ಆತನ ಪ್ರತಿಮೆ ಇದ್ದರೂ, ಇಲ್ಲದಿದ್ದರೂ ಅಪ್ರಸ್ತುತನಾಗಿದ್ದಾನೆ

Posted In : ಅಂಕಣಗಳು, ಚಕ್ರವ್ಯೂಹ

ಈಶಾನ್ಯ ರಾಜ್ಯ ತ್ರಿಪುರದಲ್ಲಿ ಕಮಲ ಪಕ್ಷದ ಬಾವುಟ ಅರಳಿದ ಬೆನ್ನಿಗೇ ಅಲ್ಲಿನ ಬೆಲೋನಿಯಾದ ಹೃದಯಭಾಗದಲ್ಲಿದ್ದ ಪ್ರತಿಮೆ ಧರೆಗುರುಳಿತು. ಆ ಮೂರ್ತಿಯನ್ನು ಕೆಡವಿ ಉರುಳಿಸುತ್ತಿದ್ದಂತೆಯೇ ಕಮ್ಯುನಿಸ್ಟ್ ಕಾಕಗಳು ದೇಶಾದ್ಯಂತ ಕಾಕಾ ಎಂದು ಅರಚಾಡತೊಡಗಿದವು. ಬಹುಶಃ ಪರಿಸ್ಥಿತಿ ಐದು ವರ್ಷಗಳ ಹಿಂದೆ ಇದ್ದಂತಿದ್ದರೆ ಅವು ಮತ್ತೊಮ್ಮೆ ಅಸಹಿಷ್ಣುತೆಯ ವಿಷಗಾಳಿ ಹಬ್ಬಿಸಿ, ಭಾರತದಲ್ಲಿ ಕೋಲಾಹಲವಾಗುತ್ತಿದೆಯೆಂಬ ಸುದ್ದಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡುತ್ತಿದ್ದವೋ ಏನೋ. ಆದರೆ, ಪರಿಸ್ಥಿತಿ ಅದೃಷ್ಟವಶಾತ್ ಬದಲಾಗಿದೆ. ಕಮ್ಮಿನಿಷ್ಠರ ನಿಜಬಣ್ಣ ದೇಶಕ್ಕೆ ಗೊತ್ತಾಗಿದೆ. ಮಾರ್ಕ್ಸ್ ಮತ್ತು ಅವನ ಸಿದ್ಧಾಂತದಂತೆ ಲೆನಿನ್, ಸ್ಟಾಲಿನ್, ನಂಬೂದಿರಿಪಾಡ್, ಸೀತಾರಾಮ ಯಚೂರಿ ಎಲ್ಲರೂ ಅಪ್ರಸ್ತುತರಾಗಿ ಮಲಗಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಅಕ್ಟೋಬರ್ ಕ್ರಾಂತಿಗೆ ನೂರು ವರ್ಷವಾದ ಸಂದರ್ಭದಲ್ಲಿ ರಷ್ಯದಲ್ಲೇ ಅದನ್ನು ಆಚರಿಸಲು ಯಾರಿಗೂ ಉತ್ಸಾಹ ಇರಲಿಲ್ಲ. ಸೋವಿಯೆಟ್ ರಷ್ಯದ ಭಿಕ್ಷೆಯಿಂದಲೇ ಬದುಕುತ್ತಿದ್ದ ಭಾರತದ ಕಮ್ಮಿನಿಷ್ಠರು ಅಕ್ಟೋಬರ್ ಕ್ರಾಂತಿಯ ಶತಮಾನೋತ್ಸವ ಆಚರಿಸಲು ಫಂಡಿಂಗ್ ಇಲ್ಲದೆ, ತಮ್ಮ ಕೈಯಿಂದ ಹಾಕಲು ಜಿಪುಣತನ ಬಿಡದೆ ಅಂತೂ ಕುಂಯ್‌ಕುಂಯ್ ಅನ್ನುತ್ತ ಕೈ ಕೈ ಹಿಸುಕಿಕೊಳ್ಳುತ್ತ ಹೇಗೋ ತಿಂಗಳು ಕಳೆಯಬೇಕಾಯಿತು. ಒಂದಷ್ಟು ಕಮ್ಯುನಿಸ್‌ಟ್ ಪತ್ರಕರ್ತರು ಲೆನಿನ್ ಪ್ರತಿಮೆ ಭಗ್ನ ಪ್ರಕರಣವನ್ನು ಜಗತ್ತಿನ ಬರೆದುಕೊಂಡದ್ದನ್ನು ಬಿಟ್ಟರೆ ಮಿಕ್ಕವರಿಗೆ ಯಾರಿಗೂ ಅದೊಂದು ಮಹತ್ವದ ಪ್ರಕರಣ ಎನ್ನಿಸಲೇ ಇಲ್ಲ.

ಅತ್ತ ಲೆನಿನ್ ನೆಲಕ್ಕುರುಳಿದ ಹಾಗೆಯೇ ಮುಂದೊಂದು ದಿನ ತಮಿಳುನಾಡಿನಲ್ಲಿ ಪೆರಿಯಾರ್ ಕೂಡ ಉರುಳಬಹುದು – ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡರು. ಅದಕ್ಕೆ ಸರಿಯಾಗಿ ತಮಿಳುನಾಡಿನ ವೆಲ್ಲೂರಿನಲ್ಲಿ ಇಬ್ಬರು ಯುವಕರು ಪೆರಿಯಾರ್ ವಿಗ್ರಹಕ್ಕೆ ಊನ ಮಾಡುವ ಕೆಲಸವನ್ನೂ ಮಾಡಿಬಿಟ್ಟರು. ಹಾಗೆ ಮಾಡಿದ್ದವರು ಕುಡಿದ ಅಮಲಿನಲ್ಲಿದ್ದರಂತೆ. ಒಬ್ಬ ಬಿಜೆಪಿಯ ಕಾರ್ಯಕರ್ತನಾದರೆ ಇನ್ನೊಬ್ಬ ಸಿಪಿಐ ಪೆರಿಯಾರ್ ಭಜನೆ ಮಾಡುವ ಮಂದಿಗೆ ಅಷ್ಟೇ ಸಾಕಾಯಿತು ನೋಡಿ! ಬಿಜೆಪಿಯ ರಾಜ್ಯಕಚೇರಿಯ ಒಳಗೆ ಪೆಟ್ರೋಲ್ ಬಾಂಬ್ ಎಸೆದರು. ದೇವಸ್ಥಾನದಿಂದ ಹೊರಬರುತ್ತಿದ್ದ ಹತ್ತು-ಹನ್ನೆರಡು ಬ್ರಾಹ್ಮಣರನ್ನು ಹಿಡಿದೆಳೆದು ಅವರ ಜನಿವಾರ ಕತ್ತರಿಸಿದರು. ಓರ್ವ ಅರ್ಚಕನ ಶಿಖೆಗೇ ಕತ್ತರಿಬಿತ್ತು. ಅಷ್ಟೆಲ್ಲ ಆಗಿ ಪೆರಿಯಾರ್‌ಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತ ಮಾಯವಾದರು ಕಿಡಿಗೇಡಿಗಳು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದವರು ಇನ್ನೊಬ್ಬರ ಎಲೆಯ ನೊಣದ ಬಗ್ಗೆ ಟ್ವೀಟ್ ಮಾಡಿದರಂತೆ. ಹಾಗೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ತನ್ನ ಇದುವರೆಗೆ ಸತ್ತಿರುವ – ಇನ್ನೂ ಸಾಯುತ್ತಿರುವ 4,000ಕ್ಕೂ ಅಧಿಕ ರೈತರ ಹೆಣ ಎದುರಿಟ್ಟುಕೊಂಡು ಪೆರಿಯಾರ್ ಪ್ರತಿಮೆಯ ಪರವಾಗಿ ಟ್ವೀಟ್ ಬ್ಯಾಟಿಂಗ್ ಶುರುಮಾಡಿದರು!

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೆರಿಯಾರ್ ಪ್ರತಿಮೆಯನ್ನು ಬಿಜೆಪಿ ನಾಯಕರು ಭಗ್ನಗೊಳಿಸಿದ್ದಾರೆ. ಇದು ಬಿಜೆಪಿಯ ದಲಿತವಿರೋಧಿ, ಬಡವರ ವಿರೋಧಿ ಮತ್ತು ಮಹಿಳಾವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದೂ ಬರೆದರು! ಪೆರಿಯಾರ್ ಬಡವನಾಗಿರಲಿಲ್ಲ; ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ. ಆತ ದಲಿತನೂ ನಾಯ್ಕರ್ ಎಂಬ ಬಲಿಷ್ಠ ಕೋಮಿನಲ್ಲೇ ಹುಟ್ಟಿದ್ದ. ಬಂಗಾಳದ ಠಾಕೂರರಿಗೆ ಸಮಾನವಾದ ನಾಯ್ಕರ್ ಅಥವಾ ಬಲಿಜ ಸಮುದಾಯದವರು ತಂಜಾವೂರನ್ನು ಹಲವು ಶತಮಾನಗಳ ಕಾಲ ಆಳಿದವರು ಕೂಡ. ಇನ್ನು ಪೆರಿಯಾರ್, ಸುರ್ಜೆವಾಲ ಭಾವಿಸಿದಂತೆ ಮಹಿಳೆ ಖಂಡಿತ ಆಗಿರಲಿಲ್ಲ! ಸಿದ್ದರಾಮಯ್ಯ ಮತ್ತು ಸುರ್ಜೆವಾಲರಂಥ ರಾಜಕಾರಣಿಗಳು ತಮ್ಮ ಅಜ್ಞಾನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಲು ಉತ್ಸಾಹ ತೋರುವ ಮೊದಲು ಇತಿಹಾಸವನ್ನು ಸ್ವಲ್ಪ ಸರಿಯಾಗಿ ತಿಳಿದುಕೊಳ್ಳಬಾರದಿತ್ತೆ?

ಯಾರು ಈ ಪೆರಿಯಾರ್? ಈತನ ಹೆಸರು ಇ.ವಿ. ರಾಮಸ್ವಾಮಿ ನಾಯ್ಕರ್. ಇವಿಆರ್. ಹುಟ್ಟಿದ್ದು ತೆಲುಗಿನ ನಾಯ್ಕರ್ ಅಥವಾ ಬಲಿಜ ಸಮುದಾಯದಲ್ಲಿ. ಶಾಲೆ ಕಲಿಯಲು ಹೋದವನು ಅಲ್ಲೇನೋ ಭಾನಗಡಿ ಮಾಡಿ ಶಾಲೆ ತ್ಯಜಿಸಿದ. ವರ್ತಕರಾಗಿದ್ದ ತಂದೆಗೆ ಸಹಾಯ ಮಾಡಲೆಂದು ಹನ್ನೆರಡನೇ ವಯಸ್ಸಿನಲ್ಲಿ ಆಯವ್ಯಯದ ಪುಸ್ತಕ ಹಿಡಿದ. ಆದರೆ ಪೆರಿಯಾರ್‌ನದ್ದು ಬಾಲ್ಯದಿಂದಲೂ ಜಗಳಗಂಟ ಸ್ವಭಾವ. ಯಾರೊಂದಿಗೂ ಸಾಮರಸ್ಯದಿಂದ ನಾಲ್ಕು ದಿನ ಜೊತೆಗಿದ್ದ ಉದಾಹರಣೆಯೇ ಇಲ್ಲ. ತಂದೆಯೊಂದಿಗೆ ಜಗಳಾಡಿಕೊಂಡು ಕಾಶಿಗೆ ಹೋದ. ಅಲ್ಲಿ ಬ್ರಾಹ್ಮಣರಿಗೆ ಮೀಸಲಾಗಿದ್ದ ವಸತಿಗೃಹವೊಂದರಲ್ಲಿ, ತಾನೂ ಜನಿವಾರ ಹಾಕಿಕೊಂಡು ಬ್ರಾಹ್ಮಣನೆಂದು ಬಿಂಬಿಸಿ ಗಿಟ್ಟಿಸಲು ಯತ್ನಿಸಿದಾಗ, ಈತನ ಜಾತಿಯ ಬಗ್ಗೆ ಅನುಮಾನ ಬಂದು ಅವರು ಈತನನ್ನು ಊಟವಿಕ್ಕದೆ ಹೊರಕಳಿಸಿದರಂತೆ. ಆ ಛತ್ರವನ್ನು ಕಟ್ಟಿಸಿದ್ದು ದಕ್ಷಿಣ ಭಾರತದ ಒಬ್ಬ ಧನಿಕ ಸೆಟ್ಟಿ ಎಂದು ಸಂಶೋಧನೆ ಮಾಡಿದ ರಾಮಸ್ವಾಮಿಗೆ ಅಷ್ಟೇ ಸಾಕಾಯಿತು, ಇಡಿಯ ಬ್ರಾಹ್ಮಣ ಕುಲವನ್ನು ದ್ವೇಷಿಸಲು! ಕೆಲವೊಮ್ಮೆ ತಮ್ಮ ಗಂಡಂದಿರ ಜೊತೆ ಬಾಳಲಾಗದವರು ಪುರುಷದ್ವೇಷಿ ಸ್ತ್ರೀವಾದಿಗಳಾಗುತ್ತಾರಲ್ಲ; ಹಾಗೆ, ತನ್ನನ್ನು ಊಟ ಹಾಕದೆ ಹೊರಕಳಿಸಿದ ಛತ್ರದ ಮೇಲಿನ ದ್ವೇಷವೇ ರಾಮಸ್ವಾಮಿಗೆ ಬ್ರಾಹ್ಮಣ ಕುಲದ ಮೇಲೇ ದ್ವೇಷ ಕಾರಣವಾಗಿಬಿಟ್ಟಿತು! ಕಾಶಿಯಿಂದ ವಾಪಸ್ ಬಂದ.

ಕಾಂಗ್ರೆಸ್ ಸೇರಿದ. ಅಲ್ಲಿಯೂ ಬ್ರಾಹ್ಮಣರಿದ್ದಾರೆ, ಅವರೇ ಪಕ್ಷದ ಬಹುತೇಕ ನಿರ್ಧಾರಗಳನ್ನೆಲ್ಲ ನಿಯಂತ್ರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನಿಂದ ಈಚೆ ಬಂದ. ಹಾಗೆ ಹೊರಬಂದವನಿಗೆ ಹೊಸದೊಂದು ಕ್ರಾಂತಿ ಮಾಡಬೇಕಿತ್ತು. ಆಗ ಕ್ರಾಂತಿಯ ಯುಗ ನೋಡಿ! ಹಾಗೆ ತನ್ನದೇ ಚಳವಳಿ ಹುಟ್ಟುಹಾಕಬೇಕು; ತನ್ನ ಹೆಸರನ್ನು ಇತಿಹಾಸದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಕೆಲಸ ಮಾಡಬೇಕು ಎಂಬ ಹುಚ್ಚು ಹತ್ತಿದ್ದವನಿಗೆ ಹೊಸತೊಂದು ಅಸ್ಮಿತೆ ಗಳಿಸಬೇಕಾಗಿತ್ತು. ಅದಕ್ಕಾಗಿ ಬ್ರಾಹ್ಮಣ ವಿರೋಧಿ ಚಳವಳಿ ದ್ರಾವಿಡ – ಆರ್ಯ ಎಂಬ ಭಿನ್ನತೆ ಸೃಷ್ಟಿಸಿದ. ಕಾಲ್‌ಡ್ವೆಲ್ ಎಂಬ ಮಿಷನರಿಯೊಬ್ಬ ಶತಮಾನದ ಹಿಂದೆ ತಮಿಳರ ಮನಸ್ಸಿನಲ್ಲಿ ಊರಿದ್ದ ದ್ರಾವಿಡದೇಶದ ಬೀಜವನ್ನು ರಾಮಸ್ವಾಮಿ ನೀರು ಹಾಕಿ ಮೊಳಕೆ ಬರಿಸಿ ಹೆಮ್ಮರವಾಗಿಸಿದ. ಆರ್ಯ ಎಂದರೆ ಬ್ರಾಹ್ಮಣ. ಆರ್ಯರನ್ನು ದ್ವೇಷಿಸುವುದೆಂದರೆ ಬ್ರಾಹ್ಮಣರನ್ನು ದ್ವೇಷಿಸುವುದು ಎಂಬುದು ಈ ಬುದ್ಧಿವಂತನ ಸರಳ ಸಮೀಕರಣ. ಹಾವು ಮತ್ತು ಬ್ರಾಹ್ಮಣ – ಇಬ್ಬರೂ ಒಂದೇ ದಾರಿಯಲ್ಲಿ ಎದುರು ಸಿಕ್ಕರೆ ಮೊದಲು ಬ್ರಾಹ್ಮಣನನ್ನು ಹೊಡೆದುಸಾಯಿಸಿ ಎಂದು ಹೇಳಿ, ಬರೆದು ಮಹಾತ್ಮ ಚಪ್ಪಾಳೆ ಗಿಟ್ಟಿಸಿದ. ಅಲ್ಲಿಗೆ ಅವನದೆಂಬ ಅಸ್ತಿತ್ವವನ್ನು ತಮಿಳುನಾಡಿನಲ್ಲಿ ಊರಿದಂತಾಯಿತು.

ರಾಮಸ್ವಾಮಿ ಅಲಿಯಾಸ್ ಪೆರಿಯಾರ್ ಬ್ರಾಹ್ಮಣ ವಿರೋಧಿಯಾಗಿದ್ದು, ಉಳಿದೆಲ್ಲ ದೀನದಲಿತರ ಪರವಾಗಿದ್ದ ಎಂಬ ಭ್ರಮೆ ನಮ್ಮ ಕೆಲವು ದಲಿತನಾಯಕರಿಗಿದೆ. ಆದರೆ, 16 ಏಪ್ರಿಲ್ 1950ರಲ್ಲಿ ಆತ ಬರೆದಿದ್ದ ಮಾತುಗಳನ್ನು ಇವರು ಮರೆತೇಬಿಟ್ಟಿದ್ದಾರೆ. ಸಮಾಜದಲ್ಲಿ ಬ್ರಾಹ್ಮಣರು, ಶೂದ್ರರು ಮತ್ತು ಪಂಚಮರು ಎಂದು ಮೂರು ಗುಂಪು. ಬ್ರಾಹ್ಮಣರು ಮೇಲ್ವರ್ಗದ ಮಂದಿ. ಅವರಿಗೆ ಬೇಕಾದ ಎಲ್ಲ ಸವಲತ್ತುಗಳೂ ಹೇಗಾದರೂ ದಕ್ಕಿಬಿಡುತ್ತವೆ. ಇನ್ನು ಪಂಚಮರು? ಹೆಸರಲ್ಲಿ ಅವರೂ ಬೇಕುಬೇಕಾದ ಸವಲತ್ತುಗಳನ್ನೆಲ್ಲ ಅಧಿಕಾರಯುತವಾಗಿ ಕಸಿದುಕೊಂಡುಬಿಡುತ್ತಾರೆ. ಆದರೆ ನಿಜವಾಗಿಯೂ ಎಲ್ಲ ಸೌಲಭ್ಯಗಳಿಂದ ವಂಚಿತರಾಗುವವರು ಶೂದ್ರರು. ನನ್ನ ಹೋರಾಟ ಅವರಿಗಾಗಿ – ಎಂದು ಅತ್ಯಂತ ಸ್ಪಷ್ಟವಾಗಿ ರಾಮಸ್ವಾಮಿ ಬರೆದಿದ್ದ. ಇಲ್ಲಿ ಪಂಚಮರು ಎಂದರೆ ದಲಿತರು. ಶೂದ್ರರು ಎಂದರೆ ಬ್ರಾಹ್ಮಣ ಮತ್ತು ದಲಿತವರ್ಗಗಳ ಹೊರತಾಗಿ ಮಿಕ್ಕ ಎಲ್ಲಾ ಜನ!

ಇದರಲ್ಲಿ ಆತನದ್ದೇ ಜಾತಿಯಾದ ನಾಯಕರು, ಬಲಿಜರು ಕೂಡ ಬರುತ್ತಾರೆ. ಒಂದಾನೊಂದು ಕಾಲದಲ್ಲಿ ತಮಿಳುನಾಡನ್ನು ಆಳಿದ ವರ್ಗ ಕೂಡ ಅವನ ದೃಷ್ಟಿಯಲ್ಲಿ ವಂಚಿತವಾದ ವರ್ಗವಾಗಿತ್ತು! ರಾಮಸ್ವಾಮಿ ತನ್ನ ಜೀವನದುದ್ದಕ್ಕೂ ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ನಖಶಿಖಾಂತ ದ್ವೇಷಿಸಿದ. ದಲಿತರಿಗೆ 15% ಮೀಸಲಾತಿ ಇಡುವ ಪ್ರಸ್ತಾಪವನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಸೇರಿಸಿದರೆಂಬ ವಿಷಯದಲ್ಲಿ ರಾಮಸ್ವಾಮಿ ಉರಿದುಕೊಂಡಿದ್ದ. ಸಂವಿಧಾನವನ್ನು ಬರೆದವರು ಬ್ರಾಹ್ಮಣರು. ಮೊದಲಿಗೆ ದಲಿತರಿಗೆ 10% ಮೀಸಲಾತಿ ಇಡಬೇಕೆಂಬ ಬೇಡಿಕೆ ಅಂಬೇಡ್ಕರ್‌ದಾಗಿತ್ತು. ಆದರೆ ಬ್ರಾಹ್ಮಣರು ಅಂಬೇಡ್ಕರ್ ಅವರಿಗೆ ದುಡ್ಡಿನ ಸಂಚಿ ಕೊಟ್ಟು ಆ ಮೀಸಲಾತಿಯನ್ನು 15%ಗೆ ಏರಿಸಿದರು! ಬ್ರಾಹ್ಮಣರು ಕೊಟ್ಟ ಲಂಚಕ್ಕೆ ತಲೆಬಾಗಿ ಅಂಬೇಡ್ಕರ್ ಆ ಮೀಸಲಾತಿಗೆ ಸಮ್ಮತಿ ಸೂಚಿಸಿದರು ಎಂದು ಬರೆದ ರಾಮಸ್ವಾಮಿ!

ಬರಬರುತ್ತ ರಾಮಸ್ವಾಮಿ ಕಟುವಾದ. ಖಾರವಾದ. ಮೊಂಡನಾದ. ನಾಝಿ ಚಳವಳಿಯ ರೀತಿಯ ಹೋರಾಟವನ್ನು ತಮಿಳುನಾಡಲ್ಲೂ ಮಾಡುತ್ತೇನೆ; ಹೇಗೆ ಯಹೂದ್ಯರು ಜರ್ಮನಿ ಬಿಟ್ಟು ಪರದೇಶಿಗಳಾಗಿ ಜಗತ್ತೆಲ್ಲ ಅಲೆಯಬೇಕಾಯಿತೋ ಹಾಗೆಯೇ ತಮಿಳುನಾಡಿನ ಬ್ರಾಹ್ಮಣರು ದೇಶಾಂತರ ಹೋಗುವಂತೆ ಮಾಡುತ್ತೇನೆ – ಎನ್ನುತ್ತಿದ್ದ. ದೇವಸ್ಥಾನಗಳನ್ನು ಪುಡಿಮಾಡಿ; ಬ್ರಾಹ್ಮಣರನ್ನು ಸಿಕ್ಕಸಿಕ್ಕಲ್ಲಿ ಥಳಿಸಿ; ಅವರ ಜನಿವಾರ ಕಿತ್ತೆಸೆಯಿರಿ; ಅವರ ಜುಟ್ಟು ಕತ್ತರಿಸಿ ಎಂದು ದಿನಬೆಳಗಾದರೆ ಒಂದಿಲ್ಲೊಂದು ಮಾಧ್ಯಮದಲ್ಲಿ ಕಿರುಚಾಡುತ್ತಿದ್ದ. ರಾಮಾಯಣದಂಥ ಕೂಡ ಅವನಿಗೆ ಆರ್ಯ – ದ್ರಾವಿಡ ಹೋರಾಟದ ಸಂಕೇತವಾಗಿ ಕಾಣಿಸತೊಡಗಿತು. ಪುತ್ರವಾತ್ಸಲ್ಯದಿಂದ ಗೋಳಾಡುವ ದಶರಥ, ತನ್ನ ಮಗನ ಏಳಿಗೆಗಾಗಿ ಏನನ್ನಾದರೂ ಮಾಡಲು ತಯಾರಾಗಿ ನಿಂತ ಕೈಕೆಯಿ, ಕೋಪವನ್ನು ಹದ್ದುಬಸ್ತಿನಲ್ಲಿಡಲಾಗದ ಲಕ್ಷ್ಮಣ, ಆಭರಣಗಳೆಂದರೆ ಬಾಯಿಬಾಯಿ ಬಿಡುತ್ತಿದ್ದ ಸೀತೆ (?!) – ಇವರೆಲ್ಲ ಆರ್ಯಮನಸ್ಥಿತಿಯ ಪ್ರತೀಕಗಳು ಎಂದು ಕರೆದ. ರಾಮಾಯಣದಲ್ಲಿ ದ್ರವಿಡದೇಶೀಯರನ್ನು ಹೀನಾಯವಾಗಿ ಚಿತ್ರಿಸಲಾಗಿದೆ ಎಂದು ಹೇಳಿ ರಾವಣನ ಪರವಾಗಿ ಉದ್ದುದ್ದ ಬ್ಯಾಟಿಂಗ್ ಮಾಡಿದ. ರಾಮಸ್ವಾಮಿಯ ಕುರುಡು ಅನುಯಾಯಿಗಳು, ಎಂದೆಂದೂ ರಾಮಾಯಣವನ್ನು ಇದ್ದ ಅರೆಹುಚ್ಚ ಬುದ್ಧಿಜೀವಿಗಳು ಅಂದು ಆತ ಬರೆದಿಟ್ಟ ಮಾತುಗಳನ್ನೇ ಇಂದೂ ಹೇಳುತ್ತ ಬಂದಿದ್ದಾರೆ. ರಾಮಸ್ವಾಮಿಯ ಅತಿದೊಡ್ಡ ಕೊಡುಗೆ ಈ ದೇಶಕ್ಕೆ ಏನು ಎಂದರೆ – ಅಂಡೆಪಿರ್ಕಿ ಬುದ್ಧಿಜೀವಿಗಳಿಗೆ ಜೀವನಪೂರ್ತಿ ಬಾಯಾಡಿಸುತ್ತಿರಲು ಬೇಕಾದ ಅಪದ್ಧ ಸಿದ್ಧಾಂತಗಳನ್ನು ಹುಟ್ಟಿಸಿದ್ದು!

ರಾಮಸ್ವಾಮಿ ಅದೆಂಥ ವಿಕೃತನಾಗಿದ್ದನೆಂದರೆ ತನ್ನ ದೈವಭಕ್ತ ಪತ್ನಿ ನಾಗಮ್ಮನನ್ನು ದೇವಸ್ಥಾನಕ್ಕೆ ಹೋಗದಂತೆ ತಡೆಯಬೇಕೆಂದು ಆಕೆ ದೇವದಾಸಿ ಎಂದು ಕೂಡ ಸುದ್ದಿ ಹಬ್ಬಿಸಿದ! ಆಕೆ ದೇವಸ್ಥಾನಕ್ಕೆ ಹೋದರೆ ಬೀದಿಕಾಮಣ್ಣರು ಆಕೆಯನ್ನು ಕಿಚಾಯಿಸುವಂತೆ ಛೂಬಿಟ್ಟು, ಆಕೆ ದೇವಸ್ಥಾನ ಭೇಟಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಮಾಡಿ ತೃಪ್ತಿಪಟ್ಟ! ಯೌವನದ ದಿನಗಳಲ್ಲಿ ನಿತ್ಯ ವೇಶ್ಯಾಗೃಹಗಳ ಗಿರಾಕಿಯಾಗಿದ್ದ ರಾಮಸ್ವಾಮಿ ತನ್ನ ಮೊದಲ ಹೆಂಡತಿ ತೀರಿಕೊಂಡ ಮೇಲೆ, ಎಂಬತ್ತರ ವಯಸ್ಸಿನಲ್ಲಿ, ಇನ್ನೂ ಮೂವತ್ತರ ಹರೆಯದಲ್ಲಿದ್ದ ಹುಡುಗಿ ಮಣಿಯಮ್ಮಳನ್ನು ಮದುವೆಯಾದ. ಆಕೆ ಬೇರಾರೂ ಅಲ್ಲ, ಆತನ ಸಾಕುಮಗಳೇ! ಹೆಣ್ಣಿನ ವ್ಯಕ್ತಿತ್ವವನ್ನು ಎತ್ತಿಹಿಡಿಯುವ ತಮಿಳರ ಮಹಾಕಾವ್ಯವಾದ ಶಿಲಪ್ಪದಿಕಾರಂ ಮೇಲೆಯೂ ಆತನಿಗೆ ಅಂಥ ಒಲವೇನಿರಲಿಲ್ಲ. ಇದೂ ಒಂದು ಕಾವ್ಯವಾ? ಏನಿದೆ ಇದರಲ್ಲಿ? ಮೊದಲ ಪುಟದಿಂದ ಕೊನೆಯ ಈ ಕಾವ್ಯದಲ್ಲಿರುವುದು ಆರ್ಯ ಮನಸ್ಥಿತಿಯೇ. ಇದು ದ್ರಾವಿಡರಿಗೆ ಅಪಥ್ಯವಾಗಬೇಕು ಎನ್ನುತ್ತಿದ್ದ! ಎಲ್ಲ ಬಿಡಿ, ರಾಜ್ಯದಲ್ಲಿ ಹಣದುಬ್ಬರ ಕಾಣಿಸಿಕೊಳ್ಳುತ್ತಿರುವುದು ದಲಿತ ಮಹಿಳೆಯರು ರವಿಕೆ ತೊಡುವುದಕ್ಕೆ ಶುರುಮಾಡಿದ್ದರಿಂದ – ಎಂಬ ಅದ್ಭುತ ಆಣಿಮುತ್ತು ಕೂಡ ಇವನದ್ದೇ! ಇಂಥ ವ್ಯಕ್ತಿಯನ್ನು ದಕ್ಷಿಣ ಭಾರತದ ಬುದ್ಧಿಜೀವಿಗಳು ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನು ಎಂದು ಹೇಳಿದಾಗ ಎಲ್ಲೆಲ್ಲಿಂದಲೋ ನಗು ಬರುವುದಿಲ್ಲವೇ?

ರಾಮಸ್ವಾಮಿ ಮಾಡಿದ ಭಾನಗಡಿಗಳು ಒಂದೆರಡಲ್ಲ. ಸ್ವಾತಂತ್ರ್ಯಕ್ಕೆ ಮೊದಲು ಅಖಂಡ ಭಾರತ ಎರಡು ಹೋಳಾಗಲಿದೆ ಎಂಬ ಸುದ್ದಿ ಆಗಿನ ಕಾಂಗ್ರೆಸ್ ನಾಯಕರು ಕಣ್ಣೀರು ಹಾಕಿದರೆ ರಾಮಸ್ವಾಮಿ ಮಾತ್ರ ಕುಣಿದಾಡಿದ. ಪರಂಗಿಗಳ ಬಂಗಲೆಗಳ ಬಾಗಿಲು ತಟ್ಟಿ, ಕೇವಲ ಎರಡಲ್ಲ, ಮೂರು ತುಂಡು ಮಾಡಬೇಕು ಎಂಬ ಬೇಡಿಕೆ ಇಟ್ಟ. ಅವನ ಪ್ರಕಾರ, ತಮಿಳರಿಗೆ ದ್ರವಿಡಸ್ತಾನ ಎಂಬ ದೇಶವನ್ನೂ ಮಾಡಬೇಕಿತ್ತಂತೆ! ಮುಸ್ಲಿಮ್ ಲೀಗ್ ಪಾಕಿಸ್ತಾನದ ಉಸ್ತುವಾರಿ ನೋಡಿಕೊಂಡಂತೆ ದ್ರವಿಡಸ್ತಾನದ ಸುಪರ್ದಿಯನ್ನು ಈತನ ಜಸ್ಟಿಸ್ ಪಾರ್ಟಿಗೆ ಕೊಡಬೇಕಿತ್ತಂತೆ! ಬ್ರಿಟಿಷರು ಅವನ ಬೇಡಿಕೆಗೆ ಸೊಪ್ಪು ಹಾಕದೇ ಇದ್ದಾಗ ಮಹಮ್ಮದಾಲಿ ಜಿನ್ನಾನ ಕಾಲು ಹಿಡಿದು ಬೇಡಿದ. ಅದು ನಿನ್ನ ಸಮಸ್ಯೆ, ನೀನೇ ಪರಿಹರಿಸಿಕೋ ಎಂದು ಜಿನ್ನಾ ತನ್ನ ಕಾಲು ಕೊಡವಿ ನಡೆದುಬಿಟ್ಟ. ತನ್ನ ಬೇಡಿಕೆಗೆ ತಕ್ಕ ಪ್ರತಿಕ್ರಿಯೆ ಯಾವ ಕಡೆಯಿಂದಲೂ ಬರದೆ ದ್ರವಿಡಸ್ತಾನದ ಆಸೆ ಭಗ್ನಗೊಂಡಾಗ ಇದೇ ರಾಮಸ್ವಾಮಿ 1947ರ ಆಗಸ್‌ಟ್ 15ನ್ನು ಕರಾಳ ದಿನವಾಗಿ ಆಚರಿಸಿ ಕಪ್ಪು ಬಾವುಟ ಪ್ರದರ್ಶಿಸಿದ.

ನಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕಾದರೆ ಮೊದಲು ನಾವೆಲ್ಲ ಸೇರಿ ಭಾರತದ ಸಂವಿಧಾನವನ್ನು ಸಾರ್ವಜನಿಕವಾಗಿ ಸುಡಬೇಕು. ಆಗ ಸರಕಾರ ಬಗ್ಗದಿದ್ದರೆ ದೇಶಾದ್ಯಂತ ಗಾಂಧಿ ಚಿತ್ರಗಳನ್ನು ಸುಡುವ ಇಟ್ಟುಕೊಳ್ಳಬೇಕು. ಅದಕ್ಕೂ ಜಗ್ಗದಿದ್ದರೆ ಗಾಂಧಿ ಪ್ರತಿಮೆಗಳು ಎಲ್ಲೆಲ್ಲಿ ಇವೆಯೋ ಅವೆಲ್ಲವನ್ನೂ ಭಗ್ನಗೊಳಿಸಬೇಕು – ಎಂದು ಬರೆದವನು ರಾಮಸ್ವಾಮಿ. ಗಾಂಧಿ ಮತ್ತು ನೆಹರೂ ಪ್ರತಿಮೆಗಳನ್ನು ಒಡೆದುಹಾಕಿ. ಬ್ರಾಹ್ಮಣರನ್ನು ಸಾರ್ವಜನಿಕವಾಗಿ ಥಳಿಸಿ. ಬ್ರಾಹ್ಮಣರ ಮನೆಗಳಿಗೆ ಬೆಂಕಿಯಿಕ್ಕಿ – ಎಂದು ಘೋಷಣೆ ಕೂಗಿದ್ದವನು ಈ ಶಾಂತಿದೂತ! ಇಂಥ ವಿಕ್ಷಿಪ್ತನನ್ನು ನಮ್ಮ ಬುದ್ದುಜೀವಿಗಳು ಗಾಂಧಿ, ಅಂಬೇಡ್ಕರ್ ಪಕ್ಕದಲ್ಲಿಟ್ಟು ಮಾಲೆ ಹಾಕಿ ಪೂಜಿಸಿದಾಗ ತಲೆ ಚಚ್ಚಿಕೊಳ್ಳುವಂತಾಗುತ್ತದೆ. ತಮಿಳುನಾಡಲ್ಲಿ ಗಲ್ಲಿಗಲ್ಲಿಯಲ್ಲೂ ದೇವಸ್ಥಾನಗಳಿಗೆ ನುಗ್ಗಿ ದೇವರ ಮೂರ್ತಿಗಳಿಗೆ ಚಪ್ಪಲಿಹಾರ ಈ ಮನುಷ್ಯನಿಗೆ ಹೂಹಾರ ಹಾಕುವವರೂ ಅಂಥ ಚಪ್ಪಲಿಸಂಸ್ಕೃತಿಯವರೇ ಆಗಿರಬೇಕಲ್ಲವೆ?

ಎಲ್ಲ ಬಿಡಿ, ನೆಹರೂ ಕೂಡ ಈ ರಾಮಸ್ವಾಮಿಯ ಹುಚ್ಚಾಟಗಳನ್ನು ನೋಡಿ Old and senile men like Periyar deserve a place more in a lunatic asylum than in public life. It is high me Periyar and his followers were banished from this land ಎಂಬ ಮಾತುಗಳನ್ನು ಹೇಳಬೇಕಾಯಿತು. ಅನುಯಾಯಿಗಳ ಹುಚ್ಚಾಟ ತಮಿಳುನಾಡಿನಲ್ಲಿ ಅದೆಷ್ಟು ಮಿತಿ ಮೀರಿತ್ತೆಂದರೆ ರಾಮಾಯಣವನ್ನು ತಿರುಚಿ ರಾಮನನ್ನು ಖಳನಾಯಕನಂತೆ ತೋರಿಸಿ ಅವರು ಆಡುತ್ತಿದ್ದ ನಾಟಕಗಳನ್ನು ನಿಷೇಧಿಸಲಿಕ್ಕಾಗಿಯೇ ಕಾಮರಾಜರ ಕಾಂಗ್ರೆಸ್ ಸರಕಾರ ನಾಟಕ ಕಾಯಿದೆ ತರಬೇಕಾಯಿತು! ರಾಮಸ್ವಾಮಿಯ 94 ವರ್ಷಗಳ ದೀರ್ಘ ಜೀವನವನ್ನು ಈಗ, ದೂರದಿಂದ ಅವಲೋಕಿಸಿದಾಗ, ಆತ ಅದೆಂಥ ಅರ್ಥಹೀನ ಮನುಷ್ಯನಾಗಿದ್ದನೆಂಬುದು ಅರ್ಥವಾಗುತ್ತದೆ. ಆತನಿಗೆ ಜೀವನದಲ್ಲಿದ್ದದ್ದು ಒಂದೇ – ಎಲ್ಲರಿಗಿಂತ ಭಿನ್ನನೆಂದು ತೋರಿಸಿಕೊಳ್ಳುವ ಅದಮ್ಯ ತೆವಲು.

ಯೇನಕೇನ ಪ್ರಕಾರೇಣ ತನ್ನ ಅಸ್ತಿತ್ವ ಸ್ಥಾಪಿಸಬೇಕಿತ್ತು. ಅದಕ್ಕಾಗಿ ಸುಭಾಷಿತದಂತೆ ಮಡಕೆ ಒಡೆದು ಬಟ್ಟೆ ಹರಿದು ಗಲಾಟೆ ಎಬ್ಬಿಸಬೇಕಿತ್ತು ಅಷ್ಟೆ. ರಾಮಸ್ವಾಮಿ ನಡೆಸಿದ ಯಾವೊಂದು ಚಳವಳಿಗೂ ಇಂದು ಅರ್ಥ ಉಳಿದಿಲ್ಲ. ಆತ ಕೊರೆದಿಟ್ಟುಹೋದ ಆರ್ಯ-ದ್ರಾವಿಡ ಸಿದ್ಧಾಂತ, ಹಿಂದೀ ವಿರೋಧ, ಬ್ರಾಹ್ಮಣ ದ್ವೇಷ, ನಾಸ್ತಿಕವಾದ, ಭಾರತೀಯ ಕಾವ್ಯೇತಿಹಾಸದ ಉಪೇಕ್ಷೆ, ಸಂಸ್ಕೃತ ವಿರೋಧ, ಭಾರತದ ಮಹಾಕಾವ್ಯಗಳ ಭರ್ತ್ಸನೆ ಮುಂತಾದವು ಆತನ ಒಂದಷ್ಟು ಅನುಯಾಯಿ ಬುದ್ಧಿಜೀವಿಗಳಲ್ಲಿ ಇನ್ನೂ ಕುಟುಕು ಜೀವ ಉಳಿಸಿಕೊಂಡಿವೆ ಎನ್ನುವುದನ್ನು ಬಿಟ್ಟರೆ ರಾಮಸ್ವಾಮಿ, ಆತನ ಪ್ರತಿಮೆ ಇದ್ದರೂ ಇಲ್ಲದಿದ್ದರೂ, ಅಪ್ರಸ್ತುತನಾಗಿದ್ದಾನೆ. ದುರುಳನ ಸಮರ್ಥನೆಗೆ ನಿಲ್ಲುವವರೂ ಅವನಂಥ ದುರುಳರೇ ಆಗಿರುತ್ತಾರೆ ಎಂಬುದನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

eighteen + seven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top