ಜನನಿಬಿಡ ರಸ್ತೆಯಲ್ಲೇ ಕಾರು ರೇಸ್: ಇಬ್ಬರು ಪಾದಚಾರಿಗಳ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿಯ ಮಗ
ಪೊಲೀಸ್ ಅಧಿಕಾರಿಯ ಮಗ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯ ಮಗ ತನ್ನ ಸ್ನೇಹಿತನೊಂದಿಗೆ ಕಾರು ರೇಸ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೇಗವಾಗಿ ಬಂದ ಬಿಳಿ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಬಳಿಕ ಸ್ಕೂಟರ್ ಗುದ್ದುವುದು ಕಂಡು ಬಂದಿದೆ.


ಗಾಂಧಿನಗರ: ಪೊಲೀಸ್ ಅಧಿಕಾರಿಯ ಮಗ (Son of Assistant Sub Inspector) ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ (Car hitt) ಇಬ್ಬರು ಸಾವನ್ನಪ್ಪಿರುವ ಘಟನೆ ಗುಜರಾತ್(Gujarat)ನಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯ ಮಗ ತನ್ನ ಸ್ನೇಹಿತನೊಂದಿಗೆ ಜನನಿಬಿಡ ರಸ್ತೆಯಲ್ಲಿ ಕಾರು ರೇಸ್ (Car race) ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೇಗವಾಗಿ ಬಂದ ಬಿಳಿ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಬಳಿಕ ಸ್ಕೂಟರ್‌ಗೆ ಗುದ್ದುತ್ತಿರುವುದು ಕಂಡು ಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಯೇ ಮಗನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಗುಜರಾತ್ ಪೊಲೀಸ್ ಅಧಿಕಾರಿಯ ಮಗ ಸ್ನೇಹಿತನ ಜತೆ ಕಾರು ರೇಸ್ ನಡೆಸುತ್ತಿದ್ದಾಗ ಪಾದಚಾರಿಗಳಿಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸ್ ಅಧಿಕಾರಿಯ ಮಗ ಮತ್ತು ಆತನ ಸ್ನೇಹಿತ ಎಸ್‌ಯುವಿ ರೇಸ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯ ಮಗ ಚಲಾಯಿಸುತ್ತಿದ್ದ ಬಿಳಿ ಬಣ್ಣದ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಬಳಿಕ ಸ್ಕೂಟರ್‌ಗೆ ಡಿಕ್ಕಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನ ಭಾವನಗರದ ಪೊಲೀಸ್ ಅಧಿಕಾರಿಯ ಮಗ ಹರ್ಷರಾಜ್ ಸಿಂಗ್ ಗೋಹಿಲ್ (20) ಈ ಅಪಘಾತದ ಪ್ರಮುಖ ಆರೋಪಿ. ಆತ ತನ್ನ ಸ್ನೇಹಿತನೊಂದಿಗೆ ಕಲಿಯಬೀಡ್ ಪ್ರದೇಶದ ಜನದಟ್ಟಣೆಯ ರಸ್ತೆಯಲ್ಲಿ ಸಂಜೆ ವೇಳೆ ಕಾರು ರೇಸಿಂಗ್ ನಡೆಸುತ್ತಿದ್ದ. ಈ ವೇಳೆ ನಡೆದ ಅಪಘಾತದ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ಅಪರಾಧ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಅನಿರುದ್ಧ ಸಿಂಗ್, ʼʼವಜುಭಾ ಗೋಹಿಲ್ ಅವರ ಪುತ್ರ ಹರ್ಷರಾಜ್ ಗಂಟೆಗೆ 120ರಿಂದ 150 ಕಿಲೋ ಮೀಟರ್ ವೇಗದಲ್ಲಿ ವಾಹನ ಚಲಾಯಿಸಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಅವರು ವಾಹನದ ಮೇಲಿಂದ ನಿಯಂತ್ರಣ ಕಳೆದುಕೊಂಡು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅನಂತರ ಅವರ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಸ್ಕೂಟರ್‌ನ ಟೈರ್‌ಗಳು ತಕ್ಷಣವೇ ಸಿಡಿದು ಅದರಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಇತರ ಹಲವು ವಾಹನಗಳಿಗೂ ಹಾನಿಯಾಗಿವೆʼʼ ಎಂದರು.
ಇದನ್ನೂ ಓದಿ: ಕದನ ವಿರಾಮಕ್ಕೆ ಇಸ್ರೇಲ್-ಸಿರಿಯಾ ನಾಯಕರ ನಡುವೆ ಒಮ್ಮತ; ಶಾಂತಿಗೆ ಅಮೆರಿಕ ಕರೆ
ಪಾದಚಾರಿಗಳಾದ ಭಾರ್ಗವ್ ಭಟ್ (30) ಮತ್ತು ಚಂಪಾಬೆನ್ ವಾಚಾನಿ (65) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ ಸರ್ ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಒಬ್ಬರಾದ ಭಾರ್ಗವ್ ಭಟ್ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಅವರು ಮಧು ಸಿಲಿಕಾ ಕಂಪೆನಿಯಲ್ಲಿ ನೌಕರಿಯಲ್ಲಿದ್ದು, ಕೆಲಸಕ್ಕೆಂದು ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ಹರ್ಷರಾಜ್ ಅವರ ತಂದೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಮಗನನ್ನು ಹೊಡೆದು ನೀಲಂಬಾಗ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.