About Us Advertise with us Be a Reporter E-Paper

ಗುರು

ನಿರಂತರ ಸ್ಮರಣೆ ಚಿರಂತನ ಶಕ್ತಿ

- ಪವಮಾನ

ಜೀವನದ ಪಥದಲ್ಲಿ ಆಗಿಂದಾಗ ಅಡ್ಡಬರುವ ಕಷ್ಟಗಳು ಉಂಟುಮಾಡುವ ಮಾನಸಿಕ ಅಸ್ಥಿರತೆಯನ್ನು ನಿವಾರಿಸಲು ನಿರಂತರ ಸ್ಮರಣೆ ಉತ್ತಮ ಮಾರ್ಗ. ಭಗವಂತನ ನಿರಂತರ ಸ್ಮರಣೆಯನ್ನು ಅಳವಡಿಸಿಕೊಳ್ಳಲು ಪದೇ ಪದೇ ಹೇಳಿಕೊಳ್ಳುವ ಮಂತ್ರದ ವಿಧಾನವನ್ನು ಸಹ ಕೆಲವರು ಅಳವಡಿಸಿಕೊಳ್ಳಬಹುದು. ಆದರೆ ಮಂತ್ರವು ಯಾಂತ್ರಿಕ ಎನಿಸಿ, ಗಾಣದೆತ್ತು ಸುತ್ತಿದಂತಾಗಬಾರದು. ಅದಕ್ಕಿಂತ ಮಿಗಿಲು ಎಂದರೆ ನಾವೇ ಭಗವಂತನ ಒಂದು ಪುಟಾಣಿ ಭಾಗ ಎಂದುಕೊಳ್ಳುವುದು.

ಬೈಬಲ್‌ನಲ್ಲಿ ಒಂದು ಮಾತು ಬರುತ್ತದೆ – ‘ನಾನು ತಿಳಿದು ಶಾಂತವಾಗಿರು’ ‘ಬಿ ಸ್ಟಿಲ್ ಆ್ಯಂಡ್ ನೋ ದಟ್ ಐ ಆ್ಯಮ್ ಗಾಡ್’. ಇದಕ್ಕೆ ವಿಶಾಲಾರ್ಥಗಳಿವೆ, ವಿವಿಧ ಜ್ಞಾನಿಗಳು ಬೇರೆ ಬೇರೆ ಅರ್ಥ ನೀಡಿದ್ದಾರೆ. ಮುಖ್ಯ ಅಂದರೆ ಮನಸ್ಸು ಶಾಂತವಾಗಿರಬೇಕು.

ಜನರಲ್ಲಿ ಒಂದು ತಪ್ಪು ತಿಳುವಳಿಕೆ ಇದೆ. ಮನಸ್ಸನ್ನು ನಿಗ್ರಹಿಸಿ, ನಾವು ಹೇಳಿದಂತೆ ಮನಸ್ಸು ಕೇಳಬೇಕೆಂದು ಹಠ ಹಿಡಿದು ಪ್ರಯತ್ನಿಸುವ ಮೂಲಕ ಮನಶ್ಶಾಂತಿ ಗಳಿಸಬಹುದು ಎಂದು. ಆದರೆ ವಾಸ್ತವ ಸ್ಥಿತಿ ಭಿನ್ನವಾಗಿದೆ. ನಮ್ಮ ಮನಸ್ಸನ್ನು ನಿಗ್ರಹಿಸುವ ಬದಲು ಅಥವಾ ನಿಯಂತ್ರಿಸುವ ಬದಲು ಅದನ್ನು ಆಟವಾಡಲು ಬಿಟ್ಟು, ಅದಕ್ಕೆ ತಕ್ಕ ಮಟ್ಟಿಗಿನ ಸಾತ್ವಿಕ ಸ್ವಾತಂತ್ರ್ಯ ನೀಡಿ, ತದನಂತರದಲ್ಲಿ ಶಾಂತಿಯನ್ನು ಅನುಭವಿಸಬೇಕು. ಮನಸ್ಸು ಹೆಚ್ಚು ಪ್ರಶಾಂತಿಯನ್ನು ಪಡೆದಂತೆಲ್ಲಾ ಜೀವನದಲ್ಲಿ ಮೂಲ ಅಗತ್ಯವೆನಿಸಿರುವ ಸಂತಸ, ಪ್ರೀತಿ, ಉಲ್ಲಾಸ ಮತ್ತು ಭದ್ರತಾ ಭಾವನೆಯನ್ನು ಅನುಭವಿಸಲು ಸಾಧ್ಯ. ಓರ್ವ ತತ್ವಜ್ಞಾನಿ ಹೇಳುತ್ತಾರೆ ‘ ಚಟುವಟಿಕೆಯಿಂದಿರುವ ಮನಸ್ಸು ಜಡ ಅಥವಾ ರೋಗಿ, ನಿಧಾನವಾಗಿರುವ ಮನಸ್ಸು ಗಂಭೀರ ಮತ್ತು ನಿಶ್ಚಲ ಪ್ರಶಾಂತ ಎನಿಸಿರುವ ಮನಸ್ಸು ದೈವಿಕ’. ಮನಸ್ಸಿನ ಶಾಂತತೆಯ ಈ ರೀತಿ ವಿಭಿನ್ನ ಎನಿಸುವ ಹಲವು ಹೇಳಿಕೆಗಳನ್ನು ಮಹನೀಯರು ನೀಡಿದ್ದಾರೆ. ಅವೆಲ್ಲವುಗಳ ತಿರುಳು ಒಂದೇ – ಮನಸ್ಸಿನ ಶಾಂತತೆ ಮೂಲಕ ಈ ಜೀವನದಲ್ಲಿ ನಿಜವಾದ ಪ್ರೀತಿಯನ್ನು, ದೈವಿಕ ಅನುಭವವನ್ನು ಪಡೆಯಲು ಸಾಧ್ಯ.

ಮನಸ್ಸು ಶಾಂತಿಯ ಸ್ಥಿತಿಯಲ್ಲಿದ್ದಾಗ, ದಿವ್ಯ ಸಾನಿಧ್ಯದ ಅನುಭವ ಪಡೆಯಲು ಸಾಧ್ಯ. ನಮ್ಮ ಮನದಾಳದಲ್ಲಿ ಜೀವಿಸಿರುವ ದೇವತಾಶಕ್ತಿಯು ಪ್ರೀತಿಯ ಒಂದು ಕಿಡಿಗೆ ಉದ್ದೀಪನಗೊಂಡು ದೇಹದ ನರ ನಾಡಿಯಲ್ಲಿ ದಿವ್ಯಾನುಭವವನ್ನು ನೀಡಬಲ್ಲದು. ಇಂತಹದೊಂದು ದೈವಿಕ ಅನುಭವವನ್ನು ಪಡೆಯುವ ಸ್ಥಿತಿಯನ್ನು ಆ ನಂತರ ನಾವು ಈ ಜೀವ ಜಗತ್ತಿನ ಐಕ್ಯತೆಗೆ ಭಂಗ ತರುವ ಯಾವುದೇ ಕೃತ್ಯವನ್ನು ಮಾಡಲಾರೆವು. ಆಗ ಕುಕೃತ್ಯವನ್ನು ಯೀಚಿಸಲು ಮತ್ತು ಮಾಡಲು ನಮ್ಮಿಂದ ಸಾಧ್ಯವೇ ಆಗುವುದಿಲ್ಲ. ಆ ಸ್ಥಿತಿಯನ್ನು ತಲುಪಿದಾಗ ನಮ್ಮಿಂದ ವಿಶ್ವ ಭಾತೃತ್ವದ ವಲಯದಲ್ಲಿ ಮಾತ್ರ ಜೀವಿಸಲು ಸಾಧ್ಯ. ಇಂತಹ ಸ್ಥಿತಿಯನ್ನು ಅನುಭವಿಸುವುದು ತೀರ ಕಷ್ಟಸಾಧ್ಯ ಅಲ್ಲ ಎನ್ನುತ್ತಾರೆ ಅನುಭಾವಿಗಳು, ಸಾಧಕರು ಯೋಗಿಗಳು ಮತ್ತು ಅಭ್ಯಾಸಿಗಳು. ಧ್ಯಾನ, ವಿಶ್ವ ಪ್ರೀತಿ ಮಂತ್ರ ಮೊದಲಾದ ದಾರಿಗಳನ್ನು ಅನುಸರಿಸುವ ಜೀವನದ ಪ್ರಶಾಂತ ಸ್ಥಿತಿಗೆ ಅನುವು ಮಾಡಿಕೊಡಬಹುದು. ಸದುದ್ದೇಶದ ಸರಳ ಮಂತ್ರದಂಥ ಸ್ಮರಣೆ ಸಹ ಮನಸ್ಸಿಗೆ ಪ್ರಶಾಂತತೆಯನ್ನು ತುಂಬಬಲ್ಲದು ಎಂದರೆ ಅಚ್ಚರಿ ಎನಿಸುತ್ತದೆಯೇ?

ನಿರಂತರವಾಗಿ ಭಗವಂತನ ಸ್ಮರಣೆ ಮಾಡುವ ದೈವಿಕ ಪ್ರಕ್ರಿಯೆ ಮಂತ್ರದ ಸ್ವರೂಪವನ್ನು ಪಡೆಯಲು ಸಾಧ್ಯ. ಅಥವಾ ನಿಶ್ಶಬ್ದ ಸ್ಮರಣೆಯೊಂದೇ ಸಾಕು ಶಾಂತಿಯ ಪಥ ಅನುಸರಿಸಲು. ಯಾವುದೇ ಕೆಲಸ ಮಾಡುವಾಗ, ನಡೆಯುವಾಗ, ಬಸ್ಸಿಗೆ ಕಾಯುವಾಗ, ಕೊನೆಗೆ ನಿದ್ರಿಸುವಾಗಲೂ ಸಹ ಭಗವಂತನ ನಿರಂತರ ಸ್ಮರಣೆ ಮಾಡುವ ಮೂಲಕ ದಿವ್ಯಾನುಭವದ ಸನಿಹಕ್ಕೆ ಜತೆಗೆ ಯಾವ ಭಯವೂ ಇಲ್ಲದಂತೆ ನಿರಾತಂಕ ಮನಸ್ಥಿತಿಯನ್ನು ಸದಾ ಕಾಲ ಪಡೆಯಬಹುದು.

ನಾವು ಭಯಪಟ್ಟಾಗ, ಕೋಪಗೊಂಡಾಗ ಅಥವಾ ಸ್ವಾರ್ಥ ಸಾಧನೆಯಂಥ ಸ್ವಯಂ ಆಸಕ್ತಿ ಕೆಲಸಗಳಲ್ಲಿ ತೊಡಗಿಕೊಂಡಾಗ ಮನಸ್ಸಿನ ಸುತ್ತ ನಕಾರಾತ್ಮಕ ತರಂಗಗಳೇ ರಿಂಗಣ ಹೊಡೆಯುತ್ತಾ ಇರುತ್ತವೆ. ದೇಹ ಮತ್ತು ನರಗಳು ಪ್ರಕ್ಷುಬ್ಧ ಎನಿಸುತ್ತವೆ. ಅಂಥ ಸ್ಥಿತಿಯಿಂದ ನಿಧಾನವಾಗಿ ಪ್ರಶಾಂತ ಮನಸ್ಥಿತಿಗೆ ತಲುಪಲು ನಿರಂತರ ಸ್ಮರಣೆಯು ಅತ್ಯುತ್ತಮ ಮಾಧ್ಯಮ. ಭಗವಂತನ ನಿರಂತರ ಸ್ಮರಣೆಯಿಂದ ಪ್ರವಹಿಸುವ ಶಾಂತಿಯ ಅಲೆಗಳು ಅದ್ಭುತ ಸಕಾರಾತ್ಮಕ ಉತ್ಪತ್ತಿ ಮಾಡಿ, ತಾಳ್ಮೆಯನ್ನು ಬೆಳೆಸುತ್ತವೆ. ಕೋಪ ಅಥವಾ ಚಿಂತೆ ಭರದಲ್ಲಿ ಮಾತನಾಡಬಹುದಾದ ನಕಾರಾತ್ಮಕ ಶಬ್ದಗಳನ್ನು ತಡೆಯುತ್ತವೆ. ಆ ಮನಸ್ಥಿಯಲ್ಲಿ ಮಾಡಬಹುದಾದ ಕೆಟ್ಟ ಕರ್ಮಗಳನ್ನು ಸಹ ತಡೆಯುತ್ತವೆ. ಮನಸ್ಸಿಗೆ ವಿವೇಚನಾ ಶಕ್ತಿಯನ್ನು ತುಂಬುತ್ತವೆ. ಭಯವನ್ನು ಧೈರ್ಯವನ್ನಾಗಿಸುವ, ಕೋಪವನ್ನು ಕರುಣೆಯನ್ನಾಗಿಸುವ, ದ್ವೇಷವನ್ನು ಪ್ರೀತಿಯನ್ನಾಗಿ ಪರಿವರ್ತಿಸುವ ಶಕ್ತಿ ನಿರಂತರ ಸ್ಮರಣೆಗೆ ಇದೆ.

ಅಸ್ಥಿರವಾಗಿ ಹೊಯ್ದಾಡುವ ಚಂಚಲ ಮನಸ್ಸಿಗೆ ಸ್ಥಿರತೆಯನ್ನು ತುಂಬುವ ಶಕ್ತಿಯೂ ಧ್ಯಾನ ಮತ್ತು ನಿರಂತರ ಸ್ಮರಣೆಗೆ ಇದೆ. ಜೀವನವೆಂದರೆ ಸರಳರೇಖೆಯಲ್ಲ. ಅದು ಚಲಿಸುವ ನಾವೆಯ ರೀತಿ. ಬಿರುಗಾಳಿಯ ಪ್ರಕ್ಷುಬ್ಧತೆಯು ಸಮುದ್ರವನ್ನು ತುಂಬಿದಾಗ ಆ ನಾವೆಯು ಹೊಯ್ದಾಡುವುದು, ಕಷ್ಟಗಳು ಎದುರಾಗಬಹುದು. ಸಮುದ್ರ ಪ್ರಶಾಂತವಾಗಿದ್ದಾಗ ಎಲ್ಲೆಡೆ ಶಾಂತಿ ಸ್ಥಿರತೆ. ಆಗ ಅಲ್ಲಿ ಹೊಯ್ದಾಟವಿಲ್ಲ, ತೊಂದರೆಗಳಿಲ್ಲ, ಕಷ್ಟವಿಲ್ಲ. ಆದರೆ ಬಿರುಗಾಳಿಯ ಸಮಯದಲ್ಲಿ ನಾವೆ ಹೊಯ್ದಾಡಿದಂತೆ ಜೀವನವು ಹೊಯ್ದಾಡತೊಡಗಿದರೆ, ಏರುಪೇರಿನ ದಾರಿಯಲ್ಲಿ ಸಾಗಿದರೆ, ಜೀವನದ ಕೂಸಾಗಿರುವ ಜೀವದ ಗತಿಯೇನು? ಕಷ್ಟಗಳು, ಚಿಂತೆಗಳು, ದುಗುಡ-ದುಃಖಗಳು ದಿನಚರಿಯನ್ನು ಕಾಡತೊಡಗಿದಾಗ, ಮನಸ್ಸಿಗೆ ಅಮರುವ ಖಿನ್ನತೆ, ಉದ್ವೇಗದಿಂದ ಬಚಾವಾಗುವ ಮಾರ್ಗ ಯಾವುದು?

ಅದುವೇ ನಿರಂತರ ಸ್ಮರಣೆ, ನಿಶ್ಶಬ್ದ ಪೂಜೆ, ವ್ರತ ಮುಂತಾದವು. ಜೀವನದ ಪಥದಲ್ಲಿ ಆಗಿಂದಾಗ ಅಡ್ಡಬರುವ ಕಷ್ಟಗಳು ಉಂಟುಮಾಡುವ ಮಾನಸಿಕ ಅಸ್ಥಿರತೆಯನ್ನು ನಿವಾರಿಸಲು ನಿರಂತರ ಸ್ಮರಣೆ ಉತ್ತಮ ಮಾರ್ಗ. ಭಗವಂತನ ನಿರಂತರ ಸ್ಮರಣೆಯನ್ನು ಅಳವಡಿಸಿಕೊಳ್ಳಲು ಪದೇ ಪದೇ ಹೇಳಿಕೊಳ್ಳುವ ಮಂತ್ರದ ವಿಧಾನವನ್ನು ಸಹ ಕೆಲವರು ಅಳವಡಿಸಿಕೊಳ್ಳಬಹುದು. ಆದರೆ ಮಂತ್ರವು ಯಾಂತ್ರಿಕ ಎನಿಸಿ, ಗಾಣದೆತ್ತು ಸುತ್ತಿದಂತಾಗಬಾರದು. ಅದಕ್ಕಿಂತ ಮಿಗಿಲು ಎಂದರೆ ನಾವೇ ಭಗವಂತನ ಒಂದು ಪುಟಾಣಿ ಭಾಗ ಎಂದುಕೊಳ್ಳುವುದು. ಕುಳಿತರೆ ಭಗವಂತನೆ ಕುಳಿತಿರುವುದು ಭಾವಿಸುವುದು. ನಡೆಯತೊಡಗಿದರೆ ಅದು ಆತನ ಕೆಲಸ ಎಂದೂ, ಕೋಪ ಬರತೊಡಗಿದರೆ ಭಗವಂತನೇ ಕೋಪಗೊಂಡಿದ್ದಾನೆ, ಇದಯ ಭಗವಂತನ ಲೀಲೆ ಎಂದುಕೊಳ್ಳುವುದು. ಕ್ಷಣಕ್ಷಣದ ದಿನಚರಿಯ ಪ್ರತಿ ಘಟ್ಟಗಳಲ್ಲೂ ಆತನ ನಿರಂತರ ಸ್ಮರಣೆ ಮಾಡತೊಡಗಿದರೆ ಖಿನ್ನತೆ, ದುಗುಡ ಕ್ರಮೇಣ ಮಾಯವಾಗುತ್ತದೆ. ನಿರಂತರ ಸ್ಮರಣೆ ಮನಸ್ಸಿನ ಲಯಕ್ಕೆ ಹೊಂದಿಕೊಂಡಂತೆಲ್ಲ ಮನಸು ತಂತಾನಾಗಿ, ಅಪ್ರಯತ್ನ ಪೂರ್ವಕವಾಗಿ ಅದರಲ್ಲಿ ತೊಡಗಿಕೊಳ್ಳುತ್ತದೆ. ಪ್ರತಿಕ್ಷಣವೂ ಭಗವಂತನ ನೆನಪು ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಆ ರೀತಿಯ ನಿರಂತರ ಸ್ಮರಣೆಯು ಯಾಂತ್ರಿಕ ಎನಿಸದೆ ಮಾಂತ್ರಿಕ ಮನಸ್ಸಿನ ಪ್ರಯತ್ನಕ್ಕೆ ಒಂದು ಅರ್ಥ ಬರುತ್ತದೆ. ಜೀವದ ಪಯಣಕೆ ಒಂದು ಗುರಿ ಸಿಗುತ್ತದೆ. ಬದುಕಿನಲ್ಲಿ ಪ್ರೀತಿ ತುಂಬಿಕೊಳ್ಳುತ್ತದೆ. ಮನಸ್ಸು ಮತ್ತು ದೇಹ ಪ್ರೀತಿಯನ್ನು ಅನುಭವಿಸಿ, ಪ್ರೀತಿಯನ್ನು ಉಸಿರಾಡತೊಡಗಿ, ಪ್ರೀತಿಯನ್ನೇ ಜಿನುಗಿಸ ತೊಡಗಿದಾಗ ಮಾತ್ರ ಈ ಬದುಕಿಗೆ ಒಂದು ಉತ್ತಮ ಅರ್ಥ ದೊರಕುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close