ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಮಾಜಿ ಸಹಾಯಕನ ಗುಂಡಿಕ್ಕಿ ಹತ್ಯೆ
Inderpreet Singh alias Parry: ಚಂಡೀಗಢದಲ್ಲಿ ಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ನ ಮಾಜಿ ಸಹಾಯಕನನ್ನು ಗುಂಡಿನ ಹತ್ಯೆ ಮಾಡಲಾಗಿದೆ. ಮೃತನನ್ನು ಇಂದರ್ಪ್ರೀತ್ ಸಿಂಗ್ ಅಲಿಯಾಸ್ ಪ್ಯಾರಿ (35) ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಮಾಜಿ ಸಹಾಯಕನ ಹತ್ಯೆ (ಸಂಗ್ರಹ ಚಿತ್ರ) -
ಚಂಡೀಗಢ: ದರೋಡೆಕೋರ ಲಾರೆನ್ಸ್ ಬಿಷ್ಣೋಯ್ನ (Robber Lawrence Bishnoi) ಮಾಜಿ ಆಪ್ತ ಸಹಾಯಕನಾಗಿದ್ದ ವ್ಯಕ್ತಿಯನ್ನು ಸೋಮವಾರ (ಡಿಸೆಂಬರ್ 1) ರಾತ್ರಿ ಇಲ್ಲಿನ ಸೆಕ್ಟರ್ -26ರ ಟಿಂಬರ್ ಮಾರ್ಕೆಟ್ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತನನ್ನು 35 ವರ್ಷದ ಇಂದರ್ಪ್ರೀತ್ ಸಿಂಗ್ ಅಲಿಯಾಸ್ ಪ್ಯಾರಿ (Inderpreet Singh alias Parry) ಎಂದು ಗುರುತಿಸಲಾಗಿದೆ. ಗಾಯಗೊಂಡ ಆತನನ್ನು ಕೂಡಲೇ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್)ಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಪ್ಯಾರಿ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಸೋಮವಾರ ಸಂಜೆ ಖಾಸಗಿ ಕ್ಲಬ್‌ನಿಂದ ಎಸ್‌ಯುವಿಯಲ್ಲಿ ಹೊರಟು ಹೋಗಿದ್ದ. ಆತನ ಜತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದ. ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮದುವೆ ಆಗಲು 2 ವರ್ಷ ಕಾಯುವಂತೆ ಹೇಳಿದ ಮನೆಯವರು; ಮನನೊಂದು 19 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ
ವಾಹನವು ಸ್ವಲ್ಪ ದೂರ ಚಲಿಸಿದ ಕೂಡಲೇ ವ್ಯಕ್ತಿಯೊಬ್ಬ ಪ್ಯಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ಎಸ್‌ಯುವಿ ಒಳಗೆ ಸುಮಾರು ಐದು ಖಾಲಿ ಶೆಲ್‌ಗಳು ಕಂಡುಬಂದಿವೆ. ಕೆಲವು ಕ್ಷಣಗಳ ನಂತರ, ಎಸ್‌ಯುವಿಯನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ವಾಹನವು ಸಮೀಪದಲ್ಲಿ ನಿಂತಿತು. ದಾಳಿ ನಡೆಸಿದ ವ್ಯಕ್ತಿಗಳ ಪೈಕಿ ಓರ್ವ ಹೊರಬಂದು ಪ್ಯಾರಿ ಸತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಗುಂಡು ಹಾರಿಸಿ, ಅದೇ ವಾಹನದಲ್ಲಿ ಪರಾರಿಯಾಗಿದ್ದಾನೆ.
10ಕ್ಕೂ ಹೆಚ್ಚು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಹರಿ ಬಾಕ್ಸರ್ ಅರ್ಜೂ ಬಿಷ್ಣೋಯ್ ಎಂಬ ಗುಂಪು ಅಪರಾಧದ ಹೊಣೆ ಹೊತ್ತುಕೊಂಡಿದ್ದು, ಪ್ಯಾರಿ ಸ್ಥಳೀಯ ಕ್ಲಬ್‌ಗಳಿಂದ ಹಣವನ್ನು ಸುಲಿಗೆ ಮಾಡಿದ್ದಾನೆ ಮತ್ತು ಅವರ ಸಹಚರರ ಮೇಲೆ ದಾಳಿ ಮಾಡಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ. ಪೊಲೀಸರು ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಪ್ಯಾರಿ ಒಂದು ಕಾಲದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸಹಚರನಾಗಿದ್ದ. ಆದರೆ ಅವನು ತನ್ನ ನಿಷ್ಠೆಯನ್ನು ಮತ್ತೊಬ್ಬ ದರೋಡೆಕೋರ ಗೋಲ್ಡಿ ಬ್ರಾರ್ ಕಡೆಗೆ ಬದಲಾಯಿಸಿದ್ದಾನೆಂದು ಹೇಳಲಾಗಿತ್ತು. ಅವನು ಈಗಾಗಲೇ ಬಿಷ್ಣೋಯ್ ಗುಂಪಿನಿಂದ ಬೇರ್ಪಟ್ಟಿದ್ದನು.
ಚಂಡೀಗಢ ಸೆಕ್ಟರ್ 33ರ ನಿವಾಸಿ ಪ್ಯಾರಿ ವಿರುದ್ಧ ಕೇಂದ್ರಾಡಳಿತ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಕೊಲೆ ಯತ್ನ, ಸುಲಿಗೆ, ಹಲ್ಲೆ, ಗಲಭೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಗಳು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಬಿಷ್ಣೋಯ್ ಜತೆಗಿನ ಅವನ ಸಂಬಂಧವು ಡಿಎವಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಿಂದಲೂ ಇತ್ತು. ಇಬ್ಬರೂ 2010ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯವನ್ನು ಪ್ರವೇಶಿಸಿದರು ಮತ್ತು ಒಮ್ಮೆ ಇಬ್ಬರೂ ಜೈಲಿಗೂ ಹೋಗಿ ಬಂದಿದ್ದರು. 2011ರಲ್ಲಿ, ಬಿಷ್ಣೋಯ್, ಪ್ಯಾರಿ ಮತ್ತು ಇತರರು ಸೆಕ್ಟರ್ 40ರಲ್ಲಿರುವ ಮನೆಯೊಂದಕ್ಕೆ ಬಲವಂತವಾಗಿ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. 2022ರ ಮಾರ್ಚ್‌ನಲ್ಲಿ ಅವರನ್ನು ಬಂಧಿಸಲಾಯಿತು. ಈ ವೇಳೆ ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು.