About Us Advertise with us Be a Reporter E-Paper

ಅಂಕಣಗಳು

ಮನೆಯೊಳಗೆ ಬೆಂಕಿ ಹಚ್ಚಿ ಬೇಯುವುದಕ್ಕಂಜಿದೊಡೆಂತಯ್ಯ?

ಹುಟ್ಟು: ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ;

ಉರುಳು ಮೂರೇ ಉರುಳು ಕಡಲ ಕುದಿತದ ಎಣ್ಣೆಕೊಪ್ಪರಿಗೆಗೆ!

ಎಂ ಕವಿ ಅಡಿಗರು ಭೂಮಿ ತಾಯ ಆಳ ಎತ್ತರಗಳನ್ನು ಎರಡು ಸಾಲಲ್ಲಿ ಹೇಳಿಬಿಟ್ಟಿದ್ದಾರೆ. ಘಟ್ಟದ ಮೇಲಿಂದ ಕಡಲಿನ ಬಯಲಿಗೆ ನಮ್ಮನ್ನು ಎಳೆದು ತರಲು ಇಳಾಗೌರಿಗೆ ಹೆಚ್ಚು ಹೊತ್ತು ಬೇಕಾಗಿಲ್ಲ. ಉರುಳು, ಮೂರೇ ಉರುಳು ಎನ್ನುವಷ್ಟರಲ್ಲಿ ಆಕಾಶಪಾತಾಳಗಳನ್ನು ಒಂದು ಮಾಡಿಬಿಡಬಲ್ಲ ಸಮರ್ಥೆ ಆಕೆ. ಇಂಗ್ಲೀಷ್‌ನಲ್ಲಿ ‘ಡೆತ್ ಈಸ್ ದ ಲೆವೆಲರ್’ ಎಂಬ ಮಾತಿದೆ. ಮೃತ್ಯುವಿಗೆ ಬಡವಶ್ರೀಮಂತ, ಅಕ್ಷರಸ್ಥಅನಕ್ಷರಸ್ಥ, ಹೆಣ್ಣುಗಂಡು, ಹುಚ್ಚಮೇಧಾವಿ ಎಂಬ ಭೇದವೇನಿಲ್ಲ. ಅದು ಎಲ್ಲರ ಮೇಲೂ ಎರಗಿ ಎಲ್ಲರನ್ನೂ ಸಮಾನವಾಗಿ ಸ್ಮಶಾನದಲ್ಲಿ ಎಲ್ಲರೂ ಸಮಾನರೇ. ಹಾಗೆ ಮೊನ್ನೆ ಪ್ರವಾಹದಲ್ಲೂ ಎಲ್ಲರೂ ಸಮಾನರೇ ಎಂಬುದು ಕೂಡ ಸಾಬೀತಾಯಿತು. ಭೂಮಿ ಒಮ್ಮೆ ಮೈಮುರಿದು ಕಂಪಿಸಿದರೆ ಸಾಕು; ಆಕೆಯ ಮೇಲಿುವ ಅಷ್ಟೂ ಹಟ್ಟಿಬಂಗಲೆಗಳು, ಜೋಪಡಿಅರಮನೆಗಳು ಸಪಾಟ ಮಲಗಿಬಿಡುತ್ತವೆ. ವಸುಂಧರೆಯೇ ರಜಸ್ವಲೆಯಾದಳೋ ಎಂಬಂತೆ ಪ್ರವಾಹ ಉಕ್ಕೇರಿದರೆ ಪ್ರಪಂಚದ ಎಲ್ಲ ಮೇಲುಕೀಳುಗಳೂ ಒಂದಾಗಿ, ಮಟ್ಟಸವಾಗಿ ತೇಲಿಕೊಂಡುಹೋಗುತ್ತವೆ. ಮೃತ್ಯುವಿನಂತೆ ಭೂತಾಯಿ ಕೂಡ ತನ್ನ ಮೈ ಮೇಲಿನ ಭಾರವನ್ನು ಆಗಾಗ ಕಳಚಿಕೊಂಡು ಲೆವೆಲ್ ಮಾಡುತ್ತಾಳೆ. ಕ್ಷಮಯಾಧರಿತ್ರಿಯಾದ ಆಕೆಗೂ ಕೆಲವೊಮ್ಮೆ ತಾಳ್ಮೆಗೆಡುತ್ತದೆ. ಧಿಂ ಎನ್ನುತ್ತದೆ. ಶಿಶುಪಾಲನ ನೂರು ತಪ್ಪುಗಳನ್ನು ಸಹಿಸಿಕೊಂಡು ನೂರೊಂದನೆಯದಕ್ಕೆ ತಲೆಯನ್ನೇ ತೆಗೆದ ಶ್ರೀ ೀಕೃಷ್ಣನಂತೆ ಭೂಮಿಯೂ ತನ್ನ ಮಕ್ಕಳ ಮಕ್ಕಳಾಟವನ್ನು ಸಹಿಸುವಷ್ಟು ಸಹಿಸಿ, ಕೊನೆಗೆ ಸಹನೆಯ ಮಿತಿ ದಾಟಿತೆಂದಾಗ ಎದ್ದು ನಿಲ್ಲುತ್ತಾಳೆ. ಆಕೆ ನಿರ್ಧರಿಸಿದಳೆಂದರೆ ಮತ್ತೆ ಚರ್ಚೆಗೆ ಆಸ್ಪದವಿಲ್ಲ. ಕೋರ್ಟಿನಲ್ಲಿ ನ್ಯಾಯಾಧೀಶರ ಮುಂದೆ ಕೇಸು ಮುಂದುವರಿಸಲು ಅಪೀಲ್ ಮಾಡಬಹುದು. ಆದರೆ ಭೂತಾಯಿಯ ನ್ಯಾಯಾಲಯದಲ್ಲಿ ಮರುವಿಚಾರಣೆಯ ಅರ್ಜಿಗೆ ಅವಕಾಶವೇ ಇಲ್ಲ!

ಕಳೆದೊಂದು ತಿಂಗಳಿಂದ ನೆನೆ ನೆನೆದು ಮೊಳಕೆ ಬಂದಿರುವ ಕೊಡಗು, ಭೂತಾಯಿ ಕುಣಿದ ತಾಂಡವನೃತ್ಯ ರುದ್ರಭೀಕರ. ಕರಾವಳಿಗರ ಭಾಷೆಯಲ್ಲಿ ಹೇಳುವುದಾದರೆ ಭಯಂಕರ! ಈ ಮಳೆಯಲ್ಲಿ, ದೇವರ ರಾಜ್ಯವೆಂಬ ಬಿರುದು ಸಂಪಾದಿಸಿದ ಕೇರಳ ಪಾಲ್ಗಡಲ ಮೇಲಿನ ಆದಿಶೇಷನಂತೆ ತೇಲಾಡಿತು. ಕೊಡಗು ಬುಡಮೇಲಾಗಿ ಮಗುಚಿಬಿತ್ತು. ದೇಶದ ಮೂಲೆ ಮೂಲೆಗಳಿಂದ ಜನರ ಸಹಾಯಹಸ್ತ ಚಾಚಿಬಂತು. 94 ವರ್ಷಗಳ ಹಿಂದೆ, 1924ರ ಅತಿವಷ್ಟಿಯಲ್ಲಿ ಕೇರಳದಲ್ಲಿ 3,368 ಮಿಲಿಮೀಟರ್ ಮಳೆ ಹುಯ್ದಿತ್ತಂತೆ. ಈ ವರ್ಷದ್ದು 2,086 ಮಿಲಿಮೀಟರ್ ಮಳೆ. ಹಿಂದಿನ ಮಳೆಗೆ ಹೋಲಿಸಿದರೆ ಅದರ ಮೂರನೇ ಪ್ರಮಾಣದ ಮಳೆ ಮಾತ್ರ ಈ ವರ್ಷ ಬಂದಿದೆ. ಪ್ರತಿ ವರ್ಷ ಹುಯ್ಯುವ ಮಳೆಗಿಂತ 30% ಹೆಚ್ಚು ನೀರು ಈ ಸಲ ಆಕಾಶದಿಂದ ಸುರಿದಿದೆ. ಆದರೆ ಅಷ್ಟಕ್ಕೇ ಕೇರಳ ಮತ್ತು ಕೊಡಗು ಇನ್ನಿಲ್ಲದಂತೆ ಬೋರಲು ಬಿದ್ದಿವೆ. ಎರಡೆರಡು ಅಂತಸ್ತಿನ ಮನೆಗಳು ಕೂಡ ಕ್ಷಣಾರ್ಧದಲ್ಲಿ ಕುಸಿದು ಜಾರುವ ಮಣ್ಣಲ್ಲಿ ತೇಲಿಕೊಂಡುಹೋಗಿ ನೀರುಪಾಲಾಗುವ ದುರಂತವನ್ನು ಕಣ್ಣಾರೆ ನೋಡಿದ್ದೇವೆ. ಆಗಸ್‌ಟ್ 19ರವರೆಗಿನ ಲೆಕ್ಕದ ಪ್ರಕಾರ 357 ಮಂದಿ ಸಾವಿಗೀಡಾಗಿದ್ದಾರೆ. 2 ಲಕ್ಷ ಜನ ಪುನರ್ವಸತಿ ನಿರಾಶ್ರಿತರಾಗಿ, ತಲೆಗೆ ಕೈಹೊತ್ತು ಕೂತಿದ್ದಾರೆ. ಮನೆಗಳು ಮಾತ್ರವಲ್ಲ, ಬದುಕುಗಳೂ ಅಕ್ಷರಶಃ ನೆರೆನೀರಲ್ಲಿ ಕೊಚ್ಚಿ ದಿಕ್ಕಾಪಾಲಾಗಿವೆ.

ಹಾಗಂತ ಇದು ರಾತ್ರಿಬೆಳಗಾಗುವಷ್ಟರಲ್ಲಿ ಸಂಭವಿಸಿದ ದುರಂತ ಅಲ್ಲ. ಭೂಮಿಯ ಮೇಲಿನ ಯಾವ ದುರಂತವೂ ಆಕಸ್ಮಿಕವಲ್ಲ. ಥಟ್ಟನೆ ಘಟಿಸಿದಂತೆ ಕಾಣುವ ಭೂಕಂಪ ಕೂಡ ಹಲವು ನೂರು ವರ್ಷಗಳಿಂದ ಮೆಲ್ಲಮೆಲ್ಲನೆ ಹತ್ತಿರ ಸರಿಯುತ್ತಿರುವ ಶಿಲಾಪದರಗಳ ಚಲನೆಯ ಫಲಿತಾಂಶವೇ. ಆ ಸಣ್ಣ ಬದಲಾವಣೆಗಳನ್ನು ಗಮನವಿಟ್ಟು ಕೇಳುವ, ಪರಿಶೀಲಿಸುವ ತಂತ್ರಜ್ಞಾನ ನಮಗಿಲ್ಲವೆಂಬ ಕಾರಣಕ್ಕೇ ಅವೆಲ್ಲ ಥಟ್ಟನೆ ನಡೆದುಹೋದ ಅಸಹಜ ಕಾಣುತ್ತವೆ ಅಷ್ಟೆ. ಪ್ರವಾಹಗಳನ್ನು ನಾವು ನೋಡಿಲ್ಲವೆ? ಮೂರು ದಶಕಗಳ ಹಿಂದೆ ನಾವು ಶಾಲೆ ಕಲಿಯುವಾಗ ಮಳೆಗಾಲಕ್ಕೆ ಕನಿಷ್ಠ ಐದು ದಿನಗಳ ಸೂಟಿ ಮಾಮೂಲಿಯಾಗಿತ್ತು. ಮನೆಯಿಂದ ಹೊರಟ ನಾವು ಗದ್ದೆಯ ಬದುವಿಗೆ ಬಂದು, ನಮ್ಮೆದುರು ತೆರೆದುಕೊಂಡ ವಿಶಾಲ ಕೆಂಪು ಸಮುದ್ರವನ್ನು ನೋಡಿ, ಶಾಲೆಗೆ ರಜೆಯನ್ನು ನಾವು ನಾವೇ ಘೋಷಿಸಿ ಮನೆಗೆ ಮರಳುತ್ತಿದ್ದೆವು! ಮಳೆಗಾಲದಲ್ಲಿ ಮಳೆ, ಬೇಸಿಗೆಯಲ್ಲಿ ಬಿಸಿಲು ಪ್ರಾಕೃತಿಕ ಸಂಗತಿಗಳಾಗಿದ್ದವು. ಪ್ರವಾಹದಲ್ಲಿ ಹಸುಕರುಗಳು ಕೊಚ್ಚಿಕೊಂಡು ಹೋಗುವುದು, ಹೊಲಗದ್ದೆಗಳ ಮೇಲೆ ದೋಣಿ ಬಿಡಿ, ಮಳೆಯ ಸುಳಿಗೆ ಸಿಕ್ಕಿ ಪ್ರತಿವರ್ಷ ಒಂದಿಬ್ಬರು ಸಾಯುವುದು ಕೂಡ ಅಂಥ ವಿಶೇಷ ಸುದ್ದಿಗಳಾಗಿರಲಿಲ್ಲ. ಒಂದು ಗಾಳಿ ಜೋರಾಗಿ ಬೀಸಿ ಹಳ್ಳಿಯ ನಾಲ್ಕೈದು ಲೈಟುಕಂಬಗಳು ಬಿದ್ದರೆ ಒಂದು ವಾರದ ಮಟ್ಟಿಗೆ ಕರೆಂಟೇ ಇರುತ್ತಿರಲಿಲ್ಲ. ಬಾವಿಯ ದಂಡೆಯನ್ನೂ ದಾಟಿಕೊಂಡು ನೀರು ಚೆಲ್ಲುವಂತಿದ್ದ ಅಂಥ ಮಳೆಗಾಲವನ್ನು ನಾವೆಲ್ಲರೂ ನೋಡಿದ್ದೇವೆ, ನೋಡುತ್ತ ಬೆಳೆದಿದ್ದೇವೆ. ಹಾಗಿರುವಾಗ ಈ ಸಲದ ಮಳೆ ಮಾತ್ರ ಯಾಕೆ ಕೊಡಗುಕೇರಳಗಳಿಗೆ ಮೃತ್ಯರೂಪಿಯಾಯಿತು?

ಸಿಗುವ ಒಂದೇ ಉತ್ತರ ಸ್ವಯಂಕೃತಾಪರಾಧ. ದಶದಲ್ಲಿ ಕೊಡಗಿನ ಒಟ್ಟು ವಿಸ್ತೀರ್ಣದ 86% ಜಾಗ ಅರಣ್ಯವಾಗಿತ್ತು. ಆದರೆ ಇಂದು ಉಳಿದಿರುವುದು 16% ಎಂದರೆ ಆಶ್ಚರ್ಯಪಬೇಡಿ! ಒಂದಾನೊಂದು ಕಾಲದಲ್ಲಿ ದಟ್ಟ ಕಾಡಾಗಿದ್ದ ಜಾಗದ 40%ನಷ್ಟು ಭಾಗ ಈಗ ಕಾಫಿ ಎಸ್ಟೇಟುಗಳಾಗಿದೆ. ಕಾಫಿ ಬೆಳೆಯಲು ತಂಪು ವಾತಾವರಣ ಬೇಕು. ಪ್ಲಾಂಟೇಶನ್‌ನ ಮಧ್ಯದಲ್ಲಿ ಅಲ್ಲಲ್ಲಿ ಮರಗಿಡಗಳು ಇರಬೇಕು. ಪ್ಲಾಂಟೇಶನ್‌ನ ಮಧ್ಯದಲ್ಲಿ ಮರ ಬೆಳೆಸುವುದಕ್ಕಿಂತ, ಕಾಡಿನಲ್ಲಿ ಅಲ್ಲೊಂದು ಇಲ್ಲೊಂದು ಮರ ಉಳಿಸಿ ಉಳಿದವನ್ನು ಕಡಿದು ಕಾಫಿ ಗಿಡ ಬೆಳೆಸುವುದು ಲಾಭದಾಯಕ ಎಂದು ಯೋಚಿಸಿದರು! ಹಾಗಾಗಿ ಅತ್ಯಂತ ದಟ್ಟವಾಗಿದ್ದ ನಿತ್ಯಹರಿದ್ವರ್ಣ ಕಾಡುಗಳನ್ನು ವರ್ಷಕ್ಕೆ 20-25 ಚದರ ಕಿಲೋಮೀಟರ್‌ನಂತೆ ಕಡಿದು ಕಾಫಿತೋಟಗಳನ್ನು ನಿರ್ಮಿಸಿಕೊಂಡರು. ಕಡಿದುಹಾಕಿದ ಸಾವಿರಾರು ಮರಗಳು ಒಂದೋ ಎಸ್ಟೇಟುಗಳೊಳಗಿನ ವಿಲಾಸೀ ಮನೆಗಳಿಗೆ ಜಂತಿ, ಬಾಗಿಲು, ಕುರ್ಚಿಮೇಜುಗಳಾದವು. ಇಲ್ಲವೇ ಸುಳ್ಳು ದಾಖಲೆಪತ್ರಗಳ ಬಲದಿಂದ ಕೇರಳದ ಟಿಂಬರ್ ಮಿಲ್‌ಗಳಿಗೆ ಸಾಗಣೆಯಾದವು. ಇಂದಿಗೂ ಒಂದೊಂದು ಹಲಸಿನ ಮರದ ದಿಮ್ಮಿಗೂ 3ರಿಂದ 4 ಲಕ್ಷ ರುಪಾಯಿ ಬೆಲೆ ಇದೆ ಎಂದರೆ ಕಳೆದ ನಾಲ್ಕು ದಶಕಗಳಲ್ಲಿ 40% ಅರಣ್ಯ ಕಡಿದು ಮಾಡಿಕೊಂಡ ಕೋಟಿಗಳೆಷ್ಟು ಎಂಬುದನ್ನು ಯಾರಾದರೂ ಅಂದಾಜಿಸಬಹುದು! ಹೀಗೆ ಅರಣ್ಯವನ್ನು ತರಿದುಹಾಕಿ ಕೊಡಗನ್ನು ಬೆತ್ತಲೆಗೊಳಿಸಿದವರು ನಮ್ಮನಿಮ್ಮಂಥ ಜನಸಾಮಾನ್ಯರು ಎಂದೇನೂ ಭಾವಿಸಬೇಡಿ. ಈ ಕಳ್ಳರಲ್ಲಿ ದೊಡ್ಡ ಉದ್ಯಮಿಗಳು, ಲಕ್ಷಾಧಿಪತಿಗಳಾಗಿದ್ದ ಶ್ರೀಮಂತ ವರ್ತಕರು, ರಾಜಕಾರಣಿಗಳು ಎಲ್ಲರೂ ಭಾಗೀದಾರರಾಗಿದ್ದರು. ಉದಾಹರಣೆಗೆ, ಕಾಂಗ್ರೆಸ್ ನಾಲ್ಕು ದಶಕಗಳಷ್ಟು ಹಿಂದೆಯೇ ಕೊಡಗಿನ ಅರಣ್ಯ ಲೂಟಿಗೆ ಶ್ರೀಕಾರ ಹಾಕಿತ್ತು. ಕಾಂಗ್ರೆಸ್‌ನ ಸಂಸದರಾಗಿದ್ದ ರಾಜ್‌ಕುಮಾರ್ ರಣಜೀತ್ ಘೋರ್ಪಡೆ ಆಗಿನ ಮುಖ್ಯಮಂತ್ರಿಗಳಾಗಿದ್ದ ಗುಂಡೂರಾಯರ ಸಹಾಯ ಪಡೆದು ಜಮ್ಮಮಲೆಯ 450 ಎಕರೆ ಜಾಗದಲ್ಲಿ ಬೆಳೆದಿದ್ದ ಕಾಡು ಕಡಿದು ನಾಟಾವನ್ನು ಕಳ್ಳಕಾಕರಿಗೆ ಮಾರಿ 4 ಕೋಟಿ ರುಪಾಯಿಯ ಲಾಭ ಮಾಡಿಕೊಳ್ಳಲು ಹೊರಟಿದ್ದರು! ಆಗ ಭಾಜಪದಲ್ಲಿದ್ದು ಇನ್ನೂ ನ್ಯಾಯನೀತಿಗೆ ಬೆಲೆಕೊಡುತ್ತಿದ್ದ ಎ.ಕೆ. ಸುಬ್ಬಯ್ಯ ಮತ್ತು ಕಾಂಗ್ರೆಸ್(ಯು)ನಲ್ಲಿದ್ದ ಎಂ.ಸಿ. ನಾಣಯ್ಯ ಇಬ್ಬರೂ ಒಟ್ಟಾಗಿ ಈ ಗುಂಡೂರಾವ್ಘೋರ್ಪಡೆ ದುಷ್ಟಕೂಟಕ್ಕೆ ಮಗ್ಗುಲ ಮುಳ್ಳಾಗಿ ಕಾಡಿದ್ದರು. ಘೋರ್ಪಡೆಯವರಿಗೆ ನಾಟಾ ಸಾಗಿಸಿ ದುಡ್ಡು ಮಾಡಿಕೊಳ್ಳಲು ಅವಕಾಶ ಆಗದೇ ಇದ್ದರೂ, ಆ ಕಾಲದಲ್ಲಿ ರಾಜಕಾರಣಿಗಳು ಕೊಡಗನ್ನು ಬುಡಸಮೇತ ಲೂಟಿ ಮಾಡಲು ಹೊರಟಿದ್ದಕ್ಕಂತೂ ಅದೊಂದು ಪ್ರಮುಖ ಉದಾಹರಣೆಯಾಗಿ ನಿಲ್ಲುತ್ತದೆ.

ಕರ್ನಾಟಕದಲ್ಲಿ 43 ಸಾವಿರ ಚದರ ಕಿಮೀ ವಿಸ್ತೀರ್ಣದಷ್ಟು ಅರಣ್ಯ ಇದೆ ಎಂಬುದು ಅರಣ್ಯ ಇಲಾಖೆಯ ದಫ್ತರ ಕೊಡುವ ಮಾಹಿತಿ. ಇದು ರಾಜ್ಯದ ಒಟ್ಟು ವಿಸ್ತೀರ್ಣದ 22% ಆಗುತ್ತದೆ. ಆದರೆ ವಾಸ್ತವದಲ್ಲಿ ರಾಜ್ಯದ 14%ನಷ್ಟು ಜಾಗವೂ ದಟ್ಟ ಅರಣ್ಯದಿಂದ ಕೂಡಿಲ್ಲ ಎನ್ನುತ್ತಾರೆ ವನತಜ್ಞರು. ಕರ್ನಾಟಕದ ಜಿಲ್ಲೆಗಳಲ್ಲೆಲ್ಲ ಅತ್ಯಂತ ಹೆಚ್ಚು ನಿಬಿಡವಾದ ಅರಣ್ಯ ಇರಬೇಕಿದ್ದದ್ದು ಕೊಡಗು ಜಿಲ್ಲೆಗೆ. ಆದರೆ ಇಂದು ಅದರ ಪರಿಸ್ಥಿತಿಯೇ ಕೂದಲುದುರಿದ ನಡುವಯಸ್ಕನಂತೆ ಶೋಚನೀಯವಾಗಿದೆ. ರಾಜಕೀಯ ಬಲ ಸಾಕು, ಕೊಡಗಿಂದ ದಿನಂಪ್ರತಿ 10-15 ಲೋಡುಗಳಷ್ಟು ನಾಟಾವನ್ನು ರಾಜ್ಯದ ಗಡಿ ದಾಟಿಸಿ ಕೇರಳಕ್ಕೆ ತೆಗೆದುಕೊಂಡುಹೋಗಬಹುದು. ಸಿದ್ದರಾಮಯ್ಯನವರ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಕೆಲವರು ಐದು ವರ್ಷದ ಅಧಿಕಾರಾವಧಿಯಲ್ಲಿ ಅದೆಷ್ಟೊಂದು ಸಾವಿರ ದಿಮ್ಮಿಗಳನ್ನು ಈ ಎರಡು ರಾಜ್ಯಗಳ ನಡುವೆ ಅಸಡಾಬಸಡಾ ಮಾಡಿದರೋ ಚಿತ್ರಗುಪ್ತನಿಗಷ್ಟೇ ಗೊತ್ತು! 2014ರಿಂದ 17ರವರೆಗಿನ ಮೂರು ವರ್ಷದ ಅವಧಿಯಲ್ಲಿ ಕೊಡಗು ಮತ್ತು ಕೇರಳಗಳ ಮೇಲಿಂದ ಹೈಟೆನ್ಷನ್ ವಿದ್ಯುತ್ತಂತಿಗಳನ್ನು ಎಳೆಯುವ ಸಂದರ್ಭದಲ್ಲಿ ಅಫೀಷಿಯಲ್ಲಾಗಿ ಕಡಿದುಹಾಕಿದ್ದು 60,000 ವೃಕ್ಷಗಳನ್ನು. ಅದು ಸಾಕಾಗಲಿಲ್ಲವೆಂದು ಮೈಸೂರು ಮಂಗಳೂರುಗಳನ್ನು ಜೋಡಿಸುವ ರೈಲುಮಾರ್ಗವು ಕೊಡಗಿನ ಮಡಿಕೇರಿ ಮೂಲಕ ಹಾದುಹೋಗುವುದರಿಂದ ಕೊಡಗಿನಲ್ಲಿ 2 ಲಕ್ಷ ಮರಗಳನ್ನು ಕಡಿಯಬೇಕು ಎಂದು ಕೊಡಲಿ ಹಿಡಿದಿತ್ತು ಸರಕಾರ. ಸ್ಥಳೀಯರ ಭಾರೀ ವಿರೋಧದ ನಂತರ ಕೊಡಗಿಗೆ ರೈಲುಮಾರ್ಗ ಬೇಡವೆಂಬ ಒಕ್ಕೊರಲ ತೀರ್ಮಾನಕ್ಕೆ ಬರಲಾಯಿತು. ಆದರೆ ಹೋದೆಯಾ ಕಾಂಗ್ರೆಸ್ ಎಂದರೆ ಬಂದೆ ಸಮ್ಮಿಶ್ರವಾಗಿ ಎಂಬಂತೆ, ರೈಲುಮಾರ್ಗ ರದ್ದಾದರೂ ನ್ಯಾಷನಲ್ ಹೈವೇ ಯೋಜನೆ ಇನ್ನೂ ಜೀವಂತವಾಗಿಯೇ ಇದೆ. ಮಡಿಕೇರಿಯನ್ನು ಈಗ ಅದಿರುವ ವಿಸ್ತೀರ್ಣಕ್ಕಿಂತ ಮೂರು ಪಟ್ಟು ಹಿಗ್ಗಿಸಬೇಕೆಂಬ ಹೊಟ್ಟೆಯಲ್ಲಿಟ್ಟುಕೊಂಡಿರುವ ಈ ಯೋಜನೆ, 3 ಲಕ್ಷ ಮರಗಳ ಆಹುತಿ ಬೇಡುತ್ತಿದೆ! ನ್ಯಾಷನಲ್ ಹೈವೇ ಯೋಜನೆ ಶುರುವಾದರೆ ಹಾಗೂ ಅದು ಕೊಡಗಿನ ಹೃದಯಭಾಗವನ್ನು ಸೀಳಿಕೊಂಡು ಹೋಗಲು ಮುಂದಡಿಯಿಟ್ಟರೆ ಕೊಡವರು ಮತ್ತೆ ಮರಗಳನ್ನು ಅಪ್ಪಿಕೊಂಡು ಚಳವಳಿ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಬಹುದು.

ಇದು ಮರಗಳ ನಾಶದ ಕತೆಯಾಯಿತು. ಕೊಡಗನ್ನು ಕಾಡುತ್ತಿರುವ ಇನ್ನೊಂದು ದೊಡ್ಡ ಸಮಸ್ಯೆ ಮರಳು ಮತ್ತು ಜಲ್ಲಿ ಗಣಿಗಾರಿಕೆ. ಕಾವೇರಿ ಮತ್ತು ಹಾರಂಗಿ ನದಿಗಳಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಜೆಸಿಬಿಯ ಹಸಿದ ಇಳಿದು ಮರಳನ್ನು ಗೋರಿ ತೆಗೆದು ಲಾರಿಗಳಿಗೆ ತುಂಬಿಸುತ್ತಿವೆ. ಈ ವರ್ಷದ ಮಹಾಮಳೆಯಲ್ಲಿ ನೀರು ಹುಚ್ಚೆದ್ದು ಹರಿಯುವುದಕ್ಕೆ ಒಂದು ಪ್ರಮುಖ ಕಾರಣ ಎಂದರೆ ನದೀಪಾತ್ರ ವಿಸ್ತಾರಗೊಂಡದ್ದು. ಬೊಗಸೆಯೊಳಗಿನ ಜಲದಂತೆ ನದಿಯ ಸೆರಗಿನೊಳಗೇ ಇದ್ದು ಹರಿಯಬೇಕಿದ್ದ ನೀರು ಇಕ್ಕೆಲದ ದಂಡೆಗಳನ್ನು ತನ್ನ ಗರ್ಭದೊಳಗೆ ನುಂಗಿಕೊಂಡು ಪಾತ್ರ ವಿಸ್ತರಿಸಿಕೊಂಡದ್ದು. ಹಾಗಾಗಲು ಪ್ರಮುಖ ಕಾರಣ, ನದಿಯ ಇಬ್ಬದಿಗಳಿಗೆ ನೀರನ್ನು ಹಿಡಿದಿಡುವ ಸಾಮರ್ಥ್ಯ ಇರಲಿಲ್ಲ. ಯಾಕೆಂದರೆ ಅವಕ್ಕೆ ಬುಡವೇ ಇರಲಿಲ್ಲ. ಬುಡದ ಮರಳನ್ನೆಲ್ಲ ಅಕ್ರಮ ಸಾಗಣೆಕೋರರು ಗೋರಿ ತೆಗೆದಾಗಿತ್ತು. ಅಕ್ರಮ ಮರಳುಗಾರಿಕೆಗೆ ಗುರಿಯಾದ ಕುಡುಮಂಗಳೂರು, ಮುಕ್ಕೋಡ್ಲು, ಹತ್ತಿಹೊಳೆ ಮುಂತಾದ ಪ್ರದೇಶಗಳೇ ಭೀಕರವಾದ ಜಲಪ್ರಳಯಕ್ಕೆ ತುತ್ತಾಗಿ ದ್ವೀಪಗಳಾದವು. ಟಿಂಬರ್ ಮಾಫಿಯಾದಂತೆ ಈ ಅಕ್ರಮ ಮರಳು ಸಾಗಾಟಕ್ಕೂ ಲಂಗುಲಗಾಮು ಎನ್ನುವುದೇ ಇಲ್ಲ. ನದಿ ಇರುವುದೇ ನಮಗೆ ದಿನನಿತ್ಯ ಸಾವಿರಾರು ರುಪಾಯಿ ಗಳಿಸುವುದಕ್ಕೆ ಎಂಬ ಹೊಟ್ಟೆಬಾಕ ಮನಸ್ಥಿತಿಯಿಂದಾಗಿ ಇಡೀ ಕೊಡಗೇ ಇಂದು ಅಕ್ರಮ ಮರಳಿನ ಕಾರ್ಖಾನೆಯಾಗಿಬಿಟ್ಟಿದೆ. ಜಲ್ಲಿಕಲ್ಲು ಒಡೆಯುವವರು, ಮುರಕಲ್ಲು ತೆಗೆದು ಸಾಗಿಸುವವರು ಈ ಜಿಲ್ಲೆಯಲ್ಲಿ ಯಾವ ಪರಿ ಬೆಳೆದಿದ್ದಾರೆಂದರೆ ಅಂದರೆ ಪರ್ಮಿಟ್ಟು ಇಟ್ಟುಕೊಂಡು ಕೆಲಸ ಮಾಡುತ್ತಿರುವವರು ಅಜಮಾಸು 8,000 ಜನ. ಆದರೆ ಅಕ್ರಮ ಗಣಿಗಾರಿಕೆ ಮಾಡಿ ಭೂಗರ್ಭ ದೋಚುತ್ತಿರುವವರು ಜಿಲ್ಲೆಯಲ್ಲಿ 18,000 ಮಂದಿ! 2010ರ ಸಮಯದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲೆಂದು ಇಡೀ ಕೊಡಗಿನಲ್ಲಿ ಓಡಾಡುತ್ತ ಸಮೀಕ್ಷೆ ಮಾಡುತ್ತಿದ್ದ ವಿಜ್ಞಾನಿ ಮಾಧವ ಗಾಡ್ಗೀಳ್ ಅವರಿಗೆ 1650 ಗಣಿಗಾರಿಕೆ ಕಂಪೆನಿಗಳು ಕಾಣಸಿಕ್ಕಿದ್ದವು. ಇವರಲ್ಲಿ ಸರಕಾರದಿಂದ ಪರ್ಮಿಟ್ ಪಡೆದು ಕೆಲಸ ಮಾಡುತ್ತಿದ್ದವರು 150 ಮಂದಿ ಮಾತ್ರ! ಆಗಲೇ ಹಾಗಿತ್ತು ಎಂದರೆ, ಕಳೆದೊಂದು ಆಗಿರಬಹುದಾದ ಅಕ್ರಮದ ಪ್ರಮಾಣ ಎಷ್ಟು? ಅದನ್ನು ಈಗಿನ ಪ್ರವಾಹ ನೋಡಿ ಅಳೆಯಬಹುದು!

ಇನ್ನು ಕೊಡಗಿನ ಮಳೆದುರಂತಕ್ಕೆ ಪಕ್ಕದ ಕೇರಳದ ಕೊಡುಗೆಯೂ ದೊಡ್ಡ ಪ್ರಮಾಣದಲ್ಲಿದೆ. ಕೊಡಗಿನ ಅರಣ್ಯನಾಶ, ಗಣಿಗಾರಿಕೆ ಸಮಸ್ಯೆಗಳು ಕೇರಳದಲ್ಲಿಯೂ ಇರುವುದು ಹೊಸತೇನಲ್ಲ. ಕೇವಲ 30 ವರ್ಷಗಳ ಹಿಂದೆ ಕೇರಳ ರಾಜ್ಯದಲ್ಲಿ 8 ಲಕ್ಷ ಹೆಕ್ಟೇರ್‌ನಷ್ಟು ಭಾಗ ಭತ್ತದ ಗದ್ದೆಯಾಗಿತ್ತು. ಭತ್ತ ಬೆಳೆಯಲು ಹೊಲದಲ್ಲಿ ಕನಿಷ್ಠ 30 ದಿನಗಳ ಕಾಲ ನೀರು ನಿಲ್ಲಬೇಕು. ಕೇರಳದ ಮಳೆಗೂ ಈ ಭತ್ತದ ಗಳಸ್ಯಕಂಠಸ್ಯ ಸಂಬಂಧ ಬೆಳೆದುಬಂದಿತ್ತು. ಆದರೆ ಕಾಲ ಸರಿದಂತೆ ಜನರಿಗೆ ಗದ್ದೆಗಳು ಬೇಡವಾದವು. ಹಳ್ಳಿಗಳು ಪಾಳುಬಿದ್ದವು. ಜನ ನಗರಗಳಿಗೆ ಗುಳೆ ಹೊರಟರು. ಕೊಚ್ಚಿನ್‌ನಂಥ ನಗರಗಳು ಮೆಟ್ರೋ ಚಮಕನ್ನು ಪಡೆದುಕೊಂಡವು. ಯುವಪೀಳಿಗೆ ಕೇರಳದ ನಗರಗಳಿಗೂ ಹೊರರಾಜ್ಯಗಳ ಮಹಾನಗರಗಳಿಗೂ ಹೋಗಿ ಗೂಡು ಕಟ್ಟಿಕೊಂಡ ಮೇಲೆ ಹಳ್ಳಿಯಲ್ಲಿ ಭತ್ತ ನಾಟಿ ಮಾಡುವವರಾದರೂ ಯಾರು? ಈಗ ಕೇರಳದಲ್ಲಿ ಒಂದೂವರೆ ಲಕ್ಷ ಹೆಕ್ಟೇರ್‌ನಷ್ಟು ಮಾತ್ರ ಭತ್ತದ ಹೊಲಗಳು ಉಳಿದಿವೆ. ಹಿಂದೆಲ್ಲ ಲಕ್ಷದ್ವೀಪದಿಂದ ಹಾರಿಬಂದ ಮೋಗಳು ಕೇರಳದ ಪಶ್ಚಿಮಘಟ್ಟಗಳಿಗೆ ಮಳೆ ಸುರಿಸಿದರೆ ಅವನ್ನೆಲ್ಲ ಬೊಗಸೆತುಂಬ ಹಿಡಿಯಲು ಭತ್ತದ ಗದ್ದೆಗಳಿದ್ದವು. ಈಗ ಅವಿಲ್ಲವಾದರೆ ನೀರೇನು ಮಾಡಬೇಕು? ಹರಿಯುವುದು ನೀರಿನ ಗುಣ ತಾನೆ? ಅದು ಹಳ್ಳಿಯ ಗದ್ದೆ ಬಿಟ್ಟು ನಗರದ ರಸ್ತೆಗಳಲ್ಲಿ ಹರಿಯಿತು! ಮಾಲ್‌ಗಳೊಳಗೆ ನುಗ್ಗಿ ಒಂದು ಗಿರಕಿ ಹೊಡೆಯಿತು! ಕೊಡಗಿನಲ್ಲೇ ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 3000 ಎಕರೆ ಹೊಲಗದ್ದೆಗಳು ಕಮರ್ಷಿಯಲ್ ಕಾಂಪ್ಲೆಕ್‌ಸ್ಗಳಾಗಿ, ಮನೆಗಳಾಗಿ, ಬಸ್ ನಿಲ್ದಾಣಗಳಾಗಿ, ರಸ್ತೆಗಳಾಗಿ ಬದಲಾಗಿವೆ. ಹೊಲ ಕಾಣದ ಮಳೆನೀರು, ತಂಗಲು ತಗ್ಗುಜಾಗವನ್ನು ಅರಸಿಕೊಂಡು ಬರುವುದು ಸಹಜ ತಾನೆ?

ಒಂದು ತಿಂಗಳ ಹಿಂದೆ ಕೊಡಗು ಮತ್ತು ಕೇರಳದಲ್ಲಿ ಮಹಾಮಳೆಯ ಪಲ್ಲವಿ ಶುರುವಾದಾಗ ನಮ್ಮ ಟಿವಿ ಚಾನೆಲುಗಳು ಅದನ್ನು ಜಲಪಿಶಾಚಿ ಎಂದು ಕರೆದವು. ನಿಜವಾಗಿಯೂ ಪಿಶಾಚಿ ಮಳೆಯೋ ನಾವೋ? ಈ ಭೂಮಿಯಲ್ಲಿ ಸಹಸ್ರ ವರ್ಷಗಳಿಂದ ಮಳೆ ಬೀಳುತ್ತಿದೆ. ಗಾಳಿ ಬೀಸುತ್ತಿದೆ. ಬಿಸಿಲು ಸುಡುತ್ತಿದೆ. ಭೂಕಂಪನವಾಗುತ್ತಿದೆ. ಇವೆಲ್ಲವೂ ಭೂಮಿಯ ನೈಸರ್ಗಿಕ ಚಟುವಟಿಕೆಗಳು. ಒಂದೇ ಜಾಗದಲ್ಲಿ ಹುಯ್ಯಬಾರದು; ರಾಜ್ಯ ರಾಜ್ಯಗಳಿಗೆ ಚಲಿಸುತ್ತ ಅಲ್ಲಲ್ಲಿನ ಜನಸಂಖ್ಯೆಗನುಗುಣವಾಗಿ ನದಿಕೆರೆಗಳ ಮೇಲಷ್ಟೇ ಹುಯ್ಯಬೇಕು ಎಂದು ಗೊತ್ತಿದೆಯೇ? ನೂರಾರು ವರ್ಷಗಳ ಮಾನ್ಸೂನ್ ಚಕ್ರದಿಂದಾಗಿ ಭೂಪ್ರದೇಶಕ್ಕೂ ಮಳೆಹನಿಗಳನ್ನು ಹೊತ್ತ ಮೋಡಗಳಿಗೂ ಒಂದು ಶಿವಪಾರ್ವತಿಯರಂಥ ಅನುಬಂಧ ಮೂಡುತ್ತದೆ, ಅಷ್ಟೆ. ಮಳೆಗೆ ತಕ್ಕಂತೆ ಭೂಪ್ರದೇಶದಲ್ಲಿ ಬದಲಾವಣೆಗಳಾಗುತ್ತವೆ. ಭೂಪ್ರದೇಶಕ್ಕೆ ತಕ್ಕಂತೆ ಮಳೆಯ ಪ್ರಮಾಣವೂ ಹೊಂದಿಕೊಳ್ಳುತ್ತದೆ. ಪಶ್ಚಿಮಘಟ್ಟಗಳ ಭುಜಗಳಿಗೆ ಢಿಕ್ಕಿಹೊಡೆದ ಮೋಡಗಳು ಧೋ ಎಂದು ಸುರಿದರೂ ಘಟ್ಟದ ಮೇಲೆ ಹುಟ್ಟಿಬೆಳೆದ ಮರಗಳು, ಗಂಗೆಯನ್ನು ಇಳಿಸಿಕೊಂಡ ಶಿವನಂತೆ, ಆ ಮಳೆಯ ತೀವ್ರತೆಯನ್ನು ಕಡಿಮೆಗೊಳಿಸಿ ತಮ್ಮ ಬುಡದಲ್ಲಿ ಇಳಿಸಿ ಇಂಗಿಸಿಕೊಳ್ಳುತ್ತಿದ್ದವು. ಆ ಮರಗಳನ್ನೇ ಕಡಿದು ಬಟಾಬಯಲಾಗಿಸಿದರೆ ಏನು ಮಾಡಬೇಕು? ಕಳೆದ 25 ವರ್ಷಗಳಿಂದ ಕೊಡಗಿಗೆ ರೆಸಾರ್ಟ್ ಸಂಸ್ಕೃತಿ ಅಮರಿಕೊಂಡಿದೆ. ಕೇವಲ 4102 ಚದರ ಕಿಮೀ ಇರುವ ಈ ಪುಟ್ಟ ಜಿಲ್ಲೆಯೊಳಗೆ ಇಂದು 466 ರೆಸಾರ್ಟ್‌ಗಳು, 2150 ಹೋಮ್‌ಸ್ಟೇಗಳಿವೆ. ಇದು ಅಧಿಕೃತ ದಾಖಲೆಪತ್ರಗಳನ್ನಿಟ್ಟುಕೊಂಡು ವ್ಯವಹಾರ ನಡೆಸುವ ಹೋಮ್ ಸ್ಟೇಗಳ ಸಂಖ್ಯೆ. ಅನಧಿಕೃತವಾದದ್ದು ಈ ಸಂಖ್ಯೆಯ ಹತ್ತರಷ್ಟಿವೆ ಎನ್ನಬಹುದು. ರೆಸಾರ್ಟ್ ಕಟ್ಟಿದವರೆಲ್ಲರೂ ತಮ್ಮ ಸುತ್ತಮುತ್ತಲಿನ ಮರಮಟ್ಟು ಡಿದು ಕಾಂಕ್ರೀಟ್ ಕಟ್ಟಡಗಳನ್ನೆಬ್ಬಿಸಿ ಕೊಡಗಿನ ಶಿರವನ್ನು ಇಷ್ಟಿಷ್ಟೇ ಹೆರೆಯುತ್ತಾ ಬಂದರು. ಕಾಂಕ್ರೀಟು ಮಣ್ಣಿಗೆ ನೀರುಬೇರುಗಳನ್ನು ಹಿಡಿದಿಡುವ ಗುಣ ನಷ್ಟವಾಯಿತು. ಹಾಗಾದ ಮೇಲೆ, ಬಿದ್ದ ಮಳೆಗೆ ಮಣ್ಣೊಳಗೆ ಇಂಗಿಹೋಗುವುದು ಕಷ್ಟವಾಯಿತು. ದೊಡ್ಡ ಗೋಡೆಯ ಒಂದೊಂದೇ ಇಟ್ಟಿಗೆಗಳನ್ನು ಕಿತ್ತುತೆಗೆಯುತ್ತಾ ಬಂದಾಗ ಕೊಟ್ಟಕೊನೆಗೊಂದು ದಿನ ಇಡೀ ಗೋಡೆ ಕುಸಿಯುವುದು ಸ್ವಾಭಾವಿಕ. ಕುಸಿಯುವಾಗ ಅದು ಒಂದೊಂದೇ ಇಟ್ಟಿಗೆಗಳು ಬಿದ್ದು ಕುಸಿಯುವುದಿಲ್ಲ. ಡೈನಮೈಟ್ ಇಟ್ಟು ಸಿಡಿಸಿದ ಕಟ್ಟಡದಂತೆ ದೊಪ್ ಎಂದು ಬೀಳುತ್ತದೆ. ಈಗಿನ ಪ್ರವಾಹ ಮಾಡಿರುವುದೂ ಅದನ್ನೇ.

ಈ ಎಲ್ಲ ಸೂಚನೆಗಳು ಹಿಂದೆ ಸಿಕ್ಕಿರಲಿಲ್ಲವೆ? ಭೂಮಾತೆ ಕಳೆದ ಒಂದಷ್ಟು ಮುಂದಿನ ಅನಾಹುತದ ಸೂಚನೆಯನ್ನು ಕೊಟ್ಟಿರಲಿಲ್ಲವೆ? ಖಂಡಿತ ಕೊಟ್ಟಿದ್ದಳು. ಕೊಡಗಿನ ತಾಪಮಾನ ಇತ್ತೀಚಿನ ಬೇಸಗೆಯ ದಿನಗಳಲ್ಲಿ 40 ಡಿಗ್ರಿ ಮುಟ್ಟುವಂತಿತ್ತು. ಕಾಡುಗಳ ನಾಶದಿಂದಾಗಿ ಕಾಡಾನೆಗಳು ನಾಡಿಗೆ ನುಗ್ಗುವ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿದ್ದವು. ಹಸಿರು ಅಳಿಸಿಹೋಗಿ ಕಾಂಕ್ರೀಟ್ ಪ್ರಗತಿಯಂತೂ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿ ನಡೆಯುತ್ತಿತ್ತು. ಸಣ್ಣ ಸಣ್ಣ ಊರುಗಳೆಲ್ಲ ಕಮರ್ಷಿಯಲೈಸ್ ಆಗಿಬಿಟ್ಟಿದ್ದವು. ಕೇವಲ ಐದು ಲಕ್ಷ ಜನಸಂಖ್ಯೆ ಇರುವ ಕೊಡಗು ಕಳೆದ ನಾಲ್ಕೈದು ವರ್ಷಗಳಿಂದ ವರ್ಷಕ್ಕೆ 20 ಲಕ್ಷ ಪ್ರವಾಸಿಗಳನ್ನು ವಾರಾಂತ್ಯದ ಮಜಾ ಉಡಾಯಿಸಲೆಂದು ಬಂದ ಹೊರಗಿನವರು ಇಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ಡಬ್ಬಗಳನ್ನೂ ಪ್ಲಾಸ್ಟಿಕ್ ಪ್ಯಾಕೆಟ್ಟುಗಳನ್ನೂ ಎಸೆದು ಗಬ್ಬೆಬ್ಬಿಸಿಹೋಗುತ್ತಿದ್ದರು. ಕಳೆದೊಂದು ದಶಕದಿಂದ ಕೊಡಗಿನಲ್ಲಿ ಮಳೆಯೂ ತೀವ್ರ ರೀತಿಯಲ್ಲಿ ಏರಿಳಿತಗಳನ್ನು ಕಾಣುತ್ತಿತ್ತು. ಮಳೆಯಿಂದ ಆಗುವ ಅನಾಹುತಗಳ ಪ್ರಮಾಣವೂ ಹೆಚ್ಚುತ್ತ ಬಂದಿತ್ತು. ಸಮಸ್ಯೆಗಳೆಂಬ ಪುಗ್ಗೆ ಊದಿಕೊಳ್ಳುತ್ತಿದೆ, ಒಂದಿಲ್ಲೊಂದು ದಿನ ಠಪ್ಪೆಂದು ಒಡೆಯಲು ಸಮಯ ಕಾಯುತ್ತಿದೆ ಎಂಬುದು ಕೊಡಗೆಂಬ ಅಗ್ನಿಕುಂಡದ ಮೇಲೆ ಕೂತ ಎಲ್ಲರಿಗೂ ಅರಿವಾಗಿತ್ತು. ಆದರೂ ಮನಸ್ಸಿನ ಮೂಲೆಯಲ್ಲೊಂದು ಆಸೆಆಗಲಾರದು, ಏನೂ ಎಂಬ ಹುಸಿಭರವಸೆ. ಇನ್ನಷ್ಟು ಮತ್ತಷ್ಟು ದಿನ ಈ ಮುರಿದ ಸೈಕಲ್ಲನ್ನು ತಳ್ಳಿಕೊಂಡು ಜೀವನ ತಳ್ಳೋಣ ಎಂಬ ಜುಗಾಡ್ ಮನಸ್ಥಿತಿ. ಕೊಡಗಿನ ಮಳೆ ಮನುಷ್ಯನ ಮಿತಿಯನ್ನೂ ತನ್ನ ಮಹತ್ತನ್ನೂ ಈಗಾದರೂ ಮನವರಿಕೆ ಮಾಡಿಕೊಟ್ಟಿದೆ ಎಂದು ಭಾವಿಸೋಣವೇ? ಇಂದು ಕೊಡಗು, ನಾಳೆ ಬೆಂಗಳೂರು ಎಂಬ ವಾಸ್ತವವನ್ನು ಈಗಾದರೂ ಒಪ್ಪಿಕೊಳ್ಳೋಣವೇ?

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close