ಕರೆಯುತಿಹುದು ನನ್ನ, ಮುಗಿಲು ತನ್ನ ಹತ್ತಿರ ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?

Posted In : ಅಂಕಣಗಳು, ಚಕ್ರವ್ಯೂಹ, ಸಂಗಮ

ಚುನಾವಣೆ ಎಂದರೇನು? ಯೇನಕೇನ ಪ್ರಕಾರೇಣ ಅಧಿಕಾರ ಹಿಡಿಯಲೇಬೇಕೆಂದು ಮೂರೂ ಬಿಟ್ಟ ರಾಜಕಾರಣಿಗಳು ಶರಂಪರ ಕಿತ್ತಾಡಿ ರಾಡಿ ಎಬ್ಬಿಸುವ ಮಹಾಮೇಳ. ಮಹಾಮಸ್ತಕಾಭಿಷೇಕ ಎಂದರೆ? ತನಗೆ ರಾಜ್ಯಾಧಿಕಾರ ಬೇಡ ಎಂದು ವೈರಾಗ್ಯ ತಾಳಿ, ಸುಖಸಂಪತ್ತುಗಳೆಲ್ಲವನ್ನೂ ಅಣ್ಣನ ಉಡಿಯಲ್ಲಿಟ್ಟು ದಿಟ್ಟನಾಗಿ ನೆಟ್ಟನೆ ನಡೆದು ಬೆಟ್ಟದಲ್ಲಿ ನಿಂತವನ ಶಿರಕ್ಕೆ ಹಾಲು, ಜೇನು, ಸಕ್ಕರೆ ಹುಯ್ಯುವ ಅರ್ಥಪೂರ್ಣ ಆಚರಣೆ. ಎರಡೂ ಘಟನೆಗಳು ಕರ್ನಾಟಕದಲ್ಲಿ ತಿಂಗಳ ಆಸುಪಾಸಿನಲ್ಲಿ ಒಟ್ಟೊಟ್ಟಿಗೆ ಸಂಭವಿಸುತ್ತಿರುವುದು ಮಾತ್ರ ಒಂದು ಕಾಕತಾಳೀಯ ವಿಪರ್ಯಾಸ!

ಬಾಹುಬಲಿಯ ಕತೆ ನಮಗೆಲ್ಲ ಗೊತ್ತು. ಆದಿ ತೀರ್ಥಂಕರ ವೃಷಭದೇವನ ಮಕ್ಕಳಾದ ಭರತ ಬಾಹುಬಲಿಯ ನಡುವೆ ನಡೆದ ಯುದ್ಧದ ಸಂಗತಿಯೂ ಗೊತ್ತು ನಮಗೆ. ವೃಷಭನಾಥರಿಗೆ ನೂರು ಜನ ಮಕ್ಕಳು. ಇಬ್ಬರು ಹೆಂಡಿರಲ್ಲಿ ಮೊದಲನೆಯಾಕೆಯ ಹೊಟ್ಟೆಯಲ್ಲಿ 98 ಮಂದಿ ಗಂಡುಮಕ್ಕಳು ಹುಟ್ಟಿದರೆ ಎರಡನೆಯವಳಿಗೆ ಹುಟ್ಟಿದವರು ಇಬ್ಬರು – ಒಂದು ಗಂಡು, ಒಂದು ಹೆಣ್ಣು. ಭರತನನ್ನು ಹೆತ್ತಾಕೆ ಪಟ್ಟಮಹಿಷಿಯಾದರೆ ಬಾಹುಬಲಿಯ ತಾಯಿ ಸವತಿ; ಕಿರಿಯಾಕೆ. ಒಂದು ದಿವ್ಯ ಗಳಿಗೆಯಲ್ಲಿ ವೃಷಭನಾಥನಿಗೆ ವೈರಾಗ್ಯ ಹುಟ್ಟಿತು; ರಾಜ್ಯಭಾರದ ಜವಾಬುದಾರಿಯನ್ನು ಮಕ್ಕಳ ಹೆಗಲಿಗೆ ಹಾಕಿ, ಆತ ಕಾಡಿಗೆ ನಡೆದೇಬಿಟ್ಟ. ಮಕ್ಕಳು ತಮ್ಮ ಪಾಲಿಗೆ ಬಂದದ್ದನ್ನು ಸಂತೃಪ್ತಿಯಿಂದ ನೋಡಿಕೊಂಡು ಆಳಿಕೊಂಡು ಸುಖವಾಗಿದ್ದರು. ಆದರೆ ಅವರಲ್ಲೊಬ್ಬನಾದ ಭರತನಿಗೆ ಮಾತ್ರ ಆಸೆಯ ಕುಡಿ ಒಡೆಯಿತು. ಒಡೆದ ಮೊಳಕೆ ದಾಂಗುಡಿಯಿಟ್ಟು ಮೈಮನಸ್ಸನ್ನೆಲ್ಲ ಹಬ್ಬಿತು. ಅಲೆಗ್ಸಾಂಡರಿನಿಗಿದ್ದಂಥ ಆಕಾಂಕ್ಷೆ ಭರತನಲ್ಲೂ ವ್ಯಾಪಿಸಿತು. ಷಟ್‌ಖಂಡಗಳನ್ನು ಗೆದ್ದುಬರಲು ಹೊರಟ.

ತನ್ನ ಯಂತ್ರಾಗಾರದಲ್ಲಿದ್ದ ಚಕ್ರರತ್ನವೆಂಬ ಅದ್ಭುತ, ಅಪಾಯಕಾರಿ ಅಸ್ತ್ರವನ್ನೂ ಚಕ್ರರತ್ನ ಹೋದಲ್ಲೆಲ್ಲ ರಾಜರು ಪ್ರತಿರೋಧವನ್ನೇ ತೋರದೆ ಶರಣಾದರು. ಭೂಮಂಡಲದ ಸಮಸ್ತ ಭಾಗಗಳೂ ಭರತನ ಮುಷ್ಟಿಯೊಳಗೆ ಕೂತವು. ಹಾಗೆ ದಿಗ್ವಿಜಯ ಹೊರಟವನು ಒಂದು ವೃತ್ತ ಪೂರ್ಣವಾಗಿಸುತ್ತ ವಾಪಸು ಬರುವಾಗ ತನ್ನ ತಮ್ಮಂದಿರನ್ನೂ ಬಿಡದೆ, ಶರಣಾಗಲು ತಿಳಿಸಿ, ಅವರ ರಾಜ್ಯಗಳನ್ನೂ ಬಾಚಿಕೊಂಡ. ಅಣ್ಣನಲ್ಲೇನು ಯುದ್ಧದ ಮಾತು ಎಂದು ಅವರೆಲ್ಲರೂ ತಂತಮ್ಮ ರಾಜ್ಯಗಳನ್ನು ಬಿಟ್ಟುಕೊಟ್ಟು ಅಪ್ಪಯ್ಯನಾದ ವೃಷಭನಾಥನ ಬಳಿಗೆ ಮುಕ್ತಿಮಾರ್ಗದ ಪಥಿಕರಾಗಿ ಹೋಗಿಬಿಟ್ಟರು. ಆದರೆ ಅಣ್ಣನ ಸೊಕ್ಕು ಮುರಿಯಲು ನಿಂತಿದ್ದನೊಬ್ಬ ತಮ್ಮ – ರಾಜ್ಯವನ್ನು ಧಾರೆಯೆರೆದವನು ತಂದೆ. ಅದರಲ್ಲಿ ಈ ಭರತನದೇನು ಪುಕಾರು? ಪುರುದೇವಂ ದೇವದೇವಂ ಕುಡೆ ಪಡೆದ ನೆಲಕ್ಕಾರೊಳುಂ ಪಂಥಮುಂಟೇ? ಅವನು ಕೇಳಿದನೆಂದು ತರ್ಪಣ ಕೊಟ್ಟುಬಿಡಲು ನಾನು ಉಳಿದ ತಮ್ಮಂದಿರಂತಲ್ಲ; ಗೆಲ್ಲುವ ಆಸೆಯಿದ್ದರೆ ಗೆದ್ದು ಪಡೆಯಲಿ! ಬಾಹುಬಲಿ ಹೂಂಕರಿಸಿದ.

ಇಬ್ಬರ ದೈತ್ಯಸೈನ್ಯಗಳು ಹೋರಿ ಸಾವಿರಸಂಖ್ಯೆಯ ಸೈನಿಕರು ಹತರಾಗುವ ಬದಲು, ಅಣ್ಣತಮ್ಮ ಇಬ್ಬರೇ ಹೋರಲಿ; ಗೆದ್ದವರು ಚಕ್ರವರ್ತಿಗಳಾಗಲಿ ಎಂಬ ವ್ಯವಸ್ಥೆಯಾಯಿತು. ಅದರಂತೆ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಾದವು. ಮೂರರಲ್ಲೂ ಗೆದ್ದವನು ಕಿರಿಯನಾದ ಬಾಹುಬಲಿಯೇ! ಮಲ್ಲಯುದ್ಧದ ತನ್ನಣ್ಣನನ್ನು ಎತ್ತಿಹಿಡಿದಿದ್ದ ಬಾಹುಬಲಿ, ಹಾಗೇ ಆ ದೇಹವನ್ನು ತಿರುಗಿಸಿ ಬಿಸುಟಿದ್ದರೆ ಅಥವಾ ನೆಲಕ್ಕೆ ಒಗೆದಿದ್ದರೆ… ಆ ಕ್ಷಣದಲ್ಲೇ ಸಮಸ್ತ ಭೂಮಂಡಲದ ಮಹಾಚಕ್ರವರ್ತಿಯಾಗಿಬಿಡಬಹುದಿತ್ತು. ಆದರೆ ಆ ಸಂದರ್ಭದಲ್ಲೇ ಬಾಹುಬಲಿಗೆ ಅವರ್ಣನೀಯ ಮನೋಕ್ಲೇಶ ಆವರಿಸಿಕೊಂಡುಬಿಟ್ಟಿತು. ರಾಜ್ಯಕ್ಕಾಗಿ ಮಣ್ಣು ತಿನ್ನುವ ಕೆಲಸ ಮಾಡಿದೆನಲ್ಲಾ! ಸ್ವಂತ ಅಣ್ಣನನ್ನೇ ಎತ್ತಿ ನೆಲಕ್ಕೊಗೆಯುವ ದುಸ್ಸಾಹಸಕ್ಕೆ ಇಳಿದುಬಿಟ್ಟೆನಲ್ಲಾ! ಮನುಷ್ಯತ್ವವನ್ನು ಮರೆತು ಮೃಗವಾಗಿಬಿಟ್ಟೆನಲ್ಲ!

ಯೋಚಿಸಿ ಕುಗ್ಗಿದ ಬಾಹುಬಲಿ ಅಣ್ಣನನ್ನು ತಲೆಮೇಲಿಂದ ನಿಧಾನವಾಗಿ ಇಳಿಸಿ ನೆಲದ ಮೇಲೆ ನಿಲ್ಲಿಸಿದ. ಮದಗಜವೊಂದು ಮರವನ್ನು ಎತ್ತಿ ಸುತ್ತಿದರೆ ಹೇಗೋ ಹಾಗೆ ತಮ್ಮನಿಂದ ಊರ್ಧ್ವಮೂಲನಾಗಿ ಗಾಳಿಯಲ್ಲಿ ಕೈಕಾಲು ಬಡಿಯುತ್ತಿದ್ದ ಭರತನಿಗೆ, ನೆಲದಲ್ಲಿ ನಿಂತನೋ ಇಲ್ಲವೋ, ಮತ್ತೆ ಪೌರುಷ ಹೆಡೆಬಿಚ್ಚಿತು. ತನ್ನ ಚಕ್ರರತ್ನವನ್ನು ಅವನು ಬಾಹುಬಲಿಯ ಮೇಲೆ ಪ್ರಯೋಗಿಸಿದ. ಆದರೆ ಚಕ್ರ ಬಾಹುಬಲಿಯ ಕತ್ತು ಕತ್ತರಿಸುವ ಬದಲಿಗೆ ಆತನಿಗೊಂದು ಸುತ್ತು ಹಾಕಿ ಬಲಭಾಗದಲ್ಲಿ ನಿಂತು ನೆಲಕ್ಕೆ ಬಿದ್ದುಬಿಟ್ಟಿತು. ನೆರೆದು ನೋಡುತ್ತಿದ್ದ ಜನಸ್ತೋಮ ಹೋ ಎಂದು ಬೊಬ್ಬೆಹೊಡೆಯಿತು. ಭರತನಿಗೆ ಅವಮಾನವಾಯಿತು. ತಮ್ಮನ ಕೈಯಲ್ಲಿ, ಸಮಸ್ತ ಸಾಮ್ರಾಜ್ಯದ ಜನಸಾಗರದೆದುರಲ್ಲಿ ಪರಾಜಿತನಾಗಿ ಎಂಬ ರೋಷದಿಂದ ಅವನು ಹಲ್ಲು ಮಸೆದ. ಮುಂದೆ ಬಾಹುಬಲಿ ತನ್ನ ರಾಜ್ಯವನ್ನು ಅಣ್ಣ ಭರತನಿಗೆ ಬಿಟ್ಟುಕೊಟ್ಟು ತಾಪಸಿಯಾದದ್ದು, ನಿಂತಲ್ಲೇ ಕಾಯೋತ್ಸರ್ಗ ಭಂಗಿಯಲ್ಲಿ ನಿಂತು ತಪ್ಪಸ್ಸಾಚರಿಸಿ ಮೋಕ್ಷ ಪಡೆದದ್ದು, ಭರತ ಹಲವಾರು ವರ್ಷಗಳ ಕಾಲ ರಾಜ್ಯವನ್ನಾಳಿ, ಬಾಹುಬಲಿಯ ರಾಜ್ಯವಾಗಿದ್ದ ಪೌದನಪುರದಲ್ಲಿ 525 ಬಿಲ್ಲುಗಳೆತ್ತರದ ಬಂಗಾರದ ಪ್ರತಿಮೆಯೊಂದನ್ನು ಮಾಡಿಸಿ ಬಾಹುಬಲಿಗೆ ಗೌರವ ಸೂಚಿಸಿದ್ದು, ಮತ್ತು ಕೊನೆಗೆ ತಾನೂ ಮೋಕ್ಷಸಾಧನೆಗಾಗಿ ವಿರಾಗಿಯಾಗಿದ್ದು – ಇವಿಷ್ಟು ಜನಜನಿತವಾಗಿರುವ ಕತೆ.

ಸಿಹಿಪದಾರ್ಥಗಳನ್ನು ಜೀವನವೆಲ್ಲ ತಿಂದವನಿಗೆ ಸಕ್ಕರೆಯ ವಿರಕ್ತಿ ಹುಟ್ಟುವಂತೆ ಹಲವು ವರ್ಷಗಳ ಪರ್ಯಂತ ಅಧಿಕಾರ ಅನುಭವಿಸಿದವನಿಗೆ ಅದರ ಮೇಲಿನ ಮೋಹ ಇಳಿಯುವುದು ಸಹಜ ಎಂದು ನಾವು ಭಾವಿಸುವುದೇನೋ ಸಹಜವೇ. ಆದರೆ, ಹಾಗೆ ಹುದ್ದೆ-ಅಂತಸ್ತುಗಳನ್ನು ಅನುಭವಿಸಿದ್ದು ಸಾಕು ಎನ್ನಿಸಿ ಅಧಿಕಾರಪರಾಙ್ಮುಖನಾದ ಒಬ್ಬ ರಾಜಕಾರಣಿಯನ್ನೂ ನಾವು ಕಾಣುತ್ತಿಲ್ಲವಲ್ಲ ಎಂಬುದು ಮಾತ್ರ ಅಚ್ಚರಿಯ ಸಂಗತಿ! ಅಧಿಕಾರ ಅನುಭವಿಸಿದವರಿಗೆಲ್ಲ ಮತ್ತಷ್ಟು ಇನ್ನಷ್ಟು ಮಗದಷ್ಟು ಮೊಗೆದಷ್ಟೂ ಬೇಕು ಎನ್ನಿಸುವ ಈ ಕಾಲದಲ್ಲಿರುವ ನಮಗೆ ಬಾಹುಬಲಿಯ ತ್ಯಾಗ ಎಷ್ಟು ದೊಡ್ಡದು ಎಂಬ ಅಂದಾಜು ಬಹಳ ಆದೀತು. ಭರತ – ಬಾಹುಬಲಿಗಳ ಕತೆಯನ್ನು ಜೈನಪುರಾಣಗಳಲ್ಲಿ ಬಹಳ ಹಿಂದೆಯೇ ದಾಖಲಿಸಲಾಗಿದ್ದರೂ ನಮಗೆ ಸಿಗುವ ಅತಿ ಹಳೆಯ ದಾಖಲೆಗಳೆಂದರೆ ಕವಿಪರಮೇಷ್ಠಿಯ ಮಹಾಪುರಾಣ ಮತ್ತು ಜಿನಸೇನನ ಪೂರ್ವಪುರಾಣ ಎಂಬೆರಡು ಕಾವ್ಯಗಳು. ಇಲ್ಲಿ ಸಣ್ಣರೂಪದಲ್ಲಿ ಬಂದಿರುವ ಕತೆಯನ್ನೇ ಹಿಗ್ಗಿಸಿ ಬನವಾಸಿಯ ಪಂಪ ಆದಿಪುರಾಣವನ್ನು ಬರೆದ; ಮೂಡಬಿದ್ರೆಯ ರತ್ನಾಕರವರ್ಣಿ ಭರತೇಶ ವೈಭವ ರಚಿಸಿದ. ಇಬ್ಬರ ಕಾವ್ಯಧೋರಣೆಗಳು, ಆಶಯಗಳು ಸ್ವಲ್ಪ ಭಿನ್ನವೇ ಆಗಿವೆ.

ಭರತನ ಸೊಕ್ಕು ಮುರಿದು, ಅಹಂಕಾರ ಕಳೆದು, ವಿವೇಕವನ್ನು ಮೂಡಿಸಿದ ಮಹಾಮೂರ್ತಿಯಾಗಿ ಪಂಪನ ಕಾವ್ಯದಲ್ಲಿ ಬಂದರೆ ರತ್ನಾಕರವರ್ಣಿಗೆ ಹಾಗೆ ಭರತನನ್ನು ಕೃಷ್ಣಛಾಯೆಯಲ್ಲಿ ಬಿಂಬಿಸುವುದು ಅಷ್ಟೊಂದು ಇಷ್ಟವಾಗಲಿಲ್ಲವೇನೋ. ಹಾಗಾಗಿ ಆತ ಸೋದರರಿಬ್ಬರ ನಡುವೆ ಕಾಳಗವನ್ನೇ ಮಾಡಿಸದೆ, ಭರತನ ಮರ್ಯಾದೆ ರಕ್ಷಿಸಿದ್ದಾನೆ! ಭರತ ಸೋಲುವವನಲ್ಲ; ಸೋಲಲೂ ಇಲ್ಲ; ಆದರೆ ಅವನ ಅಂತಃಕರಣ ಸೋತಿತು ಎಂಬ ಭಿನ್ನ ಆಯಾಮ ತಂದು ರತ್ನಾಕರವರ್ಣಿ ಕಥೆಗೆ ಹೊಸರೂಪ ಕೊಡುತ್ತಾನೆ.
ಭರತ ಭೂಮಂಡಲದ ಎಲ್ಲ ಆರು ಖಂಡಗಳನ್ನೂ ಗೆದ್ದು ವಾಪಸು ಬರುತ್ತಿರುವಾಗ ವೃಷಭಾಚಲಕ್ಕೆ ಬಂದನಂತೆ. ಅವನ ಹಿಂದುಮುಂದಿನ ಗೊತ್ತಿರುವ ಚರಿತ್ರೆಯಲ್ಲೆಲ್ಲೂ ದಿಗ್ವಿಜಯಗೈದವರು ಯಾರೂ ಇರಲಿಲ್ಲ. ಶತಕೋಟಿ ಕಲ್ಪಗಳಲ್ಲಿ ಹಿಂದೆ ಅಂಥ ಹಲವು ರಾಜರು ಬಂದುಹೋಗಿದ್ದರೂ ಅವರ್ಯಾರ ಹೆಸರುಗಳೂ ಭರತನ ಕಾಲದಲ್ಲಿ ಚಾಲ್ತಿಯಲ್ಲಿರಲಿಲ್ಲ. ಭರತ ಬಂದ, ವೃಷಭಾಚಲದ ಬೆಟ್ಟವನ್ನು ಕಂಡ. ಅಷ್ಟರಲ್ಲಿ ಅವನ ಮನಸ್ಸಿನಲ್ಲಿ ಒಂದು ಕನಸು ಮೂಡಿತು. ಆ ಬೆಟ್ಟದ ಮೇಲೆ ತನ್ನ ಹೆಸರನ್ನು ದೊಡ್ಡದಾಗಿ ಕೆತ್ತಿಸಬೇಕು ಎಂದು! ಷಟ್‌ಖಂಡಗಳನ್ನು, ಅರ್ಥಾತ್ ಇಡೀ ಪ್ರಪಂಚವನ್ನೇ ಗೆದ್ದುಬಂದಿರುವ ತನ್ನ ಹೆಸರನ್ನು ಬೆಟ್ಟದ ಬಂಡೆಯಲ್ಲಲ್ಲದೆ ಮತ್ತೆಲ್ಲಿ ಕೆತ್ತಿಸಬೇಕು? ಕೂಡಲೇ ತನ್ನ ಪರಿವಾರದವರನ್ನು ಕರೆದ.

ಬೆಟ್ಟಕ್ಕೆ ಹೋಗಿ ತನ್ನ ಹೆಸರು ಕೆತ್ತಿ ಎಂದ. ಅವರು ಅಲ್ಲಿಗೆ ಹೋಗಿ, ವಾಪಸು ಬಂದರು. ಬಂದು ಹೇಳಿದರು: ಸ್ವಾಮಿ, ಆ ಬೆಟ್ಟದ ತುಂಬ ಹಿಂದೆ ಷಟ್ಖಂಡ ಗೆದ್ದವರ ಹೆಸರುಗಳನ್ನು ಬರೆದು ಆ ಬೆಟ್ಟ ತುಂಬಿಹೋಗಿದೆ! ನಿಮ್ಮ ಹೆಸರು ಬರೆಯಲಿಕ್ಕೆ ಅಲ್ಲಿ ಸ್ಥಳ ಇಲ್ಲ! ಭರತನಿಗೆ ಕೋಪ ಉಕ್ಕೇರಿತು. ಹಾಗೆಂದರೆ ಹೇಗೆ! ಈ ದಿಗ್ವಿಜಯ ಹೊಚ್ಚಹೊಸತು. ಬರೆಯಲಿಕ್ಕೆ ಸ್ಥಳ ಇಲ್ಲದಿದ್ದರೆ ಯಾರದ್ದಾದರೂ ಹೆಸರು ಅಳಿಸಿ ನನ್ನ ಹೆಸರು ಬರೆಯಿರಿ! ಆಗ ಹೇಳಿದರು: ಹಾಗೆ ಮಾಡಿದರೆ ಅದು ಹೊಸ ದಾಖಲೆ ಆಗುತ್ತದೆ! ಅಂದರೆ ಹಿಂದಿನ ಸಾಧಕರ ಹೆಸರು ಅಳಿಸಿ ತಮ್ಮ ಹೆಸರು ಹಾಕುವ ಹೊಸಬಗೆಯ ದಾಖಲೆ ಆಗುತ್ತದೆ ಅದು! ಭರತನ ಆ ಕಾಲದ ಆ ಪ್ರಚಾರದ ತೆವಲನ್ನು ಈಗಿನ ನಮ್ಮ ರಾಜಕಾರಣಿಗಳಿಗೆ ಹೋಲಿಸಿ ನೋಡಿ. ಆ ಕಾವ್ಯಸಂದರ್ಭ ಈ ಕಾಲಕ್ಕೂ ಅದೆಷ್ಟು ಪ್ರಸ್ತುತ ಎಂಬುದು ಅರಿವಾದೀತು. ನಮ್ಮ ರಾಜಕಾರಣಿಗಳಿಗೆ, ದೇಶದಲ್ಲಿ ತಮ್ಮಿಂದ ಕಿಂಚಿತ್ತಾದರೂ ಸಾಧನೆ ಆಗುತ್ತದೋ ಬಿಡುತ್ತದೋ, ಹೆಸರು ಮಾತ್ರ ಅಮೃತಶಿಲೆಯಲ್ಲಿ ತಮ್ಮ ಹೆಸರು, ಫೋಟೋ ಬ್ಯಾನರ್‌ಗಳಲ್ಲಿ ರಾರಾಜಿಸಬೇಕು.

ಹೊಸ ಬ್ಯಾನರ್ ಕಟ್ಟಲು ಜಾಗ ಇಲ್ಲವಾದರೆ ಹಳೆಯದನ್ನು ಕಿತ್ತಾದರೂ, ಅನ್ಯಪಕ್ಷದವರದ್ದನ್ನು ಹರಿದಾದರೂ ಇವರದ್ದನ್ನು ಮೆರೆಸಬೇಕು. ಭರತ ಬಾಹುಬಲಿಯಿಂದ ಸೋತದ್ದಕ್ಕೆ, ಬಾಹುಬಲಿಯ ಮಹತ್ತಿನ ನೆಪದಲ್ಲಿ ಕತೆಯ ಮೂಲಕವಾದರೂ ನಮ್ಮ ನೆನಪಲ್ಲಿ ಉಳಿದಿದ್ದಾನೆ. ಸೋಲುವ ಪ್ರಸಂಗ ಬರದೇಹೋಗಿದ್ದರೆ ಅವನ ನೆನಪನ್ನು ಇಂದಿನ ಜಮಾನದವರು ಮಾಡುತ್ತಿದ್ದರೆ? ಭರತ ವೃಷಭಾಚಲದ ಬೆಟ್ಟದ ಬಂಡೆಯ ಮೇಲಿನ ಒಂದು ಪದಮಾತ್ರನಾಗಿ ಇತಿಹಾಸದಲ್ಲಿ ಉಳಿದುಹೋಗುತ್ತಿದ್ದನೋ ಏನೋ!
ಭರತನದ್ದು ಆಸೆಬುರುಕತನವಾದರೆ ಬಾಹುಬಲಿಯದ್ದು ವೈರಾಗ್ಯದ ಆತನಿಗೆ ವೈರಾಗ್ಯ ಹುಟ್ಟಿದ್ದು ಹೇಗೆ? ಯಾವ ಕ್ಷಣದಲ್ಲಿ? ತನ್ನ ಮೇಲೆ ತನಗೇ ಜಿಗುಪ್ಸೆ ಬಂದು ವೈರಾಗ್ಯ ಹುಟ್ಟಿತೆ? ಅಥವಾ ಅಣ್ಣನ ಭೂಮಿಯ ಮೇಲಿನ ಆಶೆಬುರುಕತನ ಕಂಡು ಹೇಸಿಗೆಯಾದಾಗ ಆ ಭಾವನೆಯ ಬೈಪ್ರಾಡಕ್‌ಟ್ ಆಗಿ ವೈರಾಗ್ಯ ಬಂತೆ? ಪಂಪ, ಬಾಹುಬಲಿಯ ಮನಸ್ಸಿನೊಳಗಾಗುತ್ತಿದ್ದ ಎಲ್ಲ ತಾಕಲಾಟಗಳಿಗೆ ಸರ್ಚ್‌ಲೈಟ್ ಹಿಡಿಯುವ ಕೆಲಸವನ್ನು ಕಾವ್ಯದಲ್ಲಿ ಮಾಡಿದ್ದಾನೆ.

ಕಳೆದಿಡುವುದೆ ಕಷ್ಟಂ ಭೂ
ತಳರಾಜ್ಯವಿಮೋಹಮಚಿರರುಚಿ ಸಂಚಳಮಿಂ
ತಳವುಗಿಡಿಸಿದುದು ಮನುಕುಲ
ತಿಳಕನುಮಂ ಖಳಮಹೀಶರುಳಿದವರಳವೇ
ಎಂಬ ಮಾತುಗಳನ್ನು ಬಾಹುಬಲಿಯ ನಾಲಗೆಯಿಂದ ನಾಡೋಜ ಪಂಪ. ಭರತನಿಗೆ ತಲೆಬಾಗಲು ಕೇಳದೆ ಯುದ್ಧಕ್ಕಿಳಿಯುವ ಬಾಹುಬಲಿ, ಯುದ್ಧದಲ್ಲಿ ಗೆದ್ದರೂ, ರಾಜ್ಯಕ್ಕಾಗಿ ಅಣ್ಣ ಮಾಡಲೆಳಸಿದ ಅಕಾರ್ಯವನ್ನು ನೋಡಿ ವೈರಾಗ್ಯ ತಾಳುತ್ತಾನಂತೆ. ಭೂಮಿ-ರಾಜ್ಯಗಳಿಗಾಗಿ ಅಣ್ಣತಮ್ಮಂದಿರೇ ಕಿತ್ತಾಡಿಕೊಂಡೆವಲ್ಲ! ತೀರ್ಥಂಕರನ ಮಗ ಭರತ; ಅವನ ಮನಸ್ಸಿನೊಳಗೂ ತಮ್ಮನನ್ನು ಚಕ್ರದಿಂದ ತುಂಡರಿಸಬೇಕು ಎಂಬ ಭಾವನೆಯನ್ನು ಮೂಡಿಸಿಬಿಟ್ಟಿತಲ್ಲ ಈ ಮಣ್ಣಿನಾಸೆ! ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತಲೇ ಬಾಹುಬಲಿ ವಿರಾಗಿಯಾಗಿಬಿಟ್ಟ. ಅಂದರೆ ಅವನಲ್ಲಿ ಮನಃಪರಿವರ್ತನೆಯಾಗಲು ಭರತನ ಹುಂಬತನವೇ ಮುಖ್ಯ ಕಾರಣ ಎಂದಾಯಿತು. ಒಂದು ಗಳಿಗೆಯ ಹಿಂದೆ ತಮ್ಮನ ಕೈಯಲ್ಲಿ ಅಸಹಾಯಕನಾಗಿ ಗಾಳಿಯಲ್ಲಿ ನಿಂತಿದ್ದ ಭರತ, ನೆಲಕ್ಕೆ ಕಾಲು ಕೊಡುವುದೇ ತಡ, ದೃಢವಾಗಿ ನಿಂತು ಚಕ್ರರತ್ನ ಎಸೆದು ತಮ್ಮನ ಜೀವ ತೆಗೆಯಲು ನೋಡಿದ!

ಮನುಷ್ಯ ಅಧಿಕಾರಕ್ಕಾಗಿ ಅದೆಂಥ ಅತಿಗೂ ಹೋಗಬಲ್ಲನೆಂಬ ತಥ್ಯ ಬಾಹುಬಲಿಗೆ ಆ ಕ್ಷಣದಲ್ಲಿ ಹೊಳೆಯಿತು; ಜ್ಞಾನೋದಯವಾಯಿತು. ರಾಜ್ಯಶ್ರಿಯ ವ್ಯಾಮೋಹ ಬಲು ಅಪಾಯಕರ. ಅದು ಸೋದರರನ್ನು ಕಾದಿಸುತ್ತದೆ; ಅಪ್ಪ-ಮಕ್ಕಳ ಮಧ್ಯೆ ಬಿರುಕು ಹುಟ್ಟಿಸುತ್ತದೆ; ಸಂಬಂಧಿಗಳ ಮಧ್ಯೆ ಕೋಪವನ್ನು ಉತ್ಪಾದಿಸುತ್ತದೆ. ಇಂಥ ಹೆಣ್ಣಿನ ಸಹವಾಸ ತನಗೆ ಬೇಕೇ? ಬೇಡ ಎಂದು ನಿಶ್ಚಯಿಸಿ ಬಾಹುಬಲಿ ತನ್ನ ರಾಜ್ಯವನ್ನು ಭರತನ ಉಡಿಗೆ ಹಾಕಿದ. ಸುಮ್ಮನೇ ಹಾಕುವುದಿಲ್ಲ. ಹೇಳುತ್ತಾನೆ: ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಂ ಈ ಭಟಖಡ್ಗಮಂಡಲೋತ್ಪಲವನವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ.. ಅಂದರೆ, ಎಲಾ, ಎಷ್ಟು ಜನ ರಾಜರ ಖಡ್ಗದ ತುದಿಯ ಮೇಲೆ ಕುಣಿದು ಕುಣಿದು ನಿನ್ನ ಸರತಿ ಬಂತಲ್ಲಾ! ನೀನೂ ಉರುಳಿದ ಮೇಲೆ ಇನ್ನೊಬ್ಬರ ಕಡೆಗೆ ಹೋಗುತ್ತಾಳಾಕೆ! ಅಂಥ ಚಂಚಲೆಯ ಸಖ್ಯ ನನಗೆ ಬೇಕಾಗಿಲ್ಲ, ನಿನಗಿರಲಣ್ಣ! – ಎಂದು ಅರ್ಥ.

ಅದೆಂಥ ಹೃದಯಭೇದಕ ಸತ್ಯವನ್ನು ಅಷ್ಟು ನಿರ್ವಿಣ್ಣತೆಯಿಂದ ಹೇಳುತ್ತಾನೆ ಬಾಹುಬಲಿ! ಅಷ್ಟೇ ಏನು? ಮುಂದುವರಿದು ಹೇಳುತ್ತಾನೆ: ಭೂವಲಯಮನ್ – ಅಯ್ಯನಿತ್ತುದುಮನ್ – ಆಂ ನಿನಗಿತ್ತೆನ್ ಇದೇವುದಣ್ಣ! ನೀನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗಳ್ತೆ ಮಾಸದೇ! ಅಂದರೆ: ಒಂದೇ ಹೆಣ್ಣಿನ ಮೇಲೆ ದೊಡ್ಡ ಮನೆತನದ ಇಬ್ಬರು – ಅಣ್ಣತಮ್ಮಂದಿರು ಕಣ್ಣಿಟ್ಟರು ಎಂದರೆ ಅವರನ್ನು ಮನುಷ್ಯರು ಎಂದು ಕರೆಯಬಹುದೆ? ಗೊತ್ತಿರಲಿಲ್ಲ ಕಣಯ್ಯ ನೀನು ಭೂಮಿಗೆ ಇಷ್ಟು ಅಂಟಿಕೊಂಡಿದ್ದೀ ಎಂದು! ಹೋಗು, ಎಲ್ಲವನ್ನೂ ನೀನೇ ಅನುಭವಿಸು!

ಹೀಗೆ ಪಂಪ, ಬಾಹುಬಲಿಗೆ ವೈರಾಗ್ಯ ಹುಟ್ಟಿದ ಮೇಲೂ ಅವನಿಂದ ಕತ್ತಿಯೇಟಿನಂಥ ಮಾತುಗಳನ್ನು ಆಡಿಸಿ ಭರತನ ಮನಃಪರಿವರ್ತನೆ ಮಾಡಿಸಲು ಯತ್ನಿಸುತ್ತಾನೆ. ಆದರೆ ಭರತ ನೆಲಕ್ಕಂಟಿನಿಂತ ಜೀವ. ಅವನಿಗೆ ಇನ್ನೂ ವೈರಾಗ್ಯದ ಭಾವ ಮನಸ್ಸಿನಲ್ಲಿ ಇಣುಕಿಲ್ಲ. ಹಾಗಾಗಲು ಕಾಲ ಕೂಡಿಬರಬೇಕಲ್ಲ! ಇದೇ ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಎಲೆಕ್ಷನ್ನಲ್ಲೂ ಘೋಷಿಸಿಕೊಂಡು ಗೆದ್ದುಬರುವ ರಾಜಕಾರಣಿಗಳನ್ನು ಕಂಡರೆ ಭರತನ ಅಂದಿನ ಮನಸ್ಥಿತಿಯನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದೋ ಏನೋ.

ಯೋಚಿಸುತ್ತ ಹೋದರೆ ಬಾಹುಬಲಿ ತಾನಿರುವ ಅಡಿಗಳಿಗಿಂತಲೂ ಎತ್ತರಕ್ಕೆ ಬೆಳೆಯುತ್ತ ಹೋಗುತ್ತಾನೆ. ತನ್ನಣ್ಣನೇ ಮೇಲೇರಿ ಬಂದಾಗ, ರಾಜ್ಯವನ್ನು ಉಳಿಸಿಕೊಳ್ಳಲೋಸುಗ ಕಾದುವುದೇ ತನ್ನ ಕ್ಷತ್ರಿಯ ಧರ್ಮ ಎಂದು ಕಾದುವ ಬಾಹುಬಲಿ; ಅಣ್ಣನನ್ನು ಮೂರು ಯುದ್ಧಗಳಲ್ಲಿ ಸೋಲಿಸಿಯೂ ಕೊಲ್ಲದೆ ಉಳಿಸಿ ಭಾತೃಧರ್ಮವನ್ನು ಮೆರೆಯುವ ಬಾಹುಬಲಿ; ಅಣ್ಣನ ಧನ ಮತ್ತು ಭೂಮಿಯ ಆಕಾಂಕ್ಷೆಗೆ ಅಡ್ಡಬರದೆ ಅನುಭವಿಸಬೇಕಾದ್ದೆಲ್ಲ ಅನುಭವಿಸುತ್ತ ಇದ್ದುಬಿಡು ಎಂದು ಹೇಳಿ ತನ್ನ ಪಾಡಿಗೆ ತಾನು ವಿರಾಗಮೂರ್ತಿಯಾಗಿ ಹೊರಟುಬಿಡುವ ಮಹಾಮಾನವ ಬಾಹುಬಲಿ… ಅವನ ವ್ಯಕ್ತಿತ್ವದ ಔನ್ನತ್ಯಕ್ಕೆ ಅವನೇ ಸಾಟಿ.

ಗೆದ್ದರೆ ಬಿಟ್ಟುಕೊಡುವುದರಿಂದ ಎಂಬ ಕೆ.ವಿ. ತಿರುಮಲೇಶರ ಕವಿತೆಯ ಸಾಲಿನಂತೆ ಆತ ಸಾವಿರ ಸಾವಿರ ವರ್ಷಗಳ ನಂತರವೂ ನಮ್ಮ ನೆನಪಲ್ಲಿ ಉಳಿದಿರುವುದು, ಆಕಾಶದೆತ್ತರ ಮೈಚಾಚಿ ಶಾಶ್ವತನಾಗಿ ನಿಂತಿರುವುದು ಆತ ತನ್ನದೆಲ್ಲವನ್ನೂ ಬಿಟ್ಟುಕೊಟ್ಟ ಎಂಬ ಕಾರಣಕ್ಕೆ. ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿದೆ. ಎಲ್ಲೆಲ್ಲೂ ಭರತರು ಹುಟ್ಟಿ ಸುಳ್ಳುಗಳ, ಆಶ್ವಾಸನೆಗಳ, ಕೆಸರೆರಚಾಟಗಳ, ಪರಸ್ಪರ ದೂಷಣೆಗಳ ಭರತವಾದಂತಿದೆ. ಕೇವಲ ಐದು ವರ್ಷಗಳ ಅವಧಿಗೆ ಅಧಿಕಾರದಂಡ ಹಿಡಿಯಲು ರಾಜಕಾರಣಿಗಳು ತಮ್ಮ ಎಲ್ಲವನ್ನೂ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಜಗದ ಈ ನೋಡುತ್ತ ಬೆಟ್ಟದ ಮೇಲೆ ನಿಂತಿರುವ ನಿರ್ವಿಕಾರಮೂರ್ತಿ ತುಟಿಯಂಚಿನಲ್ಲಿ ನಗುತ್ತಿದ್ದಾನೋ ಏನೋ.

Leave a Reply

Your email address will not be published. Required fields are marked *

two × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top