About Us Advertise with us Be a Reporter E-Paper

ವಿವಾಹ್

ಸಂಸಾರ ಬಂಡಿಯ ಲಯ ತಪ್ಪದಿರಲಿ

- ವಿನಯಾದಿತ್ಯ ಬಿ.ಜೆ

ಅಂದು ಅವಳನ್ನು ಮದುವೆಯಾಗುವ ಉದ್ದೇಶದಿಂದ ತುಸು ಸಂಭ್ರಮದಿಂದ ನನ್ನ ಪೋಷಕರೊಂದಿಗೆ ಹೆಜ್ಜೆ ಹಾಕಿದ್ದೆ. ಅಲ್ಲಿದ್ದ ವಾತಾವರಣ ಮನಸ್ಸಿಗೆ ಇನ್ನಷ್ಟು ಖುಷಿ ಕೊಟ್ಟಿತ್ತು. ಹೆಣ್ಣಿನ ಮನೆಯಲ್ಲಿ ಮಾಡಿದ್ದ ಆ ಉಪ್ಪಿಟ್ಟು-ಕೇಸರಿಬಾತು ಅವಳ ನಾಚಿಕೆಯಷ್ಟೇ ಸಿಹಿಯಾಗಿ ಇತ್ತು. ನಾನಾಗಲೇ ಅವಳನ್ನು ಮೆಚ್ಚಿದೆ. ಆಕೆ ಉಟ್ಟಿದ್ದ ಹಸಿರು ಸೀರೆ, ತೊಟ್ಟಿದ್ದ ಕೆಂಪು ಬಳೆ, ಹೆಜ್ಜೆ ಹಾಕಿದ ತಕ್ಷಣವೇ ಉಂಟಾಗುತ್ತಿದ್ದ ಆ ಝಲ್ ಝಲ್ ಶಬ್ದ ನನ್ನನ್ನ ಮೂಕನನ್ನಾಗಿಸಿತ್ತು. ನನ್ನ ಅಪ್ಪ ಅಮ್ಮ ಈ ಮನೆಯ ಈ ಸುಂದರಿಯನ್ನು ಹುಡುಕಲು ಅದೆಷ್ಟೋ ಕಷ್ಟಪಟ್ಟಿದ್ದರೋ ಎಂಬುದು ನನ್ನ ಗಮನಕ್ಕೆ ಬಂತು. ಏನು ಮಾತನಾಡದೇ ಆಕೆಯನ್ನು ಮದುವೆಯಾಗುವೆ ಎಂದು ಹೇಳಿಬಿಟ್ಟೆ. ಅಂದು ಆದಂತಹ ಖುಷಿ, ಉತ್ಸಾಹ ಇಂದೂ ಹಾಗೆಯೇ ಇದೆ. ಆ ಹೆಣ್ಣು ನೋಡುವ ಕಾರ್ಯಕ್ರಮವಾದ ಮೇಲೆ ಬಾಡಿದಂತಿದ್ದ ಮುಖದಲ್ಲಿ ತುಸು ನಗು, ಖುಷಿ ಹೆಚ್ಚಾಗತೊಡಗಿತು.

ಆಗಲೇ ನನ್ನ ಕುಟುಂಬದವರು ಹೆಣ್ಣಿನ ಕುಟುಂಬದವರಿಗೆ, ತಮಗೆ ಹುಡುಗಿ ಒಪ್ಪಿಗೆಯಾದವಳೆಂಬ ಸಿಹಿ ಸುದ್ದಿಯನ್ನು ವಧುವಿನ ಕುಟುಂಬಕ್ಕೆ ತಿಳಿಸಿದ್ದರು. ಸಣ್ಣದೊಂದು ಎಂಗೆಜ್‌ಮೆಂಟ್ ಫಂಕ್ಷನ್ ಮುಗಿದು ಮದುವೆಯೂ ನಿಶ್ಚಯವಾಯಿತು. ಆಗಾಗ ಅವಳನ್ನು ನೋಡುವ ಸಲುವಾಗಿ ಕೆಲಸಕ್ಕೆ ರಜೆ ಹಾಕಿ ಅತ್ತೆಮನೆಗೆ ಹೋಗಿಬರುವ ಕೆಲಸವೂ ಮಾಡುತ್ತಿದ್ದೆ. ಅಲ್ಲಿ ನನಗೆ ಸಿಗುತ್ತಿದ್ದ ಊಟವೆಂದರೆ ಜೋಳದ ರೊಟ್ಟಿ, ಕೆಂಪು ಚಟ್ನಿ, ಮಸಾಲೆಯಲ್ಲಿ ಹುರಿದ ದೊಣ್ಣೆ ಮೆಣಸಿನಕಾಯಿ. ಇದು ಖಾರವಾದರೂ ಬಲು ಮಜಬೂತಾಗಿ ಇರುತ್ತಿತ್ತು.

ಆ ಎರಡು ತಿಂಗಳು ಸಮೀಪಿಸಿ ಮದುವೆಯೂ ಆಯಿತು. ಮದುವೆಯಾದ ಹೊಸತರಲ್ಲಿ ದೇವಸ್ಥಾನ ಸುತ್ತುವುದು, ಕೆರೆಯಲ್ಲಿ ಅರಳುವ ತಾವರೆಯನ್ನು ಆ ನನ್ನ ಕಿನ್ನರಿಗೆ ತಂದುಕೊಡುವುದು, ವೀಕೆಂಡಿನಲ್ಲಿ ಟ್ರಿಪ್ ಮಾಡುವ ಸಡಗರ ನಡೆಯುತ್ತಿತ್ತು. ಮನೆಯಲ್ಲಿ ಇಬ್ಬರ ನಡುವೆ ಅನ್ಯೋನ್ಯತೆ ಸದಾ ಇರುತ್ತಿತ್ತು. ಒಬ್ಬರ ಮಾತನ್ನು ಒಬ್ಬರು ಕೇಳಿಕೊಂಡು ಜೀವನ ಸಾಗಿಸುತ್ತಿದ್ದೆವು. ಹೀಗೆ ಬದುಕು ಸಾವಕಾಶವಾಗಿ ಸಾಗುತ್ತಿತ್ತು.

ಮದುವೆಯಾಗಿ ಸುಂದರವಾದ ದಾಂಪತ್ಯ ಜೀವನವನ್ನು ನಡೆಸುತ್ತಿರುವಾಗ ಹೀಗೆ ಇದ್ದಕ್ಕಿದ್ದಂತೆ ಕಡೆಯಿಂದ ಒಂದೇ ಬಾರಿಗೆ ಕೆಲಸದ ಒತ್ತಡ ಹೆಚ್ಚಾಗತೊಡಗಿತು. ಸಮಯಕ್ಕೆ ಸರಿಯಾಗಿ ಊಟ ಮಾಡದೇ, ಸರಿಯಾದ ಸಮಯಕ್ಕೆ ಮನೆಗೆ ಹೋಗಲಾರದ ಪರಿಸ್ಥಿತಿ ಉಂಟಾಯಿತು. ಮನೆಗೆ ಸಮಯ ಕೊಡಲು, ಹೆಂಡತಿಯೊಡನೆ ಮಾತನಾಡಗದ ವಾತಾವರಣ ಸೃಷ್ಟಿಯಾಯಿತು. ನನ್ನ ಸಾಂಗತ್ಯ ಸಿಗದೆ ನೊಂದ ಪತ್ನಿಯೂ ಕಿರಿಕಿರಿ ಮಾಡಲಾರಂಬಿಸಲು. ಮನೆಯಲ್ಲೂ ನೆಮ್ಮದಿ ಇಲ್ಲ. ಆಫೀಸಿನಲ್ಲೂ ಕೆಲಸದ ಒತ್ತಡ. ಹೀಗೆ ಸುಮಾರು ನಾಲ್ಕು ತಿಂಗಳು ಒತ್ತಡದ ಜೀವನ ಸಾಗಿತು. ಇವೆಲ್ಲದರಿಂದ ಬಿಡುಗಡೆ ಬೇಕೆಂಬ ಉದ್ದೇಶದಿಂದ ಒಂದು ವಾರದ ರಜೆ ಪಡೆದು ಬಿಟ್ಟೆ. ದಾಂಪತ್ಯ ಜೀವನವನ್ನು ಮೊದಲಿನಂತೆ ಖುಷಿಯಾಗಿರಿಸಲು ಕಂಪನಿ ಅವಕಾಶ ನೀಡಿತು. ಪುನಃ ಕಿರು ಪ್ರವಾಸ ಹೋಗುವ, ಅದ್ಭುತ ವಾತಾವರಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಸದಾವಕಾಶವೂ ದಕ್ಕಿತು. ಇವೆಲ್ಲ ನನ್ನ ಸ್ನೇಹಿತನೊಬ್ಬನ ಅನುಭವಗಳು. ತನ್ನ ಸಾಂಸಾರಿಕ ಜೀವನ ಹಳಿ ತಪ್ಪುತ್ತಿದೆ ಅನ್ನುವುದನ್ನು ಬಹುಬೇಗ ಅರಿತು, ಸರಿಯಾದ ಟ್ರಾಕ್ ಮೇಲೆ ತಂದು ಮುಂದೆ ಎದುರಾಗಬಹುದಾಗಿದ್ದ ಸಮಸ್ಯೆಯಿಂದ ಈತ ಬಚಾವಾದ.

ದಾಂಪತ್ಯವನ್ನು ಸದಾ ಹಸಿರಾಗಿಡುವುದು ಹೇಗೆ?
ಮದುವೆಯಾಗಿ ಕೆಲವೇ ದಿನಗಳು, ತಿಂಗಳುಗಳಷ್ಟೇ ನವಜೋಡಿಯ ಬದುಕಿನ ರಸೋಲ್ಲಾಸ ಕ್ಷಣಗಳನ್ನು ಹನಿಮೂನ್ ಪಿರಿಯಡ್ ಅಂತಾನೂ ಕರೆಯಲಾಗುತ್ತದೆ. ಆದರೆ ಈ ಖುಷಿ, ಉತ್ಸಾಹ ವರ್ಷಾನುಗಟ್ಟಲೆ ಇದೇ ರೀತಿ ಇರುವುದಿಲ್ಲ. ಅಂತಹ ದಂಪತಿ ಬೆರಳೆಣಿಕೆಯಷ್ಟಿರಬಹುದಷ್ಟೇ. ದಾಂಪತ್ಯ ಸದಾ ಹಸಿರಾಗಿರಬೇಕೆಂದರೆ ಸಮಚಿತ್ತತೆ ಬಹು ಮುಖ್ಯ. ದುಃಖವಾದ ಕೂಡಲೇ ಕುಗ್ಗುವುದು, ಅಳುವುದು. ಖುಷಿಯಾದ ತಕ್ಷಣವೇ ಹಿಗ್ಗುವ ಪ್ರವೃತ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಎಷ್ಟೇ ಕೆಲಸ ಕಾರ್ಯಗಳಿದ್ದರೂ ಮನೆಗೆ, ಕುಟುಂಬಕ್ಕೆ ಸಮಯವನ್ನು ಕೊಡಬೇಕು. ಆಗಾಗ ಬಂಧುಗಳ ಕಾರ್ಯಕ್ರಮಗಳು ಭೇಟಿ ನೀಡುವುದು, ತಮ್ಮ ಮನೆಯ ಸಮಾರಂಭಗಳಿಗೆ ಆಹ್ವಾನಿಸುವ ಪ್ರವೃತ್ತಿ ಬೆಳೆಯಬೇಕು. ಹೀಗಿದ್ದಾಗ ದಾಂಪತ್ಯದಲ್ಲಿ ಒಡಕು ಕಡಿಮೆ.

ತಾಳ್ಮೆ , ಸಹನೆ ತುಂಬಾ ಮುಖ್ಯ
ದಂಪತಿಗಳಿಬ್ಬರಿಗೂ ತಾಳ್ಮೆ, ಸಹನೆ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅಲ್ಲದೇ ದೂರಾಲೋಚನೆಯ ಕ್ರಮವೂ ಕುಟುಂಬದ ಏಳಿಗೆಗೆ ಸಹಕಾರಿ ಆಗಿರುತ್ತದೆ. ಸದಾ ಅನಾವಶ್ಯಕ ವಸ್ತುಗಳಿಗೆ ಹಣ ವ್ಯಯ ಮಾಡದೇ ಜೀವವಿಮೆ ರೀತಿಯಲ್ಲಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಸಂಗ್ರಹಿಸಿಡಬೇಕು ಎಂಬ ಮನೋಭಾವ ಕುಟುಂಬಕ್ಕೆ ಬಹು ಮುಖ್ಯ. ದಂಪತಿಗಳಿಬ್ಬರೂ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಕೂತು ಯೋಚಿಸಿದರೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಬಹುದು. ದಾಂಪತ್ಯದ ಹಾದಿಯಲಿ ಏಳು-ಬೀಳು ಸಹಜ. ಒಬ್ಬರನ್ನು ಒಬ್ಬರು ಅರಿತು ಗೌರವಿಸಿದರೆ ಸಂಸಾರ ಪ್ರೀತಿಯ ಆಗರ ಆಗಿರುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close