ಅಂಗಾತ ಮಲಗಿರುವ ಪಕ್ಷಕ್ಕೀಗ ಲಿಂಗಾಯತವೇ ಪ್ರಾಣವಾಯು!

Posted In : ಅಂಕಣಗಳು, ಚಕ್ರವ್ಯೂಹ

ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಕೊಟ್ಟ ವರದಿಯನ್ನು ಸರಕಾರ ಅಂಗೀಕರಿಸಿದೆ; ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮತ್ತು ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಟೇಟಸ್ ನೀಡಬೇಕು ಎಂದು ಈ ಆಯೋಗ ಕೊಟ್ಟಿರುವ ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಕಳಿಸಲಾಗುವುದು – ಎಂದು ಸಿದ್ದರಾಮಯ್ಯನವರ ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳನ್ನು ವಿಸ್ತಾರವಾಗಿ ಚರ್ಚಿಸಬೇಕಾಗಿದೆ.

ಮೊದಲನೆಯದಾಗಿ, ಇಂಥದೊಂದು ವಿಭಜನೆ ಈಗ ಅಗತ್ಯವಿತ್ತೆ? ಎಂಬ ಪ್ರಶ್ನೆ. ಆರು ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಸಮುದಾಯವನ್ನು ಒಡೆಯುವ ಹೇಳಿಕೆ ಕೊಟ್ಟರು. ಮಾತ್ರವಲ್ಲ, ಶತಾಯಗತಾಯ ಈ ಸಮುದಾಯವನ್ನು ಒಡೆದೇ ತೀರಬೇಕು ಎಂಬ ಕಾರಣಕ್ಕೆ ಇಬ್ಬರು ಸಚಿವರನ್ನು ಆ ಕೆಲಸಕ್ಕೇ ನೇಮಿಸಿಬಿಟ್ಟರು. ತಮಾಷೆಯೆಂದರೆ ಲಿಂಗಾಯತರನ್ನು ಹಿಂದೂ ಧರ್ಮದಿಂದ ಹೊರತಂದು ಪ್ರತ್ಯೇಕಿಸುವ ಜವಾಬ್ದಾರಿ ವಹಿಸಿಕೊಂಡಿರುವ ಸಚಿವ ಎಂ.ಬಿ. ಪಾಟೀಲ, ಮೂಲತಃ ಕೂಡು ಒಕ್ಕಲಿಗ! ಲಿಂಗಾಯತರೊಳಗಿರುವ ಪಂಚಮಸಾಲಿ, ಸಾದರು, ಗಾಣಿಗ, ಬಣಜಿಗರಂತೆ ಕೂಡು ಒಕ್ಕಲಿಗರ ಸಂಖ್ಯೆ ರಾಜ್ಯದಲ್ಲಿ ಬಹಳಿಲ್ಲ. ಹಾಗಾಗಿ ತನ್ನ ಜಾತಿಯ ಸಂಘಟನೆ ರಾಜ್ಯದಲ್ಲಿ ಯಾವ ರಾಜಕೀಯವನ್ನೂ ಮಾಡುವುದು ಅಸಾಧ್ಯ ಎಂಬುದನ್ನರಿತ ಪಾಟೀಲರು ಇಡೀ ಲಿಂಗಾಯತ ಸಮುದಾಯಕ್ಕೇ ಮಹಾನಾಯಕನಾಗುವ ಕನಸು ಕಂಡರು. ನೀನು ಲಿಂಗಾಯತ ಧರ್ಮವನ್ನು ಒಡೆದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದ ಹತ್ತಿರ ಸುಳಿಯದಂತೆ ನೋಡಿಕೊಂಡರೆ ನಿನಗೇ ಮುಂದೆ ಉಪಮುಖ್ಯಮಂತ್ರಿ ಪಟ್ಟ ಎಂದು ಸಿದ್ದರಾಮಯ್ಯನವರು ಒಂದು ಆಮಿಷದ ಬಲೆಯನ್ನೂ ಹೆಣೆದಿದ್ದಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಲಿಂಗಾಯತ ಸಮುದಾಯದ ಓಲೈಕೆ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿಯವರಿಗೆ ಎಷ್ಟು ಮುಖ್ಯವೋ ಅಷ್ಟೇ ಸಿದ್ದರಾಮಯ್ಯನವರಿಗೂ ಯಾಕೆಂದರೆ ಅವರು ಮುಖ್ಯಮಂತ್ರಿಯಾಗಿ ಆರಿಸಿಬಂದ ಮೊದಲ ಮೂರು ವರ್ಷಗಳಲ್ಲಿ ಇಡೀ ಕರ್ನಾಟಕದ ಮುಖ್ಯಮಂತ್ರಿ ಎಂಬ ಮುದ್ರೆಯನ್ನು ಇನ್ನೂ ಗಟ್ಟಿಯಾಗಿ ಒತ್ತಿರಲಿಲ್ಲ. ಅವರು ಏನಿದ್ದರೂ ಹಳೆಮೈಸೂರು ಭಾಗಕ್ಕಷ್ಟೇ ಮುಖ್ಯಮಂತ್ರಿಯಾಗಿದ್ದರು. ಉತ್ತರ ಕರ್ನಾಟಕದ ಜನ ಅವರನ್ನು ಯಾವ ಕಾರಣಕ್ಕೂ ತಮ್ಮ ನಾಯಕ ಎಂದು ಒಪ್ಪಿಕೊಂಡಿರಲಿಲ್ಲ. ಆದರೆ ಇಡೀ ಕರ್ನಾಟಕದ ವಿಶ್ವಾಸ ಗಳಿಸಲೇಬೇಕು ಎಂಬ ಜಿದ್ದಿಗೆ ಬಿದ್ದ ಸಿದ್ದರಾಮಯ್ಯ ಮೇಲಿಂದ ಮೇಲೆ ಉತ್ತರ ಕರ್ನಾಟಕದ ಟೂರ್ ಕೈಗೊಂಡರು. ಉತ್ತರ ಕರ್ನಾಟಕ – ವಿಶೇಷವಾಗಿ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಕಲ್ಪಿಸಿದರು. ಐಐಟಿಯನ್ನು ಧಾರವಾಡಕ್ಕೆ ಕೊಟ್ಟರು. ಉತ್ತರ ಕರ್ನಾಟಕದ ಯಾವ ನಾಯಕರೂ ಕಾಂಗ್ರೆಸ್‌ನಲ್ಲಿ ತನ್ನಷ್ಟು ವರ್ಚಸ್ವೀಯಾಗಿ ಬೆಳೆಯಗೊಡದಂತೆ ನೋಡಿಕೊಂಡರು. ಆರ್.ವಿ. ದೇಶಪಾಂಡೆಯಂಥ ಹಿರಿಯ ನಾಯಕರನ್ನೇ ಹೆಡೆಮುರಿಕಟ್ಟಿ, ಹಲ್ಲು ಕಿತ್ತ ಹಾವಿನಂತೆ ಕೂರಿಸಿಬಿಟ್ಟರು. ಉತ್ತರ ಕರ್ನಾಟಕದಲ್ಲಿ ನಾಯಕ ಅನ್ನಿಸಿಕೊಳ್ಳಬೇಕಾದರೆ ಇಷ್ಟೆಲ್ಲ ಮಾಡಿದರೆ ಸಾಕಾಗದು; ಅಲ್ಲಿನ ಜಾತಿ ವಿಷಯದಲ್ಲೂ ಕೈ ಹಾಕಬೇಕು ಎಂಬುದು ಯಾವಾಗ ಅರ್ಥವಾಯಿತೋ ಆಗ ಸಿದ್ದರಾಮಯ್ಯನವರು ಹೊಸೆದ ತಂತ್ರವೇ ಲಿಂಗಾಯತ ಧರ್ಮ.

ಈ ತಂತ್ರದಿಂದ ಅವರು ಎರಡು ವಿಷಯಗಳು. ಒಂದು – ತನ್ನ ಮತ್ತು ಪರೋಕ್ಷವಾಗಿ ಕಾಂಗ್ರೆಸ್‌ನ ಬುಡವನ್ನು ಉತ್ತರ ಕರ್ನಾಟಕದಲ್ಲಿ ಭದ್ರಪಡಿಸುವುದು. ಎರಡು – ತನ್ನ ಪ್ರಬಲ ಪ್ರತಿಸ್ಫರ್ಧಿಯಾಗಿರುವ ಬಿ.ಎಸ್. ಯಡಿಯೂರಪ್ಪನವರನ್ನು ಅವರದ್ದೇ ಅಖಾಡದಲ್ಲಿ ಎದುರಿಸಿ ನಡುಮುರಿಯುವುದು. ಲಿಂಗಾಯತವೆಂಬುದು ಧರ್ಮವೇ ಅಲ್ಲವೇ ಎಂಬ ಪ್ರಶ್ನೆಯನ್ನು ಯಡಿಯೂರಪ್ಪನವರು ಅತ್ಯಂತ ಸುಲಭವಾಗಿ ಪರಿಹರಿಸಿಕೊಳ್ಳುವುದಕ್ಕಂತೂ ಸಾಧ್ಯವಿಲ್ಲ. ಯಾಕೆಂದರೆ ಅರ್ಧ ಜನ ಅದೊಂದು ಧರ್ಮ ಎಂದು ಒಪ್ಪಿಕೊಂಡರೆ ಇನ್ನರ್ಧ ಜನ ನಾವೆಲ್ಲ ಹಿಂದೂ ಧರ್ಮದ ಭಾಗವೇ ಎಂದು ಹೇಳುತ್ತಾರೆ. ಯಾವ ವಾಲಿದರೂ ಯಡಿಯೂರಪ್ಪನವರು ಮಿಕ್ಕ ಅರ್ಧ ಜನರ ವಿಶ್ವಾಸವನ್ನು ಮತ್ತು ಓಟನ್ನು ಕಳೆದುಕೊಳ್ಳುತ್ತಾರೆ.

ಡಿನೋಟಿಫಿಕೇಶನ್ ಹಗರಣದಲ್ಲಿ ಯಡಿಯೂರಪ್ಪನವರನ್ನು ಹಣ್ಣುಗಾಯಿ ನೀರುಗಾಯಿ ಮಾಡಲು ಹೊರಟಿದ್ದ ಸಿದ್ದರಾಮಯ್ಯನವರಿಗೆ ಅದು ಯಾವಾಗ ಸಾಧಿತವಾಗುವುದಿಲ್ಲ ಎಂಬುದು ಖಚಿತವಾಯಿತೋ ಆಗ ಅವರು ಯಡಿಯೂರಪ್ಪನವರನ್ನು ಈ ರೀತಿ ಕಟ್ಟಿಹಾಕಲು ನೋಡಿದರು. ಮತ್ತು ಅದರಲ್ಲಿ ಒಂದು ಹಂತಕ್ಕೆ ಯಶಸ್ವಿಯೂ ಆಗಿದ್ದಾರೆ ಎಂದು ಹೇಳಬಹುದು. ಲಿಂಗಾಯತರೊಳಗೇ ಈಗ (1) ನಾವು ಲಿಂಗಾಯತ ಆದರೆ ವೀರಶೈವ ಅಲ್ಲ; (2) ವೀರಶೈವ ಹೌದು ಲಿಂಗಾಯತ (3) ವೀರಶೈವ ಲಿಂಗಾಯತ ಎರಡೂ ಒಂದೇ ಮತ್ತು (4) ವೀರಶೈವ ಅಥವಾ ಲಿಂಗಾಯತ ಏನೇ ಆಗಿರಲಿ, ನಾವು ಹಿಂದೂಗಳು – ಎಂದು ಹೇಳುವ ಒಟ್ಟು ನಾಲ್ಕು ಗುಂಪುಗಳು ಸಿಡಿದಿವೆ. ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಕೊಟ್ಟದ್ದೂ ಹಾಲು-ಅನ್ನ ಅನ್ನುವಂಥ, ಭುವನದ ಭಾಗ್ಯ ಸಿದ್ದರಾಮಯ್ಯನವರಿಗೆ! ಸಿದ್ದರಾಮಯ್ಯನವರು ಏನು ಆಗಬೇಕೆಂದು ಬಯಸಿ ಈ ಬಾಂಬ್ ಹಾಕಿದ್ದರೋ ಅದು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಬಿದ್ದು, ಅವರೆಣಿಸಿದಂತೆ ಲಿಂಗಾಯತ ಎಂಬ ಸಮುದಾಯ ಈಗ ಚೂರಾಗಿ ಬಿದ್ದಿದೆ. ಅದನ್ನು ಮತ್ತೆ ಒಟ್ಟು ಸೇರಿಸುವ ಕೆಲಸಕ್ಕೆ ಯಡಿಯೂರಪ್ಪನವರು ಕೂತುಬಿಟ್ಟರೆ ಮತ್ತು ಅದರಲ್ಲೇ ಕಳೆದುಹೋಗುವಂತಾದರೆ ಚುನಾವಣೆ ಸಮಯಕ್ಕೆ ತನ್ನ ಬೇಳೆ ಸರಿಯಾಗಿ ಬೆಂದಿರುತ್ತದೆ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ!

ಅಂದ ಹಾಗೆ, ಲಿಂಗಾಯತ ಎಂಬುದು ಸ್ವತಂತ್ರ ಧರ್ಮ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಗಳ ಮುಂದಿಡುತ್ತಿರುವ ವಾದಗಳು ಸ್ವಾರಸ್ಯಕರವಾಗಿವೆ. ಅವರು ಹೇಳುತ್ತಾರೆ – ಹಿಂದೂ ಧರ್ಮ ನಮ್ಮನ್ನು ಇಷ್ಟು ವರ್ಷ ತುಳಿಯಿತು. ಹಿಂದೂ ಧರ್ಮದಲ್ಲಿ ಮೌಢ್ಯಾಚರಣೆ ಇದೆ; ಮೇಲು-ಕೀಳೆಂಬ ತಾರತಮ್ಯ ವ್ಯವಸ್ಥೆ ವಿಗ್ರಹಾರಾಧನೆ ಇದೆ; ಕಂದಾಚಾರ ಸಂಪ್ರದಾಯಗಳಿವೆ. ನಮ್ಮದು ಅತ್ಯಂತ ವೈಜ್ಞಾನಿಕವಾದ ಧರ್ಮ. ಬಸವಣ್ಣ ಸ್ಥಾಪಿಸಿದ ಲಿಂಗಾಯತದಲ್ಲಿ ವಿಗ್ರಹ ಪೂಜೆ ಇಲ್ಲ, ಹೋಮ-ಹವನ ಇಲ್ಲ, ಮೌಢ್ಯ ಆಚರಣೆ ಇಲ್ಲ.

ಈ ಹೇಳಿಕೆಗಳಲ್ಲಿ ಯಾವುದಕ್ಕಾದರೂ ಸರಿಯಾದ ತಳಹದಿ ಇದೆಯೇ ಎಂದರೆ ನಕಾರವೇ ಉತ್ತರ. ಲಿಂಗಾಯತರು ಕೂಡ ಹಿಂದೂ ದೇವರುಗಳನ್ನೇ ಆರಾಧಿಸುವವರು. ಶಿವನನ್ನು ಪೂಜೆ ಪುನಸ್ಕಾರಗಳ ಮೂಲಕ ಒಪ್ಪಿಕೊಂಡವರು. ಶಿವರಾತ್ರಿಯನ್ನು ಅದ್ದೂರಿಯಾಗಿ, ಹಾಗೆಯೇ ಅರ್ಥಪೂರ್ಣವಾಗಿ ಆಚರಿಸುವ ಲಿಂಗಾಯತ ಮಠಗಳಿವೆ. ಹಿಂದೂ ಸಂಪ್ರದಾಯಗಳಲ್ಲಿರುವ ಎಲ್ಲಾ ಆಚರಣೆಗಳೂ ತಮ್ಮ ದೇವರಿಗೆ ಅವರು ಅಭಿಷೇಕ, ನೈವೇದ್ಯ ಸಹಿತ ಆರತಿ ಎತ್ತಿ ಪೂಜೆ ಮಾಡುತ್ತಾರೆ. ಲಿಂಗಾಯತ ಮಠ ಮತ್ತು ದೇವಸ್ಥಾನಗಳಲ್ಲಿ ವಾರ್ಷಿಕ ರಥೋತ್ಸವಗಳೂ ಇವೆ. ಇಷ್ಟಲಿಂಗ ಎಂಬುದು ಶಿವಲಿಂಗದ ಪ್ರತೀಕವೇ ಆಗಿರುವುದರಿಂದ ಮತ್ತು ಹಿಂದೂ ಸಂಪ್ರದಾಯಗಳಲ್ಲೂ ಶಿವನನ್ನು ಲಿಂಗರೂಪಿಯಾಗಿಯೇ ಪೂಜಿಸುವ ಕ್ರಮ ಇರುವುದರಿಂದ ಅದನ್ನು ವಿಗ್ರಹ ಅಲ್ಲ, ಕೇವಲ ಸಂಕೇತ ಮಾತ್ರ ಎಂದು ಹೇಳಲು ಸಾಧ್ಯವಿಲ್ಲ. ಶಿವ, ಓಂ ಪ್ರಣವಮಂತ್ರ, ವಿಭೂತಿ ಇವೆಲ್ಲ ಸಂಕೇತಗಳು ಹಿಂದೂ ಧರ್ಮದ ಒಳಗೇ ಇರುವಂಥ ಸಂಪ್ರದಾಯವೇ ಹೊರತು ಪ್ರತ್ಯೇಕ ಧರ್ಮ ಅಲ್ಲ. ಬಸವಣ್ಣ ಮತ್ತು ಅವರ ಅನುಯಾಯಿಗಳು ಒಂದಷ್ಟು ವಚನಗಳಲ್ಲಿ ವೈದಿಕ ಆಚರಣೆಗಳನ್ನು ವಿರೋಧಿಸಿದರೆಂಬ ಕಾರಣಕ್ಕೇ ಅವರು ಹಿಂದೂ ಧರ್ಮವನ್ನು ಧಿಕ್ಕರಿಸಿದರು, ಹೊಸ ಧರ್ಮ ಸ್ಥಾಪಿಸಿದರು ಎಂದು ಹೇಳಲು ಸಾಧ್ಯವೇ? ಹರಿದಾಸ ಸಾಹಿತ್ಯದಲ್ಲಿಯೂ – ಮುಖ್ಯವಾಗಿ ಪುರಂದರದಾಸ ಮತ್ತು ಕನಕದಾಸರ ರಚನೆಗಳಲ್ಲೇ ಎಷ್ಟೋ ಕಡೆ ವೈದಿಕ ಕಂದಾಚಾರಗಳನ್ನು ನೇರಾನೇರವಾಗಿ ಕಠೋರ ಮಾತುಗಳಿಂದ ನಿಂದಿಸಿದ ಉದಾಹರಣೆ ಸಿಗುತ್ತವೆ.

ಹಾಗೆಂದ ಮಾತ್ರಕ್ಕೆ ಅವರಿಬ್ಬರೂ ವೈಷ್ಣವ ಸಂಪ್ರದಾಯಕ್ಕೆ ವಿರುದ್ಧವಾಗಿದ್ದರು, ಧರ್ಮ ಸ್ಥಾಪನೆಗೆ ಅಡಿಪಾಯ ಹಾಕಿದ್ದರು ಎಂದು ಹೇಳಬಹುದೆ? ಎಲ್ಲಕ್ಕಿಂತ ಮುಖ್ಯವಾದ ಅಂಶ ಏನೆಂದರೆ ಬಸವಣ್ಣ ಆಗಲಿ ಅವರ ಸಮಕಾಲೀನರಾದ ಮಿಕ್ಕಾವ ಶರಣರೇ ಆಗಲಿ ಲಿಂಗಾಯತ ಎಂಬ ಶಬ್ದವನ್ನು ತಮ್ಮ ಯಾವ ವಚನಗಳಲ್ಲೂ ಬಳಸಿಲ್ಲ. ತಾವು ಹೊಸ ಧರ್ಮ ಸ್ಥಾಪನೆ ಮಾಡುತ್ತಿದ್ದೇವೆಂದು ಬಸವಣ್ಣ ಹೇಳಿಕೊಂಡಿಲ್ಲ. ಅಥವಾ ಬಸವಣ್ಣ ಸ್ಥಾಪಿಸಿದ ಹೊಸ ಧರ್ಮದ ಅನುಯಾಯಿಗಳು ತಾವು ಎಂದು ಅವರ ಯಾವ ಸಮಕಾಲೀನ ಶರಣರೂ ಬರೆದಿಲ್ಲ. ಹಾಗಿರುವಾಗ ಇಲ್ಲದೇ ಇರುವ ಸಂಗತಿಯನ್ನು ಐತಿಹಾಸಿಕ ಎಂದು ಬಿಂಬಿಸುವ ದರ್ದು ಈಗಿನ ರಾಜಕಾರಣಿಗಳಿಗೆ ಯಾಕೆ?

ಲಿಂಗಾಯತವು ಪ್ರತ್ಯೇಕ ಧರ್ಮವಾಗಿ ರೂಪು ಪಡೆಯಬೇಕು ಎಂದು ಕೇವಲ ಭಾವನಾತ್ಮಕ ನೆಲೆಯಿಂದ ಯೋಚಿಸುತ್ತಿರುವವರಿಗೆ ವಿಷಯ ಸ್ಪಷ್ಟವಾಗುವಂತೆ ಕಾನೂನಿನ ತೊಡಕುಗಳ ಬಗ್ಗೆಯೂ ಒಮ್ಮೆ ಸರಳವಾಗಿ ವಿವರಿಸುತ್ತೇನೆ, ಕೇಳಿ. ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳಿದ್ದರೂ ಅದು ಭಾರತದ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಬೇಕಾದ ಸಂದರ್ಭದಲ್ಲಿ ಏನಾಗುತ್ತದೆ ನೋಡೋಣ. ವಿವಾಹ ಅಥವಾ ವಿಚ್ಛೇದನಕ್ಕೆ ಸಂಬಂಧಿಸಿದ ವ್ಯಕ್ತಿ/ವ್ಯಕ್ತಿಗಳು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ – ಈ ಸಮುದಾಯಗಳಲ್ಲಿ ಯಾವೊಂದಕ್ಕೂ ಸೇರಿದವರಲ್ಲವಾದರೆ ಅವರ ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥಪಡಿಸುವುದು ಹಿಂದೂ ವಿವಾಹ ಅಧಿನಿಯಮ, 1955 – ಇದನ್ನು ಅನುಸರಿಸಿ. ಅಂದರೆ ಭಾರತದಲ್ಲಿ ಮೇಲೆ ಹೇಳಿದ ನಾಲ್ಕು ಮತೀಯರ ಹೊರತಾಗಿ ಬೇರೆ ಯಾರೇ ಇದ್ದರೂ – ಅದು ಲಿಂಗಾಯತ, ವೀರಶೈವ, ಆರ್ಯಸಮಾಜ, ಬ್ರಹ್ಮಸಮಾಜ, ಬೌದ್ಧ, ಜೈನ, ಸಿಖ್ – ಯಾರೇ ಆಗಿರಲಿ, ಅವರೆಲ್ಲರಿಗೂ ಅನ್ವಯವಾಗುವುದು ಹಿಂದೂ ವಿವಾಹ ಅಧಿನಿಯಮ, 1955 – ಇದೇ! ಹಾಗೆಯೇ, ದತ್ತು ವಿಚಾರದಲ್ಲಿ ಏನಾದರೂ ತಕರಾರುಗಳೆದ್ದಾಗ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಆಗ ವ್ಯಕ್ತಿಗಳು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿ ಅಲ್ಲವಾದರೆ, ಅವರು ಯಾರೇ ಆಗಿರಲಿ, ಅವರ ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥಪಡಿಸುವುದು ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ, 1956 – ಇದನ್ನು ಅನುಸರಿಸಿ.

ಯಾವುದಾದರೂ ವ್ಯಕ್ತಿ ಸತ್ತಾಗ ಆತನ/ಆಕೆಯ ಆಸ್ತಿ ಒಂದೋ ಉಯಿಲಲ್ಲಿ ಯಾರ ಹೆಸರಿಗೆ ಸೂಚಿಸಲಾಗಿದೆಯೋ ಅವರಿಗೆ ಹೋಗುತ್ತದೆ; ಇಲ್ಲವಾದರೆ ಮಕ್ಕಳಿಗೆ ಹಸ್ತಾಂತರವಾಗುತ್ತದೆ. ವ್ಯಕ್ತಿ ಬದುಕಿದ್ದಾಗ ಕೂಡ ತನ್ನ ಆಸ್ತಿಯ ಹಂಚಿಕೆ ಮಾಡಬಹುದು. ಎಲ್ಲ ಬಗೆಯ ಆಸ್ತಿ ವಿಚಾರದಲ್ಲಿಯೂ ಸಮಸ್ಯೆಗಳೆದ್ದಾಗ, ವ್ಯಕ್ತಿ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿ – ಈ ನಾಲ್ಕು ಮತಗಳಿಗೆ ಸೇರಿದವನಲ್ಲವಾದರೆ ಆತನ ಆಸ್ತಿ ವಿಚಾರವನ್ನು ನ್ಯಾಯಾಲಯ ಇತ್ಯರ್ಥಪಡಿಸುವುದು ಹಿಂದೂ ವಾರಸಾ (ಉತ್ತರಾಧಿಕಾರ) ಅಧಿನಿಯಮ, 1956 – ಇದನ್ನು ಅನುಸರಿಸಿ. ಅಂದರೆ ಭಾರತದಲ್ಲಿರುವ, ಭಾರತೀಯನೆಂದು ಗುರುತಿಸಿಕೊಂಡಿರುವ ಯಾವುದೇ ವ್ಯಕ್ತಿ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿ – ಈ ನಾಲ್ಕರಲ್ಲಿ ಯಾವ ಮತಕ್ಕೂ ಸೇರದವನಲ್ಲವಾದರೆ ಆತನಿಗೆ ನ್ಯಾಯಾಲಯದಲ್ಲಿ ಅನ್ವಯವಾಗುವುದು ಗುರುತಿಸಿಕೊಂಡವರಿಗೆ ಅನ್ವಯವಾಗುವ ಕಾನೂನೇ! ವಿಷಯ ಹೀಗಿರುವಾಗ ಲಿಂಗಾಯತ ಹೊಸ ಧರ್ಮ ಎಂದು ಗುರುತಿಸಿಕೊಂಡು ಪಡೆಯುವ ಹೆಚ್ಚುಗಾರಿಕೆಯಾದರೂ ಯಾವುದು?

ಈಗ ಸರಕಾರ ತನ್ನ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಕಳಿಸುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಆದರೆ ಲಿಂಗಾಯತ ಸಮುದಾಯದ ಒಳಗಿನವರೇ ಒಂದಷ್ಟು ಮಂದಿ ತುರ್ತಾಗಿ ಮಾಡಬೇಕಿರುವ ಕೆಲಸಗಳು ಏನು ಗೊತ್ತೆ? (1) ಲಿಂಗಾಯತರನ್ನು, ಅವರ ಒಪ್ಪಿಗೆ ಇಲ್ಲದೆ ಪ್ರತ್ಯೇಕ ಧರ್ಮವಾಗಿಸಿಯೇ ಸಿದ್ಧ ಎಂದು ಹೂಂಕರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದೂರು ದಾಖಲಿಸಲು ಅವಕಾಶವಿದೆ. ಲಿಂಗಾಯತರನ್ನು ಲಿಂಗಾಯತ-ವೀರಶೈವ ಎಂದು ಪ್ರತ್ಯೇಕಿಸಿ ಒಡೆಯುತ್ತಿರುವ ಮುಖ್ಯಮಂತ್ರಿ ಮಾತ್ರವಲ್ಲ, ಅವರ ಸಹೋದ್ಯೋಗಿಗಳು ಹಾಗೂ ಕೆಲವೊಂದು ಖೊಟ್ಟಿ ಪೀಠಾಧಿಪತಿಗಳ ಮೇಲೆ ಕೂಡ ಇದೇ ಸೆಕ್ಷನ್‌ನಲ್ಲಿ ದೂರು ದಾಖಲಿಸಬಹುದು. (2) ಲಿಂಗಾಯತರ ಆಚರಣೆ, ಸಂಪ್ರದಾಯಗಳೆಲ್ಲವೂ ಹಿಂದೂ ಧರ್ಮದಿಂದಲೇ ಹೊರಟವಾದ್ದರಿಂದ ಹಿಂದೂ ಧರ್ಮ ಬೇರೆಯಲ್ಲ, ಲಿಂಗಾಯತ ಧರ್ಮ ಬೇರೆಯಲ್ಲ ಎಂದು ಲಿಂಗಾಯತ ಸಮುದಾಯದವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಬಹುದು.

(3) ಜಸ್ಟಿಸ್ ನಾಗಮೋಹನ್ ದಾಸ್, ಕರ್ನಾಟಕ ಸರಕಾರದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಕಾರವೇ ಒಂದು ಪ್ರತ್ಯೇಕ ಆಫೀಸ್ ಕೊಟ್ಟು, ಆಳುಕಾಳುಗಳನ್ನು ನೇಮಿಸಿ, ಸಂಬಳ ಕೊಟ್ಟು ಕೆಲಸ ತೆಗೆಸುತ್ತಿದೆ. ಹಾಗಿರುವಾಗ ಅವರು ಕೊಡುವ ಯಾವುದೇ ಶಿಫಾರಸು ನಿಷ್ಪಕ್ಷಪಾತವಾಗಿರಲು ಹೇಗೆ ಸಾಧ್ಯ?! ಸರಕಾರವೇ ತನಗೆ ಬೇಕಾದ ನಿರ್ಣಯವನ್ನು ಜಸ್ಟಿಸ್ ಮೂಲಕ ಬರೆಸಿದೆ ಅಷ್ಟೆ! ಕಳೆದ ಮೂರು ವರ್ಷಗಳಿಂದಲೂ ಸರಕಾರದ ಭಾಗವಾಗಿಯೇ ಕೆಲಸ ಮಾಡುತ್ತಿರುವ ಮತ್ತು ಸ್ವತಃ ಲಿಂಗಾಯತರಲ್ಲದ ಜಸ್ಟಿಸ್ ನಾಗಮೋಹನ್ ದಾಸ್, ಲಿಂಗಾಯತರು ಪ್ರತ್ಯೇಕ ಧರ್ಮ ಅಲ್ಲವೋ ಎಂದು ತೀರ್ಪು ಕೊಡಲು ಎಷ್ಟು ಮಾತ್ರಕ್ಕೂ ಅರ್ಹರಲ್ಲ. ಹಾಗಾಗಿ ಅವರ ವರದಿಯನ್ನೇ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಈ ಸಂದರ್ಭದಲ್ಲಿ ಕನ್ನಡದ ಜನ ಎಚ್ಚೆತ್ತುಕೊಳ್ಳಬೇಕಿರುವುದು ಕಾಂಗ್ರೆಸ್‌ನ ಒಡೆದು ಆಳುವ ನೀತಿಯ ಬಗ್ಗೆ. ಹೊಸ ಧರ್ಮ ಎಂದು ಘೋಷಣೆ ಮಾಡಿಸುವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಇದುವರೆಗೆ ಶಾಂತವಾಗಿದ್ದ ಕೊಳದಲ್ಲಿ ಕಲ್ಲೊಗೆದು ಅಲೆಗಳೇಳುವಂತೆ ಮಾಡಿದ್ದಾರೆ.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕೆಲವು ತಿಂಗಳ ಹಿಂದೆ ತುಂಗಭದ್ರಾ ನದಿಗೆ ಪೂಜೆ ಬಾಗಿನ ಅರ್ಪಿಸಿದ್ದರು. ಇಷ್ಟಲಿಂಗಕ್ಕಲ್ಲದೆ ಬೇರಾವುದಕ್ಕೂ ಪೂಜೆ, ಆರಾಧನೆ ಮಾಡುವುದಿಲ್ಲ ಎನ್ನುವ ಪಾಟೀಲರೇ ಖುದ್ದುನಿಂತು ನದಿಗೆ ಬಾಗಿನ ಅರ್ಪಿಸಿ ಪೂಜೆ ಮಾಡಿದರಲ್ಲ? ನಮ್ಮ ಸುತ್ತಮುತ್ತಲಿನ ನದಿ, ಕೆರೆ, ಪರ್ವತ, ವೃಕ್ಷಗಳಿಗೆ ಪೂಜೆಯ ಮೂಲಕ ನಮ್ಮ ಕೃತಜ್ಞತೆ ಅರ್ಪಿಸುವುದು ಹಿಂದೂ ಸಂಸ್ಕೃತಿಯ ಭಾಗವೇ ತಾನೇ? ನಮ್ಮ ಧರ್ಮದಲ್ಲಿ ವಿಗ್ರಹಾರಾಧನೆಯೇ ಇಲ್ಲ ಎನ್ನುವ ಪಾಟೀಲರು ಸ್ವತಃ ಬಸವೇಶ್ವರರ ಮೂರ್ತಿಯನ್ನು ಜನ ಪೂಜಿಸುವುದನ್ನು ಅಲ್ಲಗಳೆಯುತ್ತಾರೆಯೇ? ಲಿಂಗಾಯತವು ಹೊಸ ಧರ್ಮ, ಸ್ವತಂತ್ರ ಧರ್ಮ, ಅದು ಹಿಂದೂ ಪ್ರತ್ಯೇಕವಾದದ್ದು ಎನ್ನುವ ಸಿದ್ಧಾಂತವನ್ನು ಪ್ರತಿಷ್ಠಾಪಿಸಲಿಕ್ಕಾಗಿಯೇ ಈಗ ಇವರು ಹಲವು ಹೊಸ ಆಚರಣೆಗಳನ್ನು ಜಾರಿಗೆ ತರಬೇಕಾಗಿದೆ; ಹಲವು ಹಳೆ ಆಚರಣೆ-ಸಂಪ್ರದಾಯಗಳನ್ನು ಕೈ ಬಿಡಬೇಕಾಗಿದೆ.

ಇಂಥ ಗೊಂದಲಗಳು ಈಗ ನಮ್ಮ ಸಮಾಜಕ್ಕೆ ನಿಜವಾಗಿಯೂ ಬೇಕಾಗಿದೆಯೇ? ಲಿಂಗಾಯತರು ಹಿಂದೂ ಧರ್ಮದ ಒಳಗೆ ಗುರುತಿಸಿಕೊಳ್ಳುತ್ತಾರೋ ಇಲ್ಲವೋ ಎನ್ನುವುದು ಸದ್ಯದ ಪ್ರಶ್ನೆಯಲ್ಲ. ಆದರೆ ಸದ್ಯದ ರಾಜಕೀಯ ಲಾಭಗಳನ್ನಷ್ಟೇ ನೋಡುತ್ತಿರುವ ಪುಢಾರಿಗಳ ಮಾತು ನಂಬಿ ಲಿಂಗಾಯತ ಸಮುದಾಯ ಮುಂದುವರಿದರೆ ಅತ್ತ ಅದೂ ಇಲ್ಲ ಇತ್ತ ಇದೂ ಇಲ್ಲ ತ್ರಿಶಂಕು ಸ್ಥಿತಿಯಲ್ಲಿ ಡೋಲಾಯಮಾನರಾಗಬೇಕಾಗುತ್ತದೆ. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯನವರಿಗೆ ಲಿಂಗಾಯತ ಸಮುದಾಯವನ್ನು ಧರ್ಮವಾಗಿ ನೋಡಬೇಕೋ ಬೇಡವೋ ಎಂಬ ಪ್ರಶ್ನೆ ಅಪ್ರಸ್ತುತವಾಗುತ್ತದೆ ಎಂಬುದು ಲಿಂಗಾಯತ ಸಮುದಾಯಕ್ಕೆ ತಿಳಿದಿದ್ದರೆ ಸಾಕು.

Leave a Reply

Your email address will not be published. Required fields are marked *

15 + 9 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top