About Us Advertise with us Be a Reporter E-Paper

ಅಂಕಣಗಳು

ಮಗುವಿಗೆ ಸರಕಾರಿ ಸೌಲಭ್ಯಗಳು ಬೇಕು, ಆದರೆ ಸರಕಾರಿ ಶಾಲೆ ಬೇಡ!

ಎಲ್.ಪಿ. ಕುಲಕರ್ಣಿ, ಶಿಕ್ಷಕರು

ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ರೂಪುಗೊಳ್ಳುತ್ತದೆ ಎಂಬುದಾಗಿ ಹೇಳಿದ ಮಹಾನ್ ಚೇತನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತು ಅಕ್ಷರಶಃ ಸತ್ಯ. ಆದರೆ ಶಿಕ್ಷಣ ಕ್ಷೇತ್ರದಲ್ಲಾದ ಇತ್ತೀಚಿನ ಬದಲಾವಣೆಗಳನ್ನು ಗಮನಿಸುತ್ತಿದ್ದರೆ ನಿಜಕ್ಕೂ ಆತಂಕ ಹುಟ್ಟುತ್ತದೆ. ಮಕ್ಕಳ, ಪಾಲಕರ ಪೋಷಕರ ಮತ್ತು ಶಿಕ್ಷಕರ ನಡೆ-ನುಡಿಗಳಲ್ಲಿ ಬದಲಾವಣೆಗಳಾಗಿವೆ. ಇಂದು ನಾವೆಲ್ಲ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿ, ತತ್ ಕ್ಷಣದಲ್ಲಿ ಎಲ್ಲ ಮಾಹಿತಿ ಅಂತರ್ಜಾಲದಲ್ಲಿ ಜಾಲಾಡಿ ಪಡೆದುಕೊಳ್ಳುತ್ತಿದ್ದೇವೇನೋ ನಿಜ. ಆದರೆ ಎಲ್ಲೋ ಒಂದು ಕಡೆ ನಮ್ಮ ದೇಶದ ಮೂಲ ಶಿಕ್ಷಣಕ್ಕೆ ಪೆಟ್ಟು ಹಾಕುತ್ತಿದ್ದೇವೇನೋ ಎಂದೆನಿಸುತ್ತಿದೆ.

2009-10 ರಿಂದ 2017-18 ರವರೆಗೆ ಶಾಲೆಗಳ ಮತ್ತು ಮಕ್ಕಳ ಸಂಖ್ಯೆಯಲ್ಲಿ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ ಸಾಗಿದಲ್ಲಿ ಸರಕಾರಿ ಶಾಲೆಗಳಲ್ಲಿ ವಿಭಿನ್ನ ರೀತಿಯ ಚಿತ್ರಣವನ್ನು ಗಮನಿಸಬಹುದು. ದೇಶದ ಒಟ್ಟು ಸರಕಾರಿ ಶಾಲೆಗಳ ಹೆಚ್ಚಳವಾಗಿದ್ದರೆ, ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಂಡುಬರುತ್ತಿದೆ. ಇದರಿಂದ ಕಂಡು ಬರುವುದೇನೆಂದರೆ, ಸರಕಾರಿ ಶಾಲೆಗಳ ಹರವು ಜಾಸ್ತಿ ಇದ್ದು, ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದೆ. ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣದ ಸಾರ್ವತ್ರೀಕರಣದ ಸದುದ್ದೇಶದಿಂದ ಸರಕಾರವು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ತೆರೆದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಸ್ಥಿರವಾಗಿದೆ ಅಥವಾ ಅಲ್ಪ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವ್ಯಾಪಾರಿ ಉದ್ದೇಶದಿಂದ ನಡೆಯುವ ಅನುದಾನ ರಹಿತ ಸಂಖ್ಯೆ ಹಾಗೂ ಆ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆಯ ಅಗಾಧ ಹೆಚ್ಚಳ ಕಣ್ಣಿಗೆ ರಾಚುವಂತಿದೆ. ಇಂಗ್ಲಿಷ್ ಮಾಧ್ಯಮದ ವ್ಯಾಮೋಹವೋ ಅಥವಾ ತಮ್ಮ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಪೋಷಕರ ಮಹತ್ವಾಕಾಂಕ್ಷೆಯ ಕಾರಣದಿಂದಲೋ ಈ ಬೆಳವಣಿಗೆಯಾಗುತ್ತಿದೆ. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ಮಗುವಿಗೆ ಸರಕಾರಿ ಸೌಲಭ್ಯಗಳೇನೋ ಬೇಕು. ಆದರೆ ಶಿಕ್ಷಣ ಮಾತ್ರ ಸರಕಾರಿ ಶಾಲೆಗಳಲ್ಲಿ ಬೇಡ ಎಂಬುದು ಬಹುಪಾಲು ಪಾಲಕರ ನಿಲುವು. ಇದರ ಜೊತೆ ಆರ್‌ಟಿಇ ಕಾಯಿದೆ ಅನ್ವಯ ಸರಕಾರಿ ದಾಖಲಾಗಬೇಕಿದ್ದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಹಾಗೂ ಈ ಕಾರಣದಿಂದ ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಬಡವಾಗುತ್ತಿರುವುದು ಬಹಳ ನೋವಿನ ಸಂಗತಿ.

ಈ ರೀತಿ ಮಕ್ಕಳ ಸಂಖ್ಯೆಯಲ್ಲಿ ಬಡವಾದರೆ ಸರಕಾರಿ ಶಾಲೆಗಳು ಗ್ರಾಮೀಣ ಭಾಗದಲ್ಲಿಯೇ ಇರುವುದು ಹೆಚ್ಚು. ಮುಂದೊಂದು ದಿನ ಅಲ್ಲಿಯೂ ಈ ಶಾಲೆಗಳು ಮುಚ್ಚುವ ಸಾಧ್ಯತೆಗಳು ಸದ್ಯ ಗೋಚರಿಸುತ್ತಿವೆ. ಈ ರೀತಿಯ ಸಮಸ್ಯೆಯನ್ನು ತಡೆಗಟ್ಟಲು ಇತ್ತೀಚೆಗೆ ಶಿಕ್ಷಣ ಇಲಾಖೆ, ಶಿಕ್ಷಣ ಚಿಂತಕರು, ಸಚಿವರಗಳ ನಡುವೆ ಸುದೀರ್ಘ ಚರ್ಚೆಗಳು ಸದ್ಯ ಸರಕಾರಿ ಶಾಲೆಯಿರುವ 1 ಕಿಮೀ ವ್ಯಾಪ್ತಿಯಲ್ಲಿ ಯಾವುದಾದರೂ ಖಾಸಗಿ ಶಾಲೆಯಿದ್ದರೆ, ಆರ್‌ಟಿಇ ಅನ್ವಯ ಆ ಖಾಸಗಿ ಶಾಲೆಗೆ ದಾಖಲಾಗುವ ಮಕ್ಕಳ ಅನುದಾನವನ್ನು ತಡೆಹಿಡಿಯಲಾಗುವುದು ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಸರಕಾರಿ ಶಾಲೆಗಳು ಈ ಮೊದಲಿನಂತೆ, ಮಕ್ಕಳಿಂದ ತುಂಬಿ ನಳನಳಿಸಬಹುದು. ಇಲ್ಲವಾದರೆ ಮುಚ್ಚಿ ಇತಿಹಾಸ ಸೇರುವುದರಲ್ಲಿ ಯಾವ ಸಂಶಯವೂ ಇಲ್ಲ!

ಸರಕಾರಿ ಶಾಲೆಗಳ ಸಂಖ್ಯೆಯಲ್ಲಿ ಕುಸಿತ ಇದೇ ಗತಿಯಲ್ಲಿ ಕಂಡುಬಂದರೆ ಮುಂದಿನ ಐದು ಸರಿಸುಮಾರು ಮೂರರಿಂದ ನಾಲ್ಕು ಕೋಟಿ ಮಕ್ಕಳು ಸರಕಾರಿ ಶಾಲೆಗಳಿಂದ ದೂರ ಉಳಿಯಬಹುದೆಂದು ಅಂದಾಜಿಸಬಹುದು. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಹೆಚ್ಚಳಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಹತ್ತು ವರ್ಷಗಳಲ್ಲಿ ಸರಕಾರಿ ಶಾಲೆ ಮತ್ತು ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬರಲಿದೆ. ಕೆಲವು ಕಡೆಗಳಲ್ಲಂತೂ ಏಕೋಪಾಧ್ಯಾಯ ಶಾಲೆಗಳೇ ತಲೆಯೆತ್ತಿ ನಿಂತಿವೆ. ನೂರಾರು ವಿದ್ಯಾರ್ಥಿಗಳು, ಜೊತೆಗೆ ನಾಲ್ಕೈಲ್ಕೈದು ತರಗತಿಗಳಿಗೆ ಒಬ್ಬನೇ ಒಬ್ಬ ಶಿಕ್ಷಕ ಬೋಧಿಸುವುದಾದರೂ ಹೇಗೆ? ಬೋಧನೆಯ ಜೊತೆಗೆ ಮಕ್ಕಳ ಮಧ್ಯಾಹ್ನದ ಬಿಸಿ ಊಟದ ನಿರ್ವಹಣೆ, ಮುಖ್ಯೋಪಾಧ್ಯಾಯರ ಕೆಲಸಗಳನ್ನು ಒಬ್ಬನೇ ಮಾಡುವುದು…ಮುಂತಾದವೆಲ್ಲಾ ಹೊರೆಯಾಗಿರುವದರಿಂದ ಅಲ್ಲಿ ನೈಜ, ಪ್ರಗತಿಪರ, ಸೃಜನಶೀಲ ಶಿಕ್ಷಣ ಕಾಣಲು ಸಾಧ್ಯವಿಲ್ಲ. ಆರ್‌ಟಿಇ ಪ್ರಕಾರ ಏಕೋಪಾಧ್ಯಾಯ ಶಾಲೆ ಅಸ್ತಿತ್ವದಲ್ಲಿ ಇರುವ ಹಾಗೆಯೇ ಇಲ್ಲ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ ದೇಶದ ಶೇ.10 ಕ್ಕಿಂತ ಅಧಿಕ ಕಿರಿಯ ಪ್ರಾಥಮಿಕ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಇಷ್ಟೊಂದು ಸಂಖ್ಯೆಯ ಈ ಏಕೋಪಾಧ್ಯಾಯ ಶಾಲೆಗಳಲ್ಲಿ ಯಾವ ರೀತಿಯ ಗುಣಮಟ್ಟದ ಶಿಕ್ಷಣ ಒದಗಿಸಬಹುದು ಎಂಬುದಾಗಿ ಕ್ಷಣ ಯೋಚಿಸಿದಾಗ ದಿಗಿಲಾಗುತ್ತದೆ.

ಇನ್ನು ಶಿಕ್ಷಕರ-ವಿದ್ಯಾರ್ಥಿಗಳ ಸಂಖ್ಯಾನುಪಾತವು ಈ ಮೂಲಭೂತ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ, ಪ್ರಾಥಮಿಕ ಶಾಲಾ ಹಂತದಲ್ಲಿ 1:30 ಹಾಗೂ ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ 1:35 ಇರಬೇಕು. ಇದರ ಜೊತೆಗೆ ಶಿಕ್ಷಕರು ತರಬೇತಿ ಹೊಂದಿದವರಾಗಿರಬೇಕು ಎಂಬುದಾಗಿ ನಿಯಮ ಹೇಳುತ್ತದೆ. ಆದರೆ ಅನೇಕ ಖಾಸಗಿ ಶಾಲೆಗಳಲ್ಲಿ ವಿದ್ಯಾಥಿ-ಶಿಕ್ಷಕರ ಅನುಪಾತವು 1:50 ಹಾಗೂ ಅದಕ್ಕೂ ಮಿಕ್ಕಿದ್ದಾಗಿದೆ. ಇದರ ಜೊತೆ ಸರಿಯಾದ ತರಬೇತಿ ಇಲ್ಲದ ಹಲವಾರು ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದನ್ನು ರಹಿತ ಶಾಲೆಗಳಲ್ಲಿ ಕಾಣುತ್ತಲಿದ್ದೇವೆ.

ದೇಶದ ಪ್ರತಿಯೊಂದು ಶಾಲೆಯ ಗುಣಮಟ್ಟದ ಕುರಿತು ಯೋಚಿಸುವಾಗ ಶಾಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ಗುಣಮಟ್ಟದ ಶಿಕ್ಷಕರಿರಬೇಕು ಎಂದು ಹೇಳುತ್ತೇವೆ. ಗುಣಮಟ್ಟದ ಶಿಕ್ಷಕರ ಒತ್ತಟ್ಟಿಗಿರಲಿ, ಕೆಲವು ಶಾಲೆಗಳಲ್ಲಿ ಭಾಷಾ ಬೋಧನೆ ಇಲ್ಲವೇ ವಿಷಯವಾರು ಶಿಕ್ಷಕರ ಕೊರತೆ ಇರುವುದು ಕಂಡುಬರುತ್ತಿದೆ. ನಿವೃತ್ತಿ ಹೊಂದಿದ ಶಿಕ್ಷಕರು ತೆರವು ಮಾಡಿದ ಆ ಜಾಗದಲ್ಲಿ ತತ್ ಕ್ಷಣದಲ್ಲಿ ಹೊಸ ಶಿಕ್ಷಕರನ್ನು ನೇಮಕ ಮಾಡದೇ ಇರುವ ಸರಕಾರದ ವಿಳಂಬ ನೀತಿಯ ಲೊಪದೋಷವೇ ಇದಕ್ಕೆ ಕಾರಣವಲ್ಲದೆ ನೈಜ ಸ್ಥಿತಿ ಈ ರೀತಿಯಿದ್ದಾಗ ಗುಣಾತ್ಮಕ ಶಿಕ್ಷಣದ ಕುರಿತು ಮಾತನಾಡುವುದು, ಯೋಚಿಸುವುದು ವ್ಯರ್ಥವಾಗುತ್ತದೆ. ‘ನಾವಿಕನಿಲ್ಲದ ದೋಣಿ ’ ಹಾಗಾಗಿದೆ ಶಿಕ್ಷಕರಿಲ್ಲದ ಇಂದಿನ ಶಾಲೆಗಳ ಪರಿಸ್ಥಿತಿ.

ಇತ್ತೀಚೆಗ ದೇಶದ ಶಿಕ್ಷಣದ ಕುರಿತು ಲೋಕ ಸಭೆಯಲ್ಲಿ ವಿಚಾರವೆದ್ದಾಗ, ದೇಶದ ಸರಕಾರಿ ಶಾಲೆಗಳಲ್ಲಿ ಹತ್ತುಲಕ್ಷಕ್ಕೂ ಅಧಿಕ ಶಿಕ್ಷಕರ ಕೊರತೆ ಕಂಡು ಬಂದಿದೆ. ಇದರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೂ ಒಳಗೊಂಡಿವೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದು ಬಂದಿದೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮುಂತಾದ ದೇಶದಲ್ಲೇ ಅತಿ ಹೆಚ್ಚು ಶಿಕ್ಷಕರ ಕೊರತೆಯನ್ನು ಹೊಂದಿವೆ. ಪ್ರಸ್ತುತ ಇಂತಹ ಪರಿಸ್ಥಿತಿಯಲ್ಲಿ ಆ ರಾಜ್ಯಗಳಲ್ಲಿನ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿ ಮೊಟಕುಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಇದರ ನೇರ ಪರಿಣಾಮವೇ ಇಂದು ಸಮಾಜದಲ್ಲಿ ಸರಿಯಾದ ಪ್ರಾಥಮಿಕ, ಮೂಲಭೂತ ಶಿಕ್ಷಣ ದೊರಕದೇ ಮಕ್ಕಳು ಹಾದಿ ತಪ್ಪಿ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ, ಭಯೋತ್ಪಾದನೆ ಮುಂತಾದ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಲೋಕ ಕಂಟಕರಾಗುತ್ತಿರುವುದು.

ಇಷ್ಟೆಲ್ಲಾ ಲೋಪ ದೋಷಗಳಿದ್ದರೂ ಸರಕಾರಗಳು, ಸರಕಾರಿ ಅಗತ್ಯವಾದ ಸಂಪನ್ಮೂಲ, ಮೂಲ ಸೌಕರ್ಯಗಳು ಹಾಗೂ ಇನ್ನಿತರೆ ಗುಣಮಟ್ಟದ ಉಪಕ್ರಮಗಳನ್ನು ಪೂರೈಸಲು ಒದಗಿಸುತ್ತಿರುವ ಅನುದಾನವು ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ’ ಕೊಟ್ಟಂತಾಗಿದೆ. ಸರ್ವಶಿಕ್ಷಣ ಅಭಿಯಾನದ ಬಹುಪಾಲು ಹಣ ಶಿಕ್ಷಕರ ವೇತನಕ್ಕೆ ಹೋಗುತ್ತಿದೆ. ಶಾಲೆಗಳ ಸಬಲೀಕರಣ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಅಗತ್ಯವಾದ ಅಂಶಗಳ ಪೂರೈಕೆಗೆ ಉಳಿದ ಅನುದಾನ ಸಲ್ಲುತ್ತಿಲ್ಲ. ಈ ಅಂಶಗಳನ್ನು ಗಮನಿಸಿದಲ್ಲಿ ಸರಕಾರಿ ಶಾಲೆಗಳನ್ನು ಬಲಿಷ್ಠಗೊಳಿಸಿ, ಭವಿಷ್ಯದ ಪೀಳಿಗೆಗೆ ಉಳಿಸಲು ಕಣ್ಗಾವಲಿನಂತೆ ಇರಬೇಕಾದ ಆರ್‌ಟಿಇ ಕಾಯಿದೆಯ ಅನುಷ್ಠಾನದಲ್ಲಿ ಕೆಲವು ವರ್ಷಗಳಿಂದ ಯಾವ ಸತ್ವಯುತ ಪ್ರಗತಿಯೂ ಕಾಣುತ್ತಿಲ್ಲವೆಂದೇ ಹೇಳಬೇಕು.

Tags

Related Articles

Leave a Reply

Your email address will not be published. Required fields are marked *

Language
Close