About Us Advertise with us Be a Reporter E-Paper

ವಿವಾಹ್

ಚಂದದ ಮದುವೆ ಮಂಟಪ ಮತ್ತು ಅದರೊಳಗಿನ ಚಿಲಕವಿಲ್ಲದ ಟಾಯ್ಲೆಟ್ಟು…!

- ನರೇಂದ್ರ ಎಸ್ ಗಂಗೊಳ್ಳಿ

ಕಲ್ಯಾಣ ಖಾಸಾಗಿ ಸೊತ್ತು ನಿಜ, ಆದರೂ ಅದನ್ನು ಸಹಸ್ರಾರು ಜನರು ಬಳಸುವುದರಿಂದ ಮತ್ತು ಅಲ್ಲಿನ ಸಮಸ್ಯೆ ಒಂದರ್ಥದಲ್ಲಿ ಸಾರ್ವಜನಿಕರ ಸಮಸ್ಯೆಯೇ ಆಗಿರುವುದರಿಂದ ಇದನ್ನು ಇಲ್ಲಿ ಹೇಳಬೇಕಾಗಿ ಬಂದಿದೆ. ಹೌದು ಈಗ ಉಪನಯನ ಮದುವೆ ಮುಂಜಿ ಮೊದಲಾದ ಕಾರ್ಯಕ್ರಮಗಳ ಸೀಜನ್ನು ಶುರುವಾಗಿದೆ ಹಾಗಾಗಿ ಮದುವೆಮಂಟಪಗಳು ದಿನಕ್ಕೊಂದು ರೀತಿಯಲ್ಲಿ ಒಳಗೆ ಹೊರಗೆಲ್ಲಾ ಅಲಂಕಾರ ಮಾಡಿಕೊಂಡು ಜಗಮಗಿಸುತ್ತಿರುತ್ತವೆ. ಬಂದ ಜನರೂ ಈ ವೈಭವದ ಅಲಂಕಾರಗಳನ್ನುಮೈಮನಸ್ಸಿನಲ್ಲಿ ತುಂಬಿಕೊಂಡು ಸಂತೋಷಪಡುವುದುಂಟು. ಆದರೆ ಅನಿವಾರ್ಯವಾಗಿ ಅವರಿಗೆ ಈ ಸಮಾರಂಭಗಳ ಪ್ರಕೃತಿ ಕರೆಗೆ ಓಗೊಡಬೇಕಾಗಿ ಬಂದಲ್ಲಿ ಮಾತ್ರ ಕೆಲವೊಂದು ಕಲ್ಯಾಣ ಮಂಟಪಗಳಲ್ಲಿನ ಶೌಚಾಲಯಗಳ ದುರವಸ್ಥೆ ಕಣ್ಣಿಗೆ ರಾಚುತ್ತದೆ.

ನಿಜ. ಇಂದು ಹಲವು ಕಲ್ಯಾಣಮಂಟಪಗಳು ಈ ಬಗೆಗೆ ಗಮನಹರಿಸದಿರುವುದು ನಿಜಕ್ಕೂ ಖಂಡನೀಯ. ತುಕ್ಕು ಹಿಡಿದಿರುವ ಬಾಗಿಲುಗಳು, ತೂತು ಬಿದ್ದಿರುವ ಬಾಗಿಲುಗಳು. ಛಾವಣಿಯಲ್ಲಿ ಕಟ್ಟಿರುವ ಹಳೆಯ ಜೇಡರ ಬಲೆ, ಸ್ವಚ್ಛಗೊಳಿಸದೆ ವರ್ಷಗಳೇ ಆಗಿದೆಯೇನೋ ಎನ್ನುವಂತೆ ಕಾಣುವ ಕಮೋಡುಗಳು. ಕಲೆ ಕಸ ಕಡ್ಡಿ, ಉಗುಳಿದ ಪಾನಿನ ರಸ, ಚ್ಯೂಯಿಂಗ್ ಗಮ್, ಸಿಗರೇಟು ಬೀಡಿ ತುಂಡುಗಳು ಕಲ್ಮಶಗಳನ್ನು ತುಂಬಿಕೊಂಡಿರುವ ನೆಟ್ಟಗೆ ಗಾಳಿ ಬೆಳಕಾಡದ ಸಣ್ಣ ಕೋಣೆ, ಸಹಿಸಲಸಾಧ್ಯ ಕೆಟ್ಟ ವಾಸನೆ ಬೀರುತ್ತಿರುವ ಕಮೋಡು ಬೇಸಿನ್ನುಗಳು. ಇಂತಹ ಹಲವಾರು ಚಿತ್ರಣಗಳು ಕೆಲವೊಂದು ಕಲ್ಯಾಣಮಂಟಪಗಳಲ್ಲಿನ ಶೌಚಾಲಯ ದುರವಸ್ಥೆಗೆ ಸಾಕ್ಷಿ ಹೇಳುತ್ತಿರುತ್ತವೆ. ಇಷ್ಟೇ ಅಲ್ಲ ನೀರು ಬರದ ನಲ್ಲಿ ನೀರು ಬಂದರೆ ಅದನ್ನು ಹಿಡಿದುಕೊಳ್ಳಲು ಇಟ್ಟರುವ ತಳಪಾಯವಿಲ್ಲದ/ ಒಡೆದು ಹೋಗಿರುವ ತಗಡಿನ ಅಥವಾ ಪ್ಲಾಸ್ಟಿಕ್ ಡಬ್ಬಿಗಳು (ಇನ್ನು ಕೆಲವೆಡೆ ಏನೂ ಇರುವುದಿಲ್ಲ) ಚಿಲಕವೇ ಇಲ್ಲದ ಬಾಗಿಲುಗಳು. ಚಿಲಕವಿದ್ದರೆ ಕೊಂಡಿ ಇಲ್ಲ ಪರಿಸ್ಥಿತಿ, ಕೆಲವೊಮ್ಮೆ ದಾರ ಕಟ್ಟಿ ಹಿಡಿದುಕೊಂಡು ಕೂರಲು ವ್ಯವಸ್ಥೆ. ಇಂತಹ ಪರಿಸ್ಥಿಯಲ್ಲಿ ಆಕಸ್ಮಾತ್ ಪ್ರಕೃತಿಯ ಕರೆಗೆ ಓಗೊಟ್ಟರೆ ಏನು ಮಾಡಬೇಕೋ ನೀವೇ ಊಹಿಸಿಕೊಳ್ಳಿ.

ಇಂತಹ ಪರಿಸ್ಥಿತಿ ಅನೇಕ ಕಲ್ಯಾಣಮಂಟಪಗಳಲ್ಲಿ ಕಂಡುಬರುತ್ತಿದೆ. ವಿಶೇಷವಾಗಿ ಸ್ತ್ರೀಯರು ಮತ್ತು ಪುಟ್ಟ ಮಕ್ಕಳು ಇದರಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕೆಟ್ಟ ನಿರ್ವಹಣೆಯ ಇಲ್ಲದ ಶೌಚಾಲಯಗಳು ಕೇವಲ ಆ ಕಲ್ಯಾಣಮಂಟಪಗಳಿಗಷ್ಟೇ ಅಲ್ಲ ಒಂದಿಡೀ ಸಮಾಜಕ್ಕೆ ಕಪ್ಪುಚುಕ್ಕೆ ಇದ್ದಂತೆ. ಇಂತಹ ಶೌಚಾಲಯಗಳ ಬಳಸುವಿಕೆ ಹಲವು ತೆರನಾದ ಕಾಯಿಲೆಗಳಿಗೂ ಮಾಡಿಕೊಡಬಲ್ಲುದು. ಒಂದು ಸಭ್ಯ ಸಮಾಜಕ್ಕೆ ಇವು ಕಳಂಕವಿದ್ದಂತೆ. ಕಲ್ಯಾಣಮಂಟಪಗಳ ಅಲಂಕಾರದ ವೈಭವದ ನಡುವೆ ನಾವುಗಳು ಈ ಸಮಸ್ಯೆಯ ಬಗೆಗೆ ತಲೆಕೆಡಿಸಿಕೊಳ್ಳದಿರುವುದು ವಿಷಾದನೀಯ.

ಮೂಲಭೂತ ಅವಶ್ಯಕತೆಗಳನ್ನೇ ಮರೆತರೆ ಅಬ್ಬರಕ್ಕೆ ಏನರ್ಥವುಂಟು ಅನ್ನುವುದನ್ನು ಸಂಬಂಧಪಟ್ಟವರು ಹೇಳಬೇಕಿದೆ. ಇದರ ನಿರ್ವಹಣೆಗೆ ಲಕ್ಷಗಳೇನೂ ಖರ್ಚಾಗುವುದಿಲ್ಲ. ಇನ್ನಾದರೂ ಸಂಬಂಧಪಟ್ಟ ಕಲ್ಯಾಣಮಂಟಪದ ಮಾಲೀಕರು ಹೀಗೆ ಕೆಟ್ಟು ಕೊಳಕಾಗಿರುವ ಶೌಚಾಲಯಗಳ ದುರಸ್ಥಿ ನಡೆಸಿ ಸ್ವಚ್ಛಗೊಳಿಸಿ ಅವುಗಳ ಉತ್ತಮ ನಿರ್ವಹಣೆಗೆ ಮನಸ್ಸು ಮಾಡಿ ಆ ಮೂಲಕ ಜನರಲ್ಲಿ ನೈಜ ಸ್ವಚ್ಛತೆಯ ಮೂಡಿಸಲಿ ಎನ್ನುವುದು ಈ ಬರಹದ ಆಶಯ.ಕಾರ‌್ಯಕ್ರಮಗಳಿಗೆ ಹಾಲ್ ಬುಕ್ ಮಾಡುವ ಮುನ್ನ ಜನರೂ ಈ ಬಗೆಗೆ ಎಚ್ಚರ ವಹಿಸಲಿ. ಜನರೂ ಕೂಡ ಶೌಚಾಲಯವನ್ನು ಸಮರ್ಪಕವಾಗಿ ಬಳಸುವುದನ್ನು ಕಲಿಯಬೇಕಾದ ತುರ್ತು ಅಗತ್ಯತೆ ಇದೆ.

Tags

Related Articles

Leave a Reply

Your email address will not be published. Required fields are marked *

Language
Close