About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಶಿಸ್ತು, ಶೃಂಗಾರದ ಸಮಪಾಕ ಸಿಂಗಪೂರ್…

ಎಸ್.ಪಿ.ವಿಜಯಲಕ್ಷ್ಮಿ

ಸಿಂಗಾಪೂರಿಂದ ಬಂದೆ ಬಂಗಾರ ಹೊತ್ತುತಂದೆ

ಸಂಗಾತಿ ನೋಡಿಲ್ಲಿ ಬಾ ಬಾ ಬಾ….. ಎಪ್ಪತ್ತರ ದಶಕದ ಈ ಪ್ರಖ್ಯಾತ ಹಾಡು ಕೇಳುತ್ತ ಹುಚ್ಚಾದ ವರ ಸಾಲಲ್ಲಿ ನಾನೂ ಇದ್ದೆ. ಆಗ ಕಾಲೇಜು ಓದುತ್ತಿದ್ದರೂ, ಸಿಂಗಾಪುರ್ ಕೇಳಿದ್ದರೂ ಅದೆಲ್ಲಿದೆ ಅದರ ಗಮ್ಮತ್ತೇನು ಅಂತ ಚೂರೂ ಮಾಹಿತಿಯೇ ಗೊತ್ತಿರಲಿಲ್ಲ. ಅಷ್ಟೊಂದು ಮಾಹಿತಿ ರಹಿತ ಜಮಾನಾ ಅದು. ಇವತ್ತು ಎಷ್ಟೋ ದೇಶ ಕಂಡಮೇಲೆ ಸಿಂಗ ಪೂರ್ ಕಂಡೆ. ನಿಜ ಹೇಳ್ತೀನಿ, ಈ ದೇಶ ಬಹಳ ಇಷ್ಟ ವಾಯಿತು, ಅದಕ್ಕೆ ಕಾರಣ ಬಹಳ. ಅದರಲ್ಲಿ ಬಹುಮುಖ್ಯ ‘ಸ್ವಚ್ಛತೆ’ ಅನ್ನೋ ದ್ರಲ್ಲಿ ಎರಡು ಮಾತೇ ಇಲ್ಲ. ನಂತರ ಊರಿನ ತುಂಬ ತುಂಬ್ಕೊಂಡಿರೋ ಹಸಿರು. ನಂತರ ನಮ್ಮ ಮಹಾತ್ಮಾ ಗಾಂಧಿ ಹೇಳುತ್ತಿದ್ದ, ‘ಎಂದು ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ನಡೆಯುತ್ತಾಳೊ ಅದು ನಿಜವಾದ ಸ್ವಾತಂತ್ರ್ಯ’ ಅನ್ನುವ ಈ ಮಾತು ಇಲ್ಲಿ ಅಕ್ಷರಶಃ ಪಾಲನೆ ಆಗ್ತಾ ಇರೋದಕೆ; ಮತ್ತೆ, ಮತಗಳ ಹಗರಣ, ಕೋಮುವಾದದಲ್ಲಿ ಜಗತ್ತೇ ದ್ವೇಷದುರಿಯಲ್ಲಿ ನರಳ್ತಾ ಇದ್ರೆ, ಇಲ್ಲಿ ಹಿಂದೂಕ್ರೆûಸ್ತಮುಸಲ್ಮಾನಚೀನೀಬೌದ್ಧ ಭೇದ ವಿಲ್ಲದೆ ಎಲ್ಲರ ಧರ್ಮಪಾಲನೆಗೆ ಇರುವ ಮುಕ್ತ ಸದವಕಾಶಕ್ಕೆ..!

ನಮ್ಮ ಪಕ್ಕಕ್ಕೇ ಇದೆ. ನಮ್ಮ ಖಂಡದಲ್ಲೇ ಇದೆ. ನಮ್ಮಂತೆ ಸರ್ವ ಧರ್ಮ, ಬಹುಸಾಂಸ್ಕೃತಿಕ ಲಕ್ಷಣಗಳನ್ನು ಒಳಗೊಂಡಿದೆ. ಆದರೆ, ನಮ್ಮಂತೆ ಗಾತ್ರ, ಜನಸಂಖ್ಯೆಯಲ್ಲಿ ಬೃಹತ್ತಲ್ಲ. ಕಾಲ ದೇಶವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ದೇಶವನ್ನು ನಲು ಗಿಸಿಬಿಟ್ಟ ಕೊಳಕು ರಾಜಕಾರಣಿಗಳಂಥ ಭ್ರಷ್ಟರನ್ನು ಒಳಗೊಂಡ ದೇಶವಾಗಲಿಲ್ಲ. 19ನೇ ಶತಮಾನದ ಆರಂಭದಲ್ಲಿ ‘ರ್ಯಾಫೆಲ್’ ಎಂಬೊಬ್ಬ ಬ್ರಿಟಿಷ್ ಅಧಿಕಾರಿಯೊಬ್ಬನ ಶ್ರಮ, ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಈ ಸಿಂಗಾಪುರ ಸಣ್ಣಸಣ್ಣ ದ್ವೀಪಗಳ ನ್ನೊಳಗೊಂಡಿದ್ದರೂ ಮುಖ್ಯವಾಗಿ ನಗರಕ್ಕಿರುವುದು ಕೇವಲ 47 ಚದರ ಕಿ.ಮೀಗಳಷ್ಟೇಇಂದು ಇಲ್ಲಿಯ ಮುಖ್ಯಕಟ್ಟಡಗಳು, ವಾಣಿಜ್ಯೀಕೃತ ತಾಣಗಳಲ್ಲೂ ಈ ರ್ಯಾಫೆಲ್ ಹೆಸರು ಜೀವಂತ ವಾಗಿದೆ. 1965ರಲ್ಲಿ ಸ್ವತಂತ್ರ ರಿಪಬ್ಲಿಕ್ ರಾಷ್ಟ್ರವಾದ ನಾಯಕತ್ವ ತೆಗೆದುಕೊಂಡ ಪ್ರಧಾನಮಂತ್ರಿ ‘ಲೀ ಕ್ವಾನ್ ಯೂ’ನ ದಕ್ಷ, ಒಂದಿಷ್ಟು ಸರ್ವಾಧಿಕಾರಯುತ, ನಿಸ್ವಾರ್ಥ ನೇತೃತ್ವದಲ್ಲಿ ನಾವೇನು ಇವತ್ತು ಹಾಡಿ ಹೊಗಳುತ್ತೇವೋ ಆ ‘ಸಿಂಗಪೂರ್’ ನಿರ್ಮಾಣವಾದದ್ದೀಗ ಇತಿಹಾಸ.

ಖಂಡಿತಾ ಒಂದು ರಾಷ್ಟ್ರ ಸಶಕ್ತವಾಗಿ ಮುನ್ನಡೆಯಬೇಕೆಂದರೆ ಅದಕ್ಕೆ ‘ಲೀ’ನಂಥ ಗಟ್ಟಿನಾಯಕತ್ವದ ಅವಶ್ಯಕತೆ ಬೇಕೇಬೇಕು. ಅವನ ಆಡಳಿತ ಒಂದು ರೀತಿಯ ಸರ್ವಾಧಿಕಾರಿ ನಿಯಂತ್ರಣದ್ದೇ ಆಗಿದ್ದರಿಂದಲೇ ಸಿಂಗಪೂರ್ ಇಷ್ಟು ಸಶಕ್ತವಾಗಿ ಬೆಳೆದಿರುವುದಂತೆ. ಇಂದೂ ಅಲ್ಲಿ ಪ್ರಜೆಗಳು ಸರ್ವತಂತ್ರ ಸ್ವತಂತ್ರ ಹೊಂದಿಯೂ ಇಂಥ ಕಟ್ಟುಪಾಡುಗಳಿಗೆ ಬದ್ಧರಾಗಿದ್ದಾರೆ. ಸಿಂಗ ಪೂರ್ ವಿಶ್ವಮಾನ್ಯವಾಗಿದೆ, ಪ್ರಮುಖ ವಾಣಿಜ್ಯ ವ್ಯಾಪಾರೀ ಕೇಂದ್ರವಾಗಿದ್ದು ಆರ್ಥಿಕವಾಗಿ ಬಲಾಢ್ಯವಾಗಿದೆ. ವಿಶ್ವದಲ್ಲಿ ತನ್ನದೇ ಛಾಪು ಒತ್ತಿದೆ.

ರಂಗಾಗಿ ಅರಳಿರುವ ನಗರ

ಅತ್ಯದ್ಭುತ ಗಗನಚುಂಬಿಗಳಿಂದ ಕಣ್ಣುಕೋರೈಸುವ ಸಿಂಗಪೂರ ದಲ್ಲಿ ಗಗನಗಾಮಿಯಾಗುವುದಕ್ಕೂ ಒಂದು ಮಿತಿಯಿದೆ. ಕಾರಣ, ವಿಸ್ತೀರ್ಣ ಮಿತಿಯುಳ್ಳದಾದ್ದರಿಂದ. ಸಿಂಹಪುರಿ ಎಂದ ಮೇಲೆ ಸಿಂಹವಿಲ್ಲದಿದ್ದರೆ ಹೇಗೆ..? ಚಂದವಾಗಿ ಕಣ್ಸೆಳೆಯುವ ಐದು ‘ಮೆರ‌್ಲಯನ್’ಗಳಿವೆ. ‘ಗಾರ್ಡನ್‌ಸ್ ಬೈ ದ ಬೇ’ ಅಂತೂ ಪ್ರವಾಸಿ ಗರ, ಸ್ಥಳೀಯರ ಮೆಚ್ಚಿನ ತಾಣ. ಇಷ್ಟೆತ್ತರ ನಿಂತು ಸಿಂಹವನ್ನು ನೋಡ್ತಾ, ಎದುರಿನ ಕೊಲ್ಲಿಯ ಸೌಂದರ್ಯ, ಎಸ್‌ಪ್ಲನೇಡ್ ಎಂಬ ಅದ್ಭುತ ಆರ್ಟ್‌ಸೆಂಟರ್ ವಿನ್ಯಾಸ, ಕೊಲ್ಲಿಯ ಸುತ್ತ ಅರಳಿರೋ ಅಂದಚಂದದ ಬಿಲ್ಡಿಂಗುಗಳ ನೋಡ್ತಾ ಓಡಾಡೋ ವಾಕ್‌ವೇ ಅದರಾಚೆ ಗಗನದೆತ್ತರಕ್ಕೆ ಚಾಚಿ, ಅಪೂರ್ವ ಶೈಲಿಯಲ್ಲಿ ‘ತಾನೊಬ್ಬನೇ’ ಅನ್ನೋ ಹಾಗೆ ನಿಂತಿರೋ ‘ಮೆರೀನಾ ಬೇ ಸ್ಯಾಂಡ್‌ಸ್’ ಹೋಟೆಲ್ ಸಂಕೀರ್ಣ, ಅದರ ಪಕ್ಕದಲ್ಲೇ ಆರ್ಟ್‌ಸ್ ಮತ್ತು ಸೈನ್‌ಸ್ ಮ್ಯೂಸಿಯಂನ ಸುಂದರಕಟ್ಟಡ, ಗಾರ್ಡನ್, ಅಬ್ಬಾ, ಕಾಲಕಳೆಯಲು ಇದಕ್ಕಿಂತ ಪ್ರಶಸ್ತಜಾಗ ಬೇಕಾ ಎನ್ನಿಸಿಬಿಡುತ್ತೆ. ಆರ್ಚರ್ಡ್‌ರೋಡ್, ಬ್ಯೂಗಿಸ್ ಜಂಕ್ಷನ್, ಥಳುಕುಬಳುಕು, ಮೆಟ್ರೋರೈಲುಗಳ ಕಾರ್ಯವೈಖರಿ, ಬೌದ್ಧದೇಗುಲಗಳ ವೈಭವ ಒಂದಕ್ಕಿಂತ ಒಂದು ಚೆನ್ನ.

ನಮ್ಮ ದೇಶವೇ ಎನ್ನಿಸಿಬಿಡೋ ‘ಲಿಟ್‌ಲ್ ಇಂಡಿಯಾ’, ಚೀನಾ ದಲ್ಲಿದ್ದೀವಾ ಎನ್ನಿಸುವ ‘ಚೈನಾಟೌನ್’, ಬುದ್ಧ ದೇಗುಲ, ಅರಬ್ ತಾಣವೇ ಎನ್ನಿಸಿಬಿಡೋ ‘ಅರಬ್ ಸ್ಟ್ರೀಟ್’ ನಿಜ, ಎಲ್ಲಾನೂ ಒಂದೇಕಡೆ ಇರೋ ಹಾಗೆ ಮಾಡಿರೋ ಸಿಂಗಪೂರ್ ಗ್ರೇಟೇ ಸರಿ. ಇನ್ನು, ಯೂನಿವರ್ಸಲ್ ಸ್ಟೂಡಿಯೋ, ಸೆಂಟೋಸ ಐಲ್ಯಾಂಡ್, ಬರ್ಡ್‌ಪಾರ್ಕ್, ಎನಿಮಲ್ ನೈಟ್ ಸಫಾರಿ ಜಗತ್ತಿನ ಅದೆಷ್ಟೋ ಕಡೆ ಕಂಡಿದ್ದರಿಂದ ಹೆಚ್ಚಿಗೆ ನನ್ನ ಆಕರ್ಷಿಸಲಿಲ್ಲ. ನಾನು ಮರುಳಾಗಿದ್ದು ಮಾತ್ರ ‘ಗಾರ್ಡನ್‌ಸ್ ಬೈ ದ ಬೇ’ ಮತ್ತು ಅತ್ಯದ್ಭುತ ‘ಮರೀನಾ ಬೇ ಸ್ಯಾಂಡ್‌ಸ್’ ಎನ್ನುವ ವಿಸ್ಮಯಕಾರೀ ಕಲ್ಪನೆಯಲ್ಲಿ ಅರಳಿರುವ ವಿನ್ಯಾಸಗಳಿಗೆ. ಹೋಟೆಲ್ ಅಂತ ಹೇಳ್ಬೇಕೋ, ಹೋಟೆಲ್ ಸಂಕೀರ್ಣ, ಐಷಾರಾಮಿ ರೆಸಾರ್ಟ್, ಪುಟ್ಟದೊಂದು ಪಟ್ಟಣ ಅಂತ ಹೇಳ್ಬೇಕೂ ಊಹೂಂ, ಗೊತ್ತಿಲ್ಲ.

ಗಾರ್ಡ್‌ನ್‌ಸ್ ಬೈ ದ ಬೇ

ಈಗಾಗ್ಲೇ ಹೇಳಿರುವ ಹಾಗೆ ಹೆಚ್ಚುಕಮ್ಮಿ ಮೆಗಾಸಿಟಿಗಳಲ್ಲಿ ಡೌನ್‌ಟೌನ್ ಅನ್ನೋ ಏರಿಯಾ ಸುತ್ತಮುತ್ತವೇ ಸಾಕಷ್ಟು ಆಕರ್ಷಣೆ ಗಳಿರುತ್ತೆ. ಹಾಗೇ ಈ ಬೈ ದಿ ಬೇ ಮತ್ತು ಮರೀನಾ ಬೇ ಸ್ಯಾಂಡ್‌ಸ್ ಕೂಡ ಬಹುಶಃ ಒಂದಕ್ಕೆ ಒಂದು ಸೇರಿಕೊಂಡಂತೇ ಇದೆ. ಫ್ಲವರ್ ಡೋಮ್, ಕ್ಲೌಡ್ ಫಾರೆಸ್‌ಟ್, ಸುಂದರವಾದ ಲೇಕ್‌ಗಳು, ರಾಕ್ ಗಾರ್ಡನ್ ಒಂದಕ್ಕಿಂತ ಒಂದು ಮನೋಹರವಾಗಿರುವುದರ ಜತೆ ಇಲ್ಲಿಯ ಇನ್ನೊಂದು ಹೈಲೈಟ್ ಎಂದರೆ, ‘ದಿ ಸೂಪರ್ ಟ್ರೀಸ್’. ಕಬ್ಬಿಣದ ಸೂಪರ್‌ಸ್ಟ್ರಕ್ಚರ್‌ನಲ್ಲಿ ರಚಿತವಾಗಿರುವ ಮರ ಗಳಾಕಾರದ ಸಮೂಹಕ್ಕೆ ಹೊಂದಿಸಿರೋ ಹಸುರು, ಸಂಜೆ ಯಾಗು ತ್ತಿದ್ದಂತೆ ಅವುಗಳಲ್ಲಿ ವರ್ಣರಂಜಿತವಾಗಿ ಹೊಮ್ಮುವ ಬಣ್ಣಗಳು, ಎಲ್ಲಕ್ಕೂ ಸೇರಿಸಿ ಸುಂದರ ಸ್ಕೈಬ್ರಿಡ್‌ಜ್ ನಿಜದಲ್ಲಿ ಸಂಜೆ ಇಲ್ಲಿದ್ದರೆ, ಯಾವ್ಯಾವ ಕೋನದಿಂದ, ಎಲ್ಲೆಲ್ಲಿಂದ ಈ ವಿಸ್ಮಯಮರಗಳ ಸಮೂಹವನ್ನು ನೋಡಿದ್ರೂ ತೃಪ್ತಿಯಾಗೋದೇ ಇಲ್ಲ. 55ಅಂತಸ್ತುಗಳ 3 ಕಂಬದಾಕಾರದ ಮೆಗಾಕಟ್ಟಡದ 20ನೇ ಅಂತಸ್ತಿನಲ್ಲಿರುವ ಎತ್ತರದ ಸ್ವಿಮ್ಮಿಂಗ್ ಪೂಲ್, ಹಿಂಭಾಗದಲ್ಲಿ ಕೊಲ್ಲಿ ಮತ್ತೆ ಇಡೀ ಸಿಂಗಪೂರಿನ ಹೃದಯಭಾಗವಾದ ‘ಮರೀನಾಬೇ’ಯ ಚೆಲುವಾದ ಸೂಪರ್ ಸ್ಕೈಸ್ಕ್ರೇಪರ್‌ಗಳು, ರಾತ್ರಿ ಈ ‘ಕೊಲ್ಲಿಯ ಎದೆಯಲ್ಲಿ’ ತೆರೆದುಕೊಂಡು ಎಲ್ಲರನ್ನೂ ಕಟ್ಟಿಕೂರಿಸಿಬಿಡುವ ಅತ್ಯದ್ಭುತ ಬೆಳಕು ಮತ್ತು ಧ್ವನಿ ಷೋ, ಕ್ಲಾರ್‌ಕ್ ಕೇ ಕ್ರೂಸ್‌ಯಾನ, ಓಹ್, ಒಂದು ಬೇರೆ ಪ್ರಪಂಚ.

ಏನೂ ಗದ್ದಲಗಲಾಟೆಯಿಲ್ಲದೆ ಸಿಂಗಪೂರ್ ನಮ್ಮ ದೀಪಾವಳಿ ಯನ್ನು, ಚೀನೀ ಹಬ್ಬ ಹೊಸ ವರ್ಷವನ್ನು ವರ್ಣರಂಜಿತವಾಗಿ ಆಚರಿಸೋದನ್ನ ಕಂಡು, ಆ ಅಲಂಕಾರ, ಉತ್ಸವಗಳು ವಾಹ್, ಇದನ್ನು ಹೀಗೇ ಎಂದು ಹಿಡಿಯೋಕಾಗದೆ ದಂಗಾಗಿಬಿಟ್ಟೆ. ಮತೀ ಯರಲ್ಲಿ ಅಸಹನೆ, ತಿರಸ್ಕಾರ, ದ್ವೇಷಗಳಿಲ್ಲದೆ ಎಲ್ಲ ಸುಸೂತ್ರವಾಗಿ ಸಾಗುವಂಥ ಹೊಣೆಯ ಚುಕ್ಕಾಣಿ ಹಿಡಿದಿರೋ ಸರಕಾರ, ಹಾಗೇ ನಡೆದುಕೊಳ್ಳುವ ಎಲ್ಲರ ಮನಃಸ್ಥಿತಿಗೆ ಚಪ್ಪಾಳೆಯಂತೂ ಬೀಳಲೇ ಬೇಕು. ಆದರೆ, ಒಂದಷ್ಟು ದುಬಾರಿ ನಗರ ಒಪ್ಪಿಕೊಳ್ಳಬೇಕು.

Tags

Related Articles

Leave a Reply

Your email address will not be published. Required fields are marked *

Language
Close