About Us Advertise with us Be a Reporter E-Paper

ಅಂಕಣಗಳು

ಸಿಎಂ ಕುಮಾರಸ್ವಾಮಿಗೆ ಶಾಂತಿ, ಸಹನೆ ಬೇಕು

ನಾಡಾಳೋ ನಾಯಕನಿಗೆ ಬುದ್ಧಿ, ಯುಕ್ತಿ, ಶಕ್ತಿ ಜತೆಗೆ ತಾಳ್ಮೆಯೂ ಇರಬೇಕು. ತನ್ನೊಳಗೇ ಶಾಂತಿ, ಸಹನೆ ತಂದುಕೊಳ್ಳದ ನಾಯಕ ತಾನಾಳೋ ನಾಡಿಗೆ ಅದನ್ನು ಕೊಡಲಾರ. ತಾಳುವಿಕೆಗಿಂತ ತಪವು ಬೇರಿಲ್ಲ ಎಂದು  ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತುರ್ತಾಗಿ ಇದಕ್ಕೆ ಕಿವಿಗೊಡಬೇಕಿದೆ. ಉತ್ತರ ಕರ್ನಾಟಕ ಪ್ರತ್ಯೇಕ ಕೂಗಿಗೆ ಮಾಧ್ಯಮಗಳೇ ಹೊಣೆ, ಆ ಕುರಿತು ತಾವು ಹೇಳಿದ ಮಾತನ್ನು ಮಾಧ್ಯಮಗಳು ತಿರುಚಿ ವರದಿ ಮಾಡಿವೆ. ಹೀಗಾಗಿಯೇ ವಿವಾದ ಸೃಷ್ಟಿಯಾಗಿದೆ. ಮಾಧ್ಯಮದವರು ತಮ್ಮ ಆತ್ಮಸಾಕ್ಷಿ ಕೇಳಿಕೊಂಡು ವರ್ತಿಸಲಿ ಎಂದು ಸಿಎಂ ಹರಿಹಾಯ್ದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುಮಾರಸ್ವಾಮಿ ಅವರಿಗೆ ಇದ್ದಂತೆಯೇ ಮಾಧ್ಯಮಗಳಿಗೂ ಇವೆ. ಅಕಸ್ಮಾತ್ ಎಲ್ಲಾದರೂ ಹೆಚ್ಚು-ಕಮ್ಮಿಯಾಗಿದ್ದರೆ ಆ ನಿರ್ದಿಷ್ಟ ಪತ್ರಿಕೆಗೋ, ದೃಶ್ಯ ಮಾಧ್ಯಮಕ್ಕೋ ಸ್ಪಷ್ಟನೆ  ಅವಕಾಶವಂತೂ ಇವರಿಗೆ ಇದ್ದೇ ಇದೆ. ಮುಖ್ಯಮಂತ್ರಿಗಳ ಸ್ಪಷ್ಟನೆಯನ್ನು ಯಾರೂ ತಳ್ಳಿಹಾಕುವುದಿಲ್ಲ. ಆದರೆ ಇಡೀ ಮಾಧ್ಯಮ ಸಮುದಾಯದ ಮೇಲೆ ಗೂಬೆ ಕೂರಿಸಿರುವುದು, ಆತ್ಮಸಾಕ್ಷಿ ಕೇಳಿಕೊಳ್ಳಿ ಎಂದು ಗುಡುಗಿರುವುದು ಸರಿಯಲ್ಲ. ರಾಜ್ಯವನ್ನು ಇಬ್ಭಾಗ ಮಾಡಿ ಮಾಧ್ಯಮಗಳಿಗೆ ಆಗಬೇಕಾದ್ದು ಏನೂ ಇಲ್ಲ. ಕೊಪ್ಪಳದಲ್ಲಿ ಸಾಲ ಮನ್ನಾ ಕುರಿತು ಮಾತಾಡುವಾಗ ವೋಟ್‌ಬ್ಯಾಂಕ್ ರಾಜಕೀಯದ ಬಗ್ಗೆ ಅವರು ಉದುರಿಸಿದ ಆಣಿಮುತ್ತುಗಳನ್ನು ಮಾಧ್ಯಮಗಳು ಯಥಾವತ್ ವರದಿ ಮಾಡಿವೆ. ಕುಮಾರಸ್ವಾಮಿ ಮಾತು, ಬಜೆಟ್ ಸ್ವರೂಪ ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು  ರಾಜ್ಯದ ಕೂಗೆಬ್ಬಿಸಿದ್ದಾರೆ. ಇಷ್ಟಕ್ಕೂ ಕುಮಾರಸ್ವಾಮಿ ಆ ಮಾತುಗಳನ್ನು ಆಡದಿದ್ದರೆ ವಿವಾದವೇ ಸೃಷ್ಟಿ ಆಗುತ್ತಿರಲಿಲ್ಲ. ಅವರು ಮಾತಾಡಿ, ವರದಿ ಮಾಡಿದ ಮಾಧ್ಯಮಗಳನ್ನು ನಿಂದಿಸಿದರೆ ಯಾವ ನ್ಯಾಯ? ಯಾರಾದರೂ ಟಾರ್ಗೆಟ್ ಮಾಡಿದ್ದರೆ ನಿರ್ದಿಷ್ಟ ಹೆಸರಿಟ್ಟುಕೊಂಡು ಪ್ರಶ್ನೆ ಮಾಡಲಿ, ಸ್ಪಷ್ಟನೆ ನೀಡಲಿ. ಅದು ಅವರ ಹಕ್ಕು. ಮಾತಾಡಿ ಯೋಚಿಸುವುದಕ್ಕಿಂತ ಯೋಚಿಸಿ ಮಾತಾಡುವುದು ಇನ್ನೂ ಒಳಿತು. ಆಗ ಅನಗತ್ಯ ಗೊಂದಲಗಳನ್ನು ತಡೆಯಬಹುದು.

Tags

Related Articles

Leave a Reply

Your email address will not be published. Required fields are marked *

Language
Close