About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಡಿಕೆಶಿ ವಿರುದ್ಧ ಇಡಿ ಎಫ್‍ಐಆರ್..?, ಬಿಜೆಪಿ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ

ಬೆಂಗಳೂರು: ದೆಹಲಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತರ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಚಿವ ಡಿಕೆಶಿ ಆಪ್ತರ ದೆಹಲಿ ನಿವಾಸದ ಮೇಲೆ ರೇಡ್ ಮಾಡಿದ್ದ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳು, ದಾಖಲೆಗಳಿಲ್ಲದ ಹಣವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣವನ್ನು ಐಟಿ ಅಧಿಕಾರಿಗಳು ಇಡಿಗೆ ಹಸ್ತಾಂತರಿಸಿದ್ದರು. ಇದೇ ವಿಚಾರವಾಗಿ ಡಿಕೆಶಿ ವಿರುದ್ಧ ಇಡಿ ಎಫ್‍ಐಆರ್ ದಾಖಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೆ ಸೋಮವಾರ ಡಿಕೆಶಿ ಅವರನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಈ ವಿಚಾರವಾಗಿ ಸಚಿವ ಡಿಕೆಶಿ ಸಹೋದರ ಡಿ.ಕೆ.ಸುರೇಶ್, ‘ವಿನಾಕಾರಣ ಬಿಜೆಪಿ ಡಿಕೆಶಿಯನ್ನು ಟಾರ್ಗೆಟ್ ಮಾಡುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಕೇಸ್‍ಗಳನ್ನು ಹಾಕಿ ಬೆದರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ‘ಈ ಹಿಂದೆ ಐಟಿ ದಾಳಿ ನಡೆಸಿದ್ದರು. ಆದರೆ ಇದರಿಂದ ಏನೂ ಆಗದೇ ಇರುವುದರಿಂದ ಬಿಜೆಪಿ ಹಿಂಬಾಗಿಲಿನಿಂದ ಬಂಧಿಸುವ ಯತ್ನ ನಡೆಸಿದೆ’ ಎಂದು ಅವರು ಆರೋಪಿಸಿದರು.

ಇನ್ನು ‘ರಾಜ್ಯ ಬಿಜೆಪಿ ನಾಯಕರ ಒತ್ತಡದಿಂದಾಗಿ ಸಿಬಿಐ ಮೋರ್ಚಾ, ಇಡಿ ಮೋರ್ಚಾ, ಐಟಿ ಮೋರ್ಚಾಗಳಾಗಿ ಕೆಲಸ ಮಾಡುತ್ತಿದೆ. ನಮ್ಮನ್ನು ಟಾರ್ಗೆಟ್ ಮಾಡಲು ಇಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳೆದ 10 ದಿನಗಳ ಹಿಂದೆ ನನಗೂ ಸಿಬಿಐ ನೋಟಿಸ್ ಬಂದಿತ್ತು. ತನಿಖೆಗೆ ನಾವು ಎಲ್ಲ ರೀತಿ ಸಹಕಾರ ನೀಡಿದ್ದೇವೆ. ಆದರೆ ಬಿಜೆಪಿ ಕುದುರೆ ವ್ಯಾಪಾರ ಮತ್ತು ವಾಮಮಾರ್ಗದಂತಹ ಅಡ್ಡದಾರಿ ಹಿಡಿದಿದೆ’ ಎಂದು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಡಿ.ಕೆ.ಸುರೇಶ್, ‘ನಮ್ಮ ಮೇಲೆ ಇಡಿ, ಐಟಿ ದಾಳಿ ನಡೆಸಿಲ್ಲ. ಇವೆಲ್ಲ ಬಿಜೆಪಿಯವರು ವದಂತಿ ಹಬ್ಬಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಅಲ್ಲದೆ ಬಿ.ಎಸ್.ಯಡಿಯೂರಪ್ಪ ಅವರು ಡಿಕೆಶಿ ವಿರುದ್ಧ ಐಟಿ ಇಲಾಖೆಗೆ ಪತ್ರ ಬರೆದಿದ್ದ ದಾಖಲೆಯನ್ನು ಇದೇ ವೇಳೆ ರಿಲೀಸ್ ಮಾಡಿದರು. ‘ನಮಗೆ ಯಾವುದೇ ಭಯವಿಲ್ಲ, ನಾವು ಬಗ್ಗುವುದಿಲ್ಲ. ಬಿಎಸ್‍ವೈ ಅವರು ಬರೆದ ಪತ್ರದಿಂದಾಗಿ ಟಾರ್ಗೆಟ್ ಮಾಡ್ತಿದ್ದಾರೆ. ವಾಸ್ತವವನ್ನು ಜನರ ಮುಂದೆ ಇಡುತ್ತೇವೆ’ ಎಂದರು. ‘ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ, ಎಲ್ಲವೂ ಕಾಲವೇ ಉತ್ತರಿಸಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ‘ಡಿಕೆಶಿಗೆ ಇಡಿ, ಐಟಿಯಿಂದ ಅನ್ಯಾಯವಾಗುತ್ತಿದೆ’ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ‘ಬಿಜೆಪಿಯಿಂದ ಮೈತ್ರಿ ಸರಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ. ಯಾರ ಪ್ರಯತ್ನವೂ ನಡೆಯಲ್ಲ, ಐದು ವರ್ಷ ಸರಕಾರ ಸುಭದ್ರವಾಗಲಿದೆ” ಎಂದು ಅವರು ಹೇಳಿದರು. ಅಲ್ಲದೆ ‘ಸಚಿವ ಡಿಕೆಶಿ ಸಮ್ಮಿಶ್ರ ಸರಕಾರದ ಒಂದು ಭಾಗ. ನಾವು ಡಿಕೆಶಿ ಪರ, ಇನ್ಯಾರ ಪರ ಅಂತಲ್ಲ. ಅನ್ಯಾಯದ ವಿರುದ್ಧ ನಮ್ಮ ಹೋರಾಟ’ ಎಂದು ಸ್ಪಷ್ಟಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close