ಹಲ್ಲಿಗಳ ಒಣಗಿದ ಜನನಾಂಗ ಮಾರಾಟ; ಪೊಲೀಸ್ ಬಲೆಗೆ ಬಿದ್ದ ಜ್ಯೋತಿಷಿ
Crime News: ಹರಿಯಾಣದ ಫರಿದಾಬಾದ್‌ನಲ್ಲಿ ಆಧ್ಯಾತ್ಮಿಕ ಪರಿಹಾರ ಕೇಂದ್ರ ನಡೆಸುತ್ತಿರುವ ಸ್ವಘೋಷಿತ ಜ್ಯೋತಿಷಿಯೊಬ್ಬ ನಿಗೂಢ ತಾಂತ್ರಿಕ ಆಚರಣೆಗೆ ಬಳಸುವ ಹಲ್ಲಿಯ ಒಣಗಿದ ಜನನಾಂಗ ಮತ್ತು ಮೃದುವಾದ ಹವಳ ಸೇರಿದಂತೆ ನಿಷೇಧಿತ ವನ್ಯಜೀವಿ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಬಂಧಿತನನ್ನು 38 ವರ್ಷದ ಯಜ್ಞ ದತ್ ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಚಂಢೀಗಡ: ಮೂಢನಂಬಿಕೆ ಈಗಲೂ ಜೀವಂತವಾಗಿದೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. ಹರಿಯಾಣದ ಫರಿದಾಬಾದ್‌ನಲ್ಲಿ ಆಧ್ಯಾತ್ಮಿಕ ಪರಿಹಾರ ಕೇಂದ್ರ ನಡೆಸುತ್ತಿರುವ ಸ್ವಘೋಷಿತ ಜ್ಯೋತಿಷಿಯೊಬ್ಬ ನಿಗೂಢ ತಾಂತ್ರಿಕ ಆಚರಣೆಗೆ ಬಳಸುವ ಹಲ್ಲಿಯ ಒಣಗಿದ ಜನನಾಂಗ (ಹಠ ಜೋಡಿ) ಮತ್ತು ಮೃದುವಾದ ಹವಳ (ಇಂದ್ರಜಾಲ) ಸೇರಿದಂತೆ ನಿಷೇಧಿತ ವನ್ಯಜೀವಿ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ (Crime News). ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತನನ್ನು 38 ವರ್ಷದ ಯಜ್ಞ ದತ್ ಎಂದು ಗುರುತಿಸಲಾಗಿದೆ.
ʼʼಹರಿಯಾಣ ಅರಣ್ಯ ಇಲಾಖೆ, ಹರಿಯಾಣ ಪೊಲೀಸರು, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (WCCB) ಮತ್ತು ವನ್ಯಜೀವಿ ಟ್ರಸ್ಟ್ ಆಫ್ ಇಂಡಿಯಾ ನಡೆಸಿದ ಜಂಟಿ ದಾಳಿಯಲ್ಲಿ ಆರೋಪಿ ಯಜ್ಞ ದತ್‌ನನ್ನು ಬಂಧಿಸಲಾಗಿದೆ. ಆತ ನಿಷೇಧಿತ ವಸ್ತುಗಳನ್ನು ತನ್ನ ಸೆಕ್ಟರ್ 8 ಜ್ಯೋತಿಷ ಕಚೇರಿಯಲ್ಲಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುತ್ತಿದ್ದʼʼ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Self Harming: ಅತಿಯಾದ ಕೆಲಸದ ಒತ್ತಡ ; ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಮ್ಯಾನೇಜರ್
ವಶಪಡಿಸಿಕೊಂಡ ವಸ್ತುಗಳಲ್ಲಿ ಹಲ್ಲಿಯ ಮೂರು ತುಂಡು ಜನನಾಂಗ ಮತ್ತು ಇಂದ್ರಜಾಲ್ ಅಥವಾ ಮೃದುವಾದ ಹವಳದ ಐದು ತುಂಡುಗಳು ಸೇರಿವೆ ಎಂದು ಅಧಿಕಾರಿಗಳು ಹಿಂದೂಸ್ತಾನ್ ಟೈಮ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಮಾನಿಟರ್ ಹಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶೆಡ್ಯೂಲ್ I ಪಟ್ಟಿಗೆ ಸೇರ್ಪಡೆಯಾಗಿದ್ದು, ಅದರ ದೇಹದ ಭಾಗಗಳನ್ನು ಹೊಂದಿರುವುದು ಅಥವಾ ವ್ಯಾಪಾರ ಮಾಡುವುದು ಗಂಭೀರ ಅಪರಾಧ.
"ಈ ಪ್ರಕರಣ ಕಾನೂನಿನ ಗಂಭೀರ ಉಲ್ಲಂಘನೆ. ಆರೋಪಿಯು ನಿಷೇಧಿತ ವನ್ಯಜೀವಿ ಉತ್ಪನ್ನಗಳನ್ನು ಮಾರಾಟ ಮಾಡಲು ಆಧ್ಯಾತ್ಮಿಕತೆ ವೇಷ ಧರಿಸಿದ್ದಾನೆʼʼ ಎಂದು ಗುರುಗ್ರಾಮ್‌ನ ವಿಭಾಗೀಯ ಅರಣ್ಯ ಅಧಿಕಾರಿ ಆರ್.ಕೆ. ಜಂಗ್ರಾ ಹೇಳಿದ್ದಾರೆ.
ಅಧಿಕಾರಿಗಳು ಯಜ್ಞ ದತ್‌ನ ಫೋನ್ ಮತ್ತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಇದರ ಹಿಂದೆ ವ್ಯಾಪಕ ಜಾಲವಿರುವ ಶಂಕೆ ವ್ಯಕ್ತಪಡಿಸಿದ್ದಾರೆ. "ವಸ್ತುವಿನ ಬೆಲೆ ಟ್ಯಾಗ್‌ಗಳು, ಪ್ಯಾಕೇಜಿಂಗ್ ಮತ್ತು ವಾಣಿಜ್ಯ ಉದ್ದೇಶವನ್ನು ತೋರಿಸುವ ಡಿಜಿಟಲ್ ದಾಖಲೆಗಳನ್ನು ವಶಪಡಸಿಲಾಗಿದೆ. ಮೂಢನಂಬಿಕೆಯ ಹೆಸರಿನಲ್ಲಿ ವನ್ಯಜೀವಿ ಶೋಷಣೆ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧ ಸಾಬೀತಾದರೆ ಯಜ್ಞ ದತ್‌ಗೆ 3-7 ವರ್ಷಗಳ ಜೈಲು ಶಿಕ್ಷೆಯಾಗಲಿದ್ದು, 10,000 ರೂ. ದಂಡವನ್ನು ತೆರಬೇಕಾಗುತ್ತದೆ. "ಈ ಪ್ರಕರಣವು ಬಲವಾದ ಜಾಗೃತಿ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ವನ್ಯಜೀವಿ ವ್ಯಾಪಾರವನ್ನು ಹತ್ತಿಕ್ಕಲು ನಾವು ಬದ್ಧರಾಗಿದ್ದೇವೆ" ಎಂದು ಜಂಗ್ರಾ ತಿಳಿಸಿದ್ದಾರೆ.