About Us Advertise with us Be a Reporter E-Paper

ಗುರು

ಮರಣವೇ ಮಹಾನವಮಿ

ಜಯಶ್ರೀ.ಜೆ.ಅಬ್ಬಿಗೇರಿ

ಜೀವನವೆಂಬುದು ಅಂತ್ಯದಲ್ಲಿ ಚಲಿಸುವುದು ಅನಿವಾರ್ಯ. ಆದರೆ ನಾವು ಪ್ರೀತಿ ಮತ್ತು ಭರವಸೆಯ ಬಣ್ಣಗಳನ್ನು ಬದುಕಿಗೆ ತುಂಬಿ ಎಂದಿದ್ದಾರೆ ರಷ್ಯಾದ ಕಲಾವಿದ ಮಾರ್ಕ್ ಚೆಗಲ್. ಈ ನುಡಿ ಜೀವನ ಪ್ರೀತಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಹುರಿ ದುಂಬಿಸುತ್ತದೆ. ‘ಜೀವನದ ದುರಂತ ಸಾವಲ್ಲ. ಆದರೆ ನಾವು ಬದುಕಿರುವಾಗ ನಮ್ಮೊಳಗೆ ನಾವು ಸಾಯಲು ಬಿಡುವಂತಹದ್ದು’ ಎಂಬ ಮನೋಜ್ಞ ಹೇಳಿಕೆಯನ್ನು ನೀಡಿ ನಮ್ಮ ಕಣ್ತೆರೆಸುವಂಥ ಪ್ರಯತ್ನ ಮಾಡಿದ್ದು ನಾರ್ಮನ್ ಕಸಿನ್‌ಸ್. ಬದುಕಿನ ಹಾದಿಯಲೆಲ್ಲ ಸಿಗುವ ಅನೇಕಾನೇಕ ಆಸಕ್ತಿದಾಯಕ ವಿಚಿತ್ರ ತಿರುವುಗಳಲ್ಲಿ ಸಾವೂ ಒಂದು. ಇದು ಉಳಿದೆಲ್ಲ ತಿರುವುಗಳಿಗಿಂತ ಹೆಚ್ಚು ಭಯಾನಕ. ಸಾವಿಗಿಂತ ಸಾವಿನ ಭಯವೇ ದೊಡ್ಡದು. ಸಾವಿನ ಭಯ ಎಂಥವರನ್ನೂ ಬಿಟ್ಟಿಲ್ಲ. ನಾ ನೀ ಎನ್ನುವ ಅತಿರಥ ಮಹಾರಥರ ಜಂಘಾಬಲವನ್ನು ಉಡುಗಿಸಿದ ದಾಖಲೆ ಇದರ ಹೆಸರಿನಲ್ಲಿದೆ. ಇಂಗ್ಲೀಷಿನ ಖ್ಯಾತನಾಮ ಕವಿ ಷೇಕ್‌ಸ್ಪಿಯರ್‌ನಿಗೂ ಈ ಸಾವಿನ ಭಯ ಕಾಡಿತ್ತು ಎನ್ನುವುದಕ್ಕೆ ಆತ ರಚಿಸಿದ ಸುನೀತ ಈ ಸಾವೇ ಒಮ್ಮೆ ಸತ್ತಿದ್ದರೆ (ಇಫ್ ಡೆತ್ ಡೈಸ್ ಒನ್‌ಸ್) ಸಾಕ್ಷಿಯಾಗಿದೆ.

ಸಾವಿಗೆ ಸವಾಲೊಡ್ಡುವ ಶಿವ ಶರಣರು

ಹುಟ್ಟಿದ ದಿನವೇ ಹುಟ್ಟಿನ ಬೆನ್ನಿಗೆ ಸಾವು ಅಂಟಿಕೊಂಡು ಬಂದಿದೆ. ಹುಟ್ಟಿದ್ದು ನಾವು ಪ್ರತಿದಿನವೂ ಸಾವಿಗೆ ಸಮೀಪ ವಾಗುತ್ತಿದ್ದೇವೆ. ಪ್ರತಿದಿನವೂ ಇದು ನಮ್ಮ ಜೀವನದ ಕೊನೆಯ ದಿ ವೆಂದು ಬದುಕಬೇಕು. ನಾಳೆ ಬಪ್ಪುದು ನಮಗಿಂದೇ ಬರಲಿ. ಇಂದು ಬಪ್ಪುದು ನಮಗೀಗಲೇ ಬರಲಿ. ಇದಕಾರಂಜುವರು. ಇದಕಾರಳಕು ವರು?ಎಂದು ಸಾವಿಗೇ ಸವಾಲು ಹಾಕಿ ಸಾವಿಗೆ ಎದೆ ಕೊಟ್ಟು ನಿಂತು ಜೀವನ ಸಾರ್ಥಕಗೊಳಿಸಿಕೊಂಡವರು ಶರಣರು. ಬದುಕು ಒಂದು ಉತ್ಸವವಾದರೆ. ಮರಣ ಮಹಾನವಮಿ ಎಂದು ನುಡಿದು ನಡೆದು ತೋರಿದ ಶರಣ ಸಂಸ್ಕೃತಿಯ ಹಿರಿಮೆಗೆ ಶರಣು ಎನ್ನಲೇಬೇಕು.

ಕಂದಕ ಕಡಿಮೆಯಿಲ್ಲ

ಆಧುನಿಕತೆಯ ತಿಕ್ಕಾಟದಲ್ಲಿ ಏನೆಲ್ಲವನ್ನು ಗೆದ್ದು ಬೀಗುತ್ತಿರುವ ನಮಗೆ ಸಾವು ಬಿಡಿಸಲಾರದ ಯಕ್ಷ ಪ್ರಶ್ನೆಯಂತೆ ಕಾಡುತ್ತಿದೆ. ಇಂಥ ಕ್ರೂರ ಸಾವು ಮನುಷ್ಯ ಮನುಷ್ಯರ ನಡುವಿನ ಕಂದಕ ವೈಮನಸ್ಯ, ಭಿನ್ನಾ ಭಿಪ್ರಾಯಗಳನ್ನು ಕಡಿಮೆ ಮಾಡುತ್ತಿಲ್ಲವೆನ್ನುವುದು ಸೋಜಿಗದ ಸಂಗತಿ. ಬದುಕು ಶಾಶ್ವತವಲ್ಲ ಎಂದು ಗೊತ್ತಿದ್ದೂ ಕೋಟಿ ಕೋಟ ಗಳಿಸುವ, ಬೇಕಾಗಿದ್ದನ್ನು ಬೇಡವಾಗಿದ್ದನ್ನು ಕೂಡಿಡುವ ಹುಚ್ಚು ಹೆಚ್ಚಿಸಿ ಕೊಂಡಿದ್ದೇವೆ. ಇತರ ವ್ಯಕ್ತಿಗಳ ಓರೆ ಕೋರೆಗಳ ಕುರಿತೇ ನಮ್ಮ ಮಾತು ಸುತ್ತುತ್ತಿರುತ್ತದೆ. ಒಮ್ಮೊಮ್ಮೆ ಸದಾಶಯದ ಅದು ಮೇಲ್ಪದರದಲ್ಲಿ ಮಾತ್ರ ಇರುತ್ತದೆ. ಅದೊಂದು ತೋರಿಕೆಯ ಪೋಳ್ಳುತನದ ನಾಜೂಕಿನ ಧೋರಣೆಯಷ್ಟೇ ಆಗಿರುತ್ತದೆ.

ಕೆಟ್ಟದ್ದಕ್ಕಾಗಿ ಕೂಡುವ ಕೂಟ

ಸಾವಿನಲ್ಲಿ ಸಾರ್ಥಕತೆ ಕಾಣಬೇಕೆಂದರೆ ಒಳಿತಿನ ಎಳೆಗಳು ಬದುಕಿನ ಒಡಲಲ್ಲಿ ಎಲ್ಲೆಲ್ಲೂ ಹರಡಿರಲಿ. ದುಃಖದಲ್ಲಿ ಮುಳುಗಿದ ವ್ಯಕ್ತಿಗಳ ವಿಷಯ ನಮಗೇಕೆಂದು ಅವರಲ್ಲಿರುವ ನೇತ್ಯಾತ್ಮಕ ಗುಣಗಳನ್ನು ಮೆರೆಸಿ ಮೂಲೆ ಗುಂಪು ಮಾಡಲು ಹವಣಿಸುತ್ತೇವೆ. ದುಃಖಿತರ ಬಾಳಲ್ಲಿ ಬಿರುಗಾಳಿ ಬೀಸಲು ಗುಂಪು ಕಟ್ಟಿಕೊಂಡು ಹೊಂಚು ಹಾಕುತ್ತೇವೆ. ಒಬ್ಬ ಮೂರ್ಖ ಸಮುದ್ರದೊಳಕ್ಕೆ ಎಸೆಯುವ ಕಲ್ಲನ್ನು ನಲವತ್ತು ಬುದ್ಧಿವಂತರು ಹೊರಕ್ಕೆ ತರಲಾರರು. ಕೆಟ್ಟದ್ದಕ್ಕಾಗಿ ಕೂಡುವ ಕೂಟ ಒಳತಿಗೆ ಕೂಡುವುದಿಲ್ಲ. ಒಳ್ಳೆಯ ಆಲೋಚನೆಗಳು ಆನಂದ ಆರೋಗ್ಯ ನೀಡುತ್ತವೆ. ಕೆಟ್ಟ ಆಲೋಚನೆಗಳು ಹೊಸ ರೋಗ ತರುತ್ತವೆ ಎಂಬುದು ರಾಮಕೃಷ್ಣ ಪರಮಹಂಸರ ನುಡಿ. ಇದು ಗೊತ್ತಿದ್ದೂ ಒಳಿತನ್ನು ಮಾಡಲಾಗದ ಮನಸ್ಥಿತಿ ನಮ್ಮದು.ಅಂತಃಶಕ್ತಿಗೆ ಚೈತನ್ಯ ಒದಗಿಸುವ, ಸತ್ಪೇರಣೆ ನೀಡುವ ಒಳತಿನ ಧೋರಣೆಗೆ ಮುಂದಾಗಬೇಕಿದೆ.

ಸಾವಿನಲ್ಲೂ ಬದುಕಿನ ಪಾಠ

ಒಬ್ಬರ ಸಾವಿನಲ್ಲಿ ಮತ್ತೊಬ್ಬರ ಬದುಕಿಗೆ ಬೇಕಾಗುವ ಪಾಠಗಳು ಅವಿತಿ ರುತ್ತವೆ ಎನ್ನುವ ಮಾತು ಸತ್ಯ. ಮೀರಿದ ಬೆಟ್ಟದೆತ್ತರದಷ್ಟು ಸಾಧನೆ ಮೆರೆದ ಮಹನೀಯರು ನಿರ್ಗತಿಕನಂತೆ ಕೊನೆಯುಸಿರೆಳೆದರೆ ಅದು ಅಚ್ಚರಿಯಲ್ಲವೇ? ಯಾವೆಲ್ಲ ಸೌಕರ್ಯಗಳಿದ್ದರೂ ಕೊನೆ ಗಳಿಗೆ ಯಲ್ಲಿ ನಿಷ್ಪ್ರಯೋಜಕವಾದವು. ಅದು ಅವರ ಹಣೆ ಬರಹ ವಿಧಿಯಾಟ ಎಂಬ ಹಣೆ ಪಟ್ಟಿ ಕಟ್ಟಿ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತೇವೆಯೇ ಹೊರತು ಪಾಠ ಕಲಿಯುವ ಗೋಜಿಗೆ ಹೋಗುವುದಿಲ್ಲ. ಬದುಕಿನ ಕೊನೆಯ ದಿನಗಳನ್ನು ಎಣಿಸುವಾಗ ಸಾವಿನ ಭಯದಲ್ಲೂ ಪ್ರಾಯಶಃ ಮತ್ತೊಬ್ಬರ ಸಾವಿನಿಂದ ನಾನೇಕೆ ಪಾಠ ಕಲಿಯಲಿಲ್ಲ ಎಂಬ ಕೊರಗು ಹೆಚ್ಚೆಚ್ಚು ಕಾಡುತ್ತದೆ. ಒಬ್ಬ ತನ್ನ ಕುರಿಗಳಿಗೆ ಯಾವಾಗಲೂ ಅವುಗಳ ಹಾಗೂ ತನ್ನ ಹಿತಾಕಾಂಕ್ಷೆಗಳು ಒಂದೇ ಎಂಬದನ್ನು ತಿಳಿಯ ಪಡಿಸಲು ಪ್ರಯತ್ನಿಸುತ್ತಾನೆ. ಇದು ಫ್ರೆಂಚ್ ಲೇಖಕ ಸ್ಟೆನ್ ಢಾಲ್‌ನ ನುಡಿ. ಹೀಗಾಗಿ ಅತಿಯಾದ ವ್ಯಾಮೋಹವನ್ನು ಬಿಟ್ಟು ಸಕಲ ಜೀವಿ ರಾಶಿಯ ಹಿತಾಕಾಂಕ್ಷೆಗಳ ಬೆನ್ನು ಹತ್ತಬೇಕಿದೆ.

ಜಾತಸ್ಯ ಮರಣಂ ದೃವಂ

ಜಾತಸ್ಯ ಮರಣಂ ದೃವಂ ಅಂದಮೇಲೆ ಸಾವಿಗೆ ಅಂಜಿ ಅರ್ಥವಿಲ್ಲ. ಬಯಲೊಂದು ಬಯಲಾಗಿ ಬಯಲೊಳಗೆ ಕೂಡುವುದೇ ಮುಮುಕ್ಷದ ಪರಿ. ಪಂಚ ಮಹಾಭೂತಗಳಿಂದ ನಿರ್ಮಿತವಾದ ಈ ಶರೀರ ಪಂಚಮಹಾಭೂತಗಳಲ್ಲಿ ಲೀನವಾಗಲೇಬೇಕು. ಬಾರದು ಬಪ್ಪದು ಬಪ್ಪದು ತಪ್ಪದು ಎಂದು ಮನಗಂಡಿದ್ದರೂ ಲೌಕಿಕ ಲೋಕದ ಪ್ರಲೋಭನೆಗೆ ಒಳಗಾಗಿ ನೆಮ್ಮದಿ ಆತ್ಮ ಶಾಂತಿ ಕಳೆದುಕೊಂಡಿದ್ದೇವೆ. ನೀನು ಹುಟ್ಟಿದಾಗ ಲೋಕ ನಗುತ್ತಿತ್ತು ನೀನು ಅಳುತ್ತಿದ್ದೆ. ನೀನು ಸಂತೋಷದಿಂದ ಸಾಯುವಾಗ ಇಡೀ ಲೋಕ ಅಳುವಂತಹ ಬದುಕನ್ನು ಬದುಕು ಎಂಬ ಮಹಾತ್ಮರ ನುಡಿಯಂತೆ ಬದುಕೋಣ. ಅರಿವು ಆಚರಣೆಗಳ ಒಂದಾಗಿಸಿ ಜೀವನವನ್ನು ಮಣ್ಣಿನ ತೂತಿನ ಮಡಿಕೆ ಯನ್ನಾಗಿಸದೇ ಪ್ರಜ್ವಲಿಸುವ ಹಣತೆಯನ್ನಾಗಿಸೋಣ.

(ಸಂಪರ್ಕ-9449234142)

Tags

Related Articles

Leave a Reply

Your email address will not be published. Required fields are marked *

Language
Close