ಸರಕಾರಿ ಆಸ್ಪತ್ರೆಗಳೇ  ರೋಗದ ಗೂಡು

Posted In : ಸಂಗಮ, ಸಂಪುಟ

-ಸರಸ್ವತಿ ವಿಶ್ವನಾಥ್ ಪಾಟೀಲ್
 ಕಾರಟಗಿ

ವೈದ್ಯಕೀಯ ನಿರ್ಲಕ್ಷ್ಯವೆಂಬುದು ಭಾರತದಲ್ಲಿ ಸರ್ವೇ ಸಾಮಾನ್ಯ. ವೈದ್ಯರ ಅಜಾಗರೂಕ ಮನೋಭಾವ, ಎಲ್ಲವೂ ನನಗೇ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ, ರೋಗಿಗೆ ಕೊಡುತ್ತಿರುವ ಔಷಧಿಯ ಬಗ್ಗೆ ಸ್ವತಃ ವೈದ್ಯರಿಗೇ ಸರಿಯಾದ ತಿಳುವಳಿಕೆ ಇರದಿರುವುದು ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣ. ಇಂಥ ನಿರ್ಲಕ್ಷ್ಯ ಮನೋಭಾವ ಎಲ್ಲ ವೃತ್ತಿಯಲ್ಲಿರುವವರಲ್ಲಿಯೂ ಇರುತ್ತದಾದರೂ ವೈದ್ಯಕೀಯ ವೃತ್ತಿ ಒರ್ವ ವ್ಯಕ್ತಿಯ ಜೀವದ ಜತೆಗೆ ಸಂವಹನ ನಡೆಸುವುದರಿಂದ ಚಿಕ್ಕದೊಂದು ತಪ್ಪೂ ಕಾರಣವಾಗಿಬಿಡಬಹುದು. ವೈದ್ಯರೂ ಕೂಡ ಮನುಷ್ಯಜಾತಿಗೇ ಸೇರಿರುವುದರಿಂದ ವೈಯಕ್ತಿಕ ತೊಂದರೆಗಳು, ಅವರ ಮನಸ್ಥಿತಿ, ಕೊಡುತ್ತಿರುವ ಚಿಕಿತ್ಸೆಯ ಬಗೆಗಿನ ಅಜ್ಞಾನ ಅವರ ಕೆಲಸದ ಮೇಲೂ ಪರಿಣಾಮ ಬೀರಿ ತಪ್ಪು ಚಿಕಿತ್ಸೆಯನ್ನು ನೀಡುವಂತೆ ಮಾಡಿಬಿಡಬಹುದು. ಗೊತ್ತಿಲ್ಲದೆ ಮಾಡಿಬಿಡುವ ತಪ್ಪಿನಿಂದ ರೋಗಿಯ ಪ್ರಾಣಹರಣವಾಗಿಬಿಟ್ಟಲ್ಲಿ ಕೋರ್ಟಿನಿಂದ ರೋಗಿಯ ಸಂಬಂಧಿಗಳಿಗೆ ಪರಿಹಾರ ದೊರಕಬಹುದು. ಆದರೆ ರೋಗಿಯ ಹೋದ ಜೀವ ತಿರುಗಿ ಬಾರದು.

ಯಾವಾಗ ಶಿಕ್ಷಣವೆಂಬುದು ಸರಕಾರದ ಹತೋಟಿ ಮೀರಿ ಖಾಸಗೀಕರಣಗೊಂಡು ಮತ್ತದಕ್ಕಿಂತ ಹೆಚ್ಚಾಗಿ ವ್ಯಾಪಾರೀಕರಣಗೊಂಡಿತೋ, ವೈದ್ಯವೃತ್ತಿ ಕೂಡ ಹೊರಬಂದು ಉದ್ಯಮವಲಯಕ್ಕೆ ಸೇರಿಬಿಟ್ಟಿತು. ಇವತ್ತು ವೈದ್ಯ ವೃತ್ತಿಯೆಂಬುದು ಪಕ್ಕಾ ಬಿಸಿನೆಸ್. ನಾನಿಷ್ಟು ಹಣ ಹೂಡಿಕೆ ಮಾಡಿದ್ದೀನಿ, ಇದು ನನ್ನ ಬಂಡವಾಳ, ತಿಂಗಳಿಗೆ ಇಷ್ಟು ಲಕ್ಷದ ಖರ್ಚಿದೆ, ಹಾಗಾಗಿ ನನಗೆ ದಿನಕ್ಕಿಷ್ಟು ಬಿಸಿನೆಸ್ ನಡೆಯಬೇಕು ಇದು ಇಂದಿನ ಬಹುತೇಕ ಖಾಸಗಿ ಆಸ್ಪತ್ರೆಯ ಮೀಟಿಂಗುಗಳಲ್ಲಿ ಕೇಳಿ ಬರುವ ಮಾತು. ಮುಂಚಿನಿಂದಲೂ ವೈದ್ಯಕೀಯ ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದವಾದರೂ ಅದಕ್ಕೊಂದು ಉದ್ಯಮದ ರೂಪ ಬಂದಿದ್ದು ಕಾರ್ಪೋರೇಟ್ ಉದ್ಯಮ ಆಸ್ಪತ್ರೆಗಳಲ್ಲಿ ಬಂಡವಾಳ ಹೂಡಲಾರಂಭಿಸಿ ದೊಡ್ಡ ಸಣ್ಣ ಊರುಗಳಲ್ಲಿ ಸರಣಿ ಆಸ್ಪತ್ರೆಗಳನ್ನು ತೆರೆಯಲಾರಂಭಿಸಿದ ಮೇಲೆ. ಹಳೆಯ ಸರಕಾರಿ ಹಾಗೂ ಖಾಸಗೀ ಆಸ್ಪತ್ರೆಗಳ ಒಳಗೆ ಹೋಗುತ್ತಿದ್ದಂತೆ ಬರುತ್ತಿದ್ದ ‘ಆಸ್ಪತ್ರೆ ವಾಸನೆ’ ಈ ನವ ಉದ್ಯಮದ ಆಸ್ಪತ್ರೆಗಳಲ್ಲಿಲ್ಲ.

ಹವಾನಿಯಂತ್ರಿತ ಕಟ್ಟಡ, ಮೇಲ್ನೋಟಕ್ಕೆ ಅಚ್ಚುಕಟ್ಟು ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯವಿರುವ ಈ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ವೆಚ್ಚವೂ ಅಧಿಕ. ತಾವು ಕೊಡುವ ಸೇವೆಗೆ ಈ ವೆಚ್ಚ ಕಡಿಮೆಯೆಂಬುದು ಆಸ್ಪತ್ರೆಯವರ ಅನಿಸಿಕೆ. ರೋಗಿಗಳಿಗೆ ತಿಳಿಯದ, ಹೊರಪ್ರಪಂಚಕ್ಕೆ ಗೊತ್ತಾಗದ ಅತಿ ಹೆಚ್ಚು ವೈದ್ಯಕೀಯ ನಡೆಯುವುದು ಇಂತಹ ಆಸ್ಪತ್ರೆಗಳಲ್ಲೇ. ಇನ್ನು ಹಳೆಯ ಸರಕಾರಿ, ಆಸ್ಪತ್ರೆಗಳಲ್ಲಿ ಇರುವ ಸೀಮಿತ ಸೌಕರ್ಯಗಳಲ್ಲೇ ಚಿಕಿತ್ಸೆ ನೀಡಬೇಕಾದ ಕರ್ಮ. ಒಂದಿದ್ದರೆ ಹಲವಿಲ್ಲ ಎಂಬ ಪರಿಸ್ಥಿತಿ. ರೋಗಿಗಳನ್ನು ದುಡ್ಡು ಕೊಡುವ ಮಿಷಿನ್ನುಗಳು ಎಂದು ಭಾವಿಸುವುದೇ ಇದಕ್ಕೆ ಕಾರಣ. ಬಹುತೇಕ ಎಲ್ಲ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಯ ಆಡಳಿತ ವರ್ಗ ತನ್ನಲ್ಲಿ ಕೆಲಸಕ್ಕಿರುವ ವೈದ್ಯರಿಗೆ ಥೇಟ್ ಸಾಫ್ಟವೇರ್ ಕಂಪನಿಗಳಂತೆಯೇ ಟಾರ್ಗೆಟ್ ನೀಡುತ್ತದೆ.

ತಿಂಗಳಿಗಿಷ್ಟು ಆಪರೇಷನ್ ನಡೆಸಬೇಕು, ತಿಂಗಳಿಗಿಷ್ಟು ಡಯಾಲಿಸಿಸ್ ಮಾಡಿಸಬೇಕು, ತಿಂಗಳಿಗಿಷ್ಟು ಎಂ.ಐ. ಆರ್, ಸ್ಕ್ಯಾನ್ ಮಾಡಿಸಬೇಕು ಎಂಬ ಟಾರ್ಗೆಟ್ ವಿಧಿಸುತ್ತದೆ. ಸತತವಾಗಿ ಟಾರ್ಗೆಟ್ ಮುಟ್ಟಿಸದ ವೈದ್ಯರಿಗೆ ಪಿಂಕ್ ಸ್ಲಿಪ್’ ನೀಡುವ ಪದ್ಧತಿಯೂ ಉಂಟು. ಇನ್ನು ವೈದ್ಯಕೀಯವು ಹೇಗೆ ದಂಧೆಯಾಗುತ್ತಿದೆ ಎನ್ನಲು ಇಲ್ಲಿದೆ ನೋಡಿ ಉದಾರಣೆ. ಲ್ಯಾಸಿಕ್ಸ್ ಎಂಬ ದೇಹದ ನೀರು ಹೆಚ್ಚು ಹೊರ ಹೋಗುವಂತೆ ಮಾಡುವ ಇಂಜೆಕ್ಷನ್ ನೀಡಿ ದೇಹದ ಖನಿಜಾಂಶಗಳಲ್ಲಿ ಏರುಪೇರು ಸೃಷ್ಟಿಸಿ ಅದರ ಲ್ಯಾಬ್ ರಿಪೋರ್ಟನ್ನು ಪಡೆದು ತದನಂತರ ರೋಗಿಯಲ್ಲಿ ತಾನೇ ಸೃಷ್ಟಿಸಿದ ರೋಗವನ್ನು ಮತ್ತಷ್ಟು ಭಯಭೀತ ದನಿಯಲ್ಲಿ ಕಿಡ್ನಿ ಎಂದು ವಿವರಿಸಿ ಡಯಾಲಿಸಿಸ್ ಮಾಡಲಾಗುತ್ತದೆ. ಇದು ಇಂದಿನ ಬಹುತೇಕ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸಂಗತಿ.ಇದನ್ನು ವೈದ್ಯಕೀಯ ನಿರ್ಲಕ್ಷ್ಯವೆನ್ನಬೇಕೋ? ಅಥವಾ ದಂಧೆಯೆಂದು ಕರೆಯಬೇಕೋ?

ನಮ್ಮ ಸರಕಾರ ಬಡವರಿಗೆಂದು ಮಾಡಿದ ಸರಕಾರಿ ಆಸ್ಪತ್ರೆಗಳಲ್ಲಿ ತುಂಬಾ ಕೊರತೆ ಇದೆ. ಆಸ್ಪತ್ರೆಗೆ ಬಂದರೆ ರೋಗ ವಾಸಿಯಾಗುತ್ತದೆ ಎನ್ನುವ ನಂಬಿಕೆ ಸಹಜ. ಆದರೆ ಕೆಲವು ಗ್ರಾಮಗಳಲ್ಲಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು ಪುನಃ ಕಾಯಿಲೆ ಪೀಡಿತರಾಗಿ ತೆರಳುತ್ತಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿನ ಮಲಿನ ಸ್ಥಿತಿ ಇಂತಹ ದುಃಸ್ಥಿತಿಗೆ ಸಾರ್ವಜನಿಕರು ಸರಕಾರಿ ಆಸ್ಪತ್ರೆಗೆ ಕಾಲಿಡಲು ಹಿಂಜರಿಯುವಂತಾಗಿದೆ.

ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕೊರತೆಯಿದ್ದು, ಎಲ್ಲೆಂದರಲ್ಲಿ ಮಲಿನ ನೀರು ನಿಂತಿದೆ. ಕುಡಿವ ನೀರಿನ ಘಟಕದ ಸುತ್ತಲೂ ಲಾರ್ವಾ ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಡೆಂಗೆ, ಮಲೇರಿಯಾದಂತಹ ಹಾನಿಕಾರಕ ರೋಗಗಳು ಉಲ್ಬಣಿಸುತ್ತಿವೆ. ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ಆವರಣದಲ್ಲಿ ಮಲಿನ ನೀರು ಹರಿದು ಸಾಗಲು ವ್ಯವಸ್ಥೆ ಇಲ್ಲ. ಮಳೆ, ಚರಂಡಿ ನೀರು ಒಂದೇ ಬಾರಿಗೆ ಕೂಡಿದರೆ ಆಸ್ಪತ್ರೆ ಕೊಠಡಿಗಳಿಗೂ ನೀರು ನುಗ್ಗುತ್ತದೆ. ಇನ್ನು ಕುಡಿವ ನೀರಿನ ಟ್ಯಾಂಕರ್ ನೀರು ಪೋಲಾಗುತ್ತಿದ್ದು, ಹೊಂಡ ನಿರ್ಮಾಣವಾಗಿದೆ. ಇದರಲ್ಲಿ ಆಸ್ಪತ್ರೆಯಲ್ಲಿ ಬಳಸುವ ಸಿರಂಜ್, ಗ್ಲೂಕೋಸ್, ಔಷಧದ ಡಬ್ಬಿಗಳು, ಪ್ಲ್ಯಾಸ್ಟಿಕ್ ಸೇರಿ ಮಲಿನತೆ ಹೆಚ್ಚಾಗಿದೆ. ದುರ್ನಾತ ಹಬ್ಬಿದ್ದು, ಸೊಳ್ಳೆಗಳು ವಿಪರೀತವಾಗಿವೆ. ಇದೇ ನೀರಿನಲ್ಲಿ ಲಾರ್ವಾ ಹುಟ್ಟಿಕೊಳ್ಳುತ್ತಿವೆ. ದೇಶದಾದ್ಯಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಇಲಾಖೆ ಆವರಣದಲ್ಲಿ ಇಂತಹ ಮಲಿನ ಸ್ಥಿತಿ ಇದ್ದು ವೈದ್ಯರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಸರಕಾರಿ ಆಸ್ಪತ್ರೆಗೆ ನೂರಾರು ಹೊರ ರೋಗಿಗಳು ನಿತ್ಯ ಬಂದು ಹೋಗುತ್ತಾರೆ. ಅಲ್ಲದೇ ಹಲವು ಜನರು ಇಲ್ಲಿ ದಾಖಲಾಗುತ್ತಾರೆ. ರಾತ್ರಿ ವೇಳೆ ಆಸ್ಪತ್ರೆ ಕೊಠಡಿಯಲ್ಲಿ ಜಾಗದ ಕೊರತೆಯಿಂದ ಆವರಣದಲ್ಲೆ ನಿದ್ದೆಗೆ ಜಾರುತ್ತಿದ್ದು, ರಾತ್ರಿ ಇಡೀ ಸೊಳ್ಳೆ ಕಚ್ಚಿಸಿಕೊಂಡು ನಾನಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕುಡಿವ ನೀರಿನ ಸ್ಥಳ, ಆವರಣದಲ್ಲಿನ ಉದ್ಯಾನದಲ್ಲೂ ವಿಶ್ರಾಂತಿಗೂ ಹೆಚ್ಚು ಜನ ತೆರಳುತ್ತಿದ್ದು, ಸೊಳ್ಳೆ ಹಾವಳಿಯಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಕಾಯಿಲೆ ಪೀಡಿತರೇ ವೈದ್ಯರ ಗಮನ ಸೆಳೆದಿದ್ದು, ಆಸ್ಪತ್ರೆ ಆವರಣ ಶುದ್ಧವಾಗುತ್ತಿಲ್ಲ. ಕುಡಿವ ನೀರಿನ ಸ್ಥಳದ ಬಳಿ ಅನೈರ್ಮಲ್ಯ, ಪಾಚಿಗಟ್ಟಿರುವ ನಲ್ಲಿ, ಬೀರುವ ಕೊಳಚೆ ನೀರು ಇಲ್ಲಿಯೇ ಸಂಗ್ರಹವಾಗಿರುತ್ತದೆ. ಇದರ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಆಸ್ಪತ್ರೆ ಆವರಣವೇ ಒಂದು ರೀತಿಯಿಂದ ರೋಗಗ್ರಸ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗೆ ಬಂದರೆ ರೋಗ ಫಿಕ್ಸ್ ಎಂಬ ನಂಬಿಕೆ ಜನರಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಅದೆಷ್ಟೇ ಬಡವರಾದರೂ ತಮ್ಮ ಪ್ರಾಣ ಭಯದಿಂದ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಬಡವರು ಆಸ್ಪತ್ರೆಯ ವೆಚ್ಚಕ್ಕಾಗಿ ಒಂದೋ ತಮ್ಮ ಆಸ್ತಿಪಾಸ್ತಿಯನ್ನು ಮಾರಿರುತ್ತಾರೆ ಅಥವಾ ಸಾಲ ಮಾಡಿಕೊಂಡಿರುತ್ತಾರ.

ಈಗ ಸರಕಾರಿ ಮೇಲೆ ಜನಸಾಮಾನ್ಯರಿಗೆ ವಿಶ್ವಾಸ ಕಡಿಮೆಯಾಗಿದೆ. ಅಷ್ಟೇ ಏಕೆ ನಮ್ಮ ಜನಪ್ರತಿನಿಧಿಗಳು ಸರಕಾರಿ ನೌಕರರಿಗಾದರೂ ಸರಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಇದೆಯಾ? ಇಲ್ಲ. ಇವರೆಲ್ಲ ಮೊದಲು ಧಾವಿಸುವುದೇ ಖಾಸಗಿ ಆಸ್ಪತ್ರೆಗಳ ಕಡೆಗೆ. ಸರಕಾರಿ ಆಸ್ಪತ್ರೆಗಳಲ್ಲಿ ನಿಜವಾಗಿಯೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎನ್ನುವುದಾದರೆ ಮಂತ್ರಿಗಳು, ಶಾಸಕರು, ಸರಕಾರಿ ಸಿಬ್ಬಂದಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಕಡೆ ಯಾಕೆ ಹೋಗಬೇಕು? ಇವರೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಆ ವೆಚ್ಚವನ್ನು ಭರಿಸುವುದಿಲ್ಲ ಎಂಬ ದಿಟ್ಟ ಸರಕಾರ ತೆಗೆದುಕೊಳ್ಳಬಹುದಲ್ಲ? ವೈದ್ಯಕೀಯ ವೃತ್ತಿ ಎನ್ನುವುದು ಹಣ ದೋಚುವ ದಂಧೆ ಅಲ್ಲ ಎನ್ನುವುದನ್ನು ಖಾಸಗಿ ವೈದ್ಯರೂ ಅರಿಯಬೇಕು. ತಮ್ಮ ಲೋಪ ದೋಷಗಳನ್ನು ಸರಿಮಾಡಿಕೊಳ್ಳಬೇಕು. ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಬೇಕು. ರೋಗಿಯ ಜೀವ ಉಳಿಸುತ್ತೇವೆ, ನೋವು ಕಡಿಮೆ ಮಾಡುತ್ತೇವೆ’ ಎಂದು ವೃತ್ತಿಗೆ ಕಾಲಿಡುವ ಸಂದರ್ಭದಲ್ಲಿ ಪ್ರತಿಜ್ಞೆ ತೆಗೆದುಕೊಂಡು ಪ್ರತಿಭಟನೆಯ ನೆಪದಲ್ಲಿ ಚಿಕಿತ್ಸೆಯನ್ನು ನಿರಾಕರಿಸುವುದು ವೃತ್ತಿ ಧರ್ಮಕ್ಕೆ ಮಾಡುವ ಅಪಚಾರ.

ಪರಿಸ್ಥಿತಿ ಇಷ್ಟು ಸುಸ್ಪಷ್ಟವಾಗಿದ್ದರೂ, ಅದನ್ನು ಪರಿಗಣಿಸಲೊಪ್ಪದ ಸರಕಾರ ಖಾಸಗಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಜವಾಬ್ದಾರಿಗಳಿಂದ ಕೈತೊಳೆದುಕೊಳ್ಳುತ್ತಿದೆ. ಖಾಸಗಿ ಕ್ಷೇತ್ರವನ್ನು ನಿಯಂತ್ರಿಸುವ ಯಾವುದೇ ಕಠಿಣವಾದ ಸಾಂಸ್ಥಿಕ ವ್ಯವಸ್ಥೆ ಇಲ್ಲದಿರುವುದರಿಂದ ಅವು ಯಾವುದೇ ಉತ್ತರದಾಯಿತ್ವವಿಲ್ಲದೆ ಕೆಲಸ ನಿರ್ವಹಿಸುತ್ತಿವೆ. ಇದರ ಘೋರ ಪರಿಣಾಮಗಳು ಈಗಾಗಲೇ ಬೆಳಕಿಗೆ ಬರುತ್ತಿವೆ. ಇತ್ತೀಚಿನ ಮತ್ತೊಂದು ಪ್ರಕರಣದಲ್ಲಿ, ಅವಧಿಗೆ ಮುನ್ನ ಹುಟ್ಟಿದ ಮಗುವೊಂದು ಜೀವಂತವಿದ್ದರೂ ಸಾವನ್ನಪ್ಪಿದೆಯೆಂದು ತಪ್ಪಾಗಿ ಘೋಷಿಸಿದ ಪ್ರಖ್ಯಾತ ಅಸ್ಪತ್ರೆಯೊಂದರ ಪರವಾನಗಿಯನ್ನು ದೆಹಲಿ ಸರಕಾರ ರದ್ದುಪಡಿಸಿತು. ತಪ್ಪು ಗೊತ್ತಾದ ತಕ್ಷಣ ಮಗುವನ್ನು ಶೀಘ್ರವಾಗಿ ಚಿಕಿತ್ಸೆಗೆಂದು ಕೊಂಡೊಯ್ದರೂ ಫಲನೀಡಲಿಲ್ಲ. ನಂತರ ಒಂದು ವಾರದ ಆ ಮಗುವು ನರಳಿ ಕಣ್ಣುಮುಚ್ಚಿತು. ಆದರೂ ಪರವಾನಗಿಯನ್ನು ರದ್ದು ಮಾಡಿದ್ದು ಅವಿವೇಕದ ಕ್ರಮವಾಗಿತ್ತು. ಏಕೆಂದರೆ ಅದು ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ ರೋಗಿಗಗಳಿಗೆ ಸಾಕಷ್ಟು ತೊಂದರೆಯುಂಟು ಮಾಡಿತು.

ಸರಕಾರಿ ಆಸ್ಪತ್ರೆಗಳಲ್ಲಿ ಬಡವರಿಂದ ದುಡ್ಡು ಕೀಳುತ್ತಾರೆ, ನಿರ್ಲಕ್ಷ್ಯ ತೋರುತ್ತಾರೆ, ತುಂಬಿದ ಬಸುರಿಯರನ್ನು ಗಂಟೆಗಟ್ಟಲೆ ಕೂರಲು ಜಾಗವೂ ಇಲ್ಲದೆ ನಿಲ್ಲಿಸಿ ಕಾಯಿಸುತ್ತಾರೆ, ರಾತ್ರಿ ಹೊತ್ತಿನಲ್ಲಿ ಒಬ್ಬರನ್ನೇ ಲ್ಯಾಬ್ ಟೆಸ್ಟಿಂಗ್ ಅಂತ ಕಳಿಸುತ್ತಾರೆ ಎಂದು ಗೊತ್ತಿರಲಿಲ್ಲ. ಆಮೇಲೆ ಆಸ್ಪತ್ರೆಗೆ ಹೋಗಿ ನೋಡಿದಾಗ ಹಸಿ ಬಾಣಂತಿಯರನ್ನು, ಆಗ ತಾನೆ ಹುಟ್ಟಿದ ಹಸುಮಕ್ಕಳನ್ನು ನೆಲದ ಮೇಲೆ ಹಾಸಿಗೆಯೂ ಇಲ್ಲದೆ ಮಲಗಿಸಿದ್ದರು. ಕೆಲವು ರೋಗಿಗಳು ಅಲ್ಲೆ ಪಕ್ಕದ ಜಗಲಿಯ ಬದಿಯಲ್ಲಿ ವಾಕರಿಸುತ್ತಿದ್ದರು. ಎಲ್ಲಕ್ಕಿಂತ ದಿಗ್ಭ್ರಮೆ, ಆತಂಕ ಹುಟ್ಟಿಸಿದ್ದು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಹೆಣ್ಣುಮಕ್ಕಳನ್ನು ಲೇಬರ್ ವಾರ್ಡ್ ಟೇಬಲ್ ಮೇಲೆ ಕುಕ್ಕುತ್ತಾರೆ, ಅವರಿಗೆ ಹೆರಿಗೆ ಮಾಡಿಸುವ ಬದಲು ಅಲ್ಲಿ ಯಾವ ಡಾಕ್ಟರ್, ಆಯಾ, ನರ್ಸ್ ಇಲ್ಲದಂತೆ ಹೊರಹೋಗುತ್ತಾರೆ, ನೋವಿನಿಂದ ಅಳುವ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಮಗು ದುಡ್ಡು ಕೇಳುತ್ತಾರೆ ಎನ್ನುವ ವಿಷಯ ಕೇಳಿ ಆಗ ಇವರು ಮನುಷ್ಯರಾ ಅನ್ನಿಸಿತ್ತು.

ಇದು ‘ಉಚಿತ’ ಸರಕಾರಿ ಆಸ್ಪತ್ರೆಗಳ ಕಥೆ ಮಾತ್ರ ಅಲ್ಲ. ಖಾಸಗಿ ಆಸ್ಪತ್ರೆಗಳೂ ನಾನಾ ಕಾರಣ ಹೇಳಿ ಸತ್ತವರನ್ನು ಇನ್ನೂ ಬದುಕಿದ್ದಾರೆಂದು ಯಾರಿಗೂ ತೋರಿಸದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದೂ ಸಾಮಾನ್ಯ.ಇಷ್ಟೆಲ್ಲಾ ಅನಾಗರಿಕವಾಗಿ ನಡೆದುಕೊಳ್ಳುವವರು ಅನಕ್ಷರಸ್ತರಲ್ಲ, ಅಮಾಯಕರೂ ಅಲ್ಲ. ರೋಗಿಗಳ ಸೇವೆ ಮಾಡುತ್ತೇವೆಂದು ಐದೂವರೆ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್, ನರ್ಸಿಂಗ್ ಓದಿ ಬಂದಿರುವ ನರ್ಸ್‌ಗಳು. ಇನ್ನು ಹಲವೆಡೆ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ನುರಿತ ವೈದ್ಯರ ಆಸ್ಪತ್ರೆಯಲ್ಲಿ ಮೂರು ನಾಲ್ಕು ವರ್ಷ ಕಂಪೌಂಡರ್ ಆಗಿ ಸೇವೆ ಸಲ್ಲಿಸಿ ನಕಲಿ ವೈದ್ಯಕೀಯ ಪತ್ರ ಪಡೆದು ಗ್ರಾಮಗಳಲ್ಲಿ, ನಗರಗಳಲ್ಲಿ, ಆಸ್ಪತ್ರೆಗಳನ್ನು ತೆರೆದು ಸರಕಾರಕ್ಕೆ ಮೋಸ ಮಾಡಿ ಕಡಿಮೆ ಹಣದ ಚಿಕಿತ್ಸೆಯ ನೆಪದಲ್ಲಿ ಸಾರ್ವಜನಿಕರಿಗೆ ತಪ್ಪು ಉಪಚಾರ ಮಾಡಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.

ವೈದ್ಯನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ ಕುತ್ತಾಗಬಹುದು. ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವನ ನೀಡಬೇಕಾಗುತ್ತದೆ. ತಮಗೇನಾದರೂ ವೈದ್ಯರು ಕಾಪಾಡೇ ಕಾಪಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಜನ ಆಸ್ಪತ್ರೆಗೆ ಹೋಗಿರುತ್ತಾರೆ. ಆದರೆ ವೈದ್ಯರು ಮಾನವೀಯತೆ ಮರೆಯದೆ ತಮ್ಮ ವೃತ್ತಿ ನಿಷ್ಠೆ ಕಾಪಾಡಿಕೊಂಡು ಹೋಗುವುದು ಮುಖ್ಯ. ದೇವರು ಜನ್ಮ ನೀಡುತ್ತಾನೆ, ವೈದ್ಯರು ಕಿತ್ತುಕೊಳ್ಳುತ್ತಾರೆ ಎಂದಾಗಬಾರದು.

 

Leave a Reply

Your email address will not be published. Required fields are marked *

twelve − five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top