ಇವು, ಬ್ಯಾಂಕ್ ವ್ಯವಸ್ಥೆಯ ಮುಂದಿರುವ ಸವಾಲುಗಳು

Posted In : ಸಂಗಮ, ಸಂಪುಟ

-ಸುರೇಶ್ ಬಾಲಚಂದ್ರನ್

ಉದ್ಯಮ, ವ್ಯವಹಾರ ಮತ್ತು ಕೈಗಾರಿಕೆಯ ಮುನ್ನಡೆಗೆ ಕಾಲಕಾಲಕ್ಕೆ ಬಂಡವಾಳದ ಅಗತ್ಯ. ಆದರೆ ಕೈಗಾರಿಕಾ ಘಟಕದ ಮಾಲೀಕನೋ ಅಥವ ಕಂಪನಿಯಿಂದಲೇ ಸಾಕಷ್ಟು ಹಣಹೂಡಲು ಸಾಧ್ಯವಿಲ್ಲದಿರುವಾಗ ಬ್ಯಾಂಕಿಗ್ ವ್ಯವಸ್ಥೆಯ ಮೊರೆಹೋಗುವುದು ಸಹಜ. ಹಾಗಾದರೆ ಸಾಲ ಕೊಡುವ ಬ್ಯಾಂಕ್‌ಗಳಿಗೆ ಹಣ ಎಲ್ಲಿಂದ ಬರಬೇಕು ಎಂಬ ಪ್ರಶ್ನೆಗೆ ಉತ್ತರ ಗ್ರಾಹಕರ ಠೇವಣಿ ಮತ್ತು ಸರಕಾರದ ಮರು-ಬಂಡವಾಳ ಹೂಡಿಕೆಯೆ ಮೂಲಾಧಾರ. ಇನ್ನು ಸರಕಾರದ ಮುಖ್ಯ ವರಮಾನವಂತೂ ಎಲ್ಲರಿಗೂ ಗೊತ್ತಿದ್ದಹಾಗೆ ನಮ್ಮ ನಿಮ್ಮಂತಹವರಿಂದ ಸಂಗ್ರಹಮಾಡಿದ ತೆರಿಗೆ. ಸಾಮಾನ್ಯಾತಿಸಾಮಾನ್ಯರಿಂದ ಸಂಗ್ರಹಿಸಿದ ತೆರಿಗೆಯ ಮೂಲಧನದಿಂದಲೇ ದೇಶದ ಆರ್ಥಿಕ ಚಕ್ರ ಸಾಗುತ್ತಿರುವುದಂತೂ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‌ಗೆ ವಂಚಿಸಿ ವಿದೇಶಕ್ಕೆ ಕಾಲುಕಿತ್ತಿರುವ ನೀರವ್ ಮೋದಿಯ ವಂಚನೆಯಷ್ಟೇ ಸತ್ಯ! ಹೀಗಿರುವಾಗ ಬ್ಯಾಂಕಿಂಗ್ ಕ್ಷೇತ್ರದ ವ್ಯವಸ್ಥೆಯನ್ನು ತಿಳಿಯುವುದು, ಸಂದರ್ಭನುಸಾರವಾಗಿ ಪ್ರಶ್ನಿಸುವುದು ಪ್ರಜೆಗಳ ಹಕ್ಕು ಹಾಗೂ ಕರ್ತವ್ಯ.

ಉದ್ಯಮ ವ್ಯವಹಾರಕ್ಕೆ ಅವಶ್ಯಕವಾದ ಸಾಲ ಕೊಡುವವರ, ತೆಗೆದುಕೊಳ್ಳುವವರ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿ ಬೆಳೆದು ಬಂದಿರುವುದೇ ಬ್ಯಾಂಕಿಗ್ ಪದ್ಧತಿ. ಬ್ಯಾಂಕಿಗ್‌ನಂತಹ ಆರ್ಥಿಕ ವ್ಯವಸ್ಥೆಯು ದಶಕಗಳ ನಿಯಮ ನಿಬಂಧನೆಗಳೊಂದಿಗೆ , ಬೇಡಿಕೆಗೆ ಪೂರಕವಾಗಿ ಬೆಳವಣಿಗೆ ಕಂಡಿದ್ದರೂ ಬ್ಯಾಂಕಿನಲ್ಲಿ ಸಾಲಪಡೆದು ಮರುಪಾವತಿಸದೆ ವಂಚನೆಮಾಡಿರುವ ಪ್ರಕರಣಗಳು ದಿನಂಪ್ರತಿ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿರುವುದು ದುರದೃಷ್ಟಕರ ಸಂಗತಿ. ಹೀಗಿರುವಾಗ ಇನ್ಯಾವುದೋ ಕೋಲಾಹಲ ಸೃಷ್ಟಿಸುವ ಸಂಗತಿಯು ಕಣ್ಮುಂದೆ ಕಂಡೊಡನೆ ನಮ್ಮಮುಂದಿದ್ದ ಹಳೆಯ ವಿಷಯವನ್ನು ಮರೆಯುವುದು ಸಹಜ. ಈ ನಿಟ್ಟಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸಂಭವಿಸಿರುವ 12,700 ಕೋಟಿ ರೂಪಾಯಿಯ ವಂಚನೆ ಪ್ರಕರಣವೂ ಒಂದು.

ಸರಕಾರ, ಆಯಾ ಬ್ಯಾಂಕ್‌ಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಂಚನೆ ಪ್ರಕರಣದ ಕಾಲಹರಣಮಾಡದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಅತ್ಯಾವಶ್ಯಕವಾಗಿ ಬೇಕಾದ ತೀರ್ಮಾನಗಳನ್ನು ಪರಿಣತರ, ತಜ್ಞರ ಸಹಾಯದಿಂದ ಅನುಷ್ಠಾನಗೊಳಿಸುವುದು ಅಂದರೆ ಮೋಸ ವಂಚನೆ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಾದ ರೀತಿ ನೀತಿ ನಿಬಂಧನೆಗಳನ್ನು ಸಮರೋಭ್ಯಾಸ ಗತಿಯಲ್ಲಿ ಸಿದ್ಧಪಡಿಸುವುದು ಒಳ್ಳೆಯದು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ 80% ರಾಷ್ಟ್ರೀಕೃತ ಬ್ಯಾಂಕ್‌ಗಳಾದರೆ ಮಿಕ್ಕ 20% ಖಾಸಗಿ ಬ್ಯಾಂಕ್‌ಗಳು. ದೇಶದ ಆರ್ಥಿಕ ಅವಶ್ಯಕತೆಯ ಮುಕ್ಕಾಲು ಭಾಗವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳೆ ಪೂರೈಸುತ್ತವೆ. ಪೈಪೋಟಿಯಲ್ಲಿ ಸ್ಪರ್ಧಿಸುವ ಈ ಬ್ಯಾಂಕ್‌ಗಳಲ್ಲಿ ಲಾಭಾಂಶ ಬಿಗಿಯಾಗಿರುವುದರಿಂದ ಆರ್ಥಿಕ ಆರೋಗ್ಯದ ಕಡೆ ಆಡಳಿತ ಮಂಡಳಿ ನಿಗಾ ಇಡುವುದು ಅತ್ಯಂತ ಪ್ರಮುಖ ಅಂಶಗಳಲ್ಲೊಂದು. ಬ್ಯಾಂಕುಗಳು ಸಾಲ ಮಂಜೂರು ಮಾಡುವ ಮುನ್ನ ಗ್ರಾಹಕನಿಂದ ಅಸಲು ಮತ್ತು ಬಡ್ಡಿ ಮರುಪಾವತಿಯಾಗುವುದೋ ಇಲ್ಲವೋ ಎಂಬ ವಿವೇಚನಯುತವಾದ ನಿರ್ಧಾರ ತೆಗೆದುಕೊಳ್ಳುವುದು, ಗ್ರಾಹಕನ ವಿಶ್ವಾಸಾರ್ಹತೆ ಪರಿಶೀಲನೆ ಮತ್ತು ಸಾಲಕ್ಕೆ ನಿಗದಿತ ಆಧಾರ-ಅಡಮಾನಗಳನ್ನು ಪಡೆದುಕೊಳ್ಳುವುದು ಒಳಿತು. ಹೀಗಾಗಿ ಸಾಲಗಳನ್ನು ಮಂಜೂರು ಮಾಡುವಾಗ ಹೆಚ್ಚಿನ ಜಾಗರೂಕತೆವಹಿಸುವುದು ಸೂಕ್ತ. ಏಕೆಂದರೆ ಮುಂದೊಂದು ದಿನ ಹೀಗೆ ಸಾಲ ಮಂಜೂರು ಮಾಡಿಸಿಕೊಂಡ ಮಹಾತ್ವಾಕಾಂಕ್ಷಿ ಅಥವ ಅತ್ಯುತ್ಸಾಹಿ ಉದ್ಯಮಿಯೋ ಕೈಯೆತ್ತಿ ಓಡಿಹೋದರೆ ಬ್ಯಾಂಕ್ ಮಣ್ಣು ಮುಕ್ಕುವುದಲ್ಲದೆ ಅಮಾಯಕ ಸಾಮಾನ್ಯ ಪ್ರಜೆಗಳಿಗೆ ತೆರಿಗೆ ಬರೆ ಹೆಚ್ಚುವುದಂತು ನಿಶ್ಚಿತ. ಬ್ಯಾಂಕು ಮತ್ತು ಗ್ರಾಹಕನ ಸಂಬಂಧ ಆಧಾರ-ಅಡಮಾನಗಳಿಗೂ ಮೀರಿ ನಂಬಿಕೆ ಎನ್ನುವ ನಾಲ್ಕಕ್ಷರದ ಮೇಲೆ ನಿಂತಿರುವುದಂತು ನಿಜ.

ಇನ್ನು ನಂಬಿಕೆ ವಿಷಯಕ್ಕೆ ಬರುವುದಾದರೆ, ಠೇವಣಿದಾರರು ತನ್ನ ಹಣ ಭದ್ರವಾಗಿರುವ ಭರವಸೆಯಿಂದ ಮತ್ತು ತೊಡಗಿಸಿದ ಠೇವಣಿಗೆ ಸೂಕ್ತ ಬಡ್ಡಿ/ಲಾಭ ದೊರಕುವುದೆಂಬ ನಂಬಿಕೆಯಿಂದಿರುವುದಾದರೆ, ಬ್ಯಾಂಕು ತಾನು ಕೊಟ್ಟ ಸಾಲದ ಸದ್ಬಳಕೆಯಾಗಿ ಅಸಲು ಬಡ್ಡಿಯ ಸಮೇತ ಮರುಪಾವತಿಯಾಗುವುದೆಂಬ ನಂಬಿಕೆಯಿಂದಿದ್ದರೂ ಕೆಲವೊಮ್ಮೆ ಉದ್ಯಮ ಸಹಜ ಏರಿಳಿತಗಳಿಂದ ಮರುಪಾವತಿ ವಿಳಂಬವಾದರೆ ಮರುಪಾವತಿಯ ಪುನರಾರಚನೆ ಮಾಡುವುದು ಗ್ರಾಹಕನ ಮೇಲಿರುವ ನಂಬಿಕೆಯಿಂದ ಮಾತ್ರ, ಆದರೆ ಸಾಲ ಮಂಜೂರು ಮಾಡುವುದು ಸಂಬಂಧ, ಸಹಚರ್ಯ ಮತ್ತು ವಿಶ್ವಾಸಾರ್ಹತೆ ಪರಿಶೀಲನೆಯೊಂದರಿಂದಲಷ್ಟೆ ಎಂದು ತಿಳಿಯುವುದು ತಪ್ಪು. ನಿಯಮ, ನಿಬಂಧನೆ, ಕಾನೂನಿನ ಚೌಕಟ್ಟು, ಪರಿಶೀಲನಾಗತ್ಯಗಳು ಮತ್ತು ಅಧಿಕಾರಿಗಳ ನಿಯಂತ್ರಣಗಳ ಕಾರಣಗಳು ಪ್ರಭಾವ ಬೀರುವುದು ಸತ್ಯ ಸಂಗತಿ. ಬ್ಯಾಂಕು, ಠೇವಣಿದಾರ, ಗ್ರಾಹಕ ಮತ್ತು ಇತರ ಬ್ಯಾಂಕಿನ ಸಹಭಾಗಿಗಳ ತಳಹದಿ ನಂಬಿಕೆಯಷ್ಟೆ. ನಂಬಿಕೆಯೆನ್ನುವ ಈ ಅಗೋಚರ ಬಂಡವಾಳ ಎರಡು-ಬದಿಯ ಮೊನಚಾದ ಕತ್ತಿಯಿದ್ದಂತೆ. ಒಂದು ಕಡೆ ಬ್ಯಾಂಕಾದರೆ ಇನ್ನೊಂದು ಕಡೆ ಇನ್ನಿತರ ಸಹಭಾಗಿಗಳು.

ಭಾರತದ ಎರಡನೆ ದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಳಗಾಗಿರುವ ವಂಚನೆ ಪ್ರಕರಣವಂತೂ ಸಾಮಾನ್ಯ ಪ್ರಜೆಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಸಂದೇಹವನ್ನುಂಟು ಮಾಡುವುದಲ್ಲದೆ ಇದ್ದ ಎಳ್ಳಷ್ಟು ನಂಬಿಕೆಯನ್ನು ಹುಸಿಮಾಡಿದೆ. ನಿರಂತರವಾಗಿ ಏಳು ವರ್ಷಗಳು ಸಾವಿರಾರು ಕೋಟಿರೂಪಾಯಿಯ ಸಾಲವನ್ನು ಖಾತೆಗೆ ಸೇರಿಸದೇ, ಲೆಕ್ಕಪರಿಶೋಧಕರಿಗೆ ಸುಳಿವು ಸಿಗದಂತೆ, ತಾಳೆಗೆ ಸಾಗರೋತ್ತರ ಶಾಖೆ/ಬ್ಯಾಂಕುಗಳ ಸ್ವೀಕೃತಿ ಮನ್ನಿಸದೇ ಇರಲು ಸಾಧ್ಯ ಎಂಬ ಮುಗ್ಧ ಜನಗಳ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವಿಲ್ಲದೆ ವೃತ್ತಿನಿರತರು ಮತ್ತು ಬ್ಯಾಂಕು ಅಡ್ಡಕತ್ತರಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಈ ವಂಚನೆಯ ಪ್ರಕರಣವನ್ನೇ ಉದಾಹರಣೆಯನ್ನಾಗಿಟ್ಟುಕೊಂಡರೆ ಸತತವಾದ ವ್ಯವಸ್ಥೆಯ ವಿಫಲತೆ ಎದ್ದು ಕಾಣುವುದು ಒಂದು ಕಡೆಯಾದರೆ, ಕುತಂತ್ರದಿಂದ ವ್ಯವಸ್ಥೆಯನ್ನು ಅನೂಚಾನಾಗಿ ಭೇದಿಸಿ ಮೋಸವೆಸಗಲಾಗಿದೆ ಎನ್ನಬಹುದು.

ಮೇಲೆ ಹೇಳಿದಂತೆ ಕೆಲವೊಮ್ಮೆ ಉದ್ಯಮ ಸಹಜ ಏರಿಳಿತಗಳಿಂದ ಮರುಪಾವತಿ ವಿಳಂಬವಾದರೆ ಮರುಪಾವತಿಯ ಪುನಾರಚನೆ ಮಾಡುವುದು ಬ್ಯಾಂಕಿನ ಹಿತಾಸಕ್ತಿಯನ್ನು ಜೋಪಾನಮಾಡುವುದಕ್ಕಾಗಿ ಗ್ರಾಹಕನ ಉದ್ಯಮವನ್ನು ಭದ್ರಪಡಿಸುವುದಕ್ಕಾಗಿ, ಸತತ ಪ್ರಯತ್ನಗಳಿಂದಲೂ ಮರುಪಾವತಿಯಾಗದ ಸಾಲಗಳಿಗೆ ನಿಯಮಾನುಸಾರ ಆಧಾರ ಮತ್ತು ಅಡಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಅಸಲು ಮತ್ತು ಬಡ್ಡಿಯನ್ನು ತಕ್ಕಮಟ್ಟಿಗೆ ಪಡೆದುಕೊಳ್ಳಬಹುದು. ಈ ಲಿಖಿತ ನಿಯಮಗಳು ಬ್ಯಾಂಕಿಗೆ ಆಗುವ ಹಾನಿಯನ್ನು ತಡೆಗಟ್ಟಲು ಸಾಮಾನ್ಯವಾಗಿ ಬಳಸಲಾಗುವುದು.

ಈ ವಿಷಯ ಪ್ರಸ್ತಾಪಿಸಲು ಕಾರಣ ಸಾಮಾನ್ಯ ಮರುಪಾವತಿಯಾಗದ ಸಾಲಗಳಿಗೆ ನಿಯಮಾನುಸಾರ ಕ್ರಮಕೈಗೊಳ್ಳಬಹುದು. ಆದರೆ, ದುಷ್ಕೃತ್ಯ, ವಂಚನೆ, ಒಳಒಪ್ಪಂದ ಮತ್ತು ಕಳ್ಳತನ ಪ್ರಕರಣಗಳಲ್ಲಿ ಲಿಖಿತ ನಿಯಮಗಳನ್ನು ಪಾಲಿಸುವುದು ಅಸಾಧ್ಯ. ಏಕೆಂದರೆ ಬ್ಯಾಂಕು ಕೃತ್ಯನಡೆದು ಹೋಗಿರುತ್ತದೆ. ಸಾರ್ವಜನಿಕರ ಅನಿಸಿಕೆಯ ಪ್ರಕಾರ ಉದ್ಯಮಿ, ರಾಜಕೀಯ ವ್ಯಕ್ತಿ ಮತ್ತು ಅಧಿಕಾರಿಗಳ ಹೊಂದಾಣಿಕೆಯಿಂದ ಮಂಜೂರಾದ ದೊಡ್ಡ ಮಟ್ಟದ ಸಾಲಗಳಲ್ಲಿ ವಂಚನೆಯಾಗುವ ಸಂಭವ ಹೆಚ್ಚು. ಸ್ಥೂಲವಾಗಿ ಹೇಳುವುದಾದರೆ ಸಣ್ಣಮೊತ್ತದ ಸಾಲಪಡೆದವರನ್ನು ಮತ್ತು ರೈತರನ್ನು ಗೋಳಾಡಿಸಿ ಸಾಲ ವಸೂಲಿಮಾಡಲಾಗುತ್ತದಾದರೂ ವ್ಯವಸ್ಥೆಯಿಂದ ತಿಮಿಂಗಿಲಗಳು ಸುಲಭವಾಗಿ ಜಾರಿಕೊಳ್ಳುತ್ತವೆನ್ನುವುದು ಸಾಮಾನ್ಯ ಜನರ ನಂಬಿಕೆ. ಅದಕ್ಕೆ ಪೂರಕವಾಗಿ ಕಾಲಕಾಲಕ್ಕೆ ನೀರವ್ ಮೋದಿ, ವಿಜಯ್ ಮಲ್ಯ, ರೋಟೋ ಮ್ಯಾಕ್ ಕಂಪನಿಯ ವಂಚನೆ ಇನ್ನಿತ್ಯಾದಿಗಳು ಪ್ರಕರಣಗಳು ಕಾಣಸಿಗುತ್ತವೆ.

ಪಂಜಾಬ್ ಬ್ಯಾಂಕ್ ವಂಚನೆಯ ಪ್ರಕರಣಕ್ಕೆ ಶಾಮಿಲಾಗಿರಬಹುದಂತಹ ಬ್ಯಾಂಕ್ ಸಿಬ್ಬಂದಿ, ಅಪರಾಧ ಎಸಗಿದ ಕಂಪನಿಯ ಸಿಬ್ಬಂದಿಯನ್ನು ಬಂಧಿಸಿ ವಶಕ್ಕೆ ಪಡೆದು ವಂಚನೆ ಪ್ರಕರಣದ ಅವರ ಕಾರ್ಯವಿಧಾನವನ್ನು ಅರಿಯುವ ಸಿಬಿಐ ನಡೆ ಶ್ಲಾಘನೀಯವಾದರೂ ಪ್ರಮುಖ ಆರೋಪಿಗಳ ಅತಾಪತಾ ಹುಡುಕಿ ಬಂಧಿಸಿ ತರುವುದಕ್ಕೆ ಬೇಕಾದ ಕಾನೂನಾತ್ಮಕ ಕೊರತೆ ಎದ್ದು ಕಾಣುತ್ತಿದೆ. ಮುಖ್ಯವಾಗಿ ಕಾಲಕ್ಕೆ ತಕ್ಕದಾದ ಆರ್ಥಿಕ ಅಪರಾಧದ ರುವಾರಿಗಳನ್ನು ತ್ವರಿತವಾಗಿ ಬಂಧಿಸಲು ಮತ್ತು ಶಿಕ್ಷಿಸಲು ಬೇಕಾದ ಕಾನೂನು, ನೀತಿ, ನಿಯಮಾವಳಿಗಳನ್ನು ರೂಪಿಸಲು ಭಾರತದ ವ್ಯವಸ್ಥೆ ಸಾಧ್ಯವಾಗಿಲ್ಲವೆಂಬುದು ವಾಸ್ತವ ಮತ್ತು ಇದನ್ನು ನಾವು ಒಪ್ಪಿಕೊಳ್ಳಲೇಬೇಕಾದ ಕಟು ಸತ್ಯ. ಇಂತಹ ಪರಿಸ್ಥಿತಿಗಳಲ್ಲಿ ಬ್ಯಾಂಕುಗಳ ಮೇಲೆ ವಿಶ್ವಾಸ, ಭರವಸೆ, ನಂಬಿಕೆ ಇಲ್ಲದಾಗುವುದು.

ಸಮಾಧಾನಕರವಾದ ಬೆಳವಣಿಗೆಯೆಂದರೆ ಮಾನ್ಯ ಪ್ರಧಾನ ಮಂತ್ರಿ ಮೋದಿ ಈ ವಿಷಯದ ಬಗ್ಗೆ ಅತ್ಯಂತ ತೀಕ್ಷಣವಾದ ಪ್ರತಿಕ್ರಿಯೆ ನೀಡಿರುವುದು ಮತ್ತು ವಿತ್ತ ಮಂತ್ರಿ ಅರುಣ್ ಜೇಟ್ಲಿ ಈ ನಿಟ್ಟಿನಲ್ಲಿ ಆರ್ಥಿಕ ಪ್ರತಿಬಂಧಕ ಕಾಯಿದೆಗಳನ್ನು ರೂಪಿಸಲು ಒಲವು ತೋರಿಸಿರುವುದು.

ಕಾನೂನು ರೀತ್ಯ ಬೇಕಾದ ಎಲ್ಲಾ ನಿಯಮಾವಳಿಗಳನ್ನು ರೂಪಿಸುವುದಲ್ಲದೆ, ಬ್ಯಾಂಕಿಂಗ್ ಮೇಲಣ ಭರವಸೆ ಉಳಿಸಿಕೊಳ್ಳಲು ಕಾಲಕ್ಕೆ ತಕ್ಕದಾದ ಸುಧಾರಣೆಗಳ ಅಗತ್ಯಗಳನ್ನು ಅರಿತು ರೂಪಿಸುವ ಜವಾಬ್ದಾರಿ ಪ್ರತಿಯೊಂದು ಬ್ಯಾಂಕು, ಆರ್ ಬಿ ಐ, ಮತ್ತು ಕೇಂದ್ರ ಸರಕಾರದ ಮೇಲೆ ಇದೆ. ಅವುಗಳಲ್ಲಿ ಪ್ರಮುಖವಾದವು ಬ್ಯಾಂಕ್ ಸಿಬ್ಬಂದಿ ವರ್ಗಾವಣೆ ಮತ್ತು ಪಾಳಿಯಲ್ಲಿ ಕೆಲಸ ಮಾಡುವಿಕೆ. ಬಿಗಿಯಾದ, ಕಟ್ಟುನಿಟ್ಟಾದ, ಮುಕ್ತ ಮತ್ತು ಸಕಾಲಿಕ ಲೆಕ್ಕಪರಿಶೋಧನೆ, ಹೊಸ ಮತ್ತು ನಿಖರವಾದ ಅಧಿನಿಯಮಗಳು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭಾರತ ದೇಶದ ಸತ್ಪ್ರಜೆಗಳಾದ ಠೇವಣಿದಾರರು, ಗ್ರಾಹಕರು, ತೆರಿಗೆದಾರರು ಬಯಸುವುದು ಉತ್ತಮ ಆಡಳಿತ ಮತ್ತು ಕಾರ್ಯನಿರ್ವಾಹಕ ದಕ್ಷತೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೂಲಭೂತವಾಗಿ ಬೇಕಿರುವುದು ನಂಬಿಕೆಯೆನ್ನುವ ಅಗೋಚರ ಬಂಡವಾಳವನ್ನು ಬೆಳೆಸುವುದು ಮತ್ತು ಪೋಷಿಸುವುದು ಎಂದು ನಾವೆಲ್ಲರು ಮನಗಾಣಬೇಕು. ಈ ದಿಕ್ಕಿನಲ್ಲಿ ಆರ್ಥಿಕ ಕ್ಷೇತ್ರದ ಲೋಪದೋಷಗಳನ್ನು ಸರಿಪಡಿಸಲೋಸುಗ ರಣವೀಳ್ಯ ಪಡೆದು ಸುಧಾರಣಾ ಕಾರ್ಯೋನ್ಮುಖರಾಗದಿದ್ದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅವ್ಯವಸ್ಥೆಯ ಅಡಗುದಾಣವಾಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *

15 − 13 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top