About Us Advertise with us Be a Reporter E-Paper

ವಿವಾಹ್

ರಾಜಂಗೂ ರಾಣಿಗೂ ಮುರಿದೋದ್ರೆ ಮನಸು…!

*ಲಕ್ಷ್ಮೀಕಾಂತ್ ಎಲ್. ವಿ.

ಪ್ರೀತಿ ಮುರಿದರೆ, ಮನಸಿನ ನೋವಿನ ಯಾತನೆಯ ಜತೆಗೆ ಕಾಡುವ ಒಂಟಿತನದ ಅನುಭವ ಅನುಭವಿಸಿದವರಿಗೇ ಗೊತ್ತು. ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು, ನಗುತಾದ ಭೂತಾಯಿ ಮನಸು, ರಾಜಂಗೂ ರಾಣಿಗೂ ಮುರಿದೋದ್ರೆ ಮನಸು ಅರಮನೆಯಾಗೆ ಏನೈತೆ ಸೊಗಸು ಎಂಬಂತೆ ಎರಡು ಮನಸುಗಳ ನಡುವೆ ಭಿನ್ನಾಭಿಪ್ರಾಯ ಮೂಡಿದರೆ ಯಾವ ಸಂತೋಷವೂ ಉಳಿಯುವುದಿಲ್ಲ. ಹಾಗಂತ ಪ್ರೀತಿ ಸುಲಭವಾಗಿ ಎಲ್ಲರಿಗೂ ಒಲಿಯುವುದೂ ಇಲ್ಲ. ಇದಕ್ಕೆ ಕಾರಣಗಳು ಹಲವಾರು. ಒಮ್ಮೊಮ್ಮೆ ಈ ಪ್ರೀತಿ ನಮಗೇಕೆ ಬೇಕು? ಎಂದೆಲ್ಲಾ ನೊಂದುಕೊಂಡು ಏಕಾಂತವನ್ನು ಬಯಸುವವರೇ ಹೆಚ್ಚು. ಏಕಾಂಗಿಯಾಗಿರುವಾಗ ಎಲ್ಲವೂ ಚೆನ್ನಾಗಿರುತ್ತದೆ ಎನಿಸುತ್ತದೆ. ಕೆಲವೊಮ್ಮೆ ಏಕಾಂಗಿಯಾಗಿರುವಾಗ ಯಾರಾದರೂ ಸಂಗಾತಿ ಬೇಕೆಂದು ಅನಿಸುವುದೂ ಉಂಟು. ಬಹಳಷ್ಟು ಸಮಯ ಏಕಾಂಗಿಯಾಗಿರುವುದು ತುಂಬಾ ಕಷ್ಟವಾಗಿರುತ್ತದೆ. ಅಂತಹ ಏಕಾಂತವನ್ನು ಅನುಭವಿಸಿದವರಿಗೇ ಗೊತ್ತು. ಆದರೆ ಸಂಗಾತಿಯೊಂದಿಗೆ ಇರುವುದು ಕೂಡ ಒಂದು ರೀತಿಯಲ್ಲಿ ಜೀವನದ ಸಂಗಾತಿಯೊಂದಿಗೆ ಹೊಂದಿಕೊಳ್ಳುವುದು, ಪರಸ್ಪರರನ್ನು ಅರಿತುಕೊಂಡು ಸಾಗುವುದು ಮುಖ್ಯವಾಗಿರುತ್ತದೆ.

ಆದರೆ ಇಂತಹುದು ಪ್ರತಿಯೊಬ್ಬರಿಗೂ ಸಾಧ್ಯವಾಗದೇ ಇರುವ ಕಾರಣದಿಂದ ಕೆಲವು ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಿ ಸಂಗಾತಿಗಳು ದೂರವಾಗುತ್ತಾರೆ. ಎರಡು ಮನಸ್ಸುಗಳ ನಡುವೆ ಮುನಿಸು ಉಂಟಾಗಿ ಸಂತೋಷ, ಸುಖ ಎಲ್ಲವೂ ಮಾಯವಾಗಿ ನೆಮ್ಮದಿಯೇ ಇಲ್ಲವಾಗುತ್ತದೆ. ಹಾಗಾದರೆ ನೀವು ಒಳ್ಳೆಯ ಸಂಗಾತಿಯಾಗಬೇಕಾದರೆ, ಸಂಗಾತಿಯೊಂದಿಗೆ ನೆಮ್ಮದಿಯಾಗಿ ಬದುಕಿನ ಬಂಡಿ ಸಾಗಿಸಬೇಕೆಂದರೆ ಯಾವೆಲ್ಲಾ ಗುಣಗಳು ನಿಮ್ಮಲ್ಲಿ ಇರಬೇಕು?

*ತಪ್ಪುಗಳನ್ನು ಹುಡುಕಬೇಡಿ:
ನೀವು ಇಷ್ಟಪಟ್ಟ ಹುಡುಗಿಯನ್ನು ಅಥವಾ ಮಡದಿಯನ್ನು ಸ್ವೀಕರಿಸಬೇಕು, ಗೌರವಿಸಬೇಕು. ಆಕೆಯಲ್ಲಿ ತಪ್ಪುಗಳನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಕೆಲವೊಮ್ಮೆ ಅಭಿಪ್ರಾಯಗಳ ವಿನಿಮಯವೂ ಆಗಲಿ. ಆದರೆ ಆಕೆಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ. ಅವಳ ಅಭಿಪ್ರಾಯಗಳನ್ನು ಗೌರವಿಸಿ.

*ತೀರ್ಪು ನೀಡಬೇಡಿ, ಬದಲಾಗಿ ಪ್ರೀತಿಸಿ:
ಪ್ರತಿಯೊಬ್ಬರಲ್ಲಿಯೂ ಇರುವಂತಹ ವಿಭಿನ್ನ ಗುಣಗಳಿಂದಲೇ ಸಮಾಜವು ಜನರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ಗುರುತಿಸುತ್ತದೆ. ಆದರೆ ಇದೆಲ್ಲವೂ ನಿಮಗೆ ಅರ್ಥವನ್ನು ನೀಡುವುದಿಲ್ಲ. ಏಕೆಂದರೆ ಸಂಗಾತಿಯ ಬಗ್ಗೆ ನೀವು ತೀರ್ಪು ನೀಡುವಂತಿಲ್ಲ. ಆಕೆಯನ್ನು ಪ್ರೀತಿಸಬೇಕು ಅಷ್ಟೆ. ಆಕೆಯ ಪ್ರೀತಿಯನ್ನು ಬಯಸಬೇಕಷ್ಟೆ.

*ಆಕೆಯನ್ನು ಖುಷಿಯಾಗಿಡುವುದು ನಿಮ್ಮ ಉದ್ದೇಶವಾಗಲಿ:
ಬದುಕಿನಲ್ಲಿ ಪರಸ್ಪರರನ್ನು ಸಂತೋಷವಾಗಿಡುವುದು ತುಂಬಾ ಮುಖ್ಯ. ಆಕೆಯನ್ನು ಎಲ್ಲಾ ಸಮಯದಲ್ಲೂ ಖುಷಿಯಾಗಿಡುವುದು ನಿಮ್ಮ ಉದ್ದೇಶವಾಗಿರಬೇಕು. ನಿಮ್ಮನ್ನು ನೀವು ಸಂತೋಷವಾಗಿಡಿ. ಜತೆಗೆ ಆಕೆಯ ಮುಖದಲ್ಲಿ ಯಾವಾಗಲೂ ನಗು ತುಂಬಿರಲಿ. ದುಃಖದ ಛಾಯೆ ಅವಳ ಮೇಲೆ ಮೂಡದಿರುವಂತೆ ನೋಡಿಕೊಳ್ಳುವ ಹೊಣೆ ನಿಮ್ಮದಾಗಲಿ.

*ತಪ್ಪುಗಳನ್ನು ಹುಡುಕುವ ತನಕ ಕಾಯಬೇಡಿ:
ಒಮ್ಮೊಮ್ಮೆ ನಿಮ್ಮ ಗುಣದಲ್ಲಿ ಏರುಪೇರಾಗಬಹುದು. ಆ ನಿಮ್ಮ ಗುಣ ಅಥವಾ ನಡತೆ ಬಗ್ಗೆ ಆಕೆಗೆ ತೊಂದರೆಯಾಗುತ್ತಾ ಅದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಆಕೆ ನಿಮ್ಮ ತಪ್ಪುಗಳನ್ನು ಹುಡುಕಿ ಹೇಳುವ ತನಕ ಕಾಯಬೇಡಿ. ನಿಮ್ಮನ್ನು ನೀವೇ ತಿದ್ದಿಕೊಳ್ಳಲು ಪ್ರಯತ್ನಿಸಿ.

*ವಾದಗಳನ್ನು ಗೆಲ್ಲಲು ಪ್ರಯತ್ನಿಸಬೇಡಿ:
ಮಾತು ಬಹಳ ಪ್ರಾಮುಖ್ಯತೆ ಪಡೆದಿದೆ ಹಾಗೆಯೇ ಅಪಾಯಕಾರಿ ಕೂಡ. ಹಾಗಾಗಿ ಮಾತಿನ ಅರಮನೆಗಿಂತ ಮೌನದ ಗುಡಿಸಲೇ ಚೆನ್ನ ಎಂಬಂತೆ ಕೆಲವೊಮ್ಮೆ ಮೌನವೂ ಕೂಡ ಲಾಭವನ್ನು ನೀಡುತ್ತದೆ. ಯಾವಾಗಲೂ ನೀವೇ ಸರಿಯಾಗಬೇಕೆಂದಿಲ್ಲ. ಕೆಲವು ಸಲ ಆಕೆ ಕೂಡ ವಾದ ಗೆಲ್ಲಲು ಬಿಡಿ.

*ಕ್ಷಮೆ ಹಿಂಜರಿಯಬೇಡಿ:
ಯಾರೊಬ್ಬರೂ ಕೂಡ ಸಂಪೂರ್ಣವಾಗಿ ಪರಿಪೂರ್ಣರಾಗಿರುವುದಿಲ್ಲ. ಇದಕ್ಕೆ ನೀವೂ ಹೊರತಾಗಿಲ್ಲ. ಇದರಿಂದ ಯಾವುದೇ ತಪ್ಪು ಮಾಡಿದರೆ ಅದನ್ನು ಅರ್ಥ ಮಾಡಿಕೊಂಡು ಕ್ಷಮೆ ಕೇಳಲು ಹಿಂಜರಿಯಬೇಡಿ. ಹಾಗೆ ಮಾಡುವುದರಿಂದ ನೀವು ಇನ್ನಷ್ಟು ಪ್ರೀತಿ ಪಾತ್ರರಾಗುತ್ತೀರಿ.

ಈ ಎಲ್ಲಾ ಸೂತ್ರಗಳನ್ನು ಪಾಲಿಸಿ ಪ್ರೀತಿಯಿಂದ ನಿಮ್ಮ ಮನದನ್ನೆಯನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳಿ. ನಿಮ್ಮ ಬಾಳು ಹಸನಾಗಿ ಬಂಗಾರವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close