ವಿಶ್ವವಾಣಿ

ಸಾಮಾಜಿಕ ಜಾಲತಾಣದಲ್ಲಿಲ್ಲ ಅಂದರೆ ಭೂಮಿಯ ಮೇಲಿಲ್ಲ ಎಂದರ್ಥವೇ?!

ಜಯವೀರ ವಿಕ್ರಮ್ ಸಂಪತ್ ಗೌಡ

ಈ ವ್ಯಕ್ತಿ  ಆ ಹೆಸರಿನಲ್ಲಿ ಬೇರೆ ಯಾರಾದರೂ ಬರೆಯುತ್ತಿದ್ದಾರಾ? ನಮಗೇಕೋ ಡೌಟು, ಜಯವೀರ ಗೌಡ ಎಂಬುವವರು ಇಲ್ಲವೇ ಇಲ್ಲ. ಅವರ ಹೆಸರಿನಲ್ಲಿ ಬೇರೆ ಯಾರೋ ಬರೆಯುತ್ತಿದ್ದಾರೆ ಎಂದು ಹಲವಾರು ಓದುಗರು ತಮ್ಮ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.

ಹಾಗಂತ ಇತ್ತೀಚೆಗೆ ಪತ್ರಿಕೆ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಹೇಳಿದರು. ನಾನು ಅವರಿಗೆ ಒಂದೇ ಪ್ರಶ್ನೆ ಕೇಳಿದೆ – ‘ನಿಮಗೇನಾದರೂ ಡೌಟು ಇದೆಯಾ? ಬೇರೆ ಯಾರಿಗೆ ಡೌಟು ಬಂದರೂ ಪರವಾಗಿಲ್ಲ, ನಿಮಗೆ ಬಂದರೆ ಮಾತ್ರ ಸಮಸ್ಯೆ’.  ಡೌಟು? ನನಗೆ ಡೌಟು ಬಂದರೆ ದೆವ್ವ, ಭೂತಗಳು ಇರುವುದು ನಿಜ ಅಂತಾಗುತ್ತೆ. ಕಾರಣ ಜಯವೀರನ ಬದಲು ಅವನ ಭೂತ ಈ ಅಂಕಣ ಬರೆಯುತ್ತಿರಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎಂದರು. ಇಬ್ಬರೂ ಜೋರಾಗಿ ನಕ್ಕೆವು.

ಭಟ್ ಅವರು ಮುಂದುವರಿದು ಹೇಳಿದರು – ‘ಈ ಪ್ರಶ್ನೆ ನಿನಗೆ ಮಾತ್ರ ಅಲ್ಲ, , ನನಗೂ ನೂರಾರು ಮಂದಿ ಕೇಳಿದ್ದಾರೆ. ಕೆಲವರಂತೂ ಆ ಹೆಸರಿನ ಶರೀರ ಇರುವುದೇ ನಿಜವಾಗಿದ್ದರೆ, ದಯವಿಟ್ಟು ಅವರನ್ನು ನಮ್ಮ ಮುಂದೆ  ನಿಲ್ಲಿಸಿ ಎಂದು ಹೇಳಿದ್ದಾರೆ. ಈ ಸಂಪಾದಕೀಯ ಪುಟ ನಿರ್ವಹಿಸುವ ಗೀರ್ವಾಣಿ ಅರಿಗೇ ನಿನ್ನ ಬಗ್ಗೆ ಸಂದೇಹ. ಜಯವೀರನ ಜತೆ ಒಂದು ರೌಂಡು ಬೈಕ್ ರೈಡ್ ಹೋಗ್ತೇನೆ ಅಂತ ಹೇಳಿದ್ದಾರೆ. ನಿನ್ನ ಜತೆ ನಾನಿರುವುದನ್ನು ಖುದ್ದಾಗಿ ನೋಡಿದ ಮಹೇಶ್ವರ ಹಂಪಿ ನಾಯ್ಡು ಹೊರತಾಗಿ ಬೇರೆಯವರಿಗೆ ಸಂದೇಹವಿದೆ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ಬರೆಯುತ್ತಾ ಹೋಗಿ, ನಿಮಗೆ ನಿಮ್ಮದೇ ಆದ ಅಭಿಮಾನಿಗಳಿದ್ದಾರೆ. ಹಿರಿಯ ರಾಜಕಾರಣಿಗಳೂ ನಿಮ್ಮ  ಆಸ್ಥೆಯಿಂದ ಓದುತ್ತಾರೆ. ಡೋಂಟ್ ವರಿ’. ನನಗೆ ಸಮಾಧಾನವಾಯಿತು.

ಈ ಪ್ರಶ್ನೆ ಉದ್ಭವಿಸಲು ಮುಖ್ಯ ಕಾರಣ ಟ್ವಿಟ್ಟರ್, ಫೇಸ್ಬುಕ್ ಅಥವಾ ಮತ್ಯಾವುದೇ ಸಾಮಾಜಿಕ ಜಾಲ ತಾಣದಲ್ಲಿ ನಾನಿಲ್ಲ. ನನ್ನ ಬಳಿ ಇರುವ ಮೊಬೈಲ್ ನಲ್ಲಿ ವಾಟ್ಸಾಪ್ ಇಲ್ಲ. ನಾನಿನ್ನೂ ಓಬೀರಾಯನ ಕಾಲದ ನೋಕಿಯಾ ಫೋನ್ ಇಟ್ಟುಕೊಂಡಿದ್ದೇನೆ. ಹಾಗಂತ ನಾನು ಆಧುನಿಕ ಬದಲಾವಣೆಗಳಿಂದ ದೂರವಾಗಿಲ್ಲ.

ಕಾಲಕಾಲಕ್ಕೆ ಅಪ್ಡೇಟ್ ಆಗುತ್ತೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಎಂಬ ಒಂದೇ ಕಾರಣಕ್ಕೆ ಈ ಭೂಮಿಯ  ನನ್ನ ಅಸ್ತಿತ್ವವೇ ಇಲ್ಲ ಎಂದು ಭಾವಿಸುವುದು ಎಷ್ಟು ಸರಿ? ಹತ್ತು, ಹದಿನೇಳು ವರ್ಷಗಳ ಹಿಂದೆ, ನಾನು  ಒಂದು ಸೆಮಿನಾರ್‌ನಲ್ಲಿ ಭಾಗವಹಿಸಿದ್ದೆ. ವಿಶ್ವೇಶ್ವರ ಭಟ್ ಅವರು ಪ್ರಧಾನ ಭಾಷಣಕಾರರಾಗಿ ಮಾತಾಡಿದ್ದರು. ಅವರು 1998ರಲ್ಲಿ ಲಂಡನ್‌ನಲ್ಲಿ ವ್ಯಾಸಂಗಮಾಡಿ ಮರಳಿದಾಗ ಇ ಮೇಲ್ ಐಡಿ ಹೊಂದಿದ್ದ ಕರ್ನಾಟಕದ ಕೆಲವೇ ಕೆಲವು ಪತ್ರಕರ್ತರಲ್ಲಿ ಅವರೂ ಒಬ್ಬರಾಗಿದ್ದರಂತೆ. ಇ ಮೇಲ್ ಐಡಿ ಇಲ್ಲದವರು ಪತ್ರಕರ್ತರಾಗಲು ಸಾಧ್ಯವಿಲ್ಲ, ಮನುಷ್ಯರಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ನಾನು ಆಗ  ಜತೆ ವಾದ ಮಾಡಿದ್ದೆ. ಇ ಮೇಲ್ ಐಡಿ ಇಲ್ಲದವರು ಮನುಷ್ಯರಲ್ಲವಾ? ಹಾಗೆ ಹೇಗೆ ಹೇಳ್ತೀರಾ ಎಂದು ಕೇಳಿದ್ದೆ. ನನ್ನ ಪ್ರಶ್ನೆಗೆ ಅವರು ಸಮಾಧಾನದಿಂದ ಉತ್ತರಿಸಿದ್ದರು.

ಇ ಮೇಲ್ ಐಡಿ ಇಲ್ಲದವರಿಗೆ ಸೈಬರ್ ಲೋಕದಲ್ಲಿ ಅಸ್ತಿತ್ವವೇ ಇಲ್ಲ ಎಂದು ಸಮಾಜಾಯಿಷಿ ನೀಡಿದ್ದರು. ನನಗೆ ಅವರ ಉತ್ತರದಿಂದ ಸಮಾಧಾನವಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಅಂದು ಹೇಳಿದ ಮಾತಿನ ತಾತ್ಪರ್ಯವೇನು ಎಂಬುದು ತಿಳಿಯಲಾರಂಭಿಸಿದೆ.

ಇಂದು ಇ ಮೇಲ್ ಇಲ್ಲದವರೇ ಇಲ್ಲ. ಒಂದು  ಯಾರಾದರೂ ತಮಗೆ ಇಮೇಲ್ ಐಡಿ ಇಲ್ಲ ಎಂದು ಹೇಳಿದರೆ, ಅವರ ಬಗ್ಗೆ ನಮ್ಮ ಅಭಿಪ್ರಾಯವೇ ಬದಲಾಗುತ್ತದೆ. ದುರಂತವೆಂದರೆ ಅದೇ ಅಭಿಪ್ರಾಯವೇ ಇಂದು ಟ್ವಿಟರ್, ಫೇಸ್‌ಬುಕ್ ಖಾತೆಯಿಲ್ಲದವರ ಬಗ್ಗೆ ಮೂಡುತ್ತಿದೆ. ನಾನು ಟ್ವಿಟರ್, ಫೇಸ್‌ಬುಕ್ ಖಾತೆ ಹೊಂದಿಲ್ಲ ಅಂದ್ರೆ ಜಯವೀರ್ ಎಂಬ ಆಸಾಮಿ ಭೂಮಿಯ ಮೇಲೆ ಇಲ್ಲ ಎಂದು ಜನ ಭಾವಿಸುವಂತಾಗಿದೆ. ಕೆಲವರು ಈ ಮಾತನ್ನು ಸಂಪಾದಕರ ಹತ್ತಿರವೂ ಕೇಳಿದರಂತೆ. ‘ಜಯವೀರ್ ಎಂಬ ವ್ಯಕ್ತಿ ನಿಜಕ್ಕೂ ಇರುವುದಾದರೆ, ಅವರ ಟ್ವಿಟರ್  ಏನು? ಅವರ ಫೇಸ್‌ಬುಕ್‌ನಲ್ಲಿ ಇಲ್ಲವಲ್ಲ?’ ಎಂದು ಪ್ರಶ್ನಿಸಿದರಂತೆ.

ಅಂದರೆ ನಾನು, ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದಿಲ್ಲ ಅಂದ್ರೆ ನಾನು ಈ ಭೂಮಿಯ ಮೇಲೇ ಇಲ್ಲ ಎಂದು ಭಾವಿಸುವಂತಾಗಿದೆ. ಅಂದರೆ ಮನುಷ್ಯನಾಗಿ ನಾನು ಉಸಿರಾಡುತ್ತಿದ್ದೇನೆ ಅಂದರೆ ನಾನು ಫೇಸ್‌ಬುಕ್‌ನಲ್ಲಿ ಕ್ರೀಯಾಶೀಲನಾಗಿರಬೇಕು. ಕಾಲಕಾಲಕ್ಕೆ ಸ್ಟೇಟಸ್ ಹಾಕುತ್ತಿರಬೇಕು. ಆಗಲೇ ಜನರಿಗೆ ನನ್ನ ಅಸ್ತಿತ್ವದ ಬಗ್ಗೆ ನಂಬಿಕೆ ಬರುತ್ತದೆ. ಇಲ್ಲದಿದ್ದರೆ ಅವರು ಈ ಭೂಮಿ ಮೇಲೆ ಇದ್ದೂ ಇಲ್ಲದಂತೆ.

ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬ  ಹೇಳುತ್ತಿದ್ದ, ‘ನೀನು ಬದುಕಿದ್ದೀಯಾ? ಅಥವಾ ಸತ್ತಿದ್ದೀಯಾ? ಫೇಸ್‌ಬುಕ್‌ನಲ್ಲಿ ನಿನ್ನ ಹುಡುಕಿ ಹುಡುಕಿ ಸೋತೆ. ನಿನಗೆ ಫೇಸ್‌ಬುಕ್ ಅಕೌಂಟ್ ಇಲ್ಲ ಅಂದ್ರೆ ಗುಗ್ಗು ಅಂತ ಭಾವಿಸುತ್ತಾರೆ.’ ಆಗ ನಾನು ಹೇಳಿದೆ, ‘ಹಾಗಾದರೆ ನನ್ನಂಥ ಪರಮ ಗುಗ್ಗು ಯಾರೂ ಇಲ್ಲ. ಫೇಸ್‌ಬುಕ್ ಅಂಕೌಂಟ್ ಇಲ್ಲದೇ ಬದುಕಲು ಬರುತ್ತದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ನಾನು ಆ ಅಕೌಂಟ್ ತೆರೆಯುವುದಿಲ್ಲ. ಅದೇನೋ ಆಗುತ್ತದೆ, ಆಗಲಿ. ನಿನ್ನಂಥ ಮುಠ್ಠಾಳನ ಜೊತೆ ವಾದಿಸಿ ಪ್ರಯೋಜನವಿಲ್ಲ’ ಎಂದು ಹೇಳಿ ಜಾಗ  ಮಾಡಿದ. ಇದು ಒಂದು ಸಲ ಅಲ್ಲ. ಅನೇಕ ಸಲ ನನಗೆ ಮನವರಿಕೆಯಾಗಿದೆ. ನನಗೆ ಫೇಸ್‌ಬುಕ್ ಅಕೌಂಟ್ ಇಲ್ಲ ಅಂಥ ಹೇಳಿದರೆ, ಕ್ಯಾಕರಿಸಿ ನೋಡುತ್ತಾರೆ. ನನ್ನ ಮ್ಯಾನೇಜ್‌ಮೆಂಟ್ ಡಿಗ್ರಿಯನ್ನು ಸಹ ಲೆಕ್ಕಿಸದೆ ಅಸಡ್ಡೆಯಿಂದ, ತಿರಸ್ಕಾರದಿಂದ ನೋಡುತ್ತಾರೆ. ನಾನು ಈ ಜಮಾನಕ್ಕೆ ಸಲ್ಲುವ ವ್ಯಕ್ತಿ ಅಲ್ಲ ಎಂಬಂತೆ ಲಘುವಾಗಿ ಪರಿಗಣಿಸುತ್ತಾರೆ.

ವಿಚಿತ್ರವೆಂದರೆ, ಇಂದು ಎಲ್ಲರೂ ಫೇಸ್‌ಬುಕ್ ಅಕೌಂಟ್ ತೆರೆಯುತ್ತಿದ್ದಾರೆ. ಕೆಲವರು ತಾವು ಬದುಕಿರುವುದಕ್ಕೆ ಅದೇ ಕುರುಹು ಅಥವಾ ಸಾಕ್ಷಿ ಎಂಬಂತೆ ಅದನ್ನೇ  ಎಲ್ಲ ವಯೋಮಾನದವರಿಗೂ ಅದೂ ಬೇಕೇಬೇಕು. ಹಳ್ಳಿಗಳಲ್ಲೂ ಎಲ್ಲರಿಗೂ ಫೇಸ್‌ಬುಕ್ ಅಚ್ಚುಮೆಚ್ಚು. ಒಂದು ಮನೆಯಲ್ಲಿ ನಾಲ್ವರು ಇದ್ದರೆ, ಎಲ್ಲರೂ ಖಾತೆ ತೆರೆದಿರುತ್ತಾರೆ. ನಮ್ಮ ಸ್ನೇಹಿತರು, ಬಂಧುಗಳು, ಹಿತೈಷಿಗಳ ಚಲನವಲನಗಳನ್ನೆಲ್ಲ ತಿಳಿಯುವುದು ಫೇಸ್‌ಬುಕ್ ಹಾಗೂ ಟ್ವಿಟರ್‌ನಿಂದಲೇ. ಒಂದು ವಾರವಾದರೂ ಸ್ಟೇಟಸ್ ಅ್ಡೇಟ್ ಮಾಡಿಲ್ಲ ಅಂದರೆ ಕಾಯಿಲೆ ಬಂದಿದೆ ಎಂದು ಅರ್ಥ. ಫೇಸ್‌ಬುಕ್‌ನಲ್ಲಿ ಫೋಟೊ ಹಾಕದೇ, ಬೇರೆ ಊರಿಗೆ, ಬೇರೆ ದೇಶಕ್ಕೆ ಹೋಗಲು ಆಗುವುದೇ ಇಲ್ಲ. ನಮ್ಮೆಲ್ಲ ಚಟುವಟಿಕೆಗಳನ್ನು ಸ್ಟೇಟಸ್‌ನಲ್ಲಿ ಹಾಕಲೇಬೇಕು. ಕೆಲವರು  ತಿಂದಿದ್ದು, ಕಕ್ಕಿದ್ದು… ಎಲ್ಲವನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಾರೆ. ಇತ್ತೀಚೆಗೆ ನಾನು ಒಂದು ಸ್ಟೇಟಸ್ ನೋಡಿದೆ ಅದರಲ್ಲಿ ಹೀಗೆ ಬರೆದಿತ್ತು. ‘ನನ್ನ ಸಂಡಾಸಿನ ಫ್ಲಶ್ ವರ್ಕ್ ಆಗುತ್ತಿಲ್ಲ.’

ಕೆಲವರು ಊಟ, ತಿಂಡಿ ಇಲ್ಲದಿದ್ದರೂ ತೆಪ್ಪಗೆ ಇರಬಲ್ಲರು. ಆದರೆ ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ನೋಡದೇ ಇರಲಾರರು. ಅರ್ಧ ಗಂಟೆ ಇಂಟರ್‌ನೆಟ್ ಅಥವಾ ವೈಫೈ ಇಲ್ಲದಿದ್ದರೆ ಇಡೀ ದೇಶವೇ ವಕ್ರವಾಗಿ, ಹುಚ್ಚಾಗಿ ವರ್ತಿಸಬಹುದು. ನೀವು ಪೋಸ್‌ಟ್ ಮಾಡಿದ ನಿಮ್ಮ ಪ್ರೊಫೈಲ್ ಪಿಕ್ಚರ್ (ಡಿಪಿ)ಗೆ ಒಂದೇ  ಲೈಕ್ ಬರದಿದ್ದರೆ ನಿಮ್ಮ ಬಗ್ಗೆಯೇ ಒಂದು ಸಂದೇಹ ಮೂಡದಿದ್ದರೆ ಕೇಳಿ. ಕೇವಲ ಹತ್ತಾರು ಜನರಷ್ಟೇ ಲೈಕ್ ಒತ್ತಿದರೆ ನಿಮ್ಮಲ್ಲಿ ಏನೋ ಐಬು ಇದೆ ಎಂದು ಅನಿಸಲಾರಂಭಿಸುತ್ತದೆ.

ಇಂದು ಒಬ್ಬರ ಜನಪ್ರಿಯತೆ ಅಳೆಯುವುದು ಅವರಿಗೆ ಎಷ್ಟು ಜನ ಫಾಲೋಯರ್‌ಸ್ ಇದ್ದಾರೆ ಹಾಗೂ ಅವರ ಪೋಸ್‌ಟ್ಗೆ ಎಷ್ಟು ಜನ ಲೈಕ್‌ಸ್ ನೀಡುತ್ತಾರೆ, ಎಷ್ಟು ಷೇರ್ ಮಾಡುತ್ತಾರೆ ಎಂಬುದನ್ನು ಆಧರಿಸಿ. ಅಷ್ಟರಮಟ್ಟಿಗೆ ಈ ಸಾಮಾಜಿಕ ಜಾಲತಾಣಗಳು ನಮ್ಮನ್ನು ಆವರಿಸಿವೆ, ಆಕ್ರಮಿಸಿವೆ. ಕೆಲವರಂತೂ ದಿನದಲ್ಲಿ  ತಾಸು ಇದರಲ್ಲೇ ಕಳೆಯುತ್ತಾರೆ. ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತದೆ. ಇವರೆಲ್ಲ ಸೋಷಿಯಲ್ ಮೀಡಿಯಾ ಅಡಿಕ್‌ಟ್ಗಳು. ನಮ್ಮ ನಿಮ್ಮ ನಡುವಿನ ಆಗು-ಹೋಗುಗಳೆಲ್ಲವೂ ವಾಟ್ಸಾಪ್, ಫೇಸ್‌ಬುಕ್ ಮೂಲಕವೇ ತಿಳಿಯುವಂತಾಗಿದೆ.

ಇಂದು ನಿಮ್ಮ ತಮ್ಮನೋ, ಅಣ್ಣನೋ, ಭಾವನೋ, ಮಾವನೋ, ಅಮೆರಿಕದಿಂದಲೋ, ಲಂಡನ್‌ನಿಂದಲೋ ಒಂದು ವರ್ಷದ ನಂತರ ಊರಿಗೆ ಬಂದಿದ್ದಾರೆಂದು ಭಾವಿಸಿ. ಅವನೊಂದಿಗೆ ಮಾತಾಡಲು ವಿಷಯಗಳೇ ಇರುವುದಿಲ್ಲ. ಕಾರಣ ನಮ್ಮ ಮನೆಯಲ್ಲಿ ಬದುಕಿನಲ್ಲಿ ನಡೆದ ಪ್ರತಿ ವಿದ್ಯಮಾನಗಳನ್ನು  ಫೇಸ್‌ಬುಕ್ ಮೂಲಕ ವರದಿ ಮಾಡಿರುತ್ತೇವೆ. ಮನೆಯ ಮುಂದಿನ ಅಂಗಳದಲ್ಲಿ ಮೊಗ್ಗೊಂದು ಅರಳಿದರೆ, ಕೊಟ್ಟಿಗೆಯಲ್ಲಿ ಆಕಳು ಕರು ಹಾಕಿದರೆ, ಮನೆಗೆ ನೆಂಟರು ಬಂದರೆ, ಬಂದವರು ಹೋದರೆ, ಹೊಸ ಕಾರು ಖರೀದಿಸಿದರೆ, ಆ ಕಾರು ಪಂಕ್ಚರ್ ಆದರೆ… ಹೀಗೆ ಪ್ರತಿ ಸಣ್ಣ ಸಣ್ಣ ಸಂಗತಿಯನ್ನು ಫ್ಯಾಮಿಲಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಾಕಿ ಎಲ್ಲರಿಗೂ ತಿಳಿಸುವುದರಿಂದ, ಖುದ್ದು ಬೇಟಿಯಾದಾಗ ಮಾತಾಡಲು ವಿಷಯಗಳೇ ಇರುವುದಿಲ್ಲ. ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಉಚಿತವಾಗಿ ನೋಡಿಯೇ ಮಾತಾಡಲು ಸಾಧ್ಯವಾಗಿರುವುದರಿಂದ,  ನೆಲೆಸಿರುವವರಿಗೆ ಆಗಾಗ ಊರಿಗೆ ಬರಲೇಬೇಕೆಂಬ ದರ್ದು ಸಹ ಇಲ್ಲವಾಗಿದೆ. ಬಂದಾಗಲೂ ಹೊಸ ವಿಷಯಗಳ ಕೊರತೆ. ಈ ಸಾಮಾಜಿಕ ಜಾಲತಾಣಗಳು ಸೋಷಿಯಲ್ ಆಗುವ ಬದಲು ವ್ಯಕ್ತಿ ವ್ಯಕ್ತಿಗಳ ಸಂಪರ್ಕದ ಅಗತ್ಯತೆಯನ್ನು ಹೊಡೆದು ಹಾಕಿ ‘ಅನ್‌ಸೋಷಿಯಲ್’ ಆಗಿಬಿಟ್ಟಿವೆ!

ಇಂದು ನಮ್ಮ ಸುತ್ತ ಸೋಷಿಯಲ್ ಮೀಡಿಯಾ ಸುತ್ತುವ ಬದಲು, ಅದರ ಸುತ್ತ ನಾವು ಸುತ್ತುವಂತಾಗಿದೆ. ಕೆಲವರಂತೂ ಅಕ್ಷರಶಃ ಹುಚ್ಚರಾಗಿದ್ದಾರೆ. ಯಾರ ಹತ್ತಿರವೂ ಹತ್ತು ನಿಮಿಷ ತದೇಕ ಚಿತ್ತದಿಂದ ಮಾತಾಡಲು ಆಗುವುದಿಲ್ಲ. ಹತ್ತು ನಿಮಿಷದಲ್ಲಿ  ಸಲ ವಾಟ್ಸಾಪ್ ನೋಡುತ್ತೇವೆ. ಎರಡು ಸಲ ಫೇಸ್‌ಬುಕ್ ನೋಡುತ್ತೇವೆ. ಹತ್ತು ಸ್ನೇಹಿತರು ಒಂದೆಡೆ ಸೇರಿದರೆ, ಎಲ್ಲರೂ ಮೊಬೈಲ್‌ಗೆ ಮುಖ ಮಾಡಿಕೊಂಡು ಇರುತ್ತಾರೆ. ಸ್ನೇಹಿತರ ಜತೆಗೆ ಮಾತಾಡುವುದಕ್ಕಿಂದ ಇನ್ಯಾರದೋ ಜತೆ ಚಾಟ್ ಮಾಡುವುದರಲ್ಲೇ ಮಗ್ನರಾಗಿರುತ್ತಾರೆ. ಇದು ಒಬ್ಬರ, ಇಬ್ಬರ ಕತೆಯಲ್ಲ. ಮನೆಗೆ ಮನೆ, ಊರಿಗೆ ಊರು, ದೇಶಕ್ಕೆ ದೇಶವೇ ಈ ಹುಚ್ಚಿಗೆ ಒಳಗಾಗಿದೆ. ಯಾರಿಗೆ ಹೇಳುವುದು? ಎಲ್ಲರೂ ಹುಚ್ಚರಂತೆ ವರ್ತಿಸಿದರೆ, ಬುದ್ಧಿ ಹೇಳುವವರಾದರೂ ಯಾರು?

ಈಗ ಯಾರಿಗೂ ಬಿಡುವಿನ ವೇಳೆಯೆಂಬುದೇ  ಒಂದೋ ಎಲ್ಲರು ಬ್ಯುಸಿ. ಇಲ್ಲವೇ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನ. ಬಿಡುವಿನ ವೇಳೆಯಲ್ಲೂ ಅದರೊಳಗೆ ಮಗ್ನ. ಮನೆಯಲ್ಲಿ ಮಂಚದ ಮೇಲೆ ಗಂಡ-ಹೆಂಡತಿಯರಿಬ್ಬರೂ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ವಿಶ್ರಾಂತಿ, ಬಿಡುವಿನ ವೇಳೆಯನ್ನೆಲ್ಲ ಸೋಷಿಯಲ್ ಮೀಡಿಯಾವೇ ನಿಯಂತ್ರಿಸುತ್ತದೆ. ರಂಜನೆ, ಬೋಧನೆ, ಜ್ಞಾನಾರ್ಜನೆಗಳಿಗೆಲ್ಲ ಸೋಷಿಯಲ್ ಮೀಡಿಯಾವೇ ಮೂಲ. ಹೀಗಾಗಿ ಯಾರೂ ಯಾರೊಂದಿಗೂ ಮಾತಾಡುವುದಿಲ್ಲ. ಪುಸ್ತಕ ಓದುವುದಿಲ್ಲ. ಹರಟೆ ಹೊಡೆಯುವುದಿಲ್ಲ. ನೆಂಟರ ಮನೆಗೆ ಹೋಗುವುದಿಲ್ಲ. ಹೋದರೂ ಸೋಷಿಯಲ್ ಮೀಡಿಯಾದ ಮೊರೆತ, ಕೆರೆತ.

ಈ ಎಲ್ಲ ಕಾರಣಗಳಿಂದ  ಮೂರು ವರ್ಷಗಳ ಹಿಂದೆಯೇ ಫೇಸ್‌ಬುಕ್, ಟ್ವಿಟರ್ ಖಾತೆಗಳನ್ನು ಡಿಲಿಟ್ ಮಾಡಿಬಿಟ್ಟೆ. ವಾಟ್ಸಾಪ್ ಸೌಲಭ್ಯವೇ ಇಲ್ಲದ ಸಾಮಾನ್ಯ ಮೊಬೈಲ್ ಅನ್ನು ಇಟ್ಟುಕೊಂಡಿದ್ದೇನೆ. ನನ್ನ ಇ ಮೇಲ್ ಐಡಿ ಕೆಲವರಿಗೆ ಮಾತ್ರ ಗೊತ್ತಿದೆ. ನನ್ನ ಮೊಬೈಲ್ ಗೊತ್ತಿದ್ದವರೂ ನನಗೆ ವಾಟ್ಸಾಪ್ ಮೆಸೇಜ್ ಕಳಿಸಲು ಆಗುತ್ತಿಲ್ಲ. ಹೀಗಾಗಿ ನನಗೆ ಬೇಡದ, ಸಂಬಂಧಪಡದ ಯಾವ ಮೆಸೇಜ್‌ಗಳೂ ನನಗೆ ಬರುವುದಿಲ್ಲ. ಕೆಲವರಿಗೆ ಮೆಸೇಜ್ ಓದುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಡಿಲೀಟ್ ಮಾಡಲು ಹೆಚ್ಚು ಸಮಯ ಬೇಕು. ನನಗೆ  ಕಿರಿಕಿರಿಯೇ ಇಲ್ಲ. ನನ್ನ ಜತೆಗೆ ಮಾತಾಡಬೇಕು ಎನ್ನುವವರು ನನಗೆ ಕರೆ ಮಾಡಬೇಕು. ಕೆಲವು ಸಲ ನಾನು ಅದನ್ನು ಇಷ್ಟಪಡುವುದಿಲ್ಲ. ಹೀಗಾಗಿ ಅವರು ಖುದ್ದು ನನ್ನ ಭೇಟಿ ಮಾಡುತ್ತಾರೆ. ನಾನೂ ಅದನ್ನೇ ಮಾಡುತ್ತೇನೆ. ಇದರಿಂದ ನನಗೆ ಎಲ್ಲ ಕೆಲಸ ಮುಗಿಸಿದ ಬಳಿಕ ಸಾಕಷ್ಟು ಸಮಯ ಉಳಿಯುತ್ತದೆ. ಪ್ರತಿದಿನ ಕನಿಷ್ಠ ಮೂರು ನಾಲ್ಕು ತಾಸು ಓದುತ್ತೇನೆ. ನಾನು ಓದುವಾಗ ಓದುತ್ತೇನೆ. ಮೊಬೈಲ್ ಓದುವುದಿಲ್ಲ. ಟಿವಿ ನೋಡುವಾಗ ನೋಡುತ್ತೇನೆ. ಮೊಬೈಲ್ ನೋಡುವುದಿಲ್ಲ. ಹರಟೆ  ಹರಟೆ ಹೊಡೆಯುತ್ತೇನೆ. ಮೊಬೈಲ್‌ನಲ್ಲಿ ಚಾಟ್ ಮಾಡುವುದಿಲ್ಲ. ಎದುರಿಗೆ ಕುಳಿತವರ ಜತೆ ಮಾತಾಡುತ್ತೇನೆ. ಮೊಬೈಲ್ ನೋಡುತ್ತ ಮಾತಾಡುವುದಿಲ್ಲ. ಇದರಿಂದ ನನ್ನ ಬದುಕು ನಾನು ಅಂದುಕೊಂಡಂತೆ ಸಾಗುತ್ತಿದೆ. ನನ್ನ ದಿನವನ್ನೂ ನಾನೇ ನಿರ್ದೇಶಿಸುತ್ತೇನೆ, ನಿಯಂತ್ರಿಸುತ್ತೇನೆ. ಮೊಬೈಲ್ ನಿರ್ದೇಶಿಸಲು, ನಿಯಂತ್ರಿಸಲು ಬಿಡುತ್ತಿಲ್ಲ. ನನ್ನ ಸಮಯವನ್ನು ನನಗಾಗಿ ಕಳೆಯುತ್ತೇನೆ. ಮೊಬೈಲ್‌ಗಾಗಿ ಅಲ್ಲ.

ನಮಗೆ ಜ್ಞಾನಗಳು ಬೇಕು. ಆದರೆ, ಎಲ್ಲ ಜ್ಞಾನಗಳೂ ಬೇಕಿಲ್ಲ. ಅಷ್ಟಕ್ಕೂ ಮೊಬೈಲ್‌ನಲ್ಲಿ , ಸೋಷಿಯಲ್ ಮೀಡಿಯಾದಲ್ಲಿ ಹರಿದುಬರುವುದೆಲ್ಲ ಜ್ಞಾನವಲ್ಲ. ಬಹುತೇಕ ಸರಕುಗಳು  ನಾನ್‌ಸೆನ್‌ಸ್! ಅದರಿಂದ ಯಾವ ಪ್ರಯೋಜನವೂ ಇಲ್ಲ. ಆದರೆ ಅವನ್ನೆಲ್ಲ ಜ್ಞಾನವೆಂದು ನಾವು ಭಾವಿಸಿದ್ದೇವೆ.

ಹೀಗಾಗಿ ನನ್ನಂಥವರು ಕಲ್ಪನಾಜೀವಿಗಳಂತೆ, ಅಗೋಚರರಂತೆ, ಭ್ರಾಮಕ ವ್ಯಕ್ತಿಗಳಂತೆ, ಕಲ್ಪಿತ ಜೀವಿಗಳಂತೆ ಹೊರ ಜಗತ್ತಿಗೆ ಕಾಣುತ್ತೇವೆ. ಪರವಾಗಿಲ್ಲ. ಹೀಗೆಯೇ ಇರುತ್ತೇನೆ. ನಾನು ಇರಲಿ, ಬಿಡಲಿ, ಅದು ಮುಖ್ಯ ಅಲ್ಲ. ನಾನು ಹೇಳುವುದನ್ನು ನೀವು ಕೇಳಿಸಿಕೊಂಡರೆ ಸಾಕು. ಅಷ್ಟಕ್ಕೂ ಗೆಲ್ಲುವುದು ವಿಚಾರಗಳೇ ಹೊರತು ವ್ಯಕ್ತಿಗಳಲ್ಲ.