ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಡ್ಡಮತ ಸಾಧ್ಯತೆ?

Posted In : Others

-ರಾಘವೇಂದ್ರ ಭಟ್

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಆಡಳಿತ ಪಕ್ಷ ಮೂರನೇ ಅಭ್ಯರ್ಥಿ ಕಣಕ್ಕಿಳಿಸುತ್ತಿರುವುದು ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ‘ಅಡ್ಡಮತದಾನ’ಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ ಸಂದರ್ಭದಲ್ಲಿ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಾಗ ಅನುಭವಿಸಿದ ಕಹಿ ಮತ್ತೆ ಕಾಂಗ್ರೆಸ್‌ಗೆ ಎದುರಾಗುವ ಸಾಧ್ಯತೆ ಇದ್ದು, ಕೊರತೆ ಬೀಳುವ ಮತಗಳು ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಕೆಲ ಸದಸ್ಯರಿಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಉದ್ಯಮಿ ಫಾರೂಕ್ ಅವರನ್ನು ಕಣಕ್ಕೆ ಇಳಿಸುವುದು ಈಗಾಗಲೇ ತೀರ್ಮಾನಗೊಂಡಿದೆ. ಅದೇ ರೀತಿ ಕಾಂಗ್ರೆಸ್ ನಿಂದ ಮೂರನೇ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಸ್ಪರ್ಧೆಗೆ ಮುಂದಾಗಿದ್ದಾರೆ.

ಪಕ್ಷೇತರ ಸದಸ್ಯರು ಹಾಗೂ ಜೆಡಿಎಸ್‌ನ ಐವರು ಅತೃಪ್ತರನ್ನು ನಂಬಿಕೊಂಡು ಸಿಎಂ ಸಿದ್ದರಾಮಯ್ಯ ಮೂರನೇ ಅಭ್ಯರ್ಥಿಯನ್ನು ಅಂಕಣಕ್ಕೆ ಇಳಿಸುವ ಧೈರ್ಯ ತೋರಿದ್ದಾರೆ. ಇದೇ ಮಾದರಿಯ ತಂತ್ರ ಜೆಡಿಎಸ್‌ನಲ್ಲೂ ನಡೆದಿದೆ. ಆ ಪಕ್ಷದ ವರಿಷ್ಠರೂ ಪಕ್ಷೇತರರು ಹಾಗೂ ಕಾಂಗ್ರೆಸ್‌ನ ಐವತ್ತಕ್ಕೂ ಅತೃಪ್ತರಲ್ಲಿ ಕೆಲವರ ಮೇಲೆ ಕಣ್ಣಿಟ್ಟು ತೊಡೆ ತಟ್ಟಿದ್ದಾರೆ. ಹೀಗಾಗಿ ವೆಂಕಯ್ಯ ನಾಯ್ಡು, ಆಯನೂರು ಮಂಜುನಾಥ್, ಆಸ್ಕರ್ ಫರ್ನಾಂಡಿಸ್, ವಿಜಯ್ ಮಲ್ಯ ಅವರ ಅವಧಿ ಮುಕ್ತಾಯ ಗೊಳ್ಳುವ ಹಿನ್ನೆಲೆಯಲ್ಲಿ ಎದುರಾಗಿರುವ ರಾಜ್ಯಸಭೆ ಚುನಾವಣೆ ಕರ್ನಾಟಕವನ್ನು ಮತ್ತೆ ರಾಷ್ಟ್ರೀಯ ಚರ್ಚೆಗೆ ತಂದು ನಿಲ್ಲಿಸುವ ಎಲ್ಲ ಸಾಧ್ಯತೆ ದಟ್ಟವಾಗಿದೆ.

ಯಾರು ಸೇಫ್?: ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಮಾತ್ರ ಬಿಜೆಪಿ ಕಣಕ್ಕೆ ಇಳಿಸಿದೆ. ಏಕೆಂದರೆ ಕಮಲ ಪಾಳಯದ ತೆಕ್ಕೆಯಲ್ಲಿ ಒಬ್ಬರ ಆಯ್ಕೆಗೆ ಅಗತ್ಯವಾದ ಮತಗಳು ಮಾತ್ರ ಇವೆ. ಒಬ್ಬ ಅಭ್ಯರ್ಥಿ ಗೆಲವಿಗೆ 45 ಮತಗಳ ಅಗತ್ಯವಿದ್ದರೂ, ‘ಆಕಸ್ಮಿಕ ಅವಘಡ’ಕ್ಕೆ ಅವಕಾಶ ನೀಡಬಾರದೆಂದು ಹೆಚ್ಚುವರಿ ಮತಗಳನ್ನು ಇಟ್ಟುಕೊಳ್ಳದೇ, ಎಲ್ಲವನ್ನೂ ವೆಂಕಯ್ಯ ನಾಯ್ಡು ಹೆಸರಿಗೆ ನೋಂದಾಯಿಸಲು ನಿರ್ಧರಿಸಿದೆ.

ಕೈ-ತೆನೆ ಜಟಾಪಟಿ: ಅಡ್ಡಮತದಾನದ ‘ಉದ್ದ’ ಆಟ ನಡೆಯುವ ಅವಕಾಶ ಇರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ. ಮಂಗಳೂರು ಮೂಲದ ಉದ್ಯಮಿ ಫಾರುಕ್ ಅವರನ್ನು ಕಣಕ್ಕೆ ಇಳಿಸಲು ಜೆಡಿಎಸ್ ನಿರ್ಧರಿಸಿದ್ದರೂ ಅವರ ಬಳಿ ಒಂದು ಸ್ಥಾನದ ಗೆಲುವಿಗೆ ಬೇಕಾದ ಮತಗಳಿಲ್ಲ. ವಿಧಾನಸಭೆಯಲ್ಲಿ ಜೆಡಿಎಸ್‌ನ ಸಂಖ್ಯಾಬಲ 40. ಗೆಲುವಿಗೆ ಇನ್ನೂ 5 ಸದಸ್ಯರ ಕೊರತೆಯುಂಟಾಗಲಿದೆ. ಇದನ್ನು ಮೊದಲೇ ಲೆಕ್ಕಾಚಾರ ಹಾಕಿರುವ ಜೆಡಿಎಸ್ ವರಿಷ್ಠರು 11 ಪಕ್ಷೇತರ ಸದಸ್ಯರ ಪೈಕಿ 6 ಜನರ ತಲೆಯ ಮೇಲೆ ‘ಧಾನ್ಯ’ದ ಹೊರೆ ಇಟ್ಟಿದ್ದಾರೆ.

ಆದರೆ ಅಷ್ಟೇ ಸಂಖ್ಯೆಯ ಜೆಡಿಎಸ್ ಅತೃಪ್ತರು ಸಿಎಂ ಸಿದ್ದರಾಮಯ್ಯ ಅವರ ಜತೆ ಕೈ ಜೋಡಿಸಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ಮಾಗಡಿ ಬಾಲಕೃಷ್ಣ, ಪುಲಕೇಶಿನಗರದ ಅಖಂಡ ಶ್ರೀನಿವಾಸ್, ಗಂಗಾವತಿಯ ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ನಾಗಮಂಗಲದ ಚಲುವರಾಯಸ್ವಾಮಿ ಕಾಂಗ್ರೆಸ್ನ ಮೂರನೇ ಅಭ್ಯರ್ಥಿ ಕೆ.ಸಿ.ರಾಮ ಮೂರ್ತಿ ಅವರ ಪರವಾಗಿ ಮತ ಚಲಾಯಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಜಮೀರ್ ಅಹ್ಮದ್ ದೆಹಲಿಯಲ್ಲಿ ಕಾರ್ಯತಂತ್ರ ಆರಂಭಿಸಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ. ಉಳಿದ ನಾಲ್ವರು ಜೆಡಿಎಸ್ ಕೋರ್ ಕಮಿಟಿ ಸಭೆಯಿಂದ ದೂರವುಳಿದು ಅನುಮಾನ ನಿಜವಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಕೈ’ಗೇ ಕಷ್ಟ : ಅತಂಕ ಮತ್ತು ತಿಣುಕಾಟದ ಸ್ಥಿತಿಯಲ್ಲಿ ಇರುವುದು ಕಾಂಗ್ರೆಸ್. ಏಕೆಂದರೆ ಕಾಂಗ್ರೆಸ್ ಬಳಿ ಇರುವುದು 122 ಸದಸ್ಯ ಬಲ. ಅದರಲ್ಲಿ ಮೊದಲ ಅಭ್ಯರ್ಥಿ ಆಸ್ಕರ್ ಫರ್ನಾಂಡಿಸ್ ಹಾಗೂ ಎರಡನೇ ಅಭ್ಯರ್ಥಿ ಜೈರಾಂ ರಮೇಶ್ ಪರವಾಗಿ ತಲಾ 45 ಮತಗಳನ್ನು ಹಂಚಿದಾಗ 32 ಮತಗಳು ಮಾತ್ರ ಉಳಿದುಕೊಳ್ಳುತ್ತವೆ. ಸಾಮಾನ್ಯವಾಗಿ ಇಂಥ ಸನ್ನಿವೇಶ ಎದುರಾದಾಗ ಆಯ್ಕೆಗೆ ಅಗತ್ಯವಾದುದ್ದಕ್ಕಿಂತ ತಲಾ ಒಂದೊಂದು ಮತವನ್ನು ಮೊದಲ ಎರಡು ಅಭ್ಯರ್ಥಿಗಳ ಪರವಾಗಿ ಇಟ್ಟಿರುತ್ತಾರೆ. ಆಗ ಮೂರನೇ ಅಭ್ಯರ್ಥಿ ಆಯ್ಕೆಗೆ ಇನ್ನೂ 15 ಮತಗಳು ಅನಿವಾರ್ಯ.ಆದರೆ 11 ಪಕ್ಷೇತರರು, ಜೆಡಿಎಸ್‌ನ ಐವರು ಬಂಡಾಯಗಾರರನ್ನು ನಂಬಿಕೊಂಡು ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸಲಾಗುತ್ತಿದೆ.

ಅಧಿಕೃತ ಮೂಲಗಳ ಪ್ರಕಾರ ಐದಕ್ಕೂ ಹೆಚ್ಚು ಪಕ್ಷೇತರರು ಈಗಾಗಲೇ ಜೆಡಿಎಸ್‌ಗೆ ‘ಕಮಿಟ್’ ಆಗಿದ್ದಾರೆ. ಉಳಿದ 6 ಪಕ್ಷೇತರರು ಹಾಗೂ ಐವರು ಜೆಡಿಎಸ್ ಬಂಡಾಯಗಾರರನ್ನು ನಂಬಿಕೊಂಡರೂ ಗೆಲುವುದು ಅಸಾಧ್ಯ. ಸಿಎಂ ಸಿದ್ದರಾಮಯ್ಯ ಅವರು ಈ ಐವರಿಂದ ಅಡ್ಡಮತದಾನ ಮಾಡಿಸಿದರೆ, ಸಿದ್ದರಾ ಮಯ್ಯ ಅವರ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್‌ನ 50ಕ್ಕೂ ಹೆಚ್ಚು ಸದಸ್ಯರ ಪೈಕಿ ಕೆಲವರಿಂದ ಅಡ್ಡಮತದಾನ ಮಾಡಿಸುವ ಲೆಕ್ಕಾಚಾರಕ್ಕೆ ಜೆಡಿಎಸ್ ಮುಂದಾಗಿದೆ. ಕಾಂಗ್ರೆಸ್‌ನಿಂದ ಈಗಾಗಲೇ ಉಚ್ಚಾಟನೆಗೊಂಡಿರುವ ಎ.ಎಸ್.ಪಾಟೀಲ್ ನಡಹಳ್ಳಿ ಜೆಡಿಎಸ್ ಜತೆ ಗುರುತಿಸಿಕೊಂಡಿರುವುದು ಮಾತ್ರವಲ್ಲ ಕೆಲವರ ಮತ ಫಾರೂಕ್ ಪರ ವಾಲುವಂತೆಯೂ ಮಾಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ದಕ್ಷಿಣ ಕನ್ನಡದ ಕೆಲ ಶಾಸಕರನ್ನೇ ಕಾಂಗ್ರೆಸ್ ನೆಚ್ಚಿ ಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅಡ್ಡಮತದಾನದ ಕರಿನೆರಳಲ್ಲಿ ಮೂರನೇ ಅಭ್ಯರ್ಥಿ ಗೆಲ್ಲುತ್ತಾರೋ ? ಅಥವಾ ಅದೇ ತಂತ್ರಕ್ಕೆ ಮೊದಲ ಅಥವಾ ಎರಡನೇ ಅಭ್ಯರ್ಥಿ ಪೈಕಿ ಯಾರಾದರೊಬ್ಬರು ಮಣ್ಣು ಮುಕ್ಕುತ್ತಾರೋ ಎಂಬುದೇ ಕುತೂಹಲ.

 

Leave a Reply

Your email address will not be published. Required fields are marked *

seventeen − nine =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top