ವಿಶ್ವವಾಣಿ

ನೀವು ಅವರಿಗೆ ಇಂದು ‘ಹಲೋ’ ಹೇಳಿದಿರಾ?

ಕುತೂಹಲ ಹುಟ್ಟಿಸುವಂತಹ ವ್ಯಕ್ತಿತ್ವ ವಿಕಸನ ಉಪನ್ಯಾಸಕರೊಬ್ಬರು ಅಮೇರಿಕಾದಲ್ಲಿದ್ದಾರೆ. ಅವರ ಹೆಸರು ಚಾಲ್ಸರ್  ಅವರು ಒಂದು ವಿಚಿತ್ರ ಪ್ರಶ್ನೆ ಕೇಳಿಯೇ ತಮ್ಮ ಉಪನ್ಯಾಸಗಳನ್ನು ಪ್ರಾರಂಭಿಸುತ್ತಾರೆ. ಆ ಪ್ರಶ್ನೆ ಏನೆಂದರೆ ‘ನಿಮ್ಮ ಪ್ಯಾರಾಚೂಟನ್ನು ಇಂದು ಯಾರು ಪ್ಯಾಕ್ ಮಾಡಿಕೊಟ್ಟರು?’ ಬದುಕಿನಲ್ಲಿ ಎಂದೂ ವಿಮಾನವನ್ನೇರದ ಅಥವಾ ಪ್ಯಾರಾಚೂಟ್ ಬಳಸದ ಸಭಿಕರು ಈ ಪ್ರಶ್ನೆ ಕೇಳಿ ಅಚ್ಚರಿಯಿಂದ ಹುಬ್ಬೇರಿಸುತ್ತಾರೆ. ಆಗ ಚಾಲ್ಸರ್ ತಮ್ಮ ನಿಜಜೀವನದ ಅನುಭವವನ್ನು ಹೀಗೆ ಹೇಳುತ್ತಾರೆ.

‘ನಾನು ವಿಯೇಟ್ನಾಮ್ನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದೆ. ಯಶಸ್ವಿಯಾಗಿ ಯುದ್ಧ ವಿಮಾನವನ್ನು ಚಲಾಯಿಸುತ್ತಿದ್ದೆ. ಆದರೆ ಕೊನೆಯ ಬಾರಿ ನಾನಿದ್ದ  ಒಂದು ಕ್ಷಿಪಣಿಗೆ ತುತ್ತಾಗಿ ನುಚ್ಚು ನೂರಾಯಿತು. ಸುಟ್ಟು ಭಸ್ಮವಾಯಿತು. ಅದೃಷ್ಟವಶಾತ್ ನಾನು, ಕ್ಷಿಪಣಿ ಬಂದು ವಿಮಾನಕ್ಕೆ ಅಪ್ಪಳಿಸುವುದಕ್ಕೆ ಮುಂಚೆ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹೊರಕ್ಕೆ ಜಿಗಿದುಬಿಟ್ಟೆ. ಪ್ರಾಣವೇನೋ ಉಳಿಯಿತು. ಆದರೆ ನಾನು ಕಮ್ಯುನಿಸ್ ವಿಯೇಟ್ನಾಮಿನಲ್ಲಿ ಯುದ್ಧ ಖೈದಿಯಾಗಿ ಆರು ವರ್ಷ ಕಳೆಯಬೇಕಾಯಿತು. ಅಲ್ಲಿಂದ ಬಿಡುಗಡೆ ಹೊಂದಿದ ನಂತರ ನಾನು ಪೈಲಟ್ ಕೆಲಸ ಬಿಟ್ಟು ‘ವ್ಯಕ್ತಿತ್ವ ವಿಕಸನ’ ಉಪನ್ಯಾಸಗಳನ್ನು ನೀಡುವ ವೃತ್ತಿಯನ್ನು ಕೈಗೆತ್ತಿಕೊಂಡೆ.

ಒಮ್ಮೆ ನಾನು ಉಪಾಹಾರ ಗೃಹವೊಂದರಲ್ಲಿ ಕುಳಿತಿದ್ದಾಗ  ಟೇಬಲ್ಲಿನಲ್ಲಿ ಕುಳಿತಿದ್ದ ಒಬ್ಬಾತ ಬಳಿ ಬಂದು ‘ನೀವು ವಿಯೇಟ್ನಾಮಿನಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದ ಚಾಲ್ಸರ್ ಪ್ಲಂಬ್ ಅಲ್ಲವೇ? ನಿಮ್ಮ ವಿಮಾನ ಕ್ಷಿಪಣಿ ದಾಳಿಗೆ ತುತ್ತಾಗಿ ಸುಟ್ಟು ಭಸ್ಮವಾದರೂ ನೀವು ಪ್ಯಾರಾಚೂಟ್ ಸಹಾಯದಿಂದ ಬದುಕುಳಿದಿರಲ್ಲವೇ?’ ಎಂದರು.

ನಾನು ಆಶ್ಚರ್ಯದಿಂದ ‘ನಿಮಗಿದೆಲ್ಲ ಹೇಗೆ ಗೊತ್ತು?’ ಎಂದು ಪ್ರಶ್ನಿಸಿದೆ. ಆತ ‘ನೀವು ಅಂದು ಬಳಸಿದ ಪ್ಯಾರಾಚೂಟನ್ನು ಪ್ಯಾಕ್ ಮಾಡಿದವನು ನಾನೇ! ನಾನು ಆಗ ವೈಮಾನಿಕ ದಳದಲ್ಲಿ ನೌಕರನಾಗಿದ್ದೆ’ ಎಂದ. ನಾನು ಎದ್ದು ನಿಂತು  ಆತನ ಕೈಕುಲುಕಿ ‘ನೀವು ಅಂದು ಪ್ಯಾರಾಚೂಟನ್ನು ನನಗೆ ಪ್ಯಾಕ್ ಮಾಡಿ ಕೊಟ್ಟಿದ್ದಿರಿ. ಅದರಿಂದಾಗಿಯೇ ಇಂದು ನಾನು ಬದುಕುಳಿದಿದ್ದೇನೆ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟೆ.

ಅಂದು ರಾತ್ರಿ ನನಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ. ನಾನಂದು ದೊಡ್ಡ ಪೈಲೆಟ್. ಆತ ಸಾಮಾನ್ಯ ನೌಕರ. ಆದರೆ ಅಂದು ಪ್ಯಾರಾಚೂಟ್ ಪ್ಯಾಕ್ ಮಾಡಿಕೊಟ್ಟು ನನ್ನ ಪ್ರಾಣ ಉಳಿಸಿದ್ದ. ನಾನು ಆತನನ್ನು ದಿನಾ ನೋಡುತ್ತಿದ್ದೆ. ಗಮನಿಸಿರಲಿಲ್ಲ. ಒಮ್ಮೆಯೂ ಆತನಿಗೆ ಗುಡ್ ಮಾರ್ನಿಂಗ್ ಹೇಳಿರಲಿಲ್ಲ. ಹೇಗಿದ್ದೀರೆಂದು  ನನ್ನ ಪ್ರಾಣವನ್ನು ಉಳಿಸಿದ ಆತನನ್ನು ನಾನು ಅಂದೇ ಗಮನಿಸಬೇಕಿತ್ತು ಎಂದುಕೊಂಡೆ. ನಾನು ಅಂದು ಒಂದು ಅಮೂಲ್ಯ ಪಾಠ ಕಲಿತೆ. ಹೀಗೆ ಹೇಳಿ ಪ್ಲಂಬ್ ಅವರು ತಮ್ಮ ಉಪನ್ಯಾಸವನ್ನು ಮುಗಿಸುತ್ತಾರೆ. ಈ ಉಪನ್ಯಾಸವನ್ನು ಅವರದ್ದೇ ಮಾತುಗಳಲ್ಲಿ ನಾವು ಯೂ ಟ್ಯೂಬಿನಲ್ಲಿ ಕೇಳಬಹುದು!

ಈಗ ಪ್ಲಂಬ್ ಅವರಿಗೆ ಧನ್ಯವಾದಗಳನ್ನು ಹೇಳೋಣ. ನಾವೂ ನಮ್ಮ ಬದುಕಿನಲ್ಲಿ ಇಂದು ಏನಾಗಿದ್ದೇವೆಯೋ ಅದಕ್ಕೆ ಸಹಾಯ ಮಾಡಿದವರು ಯಾರೋ ಒಬ್ಬರು ಇರಬಹುದು. ಅವರು ನಮ್ಮ ತಂದೆ-ತಾಯಿ, ಉಪಾಧ್ಯಾಯರು,  ಗೆಳೆಯ ಯಾರೋ ಆಗಿರಬಹುದು. ಇಂದು ಅಂತಸ್ತಿನಲ್ಲಿ ಅವರು ನಮ್ಮ ಸಮಾನರಾಗಿಲ್ಲದೆ ಇರಬಹುದು. ಅವರು ನಮಗೆ ಗುರುತು ಸಿಗದೆ ಇರಬಹುದು. ಇನ್ನು ಮುಂದೆ ಅವರು ಯಾರೇ ಇರಲಿ, ಅವರು ನಮ್ಮೆದುರಿಗೆ ಬಂದಾಗ, ನಾವು ಅವರತ್ತ ಮುಗುಳ್ನಗೆ ಬೀರಬಹುದು. ಹೆಲ್ಲೋ ಹೇಳಬಹುದು ಅಥವಾ ಅವರಿಗೊಂದು ಧನ್ಯವಾದವನ್ನೂ ಹೇಳಬಹುದು. ಏಕೆಂದರೆ ಇಂದು ನಾವೇನಾಗಿದ್ದೇವೋ, ಎಲ್ಲಿದ್ದೇವೋ, ಅದಕ್ಕೆ ಅವರೇ ಕಾರಣರಲ್ಲವೇ?