ನಾಸ್ತಿಕರೆಂದರೆ ಧರ್ಮದ ಶತ್ರುಗಳೆಂದು ಭಾವಿಸಿಕೊಂಡಿರೇನು?

Posted In : ಸಂಗಮ, ಸಂಪುಟ

ವಿಶ್ವವಾಣಿಯಲ್ಲಿ ಪ್ರಕಟವಾದ ‘ಅನ್ಯಧರ್ಮೀಯರಲ್ಲ ನಾಸ್ತಿಕರೇ ನಮ್ಮ ಶತ್ರುಗಳು’ಎಂಬ ಲೇಖನದಲ್ಲಿ ನಾಸ್ತಿಕರನ್ನು ಧರ್ಮದ ಶತ್ರುಗಳೆಂದು ಬಿಂಬಿಸಿ ಬರೆದ ಲೇಖನದ ವಿಷಯವನ್ನು ಖಂಡಿಸಿ ನನ್ನ ವಿಷಯ ಮಂಡನೆ. ನಾಸ್ತಿಕರೇ ನಮಗೆ ಶತ್ರುಗಳು ಎಂದು ಬರೆದಿದ್ದೀರಿ. ನಿಮಗೋ ಅಥವಾ ಧರ್ಮಕೋ ತಿಳಿಯಲಿಲ್ಲ. ನಾಸ್ತಿಕರನ್ನು ಧರ್ಮಕ್ಕೆ ಶತ್ರುಗಳೆಂದು ಬರೆಯುವ ವೇಗದಲ್ಲಿ ಧರ್ಮ ಮತ್ತು ನಾಸ್ತಿಕ ಪದಗಳ ಆಳಕ್ಕೆ ಇಳಿಯುವಲ್ಲಿ ಸೋತಿದ್ದೀರಿ ಅನಿಸುತ್ತದೆ. ನೀವೊಂದು ದಿವ್ಯೋನ್ಮಾದ (mystical
ecstasy)ದಲ್ಲಿ ನಿಮ್ಮ ಲೇಖನ ಸಿದ್ಧಪಡಿಸಿದ್ದೀರಿ ಎನಿಸುತ್ತದೆ. ನಿಮ್ಮ ಪ್ರಕಾರ ಯಾವುದು ಹಿಂದೂ ಧರ್ಮ? ಈಗ ಚರ್ಚೆಯಾಗುತ್ತಿರುವ ಗೋ ಹತ್ಯೆಯ ವಿಚಾರವಾ? ತಿನ್ನುವುದಕ್ಕೆ, ಉಡುವುದಕ್ಕೆ, ಅಧಿಕಾರಕ್ಕೆ, ಬಾಯಿ ಚಪಲಕ್ಕೆ, ಅಧಿಕಾರಕ್ಕೆ ಎಳೆತಂದು ಏನೆಲ್ಲಾವನ್ನು ಹಿಂದು ಧರ್ಮದ ತಲೆಗೆ ಕಟ್ಟಿ ಮಾತಾನಾಡುತ್ತಿರುವುದಾ? ಹಿಂದೂ ಧರ್ಮದ ವಿಶಾಲತೆ ನಿಮಗೆ ಗೊತ್ತಿಲ್ಲದಿರುವುದೇನೂ ಅಲ್ಲ!

ನಿಜಕ್ಕೂ ಹೇಳಬೇಕು ಅಂದರೆ ಈಗ ನಾವು ನೀವು ಅಂದುಕೊಂಡು ಅನುಭವಿಸುಕೊಂಡು ಕಾಣಿಸುತ್ತಿರುವ ಧರ್ಮ ಪೂರ್ಣ ಹಿಂದೂ ಧರ್ಮವಲ್ಲ, ಅದರ ನೆರಳಷ್ಟೇ! ಈ ಪ್ರದೇಶದಲ್ಲಿ ವಾಸಿಸಿದ್ದ ಜನರ ಧಾರ್ಮಿಕ, ತಾತ್ವಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಗೆ ಗುರುತಿಸಲು ಯಾರೋ ಹೊರಗಿನವರು ಇಟ್ಟ ಹೆಸರು. ಅ ಮೂಲ ತತ್ತ್ವಗಳೇನಾಗಿದ್ದವು? ಈಗ ಇರುವುದು ಏನು? ಹಾಗಾದರೆ ಮಧ್ಯೆ ಧರ್ಮದ ಹೆಸರಲಿನಲ್ಲಿ ತೂರಿಸಿದವರು ಯಾರು? ಮತ್ತು ಯಾಕೆ? ಅವೆಲ್ಲದರ ಅರಿವು ಯಾರೂ ಅರಿಯದರೇನಲ್ಲ. ಅಷ್ಟಕ್ಕೂ ಧರ್ಮವೆಂದರೆ ಧರಿಸುವಂತದ್ದು. ಅಂದರೆ ನಾವೇನು ಆಚರಿಸುತ್ತೇವೆಯೋ ಅದು ಧರ್ಮ. ಹಿಂದೂ ಧರ್ಮವೆಂದರೆ ಈ ಮಣ್ಣಿನಲ್ಲಿ ವಾಸಿ ಮಾಡಿದ್ದ ಜನರ ಆಚಾರಕ್ರಮವಷ್ಟೆ!

ಆದರೆ ದುರಾದೃಷ್ಟವಶಾತ್ ಆ ಆಚಾರ ಕ್ರಮಗಳು ಹೈಜಾಕ್ ಆದವು! ಕೆಲವೇ ಜನರ ಸ್ವತ್ತಾದವು. ತಮಗೆ ಬಂದಂತೆ ಧರ್ಮದ ವ್ಯಾಖ್ಯಾನಗಳು ಶುರುವಾದವು. ಪ್ರಬಲವಾದವರು ಧರ್ಮವನ್ನು ಅಸ್ತ್ರವಾಗಿ ಬಳಸಿಕೊಂಡು ತಮಗೆ ಇಷ್ಟದ ರೀತಿಯಲ್ಲಿ ಕಟ್ಟುನಿಟ್ಟುಗಳನ್ನು ರೂಪಿಸಿದರು. ಅದರ ಫಲವೇ ಇಂದು ಜಾತಿ, ಅಸ್ಪಶ್ಯತೆಯಂತಹ ಧರ್ಮದಲ್ಲಿ ಬೆಳೆದು ನಿಂತಿರುವ ಕೊಳಕು. ಈಗ ನಮ್ಮ ಮುಂದಿರುವ ಹಿಂದು ಧರ್ಮ ಯಾರೋ ನಮಗೆ ಇಷ್ಟ ಬಂದಂತೆ ರೂಪಿಸಿದ ಆಚರಣಾ ಕ್ರಮವಲ್ಲವೇ? ಇದೇನು ಪ್ರಕೃತಿಯೇ ತಾನು ಪ್ರತ್ಯಕ್ಷವಾಗಿ ಕೊಡಮಾಡಿದ ವರವೆಂದು ಭಾವಿಸಿದಿರೇನು? ಹಿಂದೂ ಧರ್ಮದ ಹೊಲಸುಗಳ ಬಗ್ಗೆ ಮಾತಾಡಿದವರು ನಿಮಗೆ ಧರ್ಮ ವಿರೋಧಿಗಳಾಗಿ ಕಾಣಿಸುತ್ತಾರೇನು? ಯಾರೋ ಬರೆದಿಟ್ಟು ಹೋದದ್ದು, ಹೇಳಿ ಹೋದದ್ದು ನಾವೇಕೆ ಕಣ್ಮುಚ್ಚಿ ಪಾಲಿಸಬೇಕು? ಇಂತಹ ಚಿಂತನೆಗಳಿಂದ ತಾನೇ ನಾಸ್ತಿಕತೆ ಹುಟ್ಟಿದ್ದು.

ನಾಸ್ತಿಕತೆ ಇದರ ಅರ್ಥವೇನು ಬಲ್ಲಿರಾ? ಅದು ಅಸ್ತಿತ್ವದಲ್ಲಿ ಇಲ್ಲ ಎಂಬುದಲ್ಲವೇ? ಹಿಂದೂ ಧರ್ಮದ ಹೆಸರಿನಲ್ಲಿ ಇರುವ ಕೆಲವು ಹುಚ್ಚಾಟಗಳು ಅದು ಆ ಧರ್ಮದಲ್ಲ ಇಲ್ಲ, ಅದಲ್ಲ ಎಂದು ಹೇಳಿದವರು ನಾಸ್ತಿಕರಲ್ಲವೇನು? ನಿಮಗೆ ಒಂದು ದೇವರು, ಒಂದು ಮೂರ್ತಿ, ಅದರ ಪೂಜೆ, ಮಂಗಳರಾತಿ ಅದರ ಹಿಂದೆಯೇ ಬರುವ ರಾಶಿ ರಾಶಿ ಮೌಢ್ಯಗಳನ್ನು ಒಪ್ಪಿಕೊಂಡವನು ಆಸ್ತಿಕನೆನಿಸುತ್ತಾನೆ.

ಇಂತಹ ಕೆಲವು ಆಸ್ತಿಕರೇ ಹಿಂದೂ ಧರ್ಮವೆಂದರೆ ನಾವು ಮೇಲೆ ಪಾಲಿಸುತ್ತಿರುವ ಈ ಕ್ರಿಯೆಗಳೇ ಎಂಬುದಾಗಿದೆ ಎಂದು ವ್ಯಾಖ್ಯಾನಿಸುವ ಮಟ್ಟಕ್ಕೆ ಹೋಗಿ ಬಿಡುತ್ತಾರೆ. ಆಸ್ತಿಕತೆ ಮತ್ತು ಅದರ ಅಡಿಯಲ್ಲಿ ಮತ್ತೆ ಮತ್ತೆ ಧರ್ಮ ದಾರಿ ತಪ್ಪಿ ನಲುಗುತ್ತದೆ. ಧರ್ಮದ ಮೂಲ ಆಚರಣೆಗಳು ಸೈಡಿನಲ್ಲಿ ಸುಮ್ಮನೆ ಕೂರಬೇಕಾಗುತ್ತದೆ. ಹಿಂದು ಧರ್ಮದಲ್ಲಿ ಆಗಿದ್ದು, ಆಗುತ್ತಿರುವುದು ಅದೇ ಕೂಡ! ಇದನ್ನು ಖಂಡಿಸುವವನು, ಅದರ ವಿರುದ್ದ ದನಿ ಎತ್ತುವವನು, ನಂಬದವನು ನಾಸ್ತಿಕನೆನಿಸಿಕೊಳ್ಳುತ್ತಾನೆ. ನಿಜಕ್ಕೂ ಧರ್ಮಕ್ಕೆ ಅಪಾಯವಿರುವುದು ಆಸ್ತಿಕರಿಂದಲೋ, ನಾಸ್ತಿಕರಿಂದಲೋ ನೀವೇ ಹೇಳಿ? ಇವತ್ತು ಇದೇ ಧಾರ್ಮಿಕ ಭಾವನೆಗಳನ್ನು ವೋಟಾಗಿ ಪರಿವರ್ತಿಸಿರುವುದು ಆಸ್ತಿಕರ ಹೊಸ ಅಸ್ತ್ರವಾಗಿ ಕಾಣುತ್ತಿಲ್ಲವೇ? ಕೇವಲ ಭಾವನೆಗಳನ್ನು ಎನ್‌ಕ್ಯಾಶ್ ಮಾಡಿಕೊಂಡು ಮಾಡುವ ರಾಜಕಾರಣವನ್ನು ಧರ್ಮ ಒಪ್ಪುತ್ತದೆಯೇ?

ನೀವು ನಾಸ್ತಿಕರನ್ನು ಅತೃಪ್ತ ಆತ್ಮಗಳೆಂದು ಕರೆದಿದ್ದೀರಿ. ಅದರಂತೆ ಹೋದರೆ ಆಸ್ತಿಕರು ತೃಪ್ತ ಆತ್ಮಗಳೆಂದು ಆಗಬೇಕಲ್ಲವೇ? ಆಸ್ತಿಕರ ತೃಪ್ತ ಹೊಂದಿದ ಆತ್ಮಗಳ ಬಗೆಗೆ ವಿವರಣೆ ಕೊಡಬಲ್ಲಿರಾ? ಅದು ಹೇಗೆ ಎಂದು? ನಾಸ್ತಿಕರು ಧರ್ಮವನ್ನು ಬಿಟ್ಟ ಹೋಗಲಾರರು, ಇರಲಾರರು ಸದಾ ಟೀಕಿಸುತ್ತಿರುವರು ಎಂದಿದ್ದೀರಿ. ಹಿಂದೂ ಧರ್ಮದಲ್ಲಿ ಎಲ್ಲಿ ಹೇಳಿದೆ ನಾಸ್ತಿಕತೆ ನನ್ನದಲ್ಲವೆಂದು, ಅದು ಇರಬಾರದೆಂದು? ಹಿಂದೂ ಧರ್ಮ ನಾಸ್ತಿಕತೆಯನ್ನು ಒಪ್ಪಿಕೊಂಡಿದೆ.

ಇಂದಿಗೂ ಹಿಂದೂ ಧರ್ಮದಲ್ಲಿ ಶತಶತಮಾನಗಳಿಂದ ಕೂತಿರುವ ಕೊಳೆಯನ್ನು ಹುಡುಕಿ ಆಚೆ ತಂದು ತೋರಿಸುತ್ತಿರುವವರು ನಾಸ್ತಿಕರಲ್ಲದೇ ಇನ್ಯಾರು? ಅದರಿಂದ ಆಸ್ತಿಕರಿಗೆ ಮುಜುಗರವಾಗುತ್ತದೆ ಎಂದು ಅವರು ಧರ್ಮ ಬಿಟ್ಟು ಹೋಗಬೇಕು ಇಲ್ಲದಿದ್ದರೆ ಸುಮ್ಮನೆ ಕೂತಿರಬೇಕು ಎಂಬುದು ನಿಮ್ಮ ವಾದವಾ? ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ವಿಮಶ್ಯೈತದಶೇಷೇಣ ಯಥೇಚ್ಚಸಿ ತಥಾ ಕುರು ಎಂದು ಹೇಳಿದ್ದಾನೆ. ಅಂದರೆ ಯಾವುದೊಂದನ್ನೂ ಬಿಡದೇ ಎಲ್ಲವನ್ನೂ ಪರಿಶೀಲಿಸಿ ಅನಂತರ ನಿಮಗೆ ಸರಿಯಾದದ್ದನ್ನು ಮಾಡು ಎಂಬುದಾಗಿ. ಹೀಗೆ ಪರಿಶೀಲಿಸಿಲು ಕೂತವರನ್ನು ನೀವು ನಾಸ್ತಿಕರೆಂದು ಕರೆಯುತ್ತೀರಿ. ಕರೆದರೂ ಪರವಾಗಿಲ್ಲ ಆದರೆ ಧರ್ಮಕ್ಕೆ ಅಪಾಯವೆನ್ನುತ್ತೀರಿ. ಯಾಕೆ ಕೆಲವರು ಮಾಡಿದ ಹುಳುಕುಗಳು ತಿಳಿದಾವು ಎಂಬ ಭಯದಿಂದಲೇ!? ಕೃಷ್ಣನ ಈ ಮಾತಿನಲ್ಲಿ ಸ್ವಾತಂತ್ರ ಮತ್ತು ಎಚ್ಚರಿಕೆಗಳೆರಡು ಸೇರಿಕೊಂಡಿವೆ.

ಆದರೆ ಹಿಂದೂ ಧರ್ಮದಲ್ಲಿ ಎಲ್ಲರಿಗೂ ಎಲ್ಲಿ ಸ್ವತಂತ್ರವಿದೆ? ಅದನ್ನು ಕೇಲವೇ ಜನರ ಸ್ವತ್ತಾಗಿಸಿಕೊಂಡಿದ್ದೀರಿ. ಇಂದಿಗೂ ದೇವಸ್ಥಾನದ ಹೊರಗೆ ನಿಲ್ಲುವ ಮನುಷ್ಯರು ಕಾಣುವುದಿಲ್ಲ ಈ ಧರ್ಮದ ಕೆಲವರಿಗೆ. ಯಾವ ಧರ್ಮ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ತುಚ್ಚಾಗಿ ಕಾಣು ಎಂದು ಹೇಳುತ್ತದೆ. ಆದರೆ ಈ ಧರ್ಮದಲ್ಲಿ ಕಾಣಲಾಗುತ್ತಿದೆ. ಹಾಗೆ ಹೇಳುವ ಧರ್ಮವನ್ನು ಒಂದು ಧರ್ಮವೆಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಾದರೂ ಹೇಗೆ? ಆದರೆ ಹಿಂದೂ ಧರ್ಮದಲ್ಲಿ ಹೀಗೊಂದು ಆಚಾರವಿದೆ ಅಂದರೆ ಇದು ಯಾರದೋ ಕಿತಾಪತಿ ಅನಿಸುವುದಿಲ್ಲವೇ? ಧರ್ಮದಲ್ಲಿ ಒಂದಾಗುವ ಮಾತಾಡಿದ್ದೀರಿ.

ಹೇಗೆ ಒಂದಾಗುವುದು? ಧರ್ಮದಲ್ಲಿ ಯಾರೋ ಮಾಡಿಟ್ಟು ಹೋದ ಜಾತಿ ವ್ಯವಸ್ಥೆಯಲ್ಲಿ ಒಂದಾಗಬೇಕಾ? ಒಬ್ಬ ಕಕ್ಕುವ ಮಲವನ್ನು ಇನ್ನೊಬ್ಬ ಹೊತ್ತು ಎಸೆಯಲು ಒಂದಾಗಬೇಕಾ? ಕೆಲವರು ನಡೆಸುವ ದಬ್ಬಾಳಿಕೆ ಅನುಭವಿಸಿಕೊಂಡು ಉಸಿರುಬಿಗಿಯಿಡಿಯಲು ಒಂದಾಗಬೇಕಾ? ಮಾನವ ಕುಲ ಒಂದಾಗಬೇಕು. ನಾವೆಲ್ಲ ಒಂದೇ. ನಮ್ಮಲ್ಲಿ ಜೀವವೂ ಒಂದೇ. ಅದೇಕೆ ತಿಳಿಯುವುದಿಲ್ಲ ಒಂದಾಗೋಣ ಎಂಬ ಬುದ್ದವಾದಕ್ಕೆ!? ಮೊದಲು ಆಗಬೇಕಾಗಿರುವುದು ಇದಲ್ಲ! ಹಿಂದೂ ಧರ್ಮ ಸ್ಚಚ್ಚವಾಗಬೇಕಿದೆ. ಸಂಪೂರ್ಣ ತೊಳೆಯಬೇಕಿದೆ.

ಕೆಲವರು ಇಡೀ ಧರ್ಮವೇ ನಮ್ಮ ಪ್ರಾಪರ್ಟಿ ಎಂದು ಭಾವಿಸಿಕೊಳ್ಳುವುದನ್ನು ಬಿಡಿಸಬೇಕಿದೆ. ಈ ಧರ್ಮದ ಮೂಲ ಸಂಪ್ರದಾಯವೆನಿತ್ತೋ ಅಲ್ಲಿಗೆ ಹೋಗಿ ನಿಲ್ಲಬೇಕಿದೆ. ಈಗ ನಾವು ಒಂದಾಗೋಣ ಎಂದು ಯಾರನ್ನೂ ಕರೆಯಬೇಕಿಲ್ಲ. ಅವರವರೇ ಬಂದು ಸೇರುತ್ತಾರೆ. ಒಂದು ನೆನಪಿರಲಿ ನಾವು ಮತ ಧರ್ಮದ ಬೆನ್ನತ್ತಿ ಹೋದರೆ ಅದರಿಂದ ಯಾವತ್ತೂ ಒಳಿತಿಲ್ಲ. ಬರ್ಟ್ರಂಡ್ ರಸಲ್ ತಮ್ಮ ಪುಸ್ತಕದಲ್ಲಿ ಸಾಕಷ್ಟು ಸೊಗಸಾಗಿಯೇ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕೊನೆಯಲ್ಲಿ ಅವರು
ಹೇಳುತ್ತಾರೆ. ಮತ ಧರ್ಮದಿಂದ ಮಾನವ ಕುಲಕ್ಕೆ ಎಂದೂ ಏನೂ ಪ್ರಯೋಜನವಿಲ್ಲ; ಆಗಿರುವುದು ಬರೀ ಕೆಡಕು ಇದು ನಿಜಕ್ಕೂ ನಾವು ಯೋಚಿಸಬೇಕಾದ ಮಾತು.

ಸದಾಶಿವ್ ಸೊರಟೂರು, ಶಿಕ್ಷಕರು

Leave a Reply

Your email address will not be published. Required fields are marked *

5 × three =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top