About Us Advertise with us Be a Reporter E-Paper

ವಿರಾಮ

ಮೋಹ ಬೇಡ ಆ ವಸ್ತುವಿನ ಮೇಲೆ

ಮಾಲಾ ಮ ಅಕ್ಕಿಶೆಟ್ಟಿ, ಬೆಳಗಾವಿ

ಅವ್ವಳಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅಪ್ಪ ಕೊಡಿಸಿದ ಹಲವು ವಸ್ತುಗಳ ಮೇಲಿನ ನಮ್ಮ ಪ್ರೀತಿ ಎಂದೂ ಕಡಿಮೆಯಾಗಲ್ಲ ಎಂದು. ಅಪ್ಪ ಪ್ರೀತಿಯಿಂದ ಕೊಡಿಸಿದ್ದು ಅಥವಾ ನಾವು ಕಾಡಿ ಬೇಡಿ ಕೊಡಿಸಿಕೊಂಡಿದ್ದು ಎಂದೋ, ಒಟ್ಟಿನಲ್ಲಿ ಯಾವುದನ್ನು ಮಾರತಿರಲಿಲ್ಲ.

ಪೂರ್ತಿ ಕೆಟ್ಟ ಹಳೆಯ ಸೈಕಲ್ ಒಂದನ್ನು ಮಾರುವ ವಿಚಾರ ಬಂದಾಗ, ನಾವೆಲ್ಲ ಬೇಡ ಎಂದು ಹಾಗೆಯೇ ಇಟ್ಟುಕೊಂಡೆವು. ಒಂದು ಕಾಲದಲ್ಲಿ  ಹೊಳೆದ, ಆ ಸೈಕಲ್‌ನ ಪ್ರತಿ ಇಂಚೂ ಕೂಡ ತುಕ್ಕುಹಿಡಿದು, ಓಡಿ ಸಲಾರದ ಸ್ಥಿತಿಯಲ್ಲಿದ್ದರೂ ಮಾರಲಿಲ್ಲ. ಅಪ್ಪನನ್ನು ಕಳೆದುಕೊಂಡಿದ್ದೇವೆ, ಕಡೆ ಪಕ್ಷ ಅಪ್ಪ ಕೊಡಿಸಿದ ಸಾಮಾನುಗಳನ್ನು, ಹಾಗೆಯೇ ಇಟ್ಟುಕೊಳ್ಳೊಣ ಎಂಬ ಭಾವದಿಂದ ಯಾವುದನ್ನೂ ಗುಜರಿಗೆ ಹಾಕಲಿಲ್ಲ.

  ಈ ರೀತಿ, ಅಪ್ಪ ಕೊಡಿಸಿದ ವಸ್ತುಗಳ ಮೇಲೆ ಇದ್ದ ನಮ್ಮ ಪ್ರೀತಿ ಮತ್ತು ಗೌರವವನ್ನು ಸೂಕ್ಷ್ಮವಾಗಿ ಕಂಡ ಅವ್ವ ತನ್ನ ಒಂದು ವಸ್ತುವನ್ನು ನಾಶಮಾಡಿ ಕಣ್ಣೀರು ಹಾಕಿದ್ದು ಮಾತ್ರ ಮನ ಕಲಕಿತು. ತಾನು  ಹಳೆಯ ಸಾಮಾನುಗಳು ಹೀಗೆಯೇ ಉಪಯೋಗಕ್ಕೆ ಬರದಿದ್ದರೂ ತನ್ನ ಮಕ್ಕಳು ಇಟ್ಟುಕೊಂಡೇ ಕೂತಿರುತ್ತಾರೆ ಎಂದು ತನ್ನ ಹಳೆಯ ದೊಡ್ಡದಾದ ಡ್ರಾಯಿಂಗ್ ಬುಕ್ಕನ್ನು ಸುಟ್ಟುಹಾಕಿಬಿಟ್ಟಳು. ಆ ಬುಕ್ಕು ಆಕೆ ಬಾಲ್ಯದಲ್ಲಿ ಕಲಿತ ಡ್ರಾಯಿಂಗ್ ಕೋರ್ಸನ ಭಾಗವಾಗಿತ್ತು. ಪ್ರತಿ ಸಲ ಚಿತ್ರಗಳನ್ನು ನೋಡಿದಾಗ, ‘ಅವ್ವ ನೀ ವಿದ್ಯಾರ್ಥಿಯಿರೊವಾಗ ಚಿತ್ರಾ ಬಿಡಿಸಿಯಲ್ಲಾ, ಎಷ್ಟು ಚಂದ,  ನಮಗ ಹಿಂಗ ಬಿಡಿಸಾಕ ಬರಲ್ಲ ನೋಡ’ ಎಂದು ಆಕೆಯನ್ನು ಪ್ರಶಂಸಿಸುತ್ತಿದ್ದೆವು. ಸುಮಾರು 42 ವರ್ಷ ಹಳೆಯದಾದ ಆ ಡ್ರಾಯಿಂಗ್  ಇಟ್ಟಲ್ಲಿಯೇ ನಶಿಸಿ, ಹಾಳೆಗಳನ್ನು ಮುಟ್ಟಿದರೆ  ಚೂರುಚೂರಾಗುವ ಹಂತವನ್ನು ತಲುಪಿದ್ದವು. ಅದನ್ನು ಅವ್ವ ಎಷ್ಟೋ ಸಾರಿ ರದ್ದಿಗೆ ಹಾಕೋಣ ಎಂದಾಗ, ನಾವೆಲ್ಲರೂ ವಿರೋಧಿಸಿದ್ದೆವು. ನಮ್ಮ ವಿರೋಧವನ್ನು ನೋಡಿ ಇಷ್ಟು ದಿನ ಅವ್ವ ಸುಮ್ಮನಿದ್ದಳು. ಅವ್ವ ಕಷ್ಟ ಪಟ್ಟು ಬಿಡಿಸಿದ ಚಿತ್ರಗಳು, ಹೇಗಾದರೂ ಇರಲಿ ನಮಗೆ ಬೇಕು ಎಂದು ಸುಮ್ಮನಾಗುತ್ತಿದ್ದೆವು.

ಒಂದು ಸಂಜೆ ಹಿತ್ತಲಲ್ಲಿ ಹೊಗೆ ಬರುತ್ತಾ ಇತ್ತು. ಲಗುಬಗೆಯಿಂದ ಓಡಿ ನೋಡಿದಾಗ, ಅವ್ವ ಆ ಎಲ್ಲಾ ಚಿತ್ರಗಳನ್ನು ಸುಡುತ್ತಾ ಕೂತಿದ್ದಳು.  ಕ್ಷಣಗಳಲ್ಲಿ ಡ್ರಾಯಿಂಗ್ ಬುಕ್‌ನ ಹಾಳೆಗಳು ಬೂದಿಯಾದವು. ನಮ್ಮ ಕಣ್ಣಲ್ಲಿ ನೀರಾಡುತ್ತಿತ್ತು. ನಮ್ಮನ್ನು ನೋಡಿ ಅವ್ವಳೂ ಕಣ್ಣೀರಾದಳು. ನಾವಿದ್ದಲ್ಲಿಗೆ ಅವ್ವ ಎದ್ದು ಬಂದು, ‘ಮನೆಯಲ್ಲಿಯ ಎಲ್ಲ ವಸ್ತುಗಳು ನಿಮ್ಮಪ್ಪ ಅಥವಾ ನನ್ನವು. ಎಲ್ಲದಕ್ಕೂ ಒಂದ ಕೊನೆ ಇರತದ. ಅದ ಆಗಬೇಕು. ಮೊನ್ನೆ ನಿಮ್ಮ ಅಪ್ಪಾರ ಕೊಡಸಿದ ಸೈಕಲ್‌ನ್ನು ಮಾರಲ್ಲದನ ಇಟಕೊಂಡ್ರಿ. ಬೇಕಾದ್ದುವು, ಬ್ಯಾಡಾದ್ದವು ಎಲ್ಲಾ ಇಟಕೊಂಡ ಕುಡತೆರಿ, ಇನ್ನ ನನ್ನ ವಸ್ತುಗಳನ್ನು ಸಹ ಹಂಗ ಇಟಕೊತೆರಿ. ಬ್ಯಾಡಾದ ಸಾಮಾನ ಇಟಕೊಂಡ  ಮಾಡೋದ? ಅದೂ ಅಲ್ಲದ, ಅವನ್ನ ನೋಡಿ ಅಪ್ಪ ಕೊಡಿಸಿದ್ದ ಎಂದ ಕಣ್ಣೀರ ಹಾಕತೆರಿ. ನಿಮ್ಮಪ್ಪಾರನ್ನ ಕಳಕೊಂಡೆರಿ, ಇನ್ನ ಆ ವಸ್ತುಗಳ ಮೇಲೆ ಯಾಕಂತ ಮೋಹ? ಕೊಡಿಸಿದ ಎಲ್ಲಾ ವಸ್ತುಗಳನ್ನು ನೋಡಿ ಅಳಕೋತ ಕುಡತೆರಿ ಅಂದ ನನ್ನ ಬುಕ್ಕ ನಾನ ಸುಟ್ಟ ಹಾಕಿದ್ನಿ’ ಅಂದ ಅವ್ವನ ಕಣ್ಣಲ್ಲಿ ಧಾರಾಕಾರ ಕಣ್ಣೀರು ಸುರಿತಿತ್ತು.

Tags

Related Articles

Leave a Reply

Your email address will not be published. Required fields are marked *

Language
Close