿಸಬೇಕಾಗುತ್ತದೆ. ಯಾಕೆಂದರೆ ಜೆಡಿಎಸ್ 40ರಷ್ಟು ಸ್ಥಾನ ಪಡೆದದ್ದೇ ಆದರೆ ಉಳಿದೆರಡು ಪಕ್ಷಗಳು 100ಕ್ಕಿಂತ ಕಡಿಮೆ ಸ್ಥಾನ ಪಡೆಯುತ್ತವೆಂದೇ ಲೆಕ್ಕ.

ಆಗ ಜೆಡಿಎಸ್ ಅವೆರಡರಲ್ಲಿ ತನಗೆ ಅನುಕೂಲವಾದ ಪಕ್ಷದ ಜೊತೆ ಮಾತುಕತೆಗೆ ಕೂರುತ್ತದೆ. ಎರಡು ಅವಕಾಶವಾದಿ ಪಕ್ಷಗಳು ಜೊತೆಯಾಗಿ ಕಾಮನ್ ಮಿನಿಮಮ್ ಪ್ರೋಗ್ರಾಮ್ ಅನ್ನು ರಚಿಸಿ ಅಧಿಕಾರ ಹಿಡಿಯುತ್ತವೆ. ತಮ್ಮ ಪ್ರಣಾಳಿಕೆಗಳಿಗೆ ಎಳ್ಳುನೀರು ಬಿಡುತ್ತವೆ. ಮತ್ತೆ ಸುಳ್ಳುಗಳ ಮಾಲೆಪಟಾಕಿಯನ್ನು ಐದು ವರ್ಷ ಪರ್ಯಂತ ಸಿಡಿಸುತ್ತ, ಜನರಿಗೆ ಮಂಕುಬೂದಿ ಎರಚುತ್ತ ಹೇಗೋ ಅಧಿಕಾರಾವಧಿ ನಡೆಸಿಹೋಗುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ, ಮತ್ತೆ ಮುಂದಿನ ಚುನಾವಣೆಗೆ ಸರತಿಸಾಲಿನಲ್ಲಿ ನಿಂತು ವೋಟಿಂಗ್ ಮೆಷಿನ್ನಿನ ಬಟನ್ ಒತ್ತುವುದು ಬಿಟ್ಟರೆ ಈ ಬಡ ಮತದಾರನಿಗೆ ಬೇರೆ ಆಯ್ಕೆಯೇ ಉಳಿಯದಂತೆ ಮಾಡುವುದರಲ್ಲೇ ರಾಜಕೀಯ ಪಕ್ಷಗಳ ಯಶಸ್ಸು ಅಡಗಿದೆ!

Leave a Reply

Your email address will not be published. Required fields are marked *

17 − sixteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top