ಚೆನ್ನಿಯ ನಡಿಗೆಯ ಬೆಡಗು

Posted In : ವಿರಾಮ

(ಮುಂದುವರಿದುದು)

ಬಿಡದೆ ಇದ್ದಲ್ಲಿ ಸಾಧಕ ಬಾಧಕಗಳೇನು ಎಂದು ಯೋಚಿಸುತ್ತಿರುವಷ್ಟರಲ್ಲಿ ಭೀಮ ಕತ್ತೊರಳಿಸಿ ನೋಡುತ್ತದೆ ಅಗೋ ಅಲ್ಲಿ ತನ್ನ ಕಣ್ಣುಗಳನ್ನು ಪಿಳಪಿಳನೆ ಬಿಡುತ್ತ ತನ್ನ ಕಡೆ ಕಯ್ ಕುಯ್ ರಾಗಾಲಾಪನೆ ಮಾಡುತ್ತಿರುವುದು ನಿಸ್ಸಂದೇಹವಾಗಿ ಚೆನ್ನಿಯು! ಅರೆ ತನ್ನ ಚೆನ್ನಿ! ನನ್ನನ್ನು ಹುಡುಕಿಕೊಂಡು ಬಂದಿರುವ ಪ್ರಾಣವಲ್ಲಭೆ ಚೆನ್ನಿ! ನಾನು ಈಗೀಂದಗಲೆ ಬಂಧನ ಹಂಗು ತೊರೆಯದಿದ್ದಲ್ಲಿ ತಾನು ವ್ಯಾನಿನ ಗಾಲಿಗೆ ಬಿದ್ದು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಎಚ್ಚರಿಸುತ್ತಿರುವ ಚೆನ್ನಿ! ಸರಪಳಿ ಕಟ್ಟು ಇರದಿದ್ದಲ್ಲಿ.. ನಾನು ಹಹ್ಹೋ ಹೋ ಎಂದು ಬೊಗಳಲಾರಂಭಿಸಿದೆ. ಅದಕ್ಕೆ ಆ ಎರಡೂ ಕನಿಷ್ಟಬಿಲ್ಲೆಗಳ ನಡುವೆ ಮಾತುಕತೆ ಗೋಪಾಂಗವಾಗಿ ನಡೆಯಿತು.

ಬಿಟ್ಟರೆ ಏನು ಗತಿ ಬಿಡದಿದ್ದರೆ ಏನು ಗತಿ! ಬಿಟ್ಟು ಬಿಡೋಣ, ಆ ಎಸೈ ಏನು ಮಾಡ್ತಾನೊ ಮಾಡ್ಕಳ್ಳಿ ಎಂದು ನಿರ್ಧರಿಸಿದ ಕನಿಷ್ಟಬಿಲ್ಲೆಗಳು ನನ್ನ ಕೊರಳಿಗಂಟಿದ್ದ ಸರಪಳಿಯ ಕೊಂಡಿಯನ್ನು ಬಿಚ್ಚಿದೊಡನೆ.. ಅಲ್ಲಿಂದ ಪಲಾಯನ ಮಾಡುವ ಮೊದಲು ನಾನು ಕನಿಷ್ಟಬಿಲ್ಲೆಗಳ ಕಡೆ ಕೃತಜ್ಞತಾಪೂರ್ವಕವಾಗಿ ನೋಡಿದೆನು. ಅದಕ್ಕೆ ಅವರಿಬ್ಬರು ನನ್ನ ಮೈಯನ್ನು ನೇವರಿಸಿದರಲ್ಲದೆ ನನ್ನ ಮೂತಿಗೆ ಮುದ್ದು ನೀಡಿ ಓಡು ಮಾರಾಯ, ಆ ಎಸೈ ನೋಡಿದರೆ ನಿನ್ನ ಸುಮ್ಮನೆ ಬಿಡೋದಿಲ್ಲವೆಂದೊಡನೆ ಓಡಿ ಹೇಡಿ ಎಂದು ಅನ್ನಿಸಿಕೊಳ್ಳಕೂಡದೆಂದು ನಿರ್ಧರಿಸಿದೆ. ರಾಜಗಾಂಭೀರ್ಯದಿಂದ ಹೆಜ್ಜೆ ಇಡುತ್ತ ಮೆಲ್ಲಗೆ ನಡೆದು ವ್ಯಾನಿನ ಬಾಗಿಲಲ್ಲಿ ನಿಂತು ಹಾವಲೋಕನ ಮಾಡಿದೆನು.

ಅದರಿಂದ ಸ್ಪೂರ್ತಗೊಂಡ ಶ್ವಾನ ಸಮುದಾಯ ಬೊವ್ವೊ ಬೊವ್ವೋ ಎಂದು ಜಯಘೋಷ ಮಾಡಿತು. ಕಾರಣ ಹಿರಿಕಿರಿಯ ಶ್ವಾನಗಳೆಲ್ಲವು ಒಕ್ಕೊರಲಿನಿಂದ ನನ್ನನ್ನು ತಮ್ಮ ನೇತಾರನೆಂದು ಪರಿಗಣಿಸಿದ್ದವು. ಅಷ್ಟರಲ್ಲಿ ಅಷ್ಟು ದೂರದಿಂದ ನನ್ನ ಚೆನ್ನಿ.. ಏಳುಕೊಪ್ಪರಿಗೆ ಸಂಪತ್ತು ದೊರಕಿದರೆ ಭಿಕಾರಿಗೆ ಎಷ್ಟು ಸಂತೋಷವಾಗುವುದೊ ಅದಕ್ಕಿಂತ ಹೆಚ್ಚಿನ ಸಂತೋಷ ನನಗಾಯಿತು. ಮಡ್ಡೇರೋಣಿಯ ಸಾಮಂತ ವೃಕೋದರ (ಡೊಳ್ಳು ಹೊಟ್ಟೆ ಇದ್ದ ಕಾರಣಕ್ಕೆ ಅನ್ನದಾತ ಸಾರಂಗ ಅದಕ್ಕೆ ಆ ಹೆಸರಿಟ್ಟಿದ್ದನು) ಎಸೈ ಊರಿನಿಂದ ಶಾಶ್ವತವಾಗಿ ತೊಲಗುವವರೆಗೆ ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳಬೇಡಿರಿ ಎಂದು ನಮಗೆ ತಾಕೀತು ಮಾಡಿದ್ದನು. ಆದ್ದರಿಂದ ಚೆನ್ನಿಯ ಸಂಗಡ ನಾನು ಗೌರಿಶಂಕರ ಕಾಂಚನಗಂಗಾಗಳಿಗಿಂತ ಮಿಗಿಲೆನಿಪ ತಿಪ್ಪೆಗಳ ನಡುವೆಯೂ, ಗಂಗೆ ಯಮುನೆ ಸರಸ್ವತಿಗಳಂಥ ನದಿಗಳಿಗೆ ಮಿಗಿಲೆನಿಪ ಚರಂಡಿಗಳ ದಡಗಳ ಮೇಲೂ, ಶ್ರೀಗಂಧ ಸಾಗುವಾನಿಗಳಿಗಿಂತ ಮಿಗಿಲೆನಿಪ ರಿಜರಿ ಜಾಲಿ ಕಳ್ಳಿ ಕಾಕಸುಗಳ ತಣ್ಣೆಳಲಿನಲ್ಲು… ಹಗಲು ಹೊತ್ತಿನ ಬಿಸಿಲೆಂಬ ಬೆಳದಿಂಗಳಲ್ಲಿ, ರಾತ್ರಿ ಹೊತ್ತು ಕಪ್ಪು ಎಂಬ ಹಗಲಿನಲ್ಲಿ.. ಜೊತೆ ಜೊತೆಯಲ್ಲಿ ತಿರುಗಾಡುವುದನ್ನು ರೂಢಿಸಿಕೊಳ್ಳುವುದಕ್ಕು ಪೂರ್ವದಲ್ಲಿ!

ಕಡುನೀಲಿ ವರ್ಣದ ವಾಹನಕ್ಕೆ ಇಂಧನ ತರಲೆಂದು ಅತ್ತ ಹೋದರೆ ಇತ್ತ ಎಸೈ ಸಂಜೀವ ದಾಸವಾಳದ ಪೊದೆ ಮರೆಯಲ್ಲಿ ಅವಿತು ತಾವಾಡುತ್ತಿರುವ ಹಲ್ಕಾ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಸಂಗತಿ ಆ ಮಾವ ಈ ಅಳಿಯನಿಗೆ ತಿಳಿದಿರಲಿಲ್ಲ, ಅವರೊಂದೆ ಅಲ್ಲದೆ ಇತರರಿಗು ಸಹ ತಿಳಿದಿರಲಿಲ್ಲ, ತಿಳಿದಿದ್ದರೆ ಎಚ್ಚರಿಸದೆ ಇರುತ್ತಿರಲಿಲ್ಲ. ತನ್ನಂಥ ಅಧಿಕಾರಿಯನ್ನೆ ವಾಚಾಮಗೋಚರ ಬಯ್ಯುತ್ತಿರುವವರು ಇನ್ನು ರಾಜ್ಯದ ಪ್ರಥಮ ಪ್ರಜೆಯನ್ನು ಬಿಡುವುದುಂಟೆ! ಇನ್ನು ಕೇಳಿಸಿಕೊಳ್ಳುತ್ತಿದ್ದನೇನೊ ಆದರೆ.. ದಾಸವಾಳದ ಪೊದೆ ಕರಿಯಗಂಬಳಿ ಒದ್ದಂತೆ ಇತ್ತು, ಅದರ ಬುಡದಲ್ಲಿ ಕಳೆದ ವಾರದಿಂದ ಅಸಂಖ್ಯಾತ ಕೆಂಜಗಗಳು ಗೂಡು ನಿರ್ಮಿಸಿಕೊಂಡು ಸಂಸಾರ ಹೂಡಿದ್ದವು. ತಮ್ಮ ಗೂಡಿನ ಮೇಲೆ ಬೂಟುಗಾಲಿರಿಸಿದ್ದ ಪುಣ್ಯಾತ್ಮ ಎಸೈ ಎಂಬ ಸಂಗತಿ ಆ ಬಡಪಾಯಿ ಕೆಂಜಗಗಳಿಗೇನು ಗೊತ್ತು! ಅವು ಕೆರೆಳಿದ್ದಾಗಲಿ, ಕೆರಳಿ ಗೂಡಿನ ರಂದ್ರದಿಂದ ಹೊರಬಂದು ಬೂಟಿನ ಮೂಲಕ ಖಾಕಿ ಪ್ಯಾಾಂಟು ಒಳಗಡೆ ಪ್ರವೇಶಿಸಿದ್ದಾಗಲೀ, ಪ್ರವೇಶಿಸಿ ಆತನ ದೇಹದ ಸಂಕೀರ್ಣ ಸ್ಥಳವನ್ನು ಕಚ್ಚ ಲಾರಂಭಿಸಿದ್ದಾಗಲೀ, ಆ ಉರಿ ನೋವು ತುರಿ ಹಿಂಸೆ ಭಯಾನಕ ಎನ್ನಿಸಿ ಅಮ್ಮಾ ಎಂದು ಕೂಗಿಕೊಂಡಿದ್ದಾಗಲೀ, ಅದನ್ನು ತಕ್ಷಣ ಕೇಳಿಸಿಕೊಂಡ ಸಭಾಸದರು ಯಾರಿದ್ದಾರು ಅಲ್ಲಿ ಎಂದು ಕತ್ತೊರಳಿಸಿ ನೋಡಿದ್ದಾಗಲೀ!

ಕೆಂಜಗಗಳ ಮೇಲಿನ ಕೋಪವನ್ನು ಅಳಿಯ ಮಾವಂದಿರ ಮೇಲೆ ತೀರಿಸಿಕೊಳ್ಳಲೆಂದು ಸೊಂಟದ ಭಾಗದ ಮೇಲೆ ಅಲಂಕರಿಸಿದ್ದ ಬೆಲ್ಟನ್ನು ಕೈಗೆ ತೆಗೆದು ಕೊಂಡವನೆ ಸಂಜೀವ ಬಿರುಗಾಳಿಯಂತೆ ನುಗ್ಗಿದನು, ಅವರಿಬ್ಬರ ಮೇಲೆ ಅಶ್ಲೀಲ ಪದಗಳ ಸುರಿಮಳೆ ಸುರಿಸುತ್ತ ಬೆಲ್ಟಿನಿಂದ ಒಂದೆ ಸಮನೆ ಭಾರಿಸತೊಡಗಿದನು. ಎಷ್ಟೊ ಹೊತ್ತಿನ ಬಳಿಕ ಅರ್ಥವಾಯಿತು ಯಮದೂತನಂತೆ ವಕ್ಕರಿಸಿದ ವ್ಯಕ್ತಿ ಪೋಲಿಸ್ ಅಧಿಕಾರಿ ಎಂಬ ಸಂಗತಿಯು, ವ್ಯಾನು ಇನ್ನು ಊರಿನ ಅಗಸೆ ಬಾಗಿಲು ದಾಟಿಲ್ಲವೆಂಬ ಸಂಗತಿಯು! ದೇವ್ರೂ ದೇವ್ರೂ ಎಂದು ಆತನ ಕಾಲು ಹಿಡಿದುಕೊಂಡರು ಆ ಆರೋಪಿಗಳು. ಕುಡಿದ ಅಮಲಿನಲ್ಲಿ ತುಟಿ ಜಾರಿದ ಮಾತುಗಳನ್ನು ಹೊಟ್ಟೆಯಲ್ಲಿ ಹಾಕ್ಕೊಳ್ಳಿರಿ ಎಂದು ಪರಿಪರಿಯಿಂದ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ.

ಕ್ಷಮಿಸಿದ ಬಳಿಕವೂ ತಮ್ಮ ತಿಳವಳಿಕೆಯನ್ನು ತಿದ್ದಿಕೊಳ್ಳದ ಇಂಥ ಪರಮನೀಚರು ಜೈಲಿನಲ್ಲಿರುವುದೆ ವಾಸಿ ಎಂದು ಖುದ್ದ ಅಪರಾಧದ ಫಲಾನುಭವಿ ಪಕ್ಕೀರಪ್ಪ ಹೇಳಿದ ಮರುಕ್ಷಣವೆ ಅವರ ಕೈಗಳನ್ನು ಥಳಥಳ ಹೊಳೆಯುತ್ತಿದ್ದ ಸಂಕೋಲೆಗಳು ಅಲಂಕರಿಸುವಷ್ಟರಲ್ಲಿ.. ಕನಿಷ್ಟಬಿಲ್ಲೆ ಓಡೋಡಿ ಬಂದು ಭೀಮನೆಂಬ ಶ್ವಾನ ತಪ್ಪಿಸಿಕೊಂಡಿತೆಂದು ಹುಸಿ ನುಡಿದನು, ಇನ್ನೋರ್ವ ಕನಿಷ್ಟಬಿಲ್ಲೆಯು ಅದು ಕಚ್ಚಿ ಗಾಯಗೊಳಿಸಿತೆಂದು ಪ್ಯಾಾಂಟಿನೊಳಗಿನ ಜಾಗವನ್ನು ಸಂಜ್ಞೆ ದ್ವಾರ ತೋರಿಸಿದನು. ಈಗಿಂದೀಗಲೆ ಹುಡುಕಿ ತನ್ನಿರಿ ಎಂಬ ಮಾತುಗಳನ್ನು ಕೇಳಿಸಿಕೊಂಡವರು ಒಂದು ತಾಸಿನ ಬಳಿಕ ಮರಳಿ ಬಂದು ತಮ್ಮ ಬರಿಗೈಗಳನ್ನು ಪ್ರದರ್ಶಿಸಿದರು. ವಾರದೊಳಗೆ ಭೀಮ ಬತ್ತನಳ್ಳಿ ಸ್ಟೇಷನ್ನಿನಲ್ಲಿರಿಸುವ ಹೊಣೆ ತಮ್ಮದು ಎಂದು ಅಪಾರಿ ಆಶ್ವಾಸನೆ ನಿಡಿದ ಬಳಿಕ.. ಕಾಡುಹಂದಿಗಳನ್ನು ಕೊಲ್ಲಲು ಸಹಾಯಾರ್ಥವಾಗಿ ಗೌಪ್ಯಸ್ಥಳದಲ್ಲಿರಿಸಿದ್ದ ವ್ಯಕ್ತಿ ಯಾರೆಂದರೆ ಬಿಸೆಟ್ಟಿ ಎಂಬ ಶಿಕಾರಿ ತಜ್ಞನು.

ಆತ ಚಿಗ್ಯಾಟಿ ಸನಿಹದ ಕುರುಚಲು ಕಾಡುಗಳಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಕಾಡುಮಿಕ ಜಿಂಕೆ ನವಿಲು ಮೊಲವೇ ಮೊದಲಾದ ಪ್ರಾಣಿ ಪಕ್ಷಿಗಳನ್ನು ವಾರದ ಏಳುದಿವಸಗಳ ಕಾಲ ಬೇಟೆ ಯಾಡಿ ಸಪಲಾಯಿ ಮಾಡುವುದರ ಮೂಲಕ ರಾಜ್ಯದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಕೃಪಾಕಟಾಕ್ಷಕ್ಕೆ ಪಾತ್ರನಾಗಿದ್ದನು.  ವಿಷಯ ತಿಳಿದು ತಾನೆ ಹ್ಹಾಾಂ ಹೌದೇನು ಎಂದು ಉದ್ಗರಿಸಿ ಹತ್ತು ಲೀಟರಿನ ಕ್ಯಾನನ್ನು ಕನಿಷ್ಟಬಿಲ್ಲೆ ಕೈಲಿ ಕಳಿಸಿದ್ದರಿಂದ.. ಅವರೆಲ್ಲ ಹೋದರೊ ಇಲ್ಲವೊ ಎಂಬ ಆತಂಕ ನನಗೆ ಎಳ್ಳಷ್ಟು ಇರಲಿಲ್ಲ, ನಾವಿಬ್ಬರು ನಮ್ಮ ಪಾಡಿಗೆ ನಾವು ತಿಪ್ಪೆಗಳೆಂಬ ನಂದನವನದಲ್ಲಿ ವಿಹರಿಸುತ್ತಿದ್ದೆವು. ಅಷ್ಟರಲ್ಲಿ ವೃಕೋದರ ಓಡೋಡಿ ಬಂದು ಪೋಲಿಸರ ವ್ಯಾನು ಆಗಲೆ ಹೋಯಿತು, ನೀವಿನ್ನು ನಿಶ್ಚಿಂತೆಯಿಂದ ಇರಬಹುದು ಎಂದು ಹೇಳಿತು, ಅದರಿಂದ ನನಗಿಂತ ಮುಖ್ಯವಾಗಿ ಚೆನ್ನಿ ನೆಮ್ಮದಿಯ ಉಸಿರುಬಿಟ್ಟಳು.

ಸ್ವಲ್ಪ ಹೊತ್ತಿನ ಬಳಿಕ ಇನ್ನೋರ್ವ ಅಂದರೆ ಕಟುಗರೋಣಿಯ ಸಾಮಂತ ಝಂಝಾನಿಲ ಓಡಿ ಬಂದನಲ್ಲದೆ ಎಲ್ಲಂತ ನಿಮ್ಮನ್ನು ಹುಡುಕುವುದು ಎಂದು ಕೇಳಿದ್ದು ಒಂದೆ ಉಸಿರಿಗೆ, ವೃಕೋದರ ಒತ್ತಾಯಿಸಿದ್ದರಿಂದ.. ಈಡಿಗರ ಲಚುಮಯ್ಯನ ಕುಟುಂಬ ಸದಸ್ಯರ ಹೊಟ್ಟೆಗಳನ್ನು ಮಜ್ಜಿಗೆಯಿಂದ ತಣ್ಣಗೆ ಮಾಡುತ್ತಿದ್ದ ಎಮ್ಮೆ ಯಾಕೆ ಸತ್ತಿತೆನ್ನುವುದೆ ನಿಗೂಢ. ನನ್ನಂಥ ಶ್ವಾನಗಳಿಗೆ ತಿಳಿದಂತೆ ಎಮ್ಮೆ ಸಂಜೆವರೆಗೆ ಆರೋಗ್ಯದಿಂದ ಇತ್ತು. ಆದರೆ ಅದು ತನ್ನ ಆಶ್ರಯದಾತನ ಮನೆಯನ್ನು ಸಮೀಪಿಸಿದೊಡನೆ ನೀರಿನಂಥ ಮಲವನ್ನು ವಿಸರ್ಜಿಸಿ ಕೊನೆಯುಸಿರೆಳೆಯಿತಂತೆ! ಈ ಸಾವಿನಲ್ಲಿ ಠೊಣ್ಣಿಯ ಕೈವಾಡವಿರುವುದಾಗಿ ತಳವಾರ ಸಿದ್ದ ಅನುಮಾನಪಟ್ಟಿದ್ದನು. ಅದು ಎಷ್ಟು ಸುಳ್ಳೋ ಎಷ್ಟು ನಿಜವೊ! ಮನೆ ಮಾದಿಗರಾದ ಠೊಣ್ಣಿ ಮತ್ತವನ ಸಂಗಡಿಗರು ಅದನ್ನು ಊರ ಹೊರವಲಯದಲ್ಲಿರುವ ಕನ್ನೀರವ್ವನ ಬಾವಿ ಬಯಲಿಗೆ ಹೊತ್ತೊಯ್ದು ಕೊಯ್ದು ಚರ್ಮ ಮಾತ್ರ ಸುಲಿದು ವಶಪಡಿಸಿಕೊಂಡು ಹೋಗಿರುವರಂತೆ! ಇನ್ನು ತಮ್ಮ ಊರಿನ ಶ್ವಾನಗಳನ್ನು ಹೊರತುಪಡಿಸಿ ನೆರೆಹೊರೆಯ ಊರುಗಳ ಶ್ವಾನಗಳು ಒಂದೂ ಬಂದಿಲ್ಲವಂತೆ! ಈಗ ಸದ್ಯಕ್ಕೆ ಕಳೇಬರವನ್ನು ಕುಕ್ಕಿ ಮುಕ್ಕುತ್ತಿರುವುದು ಹದ್ದು ಕಾಗೆಗಳಂತೆ! ಅಷ್ಟರೊಳಗೆ ತಾವು ಮುವ್ವರು ಹೋಗಿ ಕಾಣಿಸಿಕೊಂಡಲ್ಲಿ ತಮ್ಮ ಸಹೋದ್ಯೋಗಿಗಳು ಸ್ವಕುಲಸ್ಥರು ತಿನ್ನಲು ತಮಗೆ ಅವಕಾಶ ಕಲ್ಪಿಸಬಹುದು.

ಝಂಝಾನಿಲ ಹೇಳಿದ್ದು ವೃಕೋದರನ ಮನಸ್ಸಿಗೆ ಒಪ್ಪಿಗೆಯಾಯಿತು, ನಾನು ಅರೆಮನಸ್ಸಿನಿಂದ ಒಪ್ಪಿದೆ, ಆದರೆ ವಿಷಪ್ರಾಶನದಿಂದ ಸತ್ತಿರುವ ಕಳೇಬರದ ಮಾಂಸ ನನ್ನ ಚೆನ್ನಿ ಸೇವನೆ ಮಾಡುವುದು ನನಗೆ ಸುತಾರಾಂ ಇಷ್ಟವಾಗಲಿಲ್ಲ. ಸ್ವಲ್ಪ ದೂರ ಅವರ ಸಂಗಡ ನಾವಿಬ್ಬರು ಹೆಜ್ಜೆ ಹಾಕಿದೆವು, ಕೆಲವು ನಾಯಿಗಳು ನಮ್ಮನ್ನು ಹಿಂಬಾಲಿಸಿದವು, ಕಾರಣ ನಮ್ಮಿಬ್ಬರ ಜೋಡಿ ಅವುಗಳಿಗೆ ನೇತ್ರಾನಂದವನ್ನುಂಟು ಮಾಡಿರಬಹುದೆಂದು ಭಾವಿಸಿದೆ. ಅಲ್ಲದೆ ನನ್ನನ್ನು ಅವೆಲ್ಲ ಮುಖಂಡನೆಂದು ಪರಿಗಣಿಸಿದ್ದವು. ಸುಮಾರು.. ಎರಡು ಧಮ್ ನಡೆದ ಬಳಿಕ! ಹ್ಹಾಾಂ ಅಂದಹಾಗೆ ನಮ್ಮ ಚೆನ್ನಿಯ ವ್ಯಕ್ತಿತ್ವದ ವೈಶಿಷ್ಟ್ಯವೆಂದರೆ ನಡೆಯುವಾಗ ಉಳಿದ ನಾಯಿಗಳಂತೆ ಆಕೆ ಬಾಯಿ ತೆರೆದು ನಾಲಗೆಯನ್ನು ಹೊರಚಾಚುತ್ತಿರಲಿಲ್ಲ.

ಆಕೆಯ ಶ್ವಾಸೋಚ್ವಾಸದ ವ್ಯವಸ್ಥೆ ಉಳಿದೆಲ್ಲ ಚತುಷ್ಪಾದಿಗಳಿಗಿಂತ ಭಿನ್ನವಿತ್ತು, ಇರಲಿ ಅದೆಲ್ಲ. ಕನ್ನೀರವ್ವನ ಬಾವಿಯನ್ನು ನಾವು ನೋಡುತ್ತಿರುವುದು ಅದೆ ಮೊದಲ ಸಲ. ಅದೊಂದು ಐತಿಹಾಸಿಕ ಜಲಸ್ಥಾವರವೆಂದೂ, ಹುಣ್ಣುಮೆಯಂದು ರಾತ್ರಿ ವೇಳೆ ಕಿನ್ನರ ಕಿಂಪುರುಷರು ದೇವಲೋಕದಿಂದ ಚಿಗ್ಯಾಟಿಗೆ ಆಗಮಿಸಿ ಅದರಲ್ಲಿ ಜಲಕೇಳಿ ಆಡುವರೆಂಬ ಮಾಹಿತಿ ಸವಾರೆವ್ವನ ಜನಪದ ಪದಗಳಲ್ಲಿರುವುದು.ಆದರೆ ಒಂದಂತು ನಿಜ, ತಳವಿರದ ಅದು ಸರ್ವಋತು ಬಾವಿ, ಆದರೆ ಆ ಬಾವಿಯ ನೀರನ್ನು ಜನರು ಬಳುಸುವುದು ಒತ್ತಟ್ಟಿಗಿರಲಿ, ದನಕರುಗಳಿಗು ಸಹ ಕುಡಿಸುವುದಿಲ್ಲ. ಅದೆ ಸವಾರೆವ್ವನ ಪದಗಳಲ್ಲಿರುವ ಮಾಹಿತಿಯಂತೆ ನೂರಾರು ವರ್ಷಗಳ ಹಿಂದೆ ನಡೆದ ಘಟನೆ, ಅದೆಂದರೆ ಆ ಬಾವಿಯಲ್ಲಿನ ನೀರನ್ನು ಬಳಸಿದ ಹೊಲೆಯನ ಹೆಣ ಅದೆ ಬಾವಿಯಲ್ಲಿ ತೇಲಾಡಿತಂತೆ, ಅದಕ್ಕೆ ಊರಿನ ಸಿದ್ದನಗೌಡನೆ ಕಾರಣವಂತೆ! ಹೀಗಾಗಿ ಕನ್ನೀರವ್ವನ ಬಾವಿ ನೀರಿದ್ದರೂ ನಿಸ್ತೇಜವಾಗಿರುವುದು, ಇನ್ನು ಅದರ ಪರಿಸರ ಸತ್ತ ದನಕರುಗಳ ಕಳೇಬರಗಳನ್ನು ಕೊಯ್ಯಲು ಮೀಸಲಿರುವುದು. ಅದರಂತೆ ಠೊಣ್ಣಿಯು!

ದೈತ್ಯಾಕಾರದ ಕಳೇಬರ ಒಮ್ಮುಖವಾಗಿ ಬಿದ್ದಿತ್ತು, ಬಾಜಿರಾಯ ಹೇಳಿದಂತೆ ಸ್ಥಳೀಯ ಕಾಗೆಗಳಿಗಿಂತ ಇನ್ನಿತರ ಸ್ಥಳಗಳಿಂದ ಹದ್ದುಗಳು ಹೇರಳ ಸಂಖ್ಯೆಯಲ್ಲಿ ಆಗಮಿಸಿ ಅದನ್ನು ಮುತ್ತಿದ್ದವು. ನಮ್ಮೆಲ್ಲರನ್ನು ಹಿಂದಿಕ್ಕಿ ವೃಕೋದರ ಅದನ್ನು ಸಮೀಪಿಸಿ ಕೆಮ್ಮಿ ಸದ್ದು ಮಾಡಿದ, ಅದಕ್ಕೆ ಆ ಖಗಚರಗಳು ಕ್ಯಾರೆ ಅನ್ನಲಿಲ್ಲ.

ಕುಂವೀ

(ಮುಂದುವರಿಯುವುದು)

Leave a Reply

Your email address will not be published. Required fields are marked *

3 × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top