ಇದು ಯಾರ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ, ದಿಕ್ಸೂಚಿಯಂತೂ ಅಲ್ಲವೇ ಅಲ್ಲ : ಸಿದ್ದರಾಮಯ್ಯ

Posted In : ಸಂಗಮ, ಸಂಪುಟ

ಮುಂಜಾವು ಹರಿಯುವುದಕ್ಕೆ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರನ್ನು ಚುನಾವಣಾ ಬಿಸಿ ಆವರಿಸಿಕೊಳ್ಳುತ್ತಿತ್ತು. ಹಿಂದಿನ ದಿನ ರಾತ್ರಿ ನಂಜನಗೂಡು ವಿಧಾನಸಭಾ ಕ್ಷೇತ್ರದ 16ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಿ ರಾತ್ರಿ ಮೈಸೂರು ತಲುಪುವಾಗ ಗಡಿಯಾರದ ಮುಳ್ಳು 12 ಸೂಚಿಸುತ್ತಿತ್ತು. ಆದರೂ ಒಳಗೊಳಗೆ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಈ ಚುನಾವಣೆ ಸಿದ್ದರಾಮಯ್ಯನವರ ಗಜಪತಕ್ಕೆ ಜಿಂಕೆಯ ವೇಗ ನೀಡಿತ್ತು. ಮೈಸೂರಿನಲ್ಲಿದ್ದರೂ ಮನಸೆಲ್ಲ ನಂಜನಗೂಡು, ಗುಂಡ್ಲುಪೇಟೆ.

ಹೀಗಾಗಿ ಬೆಳಗ್ಗೆ ಇನ್ನಿಲ್ಲದ ಹುರುಪಿನಿಂದ ಪ್ರಾತರ್ವಿಧಿ ಪೂರೈಸಿದ ಅವರು ಬೆಂಬಲಿಗರ ಜತೆ ಸೀದಾ ಚುನಾವಣಾ ಕಣಕ್ಕೆ ಧುಮುಕಿದ್ದರು. ಸೋಮವಾರ ಸಿದ್ದರಾಮಯ್ಯ ಪ್ರಚಾರಕ್ಕೆ ಆರಿಸಿಕೊಂಡಿದ್ದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬೇಗೂರು ಹೋಬಳಿ. ಸಚಿವ ಎಂ.ಬಿ.ಪಾಟೀಲ್ ಜತೆ ತೆರೆದ ವಾಹನದಲ್ಲಿ ದಿನವಿಡಿ ಪ್ರಚಾರ ನಡೆಸಿದ ಅವರನ್ನು ‘ವಿಶ್ವವಾಣಿ’ಹಿಂಬಾಲಿಸಿತು. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ಮಹೇಶ್ ಎಂಬುವರ ಮನೆಯಲ್ಲಿ ಭೋಜನಕ್ಕೆ ನಿಂತ ಸಿದ್ದರಾಮಯ್ಯ ‘ವಿಶ್ವವಾಣಿ’ಗೆ ಚುಟುಕು ಸಂದರ್ಶನ ನೀಡಿದರು. ಮಾತ್ರವಲ್ಲ ಗೆಲುವಿನ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಈ ಚುನಾವಣೆ ಕಾಂಗ್ರೆಸ್ ಸರಕಾರ ನಡೆಸಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ನಡೆಯುತ್ತಿದೆಯೇ ಹೊರತು, ಯಾರ ಪ್ರತಿಷ್ಠೆ ಹಾಗೂ ಸ್ವಾಭಿಮಾನದ ಪ್ರತೀಕವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ತ್ಯಜಿಸಿದ ಇಬ್ಬರು ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ ಹಾಗೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಪರೋಕ್ಷ ತಿರುಗೇಟು ನೀಡಿದರು.

ಸಂದರ್ಶನದ ಪೂರ್ಣಪಾಠ ಹೀಗಿದೆ…
*ಹಾಗೆ ನೋಡಿದರೆ ನಂಜನಗೂಡು ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ಎದುರಿಸುವ ಅಗತ್ಯವೇ ಇರಲಿಲ್ಲ. ರಾಜ್ಯ ಭೀಕರ ಬರ ಎದುರಿಸುವ ಸಂದರ್ಭದಲ್ಲಿ ಅವರು (ಶ್ರೀನಿವಾಸ್ ಪ್ರಸಾದ್ ) ತಮ್ಮ ಸ್ವಯಂ ಪ್ರತಿಷ್ಠೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಮತ್ತೆ ಚುನಾವಣೆ ಎದುರಾಗಿದೆ. ಗುಂಡ್ಲುಪೇಟೆಯಲ್ಲಿ ಚುನಾವಣೆ ಎದುರಾಗುತ್ತದೆ ಎಂದು ನಾವ್ಯಾರು ಎಣಿಸಿ ರಲಿಲ್ಲ. ಪಾಪಾ ಮಹದೇವ್ ಪ್ರಸಾದ್ ಅವರ ಅಕಾಲಿಕ ಅಗಲಿಕೆಯಿಂದ ಉಪಚುನಾವಣೆ ನಡೆಸಬೇಕಾಗುತ್ತಿದೆ. ನನ್ನ ಪ್ರಕಾರ ಇದೊಂದು ಸಹಜ ಪ್ರಕ್ರಿಯೆ. ಆದರೆ ಕೆಲವರು ಇದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಹೋದಲ್ಲಿ ಬಂದಲ್ಲಿ ಇದು ನನ್ನ ಸ್ವಾಭಿಮಾನದ ಪ್ರಶ್ನೆ, ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಚುನಾವಣೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ನಾನು ಅತ್ಯಂತ ಸ್ಪಷ್ಟವಾಗಿ ಹೇಳುತ್ತೇನೆ. ಇದು ಯಾರ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ. ವೈಯಕ್ತಿಕ ನೆಲೆಯ ಹೋರಾಟವೂ ಅಲ್ಲ. ಒಂದು ಸಹಜ, ಸಾಮಾನ್ಯ ಚುನಾವಣೆ. ಜನತೆಗೆ ನಮ್ಮ ಪಕ್ಷದ ಮೇಲೆ ಹಾಗೂ ಸರಕಾರದ ಸಾಧನೆಯ ಬಗ್ಗೆ ಸ್ಪಷ್ಟ ನಂಬಿಕೆ ಇರುವುದರಿಂದ ನಾವು ಗೆದ್ದೇ ಗೆಲ್ಲುತ್ತೇವೆ ಇದರಲ್ಲಿ ಯಾವುದೇ ಅನುಮಾನ ಬೇಡ.

*ಎರಡು ಕ್ಷೇತ್ರದಲ್ಲಿ ಪ್ರಚಾರಕ್ಕಿಂತ ಅಪಪ್ರಚಾರವೇ ಜಾಸ್ತಿಯಾಗುತ್ತಿದೆ ಎಂದು ಹಲವಾರು ಮಾಧ್ಯಮದವರು ನನ್ನ ಬಳಿ ಪ್ರಶ್ನೆ ಮಾಡಿದ್ದಾರೆ. ಈಗ ನೀವು ಕೇಳುತ್ತಿದ್ದೀರಿ. ಆದರೆ ನಾನು ಎಲ್ಲಾದರೂ ಒಂದು ಕಡೆ ವೈಯಕ್ತಿಕ ನೆಲೆಯಲ್ಲಿ ಯಾರನ್ನಾದರೂ ಟೀಕಿಸಿದ್ದೇನಾ ? ಇದುವರೆಗೆ ನಾನು ಎರಡೂ ಕ್ಷೇತ್ರದಲ್ಲಿ ಸರಕಾರದ ಸಾಧನೆಗಳ ಬಗ್ಗೆ , ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ. ಆದರೆ ಬಿಜೆಪಿಯವರೇ ವೈಯಕ್ತಿಕ ನೆಲೆಯಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.

*ಬಿಜೆಪಿಯವರು ಎಷ್ಟೇ ಅಪಪ್ರಚಾರ ನಡೆಸಿದರೂ ಸಂಯಮ ಮೀರದಂತೆ ನಾನು ನಮ್ಮ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಸೂಚನೆ ನೀಡಿದ್ದೇನೆ. ನಾನಂತೂ ಈ ಚುನಾವಣೆಯನ್ನು ವಿಷಯಾಧಾರಿತವಾಗಿ ನಡೆಸುತ್ತಿದ್ದೇನೆ. ಅಭಿವೃದ್ಧಿ ವಿಚಾರವೇ ಚುನಾವಣೆಯ ಸರಕಾಗಬೇಕೆ ವಿನಾ ವ್ಯಕ್ತಿ ನಿಂದನೆ ಹಾಗೂ ಜಾತಿವಾದವಲ್ಲ.

*ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಬೇಕೆಂದರೆ ಇದು ಕೋಮುವಾದಿ ಬಿಜೆಪಿ ಹಾಗೂ ಜಾತ್ಯತೀತ ನಿಲುವಿನ ಸಕಲರನ್ನು ಒಳಗೊಳ್ಳುವ ಕಾಂಗ್ರೆಸ್ ನಡುವಿನ ಚುನಾವಣೆ. ವ್ಯಕ್ತಿ- ವ್ಯಕ್ತಿಗಳ ಮಧ್ಯದ ಸೆಣಸಾಟ ಇದಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂಬ ಸಂಪೂರ್ಣ ಆತ್ಮವಿಶ್ವಾಸವಿದೆ. ನಾನು ಹೋದ ಕಡೆಯಲೆಲ್ಲ ಜನ ನನಗೆ ನೀಡುತ್ತಿರುವ ಬೆಂಬಲವನ್ನು ಗಮನಿಸಿದಾಗ ಈ ವಿಚಾರ ಸ್ಪಷ್ಟವಾಗುತ್ತಿದೆ.

*ಕಳೆದ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದ ಜನ ಶ್ರೀನಿವಾಸ್ ಪ್ರಸಾದ್ ಅವರನ್ನು ಆರಿಸಿ ಕಳುಹಿಸಿದ್ದರು. ಆದರೆ ಅವರೀಗ ಬಿಜೆಪಿ ಸೇರಿರುವುದರಿಂದ ನಾವು ಅತ್ಯಂತ ಪ್ರಾಮಾಣಿಕ ಹಾಗೂ ಅರ್ಹ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನು ಕಣಕ್ಕೆ ಇಳಿಸಿದ್ದೇವೆ. ಅವರೊಬ್ಬ ಸಜ್ಜನ ವ್ಯಕ್ತಿ. ಯೋಗ್ಯ ಅಭ್ಯರ್ಥಿ. ನಾವು ಯಾವುದೇ ಭಾವನಾತ್ಮಕ ವಿಚಾರವನ್ನು ಜನರ ಮುಂದಿಟ್ಟು ಅವರನ್ನು ಪ್ರಚೋದಿಸುತ್ತಿಲ್ಲ. ನಾವು ಮಾಡಿದ ಅಭಿವೃದ್ಧಿ ಕೆಲಸಗಳೇ ನಮ್ಮ ಗೆಲುವಿನ ಶ್ರೀರಕ್ಷೆ.

*ಇನ್ನು ಮಹಾದೇವ ಪ್ರಸಾದ್ ಅವರ ಬಗ್ಗೆ ಹೇಳಬೇಕಿಲ್ಲ. ಅವರು ಸಚಿವರಾಗಿ ನಾಲ್ಕು ವರ್ಷದಲ್ಲಿ ಅಸಾಧಾರಣ ಕೆಲಸ ಮಾಡಿದ್ದಾರೆ. ಅವರ ಅಕಾಲಿಕ ನಿಧನದಿಂದ ಅವರ ಧರ್ಮ ಪತ್ನಿ ಗೀತಾ ಮಹಾದೇವ ಪ್ರಸಾದ್ ಅವರನ್ನು ನಾವು ಕಣಕ್ಕೆ ಇಳಿಸಿದ್ದೇವೆ. ಮಹಾದೇವಪ್ರಸಾದ್ ಮಾಡಿದ ಕೆಲಸ ಹಾಗೂ ಅನುಕಂಪ ನಮ್ಮ ಪಕ್ಷಕ್ಕೆ ಗೆಲುವು ತಂದುಕೊಡುತ್ತದೆ. ಇಲ್ಲಿಯೂ ನಾವಾಗಲಿ, ನಮ್ಮ ಪಕ್ಷದವರಾಗಲಿ ಎಲ್ಲಿಯೂ ವೈಯಕ್ತಿಕ ಟೀಕೆ ನಡೆಸಿಲ್ಲ.

*ಅದ್ಯಾಕೆ ಈ ಉಪಚುನಾವಣೆಯನ್ನು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ವ್ಯಾಖ್ಯಾನಿಸಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಇದು ಸ್ಥಳೀಯ ಮಟ್ಟದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ನಡೆಸುತ್ತಿರುವ ಚುನಾವಣೆ ಯಾವುದೇ  ಉಪಚುನಾವಣೆಯನ್ನೂ ಭವಿಷ್ಯದ ಮುನ್ನುಡಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳೇ ಈ ಚುನಾವಣೆಯನ್ನು ನಿರ್ಧರಿಸುತ್ತದೆ.

ರಾಘವೇಂದ್ರ ಭಟ್

One thought on “ಇದು ಯಾರ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ, ದಿಕ್ಸೂಚಿಯಂತೂ ಅಲ್ಲವೇ ಅಲ್ಲ : ಸಿದ್ದರಾಮಯ್ಯ

  1. MANYARE congress davarella BJP seruttiruvaga sittu bandiddaru abhivyaktri padisiralikkilla. adare EE chunavaneyinda matadararu saha YAKAPPA EE HORE ANDADDU SULLALLA! GOTTAGIRABEKU PRASAARIGE ATHAVA BJP SERIDAVARIGE ADARE KALANA GARBHADALLI YAVADU ADAGIRUTTADE ADU YARIGU GOTTAGUVADE ILLA!!! ALLAVE?

Leave a Reply

Your email address will not be published. Required fields are marked *

20 + 9 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top