About Us Advertise with us Be a Reporter E-Paper

ಅಂಕಣಗಳು

ಧ್ವನಿವರ್ಧಕ ಕಿತ್ಕೋಬಹುದು, ರಕ್ತಗತ ಕಲೆ, ಧ್ವನಿಯನ್ನಲ್ಲ

- ಜಿತೇಂದ್ರ ಕುಂದೇಶ್ವರ

ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ನೋಡುತ್ತಿದ್ದೆ. ಯಕ್ಷಗಾನ ನಡೆಯುತ್ತಿತ್ತು. ತಾಯಿ ( ಭವ್ಯಶ್ರೀ ಕುಲ್ಕುಂದ) ಭಾಗವತಿಕೆ ಮಾಡುತ್ತಿದ್ದರೆ ತಾಯಿಯ ಪಕ್ಕದಲ್ಲಿ ಕೂತ ಎರಡು ವರ್ಷದ ಪುಟ್ಟ ಮಗುವೊಂದು ನೀರಿನ ಬಾಟಲಿಯನ್ನೇ ಮದ್ದಲೆಯನ್ನಾಗಿಸಿ ಲಯಬದ್ಧವಾಗಿ ಬಾರಿಸುತ್ತಿತ್ತು. ಪುಟ್ಟ ಮಗುವಿನ ಕೈ ಆಂಗಿಕ ಭಾವಗಳುಪಕ್ಕಾ ಮದ್ದಲೆಗಾರನ ಶೈಲಿಯಲ್ಲಿಯೇ ಇತ್ತು. ಈ ವೀಡಿಯೋ ಸಕತ್ ವೈರಲ್ ಆಗಿತ್ತು. ಮಗುವಿಗೆ ಯಕ್ಷಗಾನದ ಸಂಸ್ಕಾರ ಎನ್ನುವುದು ರಕ್ತಗತವಾಗಿ ಬಂದಿದೆ.

ಇದು ಕರಾವಳಿ ಮತ್ತು ರಾಜ್ಯದ ಕಲೆ ಯಕ್ಷಗಾನದ ವೈಶಿಷ್ಟ್ಯ. ಯಕ್ಷಗಾನ ಪ್ರೇಮಿಗಳು ಎಲ್ಲೇ ಹೋಗಲಿ ಚೆಂಡೆ, ಮದ್ದಲೆ ಧ್ವನಿಗೆ ಕೈ, ಕಾಲು ಸ್ವಲ್ಪವಾದರೂ ಆಡಿಯೇ ಆಡಿಸುತ್ತಾರೆ. ಭಾಗವತಿಕೆಯ ಧ್ವನಿಗೆ ಕೊಂಚವಾದರೂ ತಲೆದೂಗಿಸುತ್ತಾರೆ. ಇದು ಕಲೆಯ ಮೇಲಿನ ಅಭಿಮಾನ. ಆದರೆ ಇಂಥ ಕಲೆಗೆ ಮಂಗಳೂರಿನಲ್ಲಿ ಅಗೌರವ ಪ್ರದರ್ಶಿಸಿದರು.

ಮೊನ್ನೆ ಉರ್ವದ ಚರ್ಚ್ ಹಾಲ್ ನಲ್ಲಿ ನಡೆದ ಪತ್ರಕರ್ತರ ಪ್ರೆಸ್‌ಕ್ಲಬ್ ಡೇ ಕಾರ್ಯಕ್ರಮ ನಡೆಯುತ್ತಿತ್ತು. ಪತ್ರಕರ್ತರು ಒಟ್ಟುಗೂಡಿ ನರಕಾಸುರ ವಧೆ ಮತ್ತು ಮೈಂದ ದ್ವಿವಿಧ ಯಕ್ಷಗಾನ ಪ್ರದರ್ಶಿಸುತ್ತಿದ್ದರು. ಹೊಸದಿಗಂತದ ಪತ್ರಕರ್ತ ಹರೀಶ್ ಕುಲ್ಕುಂದ ಅವರ ಪತ್ನಿ ಭವ್ಯಶ್ರೀ ಕುಲ್ಕುಂದ ಭಾಗವತಿಕೆ ಮಾಡುತ್ತಿದ್ದರು. ಇನ್ನೇನು 20 ನಿಮಿಷದೊಳಗೆ ಆಟ ಮುಗಿಯುತ್ತದೆ ಎಂದಾಗ ಉರ್ವ ಚರ್ಚ್ ಹಾಲ್‌ನ ಸಿಬ್ಬಂದಿ ಮೈಕ್ ಆಫ್ ಮಾಡಿದರು. ಆಗ ಅಲ್ಲೇ ಇದ್ದ ಒಂದಿಬ್ಬರು ಪತ್ರಕರ್ತರು ಮೈಕ್ ಆನ್ ಮಾಡುವಂತೆ ವಿನಂತಿಸಿದರು. ಪತ್ರಕರ್ತರ ಆಹ್ವಾನದ ಮೇರೆಗೆ ಬಂದಿದ್ದ ಫ್ರಾಂಕ್ಲಿನ್ ಮೊಂತೆರೊ ಎಂಬವರು ಕೊಂಕಣಿ ಭಾಷೆಯಲ್ಲಿಯೇ ಮ್ಯಾನೇಜರ್ ಬಳಿ ಹತ್ತು ನಿಮಿಷ ಮೈಕ್ ಹಾಕು ಮಾರಾಯ ಎಂದು ಮಾಡಿದರೂ ನಗುತ್ತಲ್ಲೇ ಇದ್ದ ಆತ ಮೈಕ್ ಆನ್ ಮಾಡಲೇ ಇಲ್ಲ. ಸ್ವಲ್ಪ ಹೊತ್ತಿನಲ್ಲಿ ಲೈಟ್ ಆಫ್ ಮಾಡಿಬಿಟ್ಟ. ಧೃತಿಗೆಡದ ಪತ್ರಕರ್ತರು ಕೊನೆಯ ದೃಶ್ಯಕ್ಕೆ ರಾಮದರ್ಶನ ಮಾಡಿಸಿ ಮಂಗಲ ಹಾಡಿದರು.

ಪತ್ರಕರ್ತರಿಗೆ ಪ್ರಸಂಗ ನಿರ್ದೇಶನ ನೀಡಿದ್ದ ಯಕ್ಷಗುರು ರಾಮಚಂದ್ರ ಭಟ್ ಎಲ್ಲೂರು ತೀವ್ರವಾಗಿ ನೊಂದು ಚೌಕಿ (ವೇಷ ಹಾಕುವ ಸ್ಥಳ)ಯಲ್ಲಿ ಯಕ್ಷಗಾನಕ್ಕೆ ಆದ ಅಪಮಾನದಿಂದ ನೋವಿನ ಮಾತನಾಡಿದರು. ಇದೇ ವೇಳೆಗೆ ಅಲ್ಲಿದ್ದ ಸುದ್ದಿವಾಹಿನಿ ಪತ್ರಕರ್ತ ಭರತ್‌ರಾಜ್ ಮತ್ತು ವೀರೇಶ್ ಕಾಡಿಲ್ಕರ್ ಹೇಳಿಕೆ ಪಡೆದರು. ಇದೇ ವೇಳೆ ಬಲರಾಮನ ಪಾತ್ರಧಾರಿಯಾಗಿದ್ದ ನನ್ನ ಹೇಳಿಕೆಯನ್ನು ಪಡೆದರು. ಆಗ ನಾನು ಆಕ್ರೋಶದಲ್ಲಿದ್ದೆ ನನ್ನ ಪ್ರವೇಶ ಆಗುತ್ತಿದ್ದಂತೆಯೇ ಮೈಕ್ ಗಳನ್ನು ಸಿಬ್ಬಂದಿ ಎತ್ತಿಕೊಂಡು ಹೋಗುತ್ತಿದ್ದ. ಆದರೆ ಇದಕ್ಕಿಂತ 2-3 ನಿಮಿಷಕ್ಕೆ ಮುಂಚಿತವಾಗಿಯೇ ಧ್ವನಿವರ್ಧಕ ವ್ಯವಸ್ಥೆ ಬಂದ್ ಮಾಡಲಾಗಿತ್ತು.

ಪುಟ್ಟ ಮಗುವಿಗೂ ಕೂಡಾ ವೇದಿಕೆಗೆ ಬರುವಾಗ ಮಾತನಾಡುವ ಸಂದರ್ಭ ಮೈಕ್, ಲೈಟ್ ಆಫ್ ಮಾಡಿದರೆ ಸಿಟ್ಟು, ಅಳು ಬಂದೇ ಬರುತ್ತದೆ. ನನಗೂ ಅದೇ ತೆರನಾದ ಆಕ್ರೋಶ ಮೂಡಿತ್ತು. ಸಿಬ್ಬಂದಿ ಗೌರವ ನೀಡಬೇಕಿತ್ತು. ಆದರೆ ಮೈಕ್ ಬಂದ್ ಮಾಡಬೇಡಿ ಎಂದಾಗ ಆತ ಮುಗುಳ್ನಗುತ್ತಿದ್ದ. ಅದರಲ್ಲಿ ಒಂದು ರೀತಿಯ ವ್ಯಂಗ್ಯ ಇತ್ತು. ಇದನ್ನು ನೋಡಿದಾಗ ಸಹಿಸದೆ ಆ ಕ್ಷಣಕ್ಕೆ ನನ್ನಲ್ಲಿ ಮೂಡಿದ ಭಾವನೆಗಳನ್ನು ವೀಡಿಯೋದ ಮುಂದೆ ಹಂಚಿಕೊಂಡಿದ್ದೆ.

ಇದನ್ನು ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಸುದ್ದಿ ಮಾಡಿದವರಲ್ಲಿ ಮುಸ್ಲಿಮರು, ಹಿಂದುಗಳು, ಕ್ರೆûಸ್ತರೂ ಇದ್ದರು. ಅವರೇ ವೀಡಿಯೋಗಳನ್ನು ಶೇರ್ ಮಾಡಿದರು. ಇಡೀ ಯಕ್ಷಗಾನ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಪೊಸಕುರಲ್ ವಾಹಿನಿಯ ಆಸೀಫ್ ಅವರು ತಕ್ಷಣ ವೀಡಿಯೋ ಮಾಡಿ ಎಲ್ಲರಿಗೂ ಕಳುಹಿಸಿದರು. ಇಲ್ಲಿ ಧರ್ಮದ ವಿಚಾರ ಅಪ್ರಸ್ತುತ. ಆದರೆ ಹಿಂದೂ ಧರ್ಮದಲ್ಲಿ ಯಕ್ಷಗಾನವನ್ನು ಧಾರ್ಮಿಕ ಮತ್ತು ಕಲೆ ದೃಷ್ಟಿಯಿಂದ ನೋಡಲಾಗುತ್ತಿದೆ. ಆದರೆ ಈ ಯಕ್ಷಗಾನವನ್ನು ಮುಸ್ಲಿಂ, ಕ್ರೆûಸ್ತರು ಅಪ್ಪಿಕೊಂಡಿದ್ದಾರೆ. ಕ್ರಿಶ್ಚಿಯನ್ ಬಾಬು ಎಂಬ ಪುಂಡುವೇಷಧಾರಿ ಇಂದಿಗೂ ಯಕ್ಷಪ್ರಿಯರು ನೆನಪು ಮಾಡಿಕೊಳ್ಳುತ್ತಾರೆ. ಜಬ್ಬಾರ್ ಸಮೋ ಈಗಲೂ ಬಹು ಬೇಡಿಕೆಯ ಕಲಾವಿದೆ. ನಮ್ಮೂರಿನ ಮಾರ್ಸೆಲ್ ನರೋನ್ಹಾ ಅವರನ್ನು ನಮ್ಮೂರಿನ ಕುಂದೇಶ್ವರ ಉತ್ಸವದ ಸಂದರ್ಭ ನಾನೇ ಸನ್ಮಾನಿಸಿದ್ದೆ.

ಯಾವುದೇ ಧರ್ಮದಲ್ಲೂ ಕೂಡಾ ಮೇಲೆ ಗೌರವ ಇದ್ದೇ ಇರುತ್ತದೆ, ಕಾನೂನು, ನ್ಯಾಯ, ನೀತಿ ಎಲ್ಲ ವಿಚಾರದಲ್ಲೂ ಮೊನ್ನೆ ಯಕ್ಷಗಾನದ ನಡುವೆ ಮೈಕ್, ಲೈಟ್ ಆಫ್ ಮಾಡಿದ್ದು ಸಮರ್ಥನೀಯ ಅಲ್ಲ. ಅರ್ಧಗಂಟೆ ವಿಳಂಬವಾಗಿದ್ದು ಹೌದು. ಯಾವುದೇ ಕಾರ್ಯಕ್ರಮಗಳು ನಿಗದಿತ ಸಮಯಕ್ಕಿಂತ ತಡವಾಗಿ ಪ್ರಾರಂಭವಾಗಿ, ತಡವಾಗಿ ಮುಗಿಯುತ್ತದೆ. ಮದುವೆ ಹಾಲ್‌ನಲ್ಲಿ ಇದು ನಿತ್ಯದ ತಾಕಲಾಟ. ಪೀಕಲಾಟ. ಮದುವೆ ಸಂದರ್ಭ ಚರ್ಚ್ ಹಾಲ್‌ಗಳಲ್ಲಿ ಆಲ್ಕೋಹಾಲ್ ಪಾರ್ಟಿಗಳು ಮಾಮೂಲಿ. ಇಲ್ಲಿ ಪಾರ್ಟಿ ಬಂದ್ ಆಗುವುದು, ಮೈಕ್ ಆಫ್, ಲೈಟ್ ಆದ ಮೇಲೆಯೇ. ಇಂಥ ಸಂದರ್ಭದಲ್ಲಿ ಸಮುದಾಯದವರೇ ಗಲಾಟೆ ಮಾಡಿದ್ದಾರೆ. ಕೆನ್ನೆಗೆ ಬಾರಿಸಿದವರಿದ್ದಾರೆ. ಸುಮ್ಮನೆ ಮನೆಗೆ ತೆರಳಿದವರಿದ್ದಾರೆ.

ಆದರೆ ಯಕ್ಷಗಾನಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಚೌಕಿ ಪೂಜೆ, ಮಂಗಳ ಎಂಬ ಕಟ್ಟು ಪಾಡುಗಳಿವೆ. ಟೈಮ್ ಆಯಿತು ಎಂದು ಲೈಟ್ ಆಫ್ ಮಾಡಲು ಇದೇನು ಕುಡಿದು ನೃತ್ಯ ಮಾಡುವ ಪಾರ್ಟಿ ಆಗಿರಲಿಲ್ಲ. ಯಕ್ಷಗಾನ ಕೂಡಾ ತಕ್ಷಣ ನಿಲ್ಲಿಸಲು ಅದು ಆಫ್ ಮಾಡಬಹುದಾದ ಕರಂಟ್ ಸ್ವಿಚ್ ಕೂಡಾ ಅಲ್ಲ.

ಹಾಲ್ ಬುಕ್ ನಿಯಮ ಹೇಳಲಾಗಿದೆ. ತಡ ಮಾಡಿ ನಿಯಮ ಉಲ್ಲಂಘಿಸಿದ್ದೀರಿ ಆದ್ದರಿಂದ ನಿಮ್ಮದೇ ತಪ್ಪು ಎಂದು ಹಾಲ್ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಹೌದಪ್ಪಾ ಈ ರೀತಿಯ ಹಿಟ್ಲರ್ ನಿಯಮ ಇದ್ದದ್ದು ಯಕ್ಷಗಾನ ಮಾಡುವ ಪತ್ರಕರ್ತರ ಅರಿವಿಗೆ ಬರುತ್ತಿದ್ದರೆ ಒಂದೋ ಯಕ್ಷಗಾನ ಮಾಡುತ್ತಲೇ ಇರುತ್ತಿರಲಿಲ್ಲ. ಕೊನೆ ಹಂತದಲ್ಲಿ ಆದರೂ ಈ ಹಿಟ್ಲರ್ ನಿಯಮದ ಕೊಂಚವಾದರೂ ಅರಿವಿಗೆ ಬರುತ್ತಿದ್ದರೆ ಟೈಮ್ ಒಳಗೆ ಮುಗಿಸುವ ಪ್ರಯತ್ನ ಮಾಡುತ್ತಿದ್ದೆವು.

ಸಹಜವಾಗಿ ನಾವು ಆಕ್ರೋಶ ವ್ಯಕ್ತಪಡಿಸಿದೆವು. ಗೆಳೆಯ ಇರ್ಷಾದ್ ಆಕ್ರೋಶದ ವೀಡಿಯೊ ಕ್ಲಿಪ್ ನನಗೆ ಕಳುಹಿಸಿದ, ನಾನು ನನ್ನ ಗೆಳೆಯರಿಗೆ ಕಳುಹಿಸಿದೆ. ಅಷ್ಟರಲ್ಲಿ ಸಂಜೆ ವೇಳೆಗೆ ಯಕ್ಷಗಾನಕ್ಕೆ ಆದ ಅಪಮಾನದ ವೀಡಿಯೋ ವೈರಲ್ ಆಗಿತ್ತು. ಬಹುತೇಕ ಎಲ್ಲ ರಾಜ್ಯ ಮಟ್ಟದ ಅಂತರ್ಜಾಲ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಯಿತು. ಸ್ಥಳೀಯ ಎಲ್ಲ ಸುದ್ದಿವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್‌ಗಳು ಬಂತು. ಫೇಸ್‌ಬುಕ್ ಪೇಜ್‌ಗಳಲ್ಲಿ ಸಾವಿರಾರು ಕಮೆಂಟ್‌ಗಳು, ಲಕ್ಷಗಟ್ಟಲೆ ವ್ಯೂ ಬಂದವು.

ಜಾಲತಾಣದಲ್ಲಿ ವೈರಲ್ ಆದಾಗ ಮರುದಿನ ಬೆಳಗ್ಗೆ ಬಿಟಿವಿ, ರಾಜ್ ಟಿವಿ, ಮಧ್ಯಾಹ್ನ ಸುವರ್ಣ ಟಿವಿಗಳಲ್ಲಿ ಅಪಮಾನವಾದ ಸುದ್ದಿಗಳು ಪ್ರಕಟವಾಯಿತು. ಇದು ವಾಟ್ಸಪ್ ಗಳಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಸ್ಥಳೀಯ ವಾಹಿನಿಗಳಲ್ಲಿ ಡಿಬೆಟ್ ಕೂಡಾ ನಡೆಯಿತು. ಸ್ಥಳೀಯ ಒಂದೆರಡು ಪತ್ರಿಕೆಗಳಲ್ಲಿ ಬಟ್ಟರೆ ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಲೇ ಇಲ್ಲ.

ಕಾರಣ ಇದೆ. ಕಾರ್ಯಕ್ರಮ ಪ್ರೆಸ್ ಕ್ಲಬ್‌ನದ್ದು ಅಂದರೆ ಪತ್ರಕರ್ತರದ್ದು. ಸುದ್ದಿ ಹಾಕಿದರೆ ಪತ್ರಕರ್ತರಿಗೂ ಅವಮಾನ. ಮಂಗಳೂರಿನಲ್ಲಿ ಪ್ರಭಾವಿಯಾಗಿರುವ ಚರ್ಚ್‌ನವರಿಗೂ ಮನ ನೋಯುತ್ತದೆ. ವೃಥಾ ಸಂಬಂಧ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಸುದ್ದಿಯನ್ನು ಮಾಡಲು ಮಾಡಲಿಲ್ಲ. ಮಾಡಿದರೂ ಅದನ್ನು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಇದು ಸಹಜವೇ !

ಬಹುತೇಕ ಪತ್ರಕರ್ತರಿಗೆ ಮೈಕ್ ಆಫ್ ಮಾಡಿರುವುದು ಬೇಸರ ತಂದಿತ್ತು. ಆದರೆ ಸುದ್ದಿ ಹಾಕಿದರೆ ಪತ್ರಕರ್ತರೂ ಕೂಡಾ ವಿವಾದಕ್ಕೆ ಸಿಲುಕುತ್ತಾರೆ, ಯಾರದು ತಪ್ಪು, ಯಾರದು ಸರಿ ? ಸ್ಪಷ್ಟನೆ, ವಾದ, ವಿವಾದ ಬೆಳೆಯುತ್ತದೆ. ಅದೂ ಅಲ್ಲದೆ ಅಲ್ಲಿ ಮೈಕ್ ಆಫ್ ಆಗಿದ್ದು ಯಕ್ಷಗಾನ ಪ್ರದರ್ಶನದಲ್ಲಿ, ಸಮಾರಂಭದಲ್ಲಿ ಅಲ್ಲ.

ಇನ್ನೊಂದು ನಿಲುವು ಏನೆಂದರೆ ಪತ್ರಕರ್ತರಿಗೆ ಅನ್ಯಾಯ ಆದರೆ ಆ ಸಂಪಾದಕರು ಆಡಳಿತ ಮಂಡಳಿ ಬಹುತೇಕ ನಮಗ್ಯಾಕೆ ರಿಸ್‌ಕ್ ಎಂದೋ? ಪತ್ರಕರ್ತರು ಸುದ್ದಿ ಮಾಡಬೇಕು, ಸುದ್ದಿಯಾಗಬಾರದು ಎಂದೋ? ಈ ಕಾರಣಕ್ಕೆ ಅನ್ಯಾಯ ಆಗಿದ್ದರೂ ಅದನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಬಹುತೇಕ ಪತ್ರಕರ್ತರ ಅನ್ಯಾಯಕ್ಕೆ ಒಳಗಾದರೆ ಅದು ನಮ್ಮ ಸಂಸ್ಥೆಗೆ ಸಂಬಂಧಿಸಿದ್ದಲ್ಲ ಎಂದೇ ಮಾಧ್ಯಮ ಸುದ್ದಿ ಮಾಡುವುದಿಲ್ಲ. ತೀರಾ ಹಗೆತನ ಇದ್ದರೆ ಟೀಕಿಸಿ ವರದಿ ಮಾಡಿದ ಉದಾಹರಣೆಗಳು ಅನೇಕ ಇದೆ.

ಯಕ್ಷಗಾನ ಪ್ರೇಮಿಗಳು ಕೂಡಾ ಯಕ್ಷಗಾನ ನೋಡಿ, ಕಲಾವಿದರನ್ನು ಬೆಂಬಲಿಸಿ, ಕಲೆಯ ವ್ಯಸ್ತರಾಗುತ್ತಾರೆ. ಈ ಹೋರಾಟಕ್ಕೆ ಬರಲು ಸಾಧ್ಯವೂ ಇಲ್ಲ. ಆದರೆ ಯಕ್ಷಗಾನಕ್ಕೆ ಆದ ಅಪಮಾನದಿಂದ ಆಕ್ರೋಶಕೊಂಡು ಯಕ್ಷಪ್ರಿಯರು, ಜನಸಾಮಾನ್ಯರು ಮಾತ್ರ ಈ ವಿಚಾರವನ್ನು ಪ್ರತಿ ಮನೆಗೆ ಪ್ರತಿಯೊಬ್ಬರ ಮನಸ್ಸಿಗೂ ತಮ್ಮ ಮೊಬೈಲ್ ಕ್ಲಿಕ್ ಮೂಲಕ ಮುಟ್ಟಿಸಿದ್ದಾರೆ. ಪ್ರಮುಖ ಪತ್ರಿಕೆಗಳು ಒಂದು ತುಂಡು ಸುದ್ದಿ ಪ್ರಕಟಿಸದೇ ಇದ್ದರೂ ಪ್ರತಿಯೊಬ್ಬರ ಮನೆಗೆ, ಮನಸ್ಸಿಗೆ ಮುಟ್ಟಬಹುದು ಎನ್ನುವುದಕ್ಕೆ ಪತ್ರಕರ್ತರ ಯಕ್ಷಗಾನ ಪ್ರಕರಣವೂ ಒಂದು ಸಾಕ್ಷಿಯಾಯಿತು.

ನಾನೂ ಕೂಡಾ ಬೇರೆ ಯಾವುದೇ ಪತ್ರಿಕೆ, ಮಾಧ್ಯಮದಲ್ಲಿ ಇದ್ದರೆ ಗುಣ ಕಳೆದುಕೊಳ್ಳುತ್ತಿದ್ದೆನೋ ಏನೋ ? ಅಥವಾ ಪ್ರತಿಭಟಿಸುವ ಗುಣ ಇದ್ದ ಕಾರಣಕ್ಕೆ ಅಂಥ ಪತ್ರಿಕೆಗಳಲ್ಲಿ ಕೆಲಸ ಮಾಡಲಿಲ್ಲವೋ ಗೊತ್ತಿಲ್ಲ. ನಮ್ಮ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಈ ವಿಚಾರದಲ್ಲಿ ನಮಗೆ ಸ್ವಾತಂತ್ರ್ಯ ನೀಡಿದ್ದರಿಂದ ನಾನು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಯಕ್ಷಗಾನಕ್ಕೆ ಆದ ಅಪಮಾನ, ನನಗೆ ಆದ ನೋವನ್ನು ಹಂಚಿಕೊಳ್ಳಲು ಸಾಧ್ಯವಾಯಿತು.

ಆದರೆ ವೀಡಿಯೋ ನೋಡಿದ ಬಳಿಕ ಕೆಲವೇ, ಕೆಲವು ಸ್ವಯಂಘೋಷಿತ ಕ್ರೆûಸ್ತ ಬರಹಗಾರರು ಎನ್ನುವವರು ಇದೊಂದು ಷಡ್ಯಂತ್ರ ! ಎಂದು ಮೋದಿ ಗೆಲುವಿಗಾಗಿ ಟೀಂ ಮೋದಿ ಅವರು ಆಟ ಆಡಿಸಿದಂತೆ ಪತ್ರಕರ್ತರ ಯಕ್ಷಗಾನದಲ್ಲಿ ಬೇಕೆಂದೇ ಇಂಥ ಒಂದು ಪ್ರಸಂಗ ಸೃಷ್ಟಿಸಲಾಯಿತು. ನನ್ನ ಆಕ್ರೋಶದ ಮಾತುಗಳು ರಿಹರ್ಸಲ್ ಮಾಡಿಯೇ ಹೇಳಿದ್ದು ಎಂಬಲ್ಲಿ ವರೆಗೆ ಬರಹಗಾರರು ವೈಯಕ್ತಿಕವಾಗಿ ಗುರಿ ಮಾಡಿ, ಟೀಕಿಸಿ ಬರೆದರು. ಕ್ರೆûಸ್ತ ಧರ್ಮವನ್ನು ಗುರಿಯಾಗಿಸಿದರು, ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದರು… ಗಂಡು ಕಲೆ ಆಗಿರುವುದರಿಂದ ಲಿಂಗ ತಾರತಮ್ಯ ಮಾಡಲಾಗಿದೆ… ಇತ್ಯಾದಿ ಆರೋಪಗಳು ನಮ್ಮ ಮೇಲೆಯೇ ಬಂದವು.

ಒಂದು ವೇಳೆ ಸಮಯ ನಿಗದಿತ ಸಮಯದೊಳಗೆ ಆಟ ಆಗುವಾಗ ಯಾರದರೂ ಹೊರಗಿನವರು ಬಂದ್ ಮೈಕ್ ಆಫ್, ಧ್ವನಿವರ್ಧಕ ಕಿತ್ತುಕೊಳ್ಳಲು ಬಂದಿದ್ದರೆ ಅಲ್ಲಿದ್ದವರು ನಾಲ್ಕು ಬಾರಿಸಿ ( ಹೊಡೆಯುವುದು ತಪ್ಪು) ಪೊಲೀಸ್ ಠಾಣೆಗೆ ಕೊಡುತ್ತಿದ್ದರು.

ವಿಳಂಬವಾಗಿದ್ದು ನಮ್ಮ ಕಡೆಯಿಂದ ಆದ ಸಣ್ಣ ತಪ್ಪು ಇದ್ದ ಕಾರಣಕ್ಕೆ ಸುಮ್ಮನೆ ಇದ್ದು ಕೇವಲ ಆಕ್ರೋಶ ವ್ಯಕ್ತಪಡಿಸಿದ್ದು. ಇವರಿಗೆ ಇನ್ನೊಂದು ಹತ್ತು ನಿಮಿಷ ನೀಡಿದ್ದರೆ ಗಂಟೇನು ಹೋಗುತ್ತಿರಲಿಲ್ಲ. ಇವರು ಆಫ್ ಮಾಡಿದ್ದರೂ ಆಟವನ್ನು ನಿಲ್ಲಿಸದೆ ಪೂರ್ಣಗೊಳಿಸಲಾಗಿತ್ತು. ಹೀಗಾಗಿ ಇವರು ಏನು ? ಅಪಮಾನ. ಒಂದಷ್ಟು ಜನರಿಗೆ ಇಂಥ ಹಾಲ್‌ಗಳಿಗೆ ಹೋದರೆ ರಗಳೆ ಎಂಬ ಭಾವನೆ ಅಷ್ಟೇ.

ನಿಮಗೆ ಚರ್ಚ್ ಹಾಲ್ ಬಿಟ್ಟು ಬೇರೆ ಸಿಗಲಿಲ್ಲವೇ, ಎಲ್ಲೆಡೆ ಮಸಣದ ಜಾಗದಲ್ಲಿ ಹಾಲ್ ಕಟ್ಟಿದ್ದಾರೆ ಅಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮ, ಯಕ್ಷಗಾನ ಮಾಡಬಾರದು ಎಂಬೆಲ್ಲ ಅತಿರೇಕದ ವಾದಗಳು ಬಂದವು. ಹೋದದಕ್ಕೆ ತಕ್ಕ ಶಾಸ್ತಿಯಾಯಿತು ಎಂದು ಹಂಗಿಸಿ ಕೂಡಾ ಬರೆದರು. ಇದು ಅವರ ಅವರ ಅಭಿಪ್ರಾಯ. ಮಾಧ್ಯಮದವರಿಗೆ ಎಲ್ಲ ಧರ್ಮವೂ ಒಂದೇ ಆಗಿದ್ದರಿಂದ ಸಮಸ್ಯೆ ಆಗಲಿಕ್ಕಿಲ್ಲ ಎಂಬ ಕಾರಣಕ್ಕೆ ಅಲ್ಲಿ ಯಕ್ಷಗಾನ ಮಾಡಲಾಗಿತ್ತು ಅಷ್ಟೆ.

ಇನ್ನೊಂದು ವಿಚಾರ ಹೇಳಬೇಕು ಅಂದರೆ ಈ ಚರ್ಚ್ ಹಾಲ್‌ಗಳಲ್ಲಿ ಪ್ರತಿಧ್ವನಿ ಆಗುತ್ತದೆ, ಸ್ಪಷ್ಟವಾಗಿ ಮಾತುಗಳು ಕೇಳುವುದಿಲ್ಲ. ಆದ್ದರಿಂದ ಅಲ್ಲಿ ಯಕ್ಷಗಾನ ಮಾಡಿದರೆ ಕಷ್ಟ ಎಂದು ಯಕ್ಷ ಗುರುಗಳು ಕಿವಿಮಾತು ಹೇಳಿದ್ದರು. ಆದರೆ ಕೇವಲ ಸುದ್ದಿಯಲ್ಲಿ ಚರ್ಚ್ ಎಂಬ ಶಬ್ದ ಬಂದ ಕಾರಣಕೆ ಕೆಲವರ ಹೊಟ್ಟೆ ಚುರ್ ಗುಟ್ಟಿ ಒಟ್ಟಾಗಿ ಬರಹಗಾರರು ಜಾಲತಾಣದಲ್ಲಿ ದಾಳಿ ಮಾಡಿದರು.

ಹತ್ತು ನಿಮಿಷ ನೀಡದೆ ಮೈಕ್ ಬಂದ್ ಮಾಡಿದ್ದು ಮೈಕ್ ಎಳ್ಕೊಂಡು, ಲೈಟ್ ಆಫ್ ಮಾಡಿದ್ದು ಯಕ್ಷಗಾನಕ್ಕೆ ಮಾಡಿದ ಅವಮಾನ ಎಲ್ಲ ಅದು ಸರಿ ಎಂದು ವಾದಿಸಿದರು. ನಿಜ ಯಕ್ಷಗಾನದ ಮೇಲೆ ಗೌರವ ಇದ್ದರೆ ತಾನೇ ಅವಮಾನ ಎಂದು ಅನಿಸುವುದು. ಅವರಿಗೆ ಕುಡಿದು ನೃತ್ಯ ಮಾಡಿದನ್ನು ನಿಲ್ಲಿಸುವುದು ಒಂದೇ ಯಕ್ಷಗಾನ ಆಗುತ್ತಿದ್ದಾಗಲೂ ಆಫ್ ಮಾಡುವುದು ಒಂದೇ ಎಂದು ತಿಳಿದರೆ ಅವಮಾನ ಎಂದು ಅರಿವಾಗುವುದಾದರೂ ಹೇಗೆ ? ಆದೂ ಅಲ್ಲದೆ ಇಲ್ಲಿ ನೋವಾಗಿರುವುದು ಪತ್ರಕರ್ತರಿಗೆ, ಆಗಿರುವುದು ಯಕ್ಷಗಾನ ಪ್ರದರ್ಶನಕ್ಕೆ. ಆದರೂ ಮ್ಯಾನೇಜರ್ ಪರ ಮಾತನಾಡುವ ಮೂಲಕ ಕೆಲವೇ ಕೆಲವು ಬರಹಗಾರರು ತಮ್ಮ ಕೋಮು ಪಕ್ಷಪಾತದ ಭಾವನೆ ಪ್ರದರ್ಶಿಸಿದರು.

ಆ ಕ್ಷಣದಲ್ಲಿ ನೋವು ತೋಡಿಕೊಂಡಿದ್ದಷ್ಟೇ, ಆದರೆ ವೀಡಿಯೋ ನೋಡಿದವರು ಈಗಲೂ ಕೂಡಾ ನಾನು ಆಕ್ರೋಶದಲ್ಲಿಯೇ ಇದ್ದೇನೆ ಎಂಬ ಭಾವನೆಯಲ್ಲಿದ್ದಾರೆ. ಹಾಗೇನು ಇಲ್ಲ, ಸಿಬ್ಬಂದಿಯ ಅಚಾತುರ್ಯದಿಂದ ಘಟನೆ ನಡೆದು ಹೋಯಿತು, ಕ್ಷಮೆ ಇರಲಿ ಎಂದು ಒಂದು ಮಾತು ಬಂದಿದ್ದರೆ ಅವರು ದೊಡ್ಡದಾಗುತ್ತಿದ್ದರು. ಸದಾ ಕ್ಷಮೆಯ ಕುರಿತು ಹೇಳುವುದು ಕ್ಷಮೆ ಕೇಳುವುದು ಕಷ್ಟ ಎನ್ನುವುದು ಈ ಪ್ರಕರಣದಿಂದ ಮತ್ತೆ ಸಾಬೀತಾಯಿತು. ಯಕ್ಷಗಾನ ಗೇಲಿಗೆ ಒಳಗಾಗದಿರಲಿ. ಯಕ್ಷಗಾನಮ್ ಗೆಲ್ಗೆ!

Tags

Related Articles

Leave a Reply

Your email address will not be published. Required fields are marked *

Language
Close