About Us Advertise with us Be a Reporter E-Paper

ಅಂಕಣಗಳು

ಚೆನ್ನಾಗಿದೆ ಎನ್ನುವುದಕ್ಕೆ ಬೆನ್ನು ನೋವೇ

ತ್ತೊಂಬತ್ತನೆಯ ಶತಮಾನದಲ್ಲಿ ಪ್ರಖ್ಯಾತರಾಗಿದ್ದವರು ಇಂಗ್ಲೇಂಡಿನ ಚಿತ್ರಕಾರ ಮತ್ತು ಕವಿ ಡಾಂಟೆ ಗೇಬ್ರಿಯೆಲ ರೋಸೆಟ್ಟಿಯವರು. ಅವರು ಅನೇಕ ಯುವ ಚಿತ್ರಕಾರರಿಗೆ, ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಗಾಗಿ ಯುವ ಕಲಾವಿದರ ದೊಡ್ಡ ಗುಂಪೇ ಅವರ ಸುತ್ತಮುತ್ತ ಯಾವಾಗಲೂ ಇರುತ್ತಿತ್ತು.

ಒಮ್ಮೆ ವೃದ್ಧರೊಬ್ಬರು ಡಾಂಟೆಯವರನ್ನು ಭೇಟಿಯಾದರು. ೆಲವು ಚಿತ್ರಗಳನ್ನು ಡಾಂಟೆಯವರಿಗೆ ತೋರಿಸಿದರು. ಅವರ ಅಭಿಪ್ರಾಯವನ್ನು ಕೇಳಿದರು. ಡಾಂಟೆಯವರು ಚಿತ್ರಗಳನ್ನೆಲ್ಲಾ ಎಚ್ಚರಿಕೆಯಿಂದ ಪರಿಶೀಲಿಸಿದರು. ವೃದ್ಧರನ್ನುದ್ದೇಶಿಸಿ ಬೇಸರ ಪಟ್ಟುಕೊಳ್ಳಬೇಡಿ. ನಿಜ ಹೇಳುತ್ತೇನೆ. ಇವು ಬಹಳ ಸಾಧಾರಣ ಮಟ್ಟದ, ಯಾವ ಹೊಸತನವೂ ಇಲ್ಲದ ಚಿತ್ರಗಳು. ಇವುಗಳನ್ನು ಬಿಡಿಸಿದವರು ವಯಸ್ಸಾದ ವ್ಯಕ್ತಿಯಿರಬೇಕು. ಪೇಯಿಂಟ್ ಬ್ರಶ್ ಅವರ ಕೈಯಲ್ಲಿ ದೃಢವಾಗಿ ನಿಲ್ಲುವುದಿಲ್ಲವೆಂದು ಕಾಣುತ್ತದೆ. ಆದುದರಿಂದ ಚಿತ್ರದಲ್ಲಿ ಯಾವ ರೇಖೆಗಳೂ ಖಚಿತವಾಗಿ ಮೂಡಿಬಂದಿಲ್ಲ. ಬಣ್ಣವೂ ಎಲ್ಲೆಲ್ಲೋ ಹರಡಿಬಿಟ್ಟಿದೆ. ಇವುಗಳಿಗೆ ಯಾವ ಬೆಲೆಯನ್ನೂ ಕಟ್ಟುವುದಿಲ್ಲ. ಇವುಗಳನ್ನು ರಚಿಸಿದವರಿಗೆ ದಯವಿಟ್ಟು ಇದನ್ನು ತಿಳಿಸಿಬಿಡಿ ಎಂದರು.

ಡಾಂಟೆಯವರ ಮಾತುಗಳನ್ನು ಕೇಳಿದ ವೃದ್ಧರು ನಿರುತ್ಸಾಹದ ನಿಟ್ಟುಸಿರು ಬಿಟ್ಟು ನಿಮ್ಮ ನೇರನುಡಿಗಳಿಗೆ ದಯವಿಟ್ಟು ಇನ್ನು ಕೇವಲ ಐದು ನಿಮಿಷಗಳನ್ನು ಕೊಡಿ. ನನ್ನ ಬಳಿ ಇನ್ನಷ್ಟು ಚಿತ್ರಗಳಿವೆ. ಯುವಕನೊಬ್ಬ ಅವನ್ನು ರಚಿಸಿದ್ದಾನೆ. ಯವಿಟ್ಟು ಅವನ್ನೊಮ್ಮೆ ನೋಡಿಬಿಡಿ ಎಂದು ಬೇಡಿಕೊಂಡು, ಮತ್ತಷ್ಟು ಚಿತ್ರಗಳನ್ನು ತೋರಿಸಿದರು. ಒಲ್ಲದ ಮನಸ್ಸಿನಿಂದಲೇ ಡಾಂಟೆಯವರು ಅವುಗಳನ್ನು ನೋಡತೊಡಗಿದರು. ಸಂತೋಷದಿಂದ ಉದ್ಘಾರ ತೆಗೆದು ಓಹ್ ಅದ್ಭುತ! ಇವನ್ನು ರಚಿಸಿದ ಯುವಕನಲ್ಲಿ ಪ್ರತಿಭೆ ಅಡಗಿದೆ. ಆತನಿಗೆ ಪ್ರೋತ್ಸಾಹ ಸಿಕ್ಕರೆ, ಕೊಂಚ ಕಷ್ಟಪಟ್ಟರೂ ಅದ್ಭುತ ಸಾಧನೆಯನ್ನು ಮಾಡಬಲ್ಲ! ಆತನಿಗೆ ನನ್ನನ್ನು ಭೇಟಿಯಾಗಲು ಹೇಳಿ. ನನ್ನ ಸಹಾಯ ಮಾಡುತ್ತೇನೆ ಎಂದರು.

ಡಾಂಟೆಯವರ ಮಾತುಗಳನ್ನು ಕೇಳಿ ಹಿರಿಯರ ಮುಖ ಒಂದು ಕ್ಷಣ ಅರಳಿತು. ಆದರೆ ಮರುಕ್ಷಣವೇ ನಿರಾಶೆಯ ನಿಟ್ಟುಸಿರು ಬಿಟ್ಟರು. ಚಿತ್ರಗಳನ್ನೆಲ್ಲ ಎತ್ತಿಟ್ಟರು. ಹೊರಡಲು ಸಿದ್ಧರಾದರು. ಅವರ ವರ್ತನೆ ಅರ್ಥವಾಗದ ಡಾಂಟೆಯವರು  ನಿರಾಶೆ, ನಿಟ್ಟುಸಿರು ಏಕೆ? ಅಷ್ಟಕ್ಕೂ ಚಿತ್ರಗಳನ್ನು ರಚಿಸಿದ ವಯಸ್ಸಾದ ವ್ಯಕ್ತಿ ಯಾರು? ಯುವಕ ಯಾರು? ಎಂದು ಕೇಳಿದರು.

ವೃದ್ಧರು ಮತ್ತೊಂದು ನಿಟ್ಟುಸಿರು ಬಿಟ್ಟು ಇಬ್ಬರೂ ಬೇರೆ ಯಾರೂ ಅಲ್ಲ. ಅವೆರಡೂ ನಾನೇ! ವರ್ಷಗಳ ಹಿಂದೆ ನಾನು ಚಿತ್ರಗಳನ್ನು ರಚಿಸಿದೆ. ಆಗ ಯಾರಿಗೋ ಅವುಗಳನ್ನು ತೋರಿಸಿದೆ. ಅವುಗಳಲ್ಲಿ ಯಾವ ಮಹತ್ವವೂ ಅವರಿಗೆ ಕಾಣಿಸಲಿಲ್ಲವೇನೋ? ಅವರು ನನ್ನನ್ನು ಬೈದು ಕಳಿಸಿಬಿಟ್ಟರು. ನನಗಾದ ನಿರಾಶೆಯಲ್ಲಿ ಮುದುಡಿಹೋದೆ. ಚಿತ್ರ ರಚನೆಯನ್ನೇ ಬಿಟ್ಟುಬಿಟ್ಟೆ. ಯಾವುದೋ ಕೆಲಸಕ್ಕೆ ಸೇರಿಕೊಂಡೆ. ಬದುಕೆಲ್ಲಾ ಅಲ್ಲೇ ಕಳೆದೆ. ಇತ್ತೀಚೆಗೆ ನಿವೃತ್ತಿಯಾದೆ. ಸುಮ್ಮನೆ ಕಾಲ ಕಳೆಯಲಾಗದೇ ಮತ್ತೆ ಕೆಲವು ಚಿತ್ರಗಳನ್ನು ರಚಿಸಿದೆ. ನಿಮಗೆ ಮೊದಲು ತೋರಿಸಿದ ಚಿತ್ರಗಳು ಅವು. ಅವು ನಿಮಗೆ ಹಿಡಿಸಲಿಲ್ಲ. ಆನಂತರ ಮೆಚ್ಚಿಕೊಂಡ ಚಿತ್ರಗಳು ನಾನು ಯುವಕನಾಗಿದ್ದಾಗ ರಚಿಸಿದ್ದವು. ಅಂದು ಅವನ್ನು ನಿಮ್ಮಂತಹ ಯಾರಾದರೂ ಪುಣ್ಯಾತ್ಮರು ಸಿಕ್ಕಿ ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದರೆ ನನ್ನ ಬದುಕೇ ಬದಲಾಗುತ್ತಿತ್ತು. ಈಗ ಚಿತ್ರ ರಚನೆ ಮಾಡೋಣವೆಂದರೆ, ವೃದ್ಧಾಪ್ಯದಿಂದ ಕೈ ನಡುಗುತ್ತದೆ. ನಾನೇನು ಮಾಡಲಿ? ಎಂದು ಹೇಳಿ ಖಿನ್ನಮನಸ್ಕರಾಗಿ ಹೊರಟುಹೋದರು.

ಘಟನೆಯು ನಮಗೂ ಮಾರ್ಗದರ್ಶಿ ಆಗಬಹುದಲ್ಲವೇ? ಯಾವುದಾದರೂ ಬಾಲಪ್ರತಿಭೆಯೋ ಅಥವಾ ಯುವಪ್ರತಿಭೆಯೋ ತಮ್ಮ ಪ್ರತಿಭೆಯನ್ನು ನಮಗೆ ತೋರಿಸಿದರೆ, ನಾವು ಅವರ ಪ್ರತಿಭೆಯ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಪ್ರೋತ್ಸಾಹಿಸಿದರೆ, ಜಗತ್ತಿಗೆ ಒಂದು ಒಳ್ಳೆಯ ಕಲಾವಿದನನ್ನು ಕೊಡುವ ಹೆಮ್ಮೆ ನಮ್ಮದಾಗಬಹುದಲ್ಲವೇ! ಆದರೆ ಕೆಲವೊಮ್ಮೆ ನಿಮ್ಮ ಕೃತಿ ಚೆನ್ನಾಗಿದೆ ಎನ್ನುವುದಕ್ಕೆ ನಮ್ಮ ಬೆನ್ನು ನೋಯುತ್ತದೇನೋ?

Tags

Related Articles

Leave a Reply

Your email address will not be published. Required fields are marked *

Language
Close