Thursday, 28th March 2024

ರಾಜ್ಯವೀಗ ರಾಷ್ಟ್ರೀಯ ಪಕ್ಷಗಳ ಪ್ರಯೋಗ ಶಾಲೆ !

BJP and Congress

ಅಶ್ವತ್ಥಕಟ್ಟೆ

ranjith.hoskere@gmail.com

ಕರ್ನಾಟಕದಲ್ಲಿ ಯಾವುದೇ ಪ್ರಯೋಗ ಮಾಡಿದರೂ, ಪಕ್ಷದ ಮೂಲ ಸಂಘಟನೆಗೆ ಹೊಡೆತ ಬೀಳುವುದಿಲ್ಲ ಎನ್ನುವ ಅತಿ ಆತ್ಮವಿಶ್ವಾಸ ಎರಡೂ ಪಕ್ಷಗಳಿದೆ. ಆದ್ದರಿಂದಲೇ, ಇಲ್ಲಿನ ಸ್ಥಳೀಯ ನಾಯಕರ ಸಲಹೆಗಳನ್ನು ಕೇಳದೆ, ಕೆಲವು ತೀರ್ಮಾನಗಳನ್ನು ತಗೆದುಕೊಳ್ಳುತ್ತಿದ್ದಾರೆ.

ರಾಜಕೀಯದಲ್ಲಿ ಪ್ರಯೋಗ, ರಿಸ್ಕ್ ಅತ್ಯಗತ್ಯ. ಯಾವುದೇ ಪಕ್ಷ ಮೈಕೊಡವಿ ನಿಲ್ಲಬೇಕಾದರೆ, ಆಡಳಿತ ನಡೆಸಬೇಕಾದರೆ ತೀರ್ಮಾನಗಳು ಅತ್ಯಗತ್ಯ ವಾಗಿರುತ್ತದೆ. ಈ ರೀತಿಯ ತೀರ್ಮಾನಗಳನ್ನು ಪಕ್ಷದ ವರಿಷ್ಠರು ತಗೆದುಕೊಳ್ಳುತ್ತಾರೆ. ಅದನ್ನು ಪಕ್ಷದ ಕಾರ್ಯಕರ್ತರ ಹಾಗೂ ಇನ್ನಿತರರು ಒಪ್ಪಿಕೊಳ್ಳಲೇ ಬೇಕಾಗಿರು ತ್ತದೆ. ಅದರಲ್ಲಿಯೂ ರಾಷ್ಟ್ರೀಯ ಪಕ್ಷಗಳಲ್ಲಿ ಮಾತು ಮಾತಿಗೂ ‘ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ’ ಎನ್ನುವ ಮಾತನ್ನು ರಾಜ್ಯದ ಪ್ರಭಾವಿ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನವರೆಗೆ ಹೇಳುವುದು ಸಾಮಾನ್ಯ.

ರಾಷ್ಟ್ರೀಯ ಪಕ್ಷಗಳ ಪ್ರತಿಯೊಂದು ತೀರ್ಮಾನಗಳು ಹೈಕಮಾಂಡ್ ನೆರಳಿನಲ್ಲಿಯೇ ತಗೆದುಕೊಳ್ಳುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇತ್ತೀಚಿನ ದಿನದಲ್ಲಿ ರಾಷ್ಟ್ರೀಯ ಪಕ್ಷಗಳ ವರಿಷ್ಠರು ಕರ್ನಾಕಟದ ವಿಷಯದಲ್ಲಿ ತಗೆದುಕೊಳ್ಳುತ್ತಿರುವ ತೀರ್ಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ‘ಕರ್ನಾಟಕ ವನ್ನು ರಾಜಕೀಯದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ’ಯೇ ಎನ್ನುವ ಅನುಮಾನ ಕಾಡುತ್ತದೆ.

ಈ ರೀತಿಯ ಅನುಮಾನ ಬಹುತೇಕ ರಾಜ್ಯಗಳ ನಾಯಕರಿಗೆ ಅನಿಸುತ್ತದೆ. ದೆಹಲಿಯಲ್ಲಿರುವ ಪಕ್ಷದ ವರಿಷ್ಠರು ಹೇಳಿದಂತೆ, ರಾಜ್ಯ ನಾಯಕರು ಕೇಳಲೇ ಬೇಕು. ರಾಜ್ಯದ ಆಗು- ಹೋಗಿನ ಬಗ್ಗೆ ಸ್ಪಷ್ಟ ಮಾಹಿತಿಯಿದ್ದರೂ, ಇಲ್ಲದಿದ್ದರೂ ರಾಷ್ಟ್ರೀಯ ನಾಯಕರು ತಮ್ಮ ಬಳಿಯಿರುವ ಮಾಹಿತಿಯನ್ನೇ ಅಂತಿಮ ಎನ್ನುವ ರೀತಿಯಲ್ಲಿ ಪರಿಗಣಿಸಿ ಅದರ ಆಧಾರದಲ್ಲಿಯೇ ತೀರ್ಮಾನಗಳನ್ನು ತಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಈ ರೀತಿಯ ತೀರ್ಮಾನಗಳು ಯಶಸ್ಸಿಯಾಗಬಹುದು. ಆಗದೆಯೂ ಇರಬಹುದು.

ಹಾಗೇ ನೋಡಿದರೆ, ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಕಳೆದ ಆರೇಳು ವರ್ಷದಿಂದ ರಾಜ್ಯ ನಾಯಕರಿಗೆ ಕೇವಲ ‘ಅಚ್ಚರಿ’ಗಳನ್ನು ನೀಡುವುದರಲ್ಲಿಯೇ ಹೈಕಮಾಂಡ್ ನಿರತವಾಗಿದೆ ಎಂದರೆ ತಪ್ಪಾಗುವುದಿಲ್ಲ. ಪ್ರಧಾನಿಯಾಗಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಅಧಿಕಾರಕ್ಕೆ ಬಂದಾಗಿನಿಂದ, ಕರ್ನಾಟಕದ ಬಿಜೆಪಿ ಮಟ್ಟಿಗೆ ಕೇವಲ ಅಚ್ಚರಿಗಳೇ ಹೆಚ್ಚಾಗಿವೆ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ, ಪರಿಷತ್, ರಾಜ್ಯ ಸಭಾ ಹೀಗೆ ಚುನಾವಣಾ ರಾಜಕೀಯದ ಪ್ರತಿ ಹಂತದಲ್ಲಿಯೂ ಒಂದಿಲ್ಲೊಂದು ಅಚ್ಚರಿಯ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರಲ್ಲಿಯೇ ಪಕ್ಷದ ವರಿಷ್ಠರಿದ್ದಾರೆ.
ಕೆಲವೊಮ್ಮೆ ಈ ತಂತ್ರ ವರ್ಕ್‌ಔಟ್ ಆದರೂ, ಕೆಲವೊಮ್ಮೆ ಕೈಕೊಟ್ಟಿರುವ ನಿದರ್ಶನಗಳೂ ಇದೆ.

ಅಚ್ಚರಿಯ ಆಯ್ಕೆ ಮಾತ್ರವಲ್ಲದೇ, ಕೆಲವೊಮ್ಮೆ ಪಕ್ಷದ ವರಿಷ್ಠರು ಪ್ರಯೋಗದ ರೀತಿಯಲ್ಲಿ ತಗೆದುಕೊಳ್ಳುವ ತೀರ್ಮಾನವೂ ಸಮಸ್ಯೆಯನ್ನು ತಂದೊಡಿದೆ. ಇಲ್ಲವೇ, ತಮ್ಮ ಮನಸಿನಲ್ಲಿರುವಂತೆಯೇ ರಾಜ್ಯದಲ್ಲಿ ಆಡಳಿತ ನಡೆಯಬೇಕು ಎನ್ನುವ ವರಿಷ್ಠ ಯೋಚನೆಯೂ, ರಾಜ್ಯದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸು ವಂತೆ ಮಾಡಿದೆ. ಉದಾಹರಣೆಗೆ, ಮೂರು ವರ್ಷದ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಽಕಾರ ಸ್ವೀಕರಿಸಿ ತಿಂಗಳು ಕಳೆದರೂ, ಪಕ್ಷದ
ವರಿಷ್ಠರೂ ಮಾತ್ರ ಸಚಿವ ಸಂಪುಟಕ್ಕೆ ಮನಸು ಮಾಡಲಿಲ್ಲ.

ಇದಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ವರಿಷ್ಠರು ಹೇಳದಿದ್ದರೂ, ಯಡಿಯೂರಪ್ಪ ಅವರಂತೂ ಬೆಂಗಳೂರು- ದೆಹಲಿ ಪ್ರಯಾಣ ಮಾಡುವುದು ಅನಿವಾರ್ಯ ವಾಗಿತ್ತು. ಆದರೆ ಈ ರೀತಿಯ ಪ್ರಯೋಗದಿಂದ, ಕರ್ನಾಟಕದಲ್ಲಿ ಪಕ್ಷಕ್ಕಿದ್ದ ಇಮೇಜ್‌ಗೆ ಅಲ್ಪ ಕಾಲಕ್ಕಾದರೂ ಹೊಡೆತ ಬಿತ್ತು ಎಂದರೆ ತಪ್ಪಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹೇಳುವುದಾದರೂ, ಬಸವರಾಜ ಬೊಮ್ಮಾಯಿ ಅವರ ಸಂಪುಟ ವಿಸ್ತರಣೆ, ಪುನಾರಚನೆಯ ಮಾತುಗಳು ಕಳೆದ ಮೂರು ತಿಂಗಳಿನಿಂದ ಕೇಳಿ ಬರುತ್ತಿದೆ.

ಆದರೆ ಯಾವುದಕ್ಕೂ ಅಂತಿಮ ಎನ್ನುವುದು ಸಿಕ್ಕಿಲ್ಲ. ‘ತೋಳ ಬಂತು, ತೋಳ’ ಎನ್ನುವ ಕಥೆಯಂತೆ ರಾಜ್ಯದ ಸಂಪುಟ ಪುನಾರಚನೆಯಾಗಿರುವುದು ರಾಜ್ಯ ನಾಯಕರನ್ನು ಇರಸು- ಮುರುಸಿಗೆ ಸಿಲುಕುವಂತೆ ಮಾಡಿದೆ. ಆದರೆ ಈ ಬಗ್ಗೆ ಬಹಿರಂಗವಾಗಿ ಪಕ್ಷದ ವರಿಷ್ಠರ ಬಳಿ ಮಾತನಾಡುವಂತೂ ಇಲ್ಲ ಎನ್ನುವುದು ಅಷ್ಟೇ ಸ್ಪಷ್ಟ. ಸಂಪುಟ ಪುನಾರಚನೆಯಷ್ಟೇ ಅಲ್ಲ, ವಿಧಾನಪರಿಷತ್, ರಾಜ್ಯಸಭೆಯ ಆಯ್ಕೆಯ ವಿಷಯದಲ್ಲಿಯೂ ಕರ್ನಾಟಕವನ್ನು ಬಿಜೆಪಿ ವರಿಷ್ಠ ಪ್ರಯೋಗ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಅವಽಯಲ್ಲಿ ಇರಬಹುದು, ಬೊಮ್ಮಾಯಿ ಅವರ ಅವಧಿಯಲ್ಲಿ ಇರಬಹುದು, ರಾಜ್ಯ ಕೋರ್ ಕಮಿಟಿಯಿಂದ ತೀರ್ಮಾನ ಮಾಡಿದ ಒಬ್ಬೇ ಒಬ್ಬರನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಲಿ ಒಪ್ಪಿ, ಅನುಮೋದನೆ ನೀಡಿಲ್ಲ. ಕಳೆದ ಬಾರಿ ರಾಜ್ಯಸಭೆಗೆ ಆಯ್ಕೆ ಮಾಡುವಾಗ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಅವರ ಹೆಸರುಗಳನ್ನೇ ಬಹುತೇಕರು ಕೇಳಿರಲಿಲ್ಲ.

ಆದರೆ ಅವರನ್ನು ಅಭ್ಯರ್ಥಿಗಳನ್ನಾಗಿ ಮಾಡಿತ್ತು. ಈ ಬಾರಿ ಸ್ವತಃ ಜಗ್ಗೇಶ್ ಅವರು ಸಹ ತಾನು ರಾಜ್ಯಸಭೆಗೆ ಹೋಗಬಹುದು ಎಂದು ಎಣಿಸಿರಲಿಕ್ಕಿಲ್ಲ. ಈ ಮಟ್ಟಿಗೆ ಪ್ರಯೋಗ ಮಾಡುವುದು ಕೆಲವೊಮ್ಮೆ ಪಕ್ಷ ಸಂಘಟನೆಗೆ ಹೊಡೆತ ಬಿದ್ದರೂ ಅಚ್ಚರಿಯಿಲ್ಲ ಎನ್ನುವ ಮಾತನ್ನು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಕೆಳದ ವರ್ಷ ಉತ್ತಾರಾಖಾಂಡ್, ಮಣಿಪುರ ಸೇರಿದಂತೆ ಹಲವು ರಾಜ್ಯದಲ್ಲಿ ದಿಡೀರನೇ ಮುಖ್ಯಮಂತ್ರಿಗಳನ್ನು ಬಿಜೆಪಿ ಬದಲಾಯಿಸಿತ್ತು. ಚುನಾವಣೆಗೆ ಹೋಗುವ
ಮೊದಲು, ‘ಆಡಳಿತ ವಿರೋಧಿ’ ಅಲೆಯನ್ನು ತಣಿಸುವುದಕ್ಕೆ ಈ ರೀತಿ ಪ್ರಯೋಗವನ್ನು ಬಿಜೆಪಿ ಮಾಡಿ, ಯಶಸ್ವಿಯಾಗಿತ್ತು.

ಕರ್ನಾಟಕದಲ್ಲಿಯೂ ಈ ರೀತಿಯ ಪ್ರಯೋಗ ಮಾಡುವುದೇ ಅಥವಾ ಚುನಾವಣೆಗೆ ಆರು ತಿಂಗಳು ಇರುವಾಗ ಮುಖ್ಯಮಂತ್ರಿಯನ್ನು ಉಳಿಸಿಕೊಂಡು ಇಡೀ ಸಂಪುಟವನ್ನೇ ಬದಲಾಯಿಸುವುದೇ ಎನ್ನುವ ಮಾಹಿತಿ ಯಾರಿಗೂ ಇಲ್ಲ. ಈ ರೀತಿಯ ಪ್ರಯೋಗ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ ಕಾಂಗ್ರೆಸ್‌ನಲ್ಲಿಯೂ ಇದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿಗೆ ಬೇಸತ್ತು ಪಕ್ಷವನ್ನು ಬಿಟ್ಟವರ ಪಟ್ಟಿಯೇ ದೊಡ್ಡ ದಾಗಿದೆ. ಬಿಜೆಪಿಯ ರೀತಿಯಲ್ಲಿಯೇ, ಕಾಂಗ್ರೆಸ್‌ನಲ್ಲಿಯೂ ದೆಹಲಿ ಯಲ್ಲಿರುವ ನಾಯಕರು ‘ಪ್ರಯೋಗ’ ಮಾಡುತ್ತಾರೆ.

ಈ ರೀತಿ ಪ್ರಯೋಗದಿಂದ ಕಾಂಗ್ರೆಸ್ ಲೋಕಸಭೆಯಲ್ಲಿ ಬಹುದೊಡ್ಡ ಏಟನ್ನು ತಿಂದಿತ್ತು. ಆದರೂ ಪ್ರಯೋಗ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯೊಬ್ಬರು, ಕಾಂಗ್ರೆಸ್‌ನಲ್ಲಿರುವ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ, ‘ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಂದೀಪ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಅವರಿಗೆ ಕರ್ನಾಟಕದ ಚಿತ್ರಣವೇ ತಿಳಿದಿಲ್ಲ. ಯಾರೋ ನಾಲ್ಕೈದು ಮಂದಿ ಹೇಳುವ ಮಾತನ್ನು ನಂಬಿಕೊಂಡು, ವರದಿ ತಯಾರಿಸುತ್ತಾರೆ. ಅದೇ ವರದಿಯನ್ನು ರಾಹುಲ್ ಗಾಂಽ ಅವರಿಗೂ ಹಸ್ತಾಂತರಿಸುತ್ತಾರೆ. ಅದು ಸರಿಯೋ, ತಪ್ಪೋ ಎನ್ನುವುದನ್ನು ನೋಡುವುದೂ ಇಲ್ಲ. ಹೀಗಾದರೆ ಪಕ್ಷ ಟೇಕ್ ಆಫ್ ಆಗುವುದು ಹೇಗೆ? ‘ ಎಂದಿದ್ದರು.

ದೆಹಲಿ ಮಟ್ಟದ ನಾಯಕರು ತಗೆದುಕೊಳ್ಳುವ ಬಹುತೇಕ ತೀರ್ಮಾನಗಳು, ರಾಷ್ಟ್ರ ರಾಜಕಾರಣಕ್ಕೆ ಸರಿಹೊಂದುವ ಅಥವಾ ಉತ್ತರ ಭಾರತದ ರಾಜ್ಯಗಳ ರಾಜಕೀಯಕ್ಕೆ ಸರಿ ಹೊಂದುವಂತಿರುತ್ತದೆ. ಆದರೆ ಅದೇ ಯೋಚನೆ, ಕರ್ನಾಟಕದಲ್ಲಿ ಯಶಸ್ವಿಯಾಗುತ್ತದೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಹಾಗೇ ನೋಡಿದರೆ, ರಾಷ್ಟ್ರೀಯ ಪಕ್ಷಗಳಿಗೆ ದಕ್ಷಿಣ ಭಾರತದಲ್ಲಿ ನೆಲೆ ನೀಡಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ. ಇನ್ನುಳಿದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಕೇರಳ ಸೇರಿದಂತೆ ಮಹಾರಾಷ್ಟ್ರ, ಒಡಿಸ್ಸಾದಲ್ಲಿ ಪ್ರಾದೇಶಿಕ ಪಕ್ಷಗಳ ಪಾರುಪತ್ಯ ಹೆಚ್ಚಾಗಿದೆ. ಆದ್ದರಿಂದ ಪ್ರಾದೇಶಿಕಗಳಿಗೆ ಹೆದರಿಯಾದರೂ, ಅಲ್ಲಿ ಪ್ರಯೋಗ ಮಾಡಲು ರಾಷ್ಟ್ರೀಯ ಪಕ್ಷಗಳ ಮುಂದಾಗುವುದಿಲ್ಲ.

ಕರ್ನಾಟಕದಲ್ಲಿ ಯಾವುದೇ ಪ್ರಯೋಗ ಮಾಡಿದರೂ, ಪಕ್ಷದ ಮೂಲ ಸಂಘಟನೆಗೆ ಹೊಡೆತ ಬೀಳುವುದಿಲ್ಲ ಎನ್ನುವ ಅತಿ ಆತ್ಮವಿಶ್ವಾಸ ಎರಡೂ ಪಕ್ಷಗಳಿದೆ. ಆದ್ದರಿಂದಲೇ, ಇಲ್ಲಿನ ಸ್ಥಳೀಯ ನಾಯಕರ ಸಲಹೆಗಳನ್ನು ಕೇಳದೆ, ಕೆಲವು ತೀರ್ಮಾನಗಳನ್ನು ತಗೆದುಕೊಳ್ಳುತ್ತಿದ್ದಾರೆ. ಈ ರೀತಿಯ ತೀರ್ಮಾನವನ್ನು ತಗೆದು ಕೊಳ್ಳುವುದನ್ನು ವಿರೋಧಿಸುವ ಮನಸ್ಥಿತಿಯಲ್ಲಿ ಎರಡೂ ಪಕ್ಷದ ರಾಜ್ಯ ನಾಯಕರು ಇಲ್ಲ. ಯಾವುದೇ ರಾಜಕೀಯ ಪಕ್ಷವಾಗಲಿ, ಪಕ್ಷ ಸಂಘಟನೆಯನ್ನು ಗಟ್ಟಿ ಗೊಳಿಸಬೇಕು, ಅಧಿಕಾರದಲ್ಲಿರಬೇಕು ಎನ್ನುವ ಸ್ಥಾನಕ್ಕೆ ತೀರ್ಮಾನಗಳನ್ನು ತಗೆದುಕೊಳ್ಳುತ್ತದೆ.

ಆದರೆ ಗ್ರೌಂಡ್ ಮಟ್ಟದಲ್ಲಿರುವ ನಾಡಿಮಿಡಿತವನ್ನು ಅರಿಯದೇ, ಸಿದ್ಧಸೂತ್ರ ಅಥವಾ ಪ್ರಯೋಗವನ್ನು ಮಾಡಲು ಹೋಗಿ ಕೈಸುಟ್ಟುಕೊಳ್ಳುವ ಸನ್ನಿವೇಶಗಳು ಎದುರಾದರೆ ಅದರ ನೇರ ಹೊಡೆತ ರಾಷ್ಟ್ರೀಯ ನಾಯಕರಿಗಿಂತ ಹೆಚ್ಚಾಗಿ ರಾಜ್ಯ ನಾಯಕರಿಗೆ ಬೀಳುತ್ತದೆ. ಆದ್ದರಿಂದ ರಾಷ್ಟ್ರೀಯ ಪಕ್ಷಗಳು, ಪ್ರಯೋಗ ಮಾಡುವ ಮೊದಲು ರಾಜ್ಯದ ಆಗು-ಹೋಗುಗಳ ಬಗ್ಗೆ ಯೋಚಿಸಲೇಬೇಕು. ಅದು ಟಿಕೆಟ್ ಆಯ್ಕೆಯ ವಿಷಯವಾಗಲಿ, ಸಂಘಟನಾತ್ಮಕ ವಿಷಯವಾಗಲಿ ಇಲ್ಲವೇ ಸಂಪುಟ ಪುನಾರಚನೆಯ ವಿಷಯದಲ್ಲಿಯೇ ಆಗಬಹುದು ಎನ್ನುವುದು ಸ್ಪಷ್ಟ.

error: Content is protected !!