About Us Advertise with us Be a Reporter E-Paper

ಅಂಕಣಗಳು

ರಾಮಮಂದಿರ ನಿರ್ಮಾಣ ಬಹುಸಂಖ್ಯಾತ ಹಿಂದೂಗಳ ಕನಸು

- ಕೆ.ಎಂ.ಶಿವಪ್ರಸಾದ್, ಬರಹಗಾರ

‘ಹೊಳೆ ನೀರಿಗೆ ನಾಯಕನ ಅಪ್ಪಣೆ ಬೇಕೆ? ನಮ್ಮ ನೆಲದಲ್ಲಿ ನಮ್ಮ ನಂಬಿಕೆಗಳಿಗೆ ಬೆಲೆಯಿಲ್ಲವೇಕೆ? ನಮ್ಮ ಧರ್ಮದ ಆಚರಣೆ, ನಮ್ಮ ಸಂಸ್ಕೃತಿಗೆ ಏಕೆ ಇಷ್ಟೊಂದು ಅನ್ಯಾಯ? ನಮ್ಮ ಧರ್ಮದ, ಸಂಸ್ಕೃತಿಯ ಅಳಿವು-ಉಳಿವಿಗಾಗಿ ನಾವೀಗ ಒಗ್ಗಟ್ಟಾಗಲೇ ಬೇಕಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಆಗಲೇಬೇಕು. ಅದಕ್ಕಾಗಿ ಯಾವುದೇ ಹೋರಾಟಕ್ಕೂ, ತ್ಯಾಗಕ್ಕೂ ಸಿದ್ಧರಾಗಿದ್ದೇವೆ.’

ಇಂತಹ ಮಾತುಗಳು, ಭಾವನಾತ್ಮಕ ಅಭಿಪ್ರಾಯಗಳು ದೇಶವ್ಯಾಪಿ ಹರಿದಾಡಿವೆ. ಪಡಪೋಶಿಗಳಾಗಿ, ಯಾವುದೇ ಜವಾಬ್ದಾರಿಗಳಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿರುವ ಹುಚ್ಚು ಖೋಡಿಯ ಯುವ ಇತ್ತೀಚಿನ ದಿನಗಳಲ್ಲಿ ಧರ್ಮದ ಬೆಲೆ ಸ್ವಲ್ಪ-ಸ್ವಲ್ಪವೇ ಅರಿವಾಗುತ್ತಿರುವುದನ್ನು ಅವು ಬಹುಶಃ ಸೂಚಿಸುವಂತಿದೆ. ಧರ್ಮಕ್ಕಿಂತ ಜಾತಿ-ಜಾತಿಗಳ ಮಧ್ಯೆ ಬಿತ್ತಿದ್ದ ವಿಷಬೀಜದಿಂದ ಬೇಯುತ್ತಿದ್ದ ಕೋಟ್ಯಂತರ ಮನಸ್ಸುಗಳು ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣದಿಂದ ಬೇಸತ್ತು ಧರ್ಮದ ಹುಳುಕುಗಳನ್ನು ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಲು ಶುರುವಿಟ್ಟುಕೊಂಡಿದ್ದಾರೆ. ಇದುವರೆಗೂ ಅದ್ಯಾವುದೋ ಒಂದು ರಾಜಕೀಯ ಪಕ್ಷ ಮತ್ತು ಸಂಘಟನೆಯ ಅಜೆಂಡಾವಾಗಿದ್ದ ರಾಮಮಂದಿರ ನಿರ್ಮಾಣ, ಈಗ ಭರತ ಖಂಡದ ಮೂಲೆ-ಮೂಲೆಗೂ ಪಸರಿಸಿರುವಂತಿದೆ. ಅದೇನೇ ಅವಾಂತರಗಳು ಸೃಷ್ಟಿಯಾದರೂ ಸರಿಯೇ, ಅದೆಂತಹ ಎದುರಾದರೂ ಕೂಡ ನಮ್ಮ ಶಕ್ತಿ ಪ್ರದರ್ಶನವನ್ನು ನಾವೂ ಮಾಡಲೇಬೇಕಿದೆ. ಅದಕ್ಕಾಗಿ ರಾಮಮಂದಿರ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕೆಂದು ಸಾರ್ವಜನಿಕವಾಗಿ ಒಂದು ಒತ್ತಡ ಉಂಟಾಗಿದೆ.

1992 ರಲ್ಲಿನ ಪರಿಸ್ಥಿತಿಯೇ ಬೇರೆ. 2018ರಲ್ಲಿ ಸೃಷ್ಟಿಯಾಗುತ್ತಿರುವ ಒತ್ತಡವೇ ಬೇರೆ. ಅಂದು ನಡೆದ ಹೋರಾಟ, ಹಿಂಸಾಚಾರಗಳೆಲ್ಲವನ್ನೂ ಇಂದಿನ ಅದೆಷ್ಟೋ ಮಂದಿ ನೋಡಿರಲೂ ಸಾಧ್ಯವಿಲ್ಲ. ಏಕೆಂದರೆ ರಾಮಮಂದಿರಕ್ಕಾಗಿ ನಡೆದ ಆ ಹೋರಾಟ, ಬಾಬ್ರಿ ಮಸೀದಿ ಧ್ವಂಸದ ಘಟನೆ ಜರುಗಿ ಹೋಗಿ ಹೆಚ್ಚು ಎರಡು ದಶಕಗಳೇ ಕಳೆದು ಹೋಗಿವೆ. ಎರಡೂವರೆ ದಶಕಗಳಿಂದ ಕೇವಲ ಕೋರ್ಟ್‌ಗಳಲ್ಲಿ ನಡೆದ ಹೇಳಿಕೆ, ಪ್ರತಿಹೇಳಿಕೆ ಹೊರತುಪಡಿಸಿದರೆ ಯಾವುದೇ ಬದಲಾವಣೆಗಳು ನಡೆಯಲಿಲ್ಲ. ಅಲ್ಲದೇ ಅಲಹಾಬಾದ್ ಕೋರ್ಟ್, ಭೂಮಿಯನ್ನು ಮೂರು ಭಾಗ ಮಾಡಿ ಮೂರು ಸಂಘಟನೆಗಳಿಗೆ ಹಂಚುವಂತೆ ನೀಡಿದ ತೀರ್ಪುನ್ನು ಕೂಡ ಪ್ರಶ್ನಿಸಿ, 14ಕ್ಕೂ ಹೆಚ್ಚು ಮೇಲ್ಮನವಿಗಳು ಸುಪ್ರೀಂ ಕೋರ್ಟ್ ಮುಂದಿವೆ. ಪರಿಸ್ಥಿತಿ ಹೀಗಿರುವಾಗ, ಬಹುಸಂಖ್ಯಾತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅಯೋಧ್ಯೆಯ ಭೂ ವಿವಾದವನ್ನು ತ್ವರಿತ ಗತಿಯಲ್ಲಿ ವಿಚಾರಣೆ ಮಾಡಿ ತೀರ್ಪು ಸುಪ್ರೀಂ ಕೋರ್ಟ್ ಮತ್ತೆಮತ್ತೆ ಅವಧಿ ಮುಂದೂಡುತ್ತ ತೋರಿದ ನಿರ್ಲಕ್ಷ್ಯ ಬಹುಸಂಖ್ಯಾತರ ಭಾವನೆಗಳನ್ನು ಕೆರಳಿಸಿದೆ.

ಇಂದಿನ ಯುವ ಪೀಳಿಗೆಗೆ ಭವಿಷ್ಯದ ಭಾರತದ ಮೇಲಿನ ಕಾಳಜಿಗಿಂತ ತಮ್ಮ ಧರ್ಮದ ಮೇಲಾಗುತ್ತಿರುವ ಅನ್ಯಾಯ, ಟೀಕೆ-ಟಿಪ್ಪಣಿಗಳು, ಆಕ್ರಮಣಗಳು ಸಾಕುಸಾಕೆನಿಸಿದೆ. ಕೆಟ್ಟ ಜಾತಿ ವ್ಯವಸ್ಥೆ, ಶೋಷಣೆಗಳನ್ನೇ ಮುಂದಿಟ್ಟುಕೊಂಡು ಬುದ್ಧಿಜೀವಿಗಳು, ಮತ್ತು ಜಾತ್ಯತೀತವಾದಿಗಳಿಂದ ಹಿಂದೂ ಧರ್ಮ ಸಾಕಷ್ಟು ಅವಮಾನಕ್ಕೊಳಗಾಗುತ್ತಿದೆ ಎಂದು ಯೋಚಿಸುತ್ತ ಇದಕ್ಕೆಲ್ಲ ಒಂದು ಅಂತ್ಯ ಹಾಡಲೇಬೇಕೆಂದು ನಿರ್ಧರಿಸಿದಂತೆ ಕಂಡುಬರುತ್ತಿದೆ. ರಾಮಮಂದಿರ ನಿರ್ಮಾಣ ದೇಶದ ಬಹುಸಂಖ್ಯಾತ ಹಿಂದೂಗಳ ಎಂಬ ವಾದವನ್ನು ಅವರು ಮುಂದಿಡುತ್ತಿದ್ದಾರೆ. ಅಲ್ಲದೇ ರಾಮಮಂದಿರ ನಿರ್ಮಾಣ ಕೇವಲ ಮುಸ್ಲಿಂರ ಮೇಲಿನ ಅಸೂಯೆಯೋ ಅಥವಾ ಜಿದ್ಧಿನ ವಿಷಯವಾಗದೇ, ಇತ್ತೀಚಿನ ದಿನಗಳಲ್ಲಿ ಜರುಗುತ್ತಿರುವ ಮತಾಂತರ ಮತ್ತು ಧರ್ಮದ ಮೇಲಿನ ಬುದ್ಧಿಜೀವಿಗಳ ಮತ್ತು ಜಾತ್ಯತೀತವಾದಿಗಳ ಟೀಕೆಗಳಿಗೂ ತಿರುಗುತ್ತರವೆಂದು ತರುಣ ಜನಾಂಗ ಭಾವಿಸಿದೆ.

ನಮ್ಮ ಧರ್ಮದಲ್ಲಿನ ಜಾತಿ ವ್ಯವಸ್ಥೆ ಮತ್ತು ಶೋಷಣೆಗಳನ್ನೇ ಮುಂದಿಟ್ಟುಕೊಂಡು, ಕ್ರಿಶ್ಚಿಯನ್ ಮಿಷನರಿಗಳು ಸಮಾಜ ಸೇವೆಯ ಮುಖವಾಡ ಧರಿಸಿ ಲಕ್ಷಾಂತರ ಮುಗ್ಧ ಹಿಂದೂಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಿದ್ದಾರೆ. ಕೇವಲ ಹಿಡಿದು ಬಂದ ಫಾದರ್‌ಗಳು ಹಿಂದುಳಿದ ಜಾತಿಗಳ ಜನರ ನಡುವೆ ಹೊಕ್ಕು, ಅವರ ಮನಸ್ಸಿನಲ್ಲಿ ಹಿಂದೂ ಧರ್ಮದ ವಿರೋಧಿ ಮನಸ್ಥಿತಿಯನ್ನು ಸೃಷ್ಟಿಸಿ, ಹೃದಯದಾಳದಲ್ಲಿ ಶಿಲುಬೆಯನ್ನು ಮೀಟಿ, ಮುಗ್ಧರ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸಿ ಧರ್ಮ ಪ್ರಚಾರದಲ್ಲಿ ತೊಡಗಿದ್ದಾರೆ. ಇದೆಲ್ಲವೂ ತಿಳಿದಿದ್ದರೂ, ಅವರು ನೀಡುವ ಧನ ಮತ್ತು ಪ್ರಶಸ್ತಿ, ಸನ್ಮಾನಗಳಿಗೆ ತಮ್ಮನ್ನು ತಾವು ಮಾರಾಟ ಮಾಡಿಕೊಂಡ ಸ್ವಯಂಘೋಷಿತ ಬುದ್ಧಿ ಜೀವಿಗಳು ಪ್ರಾಚೀನ ಕಾಲದ ಇತಿಹಾಸ ಹೊಂದಿರುವ ಧರ್ಮವೇ ಸುಳ್ಳು, ದೇವರು ಸುಳ್ಳು, ಜನರ ಮೌಢ್ಯದ ಪ್ರತೀಕವೆಂದೂ ವಾದಿಸುತ್ತಿದ್ದಾರೆ. ಆದರೆ ಎಲ್ಲೂ ಕೂಡ ಈ ಮಂದಿ, ಇತರೆ ಧರ್ಮಗಳಲ್ಲಿರುವ ಅನಾಚಾರಗಳು, ಮೂಢನಂಬಿಕೆಗಳು, ಶೋಷಣೆಗಳ ಬಗ್ಗೆ ತುಟಿ ಬಿಚ್ಚದೇ ಇರುವುದು ಹಿಂದೂ ಧರ್ಮದ ಯುವಕರಲ್ಲಿ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಪದೇಪದೆ ಹಿಂದೂ ಧರ್ಮದಲ್ಲಿರುವ ಹುಳುಕುಗಳ ಬಗ್ಗೆ ಗಂಟೆಗಟ್ಟಲೇ ಪ್ರವಚನ ಕೊಡುವ ಮಹನೀಯರು ಅಪ್ಪಿತಪ್ಪಿಯೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಹುಳುಕುಗಳ ಬಗ್ಗೆ ಮಾತನಾಡುವುದಿಲ್ಲ. ಹಾಗೆಯೇ ಮುಗ್ಧ ಜನರನ್ನು ಆರೋಗ್ಯ, ಶಿಕ್ಷಣದ ನೆಪ ಮಾಡಿ ಅರೆಬರೆ ಸಹಾಯಹಸ್ತ ಮತಾಂತರ ಮಾಡಿಕೊಳ್ಳುತ್ತಿರುವ ಕಾರ್ಯಕ್ಕೆ ಈಗ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ರಾಮಮಂದಿರ ನಿರ್ಮಾಣ ಕೇವಲ ಮಂದಿರ ಕಟ್ಟುವ ವಿಷಯವಾಗದೇ ಕೋಟ್ಯಂತರ ಹಿಂದೂಗಳ ಶಕ್ತಿ ಪ್ರದರ್ಶನ ಮತ್ತು ಏಕತೆಯ ಕಾರಣವಾಗುತ್ತಿದೆ ಎಂಬುದು ಇಂದಿನ ಸುಳ್ಳು ಜಾತ್ಯತೀತವಾದಿ ಮತ್ತು ಬುದ್ಧಿಜೀವಿಗಳ ನಿದ್ದೆಗೆಡಿಸಿದೆ.

ದೇವರಿಗೆ ಒಂದು ರೂಪ ನೀಡಿ ಪೂಜಿಸುವುದಾಗಿರಬಹುದು ಅಥವಾ ದೈವೀ ಶಕ್ತಿಯ ಆರಾಧನೆಯಾಗಿರಬಹುದ…ಇದೆಲ್ಲ ಆಯಾ ದೇವರುಗಳನ್ನು ಪೂಜಿಸುವ, ಆರಾಧಿಸುವ ಆಯಾ ವರ್ಗಗಳ ಜನರ ಕಲ್ಪನೆ ಮತ್ತು ಭಾವನಾತ್ಮಕ ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ಗೊಡ್ಡು ವಾದ ಮಾಡುವ ‘ಸೆಕ್ಯುಲರಿಸ್ಟರು’ ಹಿಂದೂ ದೇವರನ್ನು ಟೀಕಿಸುತ್ತಾರೆ; ಪವಾಡ ಬಯಲು ಮಾಡುತ್ತೇವೆನ್ನುವ ವಿಷಯ ಮುಂದಿಟ್ಟುಕೊಂಡು ಜನರ ಭಾವನೆಗಳಿಗೆ, ನಂಬಿಕೆಗಳಿಗೆ ಅಪಚಾರವೆಸಗುತ್ತಿದ್ದಾರೆ. ಆದರೆ ಎಂದೂ ಕೂಡ ಇಸ್ಲಾಂ, ಕ್ರೈಸ್ತ ಧರ್ಮದಲ್ಲಿನ ನಂಬಿಕೆಗಳನ್ನು ಪ್ರಶ್ನಿಸುವ ಕೆಲಸ ಇವರಿಂದ ಆಗಿಲ್ಲ. ಚಿತ್ರಹಿಂಸೆಗೊಳಪಟ್ಟು ಶಿಲುಬೆಯಲ್ಲಿ ನೇತಾಡಿದ ವ್ಯಕ್ತಿ ದೇವಮಾನವನೆಂದೂ ನಂಬುವುದು ಒಂದು ಧರ್ಮದಲ್ಲಿ ಪ್ರಚಲಿತವಿಲ್ಲವೇ? ತನ್ನನ್ನು ಹಿಂಸೆಗೆ ಒಳಪಡಿಸಿದವರ ಮನಃಪರಿವರ್ತನೆ ಮಾಡಲಾಗದ, ತನ್ನನ್ನು ತಾನೇ ಕಾಪಾಡಿಕೊಳ್ಳಲು ಆಗದ ಎಂಬ ಟೀಕೆಗಳು ಏಕೆ ಬರುವುದಿಲ್ಲ? ಇಡೀ ಜಗತ್ತನ್ನೇ ರಕ್ಷಿಸಲು ಉದ್ಭವಿಸಿದ ದೈವ ಸೃಷ್ಟಿಯಂತೆ ಏಸು ಇವರಿಗೆ ಕಾಣುತ್ತಿರುವುದು ಸರಿ. ಆದರೆ ಅವರ ದೇವಮಾನವನನ್ನು ನಂಬುವ ಮಂದಿ ಹಿಂದೂಗಳ ನಂಬಿಕೆಯನ್ನು ಮತ್ತವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಟೀಕಿಸುವುದು ಇಬ್ಬಗೆಯ ದೃಷ್ಟಿಕೋನವಲ್ಲವೆ?

ಮಂದಿರ ನಿರ್ಮಾಣ ಮಾಡದಿದ್ದಲ್ಲಿ ನರೇಂದ್ರ ಮೋದಿಗೆ ಸಂಕಷ್ಟ ಎದುರಾಗಲಿದೆ ಎಂಬುದಂತೂ ದೇಶದಲ್ಲಿ ಕಾಣುವ ಈ ವಿದ್ಯಮಾನಗಳಿಂದ ಸ್ಪಷ್ಟ. ನಾಲ್ಕು ವರ್ಷಗಳ ಹಿಂದೆ ದೇಶದ ಜನ ಸಮೂಹಸನ್ನಿಯಂತೆ ಮೇಲೆದ್ದು ನೆಹರೂ ಅಲ್ಪಸಂಖ್ಯಾತ ಓಲೈಕೆಯ ರಾಜಕಾರಣಕ್ಕೆ ಮರ್ಮಾಘಾತ ನೀಡಿ, ನರೇಂದ್ರ ಮೋದಿಗೆ ಪ್ರಧಾನಿ ಹುದ್ದೆಯನ್ನು ದಯಪಾಲಿಸಿದೆ. ಅದರಲ್ಲೂ ಬಹುಸಂಖ್ಯಾತ ಹಿಂದೂಗಳಂತೂ ನರೇಂದ್ರ ಮೋದಿಯನ್ನು ತಮ್ಮ ಧರ್ಮದ ಉಳಿವಿಗಾಗಿ ಅವತಾರವೆತ್ತಿರುವ ಅವತಾರ ಪುರುಷನೆಂಬ ನಂಬಿಕೆಯನ್ನು ವ್ಯಕ್ತಪಡಿಸುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಂತೂ ಮೋದಿ ಪರವಾದ ದೊಡ್ಡ ಧ್ವನಿಯೇ ಕೆಲಸ ಮಾಡುತ್ತಿದೆ. ಅಲ್ಲದೇ ಬಿಜೆಪಿಯ ಚುನಾವಣಾ ಅಜೆಂಡವೂ ಸಹ ರಾಮಮಂದಿರ ನಿರ್ಮಾಣವೇ ಆಗಿರುವುದರಿಂದ ಮಂದಿರ ನಿರ್ಮಾಣದ ಮೇಲೆಯೇ ನರೇಂದ್ರ ಮೋದಿಯವರ 2019ರ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ. ಒಂದು ರಾಮಮಂದಿರ ನಿರ್ಮಾಣ ಮಾಡದೇ, ಸುಖಾಸುಮ್ಮನೇ ಬಿಜೆಪಿ ಜನರ ಭಾವನೆಗಳ ಜತೆ ಆಟವಾಡುತ್ತಾ ಕುಳಿತರೆ, ಇದನ್ನೇ ಅಸ್ತ್ರವಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿರೋಧ ಪಕ್ಷಗಳು ಮುಂದಾಗಬಹುದು. ಹೇಗಾದರೂ ಸರಿಯೇ ಮಂದಿರ ನಿರ್ಮಾಣ ಮಾಡಲೇಬೇಕಾದ ಇಕ್ಕಟ್ಟಿಗೆ ಮೋದಿ ಸಿಲುಕಿಕೊಂಡಿದ್ದಾರಾದರೂ, ಈ ವಿಚಾರವಾಗಿ ತೆಗೆದುಕೊಳ್ಳುವ ದೃಢ ನಿರ್ಧಾರ ಮೋದಿಯ ನಾಯಕತ್ವ ಮತ್ತು ಶಕ್ತಿಗೆ ಮತ್ತಷ್ಟು ಮೆರಗು ನೀಡುವುದರಿಂದ ಹಾಗೇಯೇ ಜನಪ್ರಿಯತೆಯನ್ನು ಮತ್ತಷ್ಟು ವೃದ್ಧಿಸುವುದರಿಂದ ಚುನಾವಣೆಯ ಹೊಸ್ತಿಲಲ್ಲೇ ಮಂದಿರಕ್ಕೆ ಅಡಿಗಲ್ಲು ಹಾಕಲೇಬೇಕಿದೆ. ಇಲ್ಲವಾದಲ್ಲಿ ಬಿಜೆಪಿಗೆ ನರೇಂದ್ರ ಮೋದಿಗೆ ತೀರಾ ಸಂಕಷ್ಟ ಎದುರಾಗಲಿದೆ ಅಂತಹ ವಾತಾವರಣವೂ ಈಗಾಗಲೇ ಸೃಷ್ಟಿಯಾಗಿದೆ.

ಸುಪ್ರೀಂ ಕೋರ್ಟ್ ವಿರುದ್ಧ ಜನರ ಆಕ್ರೋಶವೂ ಇದರೊಂದಿಗೆ ಸೇರಿಕೊಂಡಿದೆ. ದೇಶದ ನ್ಯಾಯಾಂಗ ವ್ಯವಸ್ಥೆ ದಿನೇದಿನೆ ಸಾರ್ವಜನಿಕವಾಗಿ ತೀವ್ರವಾಗಿ ಟೀಕೆಗೊಳಗಾಗುತ್ತಿದೆ. ಅದರಲ್ಲೂ ಹಿಂದೂಗಳ ಧಾರ್ಮಿಕ ಆಚರಣೆ, ನಂಬಿಕೆಗಳ ವಿರುದ್ಧವಾಗಿ ನೀಡಿದ ತೀರ್ಪುಗಳು ಮತ್ತು ಮನುಷ್ಯ ಜೀವನದ ಅದರಲ್ಲೂ ಭಾರತೀಯ ನೆಲದ ಭಾವನಾತ್ಮಕ ಸಂಬಂಧಗಳು ಮತ್ತದರ ಆಳ-ಹರಹು ಅರಿತೂ ಅರಿಯದವರಂತೆ ನೀಡಿದ ತೀರ್ಪುಗಳಂತೂ ಹಾದಿ-ಬೀದಿಯಲ್ಲಿ ನಡೆದಾಡುವವರೆಲ್ಲ ದೇಶದ ಉಚ್ಚ ಮತ್ತದರ ನ್ಯಾಯ ನೀಡಿಕೆಯನ್ನು ಹಿಗ್ಗಾಮುಗ್ಗಾ ಟೀಕಿಸುವಂತೆ ಮಾಡಿಬಿಟ್ಟಿತ್ತು. ಅಲ್ಲದೇ ನ್ಯಾಯಾಧೀಶರಿಗಿದ್ದ ಇದ್ಧ ಗೌರವ, ಭಯ-ಭಕ್ತಿಯೆಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ರಾಮಮಂದಿರ ಭೂ ವಿವಾದದ ತ್ವರಿತ ವಿಚಾರಣೆಯನ್ನು ಸುಪ್ರೀಂಕೊರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಮತ್ತಷ್ಟು ಆಕ್ರೋಶಭರಿತರಾಗುವಂತೆ ಮಾಡಿರುವುದಲ್ಲದೇ ಸುಪ್ರೀಂ ಬಗೆಗಿದ್ದ ಗೌರವಗಳೆಲ್ಲ ಮಣ್ಣು ಪಾಲಾಗುವಂತೆ ಮಾಡಿದೆ. ರಾಮಮಂದಿರ ನಿರ್ಮಾಣ ಅಯೋಧ್ಯೆಯ ಭೂವಿವಾದ ಮೊದಲ ಆದ್ಯತೆಯ ವಿಷಯವಲ್ಲ ಅನ್ನುವುದಾದರೆ ಶಬರಿಮಲೆ, ಅಕ್ರಮ ಸಂಬಂಧ ಕೇಸುಗಳಲ್ಲಿ ಅದ್ಯಾವ ಆದ್ಯತೆ ಕೆಲಸ ಮಾಡಿತ್ತು ಪ್ರಶ್ನೆಗಳನ್ನು ಸೃಷ್ಟಿಸಿದೆ.

ರಾಮ ಮಂದಿರ ನಿರ್ಮಾಣ ಈಗ ಕೇವಲ ಬಿಜೆಪಿಯ ಅಜೆಂಡಾವಾಗಿಯೋ ಅಥವಾ ಆರೆಸ್ಸೆಸ್ ಅಜೆಂಡಾವಾಗಿಯಷ್ಟೆ ಉಳಿದಿಲ್ಲ. ಬದಲಾಗಿ ಬಹುಸಂಖ್ಯಾತ ಹಿಂದೂಗಳ ಆತ್ಮಾಭಿಮಾನದ ಪ್ರಶ್ನೆಯಾಗಿದೆ. ಅಲ್ಲದೇ ಹೆಚ್ಚುತ್ತಿರುವ ಅಲ್ಪಸಂಖ್ಯಾತರ ದರ್ಪ, ದೌರ್ಜನ್ಯಗಳು, ಮತಾಂತರಗಳಿಗೆ ನೀಡುವ ಉತ್ತರವೆಂದೂ ಭಾವಿಸಿರುವುದು. ಅದೇನೆ ಆದರೂ ಸರಿಯೇ ಆಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಹಠ ಹೆಚ್ಚಾಗುವಂತೆ ಮಾಡಿದೆ. ಹೀಗಿರುವಾಗ ಮಂದಿರಕ್ಕಾಗಿ ಇನ್ನೊಮ್ಮೆ ಏನಾದರೂ ಹೋರಾಟ ನಡೆದಲ್ಲಿ ಅದು ಹಿಂದೆಂದೂ ಕಂಡಿರದ ಘೋರ ಪರಿಣಾಮವನ್ನು ಸೃಷ್ಟಿಸಲಿದೆ. ಮೋದಿಯ ಗಟ್ಟಿ ನಾಯಕತ್ವದಿಂದ ಪ್ರೇರೇಪಿತವಾಗಿರುವ ಯುವಜನತೆ ಮಂದಿರ ನಿರ್ಮಾಣದ ಕನಸು ನನಸಾಗಲಿದೆ ಎಂಬ ಆಶಾ ಭಾವನೆ ಹೊಂದಿದ್ದಾರೆ. ಆದರೆ ಜನರ ಭಾವನೆಗಳಿಗೆ ಮೋದಿ ಬೆಲೆ ಕೊಡುತ್ತಾರಾ? ಕೊಟ್ಟ ಮಾತು ಉಳಿಸಿಕೊಂಡು ಇತಿಹಾಸ ನಿರ್ಮಿಸುತ್ತಾರೋ ಅಥವಾ ಮಾತಿಗೆ ತಪ್ಪಿ 2019ರ ಚುನಾವಣೆಯಲ್ಲಿ ವಿರೋಧಿಗಳ ಬಾಯಿಗೆ ಆಹಾರವಾಗುತ್ತಾರೋ ಕಾದು ನೋಡಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close