About Us Advertise with us Be a Reporter E-Paper

ವಿರಾಮ

ಓಡುವ ರೈಲಿನಲ್ಲಿ ಕಾಡುವ ದೆವ್ವಗಳು

ಪ್ರೊ ಜಿ ಎಚ್ ಹನ್ನೆರಡುಮಠ

ನಾನು ಎಷ್ಟು ದೊಡ್ಡ ಮನುಷ್ಯನೆಂದರೆ, ನನ್ನ ಒಂದು ಗಂಟೆ ಉದ್ದಾನ ವೀರಭದ್ರ ಭಾಷಣಕ್ಕಾಗಿ ಆ ಮಠದವರು ನನಗೆ ಹವಾನಿಯಂತ್ರಿತ ಏ.ಸಿ ರೇಲ್ವೆಬೋಗಿ ಬುಕ್ ಮಾಡಿದರು. ನನ್ನ ಜೋಡಿ ನನ್ನ ಹೇಂತಿಗೂ ಏಸಿ ಡಬ್ಬಿ. ಅಬ್ಬಬ್ಬಾ. ಜೀವಮಾನ ಪೂರ್ತಿ ಬೋಗಿಯಲ್ಲೇ ಅಡ್ಡಾಡಿದ ನಮಗೆ ಇದೊಂದು ದೇವಲೋಕದ ಫ್ರೀ ಪಾಸ್ ಪಯಣ.

ಆಹಾ, ಆಹಾ, ಅನ್ನುತ್ತ ಮನೆಯಿಂದ ತಂದ ಹೇರಳ ಭಜಿಮಿರ್ಚಿ ಪಟ್ಟಣಗಳನ್ನು ಕೈಯಲ್ಲೇ ಹಿಡಕೊಂಡು ರೈಲು ಹತ್ತಿದೆವು. ಒಂದು ಅದ್ಭುತ ವಿಚಿತ್ರ ಅಂದರೆ ಈ ಡುಂಡುಂ ಡೊಣಗ ಡುಮಿಕ್ಯಾ ಡಬ್ಬಿವಳಗ ನಾನು ಮತ್ತೂ ನನ್ನ ಹೆಂಡತಿ ಇಬ್ಬರೇ ಇಬ್ಬರು. ಮತ್ತೊಂದು ನರಪಿಳ್ಳಿ ಕೂಡಾ ಇಲ್ಲ. ಈವರೆಗೆ ಆ ಸೆಕೆಂಡ್‌ಕ್ಲಾಸ್ ಡಬ್ಬಿಗಳಲ್ಲಿ ಒಬ್ಬರ ತೊಡೆಯ ಮೇಲೆ ಒಬ್ಬರು ಕುಂತು ಪ್ರಯಾಣಿಸುವ ಯಾತನೆ ಎಲ್ಲಿ! ಇಲ್ಲಿ ಈ ಡಂಡಂ ಡಬ್ಬಿಗೆ ನಾವೇ ಧಣಿಗಳು. ಅವಳಿಗೆ ನಾನು! ನನಗೆ ಅವಳು! ಎರಡು ಗಂಟೆ ಪ್ರಯಾಣದ ನಂತರ ನನ್ನ ಹೆಂಡತಿ ಆ ಅಂತ ಬಾಯ್ತೆಗೆದು ಆಕಳಿಸತೊಡಗಿದಳು. ‘ಯಾಕ?’ ಅಂತ ಕೇಳಿದೆ. ಅವಳೆಂದಳು ‘ಆ ಸೆಕಂಡ್‌ಕ್ಲಾಸ ಡಬ್ಬೀನ ಪಾಡ್ರಿ. ಇಲ್ಲೆ ನಗೋರಿಲ್ಲಾ. ಅಳೋರಿಲ್ಲಾ. ಒಂದವ್ಯಾಳೆ ನಾವ ಸತ್ರೂ ಯಾಕ ಸತ್ರಿ ಅಂತ ಕೇಳೋರಿಲ್ಲಾ. ಇಲ್ಲೆ ಭೇಸಿಲ್ಲ ಬಿಡ್ರಿ. ವಣಾವಣಾ. ಟೊಣಾಟೊಣಾ’

ನಾನಂದೆ ‘ಹೌದು ಕಣೇ. ಅಲ್ಲೆ ಜನರಲ್ ಡಬ್ಯಾಗ ಆ ಡಂಡಂ ದುಂಡಮೈಕಟ್ಟಿನ ಹರೇದ ಹುಡಿಗಿ. ಹಾಳಹರಕ ಕುಬಸಾ ಎತ್ತಿ ಎಂಥಾ ಚಂದ ಸಿನೇಮಾ ಹಾಡ ಹಾಡೀದ್ಲು ನೋಡು. ಏನ ಕಂಠಾ. ಏನ ಸೊಂಟಾ’

ಅವಳೆಂದಳು-‘ಹೌದ್ರಿ..ಅವತ್ತ ಆ ಹುಡಿಗೀಗೆ ಒಂದ ರೂಪಾಯಿ ಕೊಡೂ ಬದ್ಲೀ ಯಾಡ್ಡ ರೂಪಾಯಿ ಕೊಟ್ರಿ.. ವಯಸ್ಸಾದ್ರೂ ನಿಮ್ಮ ಚಿಲ್ಲರ ಬುದ್ದಿ ಬಿಡಲಿಲ್ಲಾ’

ಏ ಏ, ಮೆಲ್ಕ ಮೆಲ್ಕ.. ಯಾರರೆ ಕೇಳೀದ್ರ ಹ್ಯಾಂಗ?’

ಅವಳೆಂದಳು-‘ಇಲ್ಯಾರ ಕೇಳ್ಬೇಕು. ಸತ್ತೇವೆಂದ್ರೂ ನೀರ ಹಾಕೋರು ಯಾರೂ ಈ ಇಲ್ಲಾ. ನಿಮಗ ನಾನು. ನನಗ ನೀವು’

ಹಾಂಗಿದ್ರ ಪರವಾಗಿಲ್ಲಾ. ಬೇಕಾದಷ್ಟ ಬಯ್ಯಿ’

ತುಪ್ರೀ ಕಾಯಿ ಭಜಿ

ಇಬ್ಬರೂ ಫ್ರೀ ಆಗಿ ಭಜಿ ಮಿರ್ಚಿ ಪಟ್ನಾ ಬಿಚ್ಚಿ ಧುಮಶ್ಯಾನ್ ತಿನ್ನತೊಡಗಿದೆವು. ಈ ದಿನ ಅವಳು ತಂದದ್ದು ತುಪ್ರೀ ಕಾಯಿ ಭಜಿ ಬೇರೆ! ಪುರಮಾಶಿ ರುಚಿ. ಆದರೂ ಆ ಎಲ್ಲಾ ಭಜಿಮಿರ್ಚಿ ಅರ್ಧಾಮರ್ಧಾ ಮಾತ್ರ ತಿಂದು, ಉಳಿದದ್ದು ನಮ್ಮ ತಲಿದಿಂಬಿಗೆ ಇಟಗೊಂಡ ಮಲಗೀದ್ವಿ. ರಾತ್ರಿ ರಾಣಿನಿದ್ರಿ ಬಂತು!

ಅವಳು ಮತ್ತೆ ವಟಗುಟ್ಟಿದಳು ರೀರೀ, ಈ ಡಬ್ಬಿ ಬ್ಯಾಸ್ರ ಆತ್ರಿ. ಅಲ್ಲೇ ಭೇಸಿ. ಮುಂದಿಂದ ಟೇಸನ್ನಿನ್ಯಾಗ ಕೆಳಗ ಇಳದು ಅದ ಸೆಕೆಂಡ್‌ಕ್ಲಾಸ ಡಬ್ಬೀಗೆ ಹೋಗೂನ ಬರ್ರಿ. ಅಲ್ಲೆ ನಮ್ಮ ಸುಖಾ ದುಕ್ಕಾ ಕೇಳೋರು ಅದಾರು. ಕಷ್ಟಾನಷ್ಟಾ ಕೇಳೋರು ಅದಾರು. ಹೆಣ್ಣುಗಂಡು ಲಗ್ನಾಮುಂಜಿಮಕ್ಳುಮರಿಬೀಗ್ರುಬಿಜ್ರು ಏನೆಲ್ಲಾ ಕೇಳೋರ ಅದಾರು. ‘ಕೆಳಗ ಇದ್ದಷ್ಟು ಚಂದಾ. ಮ್ಯಾಲೆ ಬಂದಷ್ಟು ಬಂಡಾ.’ ಗುಮ್ಮನ ಗುಸುಕರ‌್ನ ನೋಡಬೇಕಂದ್ರ ಮ್ಯಾಲೆಮ್ಯಾಲೆ ಬರಬೇಕು ನೋಡ್ರಿ. ಇಲ್ಲೆ ಈ ಸಾವ್ಕಾರ್ಕಿ ಬುಬ್ಬಣಗಿತ್ತಿ ಡಬ್ಯಾಗ ಯಾಕ ಸತ್ತಿ ಅಂತ ಕೇಳೋರಿಲ್ಲಾ.

ಏ ತಡಿ ತಡಿ. ಅಲ್ಲೆ ಹೋದ್ರ ಆ ಗದ್ಲದಾಗ ನಾವು ಸಿಕ್ಕು ಚಪ್ಪರಕಾಯಿ ಚಟ್ನಿ ಆಗತೇವಿ.’

ಅವಳೆಂದಳುಏನಾದ್ರೇನ್ರೀ ಅಲ್ಲೆ ಮನಿಸ್ಯಾರ ಅದಾರು. ಇಲ್ಲೇನ್ರೀ ಹಾಳಬೋಳ ಏಸೀ ಡಬ್ಯಾಗ ಹೊರಗಿನ ಗಾಳಿ ಒಳಗ ಬರಂಗಿಲ್ಲಾ. ಒಳಗಿನ ಗಾಳಿ ಹೊರಗ ಹೋಗಂಗಿಲ್ಲಾ. ಎಲ್ಲಾ ಮುಗ್ಸು ಹಗೇಜ್ವಾಳ ಇದ್ದಂಗ. ನನಗ ಅಂಜಿಕಿ ಬರತೈತ್ರೀ ಇಲ್ಲೆ. ಯಾರರೆ ಕುತಿಗೀ ಹಿಚಕೀದ್ರ ಹ್ಯಾಂಗ್ರೀ?

ಇಷ್ಟರಲ್ಲಿ ರಾತ್ರಿ ಇಳಿಯಿತು. ಹೊರಗೆ ಕಣ್ಣುಕಟ್ಟಿತು. ಅವಳ ಮಟ್ಟಿಗೆ ಅವಳು. ನನ್ನ ಮಟ್ಟಿಗೆ ನಾನು ಕಣ್ಣು ಮುಚ್ಚಿದೆವು. ಏಸಿ ರೈಲಿನ ಆ ಅಪರಂಪಾರ ಸುಖದಲ್ಲಿ ತೊಟ್ಟಿಲಲ್ಲಿ ಇಟ್ಟು ತೂಗಿದಂತಾಯಿತು. ಹೋಳಿಗಿ ನಿದ್ದಿ. ಕಲಸಕ್ರಿ ಕನಸು. ಮಲ್ಲಿಗೀ ಮನಸು.

ನಡುರಾತ್ರಿಯಲ್ಲಿ ಅವಳು ಒಮ್ಮೆಲೇ ಚಿಟ್ಟನೇ ಚೀರಿ ಬುದುಂಗನೇ ಎದ್ದಳು. ‘ಯಾಕ, ಯಾಕ, ಯಾಕ?’ ಅಂತ ಕೇಳಿ ನಾನೂ ಎದ್ದೆ. ‘ಯಾರೊ ನನ್ನ ಗಲ್ಲದ ಮ್ಯಾಲೆ ಹಲ್ಲೀಲೆ ಕಚ್ಚೀದ್ರೀ. ನನ್ನ ಜೋರದಾರ ಆಗಿ ತಬ್ಬಿ ಹಿಡಕೊಂಡ್ರು. ನನ್ನ ಕಚ್ಚಂತ ಕಚ್ಚೀದ್ರು’

ಅಂದ್ರ ಏನು ಅರ್ಥಾ?’

ಅಯ್ಯಯ್ಯ. ನಾ ವಲ್ರೀ ಇಲ್ಲೆ. ಈ ಡಬ್ಯಾಗ ದೆವ್ವ ಅದಾವ್ರೀ. ದೆವ್ವಾ ನನ್ನ ಗಲ್ಲಾ ಕಡೀತಾವು. ಆ ಡಬ್ಬೀಗೆ ಹೋಗೂನ ಬರ್ರಿ..’

ದೆವ್ವ ಅಂದಕೂಡಲೆ ನಾನು ಬೆವರಿ ಬೆಚ್ಚಗಾಗಿ ಕೇಳಿದೆ.. ಜೀವಂತ ದೆವ್ವೋ ಸತ್ತ ದೆವ್ವೋ. ಆಯ್ತು. ಅಂಜಬ್ಯಾಡಾ. ನಾನೂ ಅದೇನಿ. ಅಂಜಬ್ಯಾಡಾ.. ’

ಗಲ್ಲ ಕಚ್ಚಿದ ದೆವ್ವ

ಮತ್ತೆ ಗದಗದ ನಡುಗುತ್ತ ಮಲಗಿದೆವು. ಅದೇ ಕತ್ತಲಗಡದ್ದು ಕಾಡಿಗ್ಗಪ್ಪು ರಾತ್ರಿ. ಚಂದ್ರ ಮೋಡದಲ್ಲಿ ಅಪ್ಪಚ್ಚಿಯಾಗಿ ಅಡಗಿಕೊಂಡಿದ್ದ. ನಡರಾತ್ರಿಯಲ್ಲಿ ಏನಾತೋ ಏನೊ ಯಾರೋ ನನ್ನ ಗಲ್ಲಕ್ಕ ಛಪ್ಪಂತ ಚಪ್ಪರಿಸಿ ಹೊಡೆದರು! ಅಯ್ಯಯ್ಯೋ. ಸತ್ನೆಪೋ ಅಂತ ಕೊಪ್ಪರಿಸಿಕೊಂಡು ಎದ್ದೆ.

ಯಾಕ್ರೀ ಯಾಕ್ರೀ?’ ಅಂತ ಅಂದಳು.

ನಾನೆಂದೆ. ‘ಅದ ದೆವ್ವಾ. ಅದ ಅದ. ನಿನ್ನ ಗಲ್ಲಾ ಕಚ್ಚಂತ ಕಡೀತು. ಈಗ ನನ್ನ ಗಲ್ಲಕ್ಕ ಛಪ್ಪಂತ ಇಕ್ಕರಿಸಿ ಹೊಡೀತು.’

ಅವಳು ಕೇಳಿದಳು– ‘ಗಂಡ ದೆವ್ವೋ ಹೆಣ್ಣ ದೆವ್ವೋ?’

ನಾನೆಂದೆ ಗಂಡು ಹೆಣ್ಣು ಯಾಡ್ಡೂ ದೆವ್ವಾ ಕಲಕಮಲಕ ನೋಡಿಲ್ಲೆ ನನ್ನ ಗಲ್ಲದಮ್ಯಾಲೆ ಬಾರ ಮೂಡ್ಯಾವು! ಗಲ್ಲ ಚುರುಚುರು ಉರಿಯುತ್ತಿತ್ತು.

ತುಂಬಾ ಜಾಣೆಯಾದ ಅವಳು ಒಂದು ಉಪಾಯ ಹೇಳಿದಳು-‘ರೀ ರೀ. ನಮ್ಮ ಅಜ್ಜಾ ಸುಡಗಾಡಗಟ್ಟಿ ಹತ್ರ ಇದ್ದ ನಮ್ಮ ಜೋಳದ ಹೊಲದಾಗ ಮಲಗಬೇಕಾದ್ರ ತನ್ನ ತಲೀಕೆಳಗ ಚಪ್ಪಲ್ಲ ಇಟಕೊಂಡ ಮಲಗತಿದ್ದಾ. ಚಪ್ಪಲ ಮ್ಯಾಲೆ ತಲಿ ಇಟ್ಟ ಮಲಗೀದ್ರ ದೆವ್ವಾ ಜಪ್ಪಯ್ಯಾ ಅಂದ್ರೂ ಬರಂಗಿಲ್ಲಾ. ಇದು ಸಿದ್ಧಾಂತಾ!’

ತಕ್ಷಣವೇ ನಾನು, ‘ಹೌದು.ಹೌದು. ನಾನೂ ಕೇಳೇನಿ ಈಸುದ್ದಿ. ಖರೆ ಖರೆ’ ಅನ್ನುತ್ತ ತಲೆಕೆಳಗೆ ನನ್ನ ಯಾಡ್ಡೂ ಚಪ್ಪಲ್ಲು ಜೋಡಿಸಿ ಇಟ್ಟು, ತಲಿ ಅದರ ಮೇಲೆ ಒತ್ತಿ ಇಟ್ಟು ಮಲಗಿದೆ.

ಮತ್ತೆ ಮನಗಂಡ ಮಾಬಾರೀ ನಿದ್ದಿ ತೊಗೊಂತು, ತೊಟ್ಲ ತೂಗಿದಂಗ. ಬಟ್ಲದಾಗ ತೇಲಿದಂಗ! ಕನಸಿನ

ರಾಣಿ ಕೈಹಿಡಿದು ಗದ್ದ ಸವರಿದಂಗಾತು. ತುಟಿಯಿಂದ ತುಟಿಗೆ ಜೇನುತುಪ್ಪಾ ಕುಡಿಸಿದಂಗಾತು. ಆಗ ಆ ಅಪರಾತ್ರ್ಯಾಗ ಒಮ್ಮುಗ್ಲೇ ಏನಾತೋ ಏನೋ, ಯಾರೋ ಒಬ್ರು ನನ್ನ ಮೂಗಿನ ಹೊಳ್ಳಿವಳಗ ಹರಕು ಕಸಬರಗಿ ತುರುಕಿ ತಿರುವಿದಂಗಾತು. ನನ್ನ ತುಟಿ ಹರಕೊಂಡಂಗಾತು. ಎಚ್ರಾದ್ರೂ ತುಟಿ ಹರಿಯೂದು ಬಿಟ್ಟಿದ್ದಿಲ್ಲಾ. ‘ಅಯ್ಯಯ್ಯೋ, ಸತ್ನೇಪೋ ಅಂತ’ ಬುದುಂಗನೇ ಅಡ್ರಾಸಿ ಎದ್ದೆ.

ಆಗ ಅವಳು ಬುದ್ದಿ ಓಡಿಸಿ ಹೇಳಿದಳು– ‘ರೀ, ಈಗ ನಾವಿಬ್ರೂ ಮಲಗೂದು ಬ್ಯಾಡಾ. ನಾನು ಕಣ್ಣತಗದು ಕಾಯ್ಕೊಂತ ಕುಂಡ್ರತೇನಿ. ನೀವು ಒಬ್ರು ಜಲ್ಲಬಿಟ್ಟ ಮಕ್ಕೋಳ್ರಿ. ಪಾಳೀ ಪ್ರಕಾರ ನಿದ್ದೀ ಮಾಡೂನು’

ಮತ್ತೆ ಟುಕ್ಕುಹಿಡಿದು ಮಲಗಿದೆ. ಕೆಲಹೊತ್ತಿಗೆ ನಿದ್ದಿ ಕಣ್ಣುಮುಚ್ಚಿ ಬಂತು. ರೈಲು ಓಡುತ್ತಿತ್ತು. ಮತ್ತೆ ಸಕ್ಕರಿ ಕನಸು ಜೇನುತುಪ್ಪಾ ಕುಡಿಸಿ ಬಂದವು. ಹೋಳಿಗಿ ತುಪ್ಪಾ ಉಂಡಂಗಾತು. ಗಂಟೆ ನಂತ್ರ, ಯಾರೋ ನನ್ನ ಎದೀಮ್ಯಾಲೆ ಢಂ ಢಂ ಢಂಮ್ಮಾರಿಸಿ ಜೋರಾಗಿ ಗುದ್ದಿದರು. ಉಸುರು ಸಿಕ್ಕಿತು. ಗಬಕ್ಕನೇ ಕಣ್ತೆರೆದಾಗ ನನ್ನ ಹೇಂತಿಯೇ ನನ್ನನ್ನು ಮನಗಂಡ ಗುದ್ದುತ್ತಿದ್ದಳು. ‘ಯಾಕ, ಯಾಕ’ ಅಂದೆ. ಅವಳ ಕೂದಲ ಕೆದರಿತ್ತು!

ಕಣ್ಣು ಕೆಂಗಣ್ಣು ಆಗಿತ್ತು, ಮಹಾಕಾಳಿ ಅವತಾರ ತಾಳಿದ್ಲು!

ರೀ ರೀ. ಈ ಡಬ್ಯಾಗ ದೆವ್ವಿಲ್ರೀ. ಹೆಗ್ಣಾ, ಹೆಗ್ಣಾ ಅದಾವು. ನೀವು ನಿಮ್ಮ ತಲೀಗೆ ಭಜಿಮಿರ್ಚಿ ಪಟ್ನಾ ಇಟಕೊಂಡ ಮಕ್ಕೊಂಡಿದ್ರಿ. ಆ ಎಣ್ಣೀಕಮರ ವಾಸ್ನಿ ಆ ದುಗ್ಗಾಣಿ ಹೆಗ್ಣಾ ನಿಮ್ಮ ಎದಿಮ್ಯಾಗ ಹರದಾಡಾಕತ್ತಿದ್ವು. ನಿಮ್ಮ ಎದಿಮ್ಯಾಗ ಆ ಅಡವೀ ಹೆಮ್ಮಾರಿ ಹೆಗ್ಣಾ ಕುಂತು ಮಿರ್ಚಿ ತಿನ್ನಾಕತ್ತಿದ್ವು. ನನಗ ಸಿಟ್ಟ ವಟ್ಟರಿಸಿ ಬಂತು. ನಾ ಕೈ ಸಡ್ಲಬಿಟ್ಟು ಆ ಹೆಗ್ಗಣಕ್ಕ ಭರಾಟ್ಲೆ ಬರ್ರಂತ ಇಕ್ಕರಿಸೀದೆ. ಆದ್ರ ಆ ಬೆರ್ಕಿ ಹೆಗ್ಗಣಾ ಠಣ್ಣನ ಜಿಗದ ಪರಾರಿ ಆತು. ಪೆಟ್ಟು ನಿಮ್ಮ ಎದೀ ಮ್ಯಾಗ ಫಡಲ್ ಅಂತ ಬಿತ್ತು. ಏನ ಮಾಡ್ಲಿ ಹೇಳ್ರಿ’

ಇಷ್ಟು ಹೇಳತ್ತಲೇ ಅವಳು ಆ ಸೀಟಿನ ಕೆಳಗಡೆ ಕೈಮಾಡಿ ತೋರಿಸಿದಳು, ‘ಅಕಾ ಅಕಾ ಅಲ್ಲೆ ನೋಡ್ರಿ. ಆ ಸೀಟಿನ ಕೆಳಗ ನೋಡ್ರಿ’

ಅಬ್ಬಾ, ಅಲ್ಲಿ ಒಂದು ಭಾರೀ ಅಡವೀ ಹೆಗ್ಗಣ ನನ್ನ ತಲೆ ಪಕ್ಕಕ್ಕಿಟ್ಟ ದೊಡ್ಡ ಮಿರ್ಚಿಭಜಿ ಕಡಿಯುತ್ತಾ ಆರಾಮಾಗಿ ಕುಂತಿತ್ತು! ಮುಂಬರುವ ಮಹಾ ಚುನಾವಣೆಗೆ ಮುಂಚೆಯೇ ಪುಕ್ಕಟ ಪಿಕ್‌ನಿಕ್ ಪಾರ್ಟಿ ನಡಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close