About Us Advertise with us Be a Reporter E-Paper

ಗುರು

ಪರಿವರ್ತನೆಯಿಂದ ಬದುಕಿಗೆ ಪಾವಿತ್ರ್ಯತೆ…

* ಮಹಾದೇವ ಬಾಸರಕೋಡು

ಬದುಕು ಚಲನಶೀಲ. ಅದು ನಿರಂತರವಾಗಿ ಬದಲಾವಣೆಗೆ ಒಳಪಡುತ್ತಲೇ ಇರುತ್ತದೆ. ಒಂದೊಮ್ಮೆ ಸುಖ, ಸಂತೋಷಗಳು ಕೂಡಿದ್ದರೆ ಮತ್ತೊಂದು ಕ್ಷಣ ನೋವು, ನಲಿವು ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಏಳು-ಬೀಳು, ನೋವು-ನಲಿವು, ಜಯ-ಅಪಜಯ ಅನಿವಾರ್ಯ. ಇಂತಹ ಬದಲಾವಣೆಗಳು ಬದುಕಿನ ಏಕತಾನತೆಯನ್ನು ದೂರ ಮಾಡುತ್ತವೆ. ಜಡತೆಯನ್ನು ಹೊಡೆದೋಡಿಸಿ ಹೊಸ ಚೈತನ್ಯವನ್ನು ತರಲು ಬದಲಾವಣೆಗಳು ಕಾರಣವಾಗುತ್ತವೆ. ಪರಿವರ್ತನೆ ಜಗದ ನಿಯಮ ಎಂಬ ಸತ್ಯವನ್ನು ಮರೆತು ನಾವು ಎಲ್ಲವೂ ನಮ್ಮಿಚ್ಛೆಯಂತೆ ಸಾಗಬೇಕು. ಬದುಕಿನ ಎಲ್ಲ ಸಂದರ್ಭಗಳು ನಮ್ಮ ಸಂತಸ, ಸಮೃದ್ಧಿ. ಸಂಭ್ರಮಗಳಿಗೆ ಪೂರಕವಾಗಿರಬೇಕು ಎಂದು ಬಯಸುತ್ತೇವೆ. ನಮ್ಮ ನಿರೀಕ್ಷೆಯಂತೆಯೇ ಎಲ್ಲವೂ ಸಾಗಬೇಕು ಎಂಬ ಸಂಪ್ರದಾಯದಲ್ಲಿ ನಿಂತುಬಿಡುತ್ತೇವೆ. ಬದಲಾವಣೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ.

ದೇವರ ಆಸ್ತಿತ್ವ..
ಸತ್ಯಾನ್ವೇಷನೆಯಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯೊಬ್ಬ ದೇವರ ಅಸ್ಥಿತ್ವದ ಕುರಿತಾಗಿ ಹತ್ತು ಹಲವು ಸೂಫಿ ಜ್ಞಾನಿಗಳನ್ನು ವಿಚಾರಿಸಿದ. ಪ್ರತಿಯೊಬ್ಬ ಜ್ಞಾನಿಯೂ ಕೊಟ್ಟ ವಿಭಿನ್ನ ಉತ್ತರಗಳಿಂದ ಗೊಂದಲಕ್ಕೊಳಗಾದ. ಕೊನೆಗೊಬ್ಬ ಸೂಫಿ ಗುರುಗಳನ್ನು ಭೇಟಿಯಾದ. ಸಂತರನ್ನು ಕುರಿತು ನಾನು ದೇವರ ಅಸ್ಥಿತ್ವ ಕುರಿತು ಕೇಳಿದ ಎಲ್ಲ ಸೂಫಿಗಳು ವಿಭಿನ್ನ ಉತ್ತರಗಳನ್ನು ಕೊಡುತ್ತಿದ್ದಾರೆ. ನನಗೆ ನಿಜಕ್ಕೂ ಗೊಂದಲವಾಗಿ ದೆ. ದಯವಿಟ್ಟು ತಾವು ನನ್ನ ಗೊಂದಲವನ್ನು ಬಗೆಹರಿಸಬೇಕು ಕೋರಿದ. ಇವನ ಮನಸ್ಥಿತಿಯನ್ನು ಅರಿತ ಸೂಫಿ ಗುರುಗಳು ಸುಮ್ಮನೆ ಒಂದಷ್ಟು ನಕ್ಕು ನಾನು ನಿನ್ನ ಗೊಂದಲವನ್ನು ಬಗೆಹರಿಸುತ್ತೇನೆ. ನಾಳೆ ಬೆಳಿಗ್ಗೆ ನನ್ನ ಆಶ್ರಮಕ್ಕೆ ಬಂದು ಸಂಪೂರ್ಣ ಒಂದು ದಿನ ನನ್ನೊಡನೆ ಊರು ಸುತ್ತಾಡಿಕೊಂಡು ಬರಬೇಕು ಎಂದರು. ನಿನ್ನ ಗೊಂದಲ ತಾನಾಗಿಯೇ ಬಗೆ ಹರಿಯುತ್ತದೆ ಎಂದು ಹೇಳಿದರು. ಸರಿ ಎಂದು ಒಪ್ಪಿದ. ಮರುದಿನ ಬೆಳಿಗ್ಗೆಯೇ ಆಶ್ರಮಕ್ಕೆ ಬಂದ. ಇಬ್ಬರು ಜೊತೆಯಾಗಿ ಊರು ಸುತ್ತಲೂ ಪ್ರಾರಂಭಿಸಿದರು. ಮೊದಲು ಪೇಟೆಗೆ ಹೋದರು. ದಾರಿಯಲ್ಲಿ ವ್ಯಾಪಾರಿಯೊಬ್ಬನನ್ನು ಕುರಿತು ಇದು ಪ್ರಾರ್ಥನೆಯ ಯಾವ ಹೊತ್ತು? ಎಂದು ಪ್ರಶ್ನಿಸಿದರು. ಅದು ಬೆಳಿಗ್ಗೆಯಾಗಿದ್ದರಿಂದ ಅವನು ಇದು ಬೆಳಗಿನ ಪ್ರಾರ್ಥನೆಯ ಹೊತ್ತು ಎಂದು ಉತ್ತರಿಸಿದ ವ್ಯಾಪಾರಿ.

ಹಾಗೆಯೇ ಸುತ್ತಾಡುತ್ತ ಹೋದರು. ಒಂದಷ್ಟು ವಿಶ್ರಮಿಸಿದರು. ಮಧ್ಯಾಹ್ನವಾಯಿತು. ಅರ್ಚಕನೊಬ್ಬ ಇವರಿಗೆ ಭೇಟಿಯಾದ. ಇದು ಪ್ರಾರ್ಥನೆಯ ಯಾವ ಹೊತ್ತು? ಎಂದು ಪ್ರಶ್ನಿಸಿದರು. ಇದು ಮಧ್ಯಾಹ್ನದ ಪ್ರಾರ್ಥನೆಯ ಹೊತ್ತು ಎಂದು ಉತ್ತರಿಸಿದ ಅರ್ಚಕ. ಮತ್ತೆ ಇಬ್ಬರೂ ಸುತ್ತಾಡುತ್ತ ಹೋದರು. ಸಂಜೆಯಾಯಿತು. ವೃದ್ಧರೊಬ್ಬರು ಭೇಟಿಯಾದರು. ಅವರನ್ನು ಕುರಿತು ಪ್ರಾರ್ಥನೆಯ ಯಾವ ಹೊತ್ತು? ಎಂದು ಪ್ರಶ್ನಿಸಿದರು. ಇದು ಸಂಜೆಯ ಪ್ರಾರ್ಥನೆಯ ಹೊತ್ತು ಎಂದು ಉತ್ತರಿಸಿದ ವೃದ್ಧ. ಒಂದೇ ಪ್ರಶ್ನೆಗೆ ಹಲವು ಉತ್ತರಗಳು ಲಭ್ಯವಾಗಿದ್ದವು. ಗುರುಗಳು ತಮ್ಮೊಡನಿದ್ದ ವ್ಯಕ್ತಿಯ ಮುಖವನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿದರು. ಸಮಯಕ್ಕೆ ತಕ್ಕಂತೆ ಎಲ್ಲವೂ ಬದಲಾವಣೆಗಳಿಗೆ ಒಳಪಡುತ್ತದೆ ಎಂಬ ಸತ್ಯದ ದರ್ಶನವಾಗಿತ್ತು.

ಸಾಂದರ್ಭಿಕತೆಗೆ ತಕ್ಕಂತೆ ಎಲ್ಲವೂ ಬದಲಾವಣೆಗೆ ಒಳಪಡುವುದು ಪ್ರಕೃತಿ ನಿಯಮ. ಯಾವುದೋ ಹಿಂದಣ ನಂಬಿಕೆಗಳಲ್ಲಿಯೇ ಬದುಕು ಸ್ಥಗಿತಗೊಳ್ಳಬಾರದು. ಬದುಕು ಚಲನಶೀಲವಾಗಿರುವುದರಿಂದಲೇ ಅದಕ್ಕೊಂದು ಪಾವಿತ್ರ್ಯತೆ ಇದೆ. ನಮ್ಮ ಅದನ್ನು ಒಪ್ಪಿಕೊಳ್ಳಲು ಸದಾ ಸಿದ್ಧವಾಗಿರಬೇಕು. ಎಲ್ಲ ವೈಪರೀತ್ಯಗಳನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ನಿತ್ಯವೂ ನಮ್ಮದಾಗಬೇಕು. ಇಂತಹ ಸತ್ಯದರ್ಶನಗಳಿಂದ ಮಾತ್ರವೇ ಬದುಕು ಕಳೆಗಟ್ಟುತ್ತದೆ. ಹೆಚ್ಚು ಅರ್ಥಪೂರ್ಣವಾಗುತ್ತದೆ

Tags

Related Articles

Leave a Reply

Your email address will not be published. Required fields are marked *

Language
Close