Thursday, 28th March 2024

ಕೃತಿಯಾಗಿ ಅರಳಿ ಅಸ್ತಿತ್ವ ತಂದುಕೊಟ್ಟ ಅಂಕಣ ಬರಹಗಳು !

ಯಶೋ ಬೆಳಗು

yashomathy@gmail.com

ಅಕ್ಷರ ಲೋಕದ ಗಂಧ-ಗಾಳಿಯಿಲ್ಲದ ಕಲೆಯ ನೆರಳಲ್ಲಿ ಬದುಕು ಕಟ್ಟಿಕೊಳ್ಳುವ ವಿಶ್ವಕರ್ಮ ಜನಾಂಗದ ಮಧ್ಯಮವರ್ಗದ ಶ್ರಮಿಕರ ಮನೆಯಲ್ಲಿ ಜನಿಸಿದ ನನ್ನ ಮೂಲ ತುಮಕೂರು ಜಿಲ್ಲೆ ಕುಗ್ರಾಮವಾದ ಚಿಕ್ಕಸಾರಂಗಿ. ಆದರೆ ಹುಟ್ಟಿದ್ದು ಬೆಳೆದದ್ದೆಲ್ಲ ಕೆಂಪೇಗೌಡರು ಸೃಷ್ಟಿಸಿದ ಬೆಂಗಳೂರಿನ. ಹೀಗಾಗಿ ಬಾಲ್ಯವೆಲ್ಲ ಬೆಂಗಳೂರು-ತುಮಕೂರಿನಾಚೆಗೆ ದಾಟಿಲ್ಲ.

ವಿದ್ಯಾಭ್ಯಾಸದ ಹಂತದಲ್ಲಿ ಯಾವುದೇ ತರಗತಿಯಲ್ಲಿ ಫೇಲೆಂಬುದರ ಪರಿಚಯವೇ ಇರದವಳಿಗೆ ಪದವಿಯ ಅಂತಿಮ ವರ್ಷದಲ್ಲಿ ಆದ ಸಣ್ಣ ಘಟನೆಯಿಂದಾಗಿ ಪರೀಕ್ಷೆಗೇ ಕೂರದಂತಾಗಿ ಪದವಿ ವಂಚಿತಳಾದೆ. ಮನೆಯ ಕುಳಿತರೆ ಮದುವೆ ಮಾಡಿಬಿಡುತ್ತಾರೆಂಬ ಭಯ. ನನ್ನದಲ್ಲದ
ಯಾವುದೋ ಅಪರಿಚಿತರ ಮನೆಯಲ್ಲಿ ನನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳುವ ಮದುವೆಯೆಂಬ ಶಬ್ದ ಸದಾ ನನ್ನನ್ನು ಕಂಗಾಲುಗೊಳಿಸುತ್ತಿತ್ತು. ಪ್ರೀತಿ-ಪ್ರೇಮಗಳಲ್ಲಿ ನಂಬಿಕೆಯಿರಲಿಲ್ಲ.

ಹೀಗಾಗಿ ಯಾರಿಗೂ ಹೊರೆಯಾಗದೆ ನನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಇರಾದೆಯಿತ್ತು. ಇವುಗಳ ನಡುವೆಯೇ ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದವರ ನಡುವಿರುವ ಬವಣೆಗಳು, ಠೇಂಕಾರಗಳು, ಘರ್ಷಣೆಗಳು, ಆ ಮನಸುಗಳ ಹಿಂದಿರುವ ಕುಟಿಲತನಗಳು, ಅಸಹಾಯಕ ಆಕ್ರೋಶಗಳು, ಇವುಗಳ ನಡುವೆ ಬೆಂದು ಹೋಗುವ ಅಸಹಾಯಕ ಗೃಹಿಣಿಯರು, ಮಕ್ಕಳು, ಆದರ್ಶಗಳ ಮುಖವಾಡ ಹೊತ್ತ ಧೂರ್ತತನಗಳು ಕಂಡು ರೋಸಿಹೋಗಿತ್ತು.

ಆಗೆಲ್ಲ ಬಹಳವಾಗಿ ಅನಿಸುತ್ತಿದ್ದುದು ಇದಕ್ಕೆಲ್ಲ ಬೌದ್ಧಿಕ ದಿವಾಳಿತನವೇ ಕಾರಣ! ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಮಾತಿನಂತೆ ಹೆಚ್ಚು ತಿಳಿದವರ ನಡತೆ ಘನತೆಯಿಂದ ಕೂಡಿರುತ್ತದೆ… ಎಂಬ ಕಲ್ಪನೆಯ ಖಾಲಿ ಕೊಡದಂತಿದ್ದ ನಾನು, ಯಾವುದೇ ಸಾಹಿತ್ಯದ ಆಸಕ್ತಿಯಿಲ್ಲದೆ, ಪತ್ರಿಕೋದ್ಯಮದ ಅರಿವಿಲ್ಲದೆ, ಅತಿರಥ-ಮಹಾರಥರ ಹಿನ್ನೆಲೆಯಿಲ್ಲದೆ, ಗಾಡ್ ಫಾದರುಗಳ ಬೆಂಬಲವಿಲ್ಲದೆ, ಹಾಯ್ ಬೆಂಗಳೂರೆಂಬ ಪತ್ರಿಕಾ ಕಚೇರಿಯಲ್ಲಿ ಅಕ್ಷರ ವಿನ್ಯಾಸಕಿಯಾಗಿ ಪದಾರ್ಪಣೆ ಮಾಡಿದೆ.

ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರ ಮೂಡಿಸುವುದನ್ನು ಕಲಿಸಿದ ಗುರುವೇ ರವಿ ಬೆಳಗೆರೆ. ಹೊಸದೇನನ್ನೋ ತಿಳಿದ ಬೆರಗಿನಿಂದ ಅಪ್ಪನಿಗೆ ತಿಳಿಸಿದಾಗ,
‘ಇಷ್ಟೆಲ್ಲ ಕಲಿತು ಕಂಪೋಸಿಟರ್ ಕೆಲಸಕ್ಕೆ ಹೋಗ್ತೀಯಾ? ಅದರ ಬದಲು ಸುಮ್ಮನೆ ಮನೆಯಲ್ಲಿರು’ ಅಂತ ಸಿಟ್ಟು ಮಾಡಿಕೊಂಡರು. ಜಗತ್ತು ಡಿಟಿಪಿ ಆಪರೇಟರ್ ಎಂದು ಗುರುತಿಸಿತು. ಕಲಿತ ವಿದ್ಯೆಗೆ ಆಡಿಟರ್ ಆಫೀಸಿನಲ್ಲಿ ಅಸಿಸ್ಟೆಂಟ್ ಆಗಿ ನಂತರ ಯಾವುದಾದರೂ ಕಂಪೆನಿಯಲ್ಲಿ ಅಕೌಂಟೆಂಟ್ ಆಗಬಹುದಿತ್ತು. ಆದರೆ ಕೂಡುವ ಕಳೆಯುವ ಲೆಕ್ಕಾಚಾರಕ್ಕಿಂತ, ಅಕ್ಷರ ಜೋಡಿಸುವ ಕೆಲಸವೇ ಹೆಚ್ಚು ಆಕರ್ಷಕವಾಗಿ ಕಂಡಿತು.

ಕ್ರಿಯಾಶೀಲತೆಯನ್ನು ವಿಸ್ತಾರಗೊಳಿಸುವ ವಿನ್ಯಾಸದ ಕೆಲಸ ಹೆಚ್ಚು ಕುತೂಹಲ ಮೂಡಿಸಿತು. ಆದು ಅವರವರ ತಿಳುವಳಿಕೆಯ ಮಟ್ಟದ್ದು
ಎಂದು ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ ನಾನು ಅಕ್ಷರ ಸಮುದ್ರದಲ್ಲಿ ಬಹಳ ಖುಷಿಯಿಂದ ಈಜಾಡಲಾರಂಭಿಸಿದೆ. ಸಾಕಷ್ಟು ಕಾಲ ಶ್ರೀ ರವಿ ಬೆಳಗೆರೆಯವರ ಪತ್ರಿಕೆ, ಪುಸ್ತಕ, ಹಾಗೂ ಮ್ಯಾಗಝೀನುಗಳಿಗೆ ಅಕ್ಷರ ವಿನ್ಯಾಸಕಿಯಾಗಿ, ಪುಟವಿನ್ಯಾಸಕಿಯಾಗಿ ಕಂಪ್ಯೂಟರ್ ವಿಭಾಗದ
ಮುಖ್ಯಸ್ಥೆಯಾಗಿ, ಅಕೌಂಟೆಂಟಾಗಿ, ಕಚೇರಿಯ ನಿರ್ದೇಶಕಿಯಾಗಿ ಎಲ್ಲ ಹಂತಗಳಲ್ಲೂ ಕೆಲಸ ಮಾಡಿದ ಅನುಭವ ನನ್ನದು ಎಂಬ ಹೆಮ್ಮೆಯಿದೆ. ಇದೇ ಕೆಲವರ ಅಸಹನೆಗೂ, ಮೆಚ್ಚುಗೆಗೂ ಕಾರಣವಾಗಿ ಸಾಕಷ್ಟು ಪರ-ವಿರೋಧಗಳ ಸೃಷ್ಟಿಯಾಯಿತು.

ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಇದರ ನಡುವೆ ಅರಳಿ ನಿಂತ ಪ್ರೀತಿಯ ಹೂವು ಎಲ್ಲವನ್ನೂ ಸಹಿಸಿಕೊಳ್ಳುವುದನ್ನು ಕಲಿಸಿತು.
ಯಾರಿಗಾಗಿಯೂ ಕ್ಷಣಮಾತ್ರವೂ ನಿಲ್ಲದ ಕಾಲದ ಸುಳಿಯಲ್ಲಿ ಮತ್ತೆ ಅಸ್ತಿತ್ವದ ಹೋರಾಟ ಆರಂಭವಾಯಿತು. ಎಲ್ಲರಂತೆ ನಾನು ಕೂಡ ಈ ಸಮಾಜದ ಭಾಗವಾಗಿ ಅದರ ನಡುವೆಯೇ ಬದುಕುವ ಅನಿವಾರ್ಯತೆಯ ಜೊತೆಗೆ ರವಿ ಬೆಳಗೆರೆಯೆಂದರೆ ಸಂತೆಯಲ್ಲಿ ಸೋದರಮಾವನನ್ನು
ಕಂಡಂತಾಡುವ ಜನರ ನಡುವೆ ನನ್ನ ಸ್ಥಾನವೇನು? ಸಿಬ್ಬಂದಿಯಾ? ಪ್ರೇಯಸಿಯಾ? ಮನದೊಡತಿಯಾ? ಕೇಳಿದೆ. ಮನೆ-ಮನಸನಾಳುವ ಒಡತಿಯಾಗಿರು ಎಂದು ಶ್ರೀಮತಿಯ ಸ್ಥಾನವನ್ನು ನೀಡಿದರು.

ಆದರೆ ಅದಕ್ಕೆ ಸಾರ್ವಜನಿಕ ಸಮ್ಮತಿ ಸಿಗಲಿಲ್ಲ. ಯಾರಿರಲಿ, ಬಿಡಲಿ ನಾನಿದ್ದೇನಲ್ಲ? ಭಯ ಬಿಡು. ಎಂದು ಕೊಟ್ಟ ಮಾತಿನಂತೆ ಸದಾ ಜೊತೆಗೆ ನಿಂತರು. ಆದರೆ ಕ್ರಮೇಣ ಅರಿವಿಗೆ ಬರತೊಡಗಿತು. ಮದುವೆಯೆಂದರೆ ಕೇವಲ ಎರಡು ಮನಸುಗಳ, ದೇಹಗಳ ಮಿಲನವಲ್ಲ. ಅದು ಸಾರ್ವಜನಿಕ
ಪ್ರದರ್ಶನಕ್ಕೆ ಬೇಕಾದ ಒಪ್ಪಿಗೆ ಎಂದು. ಈ ಸಮಾಜದಲ್ಲಿ ನೆಮ್ಮದಿಯಾಗಿರಲು ಕುಟುಂಬ ವ್ಯವಸ್ಥೆ ಬಹಳ ಮುಖ್ಯವಾದುದು. ಅದನ್ನು ಛಿದ್ರಗೊಳಿಸುವ ಯಾವ ಕಾರ್ಯವನ್ನೂ ಮಾಡದೆ, ನಮ್ಮದೇ ಹಿತೈಷಿಗಳ ಪುಟ್ಟ ವಲಯವನ್ನು ಕಟ್ಟಿಕೊಂಡು ಅದರಲ್ಲಿ ಸಂತೋಷದಿಂದಿzವು. ಯಾವುದೇ ಹಣ, ಅಧಿಕಾರ, ಅಂತಸ್ತು, ಅಸ್ತಿತ್ವಗಳ ಗೋಜಿಲ್ಲದೆ.

ಆದರೆ ಬದುಕು ಮುಂದುವರೆಯಲು ನಮ್ಮಿಬ್ಬರ ನಡುವೆ ಒಂದು ಮಗುವೆಂಬ ಮಲ್ಲಿಗೆಯ ಅಗತ್ಯವಿತ್ತು. ಅಂದುಕೊಂಡದ್ದಕ್ಕಿಂತ ಚೆಂದದ, ತನ್ನಪ್ಪ ನನ್ನೇ ಹೋಲುವ ಸುರದ್ರೂಪಿ ಕಂದನೇ ಮಡಿಲು ತುಂಬಿದ. ಇದು ಹಸಿದ ಬಾಯಿಗಳಿಗೆ ಸಾಕಷ್ಟು ಆಹಾರವನ್ನು ಒದಗಿಸಿತು. ಅಸ್ತಿತ್ವಗಳ
ಮುಸುಕಿನ ಯುದ್ಧ ಆರಂಭವಾಯ್ತು. ಸ್ನೇಹಗಳು ಶಾಶ್ವತವಾಗಿ ದೂರಾದವು. ಕೌಟುಂಬಿಕ ವಿರೋಧಗಳುಂಟಾಯಿತು. ಮಗುವಿನ ಮುಗ್ಧತೆಯ ಬಗ್ಗೆ
ಎರಡು ಮಾತಿಲ್ಲ. ಆದರೆ ಮನೆಮುರಿದ ಆ ಹೆಂಗಸು ಉಹುಂ… ಕ್ಷಮೆಯಿಲ್ಲ. ಅಂದರು. ನಾನು ಪ್ರತಿಕ್ರಿಯಿಸದೆ ಬದುಕಿನೆಡೆಗೆ ಮುಖ ಮಾಡಿದೆ. ಆದರೆ ಅದರ ಬಿಸಿ ರವಿಯನ್ನು ಬಹಳ ನರಳಿಸಿತು.

ಇದೆಲ್ಲ ತೊಳಲಾಟಗಳ ನಡುವೆಯೇ ಮನೆ-ಮಗುವನ್ನು ಅಮ್ಮನ ಮಡಿಲಿಗೆ ಹಾಕಿ, ಗಾಂಧಿಬಜಾರಿನ ಬಿಬಿಸಿ ಪುಸ್ತಕದಂಗಡಿಯನ್ನು ಕೆಲಕಾಲ ನಿರ್ವಹಿಸಿದೆ. ಪತ್ರಿಕೆಯನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟು ಅವರು ಜನಶ್ರೀ ಚಾನೆಲ್ಲಿನ ಮುಖ್ಯಾಧಿಕಾರಿಯಾಗಿ ಹೊಸ ಹೊಸ ಕಾರ್ಯಕ್ರಮಗಳ
ಸಿದ್ಧತೆಯಲ್ಲಿ ತೊಡಗಿಕೊಂಡರು. ಕೊನೆಗೆ ಮಗುವನ್ನು ಒಂಟಿಯಾಗಿ ಬಿಟ್ಟಿರಲಾರದೆ ಎಲ್ಲವನ್ನೂ ಬಿಟ್ಟುಕೊಟ್ಟು ಮತ್ತೆ ಗಂಡ-ಮನೆ-ಮಗುವಿಗೆ ಸೀಮಿತಳಾದೆ. ಆಗ ಜನ ಮಾತಾಡಿದರು.

‘ಬಾಸ್ ಒಬ್ರೇ ಎಷ್ಟೂಂತ ದುಡೀತಾರೆ? ನೀವೂ ಒಂದಷ್ಟು ಜವಾಬ್ದಾರಿಯನ್ನು ತೆಗೆದುಕೊಂಡರೆ ಅವರೂ ಸ್ವಲ್ಪ ಆರಾಮಿರುತ್ತಾರೆ’ ಎಂದರು. ಹೌದೇನೋ? ಎಂದುಕೊಂಡು ಮತ್ತೆ ಹಾಯ್ ಕಚೇರಿಗೆ ಭೇಟಿ ನೀಡಲಾರಂಭಿಸಿದೆ. ಅಷ್ಟರಗಲೇ ತಮ್ಮ ತಮ್ಮ ಅಸ್ತಿತ್ವಗಳನ್ನು ಸ್ಥಾಪಿಸಿಕೊಂಡಿದ್ದ ಜೀವಗಳಿಗೆ ಇರುಸುಮುರುಸಾಗಲು ಆರಂಭವಾಯ್ತು. ನನ್ನ ಆಗಮನ ಯಾರಿಗೂ ಸಂತೋಷ ನೀಡಲಿಲ್ಲ. ಬದಲಿಗೆ ನನ್ನೆಲ್ಲ ಕೆಲಸಗಳಿಗೆ ಅಡ್ಡಗಾಲಾದರು. ಏನಾದರೂ ಮಾಡಿಕೊಳ್ಳಲಿ. ನನಗೆ ರವಿ ಆರೋಗ್ಯದಿಂದಿರುವುದು ಮುಖ್ಯ ಅಷ್ಟೇ ಅಂದುಕೊಳ್ಳುತ್ತಾ ಅವರ ಊಟ, ತಿಂಡಿ, ಉಪಚಾರಗಳ ಕಡೆಗಷ್ಟೇ ಗಮನ ನೀಡತೊಡಗಿದೆ. ಆಗಲೂ ಜನ ಮಾತಾಡಿದರು.

‘ನೀವು ಯಾವಾಗ್ಲೂ ಹೀಗೆ ಬಂದು ಎದುರಿಗೆ ಕೂತರೆ ಬಾಸ್ ರಿಲ್ಯಾಕ್ಸ್ ಆಗೋದು ಹೇಗೆ? ಅವರನ್ನು ಅವರ ಪಾಡಿಗೆ ಬಿಡಿ ಸ್ವಲ್ಪ ಹೊತ್ತು’ಅಂದರು. ಅದೂ ನಿಜವೇ. ಕ್ರಿಯಾಶೀಲ ಮನಸುಗಳು ಬಂಧನದಲ್ಲಿ ಉಸಿರುಗಟ್ಟಿ ಹೋಗುತ್ತವೆ. ‘ಅವರ ಖುಷಿಗಿಂತ ಮತ್ತೇನಿದೆ? ಅವರು ಕ್ಷೇಮದಿಂದಿದ್ದರಷ್ಟೇ ಸಾಕು ನನಗೆ’ ಎಂದು ಹೇಳಿ, ಬಿಡುವಿನ ವೇಳೆಯಲ್ಲಿ ಗ್ರಾಫ್ ಥೆರಪಿಯ ಮೂಲಕ ಹ್ಯಾಂಡ್ರೈಟಿಂಗ್ ಅನಾಲಿಸಿಸ್ ಕೋರ್ಸನ್ನು ಮಾಡಿಕೊಂಡೆ. ಜೊತೆಗೆ ಬೊಟಿಕ್ ಮ್ಯಾನೇಜ್ಮೆಂಟ್ ಕೋರ್ಸ್ ಹಾಗೂ ಬಂಜಾರಾ ಅಕಾಡೆಮಿಯಲ್ಲಿ ಐಎಈಇಖಎಂಬ ಕೌನ್ಸಿಲಿಂಗ್ ಕೋರ್ಸ್ ಮಾಡಿಕೊಂಡೆ. ಇದರಿಂದ ನನ್ನ ಆಲೋಚನಾ ಧಾಟಿಯೇ ಬದಲಾಯಿತು. ಹೊರಗಿನ ಮಾತುಗಳನ್ನು ಮರೆತು, ಮನಸಿನ ಮಾತುಗಳಿಗೆ ಕಿವಿಯಾದೆ. ಇದರಿಂದ ಆತ್ಮಸ್ಥೈರ್ಯ ಹೆಚ್ಚಾಯಿತು.

ಆದರೆ ಎಲ್ಲ ಸಂತೋಷಗಳ ನಡುವೆಯೂ ನೋವು ಮಾತ್ರ ಎಂದಿಗೂ ಮರೆಯಾಗಲೇ ಇಲ್ಲ. ತಮಗಾದ ಎಲ್ಲ ನೋವುಗಳನ್ನು ಮರೆಯಲಾಗದೇ ಪದೇಪದೆ ನೆನಪು ಮಾಡಿಕೊಂಡು ನರಳಿದರು ರವಿ. ನೋವಿನ ಮಾತಾದರು. ನೋವಿನ ನಕ್ಕರು-ನಲಿದರು. ನೋವಿನ ಬರೆದರು. ನೋವಿನ ಸಾಧಿಸಿದರು. ಕೊನೆಗೆ ನಮ್ಮನ್ನು ನೋವಿನಲ್ಲಿ ನೂಕಿ ಶಾಶ್ವತವಾಗಿ ವಿರಮಿಸಿದರು. ಮತ್ತೆ ಎದುರಾದದ್ದು ಅದೇ ಅಸ್ತಿತ್ವದ ಪ್ರಶ್ನೆ. ಸುತ್ತಲಿನ ಜನ ನಮ್ಮನ್ನು ಗಮನಿಸುತ್ತಲೇ ಇದ್ದರು.

ಕೆಲವರು ಸಾಂತ್ವನ ನೀಡಿದರು. ಕೆಲವರು ಸಂತೋಷ ಪಟ್ಟರು. ಕೆಲವರು ನೊಂದುಕೊಂಡರು. ಕೆಲವರು ಏನೂ ಹೇಳದೆ ಸುಮ್ಮನಿದ್ದರು. ಆದರೆ ಅದೆಲ್ಲದರ ನಡುವೆ ಒಬ್ಬ ಮೋಹನಣ್ಣ ಯಾಕಮ್ಮ ಹೀಗಿದ್ದೀಯ? ಫೇಸ್ಮುಕ್ಕಿನಲ್ಲಿ ನಿನ್ನ ಬರಹಗಳನ್ನು ನೋಡುತ್ತಿದ್ದೇನೆ. ಅದೆಷ್ಟು ಚೆನ್ನಾಗಿ ಬರೀತೀಯ. ಯಾಕೆ ವಿಶ್ವೇಶ್ವರ ಭಟ್ಟರ ವಿಶ್ವವಾಣಿ ಪತ್ರಿಕೆಗೆ ಒಂದು ಅಂಕಣ ಬರೆಯಬಾರದು? ಎಂದು ಸೂಚಿಸಿದಾಗ ಇದು ನನ್ನಿಂದ ಸಾಧ್ಯವಾ? ಸಾಲದ್ದಕ್ಕೆ ಅವರಿಬ್ಬರ ನಡುವೆ ಇದ್ದ ಸ್ನೇಹ ವೈರತ್ವವಾಗಿ ಬದಲಾಗಿದ್ದಕ್ಕೆ ಸಾಕ್ಷಿಯಾಗಿದ್ದೇನೆ. ಹೇಗೆ ಬರೆಯಲಿ? ಅಂದೆ.

ಅದೆಲ್ಲವನ್ನೂ ತಲೆಯಿಂದ ತೆಗೆದು ಹಾಕು. ಖುದ್ದು ವಿಶ್ವೇಶ್ವರ ಭಟ್ಟರೇ ನಿನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಯಾವುದೇ ಆತಂಕವಿಲ್ಲದೆ ನೀನು ನೆಮ್ಮದಿಯಾಗಿ ಬರೆಯುತ್ತಾ ಹೋಗು ಎಂದು ವಿಶ್ವಾಸ ತುಂಬಿದರು. ಕಷ್ಟ ಪಟ್ಟು ಮನಸಿನಲ್ಲಿ ಕಾಡುತ್ತಿದ್ದ ಗೊಂದಲಗಳು, ಪ್ರಶ್ನೆಗಳು,
ಆಕ್ರೋಶಗಳಿಗೆಲ್ಲ ಅಕ್ಷರ ರೂಪ ನೀಡುತ್ತಾ ಹೋದೆ. ಮನಸಿಗೆ ಸ್ವಲ್ಪ ಸಮಾಧಾನ ಸಿಕ್ಕಂತಾಯ್ತು. ಆನಂತರ ಬರವಣಿಗೆ ಬದುಕಿನ ಭಾಗವಾದಂತಾಯ್ತು.

ಆದರೆ ಯಥಾಪ್ರಕಾರ ಅರಂಭದಲ್ಲಿ ಮೆಚ್ಚುಗೆಗಿಂತ ಸಿಕ್ಕಿದ್ದು ಪ್ರತಿರೋಧವೇ….. ನಿಮ್ಮದೇ ಪತ್ರಿಕೆಯಿತ್ತು. ನೀವು ಅಲ್ಲಿ ಬರೆಯಬಹುದಿತ್ತು.
ಅಲ್ಲದೇ ರವಿ ಹಾಗೂ ಭಟ್ಟರ ನಡುವೆ ಇದ್ದ ವೈಷಮ್ಯ ಎಲ್ಲರಿಗೂ ತಿಳಿದಂಥದ್ದೇ. ಅಂಥದ್ದರಲ್ಲಿ ನೀವು ಅವರ ಪತ್ರಿಕೆಗೆ ಬರೆಯುವುದು ಎಷ್ಟು ಸಮಂಜಸ? ಅನ್ನುವ ಪ್ರಶ್ನೆಗಳೆದ್ದವು. ಈಗ ಅದೆಲ್ಲ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಅದರ ಮೊದಲ ಮೂವತ್ತು ಅಂಕಣ ಬರಹಗಳು ನನ್ನ ಅಸ್ತಿತ್ವದ
ಪ್ರತೀಕವಾಗಿ ಪುಸ್ತಕರೂಪದಲ್ಲಿ ಅರಳಿ ನಿಂತಿದೆ. ಬರೆಯುವಂತೆ ಪ್ರೇರಣೆ ನೀಡಿದ ಮೋಹನಣ್ಣನಿಗೆ, ಅವಕಾಶ ನೀಡಿದ ಪತ್ರಿಕೆಗೆ, ವಿಶ್ವೇಶ್ವರಭಟ್ಟ ರಿಗೆ, ಹಾಗೂ ನಿರಂತರ ಓದುತ್ತಾ ವಿರೋಧ-ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ ನನ್ನ ಪ್ರೀತಿಯ ಓದುಗರಿಗೆ ನನ್ನ ಅನಂತ ನಮನಗಳು.

error: Content is protected !!