ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prajwal Revanna Case: ಪ್ರಜ್ವಲ್‌ ರೇವಣ್ಣ ಒಂದು ಪ್ರಕರಣದ ವಿಚಾರಣೆ ಮುಕ್ತಾಯ, 30ಕ್ಕೆ ತೀರ್ಪು

Prajwal Revanna Case: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಇಂದು ಆದೇಶ ಕಾಯ್ದಿರಿಸಿದ್ದಾರೆ. ಜುಲೈ 30 ರಂದು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದ್ದು, ಒಂದು ವೇಳೆ ಕೋರ್ಟ್​, ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಪ್ರಜ್ವಲ್‌ ರೇವಣ್ಣ ಒಂದು ಪ್ರಕರಣದ ವಿಚಾರಣೆ ಮುಕ್ತಾಯ, 30ಕ್ಕೆ ತೀರ್ಪು

ಹರೀಶ್‌ ಕೇರ ಹರೀಶ್‌ ಕೇರ Jul 19, 2025 7:16 AM

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ದಾಖಲಾಗಿರುವ ನಾಲ್ಕು ಅತ್ಯಾಚಾರ ಪ್ರಕರಣಗಳಲ್ಲಿ ಒಂದರ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಪೂರ್ಣಗೊಳಿಸಿದ್ದು, ತೀರ್ಪನ್ನು ಜುಲೈ 30ಕ್ಕೆ ಕಾಯ್ದಿರಿಸಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಇಂದು ಆದೇಶ ಕಾಯ್ದಿರಿಸಿದ್ದಾರೆ.

ಪ್ರಾಸಿಕ್ಯೂಷನ್ ಪರ ಎಸ್ಎಸ್ ಪಿ ಬಿ.ಎನ್.ಜಗದೀಶ್ ಹಾಗೂ ಅಶೋಕ್ ನಾಯ್ಕ್ ವಾದ ಮಂಡಿಸಿದ್ದರೆ, ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ನಳಿನಾ ಮಾಯಗೌಡ ಪ್ರತಿವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಜುಲೈ 30ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.

ಜುಲೈ 30 ರಂದು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದ್ದು, ಒಂದು ವೇಳೆ ಕೋರ್ಟ್​, ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ) ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಆಗಿತ್ತು. ಸಿಐಡಿ ಇನ್ಸ್‌ಪೆಕ್ಟರ್ ಶೋಭಾ ಅವರು ತನಿಖೆಯ ನೇತೃತ್ವ ವಹಿಸಿದ್ದರು ಮತ್ತು 26 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಸುಮಾರು 2 ಸಾವಿರ ಪುಟಗಳ ಚಾರ್ಜ್ ಶೀಟನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಸಲ್ಲಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಮೂರು ಅತ್ಯಾಚಾರ ಪ್ರಕರಣಗಳು ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿವೆ. ಹಲವು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಬಂಧಿಸಿತ್ತು. ಅಂದಿನಿಂದ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ.

ಇದೇ ಪ್ರಕರಣದಲ್ಲಿ ಪ್ರಜ್ವಲ್ ಅವರ ತಂದೆ ಎಚ್.ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ, ನಂತರ ಅವರಿಗೆ ಜಾಮೀನು ನೀಡಲಾಯಿತು ಮತ್ತು ದೂರಿನಲ್ಲಿ ಆರೋಪಿ ಎಂದು ಹೆಸರಿಸಲಾದ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಹೀಗಾಗಿ ಬಂಧನದಿಂದ ತಪ್ಪಿಸಿಕೊಂಡರು.