ವಿಶ್ವವಾಣಿ

1984ರ ಸಿಖ್‌ ವಿರೋಧಿ ದಂಗೆ ಕುರಿತ ರಾಹುಲ್‌ ಹೇಳಿಕೆಗೆ ಕಾಂಗ್ರೆಸ್‌ ಸಮರ್ಥನೆ

ದೆಹಲಿ: 1984ರ ಸಿಖ್‌ ವಿರೋಧಿ ದಂಗೆ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಕಾಂಗ್ರೆಸ್‌ ನಾಯಕ ಪಿ ಚಿದಂಬಮ್, “ಸಿಖ್‌ ವಿರೋಧಿ ದಂಗೆಗಳು ನಡೆದಾಗ ರಾಹುಲ್ ಗಾಂಧಿಗೆ ಕೇವಲ 13-14 ವರ್ಷ ವಯಸ್ಸಾಗಿದ್ದ ಕಾರಣ, ಈ ಕುರಿತಾಗಿ ಅವರನ್ನು ಜವಾಬ್ದಾರರನ್ನಾಗಿ ಮಾಡಲು ಬರದು” ಎಂದಿದ್ದಾರೆ.

“1984ರಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. 1984ರಲ್ಲಿ ಘನಘೋರ ಕೃತ್ಯವೊಂದು ಸಂಭವಿಸಿತ್ತು, ಇದಕ್ಕಾಗಿ ಡಾ ಮನಮೋಹನ್‌ ಸಿಂಗ್‌ ಸಂಸತ್ತಿನಲ್ಲಿ ಕ್ಷಮೆ ಕೋರಿದ್ದಾರೆ. ಇದಕ್ಕಾಗಿ ರಾಹುಲ್‌ ಗಾಂಧಿಯನ್ನು ಜವಾಬ್ದಾರರನ್ನಾಗಿ ಮಾಡಲು ಆಗದು, ಏಕೆಂದರೆ ಆಗ ಅವರಿಗೆ ಕೇವಲ 13-14 ವರ್ಷ ವಯಸ್ಸಾಗಿತ್ತು” ಎಂದು ಚಿದಂಬರಮ್‌ ತಿಳಿಸಿದ್ದಾರೆ.

1984ರ ಸಿಖ್‌ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್‌ ಭಾಗಿಯಾಗಿರಲಿಲ್ಲ ರಾಹುಲ್‌ ಗಾಂಧಿ ಶುಕ್ರವಾರ ತಿಳಿಸಿದ್ದರು. ಬ್ರಿಟನ್‌ ಸಂಸತ್ತಿನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, “ಈ ಕುರಿತು ನನಗೆ ಯಾವುದೇ ಗೊಂದಲವಿಲ್ಲ. ಅದೊಂದು ದುರಂತ, ಬಹಳ ನೋವು ನೀಡಿದ ಅನುಭವ. ಅದರಲ್ಲಿ ಕಾಂಗ್ರೆಸ್‌ ಪಕ್ಷ ಶಾಮೀಲಾಗಿತ್ತು ಎಂದು ನೀವು ಹೇಳುತ್ತೀರಿ. ನಾನು ಇದನ್ನು ಒಪ್ಪುವುದಿಲ್ಲ. ಖಂಡಿತವಾಗಿಯೂ ಅಲ್ಲಿ ಗಲಭೆ ಆಗಿತ್ತು” ಎಂದು ರಾಹುಲ್‌ ತಿಳಿಸಿದ್ದರು.

ಬಳಿಕ ಲಂಡನ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌ನಲ್ಲಿ ಇದೇ ವಿಚಾರವಾಗಿ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, “ಮನಮೋಹನ್‌ ಸಿಂಗ್‌ ಈ ವಿಚಾರವಾಗಿ ನಮ್ಮೆಲ್ಲರ ಪರವಾಗಿ ಮಾತನಾಡಿದ್ದಾರೆ. ನಾನು ಈ ಹಿಂದೆ ಹೇಳಿದ ಹಾಗೆ, ಈ ಕುರಿತು ಹೇಗೆ ಅನಿಸುತ್ತದೆ ಎಂದು ನನಗೆ ಅರ್ಥವಾಗುತ್ತದೆ” ಎಂದು ರಾಹುಲ್‌ ತಿಳಿಸಿದ್ದರು.