About Us Advertise with us Be a Reporter E-Paper

ವಿ +

ಕುತೂಹಲ ಕಲಿಕೆಯ ರಾಜಮಾರ್ಗ

ಎಲ್.ಪಿ.ಕುಲಕರ್ಣಿ

ಚಿಕ್ಕ ಮಗುವನ್ನು ಎಲ್ಲಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅದು ಎಷ್ಟೆಲ್ಲಾ ಕುತೂಹಲ ಭರಿತ ಪ್ರಶ್ನೆಗಳನ್ನು ಕೇಳುತ್ತಿರುತ್ತದಲ್ಲವೇ! ಬಸ್‌ನ ಕಿಟಕಿಯಲ್ಲಿ ಇಣುಕಿ ನೋಡುತ್ತಲೇ, ‘ಅಯ್ಯೋ! ರಸ್ತೆಯ ಬದಿಯಿರುವ ಮರಗಿಡಗಳೆಲ್ಲಾ ಓಡುತ್ತಿವೆ, ಹೀಗೇಕೆ?’ ಎಂದು ಕೇಳುತ್ತದೆ. ಸುಮ್ಮನಿರು, ಅಂದರೂ ಸಹ ಆ ಮಕ್ಕಳು ಸುಮ್ಮನಿರುವುದಿಲ್ಲ. ಅವು ಪಿಳಿಪಿಳಿ ಕಣ್ಣು ಬಿಡುತ್ತಾ ತಮ್ಮ ಸುತ್ತಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹತ್ತಿರದಲ್ಲಿ ಕುಳಿತ ಹಿರಿಯರಿಗೆ ಬಿಟ್ಟುಬಿಡದೇ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿರುತ್ತವೆ. ಅವುಗಳಿಗೆ ಉತ್ತರ ಸಿಕ್ಕಾಗ ಹರ್ಷಗೊಳ್ಳುತ್ತವೆ.

ಹೌದು! ನಾವೇಕೆ ಆ ಮಕ್ಕಳಂತೆ ಖುಷಿ ಇರಲು ಸಾಧ್ಯವಿಲ್ಲ ಎಂದು ಮನದಲ್ಲಿ ಪ್ರಶ್ನಿಸಿಕೊಂಡರೆ ಆಗ ನಮಗೆ ದೊರಕುವ ಉತ್ತರ ‘ಕುತೂಹಲ ಪ್ರವೃತ್ತಿ’. ಇದೇ ನಡವಳಿಕೆ ಮಗು ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು, ಬುದ್ಧಿವಂತನಾಗಲು ಸಹಕಾರಿಯಾಗುತ್ತದೆ. ಮಕ್ಕಳು ತಮ್ಮ ಸುತ್ತಲು ಘಟಿಸಿದ ಘಟನೆಗಳ, ಹೊಸ ವಸ್ತುಗಳ, ಹೊಸತುಗಳ ಕುರಿತು ಅತೀ ಕೌತುಕದಿಂದಲೇ ಗಮನಿಸುತ್ತವೆ. ಅವುಗಳ ಮನದಲ್ಲಿ ಪ್ರತೀ ಕ್ಷಣವೂ ಸಾವಿರಾರು ಪ್ರಶ್ನೆಗಳು ಮೂಡುತ್ತಿರುತ್ತವೆ. ಆ ಪ್ರಶ್ನೆಗಳನ್ನು ಹಿರಿಯರ ಮುಂದಿಟ್ಟು, ಉತ್ತರ ಪಡೆದು ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತವೆ. ಆದರೆ ಹಿರಿಯರಿಗೂ ಹಾಗೆ ಮನದಲ್ಲಿ ಸಾವಿರಾರು ಪ್ರಶ್ನೆಗಳು ಕಾಡಿದರೂ ಕೂಡಾ ತಮ್ಮ ಮನದಲ್ಲಿ ಒತ್ತಾಯ ಪೂರ್ವಕವಾಗಿಯೋ ಇಲ್ಲವೇ ಅಲಕ್ಷದಿಂದಲೋ ಅದುಮಿಟ್ಟುಕೊಳ್ಳುತ್ತಾರೆ.

ಈ ಕಾರಣದಿಂದಲೇ ಮಕ್ಕಳು ಹಿರಿಯರಿಗಿಂತ ಹೆಚ್ಚಿನ ಗ್ರಹಿಕಾ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಅಲ್ಲದೇ ಪ್ರತಿಯೊಂದು ವಿಷಯವನ್ನು ಬಹುಬೇಗ ಅರ್ಥಮಾಡಿಕೊಂಡು ಕಲಿತುಬಿಡು ತ್ತಾರೆ. ನಾಲ್ಕೈದು ವರ್ಷ ವಯೋಮಾನದ ಮಗು ಕೆಲವು ಸಂಸ್ಕೃತ ಶ್ಲೋಕಗಳನ್ನೂ ಇಲ್ಲವೇ 30ರ ವರೆಗಿನ ಮಗ್ಗಿಗಳನ್ನೋ ಬಾಯಿಪಾಠ ಮಾಡಿ, ನೆನಪಿಟ್ಟು ಪಟಪಟ ಅರಳು ಹುರಿದಂತೆ, ಎಲ್ಲೆಂದ ರಲ್ಲಿ ಕೇಳಿದ ಹೇಳಿಬಿಡುತ್ತದೆ. ಆದರೆ ಬಹುಪಾಲು ಹಿರಿಯರಿಗೆ ಶ್ಲೋಕಗಳು ಒತ್ತಟ್ಟಿಗಿರಲಿ, 10 ರವರೆಗಿನ ಮಗ್ಗಿ ನೆನಪಿಗೆ ಬಂದರೆ ಅದು ಅವರ ಪುಣ್ಯ!

ನಾವು ಮನೆಯಲ್ಲಿ ಸುಮ್ಮನೆ ಕುಳಿತಾಗ ಹೊರಗಡೆ ಓಣಿಯಲ್ಲಿ ನಮ್ಮ ಮಗ್ಗುಲ ಮನೆಯವರು ಜಗಳವಾಡುವ ಸದ್ದು ಕೇಳಿಸಿದ ತಕ್ಷಣ ಸುಮ್ಮನಿರುತ್ತೇವೆಯೇ?, ಇಲ್ಲ! ಹೊರಗಡೆ ಬಂದು ಏನಾಯ್ತೆಂದು ಕುತೂಹಲದಿಂದ ವಿಚಾರಿಸುತ್ತೇವೆ. ಯಾರಾದರೂ ಈಗ ತಾನೇ ಬಿಡುಗಡೆಯಾದ ಸಿನಿಮಾದ ಕತೆ ಹೇಳುತ್ತಿದ್ದರೆ, ಮುಂದೇನಾಗುತ್ತದೆಂದು ಬಲು ಆಸಕ್ತಿಯಿಂದ ಕೇಳುತ್ತೇವಲ್ಲವೇ! ಇದೇ ಕುತೂಹಲ ಪ್ರವೃತ್ತಿ! ಹೀಗೆ ವಿಷಯಗಳಲ್ಲಿ ಜಾಗೃತಗೊಳ್ಳುವ ನಮ್ಮ ಮನಸ್ಸು ನಾವು ಮಾಡುವ ಕೆಲಸದಲ್ಲಿ, ವೃತ್ತಿಯಲ್ಲಿ, ವಿದ್ಯಾರ್ಥಿಗೆ ಓದಿನಲ್ಲಿ, ಶಿಕ್ಷಕನಿಗೆ ಕಲಿಸುವುದರಲ್ಲಿ ಇದ್ದರೆ ಯಶಸ್ಸು ಸಾಧ್ಯ.

ಕುತೂಹಲ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ?

ವಿಭಿನ್ನ ಸಂದರ್ಭಗಳಲ್ಲಿ ನಮ್ಮ ಮನದಾಳದಲ್ಲಿ ಮೂಡುವ ಪ್ರಶ್ನೆ ಗಳಿಗೆ ಎಚ್ಚರಿಕೆಯಿಂದಿದ್ದು ಸಮರ್ಪಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು. ನಮಗೆ ಯಾವುದೇ ಹೊಸ ವಸ್ತು, ಹೊಸ ಸನ್ನಿವೇಶ, ಸಂದರ್ಭಗಳು ಎದುರಾದಾಗ ಈ ಮುಂದಿನ ಪ್ರಶ್ನೆಗಳು ನಮ್ಮ ಮನದಲ್ಲಿ ಸಕರಾತ್ಮಕವಾಗಿ ಮೂಡಬೇಕು.

ಏನು? ಯಾಕೆ? ಹೇಗೆ? ಯಾರು? ಯಾವಾಗ?

ಮೊಬೈಲ್ ಸಂಖ್ಯೆ, ಟಿ.ವಿ ಕಾರ್ಯಕ್ರಮಗಳು, ಗಡಿಯಾರದ ಸಮಯ, ಉಳಿದ ಸಾಮಗ್ರಿಗಳು, ವಾಹನಗಳು.. ಹೀಗೆ ಪ್ರತೀ ವಸ್ತುವಿನ ಗುಣವೈಶಿಷ್ಟ್ಯಗಳ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವಿಕೆ.

ನಮಗೆ ನಾವೇ ಸವಾಲು ಹಾಕಿಕೊಳ್ಳಬೇಕು

ಇವತ್ತು ಕೊಂಡುಕೊಂಡ ಪುಸ್ತಕವನ್ನು ಎರಡು ದಿನಗಳಲ್ಲಿ ಓದಿಯೇ ಮುಗಿಸು ತ್ತೇನೆ. ಈ ಚಿಕ್ಕ ಕಾರ್ಯವನ್ನು ಈಗ ಮಾಡಿಯೇ ತೀರುತ್ತೇನೆ ಎಂಬಿತ್ಯಾದಿಗಳನ್ನು ಪಟ್ಟಿಮಾಡಬಹುದು.

ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು

ಅಂದರೆ ನಾವು ಮಾಡುವ ಕೆಲಸ, ಪ್ರತಿಕ್ರಿಯೆ, ಹವ್ಯಾಸ, ಅಲ್ಲ ನಾವು ನೋಡುವ, ಕೇಳುವ, ಸ್ಪರ್ಶಿಸುವ, ಆಘ್ರಾಣಿಸುವ ಪ್ರತೀ ಸಂದರ್ಭದಲ್ಲೂ ನಮ್ಮಲ್ಲಿ ನಾವು ಪ್ರಶ್ನೆಹಾಕಿಕೊಳ್ಳುವುದನ್ನು ಮರೆಯಬಾರದು.

Tags

Related Articles

Leave a Reply

Your email address will not be published. Required fields are marked *

Language
Close