About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

“ಪೌರತ್ವ ಮಸೂದೆಯಿಂದ ಅಸ್ಸಾಂಗೆ ಯಾವುದೇ ಧಕ್ಕೆಯಿಲ್ಲ”: ಪ್ರಧಾನಿ

ಪೌರತ್ವ ಕಾಯಿದೆಯಿಂದ ಅಸ್ಸಾಂ ಅಥವಾ ಈಶಾನ್ಯದ ಯಾವುದೇ ಹಿತಾಸಕ್ತಿಗಳಿಗೆ ಧಕ್ಕೆಯುಂಟಾಗದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಾತ್ರಿ ನೀಡಿದ್ದಾರೆ.

ಅಸ್ಸಾಂನಲ್ಲಿ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, “ರಾಜ್ಯ ಸರಕಾರಗಳ ಪಕ್ಕಾ ತನಿಕೆ ಹಾಗು ಶಿಫಾರಸಿನ ಹೊರತಾಗಿ ಪೌರತ್ವ ಕಾಯಿದೆಯನ್ನು ಜಾರಿಗೊಳಿಸುವುದಿಲ್ಲ, ಇದು ಈಶಾನ್ಯ ಪ್ರದೇಶದ ಜನತೆಗೆ ರಾಷ್ಟ್ರದ ಬದ್ಧತೆ” ಎಂದು ತಿಳಿಸಿದ್ದಾರೆ.

“ದೇಶಕ್ಕೆ ಬಲವಂತವಾಗಿ ಬಂದವರು ಹಾಗು ಧರ್ಮದ ಕಾರಣಕ್ಕಾಗಿ ತಮ್ಮ ಮನೆಮಠಗಳನ್ನು ಕಳೆದುಕೊಂಡು, ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಆಶ್ರಯ ಕೋರಿ ಬಂದವರ ನಡುವೆ ವ್ಯತ್ಯಾಸ ಇದೆ. ಇಬ್ಬರೂ ಸಮಾನರಲ್ಲ” ಎಂದು ಮೋದಿ ತಿಳಿಸಿದ್ದಾರೆ.

“ತಮ್ಮ ಮೇಲಾದ ರಕ್ತಪಾತದ ಕಾರಣ ಎಲ್ಲವನ್ನೂ ಬಿಟ್ಟು ಬಂದ ನೆರೆಹೊರೆ ದೇಶಗಳ ಅಲ್ಪಸಂಖ್ಯಾರಿಗೆ ಆಶ್ರಯ ಒದಗಿಸಲು ನಾವು ಬದ್ಧರಾಗಿದ್ದೇವೆ. ಅವರು ನಮ್ಮ ದೇಶಕ್ಕೆ ಬಂದಿದ್ದು, ತಾಯಿ ಭಾರತಾಂಬೆಯ ಮಮತೆಗೆ ಪಾತ್ರರಾಗಿದ್ದಾರೆ” ಎಂದು ಮೋದಿ ತಿಳಿಸಿದ್ದಾರೆ.

ಶಾಸನದ ಕುರಿತಂತೆ ಹಬ್ಬುತ್ತಿರುವ ಪೊಳ್ಳು ಸುದ್ದಿಗಳ ಕುರಿತು ವಾಗ್ದಾಳಿ ನಡೆಸಿದ ಪ್ರಧಾನಿ, ದೇಶವನ್ನು ದಶಕಗಳ ಕಾಲ ಹಾಳು ಮಾಡಿದವರು ಈಗ ತಮ್ಮ ಸ್ವಾರ್ಥಕ್ಕಾಗಿ ಉದ್ದೇಶಿತ ಮಸೂದೆ ಕುರಿತಂತೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ. ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಬಿಜೆಪಿ ಸರಕಾರ ಬದ್ಧವಾಗಿದೆ ಎಂದ ಮೋದಿ, ಈಶಾನ್ಯ ಪ್ರದೇಶದ ಭಾಷೆ, ಸಂಸ್ಕೃತಿ, ಸಂಪನ್ಮೂಲಗಳು, ಜನತೆಯ ಆಶೋತ್ತರಗಳನ್ನು ಕಾಪಾಡಲು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬದ್ಧವಾಗಿದೆ ಎಂದಿದ್ದಾರೆ.

ಅಸ್ಸಾಂಅನ್ನು ದೇಶದ ತೈಲ ಹಾಗು ಅನಿಲ ಪೂರೈಕೆಯ ಕೇಂದ್ರಬಿಂದುವನ್ನಾಗಿ ಮಾಡಲು ಬದ್ಧವಿರುವುದಾಗಿ ಹೇಳಿದ ಪ್ರಧಾನಿ, ಕಳೆದ ನಾಲ್ಕು ವರ್ಷಗಳಲ್ಲಿ 14,000 ಕೊಟಿ ರು ವೆಚ್ಚದಲ್ಲಿ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದಿದ್ದಾರೆ.

ಬಾಂಗ್ಲಾದೇಶ, ಪಾಕಿಸ್ತಾನ ಹಾಗು ಅಫ್ಘಾನಿಸ್ತಾನಗಳ ಹಿಂದೂಗಳು, ಜೈನರು, ಸಿಖ್ಖರು, ಬೌದ್ಧರು, ಕ್ರೈಸ್ತರು ಹಾಗು ಪಾರ್ಸಿಗಳಿಗೆ ಭಾರತದಲ್ಲಿ, ಈ ಹಿಂದೆ ಇದ್ದ 12 ವರ್ಷಗಳ ಬದಲಿಗೆ ಏಳು ವರ್ಷಗಳ ವಾಸದ ಬಳಿಕ, ಯಾವುದೇ ಅಧಿಕೃತ ದಾಖಲೆಗಳು ಇಲ್ಲದಿದ್ದರೂ ಭಾರತೀಯ ಪೌರತ್ವ ನೀಡಲಾಗುವುದು ಎಂದಿದ್ದಾರೆ.

ಮಸೂದೆಗೆ ಚಳಿಗಾಲದ ಅಧಿವೇಶನದಲ್ಲಿ, ಜನವರಿ 8ರಂದು ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ರಾಜ್ಯಸಭೆ ಅಂಕಿತಕ್ಕೆ ಕಾಯುತ್ತಿದೆ. ಮಸೂದೆಗೆ ಅಸ್ಸಾಂ ಹಾಗು ಈಶಾನ್ಯ ರಾಜ್ಯಗಳಲ್ಲಿ ಪ್ರಬಲವಾದ ವಿರೋಧ ವ್ಯಕ್ತವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close