About Us Advertise with us Be a Reporter E-Paper

Uncategorizedಅಂಕಣಗಳು

ಜನಸಾಮಾನ್ಯರನ್ನು ‘ಬೆಗ್ಗರ‍್ಸ್‌‌‌ ಮಾಡದಿರಿ!

ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ನಗರ ಪ್ರದೇಶಗಳಿಂದ ಹಿಡಿದು ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಜಾನುವಾರು ಮೇವಿಲ್ಲದೇ ತತ್ತರಿಸಿವೆ. ಜಲಾಶಯಗಳು ಬರಿದಾಗ ತೊಡಗಿವೆ. ಗ್ರಾಮೀಣ ಭಾಗದಲ್ಲಿ ಕೆರೆ ಕಟ್ಟೆಗಳು ಬತ್ತುತ್ತಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆ ಆರಂಭಿಸಿ, ಕಸಾಯಿಖಾನೆ ಪಾಲಾಗಲಿರುವ ಗೋವುಗಳನ್ನು ರಕ್ಷಿಸಬೇಕಾಗಿದೆ.

ಕುಡಿಯುವ ನೀರಿಗೆ ತೀವ್ರ ಅಭಾವವಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಅಗತ್ಯ ರೂಪಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ. ಸರಕಾರ, ಕೊಟ್ಟ ಭರವಸೆಗಳನ್ನು ಈಡೇರಿಸಲು ಇನ್ನು ಮುಂದಾದರೂ ಪ್ರಯತ್ನಿಸಿ ಜನಸಾಮಾನ್ಯರು ತಮ್ಮ ಮೇಲಿಟ್ಟಿರುವ ನಂಬಿಕೆಗಳನ್ನು ಉಳಿಸಿಕೊಳ್ಳಬೇಕು. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇದು ಸಕಾಲ.

ಈ ಬಾರಿ ಬೇಸಿಗೆ ತೀವ್ರವಾಗಲಿದೆ ಎಂಬ ಮುನ್ಸೂಚನೆ ಇದೆ. ಇದೀಗ ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಕಾಲುವೆಗಳಿಗೆ ನೀರು ಹರಿಸುವುದು ಅಗತ್ಯ. ಬೇಸಿಗೆ ಬೆಳೆಗೆ ನೀರು ಹರಿಸಲಾಗುವುದೇ ಇಲ್ಲವೇ ಎಂಬುದನ್ನು ಆರಂಭದಲ್ಲೇ ತಿಳಿಸಿದರೆ ರೈತರು ಅಗತ್ಯ ಬೆಳೆ ಬೆಳೆಯಲು ಲೋಕಸಭಾ ಚುನಾವಣೆ ನೀತಿ ಸಂಹಿತೆ ಆರಂಭವಾಗುವುದಕ್ಕೂ ಮುನ್ನ ಯೋಜನೆಗಳನ್ನು ಜಾರಿಗೊಳಿಸದಿದ್ದಲ್ಲಿ ಶ್ರೀಸಾಮಾನ್ಯ ಮತ್ತಷ್ಟು ಹತಾಶನಾಗುತ್ತಾನೆ. ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಜವಾಬ್ದಾರಿಗಳಿಂದ ನುಣುಚಿಕೊಳ್ಳವುದು ಸಲ್ಲ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿ, ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿರುವಂತೆ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಮೀಸಲಿಟ್ಟಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಕಳೆದ ವರ್ಷ ನೀಡಿದ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಉತ್ತರ ಕರ್ನಾಟಕ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಈಗಲೇ ಗ್ರಾಮ ಪಂಚಾಯತ್‌ಗಳಿಗೆ ಮೀಸಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು.

ರೆಸಾರ್ಟ್ ರಾಜಕಾರಣ ಮುಗಿದು ಈಗ ಲೋಕಸಭಾ ಚುನಾವಣೆ ಪ್ರಕ್ರಿಯೆಗೆ ತಾಲೀಮು ಆರಂಭವಾಗಿದೆ. ಸೀಟು ಹಂಚಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಗುದ್ದಾಟ ಪ್ರಾರಂಭವಾಗಿದೆ. ‘ನಾವು ಬೆಗ್ಗರ್‌ಸ್ ’ ಅಲ್ಲ ಎಂಬ ಅಸಮಾಧಾನದ ಮಾತುಗಳು ಹರಿದಾಡುತ್ತಿವೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಸಮಸ್ಯೆ ಆಲಿಸುವತ್ತ ಹರಿಸಬೇಕು. ರಾಜಕೀಯ ಕೆಸರೆರೆಚಾಟದಲ್ಲಿ ಜನಸಾಮಾನ್ಯರನ್ನು ಬೆಗ್ಗರ್‌ಸ್ ಮಾಡಬಾರದು.

Tags

Related Articles

Leave a Reply

Your email address will not be published. Required fields are marked *

Language
Close