About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಕೃಷಿ ಎಂಬ ತಪೋಶಕ್ತಿ ಬಗ್ಗೆ ಅರಿವಿದೆಯೇ?

ಕೆ.ಪಿ. ಶ್ವೇತಾ

ನಮ್ಮ ಮಕ್ಕಳಿಗೆ ರ್ಯಾಂಕ್ ಬರಬೇಕು, ಎಂಜಿನಿಯರ್ರೋ, ಡಾಕ್ಟ್ರೋ ಆಗಲೇಬೇಕು. ಅದಕ್ಕೆ ಎಷ್ಟಾದರೂ ಖರ್ಚಾಗಲಿ, ಸಾಲ-ಸೋಲ ಮಾಡಿಯಾದ್ರೂ ಒಳ್ಳೇ ಕ್ರಿಶ್ಚಿಯನ್ ಶಾಲೆಯಲ್ಲೇ ಓದಿಸಬೇಕು’. ಇದು ಇಂದಿನ ಪೋಷಕರ ಘೋಷವಾಕ್ಯ, ಮನದ ಇಂಗಿತ ಹಾಗೂ ಜೀವನದ ಮುಖ್ಯಗುರಿ. ಇವರಾಸೆಯಂತೆ ಮಕ್ಕಳೂ ಪುಸ್ತಕಗಳ ಹುಳುಗಳಾಗಿ ರ್ಯಾಂಕ್ ಏನೋ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಅದೇ ಮಕ್ಕಳ ಹತ್ತಿರ ಹೋಗಿ, ನೀನು ಬೆಳಗ್ಗೆ ಟೀ ಕುಡಿಯುತ್ತೀಯಲ್ಲಾ ಅದಕ್ಕೆ ಯಾವ ಸಾಮಾಗ್ರಿ ಬಳಸುತ್ತಾರೆ, ಅದನ್ನ ಎಲ್ಲಿ  ಹೇಗೆ ಬೆಳೆಯುತ್ತಾರೆ? ಅಂತ ಕೇಳಿ ನೋಡಿ, ‘ I don’t know’’ ಟೀ ಪೌಡರ್ ಮಾಲ್‌ಗಳಲ್ಲಿ ಸಿಗುತ್ತೆ ಅಷ್ಟೇ ಗೊತ್ತು ಎಂದು ಉದಾಸೀನದಿಂದ ಉತ್ತರಿಸಿ ಬಿಡುತ್ತಾರೆ. ಮಕ್ಕಳೇಕೆ ಬಹುತೇಕ ಸಿಟಿ ಮಂದಿಗೆ  ‘ಕೃಷಿ’ ಎಂಬ  ತಪೋಶಕ್ತಿಯ ಬಗ್ಗೆ ಎಳ್ಳಷ್ಟು ಅರಿವೇ ಇಲ್ಲ. ಅವರ ಬೆವರಿನ ಕಥೆಯನ್ನು ತಿಳಿಯುವಷ್ಟು ಸಮಯವೂ ಇಲ್ಲ, ಅವರಿಗೆ ಕಿಂಚಿತ್ತು ಗೌರವ ಕೊಡುವ ಮನಸ್ಥಿತಿ ಅಂತೂ ಇಲ್ಲವೇ ಇಲ್ಲ..!

 ಇಂಥ ಧೋರಣೆಯನ್ನು ನಿಯಂತ್ರಿಸಿ, ಕೃಷಿ ಬಗ್ಗೆ,  ಬಗ್ಗೆ ಅರಿವು ಮೂಡಿಸಲು, ಪ್ರವಾಸಿಗರನ್ನು ಕೃಷಿ ಭೂಮಿಗೆ ಕರೆದೊಯ್ದು,  ನೇರವಾಗಿ ರೈತರೊಂದಿ ಗೆ ಒಡನಾಟ ಬೆಳೆಸಿ, ಕೃಷಿ ವಿಧಾನದ ಬಗ್ಗೆ ಮಾಹಿತಿ ಕಲೆಹಾಕಿ,  ಅವರ ಆಹಾರ ಪದ್ಧತಿ, ಕಷ್ಟ ಸುಖಗಳನ್ನು ಅರಿಯುವುದಕ್ಕಾಗಿ ಪ್ರವಾಸೋದ್ಯಮದಲ್ಲಿ ಒಂದು ಕ್ರಾಂತಿಕಾರಕ ಚಟುವಟಿಕೆಯೊಂದು ಸದ್ದಿಲ್ಲದೆ ತೆರೆಮರೆಯಲ್ಲಿ ನಡೆಯುತ್ತದೆ. ಅದೇ ‘ಕೃಷಿ ಪ್ರವಾಸೋದ್ಯಮ’.

ಈ ಚಟುವಟಿಕೆ ಮಹತ್ವಪೂರ್ಣವಾಗಿ ಯಶಸ್ಸು ಕಂಡಿರುವುದು ‘ಇಸ್ರೇಲ್ ಮತ್ತು ಥಾಯ್ಲೆಂಡ್’ನಲ್ಲಿ. ಇಸ್ರೇಲ್‌ನಲ್ಲಿ  ಅನೇಕ ಸಂಘಸಂಸ್ಥೆಗಳು ಸುಮಾರು ಹತ್ತು-ಹದಿನೈದು ದಿನಗಳ ಪ್ಯಾಕೇಜ್ ಟೂರ್‌ಗಳನ್ನು  ದೇಶ-ವಿದೇಶದಿಂದ ಕೃಷಿ ಆಸಕ್ತರನ್ನು ಅಲ್ಲಿನ ಕೃಷಿ ಭೂಮಿಗಳಿಗೆ ಕರೆದೊಯ್ದು, ಅಲ್ಲಿಯೇ ಊಟೋಪಚಾರ ಕೊಡಿಸಿ, ಬೆಳೆಗಳು ಮತ್ತು ಕೃಷಿ ವಿಧಾನದ ಬಗ್ಗೆ ಮಾಹಿತಿ ಕಲ್ಪಿಸಿಕೊಡುವ ಕಾರ್ಯ ಮಾಡುತ್ತಿವೆ. ಜತೆಗೆ ಸಮೀಪದ ಪ್ರವಾಸಿ ತಾಣಗಳಿಗೂ ಕರೆದೊಯ್ಯಲಾಗುತ್ತದೆ. ಇನ್ನು ಉತ್ತರ ಥಾಯ್ಲೆಂಡ್‌ನಲ್ಲಿ ಕೃಷಿ ಪ್ರವಾಸೋದ್ಯಮ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಪ್ರವಾಸಿಗರು ಪ್ರತಿ ವೀಕೆಂಡ್ ರೈತರ ಭೂಮಿಗೆ ಹೋಗಿ ಕೃಷಿ ಅನುಭವದ ಕಲಿಕೆಯತ್ತ ಒಲವು ತೋರುತ್ತಿದ್ದಾರೆ. ಥಾಯ್ಲೆಂಡ್‌ನ ಕೆಲವೊಂದು ರೆಸ್ಟೋರೆಂಟ್‌ಗಳಲ್ಲಿ ಸಿಗುವ ಆಹಾರದಲ್ಲಿ,  ನೀವೀಗ ಪಲಾವ್ ತಿನ್ನುತ್ತಿದ್ದರೆ, ಅದಕ್ಕೆ ಬಳಸಿರುವ ಅಕ್ಕಿಯನ್ನು ಯಾವ ರೈತ ಬೆಳೆದಿದ್ದು, ಮತ್ತು ಅವರ ವಿಳಾಸ ಸಮೇತ ವಿವರ ಇರುತ್ತದೆ. ಆಸಕ್ತರು ಆ ರೈತರ ಜಮೀನಿಗೆ ಹೋಗಿ ಬರುತ್ತಾರೆ. ಅಲ್ಲೆಲ್ಲಾ ರೈತರಿಗೆ ಎಷ್ಟು ಗೌರವ ಕೊಡುತ್ತಾರೆಂದರೆ, ಯಾವುದಾದರೂ ಕಾರ್ಯಕ್ರಮದಲ್ಲಿ ವೇದಿಕೆಗೆ ರೈತರನ್ನು ಆಹ್ವಾನಿಸಿದರೆ ಸಾಕು ಸಭೀಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವುದರ ಮೂಲಕ ಗೌರವಿಸುತ್ತಾರೆ. ಆದರೆ, ನಮ್ಮಲ್ಲಿ ‘  ರೈತರೆಂದರೆ ಪಟಾಪಟಿ ಚಡ್ಡಿ, ಹಸಿರುಶಾಲು’ ಎಂದೆಲ್ಲಾ ಮೂದಲಿಸುತ್ತಾರೆ!

ಇನ್ನೂ  ದೇಶಕ್ಕೆ ಬಂದರೆ, ಕೃಷಿ ಪ್ರವಾಸೋದ್ಯಮ ಚಟುವಟಿಕೆಯ ಮೂಲ ಉದ್ದೇಶ ವನ್ನು ಸಾಕಾರಗೊಳಿಸುವಲ್ಲಿ ಮಹಾರಾಷ್ಟ್ರ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ATDC  ಎಂಬ ಪ್ರತ್ಯೇಕ ಇಲಾಖೆಯನ್ನೇ ತೆರೆದು ಅದರ ಮೂಲಕ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಆಸಕ್ತರಿಗೆ, ಪ್ರವಾಸಿಗರಿಗೆ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ಪಸರಿಸುತ್ತಿದೆ. ಇದರ ಸರ್ವೆ ಪ್ರಕಾರ 2014, 2015, ಮತ್ತು 2016ರಲ್ಲಿ 0.40 ಮಿಲಿಯನ್, 0.53 ಮಿಲಿಯನ್ ಮತ್ತು 0.7 ಮಿಲಿಯನ್ ಪ್ರವಾಸಿಗರು ಕೃಷಿ ಪ್ರವಾಸೋದ್ಯಮದ ಫಲಾನುಭವಿಗಳಾಗಿದ್ದಾರೆ.  ರೈತ ಕುಟುಂಬಗಳಿಗೆ 35.79 ಮಿಲಿಯನ್ ರುಪಾಯಿ ದೊರೆತಿದೆ. ಜತೆಗೆ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗವೂ ಸಿಕ್ಕಿದೆ. ಅದರಲ್ಲೂ ಮಹಾರಾಷ್ಟ್ರದ ಸಣ್ಣ ಪಟ್ಟಣ ಬಾರಾಮತಿ ಕೃಷಿ ಪ್ರವಾಸೋದ್ಯಮ ಯಶಸ್ಸಿನ ಪ್ರತಿಬಿಂಬವಾಗಿದೆ. ಇಲ್ಲಿಗೆ ಹೋದರೆ ಸ್ವಾದಿಷ್ಟ ಸಾಂಪ್ರದಾಯಿಕ ಆಹಾರ ಪದಾರ್ಥಗಳ ರುಚಿ ನೋಡುವುದರ ಜತೆಗೆ ಒಳ್ಳೆಯ ಅನುಭವವನ್ನೂ ತಮ್ಮದಾಗಿಸಿಕೊಳ್ಳಬಹುದು.

ಕೃಷಿಯನ್ನು ಪ್ರವಾಸೋದ್ಯಮದ ಒಂದು ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಯಶೋಗಾಥೆಯನ್ನು ಸೃಷ್ಟಿಸುತ್ತಿರುವ ಈ ಘಟ್ಟದಲ್ಲಿ ನಮ್ಮ ರಾಜ್ಯ ಮಾತ್ರವೇಕೆ ಪರದೆ ಹಿಂದೆ ಸರಿಯುತ್ತಿದೆ? ಅದರಲ್ಲೂ  ರಾಜ್ಯದಲ್ಲಿ  ಎಂಥೆಂಥಾ ತೋಟಗಳಿವೆ, ಸಾವಯವ ಕೃಷಿ ಪದ್ಧತಿಯಿಂದ ಎಷ್ಟು ವೈವಿಧ್ಯಮಯ ಬೆಳೆಗಳನ್ನು ನಮ್ಮ ರೈತರು ಬೆಳೆಯುತ್ತಿದ್ದಾರೆ, ಅಂಗೈ ಅಗಲ ಜಾಗದಲ್ಲಿ ಬಹುಬೆಳೆಗಳನ್ನು ಬೆಳೆಯುವ ಬುದ್ಧಿವಂತ ರೈತರಿದ್ದಾರೆ. ಅದರ ಜತೆಗೆ ವಾರವಿಡೀ ಕಂಪ್ಯೂಟರ್ ಕೀ ಬೋರ್ಡ್ ಕುಟ್ಟಿ ಕುಟ್ಟಿ ಬೇಸತ್ತು, ಒಂದೆರಡು ದಿನಗಳು ಹಳ್ಳಿ ಪರಿಸರದ ಅನುಭವ ಪಡೆಯಲು ಹಾತೊರೆಯುವ ಟೆಕ್ಕಿಗಳು, ಹಾಗೂ ಜಟಿಲ ಕಾನನದಂತಿರುವ ಸಿಟಿ ಜೀವನದಿಂದ ಮುಕ್ತವಾಗಿ ಕೃಷಿ ಮಾಡುತ್ತಾ,  ಶುದ್ಧ ಗಾಳಿ ಸೇವಿಸುತ್ತಾ, ರಾಸಾಯನಿಕ ಮುಕ್ತ  ಸೇವಿಸುತ್ತಾ ಜೀವನದ ಕೊನೆಯ ದಿನಗಳನ್ನು ಕಳೆಯಬೇಕೆಂದು ಬಯಸುವ ಎಷ್ಟೋ ಮಂದಿ ಇದ್ದಾರೆ. ಆದರೆ, ರೈತರಿಗೂ ಕೃಷಿ ಆಸಕ್ತರಿಗೂ ಸಂಪರ್ಕ ಬೆಸೆಯುವ ಕೊಂಡಿಗಳಾಗುವ ಕೆಲಸ ಮಾತ್ರ ಸರಕಾರ ಮಾಡುತ್ತಿಲ್ಲ. ಎಲ್ಲೋ ಒಂದಷ್ಟು ಸಾಫ್‌ಟ್ವೇರ್ ಮಂದಿ ತಮ್ಮದೇ ಒಂದು ಗುಂಪು ಕಟ್ಟಿಕೊಂಡು ವಾರಂತ್ಯದಲ್ಲಿ ಕೃಷಿ ಭೂಮಿಗಳಿಗೆ ಹೋಗಿ, ಅಲ್ಲಿನ ಆಹಾರ ಸೇವಿಸಿ,  ರೈತರ ಮನೆಯಲ್ಲೇ ತಂಗುವುದರ ಜತೆಗೆ ಇಡೀ ದಿನ ಕೃಷಿ ಭೂಮಿಯಲ್ಲಿ ಕೆಲಸ ಮಾಡಿ, ಅನುಭವ ಪಡೆಯುತ್ತಿದ್ದಾರೆ.  ಸದ್ಯ ಒಂದಷ್ಟು  ಕೆಲ ಕೃಷಿ ಪರಿಣತರೇ ಈ ಕೃಷಿ ಪ್ರವಾಸೋದ್ಯಮ ಚಟುವಟಿಕೆಯ ರೂವಾರಿಗಳಾಗಿದ್ದಾರೆ. ಮಹಾರಾಷ್ಟ್ರ ಸರಕಾರದಂತೆ ನಮ್ಮ ಸರಕಾರ ಎಂದು ಈ ವಿನೂತನ ಚಟುವಟಿಕೆಯ ಸಮರ್ಪಕ ಅನುಷ್ಠಾನದತ್ತ ಒಲವು ತೋರುವುದೋ..?

ಸಾವಿರಾರು ರುಪಾಯಿ ವ್ಯಯಿಸಿ ಯಾವುದೋ ಐಶಾರಾಮಿ ಹೋಟೆಲ್‌ನಲ್ಲಿ ತಂಗುವುದಕ್ಕಿಂತ ನೂರಾರು ರುಪಾಯಿ ವ್ಯಯಿಸಿ ರೈತರ ಭೂಮಿಗೆ ಹೋಗಿ, ಹಳ್ಳಿ ಜೀವನದ ಮಹತ್ವವನ್ನರಿಯುವುದರ ಜತೆಗೆ ತಾವು ತಿನ್ನುವ ಆಹಾರದ ಉತ್ಪಾದನೆ ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ವೀಕ್ಷಿಸಬಹುದು. ಅದರಲ್ಲೂ ಶಾಲಾ ಮಕ್ಕಳಿಗೆ ಶೈಕ್ಷಣಿಕ  ಹೆಸರಿನಲ್ಲಿ ವಾರಕ್ಕೊಮ್ಮೆ ಹತ್ತಿರದ ತೋಟಗಳಿಗೆ ಕರೆದೊಯ್ದರೆ, ಆ ಮಕ್ಕಳಿಗೆ ಮನರಂಜನೆ ಜತೆಗೆ ಕೃಷಿ ಬಗ್ಗೆ ಒಂದಷ್ಟು ತಿಳಿವಳಿಕೆ ಬಂದೀತು. ರಾಜಕಾರಣಿಗಳು, ಅಧಿಕಾರಿಗಳಿಗೆ ಕೃಷಿ ನಂಟು ಅಷ್ಟಕಷ್ಟೆ ಇರಬಹುದು, ರೈತರ ಮೇಲೆ ಅಸಡ್ಡೆ ಇರಬಹುದು, ಕನಿಷ್ಟಪಕ್ಷ ಕೃಷಿ ಆಸಕ್ತರನ್ನಾದರೂ ರೈತರ ಬಳಿ, ಕೃಷಿ ಭೂಮಿಯತ್ತ ತಲುಪಿಸುವ ಕೆಲಸ ಮಾಡುವಂತಾಗಲಿ. ಇಸ್ರೇಲ್, ಥಾಯ್ಲೆಂಡ್, ಮಹಾರಾಷ್ಟ್ರ  ರಾಜ್ಯಕ್ಕೆ ಮಾದರಿಯಾಗಲಿ.

Tags

Related Articles

Leave a Reply

Your email address will not be published. Required fields are marked *

Language
Close