ಸಮರ್ಥನಾದವನು ಯಾವ ಖಾತೆಗೂ ಕಿತ್ತಾಡಲಾರ

Posted In : ಸಂಗಮ, ಸಂಪುಟ

-ಆನಂದ ಬಿದರಕುಂದಿ

ಅಂದು ಟಿ.ಎನ್.ಶೇಷನ್ ಚುನಾವಣೆ ಆಯೋಗದ ಚುಕ್ಕಾಣಿ ಹಿಡಿದಾಗ ಎಲ್ಲಾ ರಾಜಕೀಯ ಪಕ್ಷಗಳು ಇದೊಂದು ಮಾಮೂಲಿ ನೇಮಕ, ಇದೇನೂ ವಿಶೇಷವಲ್ಲದ ಹತ್ತರಲ್ಲಿ ಹನ್ನೊಂದು ಎಂದು ಭಾವಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಟಿ.ಎನ್. ಶೇಷನ್ ಏಕಾಏಕಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ಘಟಾನುಘಟಿ ನಾಯಕರುಗಳಿಗೆ ಗಧಾಪ್ರಹಾರವನ್ನೆ ಮಾಡಿದಾಗ ಇಡೀ ರಾಷ್ಟ್ರವೇ ಚುನಾವಣೆ ಆಯೋಗದತ್ತ ನೊಡುವಂತಾಯಿತು. ಈ ರಾಜಕಾರಣಿಗಳು ಎಂದೂ ಚುನಾವಣೆ ಆಯೋಗವಿದೆ ಎಂದಾಗಲಿ, ತಾವು ಎದುರಿಸಬೇಕಾದ ಚುನಾವಣೆಗಳನ್ನು ಆಯೋಗ ವಿಧಿಸಿದ ಕಾನೂನಿನ ಅಡಿಯಲ್ಲಿ ಬದ್ಧರಾಗಿ ನಡೆದುಕೊಳ್ಳಬೇಕೆಂದಾಗಲಿ ಯಾವತ್ತೂ ಯೋಚಿಸಿದವರಲ್ಲ.

ಅದರ ಪಾಡಿಗೆ ಅದು ಇರುತ್ತದೆ ಆದು ವಿಧಿಸಿದ ಕಟ್ಟುಪಾಡುಗಳನ್ನು ನಂಬಿ ಯಾರಾದರೂ ಚುನಾವಣೆಯನ್ನು ಗೆಲ್ಲಲು ಸಾಧ್ಯವೇ? ನಮಗೆ ಹೇಗೆ ಬೇಕೊ ಹಾಗೆ ಚುನಾವಣೆಯಲ್ಲಿ ನೆಡೆದುಕೊಂಡರಾಯಿತು ಎನ್ನುವ ಮನೋಸ್ಥಿತಿ ಇದ್ದಂತಹ ಕಾಲವದು. ಯಾವಾಗ ಶೇಷನ್ ಎಲ್ಲರ ಮೇಲೆ ಮುಗಿಬಿದ್ದರೋ ಆಗ ಚುನಾವಣೆ ಆಯೋಗದ ಮಹತ್ವ ಅರ್ಥವಾಗಿದ್ದು. ಚುನಾವಣಾ ಆಯೋಗವನ್ನು ಎಂದೂ ಗಂಭೀರವಾಗಿ ತೆಗೆದುಕೊಳ್ಳದ ಈ ರಾಜಕಾರಣಿಗಳು ಗಾಬರಿಬಿದ್ದುದಲ್ಲದೆ, ತಮಗಾರು ಸಾಟಿ ಇಲ್ಲ ಎಂದು ಮೆರೆಯುತ್ತಿದ್ದ ಘಟಾನುಘಟಿಗಳೆಲ್ಲರೂ ತಲೆ ಬಾಗುವಂತಾಗಿದ್ದು ಒಬ್ಬ ವ್ಯಕ್ತಿಯಿಂದ. ಶೇಷನ್ ಬಂದು ಮಾಯಾ ದಂಡವನ್ನೇನೂ ಬೀಸಲಿಲ್ಲ. ತುಕ್ಕು ಹಿಡಿದಿದ್ದ ಕಾನೂನುಗಳನ್ನು ಹೊರ ತೆಗೆದು ಝಳಪಿಸಿದರು ಅಷ್ಟೆ. ರಾಜಕೀಯ ಪಕ್ಷಗಳ ಬೇಕಾಬಿಟ್ಟಿತನಕ್ಕೆ ಕಡಿವಾಣ ಹಾಕಿ ಚುನಾವಣೆಗೆ ಒಂದು ಅರ್ಥ ತಂದು ಕೊಟ್ಟ ಶ್ರೇಯಸ್ಸು ಶೇಷನ್‌ಗೆ ಸಲ್ಲಬೇಕು. ಈ ದೇಶವನ್ನು ಪ್ರಧಾನಿಯಾಗಿ ಹತ್ತು ವರ್ಷ ಮನಮೋಹನ್ ಸಿಂಗ್‌ರನ್ನೂ ಬಿಡಲಿಲ್ಲವೆಂದರೆ ನೀವೇ ಯೋಚಿಸಿ ಒಬ್ಬ ಸಮರ್ಥ ವ್ಯಕ್ತಿ ಮನಸ್ಸು ಮಾಡಿದರೆ ಏನೇಲ್ಲ ಮಾಡಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ ಅಲ್ವೇ?

ಒಂದು ಸಾಂವಿಧಾನಿಕ ಹುದ್ದೆಗೆ ಅದರದ್ದೇ ಆದ ಕಾರ್ಯವ್ಯಾಪ್ತಿ ಇರುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಯ ಮನೋಬಲವೂ ಗಟ್ಟಿಯಾಗಿರಬೇಕಾಗುತ್ತದೆ. ಆಗ ಮಾತ್ರ ಅಂತಹ ಹುದ್ದೆಯಿಂದ ಜನಸಾಮಾನ್ಯರು ಏನಾದರೂ ನಿರೀಕ್ಷಿಸಲು ಸಾಧ್ಯ. ಇಲ್ಲದೆ ಹೋದರೆ ಬರುವವರೆಲ್ಲ ಸುಮ್ಮನೆ ಕಾಲ ಕಳೆದು ಹೊದಾಪುಟ್ಟಾ ಬಂದಾಪುಟ್ಟಾ ಎನ್ನುವಂತಾಗಿ ಬಿಡುತ್ತದೆ. ಕಡಿಮೆ ಸರಕಾರದ ಅನೇಕ ಖಾತೆಗಳು, ಇಲಾಖೆಗಳು, ಆಯೋಗಗಳು ರಾಜಕೀಯ ಮೇಲಾಟ-ಕೋಲಾಟದಲ್ಲಿ ಇಂತಹ ಉದಾಸೀನ ಧೋರಣೆಯ ರೋಗದಿಂದ ಬಳಲುತ್ತಿವೆ. ಇಷ್ಟೆಲ್ಲ ಹೇಳಲು ಕಾರಣ ಸದ್ಯ ರಾಜ್ಯದ ರಾಜಕಾರಣದಲ್ಲಿ ನಡೆಯುತ್ತಿರುವ ಖಾತೆ ದೊಂಬರಾಟ.

ಸಮರ್ಥನಾದವನಿಗೆ ಯಾವ ಹುದ್ದೆಯಾದರೇನು ಯಾವ ಖಾತೆ ಆದರೇನು? ಯಶಸ್ವಿಯಾಗಿ ನಿಭಾಯಿಸುತ್ತಾನೆ. ಅದಕ್ಕೆ ಶೇಷನ್ ಮನೋಭಾವ ಬೇಕು ಆಷ್ಟೆ. ಪವಿತ್ರವೋ ಅಪವಿತ್ರವೋ ಒಟ್ಟಿನಲ್ಲಿ ಮೈತ್ರಿ ಸರಕಾರ ರಚನೆಯಾಗಿ ಹೋಯಿತು. ಇನ್ನಾದರೂ ಒಳ್ಳೆಯ ಆಡಳಿತ ನಿರೀಕ್ಷೆ ಮಾಡಬಹುದು ಎಂದುಕೊಂಡವರಿಗೆ ಪ್ರಸ್ತುತ ಪಕ್ಷಗಳ ನಡೆಗಳಿಂದ ಜನರಲ್ಲಿ ಒಂದು ರೀತಿ ಹೇಸಿಗೆ ಬಂದಂತಾಗಿದೆ. ಹುರುಪಿನಿಂದ ಒಂದೊಂದು ಪಕ್ಷದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಸರಕಾರ ರಚನೆಯಾದರೂ ಇನ್ನೂ ಪೂರ್ಣಪ್ರಮಾಣದ ಸಂಪುಟ ರಚನೆ ಮಾಡಲು ಸಾಧ್ಯವಾಗಲಿಲ್ಲವೆಂದರೆ ಇವರುಗಳ ಅಧಿಕಾರ ದಾಹ ಯಾವ ಪರಿ ಇರಬಹುದು? ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳ ಬೇಕೆನ್ನುವ ಕಗ್ಗಂಟು ಒಂದೆಡೆಯಾದರೆ ಯಾರಿಗೆ ಯಾವ ಖಾತೆ ಹಂಚಿಕೆ ಮಾಡಬೇಕೆನ್ನುವ ಗೊಂದಲ.

ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳ ಬೇಕು ಎನ್ನುವುದು ಆಯಾ ಪಕ್ಷದ ವಿವೇಚನೆಗೆ ಬಿಟ್ಟ ವಿಚಾರವಾದರೂ ಹಂಚಿಕೆಯಲ್ಲಿ ಒಮ್ಮತ ಮೂಡದೆ ಹೋಗಿದೆ. ಈ ಸರಕಾದಲ್ಲಿರುವ ಎರಡು ಪಕ್ಷಗಳ ನಡೆ ಮೇಲ್ನೋಟಕ್ಕೆ ಲೈಲಾಮಜ್ನೂವಿನಂತೆ ಕಂಡರೂ ಆಂತರ್ಯದಲ್ಲಿ ಖಾತೆ ವಿಚಾರದಲ್ಲಿ ಒಬ್ಬರಿಗೊಬ್ಬರು ಮಹಮದಾಲಿ ತರಹ ಬಾಕ್ಸಿಂಗ್ ಗ್ಲೌಸ್ ಏರಿಸಿ ತೊಡೆ ತಟ್ಟಿ ನಿಂತಿರುವುದು ಗುಟ್ಟಾಗಿ ಉಳಿದಿಲ್ಲ. ಪ್ರಮುಖ ಖಾತೆಗಳ ಬಗ್ಗೆ ಕೊಸರಾಟ ಮುನಿಸು ನಡೆಯುತ್ತಿದೆ. ಸದ್ಯ ಇಲ್ಲಿ ಪ್ರಶ್ನೆ ಇರುವುದು ಯಾವ ಕಾರಣಕ್ಕೆ ಇಂತಹುದೆ ಖಾತೆ ಬೇಕೆಂದು ಹಠ ಹಿಡಿಯುತ್ತಿದ್ದಾರೆ, ಎಂಬುದು.

ಸದ್ಯ ಇವರು ಕೇಳುತ್ತಿರುವ ಖಾತೆಗಳನ್ನು ಹೊರತು ಬೇರಿನ್ಯಾವ ಖಾತೆಗಳು ಪ್ರಮುಖವಲ್ಲವೇ? ಹಾಗಾದರೆ ಸರಕಾರದಲ್ಲಿರುವ ಖಾತೆಗಳಲ್ಲಿ ಪ್ರಮುಖ ಅಪ್ರಮುಖ ಎನ್ನುವುದು ಏನಾದರೂ ಇದೆಯೇ? ಹಾಗಾದರೆ ಇವರ ಮೊಂಡಾಟ ಯಾಕೆ? ತಿಂಗಳಾದರೂ ಇವರ ಕೈಯಲ್ಲಿ ಸಂಪುಟ ರಚನೆ ಸಾಧ್ಯವಾಗಲಿಲ್ಲ ಎಂದರೆ, ಬರುವ ದಿನಗಳಲ್ಲಿ ಇವರುಗಳ ಹೊಂದಾಣಿಕೆ ಯಾವ ಮಟ್ಟದ್ದಿರಬಹುದು ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು? ಮೊದಲೇ ರಾಜಕಾರಣಿಗಳೆಂದರೆ ಜನರು ಮೂಗು ಮುರಿಯುವಂತಹ ಸಮಯದಲ್ಲಿ, ತಮಗೆ ಬೇಕಾದ ಖಾತೆಗಳ ಬಗ್ಗೆ ಬೇಡಿಕೆ ಇಟ್ಟಾಗ ಮತ್ತಷ್ಟು ಅನುಮಾನಗಳು ಹುಟ್ಟುವುದಿಲ್ಲವೇ? ಸಚಿವ ಆಕಾಂಕ್ಷಿಗಳು ಒಂದೆಡೆ ಸಭೆ ನಡೆಸಿದರೆ ಮತ್ತೊಂದೆಡೆ ಅತೃಪ್ತರ ಸಭೆಯಂತೆ, ಅಸಹ್ಯ ಬರುತ್ತಿದೆ. ಪಕ್ಷದ ಹೈ ಕಮಾಂಡೇನೋ ಅಸಮಾಧಾನಿಗಳ ಮೇಲೆ ಶಿಸ್ತಿನ ಕ್ರಮದ ಬಗ್ಗೆ ಮಾತನಾಡುತ್ತದೆ. ಆದರೆ ಸದ್ಯದ ರಾಜ್ಯ ರಾಜಕಾರಣದ ಸ್ಥಿತಿಯ ಅರಿವಿರುವ ಎಲ್ಲರಿಗೂ ಗೊತ್ತು.

ಈ ಹೈಕಮಾಂಡ್‌ನ ಗುಟುರು ಕೇವಲ ಬೆದರು ಗುಟುರು ಎಂದು. ಹೈಕಮಾಂಡ್‌ಗೂ ಗೊತ್ತಿದೆ ಪ್ರಸ್ತುತ ಸ್ಥಿತಿಯಲ್ಲಿ ತಾನೊಂದು ಉಗುರು ಕಿತ್ತ ಹುಲಿ, ಅಪ್ಪಿತಪ್ಪಿ ಶಿಸ್ತು ಕ್ರಮಕ್ಕೆ ಮುಂದಾದರೆ ಮೈತ್ರಿ ಸರಕಾರಕ್ಕೆ ಅಪಾಯ ಗ್ಯಾರಂಟಿ ಹೀಗಾಗಿ ಅತೃಪ್ತಿಯನ್ನು ಶಮನ ಮಾಡಲು ಇನ್ನಿಲ್ಲದಂತೆ ಕಸರತ್ತು ಮಾಡುತ್ತಿದೆ. ಒಂದು ಸರಕಾರ ಸಮರ್ಪಕವಾಗಿ ನಡೆಯಬೇಕೆಂದರೆ ಎಲ್ಲಾ ಖಾತೆಗಳನ್ನು ಸಮರ್ಥವಾಗಿ ನಡೆಸಬೇಕಾಗುತ್ತದೆ. ಸರಕಾರದ ನೀತಿಗಳನ್ನು ಜನಸಾಮಾನ್ಯರತ್ತ ಒಯ್ಯಲು ಆ ಹುದ್ದೆಯನ್ನಲಂಕರಿಸಿದ ವ್ಯಕ್ತಿಗೆ ಈ ಮೊದಲೇ ಹೇಳಿದಂತೆ ಅದನ್ನು ನಿಭಾಯಿಸುವ ಸಾಮರ್ಥ್ಯ ಸಂಕಲ್ಪ ಇರಬೇಕು. ಇದು ಮೈತ್ರಿ ಸರಕಾರ ಎಂದು ಗೊತ್ತಿದ್ದರೂ ಮುಸುಕಿನ ಗುದ್ದಾಟ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೋ ಏನೋ!

ಹಾಗಾದರೆ ಹೊಂದಿಕೊಂಡು ಹೋಗುವ ಗುಣವಿಲ್ಲವೆಂದಾದರೆ ಯಾವ ಚಂದಕ್ಕೆ ಈ ಮೈತ್ರಿ
ಈ ಹಿಂದೆ ಜವಳಿ ಖಾತೆಯನ್ನು ನಿರ್ವಹಿಸಿದ್ದ ಸಚಿವನೊಬ್ಬ ಜವಳಿ ಖಾತೆಯನ್ನು ಅದೊಂದು ಉಪಯೋಗಕ್ಕೆ ಬಾರದ ಕಿತ್ತೋದ ಖಾತೆ ಎಂದು ಕೂಗಾಡಿದ್ದ. ವರ್ಷಗಳ ಕಾಲ ಜವಳಿ ಉದ್ಯಮದಲ್ಲಿ ತಂತ್ರಜ್ಞನಾಗಿ ದುಡಿದ ನನಗೆ ಅಥವಾ ನನ್ನಂಥವರಿಗೆ ಈ ಸಚಿವನ ಮಾತು ಆಶ್ಚರ್ಯದ ಜತೆ ಆಘಾತವುಂಟು ಮಾಡಿತ್ತು. ಕರ್ನಾಟಕ ಇಡೀ ದೇಶದಲ್ಲೇ ಜವಳಿ ಉತ್ಪನ್ನವನ್ನು ರಫ್ತು ಮಾಡುವ ಎರಡನೆಯ ಅತಿ ದೊಡ್ಡ ರಾಜ್ಯವೆಂದು ಹೆಸರು ಗಳಿಸಿದೆ. ಸದ್ಯ ನೂರಾರು ಜವಳಿ ಕಾರ್ಖಾನೆಗಳನ್ನು ಹೊಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 55000 ಕೈಮಗ್ಗ ಕುಟುಂಬಗಳನ್ನು ಹೊಂದಿ ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ವರಮಾನ ತರುತ್ತಿರುವ ಜವಳಿ ವಲಯ ಈ ಸಚಿವನಿಗೆ ಕಿತ್ತೋದ ಖಾತೆ ಅಂತೆ! ಎಂತಹ ದೌರ್ಭಾಗ್ಯ.

ಸಮರ್ಥನಾದವನು ಈ ಸ್ಥಾನದಲ್ಲಿ ಇದ್ದಿದ್ದರೆ ಈ ವಲಯಕ್ಕೊಂದು ಕಾಯಕಲ್ಪ ನೀಡಿ ಏನೆಲ್ಲ ಸಾಧಿಸಬಹುದಿತ್ತು. ಅದು ಬಿಟ್ಟು ಏನೂ ಮಾಡದೆ ಅಸಡ್ಡೆಯಿಂದ ಕಾಲ ಕಳೆದು ಖಾತೆಯೇ ಸರಿ ಇಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಇತ್ತೀಚೆಗೆ ಕೇಂದ್ರ ಸಚಿವರಾದ ಅನಂತ ಹೆಗ್ಡೆ ಅವರು ಮಾತನಾಡುತ್ತ ನನಗೆ ಸಿಕ್ಕಿರುವುದು ಕೌಶಲ ಅಭಿವೃದ್ಧಿ ಖಾತೆ. ಇದರಲ್ಲಿ ಹೇಳಿಕೊಳ್ಳುವಂತಹ ಕೆಲಸ ಮಾಡಲು ಏನು ಇಲ್ಲ ಎಂಬರ್ಥದ ಮಾತುಗಳನ್ನಾಡಿದ್ದರು. ಒಂದು ಕೆಲಸದಲ್ಲಿ ಯಶಸ್ಸು ಸಿಗಬೇಕೆಂದರೆ ಒಂದಿಷ್ಟು ಯೋಜನಾಬದ್ಧ ಜಾಣ್ಮೆಯ ನಡೆಗಳು, ಬದ್ಧತೆ ಸಾಧಿಸುವ ಛಲ ಇರಬೇಕು. ಅದನ್ನು ಕಂಡುಕೊಂಡಿದ್ದರೆ ಜನಪ್ರತಿನಿಧಿಗಳಿಂದ ಮೇಲಿನ ಮಾತುಗಳು ಬರುತ್ತಿರಲಿಲ್ಲ. ಇದಕ್ಕೆ ನಮ್ಮಲ್ಲೇ ಬೇಕಾದಷ್ಟು ಉದಾಹರಣೆಗಳಿವೆ. ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಸಚಿವರಾಗಿದ್ದ ನಜೀರ್ ಸಾಬ್ ಅವರೆ ಇದಕ್ಕೆ ಸಾಕ್ಷಿ. ಎಲ್ಲರಿಗೂ ನೀರು ಎನ್ನುವ ಅವರ ದೃಢ ಸಂಕಲ್ಪವೇ ಅವರ ಯಶಸ್ಸಾಯಿತು.

ಕೊನೆಗೆ ‘ನೀರ್ ಸಾಬ್’ ಎನ್ನುವ ಹೆಸರಿನಿಂದ ಪ್ರಸಿದ್ಧರಾದರು. ಮೊನ್ನೆ ತಾನೆ ವಿಧಾನಸಭೆ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಪರಿಶ್ರಮದಿಂದ ಕೆರೆಯೊಂದು ತುಂಬಿ ನಿಂತಾಗ ಭಾವುಕರಾದ ಕ್ಷಣವೇ ಒಬ್ಬ ನಾಯಕನ ಮತದಾರನ ಜತೆಗಿನ ಬದ್ಧತೆ ಸಮಾಜಮುಖಿ ಗುಣವನ್ನು ತೋರಿಸುತ್ತದೆ. ಇಂತಹ ಗುಣವನ್ನೆ ರಾಜ್ಯ ನಿಮ್ಮಗಳಿಂದ ನಿರೀಕ್ಷಿಸುವುದು. ಅದು ಬಿಟ್ಟು ಆಧಿಕಾರದ ಹಪಾಹಪಿ ನಡೆಗಳು ಜನರಲ್ಲಿ ಯಾವ ರೀತಿಯ ಭಾವನೆಗಳನ್ನು ಹುಟ್ಟು ನಿವೇ ಯೋಚಿಸಿ. ಸದ್ಯ ರಾಜ್ಯದಲ್ಲಿ ಕಚ್ಚಾಟದಿಂದ ಸರಕಾರವೇ ಇಲ್ಲದಂತಾಗಿದೆ. ಹುಚ್ಚಾಟಗಳನ್ನು ಬಿಟ್ಟು ಅಭಿವೃದ್ಧಿಗೆ ಗಮನ ಕೊಡಬೇಕಿದೆ. ಬಾಯಿ ಬಿಟ್ಟರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಬೊಗಳೆ ಬಿಡುವುದನ್ನು ಬಿಟ್ಟು ಪಕ್ಷಕ್ಕೆ ನಿಷ್ಠರಾಗಿ. ನೀಡಿದ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿ ಜನ ನಿಮಗೆ ಹಾಕಿದ ಮತಕ್ಕೆ ಒಂದಿಷ್ಟು ಬೆಲೆ ಬರುವಂತೆ ನೋಡಿಕೊಳ್ಳುವ ಹೊಣೆ ನಿಮ್ಮದಾಗಬೇಕಿದೆ.

ಕೊನೆ ಮಾತು: ಯಾರಿಗೋ ಸಚಿವ ಸ್ಥಾನ ಸಿಗಲಿಲ್ಲವೆಂದು ಬೆಂಬಲಿಗರು ಸಾರ್ವಜನಿಕವಾಗಿ ಗಲಾಟೆ ಮಾಡುವುದು ಆಸ್ತಿ-ಪಾಸ್ತಿ ಮಾಡುತ್ತಿರುವುದು ನಿಮಗೆ ಕಾಣದೆ? ಅನುಕೂಲಕ್ಕೆ ತಕ್ಕಂತೆ ಜಾಣ ಕುರುಡರಾಗುವಿರೆ?

Leave a Reply

Your email address will not be published. Required fields are marked *

five × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top