About Us Advertise with us Be a Reporter E-Paper

ವಿವಾಹ್

ಆಲಿಸಬಾರದೇ ಮದುಮಗಳ ತಲ್ಲಣದ ಸುಳಿಗೊಳವ

- ಜಯಶ್ರೀ. ಜೆ. ಅಬ್ಬಿಗೇರಿ, ಬೆಳಗಾವಿ

ಹೊಸ ಜೀವನದ ಕನಸಿನ ಹೂ ರಾಶಿ ಕಣ್ಮುಂದೆ ಅರಳುತ್ತಿದೆ. ಮನದಲ್ಲಿ ಅದೇನೋ ಪುಳಕದ ಭಾವಗಳು. ಪದಗಳಲ್ಲಿ ಹೇಳಲಾಗದ ಖುಷಿ, ತನ್ನಷ್ಟಕ್ಕೆ ತಾನೇ ಗರಿಗೆದರಿ ನಿಂತು ನರ್ತಿಸುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ತನ್ನ ಬದುಕಿನ ನದಿಗೆ ಹೊಸ ತಿರುವೊಂದು ಸಿಗಲಿದೆ. ರೂಪವತಿ, ಗುಣವತಿ, ವಿದ್ಯಾವಂತೆ, ಬುದ್ಧಿವಂತೆಯಾದರೂ ಮದುಮಗಳ ಸ್ಥಾನದಲ್ಲಿರುವ ಆಕೆ ಯಾರ ಮುಂದೆಯೂ ಮುಕ್ತವಾಗಿ ಏನನ್ನೂ ಹೇಳದ ಸಾಧನೆಯ ಮೆಟ್ಟಿಲೇರಿದವಳಾದರೂ ನವವಧು ಪಟ್ಟ ಧರಿಸಿದಾಗ ಮನದಲ್ಲಿ ಹೇಳಿಕೊಳ್ಳಲಾಗದ ಆತಂಕ, ಗಾಬರಿ ಇದ್ದೇ ಇರುತ್ತವೆ. ಇನ್ನು ಸಾಮಾನ್ಯ ಹುಡುಗಿಯರ ಕತೆಯಂತೂ ಹೇಳತೀರದು. ಈ ತುಮುಲಗಳಿಗೆ ಇಷ್ಟೇ ಎಂದು ಪಕ್ಕಾ ಗೆರೆ ಎಳೆದು ಉತ್ತರಗಳನ್ನು ಸಲೀಸಾಗಿ ಹೇಳಿ ಬಿಡಲು ಸಾಧ್ಯವಿಲ್ಲ. ಹೆಣ್ತನದ ಭಾವಗಳೇ ಅಂಥವು.

ಹೊಸ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳಬೇಕೆನ್ನುವುದು ನವವಧುವಿನ ಮನದಲ್ಲಿ ಸದಾ ಕೊರೆಯುತ್ತಿರುತ್ತದೆ. ಹೊರಗಡೆ ಸುತ್ತಾಡುವುದು, ಸಿನಿಮಾ ನೋಡುವುದು, ಮುದ್ದಿಸುವುದನ್ನು ನೆನೆಯುವುದರಲ್ಲಿ ಮದುಮಗಳ ಮನಸ್ಸು ಮುಳುಗುವುದಿಲ್ಲ. ನೂರಾರು ಮನದಲ್ಲಿ ಹೊಯ್ದಾಡುತ್ತಿರುತ್ತವೆ. ಹಸೆ ಮಣೆಯೇರಲು ಸಿದ್ಧಳಾಗಿರುವ ಚಂದನದ ಗೊಂಬೆಗೆ ಛೇಡಿಸುತ್ತೇವೆ. ಕಾಡಿಸುತ್ತೇವೆ. ಗಂಡನ ಹೆಸರಿನಲ್ಲಿ ಗೋಳು ಹೊಯ್ದುಕೊಳ್ಳುತ್ತೇವೆಯೇ ಹೊರತು ಆಕೆಯ ಮನದಂಗಳದಲ್ಲಿ ಬರೀ ಸಂಭ್ರಮ ತುಂಬಿದೆ ಎನ್ನುವುದು ನಮ್ಮ ಭ್ರಮೆ. ಮದುವೆಗೂ ಮುನ್ನ ಮದುಮಗಳ ಮನದಂಗಳ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.

ಹಕ್ಕು ತನಗಿಲ್ಲವೇ?
ಗಂಡು ತನ್ನ ಚೆಲುವಿಕೆಗೆ, ಉದ್ಯೋಗಕ್ಕೆ ಮೆಚ್ಚಿದರೆ ಸಾಕಾ? ನನ್ನ ಅಂತರಂಗದ ಆಸೆಗಳಿಗೆ ಕಿವಿಗಳೇ ಇಲ್ಲವೇ? ಗಂಡಿಗೆ ಒಪ್ಪಿಗೆಯಾಗದಿದ್ದರೆ ಮದುವೆ ನಡೆಯಲಾರದು. ಆದರೆ ತನ್ನ ಒಪ್ಪಿಗೆ ಬೇಕಾಗಿಲ್ಲ. ವಿವಾಹ ತನಗೆ ಒಪ್ಪಿಗೆಯಾಗಿದೆಯೇ? ಎಂಬ ಪ್ರಶ್ನೆಯನ್ನು ನೆಪ ಮಾತ್ರಕ್ಕೂ ಕೇಳಲಾಗುವುದಿಲ್ಲ. ತನಗೆ ಸರಿಯಾದ ಜತೆಗಾರನನ್ನು ಆರಿಸುವ ಹಕ್ಕು ತನಗಿಲ್ಲವೇ? ತಾವೇ ತಾವೇ ಎಲ್ಲವನ್ನೂ ನಿರ್ಧರಿಸಿ ಹರಕೆಯ ಕುರಿಯಂತೆ ತನ್ನನ್ನು ಬಲಿ ಕೊಡಲಾಗುತ್ತಿದೆ ಎಂಬುದು ಎಷ್ಟೋ ಅಸಹಾಯಕ ಹೆಂಗಳೆಯರ ಮನಸ್ಥಿತಿ.

ನೆರಳಲ್ಲಿಯೇ ಬಾಳಬೇಕಲ್ಲವೇ?
ಇಂದು ಮೊದಲಿಗಿಂತ ವಾತಾವರಣ ಅಲ್ಪ ಸ್ವಲ್ಪ ಬದಲಾಗಿದೆ. ವರನನ್ನು ಕಣ್ಣಂಚಿನಲ್ಲಿ ನೋಡುವ ಕನ್ಯೆ ಕೊಂಚ ದಿಟ್ಟೆಯಾಗಿದ್ದಾಳೆ. ಆದರೂ ಖಾಸಗಿಯಾಗಿ ಮಾತನಾಡಲು ಹೇಳಿದರೆ ನಾಚಿ ನೀರಾಗುತ್ತಾಳೆ. ತನ್ನ ಬೇಕು ಬೇಡಗಳನ್ನು ಯಾವ ಸಂಕೋಚವಿಲ್ಲದೇ ಪಟ ಪಟ ಹೇಳಿ ಬಿಡುತ್ತಾನೆ. ಆದರೆ ಇವಳಿಗೆ ಏನೆಲ್ಲವನ್ನು ಆತನ ಮುಂದೆ ಹೇಳಿಕೊಳ್ಳಬೇಕು ಎಂದು ಗೊಂದಲಕ್ಕೀಡಾಗಿ ಭಯದಲ್ಲಿ ಒಂದೆರಡು ಪ್ರಶ್ನೆಗಳಿಗೆ ಹ್ಞಾಂ ಹ್ಞೂಂ ಎಂದಷ್ಟೇ ಉತ್ತರಿಸುತ್ತಾಳೆ. ಕಣ್ಣಳತೆಯಲ್ಲಿ ಆತನನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ. ಕನವರಿಕೆಗಳಿಗೆಲ್ಲ ಕಾಲವೇ ಉತ್ತರಿಸುತ್ತದೆಂದು ತಕ್ಷಣಕ್ಕೆ ತನ್ನಷ್ಟಕ್ಕೆ ತಾನೇ ಸಮಾಧಾನಿಸಿಕೊಳ್ಳುತ್ತಾಳೆ. ಕೆಲವು ಮನೆಯಲ್ಲಿ ಮದುವೆಗೂ ಮುನ್ನ ಹುಡುಗನ ಜತೆ ಏನು ಮಾತು? ನಂತರ ಹೇಗಿದ್ದರೂ ಅವನ ನೆರಳಲ್ಲಿಯೇ ಬಾಳಬೇಕಲ್ಲವೇ? ಮಗಳನ್ನು ಕೇಳೋಕೆ ಈ ವಿಷಯದಲ್ಲಿ ಏನು ಗೊತ್ತಾಗುತ್ತದೆ ಎಂದು ತಾವೇ ಎಲ್ಲವನ್ನೂ ನಿರ್ಧರಿಸುತ್ತಾರೆ. ಹಿರಿಯರೇ ಖುದ್ದಾಗಿ ನಿರ್ಧರಿಸಿದ ಮದುವೆ ಎಂಬ ನೊಗಕ್ಕೆ ಮನಸ್ಸಿಲ್ಲದಿದ್ದರೂ ಕೊರಳು ಕೊಡುವುದು ಅನಿವಾರ್ಯ.

ತಲೆ ಬಿಸಿ ನನಗಷ್ಟೆ ಏಕೆ?
ಇನ್ನು ಮುಂದೆ, ಇದುವರೆಗಿದ್ದ ನಾನು ನಾನಲ್ಲ. ನನ್ನೆಲ್ಲ ಇಷ್ಟಾನಿಷ್ಟಗಳು ಗಂಡನ ಮನೆಯವರ ಆಶೋತ್ತರಗಳ ತಕ್ಕ ಹಾಗೆ ಬದಲಾಗಬೇಕು. ನಾನಂದುಕೊಂಡ ಆತ್ಮೀಯತೆ, ಸ್ನೇಹಪರ ಭಾವನೆಗಳು ಮುಂಬರುವ ಸಂಬಂಧಗಳ ಮನಸ್ಸಿನಲ್ಲಿರದಿದ್ದರೆ? ನನ್ನ ಸ್ನೇಹವನ್ನು ಬೇರೆಯಾಗಿ ಅರ್ಥೈಸಿಕೊಂಡರೆ ಏನು ಮಾಡುವುದು? ಅಕ್ಕ ಮನೆಯವರಿಗೆ ಆಡಿಕೊಳ್ಳುವಂಥ ಆಹಾರವಾದರೆ? ಮನೆಗೆಲಸಗಳಲ್ಲಿ ನನಗೇನೂ ತಿಳಿಯದೆಂದು ಅಸಡ್ಡೆ ಮಾಡಿ ನಗಾಡಿದರೆ? ಹೀಗೆ ಒಂದಲ್ಲ ಎರಡಲ್ಲ ನೂರಾರು ಪ್ರಶ್ನೆಗಳು ತಲೆ ಬಿಸಿ ಏರಿಸುತ್ತವೆ. ಗಂಡನಾಗುವವನಿಗೆ ಈ ಎಲ್ಲ ಗೊಂದಲಗಳ ಗಂಧಗಾಳಿ ತಿಳಿಯದು. ತಿಳಿದಿದ್ದರೂ ತಲೆ ಕೆಡಿಸಿಕೊಳ್ಳುವುದು ತುಂಬಾ ವಿರಳ. ಈ ಎಲ್ಲ ಉತ್ತರ ಸಿಗದ ಪ್ರಶ್ನೆಗಳ ಕಡಲು ತನಗಷ್ಟೇ ಮೀಸಲು ಏಕೆ?

ಹೀಗೆ ಸ್ಪಂದಿಸಿ
ಮಾನಸಿಕವಾಗಿ ತನ್ನವರನ್ನೆಲ್ಲ ತೊರೆದು ಆಚೆ ಬರಲಾಗದೇ ಒದ್ದಾಡುವ ಆಕೆಯೊಂದಿಗೆ ನೀವಿದ್ದೀರಿ ಎಂಬ ವಿಶ್ವಾಸ ಹೊಂದಿಕೊಳ್ಳದಿದ್ದರೆ ಬದುಕು ಕಳೆದು ಹೋಗುತ್ತದೆಂದು ಹೋರಾಡಬೇಕು ಎಂಬ ಮನಸ್ಥಿತಿಯಲ್ಲಿರುವ ಆಕೆಗೆ ನಾನೂ ನಿನ್ನ ಕಷ್ಟ , ಸುಖಗಳಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಧೈರ್ಯ ತುಂಬಿ ತನ್ನವರಿಲ್ಲದ ಲೋಕದಲ್ಲಿ ಅವಮಾನ ಹತಾಶೆ ನುಂಗಿಕೊಳ್ಳಬೇಕು ಎಂದು ತಿಳಿಯಬೇಡ. ಇದು ನಿನ್ನದೇ ಮನೆ. ಆ ಮನೆಯ ಯಜಮಾನಿ ನೀನೇ ಎಂದು ಹುರಿದುಂಬಿಸಿ. ನಿಂತ ಕಾಲಲ್ಲೇ ಬದಲಾಗುವುದು ಹೇಗೆ? ಎಂಬ ಆತಂಕದಲ್ಲಿರುವವಳಿಗೆ, ಸಾಧ್ಯವಾದಷ್ಟು ಸಾಂತ್ವನ- ಭರವಸೆ ನೀಡಿ. ಆಕೆ ಮೇಲ್ನೋಟಕ್ಕೆ ಖುಷಿಯಾಗಿರುವಂತೆ ಕಂಡರೂ ಪ್ರೀತಿ, ಕೋಪ, ಎಲ್ಲ ಭಾವನೆಗಳನ್ನು ಒಮ್ಮೆಲೇ ಎದುರಿಸುತ್ತಿರುತ್ತಾಳೆ. ಮನೆ ಮಂದಿಯೊಂದಿಗೆ ಹೊಂದಿಕೊಳ್ಳಲು, ಮೊದ ಮೊದಲು ಸೋತರೂ ಕೊನೆಗೆ ಗೆಲ್ಲುವುದು ನೀನೇ ಎಂಬ ಬೀಜವನ್ನು ಆಕೆಯ ಹೃದಯದಲ್ಲಿ ಬಿತ್ತಿ. ನಿನ್ನ ಹೆಜ್ಜೆಯಲ್ಲೇ ಹೆಜ್ಜೆ ಹಾಕುವೆ, ‘ಲಜ್ಜೆ ಬಿಟ್ಟು ಬಳಿ ಬಾ ವೈಯ್ಯಾರಿ,’ ಎಂದು ಹಾಡುತ್ತ ಆಕೆಯ ಎದೆಯ ಅರಮನೆಯಲ್ಲಿ ಶಾಶ್ವತ ದೊರೆಯಾಗಿ. ಉತ್ತಮ ಪತಿಯಾಗಿ.

Tags

Related Articles

Leave a Reply

Your email address will not be published. Required fields are marked *

Language
Close