About Us Advertise with us Be a Reporter E-Paper

ಅಂಕಣಗಳು

ಮಠಗಳಿಗೆ ಕೋಟಿ: ಇದು ಬಕೆಟ್ ಬಜೆಟ್ ರಾಜಕೀಯ

- ಜಿತೇಂದ್ರ ಕುಂದೇಶ್ವರ

ಜನರಿಗೆ ಭಯಂಕರ ಮರೆವು, ಸೌಲಭ್ಯ ಘೋಷಣೆ ಆದರೆ ಸಾಕು ತಮ್ಮದೇ ಖರ್ಚಲ್ಲಿ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಅತ್ತ ಯೋಜನೆಗಳು ಜಾರಿಯಾಗಲಿ, ಬಿಡಲಿ ಜನರೂ ತಲೆ ಬಿಸಿ ಮಾಡುವುದಿಲ್ಲ, ಸರಕಾರವೂ ಕೂಡಾ ತಲೆ ಹಾಕುವುದಿಲ್ಲ. ಲಾಭ ಗುತ್ತಿಗೆದಾರರು, ಎಂಜಿನಿಯರ್‌ಗಳು ಪ್ರಭಾವಿ ಕುಳಗಳು ಲಾಭ ಇರುವ ಯೋಜನೆಗಳನ್ನು ಜಾರಿಗೆ ತರುತ್ತವೆ. ಇದಕ್ಕೆ ಜ್ವಲಂತ ಉದಾಹರಣೆ ಸಹಸ್ರಾರು ಕೋಟಿ ರು. ಗಳನ್ನು ನುಂಗುತ್ತಿರುವ ಎತ್ತಿನಹೊಳೆ ಯೋಜನೆ.

ಜನರ ದೌರ್ಬಲ್ಯಗಳನ್ನು ಚೆನ್ನಾಗಿ ಅರಿತುಕೊಂಡಿರುವ ರಾಜಕಾರಣಿಗಳು ಅದಕ್ಕೆ ಸರಿಯಾಗಿ ಬಜೆಟ್ ಮಂಡನೆ ಸಂದರ್ಭ ಎಲ್ಲರಿಗೂ ಖುಷಿ ಕೊಡುವುದು ಹೇಗೆ ಎಂಬ ನಿಟ್ಟಿನಲ್ಲಿ ಗಂಭೀರವಾಗಿ ಚರ್ಚಿಸಿ ಕನ್ನಡಿಯೊಳಗಿನ ಗಂಟಿನಂತೆ ಸುಂದರವಾಗಿ ಚಿತ್ರಿಸುತ್ತಾರೆ. ಎಲ್ಲ ಪತ್ರಿಕೆಗಳು, ಸುದ್ದಿವಾಹಿನಿಗಳು ಬಂಪರ್ ಕೊಡುಗೆ, ಭರಪೂರ ಯೋಜನೆ, ಕೋಟಿ, ಅನುದಾನ ಎಂದು ಅತಿರಂಜಿತವಾಗಿ ಸ್ವರ್ಗವೇ ಕೈಗೆ ಸಿಕ್ಕಂತೆ ಬಜೆಟ್ ವಿಶ್ಲೇಷಣೆ ಮಾಡುತ್ತಾರೆ. 

ಸುದ್ದಿವಾಹಿನಿಗಳು ಇಡೀ ದಿನವನ್ನು ಬಜೆಟ್‌ಗೆ ನೀಡಿದರೆ ಬಹುತೇಕ ಎಲ್ಲ ಪುಟಗಳನ್ನು ಪತ್ರಿಕೆಗಳು ಮುಡಿಪಾಗಿ ಇಡುತ್ತವೆ. ಒಳ್ಳೆಯ ವಿಚಾರವೇ, ಆದರೆ ಮಾಧ್ಯಮಗಳು ಸ್ವಲ್ಪ ಆಸಕ್ತಿವಹಿಸಿ ಹಿಂದಿನ ಬಜೆಟ್‌ನ್ನು ಎಷ್ಟು ಯೋಜನೆಗಳು ಜಾರಿಯಾಗಿವೆ, ಎಷ್ಟು ನನೆಗುದಿಯಲ್ಲಿದೆ, ಎಷ್ಟು ಪೋಲಾಗಿದೆ ಎಂಬ ಕುರಿತು ಹಿಂದಿನ ದಿನ ಪೂರ್ತಿ ಪುಟಗಳನ್ನು ಮೀಸಲಿಡಬೇಕು. ಅಥವಾ ಬಜೆಟ್ ದಿನ ಕನಿಷ್ಠ ಪತ್ರಿಕೆ ಕಾಲು ಭಾಗ ಇಡಬೇಕು. ಮರುದಿನ ವಾದರೂ ಯೋಜನೆಗಳ ಸ್ಥಿತಿ ಗತಿಗಳನ್ನು ಸಾದ್ಯಂತವಾಗಿ ಪ್ರಕಟಿಸಿದರೆ ಸರಕಾರ ಘೋಷಣೆ ಮಾಡಿದ್ದೆಷ್ಟು ಮೂಗಿಗೆ ತುಪ್ಪ ಸವರಿದ್ದೆಷ್ಟು ನಿಜವಾಗಿ ಫಲಾನುಭವಿಗಳಿಗೆ ಮುಟ್ಟಿದ್ದೆಷ್ಟು ಎನ್ನುವುದು ಪಾರದರ್ಶಕವಾಗಿ ತಿಳಿದು ಬಿಡುತ್ತದೆ.

ನಮ್ಮೂರಿನ ಕನಸಿನ ಒಂದೆರಡು ಯೋಜನೆಗಳನ್ನೇ ನೋಡೋಣ. ಪಶ್ಚಿಮ ವಾಹಿನಿ ಯೋಜನೆ ಎರಡು ಬಾರಿ ಬಜೆಟ್‌ನಲ್ಲಿ ಘೋಷಣೆಯಾಯಿತು. ನೇತ್ರಾವತಿ ನದಿ ತಿರುಗಿಸುವ ಪರ್ಯಾಯ ಯೋಜನೆ ಇನ್ನೊಂದು ರೂಪ ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಜನರಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ಬದಲಿಯಾಗಿ ಪಶ್ಚಿಮ ಯೋಜನೆ ನೀಡಲಾಯಿತು. ಈ ಮೂಲಕ ಕರಾವಳಿ, ಒಳನಾಡು ಜನರಿಗೆ ನೀರಾವರಿ ಒದಿಸುವ ಯೋಜನೆ ಎಂದು ಬಿಂಬಿಸಲಾಯಿತು. ವಿಪರ್ಯಾಸ ಎಂದರೆ ಎತ್ತಿನಹೊಳೆಗೆ ಕೋಟಿ ಕೋಟಿ ಹಣ ನೀರಿನಂತೆ ಖರ್ಚಾಗಿದೆ, ನೀರು ಮಾತ್ರ ಎತ್ತಿನ ಹೊಳೆಯಿಂದ ಸ್ವಲ್ಪವೂ ದಿಕ್ಕು ಬದಲಿಸಿಲ್ಲ. ಇತ್ತ ಪಶ್ಚಿಮ ಕರಾವಳಿ ಯೋಜನೆ ನಾಪತ್ತೆಯಾಗಿದೆ. ಕರಾವಳಿ ಜನರ ಮೂಗಿಗೆ ತುಪ್ಪ ಸವರಿದ ರಾಜಕಾರಣಿಗಳು ಬಳಿಕ ಜನರನ್ನು ಬೆಪ್ಪರನ್ನಾಗಿ ಮಾಡಿದರು.

ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ 12 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಕುರಿತು 15 ವರ್ಷದಿಂದ ಹಿಂದಿನ ಶಾಸಕ ಯೋಗೀಶ್ ಭಟ್ ಕನಸು ಕಾಣುತ್ತಿದ್ದರು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಯ ಜತೆ ಸ್ಥಳೀಯರಿಗೂ ಸಮಸ್ಯೆ ಪರಿಹಾರ ಆಗುತ್ತಿತ್ತು. ಆ ತೂಗು ಸೇತುವೆಗೆ ಬಿಜೆಪಿ ಸರಕಾರ ಬಜೆಟ್‌ನಲ್ಲಿ ಹಣ ಘೋಷಿಸಲಾಗಿತ್ತು. 1 ಕೋಟಿ ರು. ಬಿಡುಗಡೆ ಕೂಡಾ ಆಗಿತ್ತು, ಸ್ವಲ್ಪ ಕಾಮಗಾರಿಯೂ ನಡೆದಿತ್ತು. ಮತ್ತೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಹೊಸ ಶಾಸಕರು ಉಮೇದು ತೋರಿಸಲಿಲ್ಲ. ತೂಗು ಉಯ್ಯಾಲೆಯಂತೆ ತೂಗಿದ ಕೊನೆಗೆ ಮುಳುಗಿ ಹೋಯಿತು. ಬಿಡುಗಡೆಯಾದ 1 ಕೋಟಿ ಯಾರ್ಯಾರ ಕಿಸೆಗೆ ಹೋಯಿತೋ ಆ ಸಮುದ್ರ ರಾಜನೇ ಬಲ್ಲ. ಜಾರಿಯಾಗದ ಯೋಜನೆಗಳಿಗೆ ನಮ್ಮ ಜಿಲ್ಲೆಯಲ್ಲಿಯೇ ಹಲವು ಉದಾಹರಣೆ ನೀಡಬಹುದು. ಪ್ರತಿ ಜಿಲ್ಲೆಯಲ್ಲಿ ಇದಕ್ಕಿಂತಲೂ ಬೇಸರ ಎನಿಸುವ ವಿಫಲ ಯೋಜನೆಗಳೋ, ಜಾರಿಯಾಗದ ಯೋಜನೆಗಳೂ ಹಲವಾರು ಇವೆ. ಜನ ಜನಪ್ರಿಯ ಬಜೆಟ್ ನೋಡಿ ಖುಷಿ ಪಡುತ್ತಾರೆ, ಒಂದೆರಡು ದಿನ ಒಳ್ಳೆಯ ಬಜೆಟ್ ಎಂದೋ ಅಥವಾ ವ್ಯಂಗ್ಯ ಮಾಡಿಯೋ ಫೇಸ್‌ಬುಕ್‌ಲ್ಲೋ, ಟ್ವಿಟ್ಟರನಲ್ಲೋ ನಮ್ಮ ಅನಿಸಿಕೆ ಲೈಕ್, ಕಮೆಂಟ್, ಶೇರ್‌ಗಳನ್ನು ನೋಡಿ ಖುಷಿ ಪಟ್ಟು ಮರೆತು ಬಿಡುತ್ತೇವೆ.

ಮೊನ್ನೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಬಜೆಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಜನಪ್ರಿಯ ಬಜೆಟ್ ರೂಪಿಸುವುದರ ಜತೆಗೆ ಅದನ್ನು ಅನುಷ್ಠಾನ ಮಾಡುವುದು ಅತಿ ಮುಖ್ಯ ಎಂದು ಕಿವಿ ಮಾತು ಹೇಳಿದ್ದರು. ಆದರೆ ಸಮಸ್ಯೆ ಇರುವುದೇ ಅನುಷ್ಠಾನದಲ್ಲಿ. ಎಲ್ಲ ಮಠಗಳಿಗೂ ಕೋಟಿ ಕೋಟಿ ನೀಡುವ ಅತಿ ಕೆಟ್ಟ ಓಲೈಕೆ ಪದ್ಧತಿ ಮುಂದುವರಿದಿದೆ. ಬಿಜೆಪಿ ಸರಕಾರ ಆಡಳಿತ ಸಂದರ್ಭ ತಮ್ಮ ಹಿಂದುತ್ವದ ಭಾಗವಾಗಿ ಜಾರಿಗೊಳಿಸಿದರು. ಹೊಸದಾಗಿ ಅಧಿಕಾರ ಸ್ವೀಕರಿಸಿದ ಅವರಿಗೆ ತಮ್ಮ ಹಿಂದುತ್ವ, ಮಠಗಳ ಮೇಲಿನ ಪ್ರೀತಿ ತೋರಿಸಬೇಕಿತ್ತು. ತಮ್ಮ ಬೆಂಬಲಿಸಿದ ಮಠಾಧೀಶರುಗಳಿಗೆ ಋಣ ತೀರಿಸಬೇಕಿತ್ತು. ನೀಡಿದರು, ಇರಲಿ ಬಿಡಿ.

ಆದರೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಕೂಟದ ಸರಕಾರಕ್ಕೂ ಈ ಮಠಗಳ ಓಲೈಸುವ ಕೋಟಿ ರು. ಅಮಿಷ ಬೇಕಿತ್ತೇ ? ಒಕ್ಕಲಿಗ, ಕುರುಬ ಮಠಗಳು ಓಟ್ ಬ್ಯಾಂಕ್‌ಗಳೆಂದ ಪರಿಗಣಿಸಬಹುದು ಆದರೆ ಹಿಂದೂ ಮಠಗಳು ಸರ್ವೇ ಸಾಮಾನ್ಯವಾಗಿ ಬಿಜೆಪಿ ಎಂದೇ ಹಿಂದುತ್ವದ ಪ್ರಖರ ಭಾಷಣ ಮಾಡುವ ಮಠಾಧೀಶರುಗಳು ಕೋಟಿ. ರು. ಬಿಡುಗಡೆ ಆಗುವವರೆಗೆ ಭಾಷಣ ಮಾಡುವಾಗ ಹಿಂದುತ್ವದ ಪ್ರಖರತೆ ಕಡಿಮೆ ಮಾಡಿ ಸೌಹಾರ್ದದ ಭಾಷಣ ಹೆಚ್ಚು ಮಾಡಬಹುದು ಎನ್ನುವ ಆಸೆ, ಆಶಯ ಈ ಸಮ್ಮಿಶ್ರ ಸರಕಾರದ್ದೋ ಏನೋ ? ಗೊತ್ತಿಲ್ಲ!

ಆದರೆ ಸೌಹಾರ್ದ ಭಾಷಣವನ್ನೇ ಮಾಡುವ, ಜನಪರ ಹೋರಾಟ ನಡೆಸುವ ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿಯವರು ಮಾತ್ರ ಬಿಜೆಪಿ ಬಜೆಟ್‌ನಲ್ಲೂ ಮಠಕ್ಕೆ ಅನುದಾನ ಸಿಗಲಿಲ್ಲ. ಕಾಂಗ್ರೆಸ್- ಜೆಡಿಎಸ್ ಮಠಕ್ಕೆ ಅನುದಾನ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಬಹುಷಃ ಮಠಗಳು ಒಂದೇ ಪಕ್ಷದ, ಸಮುದಾಯದ ಪರವಾಗಿ ಹೋರಾಟ ಮಾಡಿದರೆ ಮಾತ್ರ ಲಾಭ ಎನ್ನುವ ಸಂದೇಶ ಇದರಿಂದ ರವಾನೆ ಆಗುತ್ತಿದೆ.

ಅದಕ್ಕೆ ಪೂರಕವಾಗಿ ಕಾಗಿನೆಲೆಯ ಸ್ವಾಮೀಜಿಯೊಬ್ಬರು ಕುರುಬ ಸಮಾಜದ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಕ್ಕಾಗಿ ಕೊಡಗಿನಲ್ಲಿ ಜಲ ಪ್ರಳಯ ಆಯಿತು ಎಂಬ ಕಟುಕ ಮನಸ್ಸಿನ ಕವನ ಹೇಳಿದ್ದಾರೆ ! ಅವರ ಮಾತುಗಳಲ್ಲಿ ಎಷ್ಟು ಜಾತೀಯತೆ ತುಂಬಿದೆ ಎಂದರೆ ಸಿದ್ದರಾಮಯ್ಯ ಅವರ ಪರ ಬಕೆಟ್ ಆಗಿದ್ದರೆ ಬಿಟ್ಟು ಬಿಡಬಹುದಿತ್ತು ಆದರೆ, ಜಾತಿ ರಾಜಕೀಯ ಮಾಡುವ ಭರದಲ್ಲಿ ಕೊಡಗಿನಲ್ಲಿ ಮಣ್ಣಿನಡಿ ಹೂತು ಹೋದ ಜೀವಗಳಿಗೆ ಅವಮಾನ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ.

ಇಂಥ ಜಾತಿಯ ವಿಷ ಬೀಜ ಬಿತ್ತುವ ಮಠಗಳ ಒಡೆಯರಿಗೆ ಕೋಟಿ ಕೋಟಿ ಕೊಟ್ಟರೆ ಇನ್ನಷ್ಟು ವಿಷ ಬೀಜಗಳು ಹೆಮ್ಮರವಾಗುವುದರಲ್ಲಿ ಸಂಶಯ ಇಲ್ಲ. ಅದರಲ್ಲಿ ಎಲ್ಲ ಜಾತಿ, ವರ್ಗ, ಸಮುದಾಯ, ಧರ್ಮದ ಮಠ ಮಂದಿರಗಳಿಗೆ ಕೋಟಿ. ಕೋಟಿ ರು. ನೀಡಿದರೂ ಬ್ರಾಹ್ಮಣ ಮಠಗಳಿಗೆ ಅಂಥ ಮಾಡಿಲ್ಲ. ಮಾಡದೇ ಇದ್ದುದು ಒಳ್ಳೆಯದೇ ಆಯಿತು.

ಮಠಗಳಿಗೆ ಬಹುತೇಕ ಕೋಟಿ ರು. ಅನುದಾನ ಬಿಡುಗಡೆ ಆಗುತ್ತದೆ ಅದನ್ನು ಬಳಸಿಕೊಳ್ಳುತ್ತಾರೆ. ಆರೋಗ್ಯ ಕ್ಷೇತ್ರಕ್ಕೆ ಕೋಟಿ ಕೋಟಿ ಇಟ್ಟರೂ ಎಲ್ಲಿಗೆ ಹೋಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ನಮ್ಮ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿ ಬಾರಿಯೂ ಎಕ್ಸರೇ ಮಿಶನ್ ಹಾಳಾಗಿರುತ್ತದೆ, ಸ್ಕ್ಯಾನಿಂಗ್ ಮಿಷನ್ ಸರಿ ಇರುವುದಿಲ್ಲ. ಬಡವರೇ ಬರುವ ಈ ಆಸ್ಪತ್ರೆಗಳಲ್ಲಿ ಇಂಥ ಪರಿಸ್ಥಿತಿ. ಯೋಜನೆಗಳು ಏಕೆ ಜನರಿಗೆ ಮುಟ್ಟುವುದಿಲ್ಲ ? ಸಮಸ್ಯೆಯರದ್ದು ಅಧಿಕಾರಿಗಳದ್ದೋ ಜನಪ್ರತಿನಿಧಿಗಳದ್ದೋ ಅಥವಾ ಆಯ್ಕೆ ಮಾಡುವ ಜನರದ್ದೋ?

ಬಜೆಟ್ ಇರಲಿ ಮೀಸಲು ಇರಲಿ ಪ್ರತಿ ಬಾರಿ ನಿರ್ಲಕ್ಷ್ಯಕ್ಕೆ ಒಳಗಾಗುವ ವರ್ಗ ಬ್ರಾಹ್ಮಣ ವರ್ಗ. ಇದನ್ನು ಅರಿತ ಕುಮಾರ ಸ್ವಾಮಿ ಕಳೆದ ವರ್ಷ ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರು. ನೀಡಿದ್ದರು. ಆದರೆ ಬ್ರಾಹ್ಮಣ ಮಂಡಳಿಗೆ 25 ಕೋಟಿ ಸಿಕ್ಕಿತೇ ಏನು ಖರ್ಚು ಮಾಡಿದರು ಎನ್ನುವು ಯಾವುದೇ ಮಾಹಿತಿಗಳು ಸಿಗುವುದಿಲ್ಲ.

ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನು ಎಲ್ಲ ರಾಜ್ಯಗಳಲ್ಲಿ ಸ್ಥಾಪಿಸುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅನಂತಕುಮಾರ್ ಬ್ರಾಹ್ಮಣ ಮುಖಂಡರಿಗೆ ದಿಲ್ಲಿಯಲ್ಲಿ ಹಿಂದೊಮ್ಮೆ ಸಭೆ ನಡೆಸಿದ್ದರು. ಇದಾದ ಬಳಿಕ ಕುಮಾರಸ್ವಾಮಿ ಬ್ರಾಹ್ಮಣ ಮಂಡಳಿಗೆ ಕೋಟಿ ರು. ಘೋಷಣೆ ಮಾಡಿದ್ದರು. ಎಲ್ಲ ವಿಪ್ರರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದರು. ಇಂಥ ಘೋಷಣೆಗಳು ಏಕೆ ಬೇಕು?

ಕೇಂದ್ರದ ಮೋದಿ ಬಜೆಟ್‌ನಲ್ಲಿ ಸಣ್ಣ ವರ್ಗದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ 1 ಸಾವಿರ ರು. ವರ್ಷಕ್ಕೆ ಆರು ಸಾವಿರ ರೂ. ನೀಡುವ ಪ್ರಧಾನಮಂತ್ರಿ ಕಿಸಾನ್ ಯೋಜನೆ ಘೋಷಣೆ ಆಗಿದೆ. ಈ ರೀತಿಯ ಯೋಜನೆಗಳಿಗೆ ವೈಯಕ್ತಿಕವಾಗಿ ನನ್ನ ವಿರೋಧ ಇದೆ. ರೈತರಿಗೆ ಮೂಲ ಸೌಲಭ್ಯ ಮತ್ತು ಪೂರಕ ವಾತವಾರಣ ಸೃಷ್ಟಿಸಿದರೆ ಸಾಕು. ಸಾಪ್‌ಟ್ವೇರ್ ಎಂಜಿನಿಯರ್‌ಗಳು ತಮ್ಮ ಉದ್ಯೋಗ ಬಿಟ್ಟು ಕೃಷಿ ಮಾಡಿ ಲಕ್ಷ, ಲಕ್ಷ ರು. ಗಳ ಜತೆ ನೆಮ್ಮದಿಯನ್ನು ಗಳಿಸುತ್ತಿದ್ದಾರೆ. ಅವರು ಬ್ರೋಕರ್‌ಗಳ ಬಲೆಗೆ ಬೀಳದೆ ವ್ಯವಹಾರ ಮಾಡುತ್ತಿದ್ದಾರೆ.

ನಮ್ಮ ಕೃಷಿ ವ್ಯವಸ್ಥೆ ಹಾಳಾಗಿರುವುದು ಈ ಮಧ್ಯವರ್ತಿಗಳು, ದಲ್ಲಾಳಿಗಳ ಕಾಟದಿಂದ. ಇದರಿಂದಾಗಿಯೇ ರೈತ ಆತ್ಮಹತ್ಯೆ ನೇರ ಮಾರುಕಟ್ಟೆ ಸೃಷ್ಟಿಸಿದರೆ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ ಈ ಸಾಲ ಮನ್ನಾ ಯೋಜನೆಗಳೇ ಬೇಡ. ತೆರಿಗೆ ವಿನಾಯಿತಿ, ಬೆಳೆ ವಿಮೆ ಮುಂತಾದ ಸಣ್ಣ ಪುಟ್ಟ ಸೌಲಭ್ಯಗಳೇ ಸಾಕು. ನರೇಂದ್ರ ಮೋದಿ ಅವರು ಕೂಡಾ ನೇರ ಮಾರುಕಟ್ಟೆ ಕುರಿತು ಕಳೆದ ಚುನಾವಣೆ ಸಂದರ್ಭದಲ್ಲಿ ಬಹಳ ಭರವಸೆ ನೀಡಿದ್ದರು. ಇ-ಮಾರ್ಕೆಟ್ ವ್ಯವಸ್ಥೆ ಜಾರಿಗೆ ಬಂದಿದ್ದರೂ ಜನರನ್ನು ದೊಡ್ಡ ಮಟ್ಟದಲ್ಲಿ ಮುಟ್ಟಿಲ್ಲ. ಕೇಂದ್ರ ಮತ್ತು ಎಲ್ಲ ರಾಜ್ಯಗಳು ರೈತರನ್ನೇ ಮಧ್ಯವರ್ತಿಗಳಿಗೆ ನಿಯಮ ರೂಪಿಸುವ ಮೂಲಕ ಸರಿಯಾದ ವ್ಯವಸ್ಥೆ ಮಾಡಿದರೆ ರೈತರು ಸಾಲ ಮನ್ನಾ ಕೇಳುವುದಿಲ್ಲ.

ರೈತರ ಖಾತೆಗೆ ಹಣ ಹಾಕುವ ಕೇಂದ್ರದ ಯೋಜನೆಯನ್ನು ಕಾಂಗ್ರೆಸ್ ಕೂಡಾ ಟೀಕಿಸಿತ್ತು. ದಿನಕ್ಕೆ 17 ರುಪಾಯಿ ನೀಡುವ ಮೂಲಕ ಅವಮಾನ ಮಾಡಿದೆ ಎಂದು ಟೀಕಿಸಿತ್ತು. ಆದರೆ ಸಿದ್ದರಾಮಯ್ಯ ಮಾತ್ರ ಕಿಸಾನ್ ಸಮ್ಮಾನ್ ಯೋಜನೆ ಕರ್ನಾಟಕ ಸರಕಾರ ಘೋಷಿಸಿದ ರೈತ ಬೆಳಕು ಯೋಜನೆಯ ನಕಲು ಎಂದು ಹೇಳಿ ಸಿಕ್ಕಿ ಹಾಕಿಕೊಂಡಿದ್ದರು. ಮಳೆ ಆಶ್ರೀತ ಬೆಳೆ ರೈತರಿಗೆ ಪ್ರತಿವರ್ಷ ಪ್ರತಿ ಹೆಕ್ಟೇರ್‌ಗೆ 5 ಸಾವಿರ ರು. ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿತ್ತು. ವಿಪರ್ಯಾಸ ಎಂದರೆ ಆ ಯೋಜನೆ ಕೇವಲ ಘೋಷಣೆ ಆಗಿ ಮಾತ್ರ ಉಳಿದಿತ್ತು. ಜಾರಿಯಾಗಿರಲೇ ಇಲ್ಲ.

ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಮಾದರಿಯಲ್ಲಿ ಕೆಲಸ ಮಾಡುತ್ತಿರುವ ಮಠಗಳಿಗೆ ನೆರವು ನೀಡಿದರೆ ಸಂತೋಷವೇ? ಆದರೆ ಸಂಶೋಧನೆ ನಡೆಸದೆ, ಅಧ್ಯಯನ ನಡೆಸದೆ ಜಾತಿ, ಸಮುದಾಯದ ಓಲೈಕೆಗಾಗಿ ಈ ರೀತಿ ಕೋಟಿ, ಕೋಟಿ ರು. ಜನರ ತೆರಿಗೆ ಪೋಲು ಮಾಡುವುದು ತಪ್ಪು.

ನನ್ನ ಪ್ರಕಾರ ಇನ್ಫೊಸಿಸ್ ಸಂಸ್ಥೆ ಕಟ್ಟಿ ಈಗ ಸಮಾಜ ಸೇವೆ ಮಾಡುತ್ತಿರುವ ಸುಧಾಮೂರ್ತಿ ದಂಪತಿಯಂಥ ಪ್ರಾಜ್ಞರಿಗೆ ಯೋಜನೆಗಳ ಸ್ವರೂಪ ಮತ್ತು ಜಾರಿಗೊಳಿಸುವ ಹೊಣೆ ನೀಡಬೇಕು. ಏಕೆಂದರೆ ಇವರಿಗೆ ತಮ್ಮ ಸಂಪಾದಿಸಿದ ಆದಾಯದ ಒಂದು ಪಾಲನ್ನು ಅಚ್ಚುಕಟ್ಟಾಗಿ ವೈಜ್ಞಾನಿಕವಾಗಿ ಸದ್ಬಳಕೆ ಮಾಡುತ್ತಾರೆ. ಇಂಥವರ ಕೈಗೆ ನೀತಿ ರೂಪಿಸುವ ಮತ್ತು ಯೋಜನೆ ಜಾರಿಗೆ ತರುವ ಅವಕಾಶ ಒದಗಿಸಬೇಕು. ಆಗ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ. ಯೋಜನೆಗಳು ಕೂಡಾ ರೂಪುಗೊಳ್ಳಬಹುದು.

ರಾಜಕೀಯ ಪಕ್ಷಗಳೆಂದರೆ ತಾವು ಮಾಡಿದರೆ ಅದು ಅಮೃತ ಅದನ್ನೇ ಬೇರೆಯವರು ಮಾಡಿದರೆ ವಿಷ ಎನ್ನುವ ಹಂತ ತಲುಪಿದ್ದಾರೆ. ರಾಜಕಾರಣಿಗಳನ್ನು ಜನರು ಕಳ್ಳ ಕಳ್ಳರು ಎನ್ನುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ನೋವು ತೋಡಿಕೊಂಡಿದ್ದಾರೆ.

ರಾಜ್ಯಸಭೆ ಸೀಟು, ಎಂಎಲ್‌ಸಿಗೆ ಇಂತಿಷ್ಟು ಕೋಟಿ ರು. ಎಂದು ಫಿಕ್‌ಸ್ ಮಾಡಿ ಬಹಿರಂಗವಾಗಿ ಹೇಳಿಕೊಂಡವರೇ ನಮ್ಮ ಪಕ್ಷದ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿ ಮಾಡಿ ಅಳುತ್ತಿರುವಾಗ ಸಚಿವ ಡಿ.ಕೆ.ಶಿ. ಅವರು ಹೇಳುತ್ತಿರುವ ಮಾತುಗಳಲ್ಲಿ ಅತಿಶಯೋಕ್ತಿ. ಕೆಲವು ಸಾಹಿತಿ, ಖ್ಯಾತ ಪತ್ರಕರ್ತರು ಬಹಿರಂಗವಾಗಿ ತಮ್ಮ ವೀಕ್ನೆಸ್‌ಗಳನ್ನು ಹೇಳಿಕೊಂಡು ಅಭಿಮಾನಿಗಳನ್ನು ಬೆಳೆಸಿಕೊಂಡಂತೆ ರಾಜಕೀಯದಲ್ಲೂ ವೀಕ್ನೆಸ್‌ಗಳನ್ನು ಬಹಿರಂಗವಾಗಿ ಹೇಳಿಕೊಂಡರೆ ಕುಮಾರಣ್ಣನಂತೆ ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. ಇಲ್ಲವಾದರೆ ಯಡಿಯೂರಪ್ಪ ಅವರಂತೆ ಬೈಗುಳ ಕೇಳಬೇಕಾಗುತ್ತದೆ. ಇದು ಈಗಿನ ಬಜೆಟ್ ಮತ್ತು ಬಕೆಟ್ ರಾಜಕೀಯ!

Tags

Related Articles

Leave a Reply

Your email address will not be published. Required fields are marked *

Language
Close